Categories
ರಾಜ್ಯೋತ್ಸವ 2003 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ಶ್ರೀಮತಿ ಎಸ್.ಕೆ. ವಸುಮತಿ

ಕರ್ನಾಟಕ ಶಾಸ್ತ್ರೀಯ ಸಂಗೀತ ಹಾಗೂ ಸುಗಮ ಸಂಗೀತ ಕ್ಷೇತ್ರದಲ್ಲಿ ಸುಮಾರು ನಲವತ್ತೈದು ವರ್ಷಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿರುವ ಅನನ್ಯ ಸಾಧಕಿ ಶ್ರೀಮತಿ ಎಸ್.ಕೆ. ವಸುಮತಿ ಅವರು.
ಮೈಸೂರಿನಲ್ಲಿ ೧೯೩೪ನೆಯ ಇಸವಿಯಲ್ಲಿ ಜನಿಸಿರುವ ಶ್ರೀಮತಿ ವಸುಮತಿ ಅವರು ತಂದೆ ಶ್ರೀ ಕೃಷ್ಣಸ್ವಾಮಿ ಅವರ ಪ್ರೋತ್ಸಾಹದಿಂದಾಗಿ ಬಾಲ್ಯದಲ್ಲಿಯೇ ಸಂಗೀತಾಭ್ಯಾಸ ಪ್ರಾರಂಭಿಸಿದರು. ವಿದ್ವಾನ್ ಎಂ.ವಿ. ಕೃಷ್ಣಪ್ಪ, ವಿದ್ವಾನ್ ಆರ್.ಕೆ. ರಾಮನಾಥನ್, ವಿದ್ವಾನ್ ಆರ್.ಕೆ. ಶ್ರೀಕಂಠನ್ ಅವರಂತಹ ನಾದಲೋಕದ ದಿಗ್ಗಜರಲ್ಲಿ ಶಿಷ್ಯವೃತ್ತಿ ಪಡೆದು ಆಕಾಶವಾಣಿಯಲ್ಲಿ ಗಾಯನ ಕಲಾವಿದೆಯಾಗಿ ದೀರ್ಘ ಕಾಲ ಸೇವೆ ಸಲ್ಲಿಸಿದ್ದಾರೆ.
ಸುಮಾರ ಇನ್ನೂರಕ್ಕೂ ಹೆಚ್ಚು ಗೀತೆಗಳಿಗೆ ರಾಗ ಸಂಯೋಜನೆ ಮಾಡಿರುವ ಕೀರ್ತಿ. ಕನ್ನಡ ಕವಿಗಳ ಹೊಸ ಕವಿತೆಗಳನ್ನು ‘ನವಸುಮ’ ಕಾರ್ಯಕ್ರಮದಡಿ ಪ್ರಸ್ತುತಪಡಿಸಿ ಕಾವ್ಯಲೋಕದ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಸ್ವತಃ ಕವಿ ಕುವೆಂಪು, ಪುತಿನ, ಡಿವಿಜಿಯವರಿಂದ ಮೆಚ್ಚುಗೆ, ಪ್ರೋತ್ಸಾಹ ಪಡೆದ ಹೆಗ್ಗಳಿಕೆ ಇವರದು.
ಎಳೆಯ ಪ್ರತಿಭೆಗಳಿಗೆ ಸಂಗೀತ ಶಿಕ್ಷಣ ನೀಡಿ ಐನೂರಕ್ಕೂ ಹೆಚ್ಚು ಸಮರ್ಥ ಶಿಷ್ಯರ ತಂಡ ರೂಪಿಸಿದ ಕೀರ್ತಿಗೆ ಭಾಜನರಾಗಿದ್ದಾರೆ. ‘ರಾಗತರಂಗ’ ಎಂಬ ಹೆಸರಿನಲ್ಲಿ ಕನ್ನಡದ ಪ್ರಖ್ಯಾತ ನೃತ್ಯ ರೂಪಕಗಳಿಗೆ ರಾಗ ಸಂಯೋಜನೆ ಮಾಡಿದ್ದಾರೆ.
ಕರ್ನಾಟಕ ಕಲಾಶ್ರೀ, ಅನನ್ಯ ಕಲಾಭಿಜ್ಞ ಹಂಸಪ್ರಶಸ್ತಿ ಮೊದಲಾದ ಪ್ರಶಸ್ತಿ ಗೌರವಗಳು ಇವರಿಗೆ ಸಂದಿವೆ.
ಸಂಗೀತವನ್ನೇ ಉಸಿರಾಗಿಸಿಕೊಂಡಿರುವ ಗಾಯನ, ಬೋಧನ, ನಿರ್ದೇಶನಗಳಲ್ಲಿ ಸಂಪೂರ್ಣವಾಗಿ ಇಂದಿಗೂ ತೊಡಗಿಸಿಕೊಂಡಿರುವ ಹಿರಿಯ ಗಾನಶಿರೋಮಣಿ ಶ್ರೀಮತಿ ಎಸ್.ಕೆ. ವಸುಮತಿ ಅವರು.