Categories
ರಾಜ್ಯೋತ್ಸವ 2001 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಪ್ರೊ. ಸುಧಾಕರ

ಸಾಹಿತ್ಯ ಸಂಶೋಧನೆ, ಜಾನಪದ ಹೀಗೆ ಬಹುಮುಖ ಸೇವೆ ಸಲ್ಲಿಸಿ ಪ್ರಬುದ್ಧತೆಯನ್ನು ಸ್ಥಾಪಿಸಿದ ಕಥೆಗಾರ; ಜಾನಪದ ವಿದ್ವಾಂಸ ಪ್ರೊ. ಸುಧಾಕರ ಅವರು.

ಬೆಂಗಳೂರು ಜಿಲ್ಲೆಯ ಮಾಗಡಿ ತಾಲೂಕಿನ ಎಣ್ಣೆಗೆರೆ ಎಂಬ ಸಣ್ಣ ಹಳ್ಳಿಯಲ್ಲಿ ಜನಿಸಿದ ಶ್ರೀಯುತರು ಹಂತ ಹಂತವಾಗಿ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದವರು. ವಿದ್ಯಾರ್ಥಿ ದೆಸೆಯಲ್ಲಿಯೇ ಸತತವಾಗಿ ‘ಸಾಕಿದ ನಾಯಿ’, ‘ಕಣ್ಣಿ ಕಿತ್ತ ಹಸು’ ಹಾಗೂ ‘ಹೊರಲಾಗದ ಹೊರೆ’ ಈ ಮೂರೂ ಕಥೆಗಳಿಗೆ ಪ್ರಜಾವಾಣಿ ದೀಪಾವಳಿ ಕಥಾ ಸ್ಪರ್ಧೆಯಲ್ಲಿ ಬಹುಮಾನ ಪಡೆದ ಹೆಗ್ಗಳಿಕೆಯ ಹ್ಯಾಟ್ರಿಕ್ ಹೀರೋ! ಗ್ರಾಮೀಣ ಸೊಗಡನ್ನು ತಮ್ಮ ಕಥಾ ತೆಕ್ಕೆಗೆ ತೆಗೆದುಕೊಂಡು ಕಥೆ ಮಾಡುವ ಪರಿಯನ್ನು ಕನ್ನಡ ಕಥಾಲೋಕಕ್ಕೆ ನೀಡಿದ ಅವರ ಕಾಣಿಕೆ ಅನನ್ಯವಾದದ್ದು, ಅಪ್ಪಟ ಗ್ರಾಮೀಣ ನೆಲೆಯಿಂದ ಮೂಡಿ ಬಂದ ಸುಧಾಕರರ ಸಾಹಿತ್ಯದಲ್ಲಿ ಸಹಜವಾಗಿಯೇ ಹಳ್ಳಿಯ ಸಮೃದ್ಧ ಸಂಸ್ಕೃತಿ ಅನಾವರಣಗೊಂಡಿದೆ. ಜನಪದ ಕಥೆಗಳು, ಒಗಟುಗಳು ಮತ್ತು ಗಾದೆಗಳ ಕ್ಷೇತ್ರದಲ್ಲಿ ಆಳವಾದ ಅರಿವಿರುವ ಸುಧಾಕರರ ವಿಮರ್ಶೆ, ಸಂಶೋಧನೆ ಕೂಡ ತುಂಬ ಕುಶಲತೆ ಮತ್ತು ಸೂಕ್ಷ್ಮತೆಯಿಂದ ಕೂಡಿದೆ. ‘ಕಣ್ಣಿ ಕಿತ್ತ ಹಸು’, ‘ಗರಿಕೆ ಬೇಕು’, ‘ಬಾಡಬಕ್ಕನಮುಳ್ಳು’ ಕಥಾ ಸಂಕಲನಗಳನ್ನು, ‘ದಡ ಕುಸಿದ ಬಾವಿ’ ಎಂಬ ಕಾದಂಬರಿ ಮತ್ತು ಪ್ರೇಮಸುಧಾ’ ಎಂಬ ಕಾವ್ಯವನ್ನು ಬರೆದಿರುವ ಸುಧಾಕರರು ಮುಂದೆ ಹೆಚ್ಚಾಗಿ ವಿಮರ್ಶೆ, ಸಂಶೋಧನೆ ಮತ್ತು ಜಾನಪದ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡವರು.

ಸಾಹಿತ್ಯ ಕೃಷಿಯೊಂದಿಗೆ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಪ್ರಾಧ್ಯಾಪಕರಾಗಿಯೂ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಪ್ರೊಫೆಸರ್ ಸುಧಾಕರರಿಗೆ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯು ಜಾನಪದ ತಜ್ಞ ಮನ್ನಣೆ ನೀಡಿ ಗೌರವಿಸಿದೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ, ಕರ್ನಾಟಕ ವಿಶ್ವವಿದ್ಯಾನಿಲಯದ ಕನಕಪೀಠದ ಪ್ರಥಮ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಹಿರಿಯ ಸಾಹಿತಿ ಸುಧಾಕರರ ಭಾಷೆ ಮತ್ತು ಬದುಕು ಸದಾ ನೇರ, ನಿಷ್ಟುರ ಮತ್ತು ಕ್ರಿಯಾಶೀಲ.