Categories
ಜಾನಪದ ರಾಜ್ಯೋತ್ಸವ 2001 ರಾಜ್ಯೋತ್ಸವ ಪ್ರಶಸ್ತಿ

ಶ್ರೀಮತಿ ಯಾಚೇನಹಳ್ಳಿ ನಿಂಗಮ್ಮ

ತನ್ನ ಸಿರಿಕಂಠದಿಂದ ಜನಪದ ಹಾಡುಗಳ ಮೂಲಕ ರಸಿಕರ ಮನಸೂರೆಗೊಂಡ ಕಲಾವಿದೆ ಶ್ರೀಮತಿ ಯಾಚೇನಹಳ್ಳಿ ನಿಂಗಮ್ಮ. ಮೈಸೂರು ಜಿಲ್ಲೆ ತಿರುಮಕೂಡಲು ನರಸೀಪುರ ತಾಲೂಕಿನ ಮೆಣಸಿಕ್ಯಾತನ ಹಳ್ಳಿಯಲ್ಲಿ ಬಡಕುಟುಂಬವೊಂದರಲ್ಲಿ ಜನಿಸಿದ ಇವರು ಬಾಲ್ಯದಿಂದಲೇ ಜನಪದ ಹಾಡುಗಳಿಗೆ ಮಾರು ಹೋದವರು. ಗುರುಬಲ, ಸಂಸ್ಥೆ ಬಲ, ಆರ್ಥಿಕ ಬಲ – ಈ ಯಾವ  ಒತ್ತಾಸೆ, ಆಕರ್ಷಣೆಯೂ ಇಲ್ಲದೆ, ಕೇವಲ ಮೈಗೂಡಿ ಬಂದ ವೈಯಕ್ತಿಕ ಸ್ಫೂರ್ತಿಯಿಂದ ಹಾಡಿ ಹಾಡಿ ಇಂದು ನಾಡಿನ ಜನಪದ ಗಾಯಕರಲ್ಲಿ ಹಿರಿಯರಾದ ಶ್ರೀಮತಿ ನಿಂಗಮ್ಮ ಅಪ್ಪಟ ಗ್ರಾಮೀಣ ಪ್ರತಿಭೆ.

ತನ್ನ ಊರಿನಲ್ಲಿ ಮತ್ತು ನೆರೆಯ ಊರುಗಳಲ್ಲಿ ಯಾವುದೇ ಮದುವೆ, ಹಬ್ಬ ಜಾತ್ರೆಯಾಗಲಿ ಅಲ್ಲಿನಿಂಗಮ್ಮನ ಪದಗಳು ಅಲೆ ಅಲೆಯಾಗಿ ಜನರ ಕಿವಿ ತುಂಬುತ್ತವೆ. ಕೇವಲ ವಾಗ್‌ರೂಪದಲ್ಲಿ ಸಾವಿರಾರು ವರ್ಷಗಳ ತನ್ನ ಆಯಸ್ಸನ್ನು ಕಳೆದೂ ಉಳಿದು ಬಂದಿರುವ ಜನಪದ ಹಾಡುಗಳು ನಿಂಗಮ್ಮನಿಗೆ ಹಿರಿಯರಿಂದ ಬಳುವಳಿಯಾಗಿ ಬಂದಂತೆಯೇ ನಿಂಗಮ್ಮನಿಂದ ನೂರಾರು ಹೆಣ್ಣು ಮಕ್ಕಳಿಗೆ ಧಾರೆ ಎರೆಯಲ್ಪಟ್ಟಿವೆ.

ನಾಡಿನಾದ್ಯಂತ ತನ್ನ ಹಾಡುಗಾರಿಕೆಯಿಂದ ಜನಮನ ಸೂರೆಗೊಂಡ ನಿಂಗಮ್ಮನವರನ್ನು ಅನೇಕ ಸಂಘ ಸಂಸ್ಥೆಗಳು ಗೌರವಿಸಿವೆ. ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿ ನೀಡಿ ಸನ್ಮಾನಿಸಿದೆ. ಕಾಲನ ಅಂಕೆಗೆ ಶರೀರ ಬಾಗುತ್ತಿದ್ದರೂ ನಿಂಗಮ್ಮನವರ ಶಾರೀರ ಮಾತ್ರ ಇಂದಿಗೂ ಕುಗ್ಗಿಲ್ಲ. ಅಂಥ ಸಿರಿ ಕಂಠದ ಜಾನಪದ ಹಾಡುಗಾರ್ತಿ ಶ್ರೀಮತಿ ಯಾಚೇನಹಳ್ಳಿ ನಿಂಗಮ್ಮ.