Categories
ಚಲನಚಿತ್ರ ರಾಜ್ಯೋತ್ಸವ 2001 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಬಿ ಎಸ್ ರಂಗ

ಕನ್ನಡ ಚಿತ್ರರಂಗ ಅಂಬೆಗಾಲಿಡುತ್ತಿದ್ದ ದಿನಗಳಲ್ಲಿ ಚಲನಚಿತ್ರ ಸ್ಟುಡಿಯೋವನ್ನು ಸ್ಥಾಪಿಸಿ, ಹತ್ತಾರು ಕನ್ನಡ ಚಿತ್ರಗಳ ನಿರ್ಮಾಪಕರಾಗಿ, ನಿರ್ದೇಶಕರಾಗಿ ಚಿತ್ರೋದ್ಯಮಕ್ಕೆ ಹೊಸ ಹುರುಪು ಮೂಡಿಸಿದ ಸಾಹಸಿ ಶ್ರೀ ಬಿ ಎಸ್ ರಂಗ ಅವರು. ಛಾಯಾಗ್ರಾಹಕರಾಗಿ ಮುಂಬೈಯಲ್ಲಿ ತರಬೇತಿ, ಅನಂತರ ಜೆಮಿನಿ ಸ್ಟುಡಿಯೋಕ್ಕೆ ಪ್ರವೇಶ, ಫಲವಾಗಿ ಚಿತ್ರರಂಗದ ಎಲ್ಲ ಆಯಾಮಗಳ ನಿಕಟ ಪರಿಚಯ. ಅಂದಿನ ಕಾಲದಲ್ಲಿ ಜಯಭೇರಿ ಬಾರಿಸಿದ ‘ಚಂದ್ರಲೇಖ’ದಂತಹ ಅನೇಕ ಚಲನಚಿತ್ರಗಳಿಗೆ ಛಾಯಾಗ್ರಾಹಕರಾಗಿ ದುಡಿದ ಹಿರಿಮೆ ಶ್ರೀ ಬಿ ಎಸ್ ರಂಗ ಅವರದು.

ಕನ್ನಡ, ತೆಲುಗು, ತಮಿಳು, ಭಾಷೆಗಳಲ್ಲಿ ೭೦ ಚಿತ್ರಗಳನ್ನು ನಿರ್ಮಿಸಿ ನಿರ್ದೇಶಿಸಿದ್ದಾರೆ.’ಅಮರಶಿಲ್ಪಿ ಜಕಣಾಚಾರಿ’ ಎಂಬ ಕನ್ನಡ ಪ್ರಥಮ ವರ್ಣಚಿತ್ರ ತಯಾರಿಸಿದ ಕೀರ್ತಿ ಶ್ರೀ ರಂಗ ಅವರದು. ಅಲ್ಲದೆ, ಭಲೇ ಬಸವ, ಮಿ|| ರಾಜ್‌ಕುಮಾರ್, ಮಹಿಷಾಸುರ ಮರ್ಧಿನಿ ಮುಂತಾದ ಚಲನಚಿತ್ರಗಳನ್ನು ನಿರ್ದೇಶಿಸಿ ಪ್ರಖ್ಯಾತರಾಗಿದ್ದಾರೆ.

೧೯೫೦ರ ದಶಕ ಚಲನಚಿತ್ರೋದ್ಯಮದ ಚಟುವಟಿಕೆಗಳೆಲ್ಲವೂ ಮದ್ರಾಸಿನಲ್ಲಿ ಕೇಂದ್ರೀಕೃತವಾಗಿದ್ದ ಕಾಲ. ಅಂಥ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಸಂಸ್ಕರಣಾ ಘಟಕವನ್ನು ಸ್ಥಾಪಿಸಿದ ಧೀರ ಶ್ರೀ ರಂಗ ಅವರು. ಏಕವ್ಯಕ್ತಿಯ ಈ ಸಾಹಸಕ್ಕೆ ಸೂಕ್ತ ಬೆಂಬಲ ಸಿಗದೇ ಅನಿವಾರ್ಯವಾಗಿ ಮದ್ರಾಸಿಗೆ ಹೋಗಬೇಕಾಗಿ ಬಂದ ವ್ಯಥೆಯ ಕತೆ ಇವರ ಪಾಲಿಗೆ, ಮದ್ರಾಸಿನಲ್ಲಿ ವಿಕ್ರಂ ಸ್ಟುಡಿಯೋವನ್ನು ಸ್ಥಾಪಿಸಿ, ಕನ್ನಡ ಚಿತ್ರಗಳ ಚಟುವಟಿಕೆಗಳಿಗೆ ಸೂಕ್ತ ವಾತಾವರಣವನ್ನು ಕಲ್ಪಿಸಿ, ಕನ್ನಡದ ಏಳೆಗೆ ವಿಶೇಷವಾಗಿ ಶ್ರಮಿಸಿದ ಶ್ರೇಯಸ್ಸು ಶ್ರೀ ಬಿ ಎಸ್ ರಂಗ ಅವರಿಗೆ ಸಲ್ಲುತ್ತದೆ. ಶ್ರೀಯುತರು ೧೯೮೮-೮೯ರಲ್ಲಿ ರಾಜ್ಯ ಸರ್ಕಾರವು ಪುಟ್ಟಣ್ಣ ಕಣಗಾಲ್ ಪ್ರಶಸ್ತಿ ನೀಡಿ ಗೌರವಿಸಿದೆಯಲ್ಲದೆ, ಅಖಿಲ ಭಾರತ ಸಿನಿಮಾ ತಂತ್ರಜ್ಞರ ಸಂಘವು ಸ್ಮಾಲ್ ಆಫ್ ಆನರ್ ಪ್ರಶಸ್ತಿ ನೀಡಿ ಗೌರವಿಸಿದೆ.

G