Categories
ಜಾನಪದ ರಾಜ್ಯೋತ್ಸವ 2001 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಎಂ ಆರ್ ಬಸಪ್ಪ

ಎಳೆವಯಸ್ಸಿನಲ್ಲಿಯೇ ಕಲಾಸೇವೆಗೆ ತೊಡಗಿ ೫೦ ವರ್ಷಗಳ ಕಾಲ ನಿರಂತರವಾಗಿ ಸಾಧನೆ ಮಾಡಿ ಮುಂದಿನ ಪೀಳಿಗೆಗೂ ಕಲೆಯನ್ನು ಧಾರೆ ಎರೆಯುತ್ತಿರುವ ವೀರಗಾಸೆ ಕಲಾವಿದರು ಶ್ರೀ ಎಂ ಆರ್ ಬಸಪ್ಪ ಅವರು.

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕು ಮಾಳೇನಹಳ್ಳಿ ಗ್ರಾಮದ ನಿವಾಸಿ ಶ್ರೀ ಎಂ ಆರ್ ಬಸಪ್ಪ ಸುಪ್ರಸಿದ್ಧ ವೀರಗಾಸೆ

ಕಲಾವಿದರು.

ಬಡತನದ ಬೇಗೆಯಲ್ಲಿ ಬೆಂದ ಶ್ರೀ ಬಸಪ್ಪ ಅವರನ್ನು ೧೫ನೆಯ ವಯಸ್ಸಿನಲ್ಲೇ ವೀರಗಾಸೆ ಕಲೆ ಕೈಬೀಸಿ ಕರೆಯಿತು. ಯಾವ ತರಬೇತಿಯೂ ಇಲ್ಲದೆ ಸ್ವಂತ ಆಸಕ್ತಿಯಿಂದ ವೀರಗಾಸೆಯನ್ನು ಕಲಿತು ೪೦ ಕಲಾ ತಂಡಗಳನ್ನು ತಯಾರು ಮಾಡಿರುವ ಹಿರಿಮೆ ಇವರದು. ಆಡು ಮುಟ್ಟದ ಸೊಪ್ಪಿಲ್ಲ’ ಎಂಬಂತೆ ಶ್ರೀ ಬಸಪ್ಪನವರು ಕಾರ್ಯಕ್ರಮ ನೀಡದ ಸ್ಥಳಗಳಿಲ್ಲ. ಉತ್ತರದ ಕಾಶಿಯಿಂದ ದಕ್ಷಿಣದ ಕನ್ಯಾಕುಮಾರಿಯವರೆಗೆ, ಆಕಾಶವಾಣಿ ಹಾಗೂ ದೂರದರ್ಶನಗಳಲ್ಲಿ ಅಸಂಖ್ಯಾತ ಪ್ರದರ್ಶನಗಳನ್ನು ನೀಡಿದ್ದಾರೆ. ಕನ್ನಡ ರಾಜ್ಯೋತ್ಸವ, ಸ್ವಾತಂತ್ರ್ಯ ದಿನಾಚರಣೆ, ೪ನೆಯ ರಾಷ್ಟ್ರೀಯ ಕ್ರೀಡಾ ಮೇಳ, ಕನ್ನಡ ಸಾಹಿತ್ಯ ಸಮ್ಮೇಳನ, ಸಾರ್ಕ್ ಸಮ್ಮೇಳನ, ರಾಜ್ಯ ಮಟ್ಟದ ಹಾಗೂ ಅಖಿಲಭಾರತ ಮಟ್ಟದ ಜಾನಪದ ಮೇಳ ಹೀಗೆ ಪ್ರಮುಖ ಸಮಾರಂಭಗಳಲ್ಲಿ ಭಾಗವಹಿಸಿ, ವೀರಗಾಸೆ ಪ್ರದರ್ಶನ ನೀಡಿ ಜನರ ಮೆಚ್ಚುಗೆ ಪಡೆದಿದ್ದಾರೆ. ವಿಶೇಷವಾಗಿ ಹಿಂದುಳಿದ ಜನಾಂಗದ ಹಾಗೂ ಗ್ರಾಮಾಂತರ ಪ್ರದೇಶದ ಕಲಾವಿದರನ್ನು ಗುರುತಿಸಿ, ತಂಡ ಕಟ್ಟಿ ತರಬೇತಿ ನೀಡಿ, ವೀರಗಾಸೆ ಕಲೆಯ ವ್ಯಾಪ್ತಿಯನ್ನು ವಿಸ್ತರಿಸುತ್ತಿರುವ ಪರಿಪೂರ್ಣರಾದ ಈ ಕಲಾವಿದರಿಗೆ ೧೯೯೬ರಲ್ಲಿ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿ ನೀಡಿ ಗೌರವಿಸಿದೆ.

 

ತಮ್ಮ ೬೫ನೆಯ ವಯಸ್ಸಿನಲ್ಲೂ ಯುವಕರನ್ನೂ ನಾಚಿಸುವಂಥ ಕಲಾಸಕ್ತಿಯಿಂದ ವೀರಗಾಸೆ ಕಲೆಯನ್ನು ಉಳಿಸಿ ಬೆಳೆಸುತ್ತಿರುವ ಹಿರಿಯ ಕಲಾವಿದ ಶ್ರೀ ಎಂ ಆರ್ ಬಸಪ್ಪ ಅವರು.