Categories
ರಾಜ್ಯೋತ್ಸವ 2001 ರಾಜ್ಯೋತ್ಸವ ಪ್ರಶಸ್ತಿ ಸಮಾಜಸೇವೆ

ಶ್ರೀ ಎನ್ ಟಿ ಜಿತೂರಿ

೧೯೦೯ರಲ್ಲಿ ಹುಬ್ಬಳ್ಳಿಯಲ್ಲಿ ಬಡ ನೇಕಾರರ ಮನೆತನದಲ್ಲಿ ಜನನ. ಶ್ರೀಯುತರದು ಸಾತ್ವಿಕ ವ್ಯಕ್ತಿತ್ವದ ಶಿಸ್ತಿನ ಸಿಪಾಯಿಯ

ಬದುಕು.

ವಿಭಿನ್ನ ಹಾಗೂ ಶಿಸ್ತಿನ ವ್ಯಕ್ತಿತ್ವದ ಶ್ರೀ ನಾಗೋಸಾ ತುಳಜಾಸಾ ಜಿತೂರಿ ಸಾರ್ವಜನಿಕ ಹಿತಾಸಕ್ತಿ, ಧಾರ್ಮಿಕ ಚಟುವಟಿಕೆ, ಯುವಶಕ್ತಿ ಸಂಘಟನೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ತಮ್ಮ ವಯೋಮಾನ ಸಹಜವಾದ ಆಯಾಸವನ್ನು ಲೆಕ್ಕಿಸದೆ ಮುಕ್ತ ಮನಸ್ಸಿನಿಂದ, ಹುಮ್ಮಸ್ಸಿನಿಂದ ದುಡಿಯುವ ತರುಣ. ಇಂಟರ್‌ಮೀಡಿಯಟ್ ಓದುತ್ತಿದ್ದಾಗಲೇ ಶಿಕ್ಷಣಕ್ಕೆ ಶರಣು ಹೊಡೆದು ೧೯೩೧ರಲ್ಲಿ ಪೊಲೀಸ್‌ ಇಲಾಖೆಗೆ ಸೇರಿ ಬೆಳಗಾವಿ ಜಿಲ್ಲೆಯ ಸಬ್‌ ಇನ್ಸ್‌ಪೆಕ್ಟರ್ ಸೇವೆ. ನಂತರ ೧೯೩೮ರಲ್ಲಿ ವಿಜಾಪುರದಲ್ಲಿ ಹೋಂ ಇನ್ಸ್‌ಪೆಕ್ಟರ್ ಆಗಿ ಹಾಗೂ ಅಸಹಕಾರ ಚಳವಳಿ ಕಾಲದಲ್ಲಿ ಸಿಐಡಿ ವಿಭಾಗದಲ್ಲಿ ಸೇವೆ. ಸಾಂಗ್ಲಿ ಮತ್ತು ಪುಣೆಯ ಸೆಂಟ್ರಲ್ ಬ್ಯೂರೊ, ಗದಗ, ಹೈದ್ರಾಬಾದ್, ಬೀದರ್‌ಗಳಲ್ಲಿಯೂ ಡಿವೈಎಸ್‌ಪಿಯಾಗಿ ಸಲ್ಲಿಸಿರುವ ಸೇವೆ ಅಪಾರ.

ದಕ್ಷತೆಗೆ, ಪ್ರಾಮಾಣಿಕತೆಗೆ, ಕೋಮು ಸೌಹಾರ್ದತೆಗೆ, ದೇಶಭಕ್ತಿಗೆ ಹಾಗೂ ಮಾನವತಾ ಪ್ರೀತಿಗೆ ಮತ್ತೊಂದು ಹೆಸರಾಗಿರುವ ಶ್ರೀ ಜಿತೂರಿಯವರು ೧೯೬೮ರಲ್ಲಿ ಎಸ್‌.ಪಿ. ಆಗಿ ಸೇವೆ ಸಲ್ಲಿಸಿ ನಿವೃತ್ತರಾಗುವ ಮೊದಲು ಪೊಲೀಸ್ ಮೆಡಲ್ ಪಡೆದದ್ದೂ ಗಮನಾರ್ಹ. ಸೇವೆಯಿಂದ ನಿವೃತ್ತರಾದರೂ ಸದಾ ಕ್ರಿಯಾಶೀಲ ಸ್ವಭಾವದ ಶ್ರೀಯುತರು ಧಾರವಾಡ ಜಿಲ್ಲಾ ನಿವೃತ್ತ ಗೆಜೆಟೆಡ್ ನೌಕರರ ಸಂಸ್ಥಾಪಕ ಅಧ್ಯಕ್ಷರಾಗಿ, ಚಿನ್ಮಯ ಮಿಷನ್‌ನ ಸಂಸ್ಥಾಪಕ ಅಧ್ಯಕ್ಷರಾಗಿ, ಹುಬ್ಬಳ್ಳಿಯ ಕ್ಷತ್ರಿಯ ಸಮಾಜದ ಅಧ್ಯಕ್ಷರಾಗಿ, ಹುಬ್ಬಳ್ಳಿಯ ಲಕ್ಷ್ಮಣಸಾ ಖೋಡೆ ಹಾಸ್ಟೆಲ್‌ನ ಅಧ್ಯಕ್ಷರಾಗಿ ನವದೆಹಲಿಯ ಸರ್ವೆಂಟ್ಸ್ ಆಫ್ ಗಾಡ್ ಸಂಸ್ಥೆಯ ಸಹಸದಸ್ಯರಾಗಿ ಹೀಗೆ ಇನ್ನೂ ಹಲವಾರು ಸಂಘ-ಸಂಸ್ಥೆಗಳಲ್ಲಿ ಪದಾಧಿಕಾರಿಗಳಾಗಿ ದಕ್ಷ, ಪ್ರಾಮಾಣಿಕ ಸೇವೆ ಸಲ್ಲಿಸುತ್ತಿದ್ದಾರೆ. ಸಾರ್ವಕಾಲಿಕ ಮೌಲ್ಯಾಧಾರಿತ ಜೀವನಶ್ರದ್ಧೆಯ ಪ್ರತೀಕವಾಗಿರುವ ಸಮಾಜ ಸೇವಾ ನಿರತರು ಶ್ರೀ ನಾಗೋಸಾ ತುಳಜಾಸಾ ಜಿತೂರಿ ಅವರು.