Categories
ಆಡಳಿತ ರಾಜ್ಯೋತ್ಸವ 2022 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಮದನ್‌ಗೋಪಾಲ್‌

ಸಾರ್ವಜನಿಕ ಆಡಳಿತದಲ್ಲಿ ದಕ್ಷತೆ ಮತ್ತು ಕಾರ್ಯಕ್ಷಮತೆಯಿಂದ ಹೆಸರಾದವರು ಮದನ್‌ಗೋಪಾಲ್‌, ಮೂರು ದಶಕಗಳಿಗೂ ಅಧಿಕ ಕಾಲ ಬಹುಮುಖಿ ಸೇವೆಗೈದ ನಿವೃತ್ತ ಐಎಎಸ್ ಅಧಿಕಾರಿ, ಹಲವು ಮಹತ್ವದ ಕೃತಿಗಳ ರಚನಕಾರರು. ಮದಭೂಷಿ ಮದನ್ ಗೋಪಾಲ್ ಅವರು ವಾಣಿಜ್ಯ ಪದವೀಧರರು. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದವರು. ಬಾಲ್ಯದ ಐಎಎಸ್ ಕನಸನ್ನು ನನಸಾಗಿಸಿಕೊಂಡ ಛಲಗಾರರು. ೧೯೮೪ರಲ್ಲಿ ಭಾರತೀಯ ಆಡಳಿತ ಸೇವೆಗೆ ಸೇರ್ಪಡೆಯಾದ ಮದನ್‌ಗೋಪಾಲ್ ಅವರು ಮೈಸೂರಿನ ನಂಜನಗೂಡಿನಲ್ಲಿ ಸಹಾಯಕ ಆಯುಕ್ತರಾಗಿ ಸಾರ್ವಜನಿಕ ಬದುಕು ಆರಂಭಿಸಿದರು. ಆನಂತರ ಅನೇಕ ಹುದ್ದೆಗಳಗೆ ಏರಿದವರು. ಆರೋಗ್ಯ ಮತ್ತು ಕುಟುಂಬಕಲ್ಯಾಣ, ಉನ್ನತ ಶಿಕ್ಷಣ, ಆಹಾರ ಮತ್ತು ನಾಗರಿಕ ಪೂರೈಕೆ, ಪರಿಸರ ಮತ್ತು ಜೀವಶಾಸ್ತ್ರ, ಗಣಿ ಮತ್ತು ಭೂವಿಜ್ಞಾನ ಇಲಾಖೆಗಳ ಉನ್ನತ ಹುದ್ದೆಗಳಲ್ಲಿ ದಕ್ಷ ಸೇವೆ ಸಲ್ಲಿಸಿದವರು. ಬಿಜಾಪುರ ಮತ್ತು ಗುಲ್ಬರ್ಗಾ ಜಿಲ್ಲಾಧಿಕಾರಿಯಾಗಿ ಜನಪರ ಕಾರ್ಯ. ಜಲಸಂವರ್ಧನೆ ಯೋಜನೆಗೆ ಅನುದಾನ ಒದಗಿಸುವ ವಿಶ್ವಬ್ಯಾಂಕ್‌ನ ಕಾರ್ಯನಿರ್ವಹಣಾ ಅಧಿಕಾರಿಯಾಗಿ ಹಾಗೂ ಹೈದರಾಬಾದ್‌ನ ಕೇಂದ್ರೀಯ ವಿಶ್ವವಿದ್ಯಾಲಯದ ರಿಜಿಸ್ಟಾರ್ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರಾಗಿಯೂ ಮದನ್‌ಗೋಪಾಲ್‌ ಅವರದ್ದು ವಿಶಿಷ್ಟ ಛಾಪು. ಐಎಎಸ್ ವಲಯದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿಯೇ ಜನಪ್ರಿಯ. ಅನೇಕ ರಾಷ್ಟ್ರೀಯ-ಅಂತಾರಾಷ್ಟ್ರೀಯ ಕಾರ್ಯಾಗಾರಗಳಲ್ಲಿ ಪಾಲ್ಗೊಂಡ ಹಿರಿತನ, ವಿಶ್ವದ ೫೦ಕ್ಕೂ ಹೆಚ್ಚು ದೇಶಗಳನ್ನು ಸುತ್ತಿದ ಅನುಭವ. ಎರಡು ವಿಶಿಷ್ಟ ಕೃತಿಗಳ ಲೇಖಕರೂ ಆದ ಮದನಗೋಪಾಲ್ ಬಹುಮುಖಿ ಪ್ರತಿಭೆ.