Categories
ಜಾನಪದ ರಾಜ್ಯೋತ್ಸವ 2022 ರಾಜ್ಯೋತ್ಸವ ಪ್ರಶಸ್ತಿ

ಶ್ರೀಮತಿ ಕಮಲಮ್ಮ ಸೂಲಗಿತ್ತಿ

ಪರೋಪಕಾರದಲ್ಲೇ ಬದುಕಿನ ಸಾರ್ಥಕತೆಯ ಕಂಡುಕೊಂಡ ನಿಸ್ವಾರ್ಥ ಕಾಯಕಜೀವಿ ಕಮಲಮ್ಮ, ಉಚಿತ ಹೆರಿಗೆ ಮಾಡಿಸುವ ಸೂಲಗಿತ್ತಿ, ಜನಪದ ಭಂಡಾರವುಳ್ಳ ದೇಸೀ ಪ್ರತಿಭೆ, ಅಲೆಮಾರಿ ಸಮುದಾಯಕ್ಕೆ ಸೇರಿದ ಕಮಲಮ್ಮ ಕೋಲಾರದವರು. ಹಟ್ಟಿಚಿನ್ನದಗಣಿ ಹುಟ್ಟೂರು. ಶಾಲೆಯ ಮೆಟ್ಟಲೇ ಹತ್ತದ ನತದೃಷ್ಟೆ, ಆದರೆ, ಲೋಕಜ್ಞಾನದಲ್ಲಿ ನಿಪುಣೆ, ಅಮ್ಮ ನಾಗಮ್ಮನಿಂದ ಸೂಲಗಿತ್ತಿತನ, ಅಪ್ಪನಿಂದ ಪಾರಂಪರಿಕ ನಾಟಿ ಔಷಧಿ ನೀಡುವಿಕೆ ಕಮಲಮ್ಮಳಿಗೆ ಬಂದ ಬಳುವಳಿ, ಗರ್ಭಿಣಿಯರ ಪಾಲಿನ ನೆಚ್ಚಿನ ಕಮಲಜ್ಜಿ, ಆಸ್ಪತ್ರೆಯ ಮುಖವನ್ನೇ ನೋಡದ ಕಮಲಮ್ಮ ಈವರೆಗೆ ೫೦೦ಕ್ಕೂ ಹೆಚ್ಚು ಹೆರಿಗೆ ಮಾಡಿಸಿರುವ ಸೂಲಗಿತ್ತಿ. ಎಲ್ಲವೂ ಸುಸೂತ್ರ ಹೆರಿಗೆಯೇ. ಕಾಮಾಲೆ, ತಲೆಶೂಲೆ, ಪಿತ್ತ ಅಜೀರ್ಣ ಸೇರಿದಂತೆ ಹಲವು ಕಾಯಿಲೆಗಳಿಗೆ ಔಷಧಿ ಮೂಲಕ ಪರಿಹಾರ ನೀಡುವ ಈ ನಾಟಿವೈದ್ಯೆಗೆ ಪರೋಪಕಾರವೇ ಬದುಕಿನ ಗೊತ್ತು-ಗುರಿ. ಕಮಲಮ್ಮ ಜಾನಪದ ಜ್ಞಾನದ ಭಂಡಾರ, ಸೋಬಾನೆ, ಜೋಗುಳ ಮತ್ತು ಬುರ‍್ರಕಥಾ ಹಾಡುಗಳನ್ನು ಹಾಡುವಲ್ಲಿ ನಿಸ್ಸೀಮೆ. ಆಕೆಯ ಕಂಠದಲ್ಲಿ ಜನಪದ ಹಾಡುಗಳನ್ನು ಕೇಳುವುದೇ ಚೆಂದವೆಂಬುದು ಶ್ರೋತೃಗಳ ಸಾಮಾನ್ಯ ಅಭಿಪ್ರಾಯ. ಎಲೆಮರೆಯಕಾಯಿಯಂತೆ ಬದುಕಿದರೂ, ಬಡತನ ಕಿತ್ತು ತಿನ್ನುತ್ತಿದ್ದರೂ ಎಲ್ಲೆಮೀರಿದ ಲೋಕಸೇವೆಯಲ್ಲಿ ನಿರತವಾಗಿರುವ ಕಮಲಮ್ಮ ಸಮಾಜಸೇವೆಗೆ ಆದರ್ಶ.