Categories
ಚಲನಚಿತ್ರ ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ

ಶ್ರೀಮತಿ ಪ್ರಮೀಳಾ ಜೋಷಾಯ್

ಕಲಾತ್ಮಕ ಮತ್ತು ಕಮರ್ಷಿಯಲ್ ಚಿತ್ರಗಳ ಎಲ್ಲ ಬಗೆಯ ಪಾತ್ರಗಳಿಗೂ ಜೀವತುಂಬಿ ನಟಿಸುವ ಅಭಿನೇತ್ರಿ ಶ್ರೀಮತಿ ಪ್ರಮೀಳಾ ಜೋಷಾಯ್ ಅವರು.
ಬೆಂಗಳೂರಿನ ಶ್ರೀಮತಿ ಜಯಮ್ಮ ಮತ್ತು ಸ್ಯಾಮ್ಯುಯಲ್ ಜೋಷಾಯ್ ಅವರ ಪುತ್ರಿ, ಪ್ರಮೀಳಾ ಅವರ ಪ್ರತಿಭೆ ಬೆಳಕಿಗೆ ಬಂದಿದ್ದು ರಂಗಭೂಮಿ ಮತ್ತು ಚಲನಚಿತ್ರರಂಗದಲ್ಲಿ.
೧೯೭೬ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟ ಈ ಅಭಿನೇತ್ರಿ ನಟಿಸಿದ ಮೊದಲ ಚಿತ್ರ ಸಾಮಾಜಿಕ ವಸ್ತುವನ್ನು ಒಳಗೊಂಡ ‘ಹರಕೆ’. ಉತ್ತರ ಕರ್ನಾಟಕದಲ್ಲಿ ಚಾಲ್ತಿಯಲ್ಲಿದ್ದ ದುಷ್ಟ ಬಸವಿ ಪದ್ಧತಿಯ ಕರಾಳ ಮುಖಗಳನ್ನು ಪರಿಚಯಿಸುವ ಕಥಾಹಂದರ ಈ ಚಿತ್ರದ್ದು. ಭಕ್ತ ಸಿರಿಯಾಳ, ತಾಯಿಯ ಆಸೆ, ಗುಣನೋಡಿ ಹೆಣ್ಣುಕೊಡು, ಪಟ್ಟಣಕ್ಕೆ ಬಂದ ಪತ್ನಿಯರು, ಕಪ್ಪುಕೊಳ, ಬೆಂಕಿ, ಪ್ರಥಮ ಉಷಾ ಕಿರಣ ಇವೇ ಮೊದಲಾದ ಚಿತ್ರಗಳಲ್ಲಿ ಪ್ರಮೀಳಾ ಅವರದು ಮನೋಜ್ಞ ಅಭಿನಯ, ನಿರ್ವಹಿಸಿದ ಪಾತ್ರಕ್ಕೆ ನ್ಯಾಯ ಒದಗಿಸಿಕೊಡುವ ಸಜ್ಜನಿಕೆ ಅವರದು.
ನಟಿಯಾಗಿ ಖ್ಯಾತಿ ಪಡೆದ ಮೇಲೆ ರಂಗಭೂಮಿಗೂ ಕಾಲಿಟ್ಟರು. ಮರಾಠಿಯ ವಿಜಯ್ ತೆಂಡೂಲ್ಕರ್ ಅವರ ಯಶಸ್ವಿ ನಾಟಕ ಸಖರಾಮ್‌ ಬೈಂಡ‌ ಕನ್ನಡಾನುವಾದ ನಾಟಕದ ಮೂಲಕ ರಂಗಭೂಮಿ ಪ್ರವೇಶ. ಉತ್ತರ ಕರ್ನಾಟಕದ ಅನೇಕ ವೃತ್ತಿರಂಗ ಕಂಪೆನಿಗಳ ನಾಟಕಗಳಲ್ಲಿ ಅಭಿನಯ. ಜೊತೆಗೆ ಕಿರುತೆರೆಯ ಧಾರಾವಾಹಿಗಳಲ್ಲೂ ನಟಿಸಿದ ಅನುಭವ. ಕನ್ನಡ, ತಮಿಳು, ತೆಲುಗು ಮತ್ತು ತುಳು ಭಾಷೆಗಳಲ್ಲಿ ೩೫೦ಕ್ಕೂ ಹೆಚ್ಚಿನ ಚಿತ್ರಗಳಲ್ಲಿ ನಟಿಸಿರುವುದು ಪ್ರಮೀಳಾ ಅವರ ಸಾಧನೆ.
ಸ್ವತಃ ಅಭಿನಯಿಸಿ, ನಿರ್ಮಿಸಿರುವ ‘ತಾಯಿ’ ಚಿತ್ರಕ್ಕೆ ರಾಷ್ಟ್ರ ಹಾಗೂ ರಾಜ್ಯ ಪ್ರಶಸ್ತಿಗಳ ಗೌರವ ಸಂದಿರುವುದು ಪ್ರಮೀಳಾ ಜೋಷಾಯ್ ಅವರ ಕಲಾಪ್ರೌಢಿಮೆಗೆ ಸಿಕ್ಕಿರುವ ಗೌರವ. ಇವರು ಕೆಂಪೇಗೌಡ ಪ್ರಶಸ್ತಿ ಪುರಸ್ಕೃತರು. ಸೆನ್ಸಾರ್ ಮಂಡಳಿ ಸದಸ್ಯರಾಗಿಯೂ ಕಾರ್ಯನಿರ್ವಹಿಸಿರುವರು.
ಪತಿ ನಟ ಸುಂದರ್ ರಾಜ್ ಅವರೊಂದಿಗೆ ಕನ್ನಡ ಚಿತ್ರರಂಗದಲ್ಲಿ ಸಾಧನೆಯ ಹಾದಿಯಲ್ಲಿ ಸಾಗುತ್ತಿರುವ ಪ್ರತಿಭಾವಂತ ಕಲಾವಿದೆ ಶ್ರೀಮತಿ ಪ್ರಮೀಳಾ ಜೋಷಾಯ್.