Categories
ರಾಜ್ಯೋತ್ಸವ 2001 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಪ್ರೊ. ಎಚ್ ಜಿ ಸಣ್ಣಗುಡ್ಡಯ್ಯ

ತುಮಕೂರು ಜಿಲ್ಲೆಯ ಸಿರಾ ತಾಲೂಕಿಗೆ ಸೇರಿದ ಶ್ರೀ ಎಚ್ ಜಿ ಸಣ್ಣಗುಡ್ಡಯ್ಯನವರು ಮೂಲತಃ ಅಧ್ಯಾಪಕರು. ಕಾಲೇಜು ಅಧ್ಯಾಪಕರಾಗಿ, ಉಪ ಪ್ರಾಧ್ಯಾಪಕರಾಗಿ, ಪ್ರಾಧ್ಯಾಪಕರಾಗಿ ನಿರಂತರ ಸೇವೆ ಸಲ್ಲಿಸಿ ಈಗ ನಿವೃತ್ತರಾಗಿರುವ ಇವರು ಕನ್ನಡ ಸಾಹಿತ್ಯದ ಲಲಿತ ಪ್ರಬಂಧ ಪ್ರಕಾರವನ್ನು ಶ್ರೀಮಂತಗೊಳಿಸಿದ ಅಪರೂಪದ ಪ್ರತಿಭೆ.

ಶ್ರೀ ಎಚ್ ಜಿ ಸಣ್ಣಗುಡ್ಡಯ್ಯನವರಿಂದ ರಚಿತವಾದ ‘ಏಕಾಂತ ಮತ್ತು ಇತರ ಪ್ರಬಂಧಗಳು’ ಹಾಗೂ ‘ಹದ್ದು ಮತ್ತು ಇತರ ಪ್ರಬಂಧಗಳು’ ಎಂಬ ಎರಡು ಲಲಿತ ಪ್ರಬಂಧ ಸಂಕಲನಗಳಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪುಸ್ತಕ ಪ್ರಶಸ್ತಿ ಲಭ್ಯವಾಗಿದೆ. ಇವರು ಬರೆದ ಮೊದಲ ಕವನ ಸಂಕಲನವಾದ ‘ಅಭೀಷ್ಟೆ’ಗೆ ೧೯೬೨ರಲ್ಲಿ ರಾಜ್ಯ ಸರ್ಕಾರದ ಪುಸ್ತಕ ಪ್ರಶಸ್ತಿ ಸಂದದ್ದು ಇಲ್ಲಿ ಉಲ್ಲೇಖನೀಯ ಸಂಗತಿಯಾಗಿದೆ. ಕನ್ನಡ ಪ್ರೇಮಗೀತೆಗಳ ಆಂಥಾಲಜಿ ‘ಪಾರಿಜಾತ’ದ ಸಂಪಾದಕರಾಗಿ ‘ವಿಚಾರ ಸಾಹಿತ್ಯ’ ಆಂಥಾಲಜಿಯ ಸಂಪಾದಕರಲ್ಲೊಬ್ಬರಾಗಿ ಇವರು ವಿಶಿಷ್ಟ ಕೊಡುಗೆ ನೀಡಿದ್ದಾರೆ. ತೀ.ನಂ.ಶ್ರೀ.ಯವರನ್ನು ಕುರಿತು ಬರೆದ ಇವರ ಕೃತಿ, ಜೀವನ ಚರಿತ್ರೆ ಪ್ರಕಾರದಲ್ಲಿ ತನ್ನದೇ ಆದ ಹೆಸರು ಮಾಡಿದೆ. ನಿಷ್ಠುರ ನುಡಿಗೆ ಹೆಸರಾದ ಶ್ರೀ ಎಚ್ ಜಿ ಸಣ್ಣಗುಡ್ಡಯ್ಯನವರು ಬರೆದ ವಿಮರ್ಶಾ ಲೇಖನಗಳು ಅವರ ವಿಶಿಷ್ಟ ನೋಟಕ್ಕೆ ಹೆಸರಾಗಿವೆ. ತುಮಕೂರಿನಂತಹ ಜಿಲ್ಲಾ ಕೇಂದ್ರವೊಂದರಲ್ಲಿ ಸಾಂಸ್ಕೃತಿಕ ಪರಿಸರ ನಿರ್ಮಾಣಕ್ಕೆ ತಮ್ಮದೇ ರೀತಿಯಲ್ಲಿ ಪೂರಕವಾಗಿರುವ ಇವರು ಸಾಂಸ್ಕೃತಿಕ ಚರ್ಚೆಗೆ ಸದಾ ಚಾಲಕ ಶಕ್ತಿಯಾಗಿದ್ದಾರೆ.