Categories
ರಾಜ್ಯೋತ್ಸವ 2001 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ಶ್ರೀ ಕೆ ಮಂಜಪ್ಪ

೧೯೨೫ರಲ್ಲಿ ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಆಸ್ಥಾನ ವಿದ್ವಾಂಸರಾದ ಪಿಟೀಲು ರಾಮಯ್ಯನವರ ಮನೆತನದಲ್ಲಿ ಜನಿಸಿದ ಶ್ರೀ ಕೆ ಮಂಜಪ್ಪನವರಿಗೆ ಸಂಗೀತ ಕಲೆ ಕರತಲಾಮಲಕ.

ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ, ಮೂಡಲಾಟ, ನಾದಸ್ವರ, ಕೊಳಲು, ಹಾಕ್ಕೋನಿಯಂ, ಮುಖವೀಣೆ, ಕರ್ನಾಟಕ ಹಾಗೂ ಹಿಂದೂಸ್ತಾನಿ ಸಂಗೀತ ಜುಗಲ್‌ಬಂದಿ, ನಾಟಕ ನಿರ್ದೇಶನ, ಸಂಗೀತ ನಿರ್ದೇಶನ – ಹೀಗೆ ಹಲವಾರು ಕಲಾ ಪ್ರಕಾರಗಳಲ್ಲೂ ಪರಿಣತಿ ಹೊಂದಿರುವ ಅಪರೂಪದ ಕಲಾವಿದ ಶ್ರೀ ಮಂಜಪ್ಪ ಅವರು.

ಕರ್ನಾಟಕ ಸಂಗೀತವನ್ನು ವಿದ್ವಾನ್ ಧರ್ಮಪುರಿ ಕೆ ಲಕ್ಷ್ಮಣ್ ಮತ್ತು ವಿದ್ವಾನ್ ಮದ್ರಾಸ್ ಕೃಷ್ಣನ್ ಅವರಿಂದಲೂ, ಹಿಂದೂಸ್ತಾನಿ ಸಂಗೀತವನ್ನು ಪಂಡಿತ ರಟ್ಟೆಹಳ್ಳಿ ನಾರಾಯಣಪ್ಪ ಮತ್ತು ಪಂಡಿತ ಪಂಚಾಕ್ಷರ ಗವಾಯಿಗಳಿಂದ ಕಲಿತ ಶ್ರೀ ಮಂಜಪ್ಪನವರು ಕಲಾಸಾಧನೆಯನ್ನು ಸದ್ದಿಲ್ಲದೆ ಸಾಧಿಸಿದ್ದಾರೆ.

೧೯೪೮ರಲ್ಲಿ ಶಿವಮೊಗ್ಗ ಜಿಲ್ಲೆಯ ಗಾಮ ಗ್ರಾಮದಲ್ಲಿ ಶ್ರೀ ಮುರಳೀಧರ ಸಂಗೀತ ವಿದ್ಯಾಲಯ ಸ್ಥಾಪಿಸಿ, ಅನಂತರ ಅದರ ಶಾಖೆಗಳನ್ನು ಹಲವೆಡೆ ಎಸರಿಸಿ ಕಲಾಭಿಮಾನಿಗಳ ಮನೋಭಿಲಾಷೆಯನ್ನು ಪೂರೈಸಿದ್ದಾರೆ. ತಮ್ಮ ೭೬ನೆಯ ವಯಸ್ಸಿನಲ್ಲಿಯೂ ಸಂಗೀತ ಕಲೆಗಾಗಿ ಶ್ರಮಿಸುತ್ತಿರುವ ಕಲಾವಿದ ಶ್ರೀ ಮಂಜಪ್ಪ ಅವರು.

ಶ್ರೀಯುತರ ಸಂಗೀತ ಸಾಧನೆಗಾಗಿ ಅವರನ್ನು ಅರಸಿ ಪ್ರಶಸ್ತಿ ಸನ್ಮಾನಗಳು ಹಲವು ಹತ್ತು ಕಲಾಹಂಸ ಪ್ರಶಸ್ತಿ ಕಲಾಪೋಷಕ ಪ್ರಶಸ್ತಿ, ನಾದಗಾನ ಸುಧಾಕರ ಪ್ರಶಸ್ತಿ ಗಾಯಕ ಭೂಷಣ ಪ್ರಶಸ್ತಿ ಮುಂತಾದವು.

ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಕಲಾಶ್ರೀ ಗೌರವ ಪಡೆದ ಸಂಗೀತ ವಿದ್ವಾನ್ ಗಾಮದ ಕೆ ಮಂಜಪ್ಪನವರು ಎಲೆಮರೆಯ ಕಾಯಿಯಂತೆ ಕಲಾಸೇವೆ ಸಲ್ಲಿಸುತ್ತಿರುವ ಹಿರಿಯ ಕಲಾವಿದರು.