Categories
ರಾಜ್ಯೋತ್ಸವ 2001 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಶ್ರೀ ಶಂ ಗು ಬಿರಾದಾರ

ಕತೆ, ಕವನ, ಕಾದಂಬರಿ, ಲಲಿತಪ್ರಬಂಧ, ಬಾಲಸಾಹಿತ್ಯ – ಹೀಗೆ ವಿವಿಧ ಸಾಹಿತ್ಯ ಪ್ರಕಾರಗಳಲ್ಲಿ ಕೃತಿ ರಚಿಸಿ ಸೈ ಎನಿಸಿಕೊಂಡ ಹಿರಿಯ ಲೇಖಕ ಶಂಕರಗೌಡ ಗುರುಗೌಡ ಬಿರಾದಾರ.

೧೯೨೬ರಲ್ಲಿ ಬಬಲೇಶ್ವರ ತಾಲೂಕು ವಿಜಾಪುರದಲ್ಲಿ ಜನಿಸಿದ ಶ್ರೀಯುತರು ನಾಲ್ಕು ದಶಕಗಳಿಗೂ ಮಿಕ್ಕಿ ಕನ್ನಡ ಸಾಹಿತ್ಯದ ಕೃತಿರಚನೆಯಲ್ಲಿ ತೊಡಗಿಸಿಕೊಂಡವರು. ವಿದ್ಯಾರ್ಥಿ ದೆಸೆಯಲ್ಲಿ ಕಥೆ, ಕವನ, ನಾಟಕ ರಚಿಸುವ ಹವ್ಯಾಸ ಬೆಳೆಸಿಕೊಂಡಿದ್ದರಲ್ಲದೆ ಗೆಳೆಯರ ಬಳಗ ಕಟ್ಟಿಕೊಂಡು ನಾಟಕ ಪ್ರದರ್ಶನ ಹಾಗೂ ಇತರೆ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಕ್ರಿಯಾಶೀಲರಾಗಿ ದುಡಿದವರು. ನಾಡಿನ ಹೆಸರಾಂತ ಪತ್ರಿಕೆಗಳಾದ ಪ್ರಜಾವಾಣಿ, ಕರ್ಮವೀರ, ಉದಯವಾಣಿ, ತರಂಗ, ಪ್ರಜಾಮತ ಮುಂತಾದ ಪತ್ರಿಕೆಗಳಲ್ಲಿ ಇವರ ಕಥೆ, ಕವನ, ಲೇಖನಗಳು ಪ್ರಕಟವಾಗಿವೆ. ಸುಮಾರು ೨೩ಕ್ಕೂ ಹೆಚ್ಚು ಕೃತಿಗಳ ರಚನಕಾರರಾದ ಶ್ರೀ ಬಿರಾದಾರರ ಬೆಳಕಿನೆಡೆಗೆ, ಬಸವ ಶತಕ, ಭಾವಸಂಗಮ, ಬಬಲೇಶ್ವರ ಬೆಳಕು, ದೇವನೊಡನೆ ಪ್ರಥಮರಾತ್ರಿ, ಭಯೋತ್ಪಾದಕರು, ಹಣತೆಗಳು ಮುಂತಾದವು ಪ್ರಮುಖ ಕೃತಿಗಳು.

ಇವರ ಅನೇಕ ಕಥೆ, ಕವನಗಳು ಆಕಾಶವಾಣಿಯಿಂದ ಬಿತ್ತರಗೊಂಡಿರುವುದಲ್ಲದೆ ಅನೇಕ ತರಗತಿಯ ಪಠ್ಯಗಳಲ್ಲಿ ಸೇರಿವೆ. ವಿಜಾಪುರ ಜಿಲ್ಲೆ ಐದನೆ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ಸೊಲ್ಲಾಪುರದಲ್ಲಿ ನಡೆದ ಗಡಿನಾಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ರಾಜ್ಯ ಎರಡನೆಯ ಮಕ್ಕಳ ಸಮ್ಮೇಳನದ ಅಧ್ಯಕ್ಷತೆಗಳನ್ನು ವಹಿಸಿದ ಹಿರಿಮೆ ಇವರದು.

ಶ್ರೀಯುತರ ಸಾಹಿತ್ಯ ಸೇವೆ ಮತ್ತು ಶಿಕ್ಷಣ ಸೇವೆಗಾಗಿ ಅನೇಕ ಸಂಘಸಂಸ್ಥೆಗಳು ಇವರನ್ನು ಸನ್ಮಾನಿಸಿ ಗೌರವಿಸಿವೆ. ಶಿಕ್ಷಣ ಸೇವೆಗಾಗಿ ೧೯೭೪ರಲ್ಲಿ ರಾಜ್ಯ ಪ್ರಶಸ್ತಿ ೧೯೮೦ರಲ್ಲಿ ರಾಷ್ಟ್ರ ಪ್ರಶಸ್ತಿಗಳು ಸಂದಿವೆ.