Categories
ಯಕ್ಷಗಾನ ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಪಾತಾಳ ವೆಂಕಟರಮಣ ಭಟ್

ಸ್ತ್ರೀಯರು ರಂಗಭೂಮಿ, ಯಕ್ಷಗಾನ ಪ್ರಕಾರಕ್ಕೆ ಹೆಚ್ಚಾಗಿ ಪ್ರವೇಶಿಸದ ದಿನಗಳಲ್ಲಿ ಸ್ತ್ರೀ ಪಾತ್ರಗಳನ್ನು ನಿಭಾಯಿಸಿ ಸೈ ಎನಿಸಿಕೊಂಡವರು ಪಾತಾಳ ವೆಂಕಟರಮಣ ಭಟ್ಟ ಅವರು.
ದಕ್ಷಿಣ ಕನ್ನಡ ಜಿಲ್ಲೆಯವರಾದ ಪಾತಾಳ ವೆಂಕಟರಮಣ ಭಟ್ಟರು ಪುತ್ತೂರು ಕೃಷ್ಣಭಟ್ಟರಿಂದ ತೆಂಕುತಿಟ್ಟಿನ ಅಭ್ಯಾಸ. ಮುಲ್ಕಿಮೇಳ, ಸುರತ್ಕಲ್ ಮಹಾಮಾಯಿ ಮೇಳ, ಧರ್ಮಸ್ಥಳದ ಮಂಜುನಾಥೇಶ್ವರ ಯಕ್ಷಗಾನ ಮಂಡಳಿಗಳಲ್ಲಿ
ದುಡಿದಿರುವರು.
ರಂಭೆ, ಊರ್ವಶಿ, ಮೇನಕೆ, ಸತ್ಯಭಾಮೆ, ಸುಭದ್ರೆ, ದೌಪದಿ, ಮೀನಾಕ್ಷಿ, ಸ್ವಯಂಪ್ರಭೆಯಂತಹ ಸೌಂದರ್ಯದ ಪ್ರತೀಕವಾದ ಈ ಪಾತ್ರಗಳನ್ನು ರಂಗದ ಮೇಲೆ ಅಷ್ಟೇ ಪರಿಣಾಮಕಾರಿಯಾಗಿ ಅಭಿನಯಿಸಿದ ಹಿರಿಮೆಗೆ ಪಾತ್ರರು. ಬೇಲೂರಿನ ಶಿಲಾ ಬಾಲಿಕೆಯರ ಅಂಗಭಂಗಿಗಳನ್ನು ಬೇಲೂರಿಗೆ ಹೋಗಿ ಸ್ವತಃ ಅಭ್ಯಸಿಸಿ ಯಕ್ಷಗಾನದಲ್ಲಿ ಅಳವಡಿಸಿದವರು. ಸ್ತ್ರೀ ಪಾತ್ರದೊಳಗೆ ಪರಕಾಯ ಪ್ರವೇಶ ಮಾಡುವ ೭೮ರ ಹರೆಯದ ಭಟ್ಟರಿಗೆ ಈಗಲೂ ಯಕ್ಷಗಾನವೇ ಬದುಕು. ಚೆನ್ನೈನ ಹಿಂದೂಧರ್ಮ ಸಂಘವು ಮಣಿವಿಳಾ ಬಿರುದು ನೀಡಿ ಗೌರವಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯ ಎಡನೀರು ಮಠ, ಸ್ವರ್ಣ ಯಕ್ಷಗಾನ ಮಂಡಳಿ, ಮಹಾಲಿಂಗೇಶ್ವರ ಯಕ್ಷಗಾನ ಮಂಡಳಿ ಪುರಸ್ಕಾರ, ಕರಾವಳಿ ಯಕ್ಷಗಾನ ಮಂಡಳಿ, ಬಿ.ಬಿ.ಶೆಟ್ಟಿ ಪ್ರಶಸ್ತಿ, ಪಟ್ಟಾಜೆ ಪ್ರಶಸ್ತಿ, ದೇರಾಜೆ ಪ್ರಶಸ್ತಿ, ಕಲ್ಕೂರ ಪ್ರಶಸ್ತಿಗಳು, ಗೌರವಗಳು ಸಂದಿವೆ.
ತೆಂಕು ಬಡಗು ಎರಡೂ ತಿಟ್ಟುಗಳಲ್ಲಿ ವೇಷಗಳನ್ನು ಮಾಡಿ ಭಾವಾಭಿನಯ ಮತ್ತು ಮೋಹಕ ನೃತ್ಯ ಲಾಲಿತ್ಯಗಳಿಂದ ವೈವಿಧ್ಯಮಯ ವೇಷಗಳಲ್ಲಿ ಮೆರೆದ ನಾಡಿನ ಪ್ರತಿಭಾನ್ವಿತ ಯಕ್ಷಗಾನ ಕಲಾವಿದರು ಶ್ರೀ ಪಾತಾಳ ವೆಂಕಟರಮಣ ಭಟ್ಟರು.