Categories
ರಾಜ್ಯೋತ್ಸವ 2022 ರಾಜ್ಯೋತ್ಸವ ಪ್ರಶಸ್ತಿ ಶಿಲ್ಪಕಲೆ

ಶ್ರೀ ಪರಶುರಾಮ್‌ ಪವಾರ್

ಪರಂಪರೆಯ ಪ್ರತೀಕವಾದ ರಥಗಳ ನಿರ್ಮಾಣದಲ್ಲಿ ಹೊಸ ಆಯಾಮ ಸೃಷ್ಟಿಸಿದ ವಿಶಿಷ್ಟ ರಥಶಿಲ್ಪಿ ಪರಶುರಾಮ್‌ ಪವಾರ್, ದೇಶದ ಮೊಟ್ಟಮೊದಲ ಕಬ್ಬಿಣದ ರಥ ನಿರ್ಮಾಣಕಾರ, ವಿಜಯಪುರ ಜಿಲ್ಲೆ ಮುದ್ದೇಬಿಹಾಳದಲ್ಲಿ ೧೯೬೧ರಲ್ಲಿ ಜನಿಸಿದ ಪರಶುರಾಮ್ ಪವಾ‌ರ್ ಅವರದ್ದು ಕಮ್ಮಾರಿಕೆ ಕುಟುಂಬ. ಕಿಟಕಿ, ಬಾಗಿಲುಗಳಿಗೆ ಸೀಮಿತವಾಗಿದ್ದ ಕುಲಕಸುಬು. ಪಿಯುಸಿವರೆಗೆ ಓದಿ ಬೆಳಗಾವಿಯ ಸಣ್ಣ ಕೈಗಾರಿಕೆಯ ವಿಸ್ತರಣಾ ಘಟಕದಲ್ಲಿ ತರಬೇತಿ ಪಡೆದ ಪರುಶರಾಮರ ಕಸುಬಿನ ದಿಕ್ಕು ಬದಲಿಸಿದವರು ಶಿಕ್ಷಕ ಮೋಕೇಶಿ. ಗುರುಗಳ ಸಲಹೆಯಂತೆ ಮೊದಲಬಾರಿಗೆ ಕಬ್ಬಿಣದ ರಥ ನಿರ್ಮಾಣಕ್ಕೆ ಮುಂದಡಿ. ಈ ವಿನೂತನ ಆವಿಷ್ಕಾರ ತಂದುಕೊಟ್ಟ ಯಶಸ್ಸು ಅಪಾರ. ದೇಶದಲ್ಲೇ ಏಕೈಕ ಕಬ್ಬಣದ ರಥಶಿಲ್ಪಿ ಎಂಬ ಹೆಗ್ಗಳಿಕೆ, ನರೇಂದ್ರ ಇಂಜಿನಿಯಲಿಂಗ್‌ ವರ್ಕ್ಸ್ ಮೂಲಕ ಅನೇಕ ಕಾರ್ಮಿಕರ ಜೀವನಾಧಾರ. ೨೫೦ಕ್ಕೂ ಹೆಚ್ಚು ಕಬ್ಬಿಣದ ರಥಗಳ ನಿರ್ಮಾಣಕಾರ. ದಕ್ಷಿಣ ಭಾರತದಾದ್ಯಂತ ವಿವಿಧ ದೇಗುಲಗಳಲ್ಲಿ ಸಂಚರಿಸುತ್ತಿರುವ ರಥಗಳಲ್ಲಿ ಪವಾರ್‌ ನಿರ್ಮಿತ ರಥಗಳದ್ದೇ ಸಿಂಹಪಾಲು, ಮುದ್ದೇಬಿಹಾಳ ತಾಲ್ಲೂಕಿನ ಧವಳಗಿ ಗ್ರಾಮದ ಮಡಿವಾಳೇಶ್ವರ ದೇವಸ್ಥಾನದಲ್ಲಿರುವ ೫೫ ಅಡಿ ಎತ್ತರದ ಮಹಾರಥ ಪವಾರ್ ಕಲಾವಂತಿಕೆಗೆ ಮೇರುಸಾಕ್ಷಿ. ಹತ್ತಾರು ಸಂಘಸಂಸ್ಥೆಗಳಿಂದ ಸನ್ಮಾನ. ವಿವಿಧ ಮಠಾಧೀಶರಿಂದ ಪ್ರಶಂಸೆಗೆ ಪಾತ್ರವಾಗಿರುವ ಪವಾರ್ ನಾಡಿನ ಹೆಮ್ಮೆಯ ರಥಶಿಲ್ಪಿ.