Categories
ರಾಜ್ಯೋತ್ಸವ 2022 ರಾಜ್ಯೋತ್ಸವ ಪ್ರಶಸ್ತಿ ಸಮಾಜಸೇವೆ

ಶ್ರೀ ಎಂ.ಎಸ್. ಕೋರಿಶೆಟ್ಟರ್

ಜನಪರ ಹೋರಾಟಗಳ ಮೂಲಕ ಸಮುದಾಯದ ಸೇವೆಗೈದ ಸಮಾಜಸೇವಕರು ಎಂ.ಎಸ್.ಕೋರಿಶೆಟ್ಟರ್, ಕನ್ನಡಪರ ಹೋರಾಟಗಾರ, ಸಮಾಜದ ಹಿತಕಾಯಲು ಜೈಲು ವಾಸ ಅನುಭವಿಸಿದ ಸಮಾಜಮುಖಿ, ಮಹಂತೇಶ ಶಿವರುದ್ರಪ್ಪ ಕೋರಿ ಶೆಟ್ಟ‌ರ್ ಹಾವೇರಿ ಜಿಲ್ಲೆಯವರು. ಶಿಗ್ಗಾಂವ್ ತಾಲ್ಲೂಕಿನ ಬಂಕಾಪುರದಲ್ಲಿ ೧೯೫೪ರಲ್ಲಿ ಜನನ. ಬಿಜಾಪುರ, ಧಾರವಾಡ ಮತ್ತು ಹಾವೇರಿಯಲ್ಲಿ ಶಿಕ್ಷಣ, ಬಿ.ಎ.ಪದವೀಧರರು. ಕೃಷಿಕರು, ವ್ಯಾಪಾರಸ್ಥರು. ಬಾಲ್ಯದಿಂದಲೂ ಸಮಾಜಪ್ರೇಮಿ, ಅನ್ಯಾಯದ ವಿರುದ್ಧ ಹೋರಾಡುವ ಛಾತಿ, ಜನಸಂಕಟವನ್ನು ಅನುಭಾವಿಸುವ ಅಂತಃಕರಣಿ. ಹರೆಯದಲ್ಲೇ ಸಾಮಾಜಿಕ ಹೋರಾಟಕ್ಕೆ ಪ್ರವೇಶ, ಜೆ.ಪಿ.ಚಳವಳಿ, ತುಂಗಾ ನೀರಾವರಿ ಹೋರಾಟ, ರೈತಪರ ಹೋರಾಟ, ಹಾವೇರಿ ಜಿಲ್ಲಾ ರಚನೆಗಾಗಿ ನಡೆದ ಚಳವಳಿ, ಗೋಕಾಕ್ ಚಳವಳಿಗಳಲ್ಲಿ ಹೋರಾಡಿದ ದಿಟ್ಟತೆ, ಎರಡು ಬಾಲ ಕಾರಾಗೃಹವಾಸಿಯಾದರೂ ಅಂಜದ ಗಂಡೆದೆ. ನಾಲ್ಕು ಮುಕ್ಕಾಲು ದಶಕಗಳಿಂದಲೂ ಸಮಾಜಸೇವೆಯಲ್ಲಿ ಅನವರತ ನಿರತರು, ನೆಲ, ಜಲ, ಬಡವರ ಪರವಾಗಿ ಸಮರ್ಥವಾಗಿ ದನಿ ಎತ್ತಿದ ಹೆಗ್ಗಳಿಕೆ, ಶಿಗ್ಗಾಂವಿಯಲ್ಲಿ ನಡೆದ ೯ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಮತ್ತು ಮೈಸೂರಿನಲ್ಲಿ ನಡೆದ ೮ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ‘ಸಮಾಜಸೇವಕ’ ಪ್ರಶಸ್ತಿ ಪುರಸ್ಕೃತರು. ಬದುಕನ್ನೇ ಸಮಾಜಸೇವೆಗೆ ಮುಡಿಪಿಟ್ಟಿರುವ ವಿರಳ ಜೀವಿ.