Categories
ಯಕ್ಷಗಾನ ರಾಜ್ಯೋತ್ಸವ 2001 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಅರುವ ಕೊರಗಪ್ಪ ಶೆಟ್ಟಿ

ಕಳೆದ ನಾಲೈದು ದಶಕಗಳಿಂದ ಯಕ್ಷಗಾನ ರಂಗದಲ್ಲಿ ತನ್ನದೇ ಆದ ನಟನಾ ಚಾತುರ್ಯದಿಂದ, ಅದ್ಭುತ ಪ್ರತಿಭೆಯಿಂದ ಯಕ್ಷಗಾನ ರಂಗಸ್ಥಳದ ರಾಜ ಅಂತ ಕರೆಸಿಕೊಂಡು ಅರಳಿದ ಅದ್ವಿತೀಯ ಕಲಾವಿದ ಶ್ರೀ ಅರುವ ಕೊರಗಪ್ಪ ಶೆಟ್ಟಿ, ಕರಾವಳಿಯ ಕಲೆ ಯಕ್ಷಗಾನವು ಇಂದು ಸಾಗರದಾಚೆಗೂ ವಿಸ್ತರಿಸಿರುವಂತೆ ಆ ಕಲೆಯಲ್ಲಿ ದೇಶದ ಉದ್ದಗಲಕ್ಕೂ ಹೆಸರು ಮಾಡಿದ ಅಪೂರ್ವ ವ್ಯಕ್ತಿಗಳಲ್ಲಿ ಕೊರಗಪ್ಪ ಶೆಟ್ಟಿ ಒಬ್ಬರು.

ಅಳದಂಗಡಿಯ ಸುಬ್ಬಯ್ಯ ಶೆಟ್ಟಿ ಕಾಂತಕ್ಕ ದಂಪತಿಗಳ ಹಿರಿಯ ಮಗನಾಗಿ ೧೯೪೦ರಲ್ಲಿ ಜನಿಸಿದ ಇವರು ಚಿಕ್ಕಂದಿನಿಂದಲೇ ನಾಟಕ ಮತ್ತು ಯಕ್ಷಗಾನದಲ್ಲಿ ಪಳಗಿದವರು. ಪ್ರೌಢಶಾಲಾ ಹಂತಕ್ಕೆ ವಿದ್ಯಾಭ್ಯಾಸವೂ ನಿಂತು ಜೀವನೋಪಾಯದ ಪ್ರಶ್ನೆ ಎದುರಾದಾಗ ತಮ್ಮ ಆಸಕ್ತಿಯ ಕ್ಷೇತ್ರ ಯಕ್ಷಗಾನದಲ್ಲಿ ತೊಡಗಿಕೊಂಡವರು.

ತಮ್ಮ ಹದಿನೈದನೆಯ ವಯಸ್ಸಿನಲ್ಲಿ ಕಟೀಲು ಯಕ್ಷಗಾನ ಮೇಳದ ಮೂಲಕ ಈ ಕ್ಷೇತ್ರಕ್ಕೆ ಅಧಿಕೃತವಾಗಿ ಕಾಲಿಟ್ಟ ಶ್ರೀಯುತರು ಮುಂದೆ ಕರ್ನಾಟಕ ಮೇಳದಲ್ಲಿ ಮುಖ್ಯ ವೇಷಧಾರಿಯಾಗಿ ಪ್ರಖ್ಯಾತ ಕಲಾವಿದರಾದ ಬೋಳಾರ ನಾರಾಯಣ ಶೆಟ್ಟಿ, ಅಳಿಕೆ ರಾಮಯ್ಯ ರೈ, ಕೊಟ್ಟೂರು ರಾಮಚಂದ್ರರಾವ್, ರಾಮದಾಸ್ ಸಾಮಗ, ಮಿಜಾರು ಅಣ್ಣಪ್ಪ ಮುಂತಾದವರ ಒಡನಾಟದಲ್ಲಿ ತಮ್ಮ ಪ್ರತಿಭೆಯನ್ನು ನಿಕಷಕ್ಕೊಡ್ಡಿಕೊಂಡವರು

ಇವರ ಕಲಾನೈಪುಣ್ಯವನ್ನು ಮೆಚ್ಚಿ ಅಖಿಲಭಾರತ ತುಳು ಒಕ್ಕೂಟ ಮುಂಬೈ ಕರ್ನಾಟಕ ಸಂಘ, ಯು ಎ ಇ ತುಳುಕೂಟ ಮುಂತಾದ ಸಂಘಸಂಸ್ಥೆಗಳು ಸನ್ಮಾನಿಸಿವೆ.

ಅರವತ್ತರ ಇಳಿವಯಸ್ಸಿನಲ್ಲೂ ಗೆಜ್ಜೆ ಕಟ್ಟಿದರೆ ಸಾಕು ಆಲಿಸುವ ಮನಸ್ಸುಗಳಿಗೆ ಆನಂದವುಂಟುಮಾಡಿ ಕಲಾಲೋಕಕ್ಕೆ ಕರೆದೊಯ್ಯುವ ಅಪೂರ್ವ ಸಾಧಕರು ಅರುವ ಕೊರಗಪ್ಪ ಶೆಟ್ಟರು.