Categories
ಯಕ್ಷಗಾನ ರಾಜ್ಯೋತ್ಸವ 2018 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಸೀತಾರಾಮ್ ಕುಮಾರ್ ಕಟೀಲ್

ಯಕ್ಷರಂಗದ ಚಾರ್ಲಿ ಚಾಪ್ಲಿನ್ರೆಂದೇ ಹೆಸರುವಾಸಿಯಾದ ಸೀತಾರಾಮ್ ಕುಮಾರ್ ಕಟೀಲ್ ಹಿರಿಯ ಯಕ್ಷಗಾನ ಕಲಾವಿದರು. ನೋವು ನುಂಗಿ ನಗೆಚೆಲ್ಲಿದ ಯಕ್ಷಪಟು.
ದಕ್ಷಿಣಕನ್ನಡ ಜಿಲ್ಲೆ ಮಂಗಳೂರು ತಾಲ್ಲೂಕಿನ ಕಟೀಲ್ನಲ್ಲಿ ಜನಿಸಿದ ಸೀತಾರಾಮ್ ಓದಿದ್ದು ಕೇವಲ ಐದನೇ ತರಗತಿ ಮಾತ್ರ, ಕಡುಬಡತನ ದುಡಿಮೆಗಾಗಿ ಮುಂಬಯಿಗೆ ದೂಡಿತ್ತು. ಅಪರಿಚಿತ ನಗರಿಯಲ್ಲಿ ಆಕಸ್ಮಿಕವಾಗಿ ಯಕ್ಷಗಾನದ ಸೆಳೆತಕ್ಕೆ ಸಿಲುಕಿದ್ದು ನಿಜಕ್ಕೂ ಸೋಜಿಗ. ಮುಂಬಯಿನ ಶ್ರೀ ಗುರುನಾರಯಣ ಯಕ್ಷಗಾನ ಮಂಡಳಿಯಲ್ಲಿ ಆರಂಭಿಕ ತರಬೇತಿ. ಕದ್ರಿ ಮೇಳದ ‘ಗೆಜ್ಜೆಹೆಜ್ಜೆ’ ಪ್ರಸಂಗದ ‘ಕುಡುಕಕುಳ’ ನಾಗಿ ನೀಡಿದ ಮನೋಜ್ಞ ಅಭಿನಯ ಕಲಾಬದುಕಿಗೆ ಮಹತ್ವದ ತಿರುವು. ಆನಂತರ ಪೆರ್ಡೂರು ಮೇಳ, ಸಾಲಿಗ್ರಾಮ ಮೇಳ, ಮಂಗಳಾದೇವಿ ಮೇಳ, ಮಧೂರು ಮೇಳಗಳಲ್ಲಿ ನಿರಂತರ ಸೇವೆ. ಯಕ್ಷಗಾನದ ಹಾಸ್ಯಗಾರನಾಗಿ ಜನಜನಿತ. ವಿದೇಶಗಳಲ್ಲೂ ಯಕ್ಷಗಾನದ ಕಂಪು ಬೀರಿದ ಸಾಧನೆ. ಕಲಾಸೇವೆಯ ಸುವರ್ಣ ಮಹೋತ್ಸವದಂಚಿನಲ್ಲಿರುವ ಸೀತಾರಾಮ್ ಕುಮಾರ್ ಕಲಾಪ್ರೌಢಿಮೆಗೆ ಜಿಲ್ಲಾ ಗಣರಾಜ್ಯೋತ್ಸವ ಪ್ರಶಸ್ತಿ, ಪೇಜಾವರಸ್ವಾಮಿಗಳ ವೀರವಿಠಲ ಪ್ರಶಸ್ತಿ, ವಿಶ್ವಕನ್ನಡ ಪ್ರಶಸ್ತಿ ಮುಂತಾದ ಪ್ರಶಸ್ತಿಗಳು-ನೂರಾರು ಸನ್ಮಾನಗಳಿಗೆ ಭಾಜನರು.