Categories
ರಾಜ್ಯೋತ್ಸವ 2001 ರಾಜ್ಯೋತ್ಸವ ಪ್ರಶಸ್ತಿ ಸ್ವಾತಂತ್ರ‍್ಯ ಹೋರಾಟಗಾರರು

ಶ್ರೀ ಕೆ ಎಂ ರುದ್ರಪ್ಪ

ಮಹಾತ್ಮಾ ಗಾಂಧಿಯವರ ತತ್ವಾನುಯಾಯಿ, ಭಾರತ ಸ್ವಾತಂತ್ರ್ಯ ಹೋರಾಟಕ್ಕೆ ಜೀವ ಮುಡುಪಾಗಿಟ್ಟ ಹಿರಿಯ ಚೇತನ ಶ್ರೀ ಕೆ ಎಂ ರುದ್ರಪ್ಪ ಅವರು.

ಕಾಲೇಜು ವಿದ್ಯಾರ್ಥಿ ದೆಸೆಯಿಂದಲೇ ವಿದ್ಯಾಗುರು ಕುವೆಂಪು ಅವರ ಪ್ರಭಾವಕ್ಕೆ ಒಳಗಾಗಿ ಕನ್ನಡ ನಾಡು-ನುಡಿ, ಕನ್ನಡಭಾಷೆಯ ಅಭಿವೃದ್ಧಿಯ ಬಗ್ಗೆ ಸತತ ಚಿಂತನೆ ನಡೆಸಿದರು. ಕಾಲೇಜಿನ ವ್ಯಾಸಂಗದಲ್ಲಿರುವಾಗಲೇ ಮದ್ದೂರು ಬಳಿಯ ಶಿವಪುರದಲ್ಲಿ ನಡೆದ ಕಾಂಗ್ರೆಸ್ ಧ್ವಜ ಸತ್ಯಾಗ್ರಹದಲ್ಲಿ ವಿದ್ಯಾರ್ಥಿ ಮುಖಂಡನಾಗಿ ಪಾಲ್ಗೊಂಡು ಸ್ವಾತಂತ್ರ್ಯ ಸಂಗ್ರಾಮಕ್ಕೆ ಧುಮುಕಿದರು. ೧೯೪೨ರ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಿ, ದಸ್ತಗಿರಿಯಾಗಿ ಹಿಂಡಲಗ ಜೈಲು ಸೇರಿದರು. ೧೯೪೭ರ ಮೈಸೂರು ಚಲೋ ಚಳುವಳಿಯಲ್ಲಿ ಪಾಲ್ಗೊಂಡು ಮತ್ತೆ ಬಂಧಿತರಾದರು.

ಭಾರತಕ್ಕೆ ಸ್ವಾತಂತ್ರ ಬಂದ ನಂತರ ತಮ್ಮ ವಕೀಲಿ ವೃತ್ತಿಯನ್ನು ಹಾಸನದಲ್ಲಿ ಆರಂಭಿಸಿದರು.

ಮುದವೀಡು ಕೃಷ್ಣರಾವ್, ಕುವೆಂಪು, ಎಸ್. ನಿಜಲಿಂಗಪ್ಪ ಮೊದಲಾದವರ ಪ್ರಭಾವದಿಂದ ಕರ್ನಾಟಕ ಏಕೀಕರಣದ ಚಳುವಳಿಯಲ್ಲಿ ಗಮನೀಯ ಪಾತ್ರ ನಿರ್ವಹಿಸಿದರು. ೧೯೪೯ರಲ್ಲಿ ಕರ್ನಾಟಕ ಏಕೀಕರಣದ ಒತ್ತಾಯಕ್ಕಾಗಿ ದೆಹಲಿಗೆ ಹೋಗಿದ್ದ ನಿಯೋಗದಲ್ಲಿ ಶ್ರೀ ಕೆ.ಎಂ. ರುದ್ರಪ್ಪ ಅವರು ಪ್ರಮುಖರಾಗಿದ್ದರು. ರಾಜ್ಯ ಪುನರ್‌ ವಿಂಗಡಣಾ ಸಮಿತಿಯ ಆಯೋಗದ ಮುಂದೆ ಕರ್ನಾಟಕ ಏಕೀಕರಣ ಸಂಬಂಧ ಸಮರ್ಥವಾಗಿ ಪ್ರತಿಪಾದನೆ ಮಾಡಿ ಸೈ ಎನಿಸಿಕೊಂಡರು.

ವಿಧಾನಸಭಾ ಸದಸ್ಯರಾಗಿ ಅನೇಕ ವಿದ್ಯಾಸಂಸ್ಥೆಗಳ ಸಂಸ್ಥಾಪಕರಾಗಿ ಕರ್ನಾಟಕದ ಸಂಭಾವಿತ ರಾಜಕಾರಣಿಯಾಗಿ ಹೆಸರು ಮಾಡಿರುವ ೮೨ ವರ್ಷಗಳ ಹಿರಿಯ ಸ್ವಾತಂತ್ರ ಹೋರಾಟಗಾರರು ಶ್ರೀ ಕೆ ಎಂ ರುದ್ರಪ್ಪ