Categories
ರಾಜ್ಯೋತ್ಸವ 2001 ರಾಜ್ಯೋತ್ಸವ ಪ್ರಶಸ್ತಿ ಸಮಾಜಸೇವೆ

ಶ್ರೀಮತಿ ರತ್ನಮ್ಮ ಹೆಗ್ಗಡೆ

ದಕ್ಷಿಣ ಕನ್ನಡ ಜಿಲ್ಲೆಯ ಜನತೆಯ ಮನ ಗೆದ್ದು ಎಲ್ಲರಿಗೂ ದೊಡ್ಡಮ್ಮನಾಗಿರುವವರು ಧರ್ಮಸ್ಥಳದ ಶ್ರೀಮತಿ ರತ್ನಮ್ಮ ಹೆಗ್ಗಡೆ ಅವರು.

೧೯೨೯ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆ ಸಮೀಪದ ತಮನಂಗಡಿಯಲ್ಲಿ ಸಂಕಷ್ಟಶೆಟ್ಟಿ ಮತ್ತು ಅನಂತಮತಿಯವರ ತುಂಬು ಸಂಸಾರದಲ್ಲಿ ಹುಟ್ಟಿ ಬೆಳೆದ ರತ್ನಮ್ಮನವರಿಗೆ ತಾಯಿಯ ಸದ್ಗುಣಗಳೆಲ್ಲವೂ ಬಳುವಳಿಯಾಗಿ ಬಂದವು. ಬೆಳ್ತಂಗಡಿಯ ೮೧ ಹಳ್ಳಿಗಳನ್ನು ದತ್ತು ಸ್ವೀಕರಿಸುವ ಮೂಲಕ ಅವುಗಳ ಸರ್ವಾಂಗೀಣ ಅಭಿವೃದ್ಧಿಯ ಕೀರ್ತಿ ಇವರದು. ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಭಗವಾನ್ ಬಾಹುಬಲಿ ಮೂರ್ತಿಯ ಸ್ಥಾಪನೆಗೆ ಕಾರಣಕರ್ತರು. ಶ್ರೀ ಬಾಹುಬಲಿ ಸೇವಾ ಸಮಿತಿ ಮಹಿಳಾ ವಿಭಾಗ, ಶ್ರೀ ಬಾಹುಬಲಿ ಶ್ರಾವಿಕಾಶ್ರಮಗಳನ್ನು ಸ್ಥಾಪಿಸಿ ಮಹಿಳೆಯರು ಸ್ವತಂತ್ರ ಉದ್ಯೋಗ ನಡೆಸುವಂತಹ ತರಬೇತಿ ನೀಡುತ್ತಿದ್ದಾರೆ.

ಸಮಾಜಸೇವೆಯ ಜೊತೆ ಜೊತೆಗೆ ಬರಹದ ಹವ್ಯಾಸವನ್ನು ಇರಿಸಿಕೊಂಡಿದ್ದಾರೆ. ನೂರಾರು ಲೇಖನಗಳನ್ನು ಬರೆದು ಪ್ರಕಟಿಸಿದ್ದಾರೆ. ‘ಶಿಖರ್ಜಿಯ ಶಿಖರಗಳಲ್ಲಿ ಮತ್ತು ಮಗಳಿಗೊಂದು ಪತ್ರ ರತ್ನಮ್ಮನವರ ಎರಡು ಸ್ವತಂತ್ರ ಕೃತಿಗಳು.

ಆದರ್ಶ ಗೃಹಿಣಿಯಾಗಿ, ಪ್ರೀತಿಯ ಮಡದಿಯಾಗಿ, ಮಮತೆಯ ತಾಯಿಯಾಗಿ, ವಾತ್ಸಲ್ಯಮಯಿ ಅತ್ತೆಯಾಗಿ, ಸಮಾಜ ಸೇವೆಯ ದೊಡ್ಡಮ್ಮನಾಗಿ ಬಹುಮುಖ ವ್ಯಕ್ತಿತ್ವದ ‘ರತ್ನ’ ರತ್ನಮ್ಮನವರನ್ನು ಅರಸಿ ಬಂದ ಸನ್ಮಾನ-ಪ್ರಶಸ್ತಿಗಳು ಹಲವಾರು.

ಶ್ರೀಮತಿ ರತ್ನಮ್ಮ ಹೆಗ್ಗಡೆ ಅವರು ಬಡಬಗ್ಗರ, ದೀನದಲಿತರ, ಶೋಷಿತರ ಏಳೆಗಾಗಿ ಇಂದಿಗೂ ಶ್ರಮಿಸುತ್ತಿರುವ ಅಪರೂಪದ ಹಿರಿಯ ಚೇತನ.