Categories
ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಶ್ರೀ ಅಂಬಾತನಯ ಮುದ್ರಾಡಿ

ಬಹುಮುಖ ಪ್ರತಿಭೆಯ ಯಕ್ಷಗಾನದ ಅರ್ಥಧಾರಿಯಾಗಿ, ಹರಿದಾಸ ಮತ್ತು ಜಿನದಾಸರಾಗಿ ಖ್ಯಾತಿ ಪಡೆದ ಕಲಾವಿದರು ಅಂಬಾತನಯ ಮುದ್ರಾಡಿ.
ಸಾಮಗ, ಶೇಣಿ, ಪೊಲ್ಯ, ಸೀತಾನದಿ, ಕುಂಬಳೆ, ಜೋಷಿ, ಕೋಳ್ಳೂರು ಇತರ ಮುಖ್ಯರೊಂದಿಗೆ ಯಕ್ಷಗಾನದಲ್ಲಿ ಅರ್ಥಧಾರಿಯಾಗಿ ಶ್ರೀಯುತರು ಖ್ಯಾತಿ ಪಡೆದವರು. ಶ್ರೀ ಇಡುಗಂಜಿ ಮತ್ತು ಶ್ರೀ ಅಮೃತೇಶ್ವರಿ ಮೇಳಗಳಲ್ಲಿ ಎರಡು ವರ್ಷ ಅತಿಥಿ ಕಲಾವಿದರಾಗಿ ಅಂಬಾತನಯ ಮುದ್ರಾಡಿ ಅವರಿಂದ ಸೇವೆ ಸಂದಿದೆ.
ಮಂಜುಲಗಾನ- ಶಿಶುಗೀತೆ, ಭಕ್ತ ಕುಚೇಲ, ರುಕ್ಕಾಂಗದ, ಅಹಮ್ಮೋದ್ಧಾರ- ಏಕಾಂಕ ನಾಟಕಗಳು ಮತ್ತು ಭಜನೆಗಳ ರಚನೆ ಮಾಡಿರುವ ಶ್ರೀಯುತರು ಅನೇಕ ನಾಟಕಗಳನ್ನು ಬರೆದಿರುವರು. ಹೆಬ್ರಿ ಕರ್ನಾಟಕ ಸಂಘದ ಕಾರ್ಯದರ್ಶಿ, ಅಧ್ಯಕ್ಷರಾಗಿ ಗೌರವ, ಕಾರ್ಕಳ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಏಳು ವರ್ಷ ಸೇವೆ ಹಾಗೂ ಅನೇಕ ಸಾಹಿತ್ಯ ಸಮ್ಮೇಳನಗಳಲ್ಲಿ ಅಧ್ಯಕ್ಷತೆ ಮತ್ತು ಪ್ರಬಂಧ, ಕವನಗಳ ಮಂಡನೆ ಶ್ರೀಯುತರ ಹೆಗ್ಗಳಿಕೆಗಳು. ಕಳೆದ ೩೦ ವರ್ಷಗಳಿಂದ ಹರಿದಾಸರಾಗಿ ಸನಾತನ ಧರ್ಮ ಸಂಸ್ಕೃತಿಯ ಪ್ರಚಾರ, ೨೦ ವರ್ಷಗಳಿಂದ ಜೈನೇತರರಾಗಿ ಜಿನಕಥೆ ಮಾಡಿದ ಹೆಗ್ಗಳಿಕೆ ಅವರದು.
ಆಕಾಶವಾಣಿ ಕಲಾವಿದರೂ ಆಗಿರುವ ಅಂಬಾತನಯ ಮುದ್ರಾಡಿ ಅವರು ಹಲವು ಶಿಕ್ಷಣ ಸಂಸ್ಥೆಗಳಿಗೆ ಧನಸಹಾಯ ನೀಡುವ ಮೂಲಕ ಸಮಾಜ ಸೇವೆಯಲ್ಲೂ ತೊಡಗಿರುವರು.
ಶ್ರೀಯುತರು ತಮ್ಮ ಸಾಧನೆಗಾಗಿ ಪೇಜಾವರ ಶ್ರೀಗಳಿಂದ ರಾಮ ವಿಠಲ ಪುರಸ್ಕಾರ, ಪೊಳಲಿ ಶಂಕರ ನಾರಾಯಣಶಾಸ್ತ್ರಿ ಹಾಗೂ ಕುಕ್ಕಿಲ ಕೃಷ್ಣಭಟ್ಟ ಪ್ರಶಸ್ತಿಗೆ ಭಾಜನರು.
ಯಕ್ಷಗಾನ ಕಲಾವಿದರಾಗಿ ಹಾಗೂ ಹರಿದಾಸರಾಗಿ ಅರ್ಥಪೂರ್ಣ ಸೇವೆಗೈದವರು ಶ್ರೀ ಅಂಬಾತನಯ ಮುದ್ರಾಡಿ.