Categories
ರಂಗಭೂಮಿ ರಾಜ್ಯೋತ್ಸವ 2022 ರಾಜ್ಯೋತ್ಸವ ಪ್ರಶಸ್ತಿ

ಶ್ರೀಮತಿ ಲಲಿತಾಬಾಯಿ ಲಾಲಪ್ಪ ದಶವಂತ

ಕನ್ನಡ ರಂಗಭೂಮಿಯನ್ನು ಬೆಳಗಿದ ರಂಗಚೇತನಗಳಲ್ಲಿ ಲಲಿತಾಬಾಯಿ ಲಾಲಪ್ಪ ದಶವಂತ ಅವರೂ ಪ್ರಮುಖರು, ಬಯಲಾಟದ ಪಾರಿಜಾತ ಕಲಾವಿದೆ. ನಾಲ್ಕೂವರೆ ದಶಕಗಳಿಂದ ಕಲಾಸೇವಾ ನಿರತ ರಂಗಕರ್ಮಿ, ವಿಜಯಪುರದ ರಂಗಕೊಡುಗೆ ಲಲಿತಾಬಾಯಿ ಲಾಲಪ್ಪ ದಶವಂತ, ಬಾಲ್ಯದಲ್ಲೇ ಬಯಲಾಟದ ಬೆರಗಿಗೆ ಮನಸೋತ ಮನ. ೯ನೇ ವಯಸ್ಸಿಗೆ ‘ಪಾರಿಜಾತ ಬಯಲಾಟದಲ್ಲಿ ರುಕ್ಮಿಣ ಪಾತ್ರಕ್ಕೆ ಬಣ್ಣ ಹಚ್ಚುವ ಮೂಲಕ ರಂಗಪ್ರವೇಶ. ಬಣ್ಣದ ಸಖ್ಯ ದೊರೆತ ಮೇಲೆ ಬದುಕೇ ಕಲಾಯಾನ, ಆರಂಭದ ಮೂರು ವರ್ಷ ಪಾರಿಜಾತ ಬಯಲಾಟ ಮತ್ತು ಲವ-ಕುಶ ದೊಡ್ಡಾಟದಲ್ಲಿ ನಟನೆ. ೧೨ನೇ ವಯಸ್ಸಿಗೆ ಸಾಮಾಜಿಕ ನಾಟಕಗಳಲ್ಲಿ ನಟಿಸಲು ಮುಂದಡಿ. ಅಣ್ಣತಂಗಿ, ದೀಪಾಮ ಸಂಗಮ, ಹುಡುಗಿ ಮೆಚ್ಚಿದ ಹುಂಬ, ಸಮಾಜಕ್ಕೆ ಶಿಕ್ಷೆ, ಚಿನ್ನದಗೊಂಬೆ, ಅತ್ತಿಗೆಗೆ ತಕ್ಕ ಮೈದುನ, ಹೆಣ್ಣು ಜಗದ ಕಣ್ಣು, ಗೌರಿಗೆದ್ದಳು, ಗರುಡ ರಾಜ್ಯದಲ್ಲಿ ಘಟಸರ್ಪ ಮುಂತಾದ ಸಾಮಾಜಿಕ ನಾಟಕ, ಕುರುಕ್ಷೇತ್ರ, ವೀರ ಅಭಿಮನ್ಯು ಪೌರಾಣಿಕ ನಾಟಕಗಳಲ್ಲೂ ನಟಿಸಿ ಸೈ ಎನಿಸಿಕೊಂಡ ಕಲಾವಿದೆ. ಮಹಾರಾಷ್ಟ್ರದಲ್ಲೇ ಬಹುತೇಕ ನಾಟಕ ಪ್ರದರ್ಶನಗಳಾಗಿರುವುದು ವಿಶೇಷ. ಹಳ್ಳಿಗಾಡಿನ ಜಾತ್ರಾಮಹೋತ್ಸವಗಳಲ್ಲಿ ಬೆಳಗಿದ ಕಲಾಚೇತನ. ಕರ್ನಾಟಕ ನಾಟಕ ಅಕಾಡೆಮಿಯ ವಾರ್ಷಿಕ ಪ್ರಶಸ್ತಿಗೂ ಭಾಜನವಾಗಿರುವ ರಂಗಪುಷ್ಪ.