Categories
ರಾಜ್ಯೋತ್ಸವ 2022 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಪ್ರೊ. ಕೃಷ್ಣೇಗೌಡ

ಕನ್ನಡ ಸಾಹಿತ್ಯಲೋಕದಲ್ಲಿ ಪ್ರಾಧ್ಯಾಪಕ, ಚಿಂತಕ, ವಾಲ್ಮೀ, ಮಾತಿನಮಲ್ಲರಾಗಿ ಹೆಸರಾಗಿರುವ ಪ್ರೊ. ಕೃಷ್ಣೇಗೌಡರದ್ದು ವಿಶಿಷ್ಟ ಸಾಧನೆ. ಅಸ್ಖಲಿತ ಮಾತುಗಾರಿಕೆಯಿಂದ ದೇಶ-ವಿದೇಶಗಳಲ್ಲಿ ಕನ್ನಡ ಭಾಷೆಯ ಸೌಂದರ್ಯವನ್ನು ಬೆಳಗಿದ ಕನ್ನಡಬಂಧು. ಮಂಡ್ಯ ಜಿಲ್ಲೆ ಪಾಂಡವಪುರ ತಾಲ್ಲೂಕಿನ ಕನಗಮನಮರಡಿ ಗ್ರಾಮದಲ್ಲಿ ೧೯೫೮ರಲ್ಲಿ ಜನಿಸಿದ ಕೃಷ್ಣೇಗೌಡರು ಕೃಷಿಕ ಕುಟುಂಬದ ಕುಡಿ. ಹುಟ್ಟೂರಿನಲ್ಲಿ ಪ್ರೌಢಶಿಕ್ಷಣ, ಮೈಸೂರಿನಲ್ಲಿ ಉನ್ನತ ಶಿಕ್ಷಣ. ಮೈಸೂರು ವಿವಿಯಿಂದ ಕನ್ನಡದಲ್ಲಿ ಸ್ನಾತಕೋತ್ತರ ಪದವಿ, ಸೆಂಟ್‌ಫಿಲೋಮಿನಾ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ (೧೯೮೩ರಲ್ಲಿ ವೃತ್ತಿಬದುಕು ಆರಂಭಿಸಿದ ಗೌಡರು ಪ್ರಾಂಶುಪಾಲರಾಗಿ ನಿವೃತ್ತರಾದವರು. ಬಾಲ್ಯದಿಂದಲೂ ರಂಗಕಲೆ, ಜನಪದಕಲೆಗಳ ಬಗ್ಗೆ ಆಸಕ್ತರಾಗಿದ್ದ ಕೃಷ್ಣಗೌಡರು ಗ್ರಾಮ್ಯ ಭಾಷೆ ಮತ್ತು ಸಂಸ್ಕೃತಿಯನ್ನು ಚೆನ್ನಾಗಿ ಬಲ್ಲವರು. ನಿರರ್ಗಳವಾಗಿ, ಸುಸ್ಪಷ್ಟವಾಗಿ ಮಾತನಾಡುವ ಅಪೂರ್ವ ಕಲೆಗಾರಿಕೆ ಅವರದ್ದು. ಹಾಗಾಗಿ ವೃತ್ತಿಯಲ್ಲಿ ಪ್ರಾಧ್ಯಾಪಕರಾದರೂ ಪ್ರವೃತ್ತಿಯಲ್ಲಿ ಅವರು ಅಪ್ಪಟ ಹಾಸ್ಯಗಾರ. ನಗೆಕೂಟಗಳಲ್ಲಿ ಕೃಷ್ಣೇಗೌಡರು ಮಾತಿಗೆ ನಿಂತರೆ ಸಾಕು ನಗುವಿನ ಅಲೆಗಳ ಭೋರ್ಗರೆತ ಖಚಿತ, ದೇಶಾದ್ಯಂತ ಹಾಗೂ ೫೦ಕ್ಕೂ ಹೆಚ್ಚು ವಿದೇಶಗಳಲ್ಲಿ ನಗೆಕಾರ್ಯಕ್ರಮಗಳ ಮೂಲಕ ಕನ್ನಡದ ಕಂಪನ್ನು ಪಸರಿಸಿರುವ ಕೃಷ್ಣಗೌಡರು ಮಾತಿನಮಲ್ಲರೆಂದೇ ಸುವಿಖ್ಯಾತಿ, ಕವಣೆಕಲ್ಲು, ಕೃಷ್ಣವಿನೋದ ಮತ್ತು ಜಲದ ಕಣ್ಣು ಕೃತಿಗಳ ಲೇಖಕರೂ ಸಹ. ಬದುಕಿನ ಪುಟ್ಟಪುಟ್ಟ ಅನುಭವಗಳನ್ನು ಆಸ್ವಾದಿಸಬೇಕೆಂಬ ನಂಬಿಕೆಯ ಕೃಷ್ಣೇಗೌಡರ ಕನ್ನಡ ಭಾಷೆಯ ಬೆರಗು, ಮಾತಿನ ಬೆಡಗಿನ ಮೂರ್ತರೂಪ.