Categories
ರಾಜ್ಯೋತ್ಸವ 2001 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ಶ್ರೀ ಮಹಾಂತಯ್ಯಸ್ವಾಮಿ ಮುಂಡರಗಿಮಠ

೧೯೧೭ರಲ್ಲಿ ರಾಯಚೂರು ಜಿಲ್ಲೆ ಮಾನವಿ ತಾಲ್ಲೂಕು ಕವಿತಾಳ ಗ್ರಾಮದಲ್ಲಿ ಜನಿಸಿದ ಶ್ರೀ ಮಹಾಂತಯ್ಯಸ್ವಾಮಿ ಮುಂಡರಗಿಮಠ ಅವರು ಸಂಗೀತ ಹಾಗೂ ರಂಗಭೂಮಿ ಕ್ಷೇತ್ರಗಳೆರಡಲ್ಲಿಯೂ ಸಾಧನೆಗೈದ ಹಿರಿಯ ಕಲಾವಿದರು.

ಶ್ರೀ ಮಹಾಂತಯ್ಯಸ್ವಾಮಿ ಮುಂಡರಗಿಮಠ ಅವರು ಶ್ರೀ ಸಂಗನ ಬಸವ ಸ್ವಾಮಿಗಳಲ್ಲಿ ಸಂಗೀತ ಅಭ್ಯಾಸ ಮಾಡಿ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ಪರಿಣತಿ ಪಡೆದರು. ನಂತರ ಶ್ರೀಯುತರ ಕಲೆಯ ಕ್ಷೇತ್ರ ರಂಗಭೂಮಿಗೂ ವಿಸ್ತರಿಸಿತು. ನಾಟಕ ನಿರ್ದೆಶನ, ಅಭಿನಯ, ಸಂಗೀತ ನಿರ್ದೇಶನ, ವೇಷಭೂಷಣ ಹೀಗೆ ಹಲವು ನಿಟ್ಟಿನಲ್ಲಿ ಸಾಗಿದ ಅವರ ಕಲಾಸೇವೆ ಹೊರನಾಡಿನ ಮುಂಬೈವರೆಗೂ ಪಸರಿಸಿತು. ೨೨ ನಾಟಕಗಳನ್ನು ನಿರ್ದೇಶಿಸಿ, ಅಭಿನಯಿಸಿ, ಸಂಗೀತ ನಿರ್ದೇಶನ ನೀಡಿರುವ ಹಿರಿಮೆ ಇವರದು.

ಸ್ವತಃ ಸಂಗೀತಗಾರರಾದ ಶ್ರೀಯುತರು ೧೫ಕ್ಕೂ ಹೆಚ್ಚು ಪುರಾಣ ವಾಚನ ಕಾರ್ಯಕ್ರಮಗಳನ್ನು ಅರ್ಧಶತಮಾನದಿಂದಲೂ ನಡೆಸಿಕೊಂಡು ಬಂದಿರುವ ಹಿರಿಮೆಗೆ ಪಾತ್ರರು, ಶ್ರೀಯುತರ ಕಲಾ ಸೇವೆಗಾಗಿ ಸಂಗೀತ ಸುಧಾಕರ, ಶೀಘ್ರರಾಗ ರಚನಾ ಚತುರ, ಗಾಯನ ಕೋಕಿಲ ಮುಂತಾದ ಬಿರುದುಗಳು ಲಭಿಸಿವೆ. ಎಂಬತ್ತೈದರ ಹರೆಯದಲ್ಲೂ ಇವರ ಕುಂದದ ಕಲಾಸಕ್ತಿಯನ್ನು ಗುರುತಿಸಿ ಕರ್ನಾಟಕ ನಾಟಕ ಅಕಾಡೆಮಿ ‘ಗೌರವ ಫೆಲೋಷಿಪ್’ ನೀಡಿದೆ.

ದೇಶವಿದೇಶಗಳಲ್ಲಿ ನಾಟಕ, ಸಂಗೀತ, ಕೀರ್ತನೆಗಳ ಮೂಲಕ ಕಲೆಯ ರಸದೂಟವನ್ನು ಉಣಬಡಿಸಿದ ಹಿರಿಯ ಚೇತನ ಶ್ರೀ ಮಹಾಂತಯ್ಯಸ್ವಾಮಿ ಮುಂಡರಗಿಮಠ ಅವರು.