Categories
ರಾಜ್ಯೋತ್ಸವ 2006 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಶ್ರೀ ಏರ್ಯ ಲಕ್ಷ್ಮೀನಾರಾಯಣ ಆಳ್ವ

ಕೃಷಿಕರಾಗಿದ್ದು ಸಹಕಾರ, ಶೈಕ್ಷಣಿಕ, ಧಾರ್ಮಿಕ, ಸಾಹಿತ್ಯ ಹಾಗೂ ಸಾಂಸ್ಕೃತಿಕ ರಂಗಗಳಲ್ಲಿ ಸಕ್ರಿಯರಾಗಿ ಪಾಲ್ಗೊಂಡವರು ಶ್ರೀ ಏರ್ಯ ಲಕ್ಷ್ಮೀನಾರಾಯಣ ಆಳ್ವ ಅವರು.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಸಾಕೇತದವರಾದ ಶ್ರೀ ಏರ್ಯ ಲಕ್ಷ್ಮೀನಾರಾಯಣ ಆಳ್ವ ಅವರಿಗೆ ಚಿಕ್ಕಂದಿನಿಂದಲೂ ಸಹಕಾರಿ ಚಳವಳಿಯಲ್ಲಿ ಅತ್ಯಂತ ಆಸಕ್ತಿ. ದಕ್ಷಿಣ ಕನ್ನಡ ಜಿಲ್ಲೆಯ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾಗಿ ದಕ್ಷತೆಯಿಂದ ಕಾರ್ಯ ನಿರ್ವಹಿಸಿದ ಶ್ರೀ ಆಳ್ವ ಅವರು ಗ್ರಾಮೀಣ ಭಾಗಗಳಲ್ಲಿ ಶೈಕ್ಷಣಿಕ ಸಂಸ್ಥೆಗಳನ್ನು ಆರಂಭಿಸಲು ಕಾರಣರಾದವರು.
ದೇಶ ವಿದೇಶಗಳಲ್ಲಿ ವ್ಯಾಪಕ ಪ್ರವಾಸ ಮಾಡಿರುವ ಶ್ರೀ ಏರ್ಯ ಲಕ್ಷ್ಮೀನಾರಾಯಣ ಆಳ್ವ ಅವರು ಬರೆದ ಕೃತಿಗಳು ಹತ್ತಕ್ಕೂ ಹೆಚ್ಚು. ಇವರು ರಚಿಸಿದ ‘ರಾಮಾಶ್ವಮೇಧದ ರಸ ತರಂಗಗಳು’ ಕೃತಿ ಮೈಸೂರು ಹಾಗೂ ಮದ್ರಾಸು ವಿಶ್ವವಿದ್ಯಾನಿಲಯ ಕಾಲೇಜುಗಳಿಗೆ ಪಠ್ಯಪುಸ್ತಕವಾಗಿತ್ತು.
ಯಕ್ಷಗಾನ, ಜಾನಪದ ಕಲೆಗಳಿಗೆ ಪ್ರೋತ್ಸಾಹಕರಾಗಿ ಕೆಲಸ ಮಾಡಿರುವ ಶ್ರೀ ಆಳ್ವ ಅವರು ಸದಭಿರುಚಿ ಚಲನಚಿತ್ರಗಳ ಪ್ರದರ್ಶನಕ್ಕಾಗಿ ಆರಂಭಿಸಲಾದ ಮಂಗಳ ಫಿಲ್ಡ್ ಸೊಸೈಟಿಯ ಸ್ಥಾಪಕ ಅಧ್ಯಕ್ಷರು. ನಮ್ಮ ಬಂಟ್ವಾಳ, ಸಾಮಾಜಿಕ, ಸಾಂಸ್ಕೃತಿಕ ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾದ ಶ್ರೀ ಏರ್ಯ ಲಕ್ಷ್ಮೀ ನಾರಾಯಣ ಆಳ್ವ ಅವರಿಗೆ ಸಂದಿರುವ ಗೌರವ ಸನ್ಮಾನಗಳು ಹಲವಾರು.