Categories
ಯಕ್ಷಗಾನ ರಾಜ್ಯೋತ್ಸವ 2001 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಭಾಗವತ ನೀಲಾವರ ಲಕ್ಷ್ಮೀನಾರಾಯಣರಾವ್

ಯಕ್ಷಗಾನ ಕಲೆಯ ಸಿರಿ ನೆಲದಲ್ಲಿ ಅರಳಿ ಬಂದ ಹಿರಿಯ ಚೇತನ ಶ್ರೀ ಭಾಗವತ ನೀಲಾವರ ಲಕ್ಷ್ಮೀನಾರಾಯಣರಾವ್

ಅವರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹುಟ್ಟಿ ಏಳು ದಶಕಗಳಿಗೂ ಹೆಚ್ಚು ಹಾದು ಬಂದ ದೀರ್ಘ ಬಾಳಪಯಣದಲ್ಲಿ ಯಕ್ಷಗಾನ ಕಲೆಯ ಜೊತೆಗೆ ಹಚ್ಚಿಕೊಂಡ ಗಮಕ, ಕರ್ನಾಟಕ ಸಂಗೀತ, ದಾಸರಪದಗಳ ಗಾಯನ ಶ್ರೀಯುತರಿಗೆ ಅಪಾರ ಯಶಸ್ಸು ತಂದು ಕೊಟ್ಟವು. ವೃತ್ತಿಯಲ್ಲಿ ಶಿಕ್ಷಕರಾದರೂ ಪ್ರವೃತ್ತಿಯಲ್ಲಿ ಒಬ್ಬ ಪರಿಶುದ್ಧ ಕಲಾವಿದ.

ಚಿಕ್ಕಂದಿನಿಂದಲೆ ಗಮಕ, ಸಂಗೀತ, ಭಜನೆ ಹಾಗೂ ಯಕ್ಷಗಾನಗಳಲ್ಲಿ ಅಭಿರುಚಿ ಬೆಳೆಸಿಕೊಂಡ ಇವರು ಆ ದಿಕ್ಕಿನಲ್ಲಿ ಅವಿರತ ಅಧ್ಯಯನ ನಡೆಸಿದರು. ಹೆಸರಾಂತ ಗಮಕಿ ಬಚಂದ್ರಯ್ಯನವರ ಮಾರ್ಗದರ್ಶನದಲ್ಲಿ ಗಮಕ ಪ್ರವೇಶ. ಪ್ರೌಢ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿ ಗಮಕ ತರಬೇತಿ ಶಿಕ್ಷಣ ನೀಡಿದರು. ಕಳೆದ ಮೂರು ವರ್ಷಗಳಿಂದ ಯಕ್ಷಗಾನ ಕೇಂದ್ರದಲ್ಲಿ ತರಬೇತಿ ದೀಕ್ಷೆ ತೊಟ್ಟಿದ್ದಾರೆ. ಅವುಗಳಲ್ಲದೆ ಕರ್ನಾಟಕ ಸಂಗೀತದ ಜೂನಿಯರ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ, ಕೊಕ್ಕರ್ಣಿ ಶಿಕ್ಷಕ ತರಬೇತಿ ಸಂಸ್ಥೆಯಲ್ಲಿ ಸಂಗೀತ ಅಧ್ಯಾಪಕರಾಗಿ ದುಡಿದ ಅನುಭವ ಇವರದು. ಮಂಗಳೂರು ಆಕಾಶವಾಣಿ ಹವ್ಯಾಸಿ ಕಲಾವಿದರಾಗಿ, ದೂರದರ್ಶನ ಕೇಂದ್ರದಲ್ಲಿ ಯಕ್ಷಗಾನ ಕಲಾವಿದರಾಗಿ, ಸೇವೆ ಸಲ್ಲಿಸಿದ್ದಾರೆ.

೧೯೯೭ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಕಾಸರಗೋಡು ಗಮಕ ಸಮ್ಮೇಳನದಲ್ಲಿ ೧೯೯೯ರಲ್ಲಿ ಧಾರವಾಡದಲ್ಲಿ ನಡೆದ ಅಖಿಲ ಕರ್ನಾಟಕ ಗಮಕ ಸಮ್ಮೇಳನದಲ್ಲಿ – ಹಾಗೂ ಸುರತ್ಕಲ್‌ನಲ್ಲಿ ನಡೆದ ಗಮಕ ಸಮ್ಮೇಳನದಲ್ಲಿ – ಸನ್ಮಾನಗಳು ಶ್ರೀಯುತರ ಕಲಾಸೇವೆಯನ್ನು ಅರಸಿ ಬಂದ ಪುರಸ್ಕಾರಗಳು.