Categories
ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಪ್ರೊ.ಎಸ್.ಜಿ. ಸಿದ್ದರಾಮಯ್ಯ

ಸೂಕ್ಷ್ಮವಾಗಿ ಬದುಕುವುದು, ಬರೆಯುವುದು ಎರಡೂ ಪ್ರಿಯವಾದ ಕವಿ, ವಿಮರ್ಶಕ, ನಾಟಕಕಾರರು ಪ್ರೊ. ಎಸ್.ಜಿ.ಸಿದ್ದರಾಮಯ್ಯ ಅವರು.
ಪ್ರೊ.ಸಿದ್ದರಾಮಯ್ಯ ಅವರ ಬದುಕು, ಬರಹ, ಚಿಂತನಗಳನ್ನು ರೂಪಿಸಿದ ಶಕ್ತಿಗಳು ವಚನ ಸಾಹಿತ್ಯ ಹಾಗೂ ಜಾನಪದ. ತುಮಕೂರು ಜಿಲ್ಲೆ ಸಿಂಗಾಪುರ ಗ್ರಾಮದಲ್ಲಿ ೧೯೪೬ರಲ್ಲಿ ಜಾನಪದ ಸಂಸ್ಕೃತಿಯ ಪಾರಂಪರಿಕ ರೈತ ಕುಟುಂಬದಲ್ಲಿ ಜನನ, ಬೆಂಗಳೂರು ವಿಶ್ವವಿದ್ಯಾಲಯದಿಂದ ಪ್ರಥಮ ಶ್ರೇಣಿಯಲ್ಲಿ ಕನ್ನಡ ಸಾಹಿತ್ಯದಲ್ಲಿ ಎಂ.ಎ ಪದವಿ, ಮಡಿಕೇರಿ, ಸಿಂಧನೂರು ಕಾಲೇಜುಗಳಲ್ಲಿ ಪ್ರಾಧ್ಯಾಪಕರಾಗಿ, ತುಮಕೂರು, ಹೊಸದುರ್ಗ, ಮಧುಗಿರಿಯಲ್ಲಿ ಪ್ರಾಂಶುಪಾಲರಾಗಿ ಹಾಗೂ ತುಮಕೂರು ಸ್ನಾತಕೋತ್ತರ ಕೇಂದ್ರದ ಗೌರವ ಪ್ರಾಧ್ಯಾಪಕರಾಗಿ ಸೇವೆ.
ಕನ್ನಡ ಸಾಹಿತ್ಯ ಪರಿಷತ್‌ನ ಭೂಮಿ ಬಳಗದ ಸಕ್ರಿಯ ಸದಸ್ಯರು. ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿ ಶ್ರೀಯುತರು ಕನ್ನಡ ಸಾಹಿತ್ಯ ಲೋಕಕ್ಕೆ ಸಲ್ಲಿಸಿರುವ ಸೇವೆ ಅನುಪಮ. ಗಾಲ್ಫ್ ಉಬ್ಬಿನ ಮೇಲೆ, ಕಾಡುವ ಬೇಲಿ ಹೂ, ಅವಳೆದೆಯ ಜಂಗಮ- ಕಾವ್ಯ ಸಂಕಲನ, ಸಾಲಾವಳಿ, ಕೇಡಿಲ್ಲವಾಗಿ, ನಿಶ್ಯಬ್ದದ ಜಾಡು ವಿಮರ್ಶಾ ಕೃತಿಗಳು ಹಾಗೂ ದಂಡೆ ಮತ್ತು ದಾಳ ಅವರು ರಚಿಸಿರುವ ನಾಟಕ ಕೃತಿಗಳು.
ಶ್ರೀಯುತರು ೧೯೯೭ರಲ್ಲಿ ಪು.ತಿ.ನ. ಕಾವ್ಯ ಪ್ರಶಸ್ತಿ, ೨೦೦೩ನೇ ಸಾಲಿನ ಜಿ.ಎಸ್.ಎಸ್. ಪ್ರಶಸ್ತಿ ಹಾಗೂ ೧೯೯೬ ಮತ್ತು ೨೦೦೦ನೇ ಸಾಲಿನಲ್ಲಿ ಎರಡು ಬಾರಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ, ಗೊರೂರುಪ್ರತಿಷ್ಠಾನ ಕಾವ್ಯ ಪ್ರಶಸ್ತಿಗೆ ಪಾತ್ರರು.
ಜೀವಪರತೆಯ ಮನೋಧರ್ಮದ ಲೇಖಕ ಪ್ರೊ. ಎಸ್.ಜಿ.ಸಿದ್ದರಾಮಯ್ಯ ಅವರು ಇದ್ದಲ್ಲೆಲ್ಲ ಸಾಹಿತ್ಯ ಚಟುವಟಿಕೆಗಳ ಕಲರವ.