Categories
ಯಕ್ಷಗಾನ ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಅರಳುಕುಪ್ಪೆ ಎಸ್.ನಂಜಪ್ಪ

ಬಾಲ್ಯದಿಂದಲೇ ಯಕ್ಷಗಾನ ಕಲೆಯಲ್ಲಿ ಸಿದ್ಧಿ ಪಡೆದು ಗುರುಪರಂಪರೆಯನ್ನು ಬೆಳೆಸಿಕೊಂಡು ಬಂದ ಭಾಗವತರು ಎ.ಎಸ್. ನಂಜಪ್ಪ ಅವರು.
ತುಮಕೂರು ಜಿಲ್ಲೆ ತಿಪಟೂರು ತಾಲ್ಲೂಕಿನ ಅರಳಗುಪ್ಪೆ ಗ್ರಾಮದಲ್ಲಿ ೧೯೩೭ರಲ್ಲಿ ಶ್ರೀಯುತರ ಜನನ. ಎಸ್ಸೆಸ್ಸೆಲ್ಸಿವರೆಗೆ ವಿದ್ಯಾಭ್ಯಾಸ. ಯಕ್ಷಗಾನ ಬಯಲಾಟಕ್ಕೆ ಪ್ರಸಿದ್ಧಿ ಪಡೆದಿದ್ದ ಅರಳಗುಪ್ಪೆ ಗ್ರಾಮದ ಉತ್ಸಾಹಿ ಯುವಕರು ಸೇರಿಕೊಂಡು ಮೂರು-ನಾಲ್ಕು ತಂಡಗಳ ರಚನೆ, ವರ್ಷದಲ್ಲಿ ಹತ್ತರಿಂದ ಇಪ್ಪತ್ತು ಬಾರಿ ಯಕ್ಷಗಾನ ಬಯಲಾಟ ಆಡುತ್ತ ಅದೇ ಕ್ಷೇತ್ರದಲ್ಲಿ ಸಾಧನೆ ಮಾಡಿದವರು ಶ್ರೀಯುತರು.
ಮೊದಲಿಗೆ ಭಾಗವತ ಸಿದ್ದಲಿಂಗಪ್ಪ ಅವರ ಬಳಿ ಶಿಷ್ಯವೃತ್ತಿ. ಬಳಿಕ ಭಾಗವತರಾದ ದಿವಾಕರಾಚಾರ್ಯ, ಶಾಂತವೀರಪ್ಪ ಅವರ ಬಳಿ ದಕ್ಷಿಣಾದಿ ಧಾಟಿಯ ಯಕ್ಷಗಾನ ಕಲಿಕೆ.
ಯಕ್ಷಗಾನದಲ್ಲಿ ಅನೇಕ ಪಾತ್ರಗಳನ್ನು ನಿರ್ವಹಿಸುವುದರ ಜತೆಗೆ ಭಾಗವತರ ಜತೆಯಲ್ಲಿ ಹಿಮ್ಮೇಳದಲ್ಲಿ ಹಾಡುತ್ತ, ತಾಳ ಹಾಕುತ್ತ, ಶನಿಮಹಾತ್ಮ ಕಥೆ, ನಳದಮಯಂತಿ ಕಥೆ, ಸತ್ಯವ್ರತ, ಚೆನ್ನಬಸವ ಪುರಾಣ ಓದುತ್ತ ಬೆಳೆದವರು ನಂಜಪ್ಪ ಅವರು.
ಶ್ರೀಯುತರು ಅತ್ಯಂತ ಸಮರ್ಥವಾಗಿ ನಿಭಾಯಿಸುತ್ತಿದ್ದ ದಕ್ಷಯಜ್ಞದ ಬ್ರಹ್ಮನ ಪಾತ್ರ ಕಂಡು ಜಾನಪದ ತಜ್ಞರಾದ ಎಚ್.ಎಲ್‌ನಾಗೇಗೌಡರು, ಜೀ.ಶಂ.ಪರಮಶಿವಯ್ಯ ಅವರು ಬೆನ್ನು ತಟ್ಟಿ ಪ್ರೋತ್ಸಾಹಿಸಿರುವರು.
ಆಕಾಶವಾಣಿ ಮತ್ತು ದೂರದರ್ಶನ ಕಲಾವಿದರಾಗಿಯೂ ಶ್ರೀಯುತರು ಹತ್ತಾರು ಕಾರ್ಯಕ್ರಮಗಳನ್ನು ನೀಡಿರುವರು. ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯಿಂದ ಜಾನಪದ ಜ್ಞಾನ-ವಿಜ್ಞಾನ ಪ್ರಶಸ್ತಿ, ಕರ್ನಾಟಕ ಜಾನಪದ ಪರಿಷತ್‌ನಿಂದ ದೊಡ್ಡಮನೆ ಲಿಂಗೇಗೌಡ ಪ್ರಶಸ್ತಿಗಳಿಗೆ ಶ್ರೀಯುತರು ಭಾಜನರು.
ಯಕ್ಷಗಾನ ಬಯಲಾಟದಲ್ಲಿ ಸಾಧನೆ ಮಾಡುತ್ತ, ಶಿಷ್ಯವೃಂದವನ್ನು ಬೆಳೆಸುತ್ತ ಗುರುಪರಂಪರೆಯ ಉಳಿವಿಗೆ ಶ್ರಮಿಸುತ್ತಿರುವವರು ಶ್ರೀ ಎ.ಎಸ್.ನಂಜಪ್ಪ.