Categories
ಯಕ್ಷಗಾನ ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಕೆ. ಗೋವಿಂದ ಭಟ್

ಯಕ್ಷಗಾನದ ತಾಳಮದ್ದಲೆಯ ಶ್ರೇಷ್ಠ ಅರ್ಥಧಾರಿಯಾಗಿ ಕಥಕ್ಕಳಿ, ಹರಿಕಥಾ ಪ್ರಕಾರದಲ್ಲಿ ಪರಿಣತಿ ಪಡೆದಿರುವ ಕಲಾವಿದರು ಕೆ.ಗೋವಿಂದ ಭಟ್ಟ ಅವರು.
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಸಫಲಪುರ ಮನೆಯಲ್ಲಿ ೧೯೪೦ರಲ್ಲಿ ಜನನ, ಗೋವಿಂದ ಭಟ್ಟರಿಗೆ ಯಕ್ಷಗಾನ ಪ್ರಕಾರದ ಎಲ್ಲ ಮಟ್ಟುಗಳು ಕರಗತ.
ಕೇರಳದ ಶ್ರೀ ರಾಜನ್ ಅಯ್ಯರ್ ಅವರ ಬಳಿ ಕಥಕ್ಕಳಿ, ಶೇಣಿ ಗೋಪಾಲಕೃಷ್ಣ ಭಟ್ಟರಿಂದ ಹರಿಕಥೆ, ಮಲ್ಪೆ ರಾಮದಾಸ ಸಾಮಗ ಅವರಿಂದ ಯಕ್ಷಗಾನ ಅರ್ಥಗಾರಿಕೆಯ ಪಾಠ, ಸುಮಾರು ೫೮ ವರ್ಷಗಳಿಂದ ಧರ್ಮಸ್ಥಳ ಮೇಳ, ಮೂಲ್ಕಿ, ಕೂಡ್ಲು, ಸುರತ್ಕಲ್, ಇರಾ, ಮೊದಲಾದ ಕಡೆ ಯಕ್ಷಗಾನ ವೃತ್ತಿ ತಿರುಗಾಟದಲ್ಲಿ ಭಟ್ಟರ ಹೆಸರು ಚಿರಪರಿಚಿತ. ದುಬೈ, ಅಬುದಾಬಿ, ಬೆಹರೇನ್, ಇಂಗ್ಲೆಂಡ್, ಜಪಾನ್ ದೇಶಗಳಲ್ಲಿಯೂ ಶ್ರೀಯುತರಿಂದ ಯಕ್ಷಗಾನದ ಸಿರಿವಂತಿಕೆಯ ಯಶಸ್ವಿ ಪ್ರದರ್ಶನ.
ರಂಗದ ಮೇಲೆ ಅವರು ಅಭಿನಯಿಸಿರುವ ಯಕ್ಷ ವೇಷಧಾರಿ ಪಾತ್ರಗಳು ಅಸಂಖ್ಯ. ಅರ್ಧ ನಾರೀಶ್ವರ, ರಂಗಾ-ರಂಗ, ಅರ್ಜುನ, ದೇವೇಂದ್ರ, ಶತ್ರುಘ್ನ, ಅಂಬೆ, ಚಂದ್ರಮತಿ, ದಮಯಂತಿ, ಶೂರ್ಪನಖಿ, ಹಿಡಿಂಬೆ ಇವೆ ಮೊದಲಾದ ಪಾತ್ರಗಳು ಭಟ್ಟರ ಅಭಿನಯದ ಮೂಲಕ ರಂಗದ ಮೇಲೆ ಜೀವ ಪಡೆದಿವೆ.
ಆಕಾಶವಾಣಿ ಮತ್ತು ದೂರದರ್ಶನದ ‘ಎ’ ಗ್ರೇಡ್ ಕಲಾವಿದರಾಗಿ ಧರ್ಮಸ್ಥಳ ಯಕ್ಷಗಾನ ತರಬೇತಿ ಕೇಂದ್ರದ ಪ್ರಾಚಾರ್ಯರಾಗಿ ಅತ್ಯುತ್ತಮ ಹರಿದಾಸರಾಗಿ ಅವರು ಸಲ್ಲಿಸಿರುವ ಸೇವೆ ಅನುಪಮ.
ಮಣಿ ಮೇಖಲ, ರತ್ನ ಕಂಕಣ, ರಾಣಿ ಚಿತ್ರಾಂಗದಾ, ಕನಕರೇಖೆ, ಭಗವಾನ್ ಮಹಾವೀರ, ಸುರತ್ಕಲ್ ಕ್ಷೇತ್ರ ಮಹಾತ್ಮ ವೀರಘಟೋತ್ಕಜ, ರಾಜಶೇಖರ ವಿಳಾಸ ಇವರು ರಚಿಸಿರುವ ಯಕ್ಷಗಾನ ಪ್ರಸಂಗಗಳಲ್ಲಿ ಕೆಲವು.