Categories
ರಾಜ್ಯೋತ್ಸವ 2022 ರಾಜ್ಯೋತ್ಸವ ಪ್ರಶಸ್ತಿ ಹೊರನಾಡು

ಶ್ರೀ ಕೃಷ್ಣಮೂರ್ತಿ ಮಂಜ

ಹೋಟೆಲ್ ಉದ್ಯಮದಲ್ಲಿ ಯಶಸ್ಸಿನ ಹೊಸ ಅಧ್ಯಾಯವನ್ನೇ ಬರೆದ ಯಶಸ್ವಿ ಉದ್ಯಮಿ ಕೃಷ್ಣಮೂರ್ತಿ ಮಂಜ. ಹಲವು ಬಗೆಯ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿರುವ ಸಮಾಜಸೇವಕರು, ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಮಾರಣಕಟ್ಟೆಯಲ್ಲಿ ಜನಿಸಿದ ಕೃಷ್ಣಮೂರ್ತಿ ಅವರದ್ದು ಅಪ್ಪಟ ಅರ್ಚಕ ಕುಟುಂಬ. ತಂದೆ ಸುಬ್ರಹ್ಮಣ್ಯ ಮಾರಣಕಟ್ಟೆ ದೇವಾಲಯದ ಪ್ರಮುಖ ಅರ್ಚಕರು. ಎಸ್.ಎಸ್.ಎಲ್.ಸಿವರೆಗೂ ವಿದ್ಯಾಭ್ಯಾಸ ಮಾಡಿದ ಕೃಷ್ಣಮೂರ್ತಿ ಮಂಜ ಅವರು ಬದುಕು ಅರಸಿ ಹೈದರಾಬಾದ್‌ಗೆ ಗುಳೆ ಹೋದವರು. ಕಡುಕಷ್ಟದ ದಿನಗಳನ್ನು ಕಳೆದ ಮೇಲೆ ಸಣ್ಣದಾಗಿ ಹೈದರಾಬಾದ್‌ನಲ್ಲಿ ಹೋಟೆಲ್ ಅನ್ನು ಸ್ಥಾಪಿಸಿದರು. ಸತತ ಪರಿಶ್ರಮದಿಂದಾಗಿ ಹಂತಹಂತವಾಗಿ ಯಶಸ್ಸು ಕಂಡವರು. ಮೂವತ್ತಾರು ವರ್ಷಗಳ ಸುದೀರ್ಘ ಪಯಣದಲ್ಲಿ ಸುಪ್ರಭಾತ ಹೋಟೆಲ್ ಅನ್ನು ಜನಪ್ರಿಯ ಹೋಟೆಲ್ ಆಗಿ ರೂಪಿಸಿದ ಕೀರ್ತಿ ಅವರದ್ದು. ಅಪ್ಪಟ ಸಸ್ಯಹಾರಿ ತಿನಿಸುಗಳು, ಸ್ವಚ್ಛತೆ ಮತ್ತು ಶುದ್ಧ ಪರಿಸರದಿಂದ ಗ್ರಾಹಕರ ಪಾಲಿಗೆ ಸುಪ್ರಭಾತ ನೆಚ್ಚಿನ ಹೋಟೆಲ್ ಆಗಿರುವುದು ವಿಶೇಷ, ಹೈದರಾಬಾದ್‌ನ ಕರಾವಳಿ ಮೈತ್ರಿ ಸಂಘ, ಭಾಗ್ಯನಗರ ಕನ್ನಡಿಗರ ಒಕ್ಕೂಟದ ಅಧ್ಯಕ್ಷರಾಗಿ, ಕನ್ನಡ ನಾಟ್ಯಸಂಘ, ತೆಲಂಗಾಣ ಹೋಟೆಲ್ ಅಸೋಸಿಯೇಶನ್‌ ಉಪಾಧ್ಯಕ್ಷರಾಗಿ ದಕ್ಷತೆಯಿಂದ ಕಾರ್ಯನಿರ್ವಹಿಸಿದವರು. ತಂದೆ ಸುಬ್ರಹ್ಮಣ್ಯ ಮಂಜ ಅವರ ಹೆಸರಿನಲ್ಲಿ ಸಾಮಾಜಿಕ ಸೇವಾ ಕಾರ್ಯಗಳನ್ನು ಕೈಗೊಂಡಿರುವ, ಅನೇಕ ಪ್ರಶಸ್ತಿ-ಗೌರವಗಳಿಂದ ಭೂಷಿತರಾಗಿರುವ ಸೇವಾಬಂಧು.