Categories
ರಂಗಭೂಮಿ ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಬಿ.ಎಂ. ಕೃಷ್ಣೇಗೌಡ

ಬಾಲ್ಯದಲ್ಲೇ ನಾಟಕದಲ್ಲಿ ನಟಿಸಬೇಕೆಂಬ ಗೀಳು ಹತ್ತಿಸಿಕೊಂಡು ರಂಗಭೂಮಿ ಮತ್ತು ಚಿತ್ರರಂಗದಲ್ಲಿ ಹೆಸರು ಮಾಡಿದ ಕಲಾವಿದರು ಬಿ.ಎಂ.ಕೃಷ್ಣೇಗೌಡ ಅವರು.
ತಂದೆ ಮುನೇಗೌಡ ಅವರದು ನಟನೆಯಲ್ಲಿ ಎತ್ತಿದ ಕೈ. ಯಾವ ಪಾತ್ರವನ್ನಾದರೂ ಲೀಲಾಜಾಲವಾಗಿ ಅಭಿನಯಿಸುವ ಚತುರರು. ತಂದೆ ಅಭಿನಯಿಸಿದ ನಾಟಕಗಳನ್ನು ನೋಡಿಕೊಂಡು ಬೆಳೆದ ಕೃಷ್ಣೇಗೌಡರಿಗೆ ಸಹಜವಾಗಿಯೇ ರಂಗಭೂಮಿಯಲ್ಲಿ ಆಸಕ್ತಿ.
ನೌಕರಿಗೆ ಸೇರಿದ ಮೇಲೂ ವೃತ್ತಿ ಜತೆಗೆ ನಟಿಸುವ ಹವ್ಯಾಸ ಉಳಿಸಿಕೊಂಡವರು ಶ್ರೀಯುತರು. ಕನ್ನಡಪರ ಹೋರಾಟಗಳಲ್ಲಿ ಸಕ್ರಿಯರು. ‘ಮಾರೀಚನ ಬಂಧುಗಳು’, ‘ಮಳೆ ನಿಲ್ಲುವವರೆಗೆ’, ‘ಮಹಾಸ್ವಾಮಿ’, ಭೂಕಂಪದ ನಂತರ’ ಮೊದಲಾದ ನಾಟಕಗಳಲ್ಲಿ ನಿರ್ವಹಿಸಿರುವ ಪಾತ್ರಗಳು ಪ್ರೇಕ್ಷಕರಿಂದ ಮೆಚ್ಚುಗೆ ಪಡೆದಿರುವುದು ಅವರ ಅಭಿನಯ ಸಾಮರ್ಥ್ಯಕ್ಕೆ ಹಿಡಿದ ಕನ್ನಡಿ.
ಇಂಗ್ಲೆಂಡ್‌ನ ಮ್ಯಾಂಚೆಸ್ಟರ್‌ನಲ್ಲಿ ನಡೆದ ವಿಶ್ವಕನ್ನಡ ಸಮ್ಮೇಳನದಲ್ಲಿ ಪಾಲ್ಗೊಂಡು ಅವರು ಪ್ರದರ್ಶಿಸಿದ ‘ಸಿಕ್ಕು’ ನಾಟಕ ಪ್ರಶಂಸೆ ಗಳಿಸಿದೆ.
೧೯೮೨ರಲ್ಲಿ ‘ಸಿಂಹಾಸನ’ ಚಿತ್ರದ ಮೂಲಕ ಚಿತ್ರರಂಗ ಪ್ರವೇಶ. ಲೋಕೇಶ್ ಅವರ ನಿರ್ದೇಶನದ ‘ಭುಜಂಗಯ್ಯನ ದಶಾವತಾರ’ ಚಿತ್ರದ ಪಾತ್ರಕ್ಕೆ ಮದ್ರಾಸ್‌ನ ಸಂಸ್ಥೆಯೊಂದರಿಂದ ಉತ್ತಮ ಪೋಷಕ ನಟ ಪ್ರಶಸ್ತಿ ಸಂದಿದೆ. ‘ಕರಿಮಲೆಯ ಕಗ್ಗತ್ತಲು’ ಚಿತ್ರದ ಅಭಿನಯಕ್ಕೂ ಉತ್ತಮ ಪೋಷಕ ನಟ ಪ್ರಶಸ್ತಿಗೆ ಭಾಜನರು. ಜೀವಮಾನದ ಸಾಧನೆಗಾಗಿ ‘ಮಾನು ಪ್ರತಿಷ್ಠಾನ’ ಪ್ರಶಸ್ತಿಯ ಗೌರವ
ಮುನ್ನೂರಕ್ಕೂ ಹೆಚ್ಚಿನ ಚಿತ್ರಗಳಲ್ಲಿ ಅಭಿನಯಿಸಿರುವ ಕೃಷ್ಣೇಗೌಡರು ರಂಗಭೂಮಿ ಮತ್ತು ಚಿತ್ರರಂಗದಲ್ಲಿ ಕ್ರಿಯಾಶೀಲರು.