Categories
ರಚನೆಗಳು

ಪ್ರಸನ್ನವೆಂಕಟದಾಸರು

೨೦೩
ಏನು ಕರುಣಾನಿಧಿ ರಂಗ ನನ್ನ
ನ್ಯೂನತೆ ನೋಡುವರೆ ರಂಗ
ನಾನೇನು ಅರಿಯೆನೊ ರಂಗ ನೀ
ದಾನಿ ನೀನೆ ಗತಿ ರಂಗ ಪ.
ಭಕ್ತಿಯುಂಟೆಂಬೆಯ ರಂಗ ಮಿಶ್ರ
ಭಕ್ತಿಯೆ ತುಂಬಿದೆ ರಂಗ
ಶಕ್ತಿಯ ನೋಡುವೆ ರಂಗ ವಿಷಯಾ
ಸಕ್ತಿಯೆ ಶಕ್ತಿಯು ರಂಗ ೧
ಜ್ಞಾನ ಪರೀಕ್ಷಿಪೆ ರಂಗ ಅ
ಜ್ಞಾನದ ಖಣಿ ಕಾಣೊ ರಂಗ
ಏನಾರು ವಿರತ್ಯುಂಟೆ ರಂಗ ಜಠ
ರಾನುಕೂಲ ವಿರತಿ ರಂಗ ೨
ಪೂಜಿಸು ಇನ್ನೆಂಬೆ ರಂಗ ಹೊಲೆ
ಭಾಜನ ಮನವಾಯ್ತು ರಂಗ
ನಾ ಜಪವರಿಯೆನೊ ರಂಗ ಕಲ್ಪ
ಭೂಜ ಪ್ರಸನ್ವೆಂಕಟ ರಂಗ ೩

೨೦೪
ಏನು ಗತಿಯೊ ಮುಂದೆನಗೆ ಗೋವಿಂದ
ಶ್ರೀನಿವಾಸ ರಕ್ಷಿಸದಿರೆ ದಯದಿಂದ ಪ.
ನಿಶಿದಿನ ಹಸಿವು ತೃಷೆ ಸುಡುವ ಕುಮರಿಯು
ಮಸಿವರ್ಣ ಮಾಡಿ ಕೇರಿಡಿವ ಮೂರುರಿಯು ೧
ನಾಚಿಕಿಲ್ಲದ ವಿಷಯಾಸೆಯಸಹ್ಯ
ನೀಚ ದುರುಕ್ತಿಯಸ್ತ್ತ್ರದ ಘನಗಾಯ ೨
ಮಾಯದ ಕಡಲೊಳು ಕಟ್ಟಿಹ ಕೊರಳು
ಆಯಾಸ ಬಡುತ ಬಡುತ ಬಿದ್ದಿತುರುಳು ೩
ಎಳ್ಳನಿತು ಜ್ಞಾನ ಅಹಂಕಾರ ಬಹಳ
ಘಲ್ಲನೆ ತಗಲುವ ಜ್ಞಾನದ ಶೂಲ೪
ಮರಹು ಮದಗಳೆಂಬ ಮುಸುಕಿದ ಮೆಳೆಯು
ಪರದಾರ ಪರನಿಂದೆಯಗ್ನಿಯ ಮಳೆಯು ೫
ಬೇಡಿದ ಬಯಕೆ ಸಾಧ್ಯಾಗದ ನೋವು
ಮೂಢತನದಿ ದಿನ ನೂಕುವ ಸಾವು ೬
ಇನ್ನಾರೆ ಸಜ್ಜನ ಸಂಗಕೌಷಧ
ಮುನ್ನ ಕೊಡಿಸೊ ಪ್ರಸನ್ವೆಂಕಟ ಮುಕುಂದ ೭

೨೦೫
ಏನು ಗತಿಯೊ ರಂಗ ನಾ ನಿನ್ನವನಾಗಿ
ಜ್ಞಾನದಂತಿರಲಿಲ್ಲವೊ ಪ.
ಉಂಡುಂಡು ತುಡುಗ ಕೋಣನ ಪರಿ ಸೊಕ್ಕಿದೆ
ಕಂಡಲ್ಲಿ ಕುಳಿತೆ ನೊಣನ ತೆರದಿ
ಭಂಡು ಭೂತದ ಮಾತನಾಡಿ ಭಂಡನಾದೆ
ಪುಂಡರೀಕಾಕ್ಷ ನನ್ನಂಥ ಪಾತಕಿಗೆ ೧
ಬಲು ಶಾಸ್ತ್ರಶ್ರವಣೆಂಬುವ ಮಳೆಗರೆದರೇನು
ಕಲುಗುಂಡಿನಂತೆ ಕೆಟ್ಟೆದೆ ತೊಯ್ಯದು
ಹಲವು ಅಧ್ಯಾತ್ಮವನುಸುರೇನು ಚಿತ್ತದ
ಕಳವಳಿ ನಿಲಿಸಲಾರದ ಪಾಮರಗೆ ೨
ಭವಸುಖ ಉಂಬಾಗ ನೋವು ಬೇವಾದಾಗ
ತವಕದಿ ನುಡಿವಾಗ ಕನಸಿನಾಗ
ಅವಿರಳ ಅಚ್ಯುತ ನಿನ್ನಂಘ್ರಿ ನೆನೆದೀಶ
ಅವಸರಕೊದಗೆಂದೆ ಪ್ರಸನ್ವೆಂಕಟೇಶ ೩

(ನು. ೧) ನಿರಯ (ನರಕ): ಪಾಪಿಗಳನ್ನು
೩೦೯
ಏನು ಭ್ರಮೆ ಮನುಜ ನಿನಗ್ಯಾಕೆ ಹರಿಭಟರ ಹಗೆ ಪರ
ಮಾನಿನಿಯ ಸಂಗ ನರಕದೊಳು ಬಲು ಭಂಗ ಪ.
ಮಬ್ಬು ಮುಸುಕಿದ ಪರಿಯ ನಿಜಸತಿಯ ನೋಡದೆ ಮ
ತ್ತೊಬ್ಬಳ ಕುಚಕೆ ಕಮಲವ ಹೋಲಿಸಿ
ಕೊಬ್ಬು ಮೈಯವಳ ಸಖವಿಡಿದರದು ಮಹಾಶೋಕ
ತಬ್ಬಿಬ್ಬುಗೊಳುತ ನಿರಯಂಗಳುಂಬೆ ೧
ಇಂದುಮುಖಿಯಳ ಸಂಗ ಎನಗಿಂದು ಕೈಗೂಡ
ಲೆಂದೊಬ್ಬ ಕುಂಟಣಿಗೆ ಧನವಿತ್ತೆ ನಿನ್ನ
ಸಂದುಗಳ ಕಡಿದು ವೈತರಣಿ ಸಲಿಲದಿ ದೇಹ
ಹೊಂದಿಸುವರುಂಟು ಕಾಲನ ಕುಂಟಣಿಗರು ೨
ಚಿಕ್ಕಬಲೆಯರ ಕಂಡು ಚಂಚಲಿತನಾಗ್ಯವರ
ವಕ್ರನೋಟದಿ ಹಲವು ಸನ್ನೆಯಿಂದ
ತರ್ಕೈಸಬೇಕೆಂಬ ಲಂಪಟದಿ ತಪ್ತಾದ
ಶರ್ಕರಾಯಸ ಸ್ತಂಭವಪ್ಪಿ ಪೊರಳೇಳುವೆ ೩
ಹರಿದಾಸರಾಚಾರ ಕೇಳಲಸಿ ಪಳಿದೊರೆದು
ಒರಟು ಮಾತಿನ ಸರಕಲಾಯುಗಳಿದೆ
ವಿರತಿ ಜ್ಞಾನಾನ್ವಿತರ ವೆರಸದಂಧಕನಾದೆ
ತರಣಿಯೊಳು ಹೊಂಬುಳವು ಗರುವಿಸಿದ ತೆರದಿ ೪
ಜಂಬುಕವು ಹರಿಯೊಡನೆ ಸರಸವಾಡಿದ ಪರಿಯೊ
ಳಂಬುಜಾಕ್ಷನ ದಾಸನಿಂದೆ ಮಾಡಸಲ್ಲ
ಕುಂಭಿಪಾಕಿನಿಯಲ್ಲಿ ಮರಳಿಸುವ ಭಯವರಿತು
ನಂಬು ಪ್ರಸನ್ವೆಂಕಟೇಶನಂಘ್ರಿಯ ೫

೧೩
ಏನು ರಂಗ ದೂರ ನೋಡುವೆ
ಪ್ರಾಣನಾಥ ದೂರ ನೋಡುವೆ ಪ.
ಒಳ್ಳೆ ನಾರಿಯರೊಳು ಮನವಿಟ್ಟು ನೀನನ್ನ
ಸಲ್ಲದವಳ ಕೈಯವಿಡಿದ್ಯೇಕೆ ಮೊದಲಿಗೆ೧
ಏಸು ಮನೆಯ ಹೊಕ್ಕು ದಣಿದೆ ಕಾಣದೆ ಕೃಷ್ಣ
ಆಸು ಮನೆಯೊಳು ನೀನಿದ್ದು ಕಾಣಿಸಿಕೊಳ್ಳೆ ೨
ನಿನ್ನವಳೆನಿಸಿದ ಬಳಿಕ ಮಾತಾಡದೆ
ಅನ್ಯಾಶ್ರಯ ನನಗಿದ್ದರೆ ಹೇಳು ನನ್ನಾಣೆ ೩
ನೀ ಪರಿಹರಿಸಲಾರದ ತಪ್ಪೆನ್ನಲ್ಲುಂಟೇನೊ
ಈ ಪರಿಗಾಳ ಬಳಲಿಸಿ ಸುಮ್ಮನೆ೪
ದೂರ ನೋಡಿದರೆ ನೀ ನೋಡು ನಾ ಬಿಡೆನೆಂಬೆ
ದೂರ ಸಾರಿ ನಿನ್ನ ಪೋಗಲಾರೆ ಪ್ರಸನ್ವೆಂಕಟೇಶ೫

ಖಗಾಂಕ
೧೪
ಏನೊ ರಂಗ ನಿನ್ನ ವನಿತೆಯೊಳಪರಾಧ
ಧ್ಯಾನಿಸಲು ದೊರಕೊಂಬುದೆ
ನೀನಗಲಬೇಡ ತರಳೆಗಭಯವ ಕೊಟ್ಟು
ಮೌನದಲಿ ನಡೆಯೊ ಮನೆಗೆ ಬೇಗ ಪ.
ಸ್ಮರನ ದಾಳಿಗೆ ಕಂದಿ ಕುಂದಿ ಬಳ್ಕಡಿಯಿಡುತ
ವಿರಹಾಗ್ನಿಗನ್ನತೊರೆದು ಸ್ಮರಿಸುವಳು
ನಿರುತ ನಿನ್ನಯ ಗುಣಾವಳಿಗಳನುಕರಿಸೋ
ತರಳೆಯ ಕೂಡೊ ಕೋಪ ಬೇಡೊ ನೋಡೊ ೧
ಪರಮಪುರುಷ ನೀ ಅವಳ ಜರಿದ ಕಾರಣ ಸೋಮ
ಕಿರಣ ವಿಷಸಮ ಝಳದ ಪರಿ
ತೋರಿ ಬಳಲುವಳು ಸಖಿಭೃಂಗ ಕಳಕಕೆ
ತರಳೆ ಕೂಡೊ ಕೋಪ ಬೇಡೊ ನೋಡೊ ೨
ನಲ್ಲ ನಿನ್ನ ಸಂಗ ಬಯಕೆಗೆ ಕಣ್ಣ ತೇಲಿಸುವ
ಳಲ್ಲೊ ತೊದಲ್ಲು ನುಡಿವಳಲ್ಲೊ
ಮೆಲ್ಲನೆದೆ ನೋಡಿ ಸುಯಿಗರೆವಳು ಖಗಾಂಕಜನ
ಬಿಲ್ಲಿಗೆ ಬಲಿ ಕೊಡಲಿ ಬಾರೊ ತೋರೊ ೩
ಪಯನಿಧಿ ಒಡೆಯನ್ಯಾಕೆ ಬಾರನೆಂದವಳು ತ
ನ್ನಯ ಸುದತಿಯರ ಬೈವಳು
ನಯನಧಸ್ರವಿರಸಿ ಕಂಬನಿದುಂಬುವಳು ಗಡ
ಪ್ರಿಯಳರಸೆ ಜಾರ ವಿರಸ ಹರಿಸೊ ೪
ನಿನ್ನ ನಂಬಿದಳಿಗಿಂತಾಗುತಿರೆ ಸುಮ್ಮನಿಹೆ
ಎನ್ನ ಹೇಯ ಬಾರದೆನಲು
ಉನ್ನತ ಹಯವನೇರಿ ಬಂದವಳ ನೆರೆದ ಪ್ರ
ಸನ್ನ ವೆಂಕಟ ನಾಯಕ ರಸಿಕ೫

೪೨೮
ಏಳು ವಾರಿಜನೇತ್ರ ಏಳು ಚಿನ್ಮಯ ಗಾತ್ರ
ಏಳು ಪಾಂಡವಪಾಲ ಏಳು ಸಿರಿ ಭೂಲೋಲ
ಏಳು ಪಾವನಚರಿತ ಏಳೆರಡು ಜಗಭರಿತ
ಏಳು ಯದುಕುಲಲಲಾಮಾ ಪ.
ಮೂಡುತಿವೆ ಅರುಣ ಕಿರಣೋಡುತಿವೆ ತಮದ ಕುಲ
ಬಾಡುತಿವೆ ತಾರಿನನ ಬೇಡುತಿವೆ ಚಕ್ರವಾ
ಕಾಡುತಿವೆ ಕೀರ ಬಲು ಪಾಡುತಿವೆ ತುಂಬಿ ನಲಿ
ದಾಡುತಿವೆ ಖಗ ಸಮೂಹ
ರೂಢಿಯೊಳು ಮುನಿಜನರು ನೋಡಿ ರವಿಗತ ಹರಿಯ
ಷೋಡಶುಪಚಾರಾರ್ಚನೆ ಮಾಡಿ ಮನದಣಿಯೆ ಕೊಂ
ಡಾಡಿ ಕುಣಿದಾಡಿ ಭವಕಾಡನೀಡಾಡಿ ವರ
ಬೇಡುತೈದಾರೆ ಗಡ ಹರಿಯೆ ೧
ವಿಷ್ಣುಪದೆ ವೃದ್ಧನದಿ ಕೃಷ್ಣವೇಣ್ಯಖಿಳ ಸಂ
ಹೃಷ್ಟಿಪ್ರದೆ ಕಾವೇರಿ ಇಷ್ಟದಾ ಯಮುನೆ ಅಘ
ನಷ್ಟಕಾರಣೆ ಭೀಮೆ ಶಿಷ್ಟಾಂಗೆ ತುಂಗೆ ವರ
ತುಷ್ಟಿದಾಯಕ ನದಿಗಳು
ಕೃಷ್ಣ ನಿನ್ನಡಿಯುಗಳ ಸ್ರ‍ಪಷ್ಟರಾಗುತಲಿ ಉ
ತ್ರ‍ಕಷ್ಟ ಪದ ಪಡೆವೆವೆಂದಷ್ಟ ದಿಗತಟದಿಂದ
ಚೇಷ್ಟಿತ ತರಂಗದಿಂ ಸ್ಪಷ್ಟ ಬಂದಿರೆ ಕರುಣ
ದೃಷ್ಟಿಯಿಂದವರ ನೋಡೈ ಹರಿಯೆ ೨
ಕೇಶನಾಕೇಶ ಕಕುಭೇಶಾದಿ ಅಮರರಾ
ಕಾಶದಲಿ ದುಂದುಭಿಯ ಘೋಷ ಮೊಳಗಿಸಿದರನಿ
ಮೇಷ ಮುನಿ ವೀಣೆಯುಲ್ಲಾಸದಿಂ ಮಿಡಿಮಿಡಿದು ಧ
ನಶ್ರೀ ಭೂಪಾಳಿಯಿಂದ
ಶೇಷಶಯನಖಿಳ ನಿರ್ದೋಷ ಗುಣಪೂರ್ಣ ಸ
ರ್ವೇಶ ಮುಕುಂದ ಭಟಕೋಶನೆಂದವರು ನಿನ್ನ
ಬೇಸರದೆ ಪಾಡುತಿಹರು ಶ್ರೀಶ ಪ್ರಸನ್ವೆಂಕ
ಟೇಶನೆ ಒಲಿದುಪ್ಪವಡಿಸೊ ಹರಿಯೆ ೩

ಗುರು ರಾಘವೇಂದ್ರರು
೧೬೯
ಏಳು ಶ್ರೀ ಗುರುರಾಯ ಬೆಳಗಾಯಿತಿಂದು
ಧೂಳಿ ದರುಶನ ಕೊಡಿರಿ ಈ ವೇಳೆ ಶಿಷ್ಯರಿಗೆ ಪ.
ಏಳು ಗುರು ರಾಘವೇಂದ್ರ ಏಳು ದಯಾಗುಣ ಸಾಂದ್ರ
ಏಳು ವೈಷ್ಣವ ಕುಮುದಚಂದ್ರ ಶ್ರೀ ರಾಘವೇಂದ್ರ ಅ.ಪ.
ಅಶನ ವಸನಗಳಿಲ್ಲವೆಂಬ ವ್ಯಸನಗಳಿಲ್ಲ
ಮುಸುಕ್ಹಾಕಿ ಮೋಸದಲೆ ಮೋಹಿಸಿದೆನೆಲ್ಲ
ಅಸುರಾರಿಯ ಸ್ಮರಿಸದೆ ಪಶುವಿನೊಲು ಈ ದೇಹ
ವಸುಮತಿಯೊಳು ಬಹಳ್ಹಸಗೆಟ್ಟಿತಲ್ಲ ೧
ನಾನು ನನ್ನದು ಎಂದು ಹೀನಮನಸಿಗೆ ತಂದು
ಏನು ಮಾಡುವ ಕರ್ಮ ನಾನೆ ಅಹುದೆಂದು
ಸ್ವಾಮಿ ಕರ್ತೃತ್ವವನು ತಿಳಿಯಲಿಲ್ಲ ನಾನೊಂದು
ನೀನೆ ಉದ್ಧರಿಸಯ್ಯ ದೀನ ದಯಾಸಿಂಧು ೨
ಅನ್ಯರ ಕೈಯಲ್ಲಿ ನಿನ್ನವರನಿರಿಸುವುದು
ಅನ್ಯಾಯವಾಯ್ತು ಪಾವನ್ನ ಗುರುರಾಯ
ಎನ್ನ ಮಾತಲ್ಲವಿದು ನಿನ್ನ ಮಾತೇ ಸರಿ
ಮನ್ನಿಸಿ ಆಗು ಪ್ರಸನ್ನ ಗುರುರಾಯ ೩
ವೇದ ಶಾಸ್ತ್ತ್ರಗಳನ್ನು ಓದಿ ಪೇಳ್ದವನಲ್ಲ
ಭೇದಾಭೇದವನು ತಿಳಿಯಲಿಲ್ಲ
ಸಾಧು ಸಜ್ಜನರ ಸಹವಾಸ ಮೊದಲಿಲ್ಲ
ಹಿಂದಾಗಿ ಮಾನ ಮಾರಿಸಿದಿ ಉಳಿಸಲಿಲ್ಲ ೪
ಆಸೆಗೊಳಗಾದೆನೊ ಹೇಸಿ ಮನುಜನು ನಾನು
ಕ್ಲೇಶ ಭವಸಾಗರದೊಳೀಸುತಿಹೆನೊ
ಏಸು ಜನ್ಮದಿ ಎನ್ನ ಘಾಸಿ ಮಾಡಿದೆ ಮುನ್ನ
ದಾಸನಾಗುವೆ ತೋರೊ ಪ್ರಸನ್ನವೆಂಕಟನ ೫

೨೦೬
ಒಂದೆರೆಡೇ ನಾ ಹೇಳಲು
ಎಂದಿಗು ತೀರವು ಅಪರಾಧ ಸಿರಿಕೃಷ್ಣ ಪ.
ಪಾಪವ ಗಳಿಸಿದರೇನುಂಡಾರದ ಬಲ್ಲೆ
ಆ ಪುಣ್ಯವಂತರ ಕೀರ್ತಿ ಬಲ್ಲೆ
ಈ ಪರಿ ತಿಳಿದರು ಕೆಟ್ಟವೃತ್ತಿಯ ಬಿಡೆ
ಆಪದ್ಬಂಧು ಇದೇನು ಮಾಯವೊ ಸ್ವಾಮಿ ೧
ತಾಪತ್ರಯವನುಭವಿಸುವಾಗ ಪಶ್ಚಾ
ತ್ತಾಪವಲ್ಲದೆ ಮಾತೊಮ್ಮಿಗಿಲ್ಲ
ಶ್ರೀಪತಿ ನೋಡು ಚಿತ್ತದ ಕಪಟ ವಿಷಯಾ
ಲಾಪವೆವಿಡಿದಿದೆ ಹಿತ ಹೊಂದದಯ್ಯ ೨
ಹಣ್ಣು ಹಂಚಿದ ತೆರ ಹೊತ್ತು ಹೋಯಿತು ಕಿಂಚಿತ್
ಪುಣ್ಯ ಮಾಡಿಹೆನೆಂಬ ನಂಬಿಗಿಲ್ಲ
ಚಿನ್ಮಯ ಮೂರುತಿ ಪ್ರಸನ್ವೆಂಕಟೇಶ
ನಿನ್ನವನೆಂಬ ಹೆಮ್ಮೆಲಿ ಮಾಡಿದ ತಪ್ಪು ೩

೨೦೭
ಒಲಿಯಯ್ಯಾ ರಂಗ ಒಲಿಯಯ್ಯಾ
ನೆಲೆಗಾಣದ ಭವ ಜಲದೊಳು ಮುಳುಗುವೆ ಪ.
ಮಾಯದ ಕೈಯಲಿ ಮೇಲೆ ಮೇಲೆ ಸುತ್ತಿ
ಆಯಾಸಬಡುತಿದೆ ಪ್ರಾಣ ದಾತ
ಬಾಯೆತ್ತಿ ಗೋವಿಂದ ಹರಿಯೆನ್ನಲೀಸದು
ಕಾಯೊ ದಯಾಳು ಕರಿವರದ ಕೃಷ್ಣ ೧
ಮನ ನೀರಾನೆಯ ಕಟ್ಟಿನೊಳಗೆ ಸಿಕ್ಕಿ
ಕ್ಷಣ ಕ್ಷಣ ದೈನ್ಯದಿ ಒರಲುತಿದೆ
ತನತನಗೆಳೆದು ದಣಿಸುವ ಇಂದ್ರಿಯ ಜಂತು
ಮುನಿಸೇವ್ಯ ನಿನ್ನೂಳಿಗಕ್ಕೆ ದೂರಾದೆ ಕೃಷ್ಣ ೨
ಬುದ್ಧಿ ತಪ್ಪಿದವಗೆ ಅಬದ್ಧ ನಡೆವವಗೆ
ಶುದ್ಧ ಕಾರಣ ದಿವ್ಯನಾಮವಲ್ಲವೆ
ಉದ್ಧರಿಸು ಬೇಗ ಪ್ರಸನ್ವ್ವೆಂಕಟ ಕೃಷ್ಣ
ತಿದ್ದಿಟ್ಟುಕೊಳ್ಳೊ ನಿನ್ನವಗೆ ನಿರ್ಣಯ ನೀನೆ ೩

೩೮೧
ಔಪಾಸನವ ಮಾಡು ದಾಸ ನಾನೆಂದು
ಶ್ರೀಪತಿದಾನ ಧರ್ಮವೆ ಮೋಕ್ಷವೆಂತೆಂದೂ ಪ.
ವನಿತೆ ಲಕುಮಿಯು ದಾಸಿ ಮುಕ್ತಾಮುಕ್ತ
ಗಣವೆಲ್ಲ ಹರಿದಾಸರು
ಹನುಮತ್ ಸ್ವಾಮಿಯು ರಾಮದಾಸತ್ವದ ಭಾಗ್ಯ
ವನು ಹೊಂದಿ ವಿರಿಂಚಿ ಪದವಿಯ ಪಡೆದನು ೧
ಅನಾದ್ಯನಂತ ಕಾಲ ಸಂಸೃತಿಯಲ್ಲಿ
ಆನಂದವು ಮುಕ್ತಿಲಿ
ನೀನೆಂದಿಗು ಸ್ವಾಮಿ ನಾನು ಭೃತ್ಯರ ಭೃತ್ಯ
ಅನಿಮಿಷರೆಲ್ಲ ನಿನ್ನೂಳಿಗದವರೆಂದು ೨
ದಾರಾಪತ್ಯಾದಿ ಬಳಗ ದಾಸಿ ದಾಸರು
ನಾರಾಯಣ ದೇವನ
ವರವರ ಯೋಗ್ಯತೆ ಸಾರ ಸಂಬಳ ಸೇವೆ
ಮೀರದೀವ ದೀನೋದ್ಧಾರ ಕೃಷ್ಣನೆಂದು ೩
ಕರಣತ್ರಯಗಳಿಂದ ನಿರಂತರ
ಮರೆಯೂಳಿಗವ ಮಾಡಿ
ಸಿರಿದಾರಿದ್ರ್ರ್ಯತೆಗಳಿಗ್ಹಿಗ್ಗಿ ಕುಗ್ಗದೆ
ಪರಮ ಭಕುತಿ ಭಾಗ್ಯ ದೊರಕಿದುಲ್ಲಾಸದಿ ೪
ದುರಿತ ಕೋಟಿಗಂಜದೆ ಸಾಧುನಿಕರ
ಹರಿಯ ಸೇವೆಯ ಬಿಡದೆ
ವರವಿರತಿ ಜ್ಞಾನ ಭಕ್ತಿಲಿ ಪ್ರಸನ್ವೆಂಕಟ
ಹರಿ ಕೊಟ್ಟಷ್ಟೆ ಪರಮಸಂಬಳ ಸಾಕೆಂದು ೫

(ನು.೩) ನೀಚಹಿಕೇತುವ ನಾಚಿಸಲೆಸೆದ
೨೦೯
ಕಂಗಳು ಹಿಂಗದಿರಲಿ ಎನ್ನ ನಿನ್ನ
ಮಂಗಳಾಂಘ್ರಿ ಸರೋಜಂಗಳಲ್ಲಿ ಕೃಷ್ಣ ಪ.
ಕ್ಷಿತಿಯನಳೆದ ಋಷಿಸತಿಯರಘ ಕಳೆದ
ಶ್ರುತಿಸಾರಸ್ತುತಿಗೊಮ್ಮೆಗತಿ ಗೂಢದೊಲಿದ
ಯತಿ ಮುನಿಜನ ದೇವತತಿಗಳ ಮನದಿ
ಪ್ರತಿಕ್ಷಣ ತಟಿತದೀಧಿತಿಯುಳ್ಳ ಪದದಿ ೧
ಜಗದಘಹರಿಯೆಂಬ ಮಗಳನು ಪಡೆದ
ಮಿಗಿಲಾದ ಕ್ರತುಕರ್ತನಿಗೆ ಒತ್ತಿ ಪೊರೆದ
ಖಗವರಾದನ ಕರಯುಗಳೊಳು ಮೆರೆದ
ವಿಗಡಾಹಿ ಮೌಳಿಯೋಳ್ ಧಿಗಿಲೆಂಬ ಪದದಿ ೨
ಶ್ರೀ ಚಕ್ಷುಚಕೋರ ಪೂರ್ಣಚಂದ್ರ ನಖದ
ನೀಚಹಿಕೇತುವ ನಾಚಿಸಲೆಸೆದ
ಶ್ರೀಚೆನ್ನ ಪ್ರಸನ್ವೆಂಕಟಾಚಲದೊಳಿದ್ದೆ
ನ್ನಾಚರಣೆಗಕ್ಷಯ ಸೂಚಿಪ ಪದದಿ ೩

೪೭
ಕಂಡೀರೇನೆ ಕಂಡೀರೇನೆ ಹಿಂಡುಗೋಪೇರು
ಪುಂಡರೀಕವರದ ಶ್ರೀ ಪಾಂಡುರಂಗ ಕೃಷ್ಣಯ್ಯನ ಪ.
ಒಮ್ಮೆ ನಾನಂಜಿಸಿಕೊಂಡರಮ್ಮೆಯನುಣ್ಣದೆ ಹೋದ
ನಮ್ಮ ರಂಗ ಸುಮ್ಮಾನದಿ ಭೀಮರಥಿಯಲಿದ್ದಾನಂತೆ ೧
ಎಡಬಲ ನೋಡದಲೆ ನಡೆದ ಕಾರಣವೇನೆ
ಹಡೆದವರ ಮೇಲೆ ತಾ ಕಡುಕೋಪ ಉಚಿತೇನೆ ೨
ಗೆಜ್ಜೆ ಘಿಲ್ಲು ಒಡ್ಯಾಣದ ಗುಜ್ಜನ ಕಾಣದೆ ಕಣ್ಣ
ಕಜ್ಜಳ ನೀರಾಗುತಿವೆ ದುರ್ಜನಾರಿ ಕೃಷ್ಣಯ್ಯನ ೩
ತಾಯಿತಂದೇರಗಲಿ ತಾನು ಬಯಲೊಳಗೆಂತಿಹನೆ
ಮಾಯದ ಲೀಲೆಯ ನೋಡ್ವ ಬಯಕೆ ಕೈಗೂಡಲಿಲ್ಲ ೪
ಆಡುತಾಡುತ ಬತ್ತಲೆ ಓಡಿದ ವಾಜಿಯನೇರಿ
ರೂಢಿಯೊಳ್ಪ್ರಸನ್ವೆಂಕಟ ಒಡೆಯ ವಿಠಲಯ್ಯನ ೫

೮೪
ಕಂಡೆನಾ…………..
ಸಾಸಿರನಾಮದಶೇಷಮಹಿಮ ವೆಂಕ
ಟೇಶನ ಮೂರುತಿಯ ಪ.
ಶೇಷಗಿರಿಗೆ ಕೈವಲ್ಯವೆನಿಪ ಸ್ವಾಮಿ
ಪುಷ್ಕರಿಣಿಯ ವಾಸನ ಕಂಡೆನಾ ಅ.ಪ.
ವಿಕಸಿತಸರಸಿಜ ಸಮಪದಯುಗಳನ
ಅಖಿಳ ಜಗದೆರೆಯನ
ನಖಶ್ರೇಣಿಗಳೊಳು ತರತರದಿ ಮೆರೆವ
ಸುಖಮಣಿಗಳ ಕಂಡೆನಾ ೧
ಗುಲ್ಛಕೆ ನೂಪುರ ಭೂಷಿತ ವರಫಣಿ
ತಲ್ಪನ ಮೂರುತಿಯ
ಒಪ್ಪುವ ದ್ವಿಜದಂತಿಹ ಜಘನ ಕಂ
ದರ್ಪನಯ್ಯನ ಕಂಡೆನಾ೨
ಹೊಂಗನ್ನಡಿಗಳ ಹಳಿದೊಪ್ಪುವ ಜಾ
ನುಂಗಳ ಚೆನ್ನಿಗನ
ಬಂಗಾರ ಬಾಳೆಯ ಕಂಬದಂತೆಸೆವ ಬೆ
ಡಂಗಿನ ತೊಡೆಯವನ ಕಂಡೆನಾ ೩
ಕಟ್ಟಿಹ ಕಟಹವನಿಟ್ಟ ಝಗ ಝಗಿಸುವ ಪೊಂ
ಬಟ್ಟೆಯನುಟ್ಟವನ
ಇಟ್ಟ ಕಿಂಕಿಣಿದಾಮ ಮಧ್ಯತ್ರಿವಳಿ ನಾಭಿ
ಸೃಷ್ಟಿಯುದರದವನ ಕಂಡೆನಾ ೪
ಉರದಿ ಮೆರೆವ ಸಿರಿವತ್ಸಲಾಂಛನಕೇ
ಯೂರ ಕೌಸ್ತುಭಧರನ
ಸಿರಿತುಲಸಿ ಪದಕಹಾರ ಕಂಬುಕಂ
ದರ ತಿರುವೆಂಗಳಯ್ಯನ ಕಂಡೆನಾ ೫
ಅರಿಮಥನವ ಮಾಳ್ಪರಿ ಶ್ರುತಿಮಯವಾದ
ವರ ಶಂಖೋಧೃತನ
ವರಾಭಯ ನೀಡುವ ವರ ಗದೆಪದುಮದ
ಪರಮಾಂಗನ ಕಂಡೆ ನಾ ೬
ಅಂಬುಜ ಮೊಗದೊಳು ಕಾಂತಿಯ ಬೀರುವ
ಲಂಬಿತ ಕುಂಡಲನ
ಪೊಂಬಣ್ಣದ ಸಂಪಿಗೆ ಸಂಪಿಗೆ ನಾಸಿಕ
ಲುಳಿ ನಾಸಾಪುಟದವನ ಕಂಡೆನಾ ೭
ಮರಿಕೂರುಮನಂದದಿ ಕದಪುಗಳು ಅ
ಮರುತ ಬಿಂಬಾಧರನ
ಪೆರೆನೊಸಲಿನ ಭ್ರೂಲತೆ ಕಿರುನಗೆ ಕ
ಸ್ತೂರಿ ತಿಲಕಾಂಕಿತನ ಕಂಡೆನಾ ೮
ಕೋಟಿ ಇನ ತೇಜದ ಮಕುಟ ವರಕರುಣ
ನೋಟದ ಜಗಪಾಲನ
ಹಾಟಕ ಗಿರಿಯ ಪ್ರಸನ್ನವೆಂಕಟ ಜಗ
ನ್ನಾಟಕ ಸೂತ್ರಧಾರನ ಕಂಡೆನಾ ೯

(ನು. ೩) ಪೆಡಕಿಲಾಸನವಿತ್ತು ದಾತಗೆ
೧೫೩
ಕಡಲದಾಟಿದ ಬಲುಧೀರನೆ ಬಂದು
ಒಡಲ ಹೊಕ್ಕವರಿಗುದಾರನೆ ಪ.
ಬಿಡದೆ ಭಕ್ತರ ಕೈಯವಿಡಿದು ರಕ್ಷಿಸುವ ಎ
ನ್ನೊಡೆಯ ಹನುಮರಾಯ ಅಡವಿಯ ನಿಲಯ ಅ.ಪ.
ದೃಢದಿಂದ ಲಂಕೆಯ ಪೊಕ್ಕನೆ ದೇವ
ಮೃಡನಿಂದ ಪೂಜೆಗೆ ತಕ್ಕನೆ
ಪೊಡವಿಯ ಮಗಳನು ಕಂಡನೆ ಕಿತ್ತು
ಗಿಡ ವನಗಳ ಫಲ ಉಂಡನೆ
ಅಡಿಗಡಿಗೊದಗಿದ ಕಿಡಿಗೇಡಿ ರಕ್ಕಸ
ರ್ಹೊಡೆದು ಪುರವನೆಲ್ಲ ಕಿಡಿಗಂಜಿಸಿದ ಧೀರ ೧
ತಡೆಯದೆ ಸುದ್ದಿಯ ತಂದನೆ ಜಗ
ದೊಡೆಯ ರಾಮನ ಮುಂದೆ ನಿಂದನೆ
ಪಿಡಿದೆತ್ತಿ ತರುಗಿರಿ ಪೊತ್ತನೆ ಕಪಿ
ಗಡಣಕ್ಕೆ ಒಬ್ಬನೆ ಕರ್ತನೆ
ಜಡಧಿ ದಾರಿಯ ಕಟ್ಟಿ ನಡೆದು ರಾವಣನೆದೆ
ಒಡೆಗುದ್ದಿ ಕಾಳಗ ಜಡಿದು ಮಾಡಿಸಿದೆ ೨
ಪೆಡಕಿಲಾಸನವಿತ್ತು ದಾತಗೆ ತುಷ್ಟಿ
ಬಡಿಸಿದೆ ಶ್ರೀರಘುನಾಥಗೆ
ಕಡುವೇಗ ಸಂಜೀವ ಸಲಿಸಿದೆ ನೊಂದು
ಪುಡಿವಟ್ಟ ಕಟಕವ ನಿಲಿಸಿದೆ
ಬಡವರಾಧಾರಿ ನಿನ್ನಡಿಗೆರಗುವೆ ಲೇಸ
ಕೊಡು ಪ್ರಸನ್ವೆಂಕಟ ಒಡೆಯನ ನಿಲಯ ೩

೧ ಕನಕಾಂಬಕನ ಗೆದ್ದ
೧೫
ಕನಕಗಿರಿ ರಂಗನ ಕಾಣದೆ ನಿಲ್ಲಲಾರೆ ನಾ
ಕನಕಾಭರಣನ ತೋರಿಕೊಡೆ ಸೈರಿಸಲಾರೆ ಪ.
ಕನಕದಂತೆ ಮೈಯವನ ಕನಕಾಚಲಧರನ
ಕನಕಾಂಬಕನ ಗೆದ್ದ ಕನಕ ಕಶ್ಯಪನ ಗೆದ್ದ೧
ಕನಕಾದ್ರಿಕರಕರ ಕನಕಭೂಮಿತಾರ
ಕನಕಮೃಗ ಸಂಹಾರ ಕನಕಪಕ್ಷಿಸಂಚರ ೨
ಕನಕಾಂಬರವ ಬಿಟ್ಟ ಕನಕವರ್ಮವ ತೊಟ್ಟ
ಕನಕಗನ್ನಿಕೆಯ ರಮಣ ಕರ್ತು ಪ್ರಸನ್ನವೆಂಕಟನ೩

ಹಲವು ಕಾಲವು
೮೫
ಕಮಲೇಶ ನಿನ್ನ ವಿಮಲ ಯುಗಳ ಪಾದ
ಕಮಲಕೆ ಅಮರರು ಭ್ರಮರಗಳು ಪ.
ಅತಿಸುವಟು ರೂಪದಿ ವಿತರಣ ಬೇಡಲು
ಕ್ರತದೆಡೆ ಮೂರಡಿ ಕ್ಷಿತಿ ನೋಡೆ
ಅತುಳ ಚರಿತ ವಸುಮತಿಯನಳೆಯುತಲಿ
ದ್ವಿತಿಯ ಪದಕೆ ಅಬ್ಧಿಸತಿಯ ಪಡೆದ ಪಾದಕೆ ೧
ಹಲವು ಕಾಲವು ತನ್ನ ನಲ್ಲನ ಶಾಪದಿ ಅ
ಹಲ್ಯೆಯು ತಾನಿಳೆಯಲ್ಲಿ ಕಲ್ಲಾಗಿರಲು
ಸುಲಭದಿ ಭಕ್ತರ ಸಲಹುವ ಬಿರುದಿಗೆ
ಲಲನೆಯ ಮಾಡಿದ ಸುಲಲಿತ ಪಾದಕೆ ೨
ಚಿನ್ನತನದೊಳೆ ಉನ್ನತ ಭಕ್ತ ಧ್ರು
ವನ್ನ ದೃಢಮತಿಯನ್ನೆ ಕಂಡು
ತನ್ನ ಕರುಣದಿ ಪಾವನ ಪದವಿತ್ತ ಪ್ರ
ಸನ್ನ ವೆಂಕಟೇಶನ ಶ್ರೀಪಾದಕೆ ೩

೧೬
ಕರತಾರೆ ಕರತಾರೆ ಶ್ರೀನಿವಾಸನ
ಸುರರರಸ ಸ್ವಾಮಿ ಶ್ರೀ ವೆಂಕಟೇಶನ ಪ.
ಬರಹೇಳೆ ಬರಹೇಳೆ ಬೇಗ ಕರಿಗಮನೆ ರಂಗಗೆ
ಸಿರಿರಾಣಿರಮಣ ಘನಾಂಗಗೆ
ಅರಘಳಿಗೆ ಸರಸವಲ್ಲ ಅರಸನಿಲ್ಲದವಳೆ ಸಲ್ಲ
ಸ್ಮರನೆಂಬೊ ಸಿರಿಕಳ್ಳ ಕರುಣ್ಯಿಲ್ಲ ೧
ಸುಂದರ ಸುಂದರ ಶುಭಮಂದಿರನ್ನ ದಯಾರಸ
ಸುಂದರನ್ನ ವರಕಂಬುಕಂದರನ್ನ
ಚೆಂದಾವರೆಗಣ್ಣವನ ಸಿಂಧೂರ ವರದನ್ನ ದೇ
ವೇಂದ್ರಜಿತ ಪಾರಿಜಾತ ತಂದನ್ನ೨
ಹೋಯಿತೆ ಹೋಯಿತೆ ಹೊನ್ನಪ್ರಾಯ ಯದುರಾಯ ಬಾರ
ದಾಯಿತೀ ಅವಸ್ಥೆ ಹುಟ್ಟು ಹೊಂದಿ
ಕಾಯಬೇಕೆಂದೊಮ್ಮಿಗೆ ಉದಯವಾದ ಪ್ರಸನ್ವೆಂಕಟ
ರಾಯ ಬಂದ ಫಲಿಸಿತಾನಂದ ೩

ಪೌಲಸ್ತ್ಯ ಅನುಜಗೊಲಿದು
೮೬
ಉಗಾಭೋಗ
ಕರುಣವಾರಿಧಿ ನೀ ಕರುಣವಾರಿಧಿಯಾದ ಕಾರಣ
ಕರಿ ಕುಲಾಗ್ರಣಿಯನ್ನ ಕಾಯ್ದೆ
ಉರಿ ಉರಗ ಬಾಧೆಯ ತಪ್ಪಿಸಿ ತರಳನಾರೈದೆ
ಕರುಣವಾರಿಧಿಯಾದ ಕಾರಣ
ಸುರರ ಸಂಕಟ ಹರಿದು ಕನಕ
ಪುರದರಸುತನ ಕೊಟ್ಟೆ ಪೌಲಸ್ತ್ಯ ಅನುಜಗೊಲಿದು
ಕರುಣವಾರಿಧಿಯಾದ ಕಾರಣ
ಸ್ಮರಿಸುತಿಹಗಂಬರದಿ ನಿಲಿಸಿದೆ
ಭರದಿ ಮುನಿ ಬಂದೆದೆಯನೊದೆದರೆ ಮರಳಿ ಮನ್ನಿಸಿದೆ
ಕರುಣವಾರಿಧಿ ನೀನು ನಿನ್ನಯ
ಕರುಣ ಪಾತ್ರರು ಸಿರಿ ವಿಧಾತ್ರರು
ಪರಿಚರರ ಅಭಿಮಾನಿ ಪ್ರಸನ್ವೆಂಕಟರೇಯ ಮಾಸಹಾಯ ೧

೨೧೦
ಕರುಣಾಂಬುಧಿ ಪಾಲಿಸೊ
ಶರಣಾಗತರರಸ ಮುರಾರಿ ಪ.
ಹಿಂದೆ ಕ್ಲೇಶವನುಂಡು ಬಳಲಿ ನಾ ನೊಂದೆ
ಮುಂದೆ ಕತ್ತಲೆ ಕವಿದಿದ್ಯಲ್ಲೊ ತಂದೆ ೧
ಒಡೆಯನಿದ್ದೊಡಲಿನ ಚಿಂತೆ ಎನಗ್ಯಾಕೆ
ಪಡಿಯಾಸೆಲಿನ್ನೊಬ್ಬರೊಲಿಸಲ್ಯಾಕೆ ೨
ಜನಕ ಜನನಿ ಆಪ್ತಧನ ಧಾನ್ಯ ನೀನೆ
ಅನುಮಾನ ಬಿಡಿಸುವ ಅನುಕೂಲದವನೆ ೩
ಪೋಕರ ಮುಂದೆಡಹಿದರಾರ ಕುಂದು
ಜೋಕೆ ಬಿರುದು ದಾತ ಆನತ ಬಂಧು ೪
ನಾಭಿ ಸುರಭಿ ಕಾಣದರಸುವ ಮೃಗದಂಥ
ಈ ಭ್ರಾಂತಿ ಕಳೆಯೊ ಪ್ರಸನ್ವೆಂಕಟೇಶ ೫

ಅಜಾಮಿಳ…….
೮೭
ಕರುಣಿಯೆಂಬೆ ಕರುಣಾಬ್ಧಿಯೆಂಬೆ ಶರಣು ಶರಣೆಂಬೆ
ಪರಮ ಭಾಗವತರ ಅರಿಗಳ ತರಿದು ನೀ
ನರಕ ತಪ್ಪಿಸಿ ನಿಜಪುರಕೊಯ್ಯುವೆಯೆಂದು ಪ.
ತಾಯಿಯೆಂಬೆ ತವರೂರೆಂಬೆ ತ್ರಾಹಿ ತ್ರಾಹಿ ಎಂಬೆ
ಬಾಯೆಂಬೆ ಮಾನವರಘ ಕಾಣಿಸುತಿರೆ
ನೀಯಜಾಮಿಳಗಾಶ್ರಯನಿತ್ತೆಯೆಂದು೧
ತಾತನೆಂಬೆ ಆದ್ಯಾಪ್ತನೆಂಬೆ ನಾಥನಾಥೆಂಬೆ
ಪಾತಕ ಕೌರವರಾತಂಕ ಬಿಡಿಸಿ ಸಂ
ಪ್ರೀತಿಲಿ ಪಾಂಡವರ ಕಾಯುವೆಯೆಂದು ೨
ಏಕನೆಂಬೆ ಅನೇಕನೆಂಬೆ ಸಾಕು ಸಾಕು ಎಂಬೆ
ಶ್ರೀಕಾಂತ ಪ್ರಸನ್ವೆಂಕಟೇಕಾಂತ ದಾಸರ
ಬೇಕಾಗಿ ದಡ ನೂಕುವೆಯೆಂದು ೩

ಎಂಟೆರೆಡು ಕಳೆದೋರಿ
೧೭
ಕರುಣಿಸಿ ಬಾರೆಲೆ ತಾಯೆ ಮಾಧವನಾವ್ಯಾಕೃತನ
ಕರೆತಾರೆ ನೀರೆ ಬೇಕಾದವಳನಿನಿತು
ವಿರಹವಾರಿಧಿಯಲ್ಲಿ ನೂಕಿ ಓಡಿರುವನಲ್ಲೆ ಸಲೆ ಪ.
ಬಿಸಜ ಕುಟ್ಮಳಕುಚವ ಸೋಂಕಿ ಮುದದಿ ಪಿಡಿದು
ಶಶಿಮೊಗದಿ ಮೋಹವನಿಡುವ ನುಡಿವ
ಎಸೆವ ಕೊನೆವಲ್ಲಲಳುಕಿಸಿ ಎನ್ನ ಅಧರ ಪೀ
ಯೂಷವನೊಲಿದೊಲಿದು ಸವಿದ ಕೋವಿದ
ಪೊಸಮದಕರಿಯ ಸೊಂಡಿಲ ತೋಳಲಮರ್ದಪ್ಪಿ
ಮಿಸುನಿ ಪುತ್ಥಳಿಯ ತೆರದಿ ಮೆರೆದ
ಅಸಿಯ ಮಾಣಿಕಳೆ ಕೇಳಸುರಹರನಾಳಿದನೀ
ಅಸು ತೊರೆವೆ ತಾನಪಕಾರೆ ನೀರೆ ೧
ಎಂಟೆರೆಡು ಕಳೆದೋರಿ ಸವಿದೋರಿ ಸುಖಬೀರಿ ಸಲೆ
ಕಂಠಮಾಲೆಯ ಕೊಟ್ಟನೆ ನೆಟ್ಟನೆ
ಎಂಟೆರಡವಸ್ಥೆಗಳ ಮೇಳಿಗೆಯ ಕ್ಷಣಲವಕೆ
ವೆಂಠಣಿಸಿ ಅಮೃತವೆರೆದ ನೆರೆದ
ಕಂಟಕಿಯು ದಾವಳೊ ಹರಿಯನೊಯ್ದಳಕದಿಂ
ಗಂಟಿಕ್ಕಿದಳೊ ಬಿಡದೆ ಮಡದೆ
ಉಂಟು ಮಾಡಿದನಲಾ ಮಂದ ಮುಗ್ಥೆಗೆ ಅಸಿಕ
ಕಂಟಕಬಲೆಯ ಕಾಣೆ ಜಾಣೆ ೨
ಸರಸವಾತಿನ ಜಾಣ್ಮೆಯೆಂತುಸುರುವೆನಬಲೆ
ಹರಣಳಿಯದೆಂದು ಪೇಳೆ ಕೇಳೆ
ನಿರುತವನ ಕಿರುವೆರಳ ಸೌಂದರ್ಯಮಂ ನೆನೆಯು
ತಿರುವೆ ಪುಸಿಯಲ್ಲ ಕಾಣೆ ಪ್ರಾಣೆ
ಕರುಣಿ ಬಲುನೊಂದರೆಂದದು ತನಗೆ ಕುಂದು
ಮರೆಯದಿನಿತೆಲ್ಲ ಒರೆಯೆ ಚತುರೆಯೆ
ಭರದಲೊಮ್ಮದೊಮ್ಮೆ ಬಂದು ಪ್ರಸನ್ನವೆಂಕಟ
ಗಿರಿಯರಸನೆಂದನಕ್ಕ ರಸಿಕ ೩

೨೧೧
ಕರುಣಿಸಿನ್ನಾದರೆ ರಂಗ ಸುರಾರಿ ಭಂಗ
ಕರುಣಿಸಿನ್ನಾದರೆ ರಂಗ ಪ.
ಹುಳು ಹಕ್ಕಿ ನಾಯಿ ನರಿ ಗಿಡ ಹುಲ್ಲು ಮುಳ್ಳು
ಗಳ ಜನ್ಮವಾಂತು ನಾ ಬಳಲಿದೆ ರಂಗ
ನೆಲೆಗಾಣೆನಿನ್ನು ಮಾನಿಸನಾಗಿ ವೃಥನಾದೆ
ಗುಳದ ಹಣ್ಣಿಗೆ ಸೊರಗಲ್ಯಾಕೊ ರಂಗ ೧
ತುದಿಮೊದಲಿಗೆ ಮದ ಮತ್ಸರದಿಂ ಬೇ
ಗುದಿಗೊಂಡು ನಿನ್ನಂಘ್ರಿ ಮರೆದೆನೊ ರಂಗ
ಪದುಮನಾಭನೆ ನನ್ನ ಹೊರೆಯಲಾರೆಯ ಹುಲ್ಲೆ
ವದನಕ್ಕೆ ಮುಳ್ಳ ಕಡಿವಾಣ್ಯಾಕೊ ರಂಗ ೨
ಮಲೆತವನಾದರೊದಿಯೊ ನಿನ್ನಂಗಣದೊಳು
ತೊಳಲುವ ನಾಯಿಗೆ ಕ್ಲೇಶವು ಸಲ್ಲ ರಂಗ
ಹಲವು ದುಷ್ರ‍ಕತ ನಿನ್ನ ನಾಮ ಘೋಷಣೆಯಲ್ಲಿ
ನಿಲ್ಲಬಲ್ಲವೆ ಪ್ರಸನ್ವೆಂಕಟ ರಂಗ ೩

೨೧೨
ಕರುಣಿಸೊ ಕರುಣಾಸಾಗರ ನರಹರಿಯೆ ನಿನ್ನ
ಚರಣದಾಚರಣೆಗೆಚ್ಚರಾದರನು ಪ.
ಮನ ಮಲಿನವ ತೊಳೆದನುದಿನ ದೃಢದೊಳು
ಜ್ಞಾನ ಭಕ್ತಿ ವಿರಕ್ತಿಯ ಘನಾಸಕ್ತಿಯ
ಮನಗಂಡು ಮುದವಂತರೆನಿಸಿ ನಾಮಾಮೃತ
ಉಣಬಲ್ಲ ಪೂತಾಂಗ ಮಾನಿಸರ ಸಂಗ ೧
ಸಭ್ಯರ ದೂಷಣ ಕೇಳುಬ್ಬಸ ಶ್ರವಣಕೆ
ಇಬ್ಬರ ಕಲಹದಿ ಶಬ್ದಗುಂದಿ
ಅಬ್ಜನಾಭನ ಬಿರುದುಬ್ಬುಬ್ಬಿ ಸುಖವೇರಿ
ಕೊಬ್ಬಿ ಕುಣಿವ ಶಂಲಬ್ಧರೂಳಿಗವ ೨
ವೃಂದಾವನದಲಿ ಮುಕುಂದನಾಲಯದ
ಮುಂದಾ ದಿಗಿದಿಗಿತ ವಾದ್ಯವಂದನಿಂದ
ತಂದೆ ಪ್ರಸನ್ನವೆಂಕಟೇಂದ್ರ ನಿನ್ನ ಮುದ್ರಾಂಕ
ಹೊಂದುವ ಜನುಮವ ಆನಂದಮುನಿಮತವ ೩

೨೧೩
ಕರ್ತ ಕೃಷ್ಣಯ್ಯ ನೀ ಬಾರಯ್ಯ ಎ
ನ್ನಾರ್ತ ಧ್ವನಿಗೊಲಿದು ಬಾರಯ್ಯ ಪ.
ಸುಗುಣದ ಖಣಿಯೆ ನೀ ಬಾರಯ್ಯ ನ
ಮ್ಮಘವನೋಡಿಸಲು ನೀ ಬಾರಯ್ಯ
ಧಗೆಯೇರಿಸಿತು ತಾಪ ಸುಧಾ
ಮುಗುಳ್ನಗೆ ಮಳೆಗರೆಯೆ ಬಾರಯ್ಯ ೧
ವೈರವರ್ಗದಿ ನೊಂದೆ ಬಾರಯ್ಯ ಮ
ತ್ತಾರು ಗೆಣೆಯರಿಲ್ಲ ಬಾರಯ್ಯ
ಸೇರಿದೆ ನಾ ಶರಣ್ಯ ಬಾರಯ್ಯ ಒಳ್ಳೆ
ದಾರಿಯ ತೋರಲು ನೀ ಬಾರಯ್ಯ ೨
ವೈರಾಗ್ಯ ಭಾಗ್ಯ ಕೊಡು ಬಾರಯ್ಯ ಜ್ಞಾ
ನಾರೋಗ್ಯದ ಭೇಷಜ ಬಾರಯ್ಯ
ಜಾರುತದಾಯು ಬೇಗ ಬಾರಯ್ಯ ಉ
ದಾರಿ ಪ್ರಸನ್ವೆಂಕಟಪ ಬಾರಯ್ಯ ೩

೨೧೪
ಕಲ್ಲು ಬೀಳಲಿ ಮೇಲ್ಮುಗಿಲ್ಲು ಬೀಳಲಿ
ಫುಲ್ಲನಾಭ ನಿನ್ನ ಪಾದಪಲ್ಲವ ಛಾಯೆಯ ಬಿಡೆ ಪ.
ಶೂಲ ಕೋಟಿಗಂಜೆ ಕರವಾಳ ಘಾತಿಗಂಜೆ ವಿಶ್ವ
ಪಾಲಕ ನಿನ್ನ ದಿವ್ಯನಾಮಮಾಲಿಕೆ ವಜ್ರಾಯುಧುಂಟು ೧
ಪೋಕ ಜನಕಂಜೆ ದುರಿತಾನೀಕ ಬರಲಂಜೆ ಜಗ
ದೇಕ ನಿನ್ನ ಶ್ರೀಪದಾರಾಧಕರ ಬಲ ಉಂಟೆನಗೆ ೨
ಅಂದು ಅಪಮೃತ್ಯು ಬಂದೆನ್ನಂದಗೆಡಿಸಲು ಎನ್ನ
ತಂದೆ ಪ್ರಸನ್ವೆಂಕಟೇಶ ಬಂದು ಕಾಯಿದ ಹವಣು ಬಲ್ಲೆ ೩

೧೮
ಕಾಂತೆ ಸೈರಿಸಲಾರೆ ಕಂಜಾಕ್ಷನಗಲೀರೆ
ಕಂತುಶರದ ಬಲ ಕಡುವೇಗವಾಯಿತಲೆ
ಕಾಂತ ಮೂರುತಿಯ ಕರೆತಾರೆ ತಾಯೆ ಪ.
ಸೀತಕರನ ಪ್ರಭೆಯು ಶುಕದುಂಬಿಗಳ ರವವು
ಸೋತಬಾಲೆಯ ಮುಂದೆ ಸರಸವೆ ಸೊಗಸೋದೆ
ನೀತವೇನೆಲೆ ತಂಗಿ ನೀರಜನಾಭಗೆ ೧
ನೀರೊಳು ಕರೆದೆನ್ನ ನೀಲ ಜೀಮೂತ ವರ್ಣ
ನೀರಜದ್ವಕ್ತ್ತ್ರವ ನಖದಿ ಘಾಸಿ ಮಾಡುವ
ನಾರಾಯಣನೆನ್ನ ಸುಳಿದರಿನ್ನೇನೆ ೨
ಅಧರದೊಳಿಟ್ಟುಕೊಳಲು ಅತಿಮೋಹಿಸುವ ನಲ್ಲ
ಯದುಕುಲದರಸ ಮೆಚ್ಚೆ ಎನ್ನೊಳು ಘನ್ನ
ಮಧುಪಕುಂತಳ್ಯಾವಳೊ ಮನೆಗೊಯ್ದಳೊ೩
ಆವಗವನ ಕೇಳಿ ಆಡುವವನ ಸಾಲಿ
ದಾವ ಸುಕೃತದಿಂದ ದೊರೆತನೊ ಶ್ರೀಮುಕುಂದ
ಆವ ದುಷ್ರ‍ಕತ ಬಂದು ಅಗಲಿಸಿತಿಂದು ೪
ಚಂಪಕದಲರ್ಮಾಲೆ ಚಂದನದ ಲೇಪ ಒಲ್ಲೆ
ಕಂಪಿನೊಳಗೆ ನಿಂದು ತಕ್ರ್ಕೈಸುವಾನಂದ
ಸಂಪನ್ನ ತಾ ಬಂದು ಸಲಹುವನೆಂದೆ ೫
ಪರಿಯಂಕದಲಿ ಕುಳಿತು ಪರಿಪರಿಯ ಸುಖವಿತ್ತು
ಕರದಿ ಕಂಕಣವಿಟ್ಟು ಕಡಯ ಪೆಂಡ್ಯಾ ಕೊಟ್ಟು
ಕರುಣಿ ಜರಿದು ತರವೆ ತನಗಿದು ೬
ಇಂದಿರೆ ರಮಣ ಎನ್ನ ಇಚ್ಭಯ ಸುರಧೇನು
ಸುಂದರ ರನ್ನ ಪ್ರಸನ್ನ ವೆಂಕಟೇಶನ
ಸಂದೇಹವಿಲ್ಲದೆ ಶರಣು ಹೊಂದಿದೆನೊ ೭

೨೧೫
ಕಾಡದಿರೆನ್ನ ಕಿಡಿಗೇಡಿ ಮನವೆ
ಓಡದಿರು ಅಚ್ಯುತಾಂಘ್ರಿ ನೋಡು ಮನವೆ ಪ.
ಬೆಲೆಯಿಲ್ಲದಾಯು ರತ್ನದ ಮಾಲೆ ಹರಿದಿದೆ
ಆಲಸಿಕ್ಯಾತಕೆ ಹರಿಯ ಊಳಿಗಕೆ
ಹುಲಿಯ ಬಾಯಿಯ ನೊಣನ ತೆರನಂತೆ ಮೃತ್ಯುಮುಖದಿ
ಸಿಲುಕಿಹೆನು ಸರಸವಾಡದೆ ನಂಬು ಹರಿಯೆ ೧
ಕಂಡ ಕಡೆಯಲಿ ತಿರುಗಿ ಬಳಲಿದೆಯಲ್ಲದೆ ಬೇರೆ
ಉಂಡುಟ್ಟು ಸುಖಿಸಿ ಯಶಸೊದಗಲಿಲ್ಲ
ಪುಂಡರೀಕಾಕ್ಷಾಂಘ್ರಿ ಪುಂಡರೀಕವ ಹೊಂದಿ
ಬಂಡುಣಿಯೆನಿಪರ ಸೇರು ಸಾರು ೨
ಗೋವರಂತಖಿಳ ಪಶುಗಳನು ದಾತಾರನಿಗೆ
ತಾವು ಒಪ್ಪಿಸುವ ಪರಿ ಸತಿಸುತರನು
ದೇವದೇವ ಪ್ರಸನ್ನ ವೆಂಕಟಪಗರ್ಪಿಸಿ
ಹೇವ ಹೆಮ್ಮೆಯ ಬಿಟ್ಟು ಸತತ ಹೊಗಳದೆ ೩

೨೧೬
ಕಾಣದೆ ಇರಲಾರೆ ದೇವ ಮುಖ್ಯ
ಪ್ರಾಣ ಮನೋಹರ ದೇವ ನಿನ್ನ
ವಾಣಿಯಲಮೃತವನೂಡೊ ಕಡೆ
ಗಾಣಿಸಿ ಪದದೆಡೆಯಲ್ಲಿಡೊ ಪ.
ಹಿಡಿಯಲು ಮರದಾಸೆಯಿಲ್ಲ ಕುಳಿ
ತಡೆ ಪೊಡವಿಲಿ ದೃಢವಿಲ್ಲ ನಿ
ನ್ನೊಡಲೊಳಗಿಡಬಹುದೆನ್ನ ನ
ನ್ನೊಡೆಯ ಕರುಣಾರಸಪೂರ್ಣ ೧
ನಿಲಗುಡವರಿಯಾರು ವರ್ಗ ಬಲು
ಬಳಲಿಪ ಮೂರುಪಸರ್ಗ ಇದ
ರೊಳಗೆ ನಿನ್ನಯ ಶುಭನಾಮ ಒಂದೆ
ಬಲಿಕ್ಯಾಗಿರಲಿ ಪೂರ್ಣಕಾಮ ೨
ಚಿನ್ಮಯ ಸುಗುಣದ ಖಣಿಯೆ ಸಲ
ಹೆನ್ನ ನಿರ್ಜರ ಚಿಂತಾಮಣಿಯೆ ಬಿಡ
ದೆನ್ನ ಮನದೊಳಗೆ ಬೆರೆಯೊ ಪ್ರ
ಸನ್ವೆಂಕಟ ಗಿರಿದೊರೆಯೆ ೩

೨೧೭
ಕಾಯೊ ಗೋವಿಂದ ಕಾಯೊ ಮುಕುಂದ
ಮಾಯದ ತಡಿಯ ತಪ್ಪಿಸೊ ನಿತ್ಯಾನಂದ ಪ.
ನಾನಾ ಯೋನಿಯ ಸುತ್ತಿ ನೆಲೆಗಾಣದಂತಾದೆ
ನೀನೊಲಿದಿಂದೀ ಜನ್ಮವ ಪಡೆದೆ
ಜ್ಞಾನ ಹೊಂದಲಿಲ್ಲ ಧರ್ಮದಾಚರಣಿಲ್ಲ
ಏನು ಗತಿಯೊ ಎನಗೆ ಮುಂದೆ ಸಿರಿನಲ್ಲ ೧
ಮರ್ಕಟಗೆ ಹೊನ್ನಕೊಡ ದೊರೆತಂತಾಯಿತು
ಮೂರ್ಖವೃತ್ತಿಯಲಿ ಆಯುಷ್ಯ ಹೋಯಿತು
ನರ್ಕ ಸಾಧನ ಘನವಾಗಿದೆ ಪುಣ್ಯ ಸಂ
ಪರ್ಕವ ಕಾಣೆನೈ ಕರುಣಿಗಳರಸ ೨
ಎನ್ನ ತಪ್ಪಿನ ಹೊಳೆ ಒಳಗೊಂಬುದು ಒಂದೆ
ನಿನ್ನ ದಯದ ಶರಧಿಯಲ್ಲದೆ
ಇನ್ನೇನು ಮಾರ್ಗವು ಸಿಲುಕದು ತಂದೆ ಪ್ರ
ಸನ್ನವೆಂಕಟಪತಿ ಹರಿ ದೀನಬಂಧು ೩

೪೮
ಕುಣಿದ ಕಾಳಿಯ ಶಿರದಿ ನಂದನಂದನು ಪ.
ಕಿರುಗೆಜ್ಜೆ ಕಾಲಂದಿಗೆ ಕಟಿಯ
ವರದಾಮದ ಪೊಂಗಂಟೆರವದ
ಕರಕಂಕಣ ಮುದ್ರಿಕೆ ಹಾರಪದಕಾ
ಭರಣ ಝಣ ಝಣ ಝಣ ಝಣ ಝಣ ಝಣ
ಝಣ ಝಣಕೆನ್ನಲು ೧
ವಿಗಡಾಹಿ ಫಣದಲ್ಲಿ ನಿಂದು ಕ
ರಗಳೊಲವಿಲಿ ಅಭಿನವ ತೋರುತಲಿ
ನಗೆಮೊಗದಮೃತ ರುಚಿಗಳ ಬೀರಿ ತೋ
ಧಿಗಿ ಧಿಗಿ ಧಿಗಿ ಧಿಗಿ ಧಿಗಿ ಧಿಗಿ ಧಿಗಿ ಧಿಗಿ ಥೈ ಥೈಯೆಂದು ೨
ಪದುಮಜಭವರು ಹನುಮ ಮೂರು ಜತ್ತಾ
ಳ್ಮುದದಿಂ ದಂಡಿಗೆ ತಾಳ್ಗತಿ ನುಡಿಸೆ
ಪದುಮನಾಭ ಪ್ರಸನ್ನವೆಂಕಟ ಕೃಷ್ಣ ತ
ಕುಂದ ಕುಂತ ಗಡ ವಗಧಾಂ ಕಿಡಿ ಕಿಡಿಧಾಯೆಂದು ೩

(ಆ) ಇತರ ಹಾಡುಗಳು
೪೪೬
ಕೃಪಣದಿ ಧನ್ಯರು ಎಂದಿಗೆ ಸುಖಿ
ಕೃಪಣರವರುಪಕಾರಿಗಳೊ ನಿನ್ನ ವಾರಣರು ಕೃಷ್ಣಯ್ಯ ಪ.
ಸಂಚಿತದ ಹೊನ್ನು ಬಂಡವಲ ಹೋಗಾಡಿ
ಕಂಚು ಕಾಂಚನವಾಗೆ ನಿನ್ನವರು
ಕಿಂಚಿತ್ತು ವ್ರಯವಿಲ್ಲ ನಿಕ್ಷೇಪಾಕ್ಷಯ
ಸಂಚಕಾರವ ಕೊಟ್ಟರೆಲ್ಲ ಮಂದಿರಕೆ ೧
ಅಂಗನೆ ತನೂಭವರಂಗದೆ ಮುಂಗೂಡೆ
ಹಿಂಗಿ ನಿರ್ವಾಣದಿ ನಿನ್ನವರು
ಜಂಗುಳಿ ಧನಧಾನ್ಯ ಮಣಿಯಂತೆ ಬಚ್ಚಿಟ್ಟು
ಸಂಗಾತಿಯವರು ಸಂಸಾರ ಕಟ್ಟಿದರು ೨
ಮನ್ನಣೆನೀಗಿ ಪಾತ್ರೆ ಹುಟ್ಟು ಮಾರುತ
ಸಣ್ಣರ ಕುಲ ಬಿಟ್ಟರು ನಿನ್ನವರು
ಬಣ್ಣ ಬಣ್ಣಗೆ ಉಟ್ಟು ಬಳಗ ಸಹಿತ ಭವ
ವುಣ್ಣುತ ನಿನ್ನ ಮಗನ ಉದ್ಯಮದವರು ೩
ಹಿಂದೆ ಮುಂದಿಲ್ಲದೆ ಭಿನ್ನ ಭಿನ್ನಾತ್ಮರು
ನಿಂದ್ಯಾಸ್ತ್ತ್ರಕಳುಕುವ ನಿನ್ನವರು
ಬಂಧು ಬಲ್ಲಿದರು ಭಾಗ್ಯಾನ್ವಿತ ಚಪಲರು
ಎಂದೆಂದಂಜರು ಮದಮತ್ತ ಮಾನಿಸರು ೪
ಚೆನ್ನಿಗರಲ್ಲ ಚೆಲುವರಲ್ಲ ಜಗವ ಪಾ
ವನ್ನ ಮಾಡುವರು ನಿನ್ನವರು ಪ್ರ
ಸನ್ನ ವೆಂಕಟಪತಿ ನಿನ್ನ ಮದ್ದಾನೆಗಳು
ಕುನ್ನಿಗೂಗೆಗೆ ಕಡೆಗಾಹವೆ ಕೃಷ್ಣ ೫

೪೯
ಕೃಷ್ಣ ನಿನ್ನಂಥ ಕೂಸೆಲ್ಲಿ ಕಾಣೆ ಜಗದಿ ಹೊರಗೆ
ದೃಷ್ಟಿ ತಾಕೀತು ಹೋಗಬೇಡೆಂದು ಎಷ್ಟು ಹೇಳಲಿ ಮಗನೆ ಪ.
ಗೊಲ್ಲತೀರೆಳೆ ಮಕ್ಕಳ ಗುಣವ ನೋಡಬಾರದೊ
ಹೊಲ್ಲತನ ಬೇಡ ಮನೆ ಹೊಂದಿರೊ ಅಯ್ಯ
ಫುಲ್ಲಲೋಚನ ನೀಯೆನ್ನ ಪ್ರಾಣದ ಪದಕವಯ್ಯ
ಪಳ್ಳಿಯ ಗೋಪರೈದಾರೆ ಪುಟ್ಟ ನಿನ್ನ್ಯೆತ್ತ ನೋಡಲೊ ೧
ತರಳರಂಗಿ ಕುಲಾಯವ ತೊಟ್ಟು ನಿಂತಿಹರು ಕಂಡ್ಯ
ಹಿರಿಯ ಗುಮ್ಮಗಂಜುವೆ ಹೆದರಿ ಕಂಡ್ಯ
ಬರಿಮೈಯಾ ಬಿಸಿಲೊಳು ಬಾಡಿತೊ ಮಂಗಳ ಮುಖ
ಬರಿದೆ ಬೊವ್ವ ಕಚ್ಚದೇನೊ ಬೆಟ್ಟದ ಭಾಗ್ಯನಿಧಿಯ ೨
ಕಂದ ಬರಲೆಂದುಣದೆ ಕುಳಿತಿಹನೊ ನಿಮ್ಮಯ್ಯ
ಹೊಂದಳಿಗೆ ಪಾಯಸ ಹಸನಾಗಿದೆ
ಅಂದದಿ ಸಕ್ಕರೆ ತುಪ್ಪ ಅನುಗೂಡಿಸುಣಿಸುವೆ
ತಂದೆ ಪ್ರಸನ್ನವೆಂಕಟ ನಿನಗೆ ಹಸಿವೆ ಮರೆದೆಯೊ ೩

ಕಣ್ಣಿಲೊಲಿದು ಕಟ್ಟಿಸಿಕೊಂಡನು
೫೦
ಕೃಷ್ಣ ಲೀಲಾನಂದ ನೋಡಿರೈ
ಕೃಷ್ಣಾಕೃತಿಯ ಚಂದ ನೋಡಿರೈ
ಕೃಷ್ಣ ಗೋಪಿಗಮ್ಮೆಂದ ನೋಡಿರೈ
ಕೃಷ್ಣ ಬಾಲಮುಕುಂದನ ನೋಡಿರೈ ಪ.
ಬಾಲರ ವಿಭು ಬೆಣ್ಣೆ ಮೊಸರ ಸವಿದು ಗೋಪ
ಬಾಲೇರ ವಿಭಾಡಿಸಿ ಮೆಲುವ
ಬಾಲರವಿಭಾ ನಖತೇಜನೊಳಾಡುವ
ಬಾಲರ ವಿಭವವ ನೋಡಿರೈ ೧
ಸಮವಾಯಿ ಕಾರಣನಲ್ಲಾ ಜಗಕೆ ತಾನು
ಸಮವಯ ಗೋವರ್ಗೆಳೆಯನಾದನು
ಸಮವೆ ಇಲ್ಲೆಶೋದೆನಂದರ ಭಾಗ್ಯ ಮಗನಾದ
ಶಾಮಮೈಯವನ ಮುದ್ದು ನೋಡಿರೈ ೨
ಕಣ್ಣಲ್ಲಲಸದೆ ವಿಶ್ವವ ಹೊರೆದ
ಕಣ್ಣಿಲ್ಲೊಲಿದು ಕಟ್ಟಿಸಿಕೊಂಡನು
ಕಣ್ಣಲ್ಲಾಲಯವುಳ್ಳ ಪ್ರಸನ್ವೆಂಕಟೇಶನ
ಕಣ್ಣಲಿ ಲಯವಿಟ್ಟು ನೋಡಿರೈ ೩

(ನು. ೨) ಪಡ್ರಸ
೨೧೮
ಕೆಡಗೊಡದಿರು ಎನ್ನ ಚಿತ್ತಗತಿಯ ಸುರ
ರೊಡೆಯ ತವಾಂಘ್ರಿ ಹೊಂದಿದ ಮತಿಯ ಪ.
ಒಂದು ಗುರಿಗಿಟ್ಟರೆ ತಪ್ಪುತಿದೆ ಮ
ತ್ತೊಂದಕಿಡದೆ ತಾ ತಗಲುತಿದೆ
ಹೊಂದಲೊಲ್ಲದು ತ್ವನಿಷ್ಠೆಯನು ಒಣ
ದಂದುಗಗೊಳುತಿದೆ ಹರಿ ನೀನು ೧
ಮುಂದಿಟ್ಟ ಷಡ್ರಸಾನ್ನವನುಣ್ಣದು ದೂ
ರಿಂದ ನಿಸ್ಸಾರಕ್ಹೆಣಗುವುದು
ನಂದಿಸಲೊಲ್ಲದು ನೆಳಲ್ವಿಡಿದು ಕಿ
ಚ್ಚೆಂದಂಜದೋಡಿ ಧುಮುಕುತದಿದು ೨
ಪ್ರದೇಶ ಅಂಗುಟ ಮಾತ್ರವ ಕಾಣದೆ ತಾ
ಭೂದಿವಿ ಪಾತಾಳಕೈದುತಿದೆ
ಮಾಧವ ಪ್ರಸನ್ನವೆಂಕಟ ದಯಾಳು ನಿನ್ನ
ಪಾದದಲ್ಲಿಡು ಇದರುಲುಹು ಬಲು ೩

೨೧೯
ಕೆಡಗೊಡದಿರು ದೇಶಿಗ ನಾ ರಂಗ
ಕೆಡಗೊಡದಿರು ದೇಶಿಗ ನಾ ಪ.
ನುಡಿ ನುಡಿದು ಮುಪ್ಪಾದೆ ನನ್ನಯ
ನಡೆ ನೋಡಲು ಹುರುಳಿಲ್ಲ
ಹುಡಿ ಹುಡಿಯಾದೆನೊ ವಿಷಯದ ಬಯಕೆಲಿ
ಅಡಿಗಡಿಗೊದಗಿತು ಪಾಪವು ರಂಗ ೧
ಜಪತಪವ್ರತಗಳ ನೇಮವನರಿಯೆ
ನಿಪುಣ ಪೂಜಾವಿಧಿಯರಿಯೆ
ಅಪರಿಮಿತ ಶುಭ ಕ್ರಿಯದೊಳು ಕಾಮನ
ಚಪಲತೆ ಭ್ರಮೆಗೊಳಿಸುತಿದೆ ರಂಗ೨
ಹಿಡಿ ಹಿಡಿ ಮುಳುಗುವೆ ಯಾರಿಲ್ಲವೊ ಪಾ
ಲ್ಗಡಲೊಡೆಯ ಭವಾಬ್ಧಿಯಲಿ
ಚಡಪಡಿಸುವೆ ಮೂರುರಿಯಲಿ ಹರಿ ನಿ
ನ್ನಡಿಯೆಡೆಲಿಡು ಪ್ರಸನ್ವೆಂಕಟ ರಂಗ೩

೨೨೦
ಕೆಡಿಸುವನಲ್ಲೊ ನೀ ಬಲು ಕರುಣಿ ನನ್ನ
ಕಿಡಿಗೇಡಿತನ ಉಣಿಸಿತು ಭವಣಿ ಪ.
ಹುಸಿಯ ನುಡಿದು ದೆಸೆಗೆಟ್ಟವ ನಾ ನನ್ನ
ಕುಶಲ ಕಲ್ಯಾಣದೊಳಿಟ್ಟ ಕರುಣಿ ನೀ
ಅಸಮ ಚಂಚಲ ಚಿತ್ತವುಳ್ಳವ ನಾ ದು
ವ್ರ್ಯಸನವಿದಾರಿ ಉದಾರಿಯು ನೀ ೧
ಹಗಲರಿತ ಕುಳಿಯೊಳ್ಬಿದ್ದವ ನಾ ಎನ್ನ
ನೆಗಹಿ ನೆಗಹಿ ನೆಲೆಗೊಟ್ಟವ ನೀ
ಬಗೆ ಬಗೆ ದೋಷಾಚರಣ್ಯೆವ ನಾ ಮ
ತ್ತಘ ಸಂಚಿತವನೋಡಿಸುವೆ ನೀ ೨
ವಿಷಯದ ಬಯಕೆಲಿ ನವೆದವ ನಾ ಶುದ್ಧ
ಭೇಷಜನಾಗಿಹೆ ಭವರೋಗಕೆ ನೀ
ವಿಷವನುಂಡು ಕಳೆಗೆಡುವವ ನಾ ಪೀ
ಯೂಷವನೆರೆವ ದಯಾವಾರಿಧಿ ನೀ ೩
ಅಹಂಕಾರದಲಿ ಬೆರೆತಿದ್ದವ ನಾ ಶುಭ
ವಹ ನಾಮವನಿತ್ತು ತಿದ್ದುವೆ ನೀ
ಮಹಿಯೊಳಗಮಿತಘ ಸಾಧಕ ನಾ ಎನ್ನ
ಬಹುಕಲುಷವನ ದಾಹಕ ನೀ ೪
ಕೆಡಿಸಬೇಕಾದರೆ ತಿರ್ಯಗ್ಯೋನಿಯ ನೀ
ಬಿಡಿಸಿ ವೈಷ್ಣವ ಜನ್ಮಕೆ ತಹೆಯಾ
ಒಡೆಯ ಪ್ರಸನ್ವೆಂಕಟ ದಯಾಳು ನಿನ್ನ
ಒಡಲ ಹೊಕ್ಕವನೆಂದು ನಂಬಿನೆಚ್ಚಲು ೫

೩೧೧
ಕೇಳಿ ಮರೆವುದು ಮನ ಕುಶಶಯನನ
ಆಳು ಕಂಡಂತೆ ಚಂದ್ರಮೌಳಿ ಹೇಳಿದಂತೆ ಪ.
ಮುಂಜಾವದಿ ಗುರುಮಧ್ವಮತ ಮಹಿಮಾಹರ ಪಾದ
ಕಂಜಗಳ ಬಲಗೊಂಡು ಕಲಿಯಾನಕೆಂದು ಲ
ಕುಂಜರವರದನ ನಾಮ ಕೀರ್ತನೆ ಮಾಡೆಂದು
ಮಂಜುಳ ಶಾಸ್ತ್ರಶ್ರವಣ ಮಹಿಮೆ ಪುರಾಣ ೨
ಪ್ರಸನ್ವೆಂಕಟೇಶನ ಪಾದ ಪಿಡಿದವರಿಗಾಹ್ಲಾದ
ನಿಶಿದಿನ ಸಂಸಾರ ನಿಸ್ಸಾರ ಘೋರ ೩

೩೧೨
ಕೇಳು ಶ್ರೀ ಕೃಷ್ಣ ಕಥೆಯ ಬಾಳು ವೈಷ್ಣವರ
ಪಾಳಿಕೆ ಭಕುತಿಯಿಂದಾಳಾಗಿ ಎಲೆ ಮನುಜ ಪ.
ಖೂಳರೊಳು ಮಾತಾಡದೇಳು ಹರಿಭಟರಡಿಗೆ
ಬೀಳು ಭಗವಜ್ಜನರ ಮ್ಯಾಳದೆದುರಿನಲಿ
ಹೇಳು ಕೀರ್ತನೆ ನಾಮದೋಳಿಗಳ ತನುಮನದಿ
ಊಳಿಗ ಮಾಡು ಬಿಡದಾಳು ಕರಣಗಳ ೧
ಕೂಳು ಕಾಸಿನ ಸವಿಗೆ ಕೀಳು ಮಾನಿಸರ ಹೊಗಳಿ
ಕೋಳು ಬಂಧನ ಹೋಗದಿರು ಮನದಾಳಿಗೊಳಗಾಗಿ
ಏಳೆರಡು ಭುವನಗಳ ಆಳುವ ಪಿತನಗುಣ
ದೇಳಿಗೆಗೆ ಹರುಷವಂ ತಾಳು ಅನ್ಯವ ಮರೆದು೨
ಗಾಳಿಯ ಸೊಡರು ದೇಹ ನಾಳೆಗೆನ್ನದೆ ಸುಧೆಯ
ಮೇಳೈಸಿಕೊಂಡು ಭವವೇಳಿಲಿಸು ನೀ
ಜಾಳು ಭಾಷ್ಯಗಳ ಗತಿ ಹಾಳೆಂದು ಗುರುಮಧ್ವಹೇಳಿದಂತಿರುತಲಿ ದಯಾಳು ಪ್ರಸನ್ವೆಂಕಟನ ೩

(ನು. ೨) ಬಿಂಬ:
೨೨೧
ಕೈಗೂಡಿಸು ಬಯಕೆ ರಂಗಾ
ಕೈಗೂಡಿಸು ಬಯಕೆ ಪ.
ಸಂತೆಯ ಬಳಗದ ಸಂಗತಿ ನೀಗಿ
ಸಂತರ ಪದಪಲ್ಲವ ನೆಳಲಾಗಿ
ಚಿಂತನೆ ಮೂರುತಿ ಚಿಂತನೆಗೊದಗಿ
ಪ್ರಾಂತದ ಪಯಣ ಮನೋರಮವಾಗಿ ೧
ಚೆನ್ನಿಗ ಮೈಸುಟ್ಟರಿವ್ಯೆಂತಾಗಿ
ಛಿನ್ನಾಗುವ ಮೈಯಂಜಿಕೆ ನೀಗಿ
ನನ್ನ ರೂಹು ನನಗಿದ್ದಂತಾಗಿ
ಚಿನ್ಮಯ ಬಿಂಬದ ಒಲುಮ್ಯೆನಗಾಗಿ ೨
ಬಯಲಿಗೆ ಬಿನ್ನಹವ ಮಾಡ್ಯೇನು
ಬಯಸುವ ಪರಿ ನೀಡುವ ದೊರೆ ನೀನು
ಭಯವಿಲ್ಲದೆ ಮೊರೆ ಹೊಕ್ಕೆನು ನೀಡಾ
ಭಯವರದ ಪ್ರಸನ್ವೆಂಕಟ ಪ್ರೌಢಾ ೩

೨೨೨
ಕೈಯ ಬಿಡದಿರೆನಗೆ ಹುಯ್ಯಲಿಡುವೆ ನಿನಗೆ
ಅಯ್ಯ ವೆಂಕಟರಾಯ ಅಯ್ಯೋ ಸೋತೆನೊ ಜೀಯ
ನೀಯೆನ್ನಲಸದೆ ನೋಡೊ ಕೃಪೆಯ ಮಾಡೊ ಪ.
ಜನನ ಮರಣ ಕ್ಷತ ಇನಿತೆ ಸಾಕೆಲೆ ದಾತ
ಅನುದಿನ ನಿನ್ನ ನಾಮ ನೆನವಿನಾನಂದ ಪ್ರೇಮ
ತನುಮನದಲ್ಲಿ ಬೆಳಸೊ ಉದಯಿಸೊ ೧
ಕರ್ಮ ಬಟ್ಟೆಯನರಿಯೆ ಧರ್ಮಸಂಗ್ರಹವರಿಯೆ
ಶರ್ಮ ಚಿಹ್ನಗಳಿದ್ದು ನಿರ್ಮಳಾಂತವಿಲ್ಲ ದು
ಷ್ಕರ್ಮವೆಲ್ಲ ನಿವಾರಿಸೊ ನೇವರಿಸೊ ೨
ಶುದ್ಧ ಸಾತ್ವಿಕ ಮತದ ಮಧ್ವಮುನಿಯ ಮತದಿ
ತಿದ್ದು ಪ್ರಸನ್ನವೆಂಕಟರಮಣನೆ ಎನ್ನ
ಉದ್ಧರಿಸೊ ಸಶಿಗನೆ ನಿನ್ನವನ ೩

ಗುರುಸತ್ಯನಾಥರು : ಇವರು ಉತ್ತರಾದಿ
೧೭೦
ಕೊಂಡಾಡಲಳವೆ ಕರುಣಾನಿಧಿ ಕಾವನ
ದಂಡ ಸಂಜಿತ ಗುರುಸತ್ಯನಾಥರ ಕೀರ್ತಿ ಪ.
ಶ್ರೀ ವಾಸುದೇದ ತಾ ಭಾವಿಸಿ ಚಿತ್ತದಿ
ಭೂವಲಯಕೆ ಸುಜನಾವಳಿಗಾಶ್ರಯ
ವೀವೆನೆನುತ ಶುಭದೇವವೃಕ್ಷವನಟ್ಟೆ
ಈವರ ಪರಮಹಂಸಾವಲಂಬನ ತಾಳ್ದು
ಶ್ರೀ ವಾಯುಮತದಿ ತತ್ವವೆ ಲಕ್ಷಿಸುವ ಪ್ರೇ
ಕ್ಷಾವಂತರಾಗಿಹ ಜೀವಕೋಟಿಗಳ ಕೃ
ಪಾವಲೋಕನದೊಳಿಟ್ಟ ಅಪೇಕ್ಷಿತ
ಭಾವಾರ್ಥಗಳನೆ ಕೊಟ್ಟು ನಂಬಿದ
ಸೇವಕರ್ಗಭಯವಿಟ್ಟ ಗುರುರಾಯನ ೧
ಭಾನು ತೋರುವ ಮುನ್ನೆ ಸ್ನಾನವ ಮಾಡಿ ಸು
ಮ್ಮಾನದಿಂದಲಿ ನೇಮ ಮೌನದೊಳಿದ್ದು ಶ್ರೀ
ಮಾನಾಥನಂಘ್ರಿಯ ಮಾನಸದಲಿ ದೃಢ
ಧ್ಯಾನದಿಂ ಬಲಿದು ಗೀರ್ವಾಣ ಭಾಷ್ಯಾಮೃತ
ಪಾನವ ಜನರಿಗೆ ಸಾನುರಾಗದಲಿತ್ತು
ನಾನಾ ತತ್ವಾರ್ಥ ವ್ಯಾಖ್ಯಾನವ ಜನರಿಗೆ
ತಾನಂದು ಬೋಧಿಸಿದ ತಾಮಸ
ಜ್ಞಾನವನೋಡಿಸಿದ ಆ ಕಾಮಧೇನು
ವೆನಿಸಿ ಎಸೆದ ಗುರುರಾಯನ ೨
ಭೇದವರ್ಜಿತ ಮತ್ತವಾದ ಕುಂಭಿಯ ಕುಂಭ
ಭೇದಕ ಸಿಂಗ ಹಲಾಧಾರಿ ಹರಿ ಸಗು
ಣೋದರ ಸಾಕಾರ ಮಾಧವ ಹರನುತ
ಪಾದನೆನುತ ಸೂತ್ರ ವೇದ ಪುರಾಣದಿ
ಸಾಧಿಸಿ ಕುತ್ಸಿತವಾದಿಗಳ
ಪಾದಾಕ್ರಾಂತರ ಮಾಡಿ ಮೇದಿನಿಯೊಳು ಜಯ
ನಾದಭೇರಿಯ ಹೊಯಿಸಿದ ಮುಕ್ತಿಯ
ಸಾಧನ ತೋರಿಸಿದ ಭ್ರಷ್ಟಂಕು
ರೋದಯ ಮಾಣಿಸಿದ ಗುರುರಾಯನ ೩
ಕಾಲಕಾಲಕೆ ಧರ್ಮ ಪಾಲಿಸಿ ಯಾಚಕ
ಜಾಲಕೆ ಮನ್ನಿಸಿ ಮೂಲ ಮಂತ್ರೋಪದೇಶ
ಪೇಳಿ ಪೂತರ ಮಾಡಿ ಹಾಲು ಸಕ್ಕರೆ ತುಪ್ಪ
ಹೋಳಿಗ್ಯನ್ನವನಿಕ್ಕಿ ಮೇಲೆ ದ್ರವ್ಯವನಿತ್ತು
ಪಾಲಿಸಿ ತಾಯಿತಂದೆಗಳ ಹಂಬಲ ಬಿಡಿ
ಸಿ ಲೋಕದವರಿಗಭಿಲಾಷಾ ಪೂರ್ಣಾನು
ಕೂಲ ಚಿಂತಾಮಣಿಯ ಯತಿಕುಲ
ಮೌಳಿ ಮಕುಟಮಣಿಯ ವಿರತಿಭಾಗ್ಯ
ಶಾಲಿ ಸುಗುಣಖಣಿಯ ಗುರುರಾಯನ ೪
ಮಣ್ಣು ವನಿತೆ ಸತಿ ಹೊನ್ನಿನ ಬಯಕೆಯ
ಘನ್ನತೆ ಜರಿದು ಪಾವನ್ನ ಮಹಿಮನಾದ
ಚೆನ್ನ ಸತ್ಯನಿಧಿ ತೀರಥನ್ನ ಕರೋದ್ಭವ
ತನ್ನಾಕಷೆಂಬುವಭಿನ್ನವಚಂದ್ರಿಕೆ
ಯನ್ನು ಪ್ರಕಾಶಿಸಿ ಪೂರ್ಣಚಂದ್ರಮನಂತೆ
ಉನ್ನತ ಕಳೆಯುತ ಚಿನ್ಮಯ ವರದ ಪ್ರ
ಸನ್ನ ವೆಂಕಟಾಧಿಪನ ಭಜಿಸಿ ನಿತ್ಯ
ಧನ್ಯನೆನಿಸುತಿಪ್ಪನ ಸತ್ಯಾಭಿನವ
ರನ್ನನ ಪೊರೆದಪ್ಪನ ಗುರುರಾಯನ ೫

೯೧
ಕೋಮಲಾಮಲ ಗಾತ್ರನ ತಾಮರಸದಳ ನೇತ್ರನ
ಸ್ವಾಮಿ ಸಿರಿನಿವಾಸನ ಕಂಡೆ ಹೇಮಗಿರಿ ವರದೀಶನ ಪ.
ಕನ್ನೆ ಲಕುಮಿಯನೆತ್ತಿದ ಶುಭ ಚಿನ್ನವಕ್ಕಿಯ ಹತ್ತಿದ
ರನ್ನದುಡುಗೆಗಳಿಟ್ಟನ ಸುವರ್ಣದಂಬರನುಟ್ಟನ
ಕರ್ಣಕುಂಡಲ ಬೆಳಗಿನ ನುಣ್ಗೆನ್ನೆಲಲುಗುವ ಕುರುಳಿನ
ಸಣ್ಣನಾಮದ ನೊಸಲಿನ ಶ್ರೀ ಚಿನ್ಮಯನ ಬಲು ಚೆಲುವನ ೧
ಕುಂದದಲರಿನ ಮಾಲೆಯ ಪ್ರಭೆಗುಂದದ ಮಕುಟಮೌಳಿಯ
ಸ್ಯಂದನಾಂಗದರಾಭಯವರ ಹೊಂದಿದಮಲ ಸುಪಾಣಿಯ
ಮುಂದೆ ನಾರದ ಹನುಮರ ಗಾಯನಾನಂದದಲಿ ತಾ ಕೇಳುವ
ಹಿಂದೆಡಬಲದಿ ಛತ್ರವ ಪಿಡಿದಿಂದಿರೆಯರೊಳೊಪ್ಪುವ ೨
ತೋರ ಮುತ್ತಿನ ಹಾರದ ಕೇಯೂರ ಕೌಸ್ತುಭ ವಕ್ಷದ
ಚಾರುಸ್ಮಿತ ಮುಖರೋಚಿಯ ದಯಾವಾರಿಧಿಯ ಮಹೋದಾರಿಯ
ಸಾರಿದರ ಸುರತರುವಿನ ಸುರವೈರಿ ಕರಿ ಪಂಚಾನನ
ಭೂರಿ ಪ್ರಸನ್ವೆಂಕಟೇಶನ ಹೃದಯಾರವಿಂದ ನಿವಾಸನ ೩

೯೨
ಕೋಲುಹಾಡು
ಕೋಲು ಕಾಮನ ಗೆದ್ದ ಕೋಲು ಮಾಯ್ಗಳನೊದ್ದ
ಕೋಲು ಆನಂದಮುನಿ ಪಿಡಿದಿಹ ಕೋಲೆ ಪ.
ತಮನೆಂಬುವನ ಕೊಂದು ಕಮಲಜನಿಗೆ ವೇದ
ಕ್ರಮದಿಂದ ಕೊಟ್ಟು ಜಗವನು ಕೋಲೆ
ಕ್ರಮದಿಂದ ಕೊಟ್ಟು ಜಗವನು ರಕ್ಷಿಸಿದ
ವಿಮಲ ಶ್ರೀ ಮತ್ಸ್ಯ ಮನೆದೈವ ಕೋಲೆ ೧
ಸುರಪನ ವಿಭವೆಲ್ಲ ಶರಧೀಲಿ ಮುಳುಗಿರೆ
ಗಿರಿಗಹಿ ಸುತ್ತಿ ಕಡೆಯಲು ಕೋಲೆ
ಗಿರಿಗಹಿ ಸುತ್ತಿ ಕಡೆಯಲು ನಗ ಜಾರೆ
ಧರಿಸಿದ ಶ್ರೀ ಕೂರ್ಮ ಮನೆದೈವ ಕೋಲೆ ೨
ಹೊಂಗಣ್ಣಿನವನು ಭೂವೆಂಗಳನೆಳೆದೊಯ್ಯೆ
ಮಂಗಳಮಹಿಮ ದಯದಿಂದ ಕೋಲೆ
ಮಂಗಳ ಮಹಿಮ ದಯದಿಂದ ನೆಗಹಿದ್ಯ
ಜ್ಞಾಂಗ ಶ್ರೀವರಾಹ ಮನೆದೈವ ಕೋಲೆ ೩
ಒಂದೆ ಮನದೊಳಂದು ಕಂದ ನೆನೆಯಲಾಗ
ಬಂದವನಯ್ಯನ್ನೊದೆದನು ಕೋಲೆ
ಬಂದವನಯ್ಯನ್ನೊದೆದನು ಅನಿಮಿತ್ತ
ಬಂಧು ನರಹರಿಯು ಮನೆದೈವ ಕೋಲೆ ೪
ಎದುರಿಲ್ಲವೆನಗೆಂದು ಮದವೇರಿದವನ ತ್ರಿ
ಪದ ಭೂಮಿ ಬೇಡಿ ಗೆಲಿದನು ಕೋಲೆ
ಪದ ಭೂಮಿ ಬೇಡಿ ಗೆಲಿದಾ ತ್ರಿವಿಕ್ರಮ
ಮುದದ ವಾಮನ ಮನೆದೈವ ಕೋಲೆ ೫
ಕುಜನರಳಿದು ಭಾಗ್ಯ ಸುಜನರಿಗೊಲಿದಿತ್ತ
ನಿಜ ತಾತನಾಜ್ಞ ಸಲಹಿದ ಕೋಲೆ
ನಿಜ ತಾತನಾಜ್ಞ ಸಲಹಿದ ಶುಭಗುಣ
ದ್ವಿಜರಾಮ ನಮ್ಮ ಮನೆದೈವ ಕೋಲೆ ೬
ಕೌಸಲ್ಯೆ ಗರ್ಭದಿ ಜನಿಸಿದ ಕೃಪೆಯಲ್ಲಿ
ಕೌಶಿಕ ಕ್ರತುವ ಕಾಯ್ದನು ಕೋಲೆ
ಕೌಶಿಕ ಕ್ರತುವ ಕಾಯ್ದ ರಾವಣಾಂತಕ
ಶ್ರೀ ಸೀತಾರಾಮ ಮನೆದೈವ ಕೋಲೆ ೭
ಗೋಕುಲದಲಿ ಬೆಳೆದು ಪೋಕ ದನುಜರ ಅ
ನೇಕ ಪರಿಯಲಿ ಸದೆದನು ಕೋಲೆ ಅ
ನೇಕ ಪರಿಯಲಿ ಸದೆದ ಪಾಂಡವಪಾಲ
ಶ್ರೀಕೃಷ್ಣ ನಮ್ಮ ಮನೆದೈವ ಕೋಲೆ ೮
ಮಿಥ್ಯಾವಾದಿಗಳಿಗೆ ಮಿಥ್ಯವನೆ ಕಲಿಸಿ
ಸತ್ಯವಾದಿಗಳ ಪೊರೆದನು ಕೋಲೆ
ಸತ್ಯವಾದಿಗಳ ಪೊರೆದನು ಅಜವಂದ್ಯ
ಕರ್ತ ಬೌದ್ಧನು ಮನೆದೈವ ಕೋಲೆ ೯
ಸ್ವಾಹಾ ಸ್ವಧಾಕಾರವು ಮಹಿಯೊಳಿಲ್ಲದಾಗೆ
ಸುಹಯವೇರಿ ಕಲಿಯನು ಕೋಲೆ
ಸುಹಯವೇರಿ ಕಲಿಯನೆಳೆದು ಕೊಂದ
ಮಹಾಕಲ್ಕಿ ನಮ್ಮ ಮನೆದೈವ ಕೋಲೆ ೧೦
ಹತ್ತವತಾರದಿ ಭಕ್ತಜನರ ಹೊರೆದ
ಮತ್ತಾವಕಾಲದಿ ರಕ್ಷಿಪ ಕೋಲೆ
ಮತ್ತಾವ ಕಾಲದಿ ರಕ್ಷಿಪ ಪ್ರಸನ್ವೆಂಕಟ
ಕರ್ತನ ನಂಬಿ ಸುಖಿಯಾದೆ ಕೋಲೆ೧೧

೯೩
ಕೋಲುಹಾಡು
ಕೋಲು ಮುಕ್ತಿ ಮಾರ್ಗದ ಕೋಲು ದುಷ್ಟಶಾಸನ
ಕೋಲು ಸುಖತೀರ್ಥಯತಿರಾಯನ ಕರದಂಡು
ಕೋಲು ಕೋಲೆ ಪ.
ಕಂಬುಗೇಹನ ಸೀಳ್ದ ಕಲ್ಲ ಬೆನ್ನಲಿ ತಾಳ್ದ
ಕುಂಭಿನಿ ತಂದ ಕಂಬದಿ ಬಂದನಮ್ಮಯ್ಯ
ಕೊಂಬುವರಿಲ್ಲ ತ್ಯಾಗವೆಂಬ ಬಲಿಯೊತ್ತಿದ
ಡಂಬಕ ಕ್ಷತ್ರೇರ ಕಂಠದರಿ ನೋಡಮ್ಮಯ್ಯ ೧
ಅಂಬುಧಿಯ ದಾಟಿದ ರಂಭೆರೊಳೋಲ್ಯಾಡಿ ದಿ
ಗಂಬರ ತಿರುಗಿ ಪಶುವೇರಿದ ನಮ್ಮಯ್ಯ
ಅಂಬುಜಜಾಂಡ ಒಳಕೊಂಬ ಒಡಲ ಚೆಲುವ
ಕೊಂಬು ಕೊಳಲೂದುವರ್ಥಿಯ ನೋಡಿರಮ್ಮಯ್ಯ೨
ಸರ್ವಜ್ಞರಾಯನ ಪೂರ್ವದ್ವಾದಶಸ್ತವನ
ಕೋರ್ವನೆ ಮೆಚ್ಚಿ ಉಡುಪಿಲಿ ನಿಂದನಮ್ಮಯ್ಯ
ಉರ್ವಿಗುಬ್ಬಸ ಮತವ ಪೂರ್ವಪಕ್ಷವ ಮಾಡಿದ
ಸರ್ವೇಶ ಪ್ರಸನ್ವೆಂಕಟ ಕೃಷ್ಣ ಕಾಣಮ್ಮಯ್ಯ ೩

(ನು. ೨) ತನ್ನ ಜನಕನ ವರಕುಪಕಾರಿಯ
೩೧೩
ಕ್ಷಣಕೆಲವಕೆ ನೆನೆ ಹರಿಯ ಮನವೆ
ಕ್ಷಣಕೆ ಲವಕೆ ಹರಿಯ ಪ.
ಮನಕೆ ಶ್ರುತಿಗಳಿಗೆ ದೊರೆಯ ಶಶಿ
ದಿನಕರ ವಂಶಕೆ ಹಿರಿಯ
ಘನ ಕಲುಷದೊಳವತಾರಿಯ ಪೆತ್ತ
ಜನಕ ತಿರುಮಲೆಯ ದೊರೆಯ ೧
ಕನಕಾಂಗಿಯಳ ಸಿರಿಯ ಭವ
ಕನಕೋದರರಿಗೆ ವರಿಯ
ಮುನಿಕುಲಕಾಂತಿ ಅತಿಪರಿಯ ತನ್ನ
ಜನಕನ ವರಕುಪಕಾರಿಯ ೨
ಜನಕನಳಿಯ ಖಳರರಿಯ
ದಿನದಿನಕೆ ಲಾವಣ್ಯದ ತೆರೆಯ
ಸನಕಾದ್ಯರ ಮನೋಹರಿಯ
ವೈರಿನಿಕರದ ಕದಳಿಗೆ ಕರಿಯ ೩
ಮೀನ ಕಮಠಾದ್ಯವತಾರಿಯ ಭು
ವನಕೊಬ್ಬನೆ ಸುಖಕಾರಿಯ
ಧನು ಕರದಿ ಮುರಿದ ಶೌರಿಯ ಮಾ
ವನ ಕೆಡಹಿದ ಹೊಂತಕಾರಿಯ ೪
ತನ್ನ ಕರುಣಕೆ ನಿತ್ಯ ಗುರಿಯಾಗಿ
ಹನ ಕಾಯುವನು ಪರಂಪರೆಯ
ಎನ್ನ ಕುಲದೈವ ಮೇಲ್ಗಿರಿಯ ಪ್ರ
ಸನ್ನವೆಂಕಟಕೃಷ್ಣ ನಮ್ಮ ಮರೆಯ ೫

೩೧೪
ಕ್ಷುಲ್ಲರಿಗೊದಗದು ಫುಲ್ಲನಾಭನ ಪದ
ಅಲ್ಲ್ಲ್ಯವಧಾರಣ ಬುದ್ಧಿಗಳು
ಬಲ್ಲಿದ ಸುಖತೀರ್ಥರುಲ್ಲಾಸದ ಪಥ
ದಲ್ಲಿಹರಿಗೆ ಪರಸಿದ್ಧಿಗಳು ಪ.
ಆಡುವುದಮಿತವು ಮಾಡುವುದಹಿತೀ
ಶಾಡುವದಾಶೆಗಳಬ್ಧಿ
ನಾಡವಚನ ಉಪಗೂಡಿಸಿ ಠಾಳಿಪ
ಮೂಢರ್ಗೆ ವಿಷಯದ ಲುಬ್ಧಿ
ರೂಢಿಯೊಳಿವ ತನುಗೂಡಿದ ಬಯಕೆಯ ನೀ
ಡಾಡಿದರೆ ಸುಖ ಲಬ್ಧಿ
ಹಾಡಿ ಹರಿಯ ಕೊಂಡಾಡ್ಯನುದಿನಕೋ
ಲ್ಯಾಡಲು ಒಲಿವ ದಯಾಬ್ಧಿ ೧
ಹೀನ ಶ್ರದ್ಧದಿ ಘನ ಸ್ನಾನ ಸುರಾರ್ಚನೆ
ನಾನಾಡಂಬರಕುದಿಸುವ ಗಳಿಕೆ
ಮೌನವೆ ವಧು ಹಣ ಧ್ಯಾನದಾರೋಹಣ
ಜ್ಞಾನದೊಳಜ್ಞಾನದ ಬಳಕೆ
ಏನೊಂದರಿಯರು ಮಾನುಭವಾರ್ಯರು
ಮಾನಪಮಾನ್ಗಳ ವೆಗ್ಗಳಿಕೆ
ಶ್ರೀನಾಥಪದಕೊಪ್ಪು ಪ್ರಾಣವನೊಪ್ಪಿಪ
ಜಾಣರ್ಗೆ ಮುಕುತಿಯ ಕಳವಳಿಕೆ ೨
ತರ್ಕಕೆ ನಿಶಿದಿನ ಕರ್ಕಶ ಭಾವದ
ವರ್ಕಡು ಪಾತಕರ್ಬಾಧಕರು
ಮರ್ಕಟ ಮುಷ್ಟಿಯೊಳು ಮೂರ್ಖ ಪ್ರತಿಷ್ಠೆಯೊಳು
ನರ್ಕ ಪದೇ ಪದೇ ಸಾಧಕರು
ಆರ್ಕೂಡ ಮುಕ್ತರು ಶರ್ಕರ ಸೂಕ್ತರು
ಅರ್ಕ ಸುತೇಜ ಮುಖಾಧೀಶರು
ತರ್ಕೈಪರು ಸಂತರ್ಕಳ ಖಳ ಸಂ
ಪರ್ಕಕೆ ಹೆದರುವ ಭೇದಕರು ೩
ಶಾಸ್ತ್ರ ವಿಚಾರಿಸಿ ಪ್ರಸ್ತಾರದೋರಿ ಸ್ಮ
ರಾಸ್ತ್ರಕೆ ಮಗ್ಗುತ ಸೋಲುವರು
ಸ್ವಸ್ಥ ಮನಿಲ್ಲದೆ ದುಸ್ತರ ಬೋಧ ಸ
ಮಸ್ತರೊಳಗೆ ಬೋಧಿಪರವರು
ವಿಸ್ತರ ತತ್ವ ಪ್ರಶಸ್ತ ಬೀರುತ್ತ ಪ
ರಸ್ತ್ರೀ ಜನನಿಸಮನೆಂಬುವರು
ಅಸ್ತಮಯೋದಯದಿ ವ್ಯಸ್ತವಿದೂರ ಹೃದ
ಯಸ್ಥ ಹರಿಯನೆ ಚರಿಸುವರು ೪
ಒಂದರಿದವರು ನೂರೊಂದನರಿತವರಾ
ರೆಂದತಿಶಯಮದ ವಿಹ್ವಲರು
ಕುಂದು ಕುಚೇಷ್ಟೆ ವಿನಿಂದೆಯ ಧೃಷ್ಟ ಮು
ನೀಂದ್ರ ದ್ರೋಹದ ಗುಣ ಸಂಕುಲರು
ಮಂದರಧರನವರಂದನುಭವದಿವ
ನೊಂದನರಿಯರತಿ ನಿರ್ಮಳರು
ತಂದೆ ಪ್ರಸನ್ವೆಂಕಟೇಂದ್ರನ ಕಿಂಕರ
ರೆಂದೆಂದಿಗಪವಾದಕೊಳಗೊಳರು ೫

ಸತ್ಯಾಧಿರಾಜರು: ಇವರು
೧೭೨
ಗುರು ಸತ್ಯಾಧಿರಾಜ ಸುಜನ ತಾರಾರಾಜ
ಪೊರೆ ಎನ್ನ ಕಲ್ಪಭೂಜ
ಸ್ಮರನಯ್ಯನ ಸಿರಿಚರಣಕಮಲ ಭೃಂಗ
ವಿರತ್ಯಾದಿ ಗುಣೋತ್ತುಂಗ ಶುಭಾಂಗ ಪ.
ಕರಿವಿಂಡು ಶಂಕೆಯಿಲ್ಲದೆ ತಿರುಗುತ ಕೇ
ಸರಿಯ ಕಂಡೋಡುವಂತೆ
ಧರೆಯೊಳು ದುರ್ವಾದಿಗಳು ನಿನ್ನಿದಿರು ಸಂ
ಚರಿಸಲಂಜುವರಮ್ಮಮ್ಮ ಮಹಿಮ ೧
ಕಾಲವರಿತ ಸ್ನಾನ ಮೌನ ಜಪ ಸೃಕ್
ಜಾಲ ವ್ಯಾಖ್ಯಾನಗಳ
ಪೇಳಿ ಶ್ರೀರಾಮನ ಮೆಚ್ಚಿಸುವ ಪೂತ
ಶೀಲ ತತ್ವಕಲ್ಲೋಲ ವಿಶಾಲ೨
ಹಾಟಕಕುವಧುಕಾಂಕ್ಷೆರಹಿತ ಪ್ರಸನ್ನವೆಂ
ಕಟಪತಿ ಪದದ್ವಯವ
ತ್ರುಟಿಯೊಳಗಲ ಸತ್ಯಾಭಿನವ ತೀರ್ಥಕರ
ಕಟ ಸಂಜಾತ ಸುಪ್ರೀತ ೩

(ನು. ೨) ಅಕ್ಷೋಭ್ಯತೀರ್ಥರು
೧೭೧
ಗುರುಪದವ ನಂಬಿ ಹರಿಪದವ ಕಾಂಬೆ
ಮರುತ ಸಂತತಿಗೆ ನಮಿಸುವೆ ನಮಿಸುವೆ ಪ.
ಹರಿಪದಕೆ ಅಚ್ಛಿನ್ನ ಭಕುತಿ ಪರಿಪೂರ್ಣ ಶ್ರೀ
ಹರಿಕಾರ್ಯದಲಿ ಧುರಂಧರನೆನಿಸುವ
ಹರಿಭೃತ್ಯಜನಕೆ ಹಿತಕಾರಿ ಔದಾರಿ ಜಗ
ದ್ಗುರು ಪರಮಹಂಸ ಮಧ್ವತ್ರಿರೂಪಿಯ ೧
ತತ್ವಸಾಗರ ತಿಮಿಂಗಿಲ ಪದ್ಮನಾಭಮುನಿ
ಕರ್ತ ಮೂಲರಾಮ ಮೆಚ್ಚಿದ ನರಹರಿಯ
ಮತ್ರ್ಯ ಮಾಯಿಜನ ತುಹಿನರವಿಭ
ಮಾಧವಾಭಿಜ್ಞ ಅಕ್ಷೋಭ್ಯತೀರ್ಥೆನಿಪ ಮಲ್ಲರ ೨
ಸುಖತೀರ್ಥ ಗಂಭೀರ ವಾಕ್ಯವಾರಿಧಿಚಂದ್ರ
ಅಕಳಂಕ ಜಯವರ್ಯ ಯತಿಸಮೂಹ
ಮಕುಟಮಣಿ ವಿದ್ಯಾಧಿರಾಜ ನಿರ್ಮಲಕಾಯ
ಸುಕವೀಂದ್ರ ವಾಕ್ಸಿದ್ಧ ವಾಗೀಶರ ೩
ಗುರುಭಕುತಿ ನಿಸ್ಸೀಮ ರಾಮಚಂದ್ರಾಖ್ಯಯತಿ
ಗುರು ಆಜ್ಞಾಪಾಲ ವಿದ್ಯಾನಿಧಿಗಳ
ದುರುವಾದಿಗಜಮೃಗಪ ರಘುನಾಥ ತೀರ್ಥ ಶ್ರುತಿ
ಪರಮಾರ್ಥ ಪರಿಚರ್ಯ ರಘುವರ್ಯರ ೪
ವೈರಾಗ್ಯ ವೈಭವಾನ್ವಿತ ರಘೋತ್ತಮ ಮುನಿಪ
ವೈಷ್ಣವ ತತ್ವಜ್ಞ ವೇದವ್ಯಾಸರ
ಕೈವಲ್ಯಮಾರ್ಗಜ್ಞ ವಿದ್ಯಾಪತಿಯು ಹೊನ್ನ
ಮೈಯ ಮರುತಂಶ ವಿದ್ಯಾಧೀಶರ ೫
ವೇದಾಮೃತಾಬ್ಧಿಯೊಳು ಮಗ್ನ ವೇದನಿಧಿಗಳ
ಸಾಧುನಿಕರಲಲಾಮ ಸತ್ಯವ್ರತರ
ಬಾದರಾಯಣ ರಾಮಪಾದರತ ಸತ್ಯನಿಧಿ
ಮೇದಿನಿಗೆ ಕಲ್ಪತರು ಸತ್ಯನಾಥರ ೬
ಶ್ರೀ ಸತ್ಯನಾಥ ರತ್ನಾಕರ ಕರೋದ್ಭವ ಕುಮುದ
ಅಶೇಷಯಾಚಕ ಸುಖದ ಸುಗುಣ
ಶ್ರೀ ಸತ್ಯಾಭಿನವ ಮುನಿ ಭಾಗವತೇಢ್ಯಜ್ಞ
ಶಾಶ್ವತ ಪರೋಕ್ಷ ಗುರುಪದನಿಷ್ಠರ ೭
ದುಷ್ಟ ಪರವಾದಿ ನರಕುಲಿಶ ಜಿತಕಾಮ ತಪೋ
ನಿಷ್ಠ ವಿದ್ಯೋನ್ನತ ವಿಚಾರಶೀಲ
ಶಿಷ್ಟ ಜನಪಾಲ ಶ್ರುತಿ ಜಲಾಭ್ಧಿ ಕಲ್ಲೋಲ
ಇಷ್ಟಾರ್ಥದಾತ ಸತ್ಯಾಧೀಶರ ೮
ಕೃಷ್ಣ ಪಾದಾಸಕ್ತ ಗುರುಕೃಪಾಸಂಯುಕ್ತ
ಇಷ್ಟಾರ್ಥದಾತ ಸತ್ಯಾಧಿರಾಜರ
ಸೃಷ್ಠೇಶ ಪ್ರಸನ್ನವೆಂಕಟಪತಿಯ ಅನವರತ
ತುಷ್ಟೀಕರಿಸುವ ವಾಯುಮತ ಮಹಿಮರ ೯

(ನು. ೨) ಅಂಧಕಾತ್ಮಜ ತೃಣಸುರಧೇನು
೩೮೩
ಗೆಲಿಸು ಭವವ ಗುರು ಹನುಮಂತ
ಖಳಜಲಧಿ ವಡವಾನಳ ಬಲವಂತ ಪ.
ದಾಶರಥಿüಯ ಪದವನೆ ನಂಬಿ ಇತ
ರಾಶೆಯಿಲ್ಲದೆ ಭಕ್ತಿರಸ ತುಂಬಿ
ತೋಷವೃತ್ತಿಗೆ ಕಡೆಮೊದಲಿಲ್ಲ ಕ್ಷುದ್ರ
ದೇಶ ಕೋಶದೆಣಿಕೆ ನಿನಗಿಲ್ಲ ೧
ಅಂಧಕಾತ್ಮಜ ತೃಣ ಸುರಧೇನು ಗೋ
ವಿಂದಾಂಘ್ರಿಬಿಸಜ ಮಧುಪ ನೀನು
ಸಂಧಕಾಯನ ಸದೆದ್ಯೈ ದೇವ ದಯಾ
ಸಿಂಧು ವೈಷ್ಣವಜನ ಸಂಜೀವ ೨
ಶ್ರೀ ಸತ್ಯವತಿಜನ ನೇಮದಲಿ ಹರಿ
ದ್ವೇಷಿಗಳನು ಗೆದ್ದೆ ಭೂಮಿಯಲಿ
ಶ್ರೀ ಸುಖತೀರ್ಥ ಭೀಮ ಕಪಿವರದ ಸ್ವಾಮಿ
ಪ್ರಸನ್ನವೆಂಕಟೇಶ ಭೃತ್ಯಗಣಮುದದ ೩

೨೨೩
ಗೋವಿಂದ ಗೋವಿಂದ ಗೋವಿಂದ ನನ್ನ
ತಾಯಿ ತಂದೆ ಗೋವಿಂದ ಪ.
ತಿರುಗಿ ಭವದಲಿ ಗೋವಿಂದ ವೃಥಾ
ಮರುಗಿ ಬಳಲಿದೆನೊ ಗೋವಿಂದ
ಕರಗಿ ತಾಪದಿ ಗೋವಿಂದ ಸಿಡಿ
ಲೆರಗಿಸಿಕೊಂಡೆನೊ ಗೋವಿಂದ ೧
ಎಚ್ಚರ ಹಾರಿತು ಗೋವಿಂದ ನಾ
ಮೆಚ್ಚಿದೆ ವಿಷಯಕೆ ಗೋವಿಂದ
ಹುಚ್ಚು ಮಾಡಿತು ಮನ ಗೋವಿಂದ ನಿ
ನ್ನುಚ್ಚರಣಡಗಿತು ಗೋವಿಂದ ೨
ಆಸೆಯ ಬಿಡಿಸೈ ಗೋವಿಂದ ನಿನ್ನ
ದಾಸರೊಳಿರಿಸೈ ಗೋವಿಂದ
ಪ್ರಸನ್ನವೆಂಕಟ ಗೋವಿಂದ ಭವ
ಘಾಸಿಯ ತಪ್ಪಿಸು ಗೋವಿಂದ ೩

೨೨೪
ಚಂಚಲಿಸದಿರು ನೀನು ಚತುರನಾಗು
ವಂಚಿಸದೆ ಸಕಲವೊಪ್ಪಿಸು ಹರಿಗೆ ಮನವೆ ಪ.
ಆರು ನಿನ್ನವರೆಂಬೆ ಅವರಗಲಿದರು ಕಡೆಗೆ
ಭೂರಿಸಂಚಿತ ಸಂಪದೆರವಾಯಿತು
ಜಾರುತಿವೆ ಕ್ಷಣಲವಗಳೀಗಾಗೆ ತಿಳಿಯದು
ನಾರಸಿಂಹನ ನಂಬು ನಿಷ್ಠೆಯಲಿ ಮನವೆ ೧
ಅಲ್ಪಸುಖಕಾಗಿ ನೀ ಅನೇಕ ಸುಖ ಮರೆವರೆ
ಕಲ್ಪಕಲ್ಪಕೆ ನಿರಯವುಣಲಿಬಹುದೆ
ಅಲ್ಪರುಪದೇಶದಲಿ ಭ್ರಾಂತನಾಗದೆ ಶೇಷ
ತಲ್ಪನ್ನ ಮರೆಹೋಗು ತಡೆಯದಲೆ ಮನವೆ ೨
ನಿನ್ನಿಂದ ಭವ ಬಂಧನವು ಮೋಚನವು ನೋಡು
ನಿನ್ನಿಂದ ಪ್ರಸನ್ವೆಂಕಟೇಶನೊಲುಮೆ
ಇನ್ನೆನ್ನ ದಣಿಸದಿರು ಇದರಿಂದ ಮೀರಿದರೆ
ಘನ್ನಗುರು ಮಧ್ವೇಶನಾಣೆ ನಿನಗೆ ೩

೫೧
ಚಪ್ಪಾಳೆನಿಕ್ಕೆಲೊ ಕೃಷ್ಣಮ್ಮ ಚಪಲ ಬಾಲ ರಂಗಮ್ಮ
ಕಾಪುರುಷರ ಚಪ್ಪಾಳೆ ಮಾಳ್ಪ ಚಪ್ಪಾಳೆ ಪ.
ತುಪ್ಪ ಬೆಣ್ಣೆ ಪಾಲನೊಲ್ಲೆ ಹೆಪ್ಪನಿಟ್ಟ ದಧಿಯೊಲ್ಲೆ
ಗೋಪಿಯರೊಡನೆ ಕೇಳಿಗೊಪ್ಪಿದ ಚಪ್ಪಾಳೆ ೧
ಪಾಯಸವುಣ್ಣಲೊಲ್ಲೆ ಕಜ್ಜಾಯ ಸಕ್ಕರೆಯನೊಲ್ಲೆ
ಆಯತಾಕ್ಷಿಯರ ಮೇಲೆ ಸ್ನೇಹದ ಚಪ್ಪಾಳೆ ೨
ತನಿವಣ್ಣ ಮೆಲ್ಲಲೊಲ್ಲೆ ಮನೆಯ ಸೇರಲೊಲ್ಲೆ ಪ್ರ
ಸನ್ನ ವೆಂಕಟಾದ್ರಿಲಿ ಕುಣಿವ ಚಪ್ಪಾಳೆ ೩

೨೨೫
ಚಿಂತೆಗೆಣಿಕೆ ಇಲ್ಲದಂತಾಗಿ ಎ
ನ್ನಂತರಂಗದ ಕ್ಲೇಶಕೆಂತೌಷಧ ರಂಗ ಪ.
ಒಂದು ದೊರೆತರೆ ಇನ್ನೊಂದಾಗಲುಬೇಕು
ಮಂದಿರವಿರಲು ಮೇಲಟ್ಟ ಬೇಕು
ಮಂದಮತಿ ಸತಿ ಇನ್ನೊಬ್ಬ ಸುಗುಣಿ ಬೇಕು
ಎಂದೆಂದು ಬೇಕೆಂಬ ನುಡಿಗುಂದದು ರಂಗ ೧
ಅವಭೋಗಿ ಅವಗಿಂತ ಮೀರ್ವೆನೆಂಬುವ ಹವಣು
ಅವನ ವಿದ್ಯಕೆ ಹೆಚ್ಚಲೆಂಬ ಹವಣು
ತವಕದಿ ಸಂಪದ ಮೇಳವಿಸುವ ಹವಣು
ಅವಿರಳ ಹವಣಕೆ ಕಡೆಗಾಣೆ ರಂಗ ೨
ರೂಢಿಲಿ ಸಿರಿವಂತರ ಮುಂದೆ ಖೋಡಿ ಮಾ
ತಾಡಿ ಗುದ್ದಿಸಿಕೊಂಡ ನರನಂತೆ
ನೋಡ ಪ್ರಸನ್ವೆಂಕಟೇಶ ಅಲ್ಲದ ಕೃತ್ಯ
ಮಾಡಿ ಕ್ಲೇಶವನುಂಡೆ ನಿನ್ನ ಬೇಡದೆ ರಂಗ ೩

೨೨೬
ಚಿಂತೆಯ ಪರಿಹರಿಸೊ ತಿಮ್ಮಯ್ಯ
ಚಿಂತಾಯಕ ಕಂತು ಕಮಲೆಯ ರಾಯ ಪ.
ಸಾಧ್ಯವಲ್ಲದುದನ್ನು ಹಂಬಲಿಸಿ
ಬುದ್ಧಿಭ್ರಾಂತಿಲಿ ಬಲು ಸುಖ ಬಯಸಿ
ಕದ್ದ ಕಳ್ಳನಂತೆ ವೃಥಾ ಕುದಿದೆ
ಮದ್ದು ಮೆದ್ದಿಲಿಯಂತೆ ಬಳಲಿದೆ ೧
ತಿಳಿದು ಮಾಯದ ಬಲೆಗೆ ಮೈಗೊಟ್ಟೆ
ಬೆಲೆಗಟ್ಟಿ ವೃಥಾ ಹುಚ್ಚು ದೈನ್ಯಬಟ್ಟೆ
ಆಲಿಸಿ ಮೋಕ್ಷದ ನೆಲೆಯ ಕೇಳದೆ ನಾ
ಕಳವಳಗೊಂಬೆ ಕರುಣಾಸಂಪನ್ನ ೨
ಚಿಂತೆಗೆ ಚಿಂತೆ ಸಹಾಯವಾಗಿ
ಅಂತರಂಗದ ಕ್ಲೇಶ ಹೇಸಿತು ಬಾಗಿ
ಶಾಂತಮೂರ್ತಿ ಪ್ರಸನ್ವೆಂಕಟೇಶ ಏ
ಕಾಂತದಾಸರ ನೆಳಲನೆ ತೋರಿಸೊ ೩

೫೨
ಚಿಣ್ಣರೊಡನಾಡನಡೆದ ಮುದ್ದುರಂಗ ಮುದ್ದು ಕೃಷ್ಣ ಪ.
ಇಟ್ಟು ಹಣೆಯೊಳು ಉಗುರು ನಾಮವ ಗೋವ
ಗಟ್ಟಿಗೆಯನು ಕರದೊಳು ಪಿಡಿದು
ಪುಟ್ಟ ಕಂಬಳಿ ಹೊದ್ದು ಪದಕೆ ಪಾದುಕೆ
ಮೆಟ್ಟಿ ಅಣ್ಣ ಬಲರಾಮ ನಡೆಯೆಂದು ೧
ಆಡಲೊಲ್ಲೆನೆಂಬ ಮಕ್ಕಳ ಮನ್ನಿಸಿ
ಕೂಡಿಕೊಂಡು ಅಣ್ಣ ತಮ್ಮನೆಂದು
ಹಾಡುತ ಕುಣಿದು ಚಪ್ಪಾಳೆ ಹೊಯಿದಾಡುತ
ಓಡ್ಯಾಡಿ ಅಮ್ಮನ ಮಾತ ಕೇಳದೆ ಕೃಷ್ಣ ೨
ಚಿಣ್ಣಿ ಪೊಂಬಗರ್ಚೆಂಡು ಗುಮ್ಮ ಗುಸಕು ಹಬ್ಬೆ
ಅಣ್ಣೆಕಲ್ಲು ಹಲ್ಲೆ ಗಜಗ ಗೋಲಿ
ಕಣ್ಣುಮುಚ್ಚಾಲೆ ಮರನೇರಾಟ ನೀರಾಟ
ಸಣ್ಣರೊಳಾಡಿ ಸೋಲಿಪೆನೆಂಬ ತವಕದಿ ೩
ರಾಜಿಪ ರಾಜಬೀದಿಲಿ ನಿಂದು ನೋಡುವ
ರಾಜಮುಖಿಯರೊಳು ಸೆಣಸ್ಯಾಡುತ
ರಾಜಕುಲಾಗ್ರಣಿ ಸರ್ವಭೂಷಣದಿ ವಿ
ರಾಜಿತನಾಗಿ ಗೋಳಿಡುತ ಮುರಾರಿ ೪
ಜಗವ ಪುಟ್ಟಿಸಿ ನಲಿದಾಡುವಾಟವು ತ
ನಗೆ ಸಾಲದೆಂದು ಆವಹಳ್ಳಿಲಿ
ಬಗೆ ಬಗೆ ಲೀಲೆಯ ತೋರಿ ಗೋಗಾವರ್ಗೆ
ಸುಗತಿನೀವೆನೆಂದು ಪ್ರಸನ್ವೆಂಕಟ ಕೃಷ್ಣ ೫

೩೮೪
ಚಿತ್ತಿಟ್ಟು ನಮಿಸುವೆ ನಿಮ್ಮ ಮೂಲ
ಚೈತ್ಯದಲಿಹ ಚೆನ್ನಿಗ ಬಲ ಹನುಮ ಪ.
ಮೊದಲೆ ರಾಮರ ಭಟನಾಗಿ ಅಂದು
ಪದ್ಮದೇವಿಯ ಚರಣಕೆ ತಲೆಬಾಗಿ
ಮುದದಿ ಮುದ್ರಿಕೆಯ ನೀ ಕೊಟ್ಟೆ ಬಲು
ಮದ ಸೊಕ್ಕಿದಸುರನ ಪುರವನೆ ಸುಟ್ಟೆ
ಚೂಡಾಮಣಿಯ ತಂದಿಟ್ಟೆ ಬಲು ಹರುಷವ ಕೊಟ್ಟೆ ೧
ಕೊಬ್ಬಿದ ಕುರುಪತಿ ಬಲದಿ ಪೊಕ್ಕು
ಬೊಬ್ಬೆಯನಿರಿದು ಶೂರರ ಶಿರ ಹರಿದೆ
ಆರ್ಭಟವನು ತೋರಿದೆ ಬಲು
ದುರ್ಬುದ್ಧ್ಯ ದುಶ್ಯಾಸನನ್ನೋ
ಡಲ್ಬಗಿದೆ ಖಳರ ಹಲ್ಲುಮುರಿದೆಮಪುರಕೆ ಕಳುಹಿದೆ ೨
ಪರಮಪುರುಷ ಹರಿಯೆಂದು ಮಿಕ್ಕ
ಸುರರು ಈತನ ದಾಸಾಂಕಿತರಹುದೆಂದು
ಅರುಹಿದೆ ಶ್ರುತಿ ಇತಿಹಾಸ ಅಹಿ
ಗಿರಿಯ ಪ್ರಸನ್ವೆಂಕಟೇಶನ ದಾಸ ತುಂಗಾತೀರವಾಸನೆ ಸಲಹೊ ಮುಖ್ಯೇಶ ೩

(ನು.೨) ಕೌಮಾರ
೪೪೭
ನಾರದ ಕೊರವಂಜಿ

ಜಯ ಜಯ ಜಯ ಜಯ ಜಯ ಜಯ ಪ.
ಶ್ರೀ ರಮಾರಮಣ ಜಯ ಶ್ರೀಕರ ಗುಣಾಬ್ಧಿ ಜಯ
ಶ್ರೀ ರುಕ್ಮಿಣೀಶ ಜಯ ಶ್ರೀ ಶ್ರೀನಿವಾಸ ಜಯ
ನೀರಚರ ಕಮಠ ಕಿಟಿ ನೃಹರಿ ವಟು ಭೃಗುಜ ರಘು
ವೀರ ಯದುಪತೆ ಬುದ್ಧ ಕಲ್ಕಿ ಸ್ವರೂಪಾ ಜಯ ಜಯ ೧
ಶ್ರೀ ಮತ್ಕಪಿಲ ಋಷಭ ಯಜ್ಞದತ್ತ ಕಂಸ್ತುಘ್ನ(?)
ಕೌಮಾರ ವ್ಯಾಸ ಹಯಗ್ರೀವ ಶ್ರೀಮದ್ದಜಿತ ಜಯ
ಸ್ವಾಮಿ ಮಹಿದಾಸ ತಾಪಸ ಉರುಕ್ರಮ ಶೂಲಿ
ವ್ಯಾಮೋಹ ಧನ್ವಂತರೆ ಹಂಸ ಶುಕ್ಲಾ ಜಯ ಜಯ ೨
ಆನಂದ ಜ್ಞಾನ ಬಲಮಯ ಚಿತ್‍ಸ್ವರೂಪ ಜಯ
ಅನಂತ ಮಹಿಮ ವೈರಾಜ ಪುರುಷೋತ್ತಮ ಜಯ
ಅನಂತ ಬ್ರಹ್ಮ ರುದ್ರೇಂದ್ರಾದಿ ಸೇವ್ಯ ಜಯ
ಅನಂತ ಜೀವಗ ಪ್ರಸನ್ವೆಂಕಟ ಕೃಷ್ಣಾ ಜಯ ಜಯ ೩

ಶರಣು ಮಂಗಳ ದೇವತೇ ವರ
ಶರಣು ಚಿತ್ಸುಖ ಸಾಗರ
ಶರಣು ಅಗಣಿತ ಗುಣ ಶುಭಾಕರ
ಶರಣು ವೆಂಕಟ ಮಂದಿರ ೪
ದುರುಳ ದೈತ್ಯರು ಸೊಕ್ಕಿ ವರದಲಿ
ಧರೆಗೆ ಕಂಬನಿ ತರಿಸಲು
ತ್ವರದಿ ಸುರರಿಗೆ ಮೊರೆಯನಿಟ್ಟಳು
ಧರಿಸಲಾರೆನು ಎನುತಲಿ ೫
ಸರಸಿಜೋದ್ಭವ ಭವ ಪುರುಹೂತ
ರರಿದು ಚಿಂತಿಸಿ ಮನದಲಿ
ವರ ಪಯೋನಿಧಿಗೈದಿ ಸ್ತುತಿಸಲು
ಕರುಣದಲಿ ಅವತರಿಸಿದೆ ೬
ಬಂದು ಧರ್ಮದ ವೃಂದ ರಕ್ಷಿಪೆ
ನೆಂದು ದೀಕ್ಷೆಯವಿಡಿದು ನೀ
ಅಂದಗೆಡಿಸುತ ದನುಜನಿಕರವ
ಹೊಂದಿ ದ್ವಾರಕ ನಗರವ ೭
ಇಂದಿರೆಯು ನಿನ್ನಿಚ್ಛೆಯನುಸರ
ದಿಂದ ಕ್ರೀಡಿಪಳನುದಿನ
ಮಂದ ಜನರಿಗೆ ಮೋಹಿಸುತ ನರ
ರಂದದಲಿ ತೋರಿದೆ ಹರೆ ೮
ದೇವಋಷಿ ನಾರದನು ಶ್ರೀಪದ
ಸೇವೆಗೂೀಸುಗ ಕೊರವಿಯ
ಭಾವದಲಿ ಜಗದಂಬೆ ರುಕ್ಮಿಣಿ
ದೇವಿಯಳ ಬಳಿಗೈದು ತಾ ೯
ದೇವ ನಿನ್ನಯ ಬರವ ಬೆಸಸಿದ
ಕೋವಿದತೆಯನು ಪೇಳುವೆ
ಶ್ರೀವರ ಪ್ರಸನ್ವೆಂಕಟ ಕೃಷ್ಣ
ಪಾವನ ಮತಿಯ ಕರುಣಿಸೊ ೧೦

ಶ್ರೀ ರಂಭೆ ಭೀಷ್ಮಕನ ಭೂರಿ ಪುಣ್ಯದ ಗರ್ಭ
ವಾರಿಧಿಯಲ್ಲಿ ಜನಿಸಿ
ನಾರಿ ರುಕ್ಮಿಣಿಯೆಂಬ ಚಾರುನಾಮದಿ ಕಳೆ
ಯೇರಿ ಬೆಳೆದಳಂದವ್ವೆ ೧೧
ಜನನಿ ಜನಕರೆಲ್ಲ ತನುಜೆಯ ಹರಿಯಂಘ್ರಿ
ವನಜಕೆ ಕೊಡಬೇಕೆನ್ನೆ
ನೆನೆದು ತಾನೊಂದು ರುಕ್ಮನು ದಮಘೋಷನ
ತನುಜಗೆ ತಂಗಿಯನು ೧೨
ಕೈಗೂಡಿಸುವೆನೆಂಬ ವೈಭವದಲ್ಲಿರೆ
ವೈಮನಸದೊಳು ಕನ್ಯೆಯು
ಸುಯ್ಗರಿಯುತ ಮುರವೈರಿ ಪ್ರಸನ್ವೆಂಕಟಕೃ
ಷ್ಣಯ್ಯನೊಳ್ ಮನವಿಟ್ಟಿರೆ ೧೩

ದನುಜ ಮಥನ ಹರಿಸೇವೆ ಇದೆಂದು
ಅನಿಮಿಷಮುನಿ ಧರೆಗಿಳಿದು ತಾ ಬಂದು
ವನಿತೆ ಕೊರವಂಜಿಯ ವೇಷವ ಧರಿಸಿ
ಜನಪ ಭೀಷ್ಮಕನೋಪವನದಲ್ಲಿ ನೆಲಸಿ ೧೪
ಹಲವು ಕೊರವಿಯರ ಕೂಡಿ ಸಿಂಗರದಿ
ಬೆಲೆ ಇಲ್ಲದುಡಿಗೆ ತೊಡಿಗೆ ಇಟ್ಟು ಮುದದಿ
ಇಳೆಯ ಜನರು ಮೋಹಿಸುವ ಪರಿ ಇಹಳು
ಕೆಳದೇರ ಗಡಣದಲಿ ಚೆಲುವೆ ಒಪ್ಪಿದಳು ೧೫
ಮಂಜುಗಾವಿಯ ಸೀರೆ ನಿರಿತೆಗೆದುಟ್ಟು
ಕೆಂಜೆಡೆ ಬಿಟ್ಟೋರೆದುರುಬಿನ ಕಟ್ಟು
ಪಂಜಿನೋಲೆಯ ಮೂಗುತಿಯ ಬಲಿದಿಟ್ಟು ಗುಲ
ಗಂಜಿ ಹೊಂದಾಳೆ ಸರಗಳಳವಟ್ಟು ೧೬
ಕಂಚುಕಪುಟ ಬಿಗುಪೇರಿದ ಕಟ್ಟು
ಚಂಚಲನೇತ್ರಕಂಜನ ಕಾವಲಿಟ್ಟು
ಮಿಂಚುವಾಭರಣಿಟ್ಟು ಪ್ರಸನ್ವೆಂಕಟ ಕೃಷ್ಣ
ನಂ ಚಿಂತಿಸಿ ಜಯ ಜಯಯೆಂದಳು ಕೊರವಿ ೧೭

ಅಡಿಗಡಿಗೆ ಝಣ ಝಣರೆಂದು ನಡೆತಂದು ನಡೆತಂದು
ಮಡದಿ ರಾಜಬೀದಿಯಲಿ ನಿಂದು ೧೮
ಮೃಡಗಹಿತನ ಪಟ್ಟದಾನೆ ಮಂದಗಮನೆ ಮಂದಗಮನೆ
ಕಡುಮೌನಿ ಜನರ ಮೋಹಿನೆ ೧೯
ಚಪಲ ನೋಟಕೆ ನಾಗರಿಕರು ನೋಟಕರು ನೋಟಕರು
ಲಿಪಿಯ ಚಿತ್ರದೊಲು ನಿಂತಿಹರು೨೦
ನಿಪುಣೆ ಕೊರವಿ ಶ್ರೀಪ್ರಸನ್ವೆಂಕಟ ಕೃಷ್ಣನ್ನ ಕೃಷ್ಣನ್ನ
ಶ್ರೀಪ್ರ್ರಸಾದವ ಬೇಡುತಿದ್ದಳಣ್ಣ ೨೧

ಬೆಡಗಿನ ಗಮನದಿ ಎಡಬಲಕೊಲಿದು
ಕಡಗ ಶಂಖದ ಬಳೆ ನುಡಿಸುತ ನಡೆದು
ಅಡಿಗೊಮ್ಮೆ ತಿರುಮಲ ಒಡೆಯನ ನೆನೆದು ತ
ಕ್ಕಡ ಧಿಗಿಧಿಮಿಕೆಂದು ಜಡಿದು ತಾಳ್ವಿಡಿದು ೨೨
ತಿಗುರಿದ ಗಂಧ ಸೆಳ್ಳುಗುರಿನ ನಾಮ
ಮೃಗಮದದ ಬೊಟ್ಟಿನ ನಗೆಮೊಗದ ಪ್ರೇಮ
ಮಗುವನುಡಿಯಲೆತ್ತಿ ಜಗಚ್ಚರಿಯಮ್ಮ
ಹೆಗಲ ರನ್ನದ ಬುಟ್ಟಿ ಮುಳ್ಳುವಿಡಿದಮ್ಮ ೨೩
ನಗರದ ಜನದ ಕಣ್ಣಿಗೆ ಕೌತುಕೆನಿಸಿ
ಬಗೆ ಬಗೆ ಒಗಟು ಮಾತುಗಳನುಚ್ಚರಿಸಿ
ನಗರಾಧಿಪತಿಯ ಮನೆಯ ಕೇಳಿ ನಡೆದು
ಮಿಗೆ ಪ್ರಸನ್ವೆಂಕಟ ಕೃಷ್ಣಗೆ ಕೈಮುಗಿದು ೨೪

ಬ್ರಾಹ್ಮರ ಕೇರಿಗೆ ಬಂದಳಾ ಕೊರವಿ ಪರ
ಬ್ರಹ್ಮನ ಗುರುತ ಕೇಳುತ್ತ
ನಮ್ಮಮ್ಮ ನಮ್ಮವ್ವೆ ನಮ್ಮಜ್ಜಿ ನೀಡೆಂದು
ಸನ್ಮಾನದಾಲಯವ ಪೊಗುತಾ ೨೫
ಇಂತಪ್ಪ ಸೊಬಗುಳ್ಳ ಕೊರವಿಯನು ಕಂಡು ನೃಪ
ನಂತಃಪುರದ ಸತಿಯರೈದಿ
ಕಂತುವಿನ ಜನನಿಗೆ ಕರವೆರಡು ಮುಗಿದು ಏ
ಕಾಂತ ಪೇಳಿದರು ಚೆನ್ನಾಗಿ೨೬
ಓರ್ವ ಕಾಲಜ್ಞಾನ ಪೇಳ್ವ ಕೊರವಮ್ಮ ನ
ಮ್ಮೂರ್ವಳಗೆ ತಿರುಗುತಿಹಳಮ್ಮ
ಸರ್ವೇಶ ಪ್ರಸನ್ವೆಂಕಟ ಕೃಷ್ಣನಾಗಮದ
ನಿರ್ವಚನ ಕರೆಸಿ ಕೇಳಮ್ಮ ೨೭

ಬಂದಳು ನೃಪನರಮನೆಗೆ ತಾ
ನಿಂದಲ್ಲಿ ನಿಲ್ಲದೆ ಕಿಲಿಕಿಲಿ ನಗುತಾ ಕುಲು ಕುಲು ನಗುತಾ ಪ.
ಬಂದ್ಹೇಳಿದ ನುಡಿಗೇಳ್ದು ಪೂ
ರ್ಣೇಂದುವದನೆ ಮುದತಾಳ್ದು
ಮಂದಿರಕೆ ಕರೆಸಿದಳು ನಲ
ವಿಂದಲಿ ಬಲು ಬೆಡಗಿನ ಕೊರವಂಜಿ೨೮
ತಳಪಿನ ಮುತ್ತಿನ ಕಟ್ಟು ಶುಭ
ತಿಲಕದ ಹಚ್ಚೆಯ ಬಟ್ಟು
ಅಲುಗುವ ಮೂಗುತಿಯಬಲೆ ಸಲೆ
ಬಳುಕುತ ಬಡನಡುವಿನ ಚಪಲೆ ೨೯
ಬಟುಗಲ್ಲದ ಮಕರಿಕಾಪತ್ರ ಪವಳ
ದುಟಿ ದಾಡಿಮರದ ಗೋತ್ರ
ವಿಟ ಮೃಗ ಸ್ಮರ ಶರ ನೇತ್ರ ಕೊರ
ಳ್ದಟಿಸುವ ಮಣಿ ಮುತ್ತಿನ್ಹಾರಗಳೊಲಪಲಿ೩೦
ಇಟ್ಟೆಡೆ ಮೊಲೆಯ ಪಟ್ಟಿಕೆಯು ಶ್ರೋಣಿ
ಮುಟ್ಟುವ ಮುಡಿಯ ಮಾಲಿಕೆಯು
ಬಿಟ್ಟ ಮುಂಜೆರಗಮಲಿಕೆಯು ಕ
ಣ್ಣಿಟ್ಟ ಮೃಗಕೆ ಭ್ರೂಸ್ಮರಕಾರ್ಮುಕೆಯು೩೧
ತೆಳ್ವೋದರದ ತ್ರಿವಳಿಯ ಜಗುಳಿ
ಬೀಳ್ವ ಮಣಿಮುಕ್ತಾವಳಿಯ
ಸಲ್ಲಲಿತ ಸಂಪಿಗೆ ಕಳೆಯ ಗೆಲ್ವ
ಚೆಲ್ವೆ ಕೊರವಿ ಪುರವೀಥಿಯ ಬಳಿಯ ೩೨
ಕಿಣಿ ಕಿಣಿ ರವದ ಕಿಂಕಿಣಿಯು
ಝಣ ಝಣತ್ಕಾರಿಪಂದುಗೆ ಮಣಿಯು
ಕಣಿ ಕಣಿ ಒಯ್ಯೆಂಬೊಕ್ಕಣಿಯು ಕುಚ
ಕುಣಿ ಕುಣಿಸಿ ನಟಿಪ ನಡೆವಾಂಗನೆಯು ೩೩
ಸಿಂಗನ ಉಡಿಯಲ್ಲಿ ಕಟ್ಟಿ ಉ
ತ್ಸಂಗದೊಳೊಲಪಿನ ದಿಟ್ಟಿ
ರಂಗ ಶ್ರೀ ಪ್ರಸನ್ವೆಂಕಟ ಕೃ
ಷ್ಣಾಂಗನೆಯನು ಕಾಂಬುವೆನೆಂಬ ತವಕದಿ೩೪

ವಚನ
ಪದುಮನಾಭನ ರಾಣಿ ರಾಣಿವಾಸದಲಿ
ಯದುಕುಲೇಂದ್ರನ ಚರಣೋಚ್ಚಾರಣೆಯಲ್ಲಿರಲು
ಒದಗಿ ಬಂದಳು ಕೊರವಿ ಕರೆಯುತ್ತ ತಾನು
ಚದುರ ಪ್ರಸನ್ವೆಂಕಟ ಕೃಷ್ಣನರಸಿಯನು ೩೫
೧೦
ಎಲ್ಲಿಹಳೆಲ್ಲ್ಲಿಹಳಾ ರಾಯನ ಮಗ
ಳೆಲ್ಲಿಹಳೆ ನೀಡೆಯವ್ವ
ನಲ್ಲೆ ಬಾ ನಲ್ಲೆ ಬಾ ನಲ್ಲೆ ಬಾ ರುಕ್ಮಿಣಿ
ನಲ್ಲೆ ಬಾರೆ ಮುಂದಕವ್ವ ೩೬
ಬಲ್ಲೆ ನಾ ಬಲ್ಲೆ ನಿನ್ನಯ ಮನದೆಣಿಕೆಯ
ಸೊಲ್ಲುವೆನೆ ನೀಡೆಯವ್ವ
ನಿಲ್ಲದು ನಿಲ್ಲದಕ್ಕಿಯು ನಿನ್ನದ್ಹಸಿತ ಕೈ
ಒಳ್ಳೆ ಕಜ್ಜಾಯ ನೀಡೆಯವ್ವ ೩೭
ಕೆಟ್ಟೋಗರಕೆ ಚಿತ್ತವಿಟ್ಟ ಕೊರವಿಯಲ್ಲ
ಮೃಷ್ಟಾನ್ನವ ನೀಡೆಯವ್ವ
ಶ್ರೇಷ್ಠಾದ ಶಾವಿಗೆ ಬಟ್ಟುವಿ ಪಾಯಸ
ಹೊಟ್ಟೆ ತುಂಬ ನೀಡೆಯವ್ವ೩೮
ಅಟ್ಟಿಟ್ಟ ಪಂಚವಿಧ ಭಕ್ಷ್ಯ ಎನಗಿಂದು
ಇಷ್ಟ ಕಾಣೆ ನೀಡೆಯವ್ವ
ಇಷ್ಟುಣಲಿಕ್ಕೆನ್ನ ತುಷ್ಟಿ ಬಡಿಸಿ ಸತ್ಯ
ಗೋಷ್ಠಿ ಕೇಳೆ ನೀಡೆಯವ್ವ ೩೯
ಮನ್ನಣೆ ಇಲ್ಲದ ಮನೆಯ ಹೊಗುವಳಲ್ಲ
ಕನ್ನೆ ಬಾರೆ ಮುಂದಕವ್ವ
ಮುನ್ನ ರಕ್ಕಸನೊಯ್ದ ಮಡದಿಗೆ ಒಳಿತ
ವನೆಲ್ಲ ಹೇಳಿದ್ದೆನವ್ವ ೪೦
ನಿನ್ನ ಪ್ರಾಣದ ಪ್ರಿಯನೊಬ್ಬನೆ ಪರದೈವ
ಕನ್ನೆ ಕೇಳಜಕಾಮರವ್ವ
ಕಣ್ಣಾರ ಕಾಂಬೆ ನಿನ್ನಣ್ಣನ ಪಾಟು ಪ್ರ
ಸನ್ನವೆಂಕಟ ಕೃಷ್ಣನಿಂದವ್ವ ೪೧
೧೧
ಚೂರ್ಣಿಕೆ
ಈ ವಾಕ್ಯವಂ ಕೇಳಿ ತೀವಿ ತೋಷವ ತಾಳಿ
ದೇವಿ ರುಕ್ಮಿಣಿಯಕ್ಕ ಪಾವನ ಹಾಸಂಗಿಯಿಕ್ಕಿ
ಆವಲ್ಲಿಂ ಬಂದ್ಯವ್ವ ದೇವಲೋಕದ ಕೊರವೆ
ಈ ಒಳ್ಳೆ ಮೆಚ್ಚು ಮಾತು ಆವಾಗನುಭವೆಂ ಮಾತೆ

೮೮
ಜಯ ಜಯ ಜಯ ಜಯ ದಯಾನಿಧೆ
ಭಯನಿವಾರಕ ಭಕ್ತನಿಚಯ ನಿತ್ಯಸೇವ್ಯನೆ ಪ.
ದ್ರುಹಿಣ ಸಮೀರ ಗರುಡಹಿನಾಥ ಮೃಡೇಂದ್ರ
ಸಹನುತ ಪದಸರೋರುಹ ನಿತ್ಯ ಜಯ ೧
ಮದನಜನಕ ಸಿಂಧುಸದನ ದಾನವ ಜಿತ
ಕದನ ಮಾನವ ಮೃಗವದನ ಹರೆ ಜಯ ೨
ದಶಾನನ ಹರಸುರ ಘೋಷಣ ನೀಲ ಸತತ
ಪ್ರಸನ್ವೆಂಕಟಗಿರಿವಾಸ ನಮೋ ತೇ ಜಯ ೩

೪೨೯
ಜಯ ಜಯ ಜಯ ಮಂಗಳಂ ಶ್ರೀರಂಗಗೆ ಪ.
ಮಂಗಳ ಮಹಿಮ ತ್ರಿವೆಂಗಳ ಮೂರ್ತಿಗೆ
ಮಂಗಳವ್ವೆಯ ವಕ್ಷಾಂಗದೊಳಿಟ್ಟಗೆ ೧
ಮಂಗಳಾನಂತ ಗುಣಂಗಳಿಂ ಪೂರ್ಣಗೆ
ಹಿಂಗದೆ ಭಕ್ತರ ಸಂಗದಲ್ಲಿಹಗೆ ೨
ಮಂಗಳ ನೈದಿಲೆಗಂಗಳ ಚೆಲ್ವಗೆ
ರಂಗ ಪ್ರಸನ್ವೆಂಕಟಿಂಗಿತಜ್ಞನಿಗೆ ೩

(ನು.೨) ಪಾಪಿ ಕೌರವಾನುಜನೊಡಲ ಬಗೆದೆ
೩೮೮
ಜಯ ಜಯ ಸದಮಲ ಗುಣಭರಿತ
ಜಯ ಜಯ ಹನುಮಂತ ಭಾರತೀಕಾಂತ ಪ.
ಮುನ್ನೆ ದಾಶರಥಿಯ ಚರಣವಿಡಿದೆ ನೀ
ಉನ್ನತವಾದ ವರಕೃಪೆಯ ಪಡೆದೆ
ಉನ್ಮತ್ತ ರಕ್ಕಸರೆದೆ ತಲೆಗಡಿದೆ ನೀ
ಚೆನ್ನಾಗಿ ಪ್ಲವಗರ ಪ್ರಾಣವ ಪಡೆದೆ ೧
ದ್ವಾಪರದೊಳಗೆ ಬಲಭೀಮನಾದೆ ಸಿರಿ
ಗೋಪಾಲರಾಯನ ನಿಜದಾಸನಾದೆ
ಕಾಪುರುಷ ಕೀಚಕನ ಸದೆದೆ ಬಲು
ಪಾಪಿ ಕೌರವಾನುಜನೊಡಲ ಬಗೆದೆ ೨
ಹರಿ ಸರ್ವೋತ್ತಮ ಜೀವರೊಳು ಭೇದವೆಂ
ದರಿವವರೊಳು ನೀ ಪೂರಣಬೋಧ
ಸಿರಿ ಪ್ರಸನ್ನವೆಂಕಟೇಶನ ಪಾದ ನೀ
ಸ್ಮರಣೆ ಕೊಡೆಲೆ ವೈಷ್ಣವವರದ ೩

೩೮೭
ಜಯ ಜಯತು ಹನುಮಂತ ಪವಿತ ಸಿಖ ಸಹಜಾತ
ಜಯತು ಕಪಿರಾಜ ಯುವರಾಜ ಯತಿರಾಜ ಜಯತುಪ.
ಸುರರಿಗುತ್ತಮ ಜಗದಾಭರಣ ಶಿರೋಮಣಿ ಜಯತು
ಪರಮ ಅದ್ಭುತಚರಿತ ಸುವಟು ಜಯತು
ಧರಜೆಶೋಧಕ ನಿಶಾಚರಪುರದಹಕ ಜಯತು
ಜಯತು ವೈರಾಗಿ ಮಹಭೋಗಿ ಶುಭಯೋಗಿ ಜಯತು೧
ಸುರರಿಪುಮಥನ ರಾಮಕಾರ್ಯಧುರಂಧರ ಜಯತು
ಚಿರಪ್ಲವಗ ಭವರೋಗಭೇಷಜ ಜಯತು
ಕರಿರಕರ್ಣ ದಶಮುಖಾಂಗ ಗಿರಿವರಕುಲಿಶ ಜಯತು
ಜಯತು ಅಕ್ಷಹರ್ತಾ ಕ್ರತುಕರ್ತ ಸುಖತೀರ್ಥ ಜಯತು ೨
ತ್ರಿಕೋಟಿ ಪವನಾಖ್ಯರೂಪ ಪ್ರಕಟಾಪ್ರಕಟ ಜಯತು
ಅಕಳಂಕಾಮಿತರೂಪ ಮುಖ್ಯೇಶ ಜಯತು
ಶ್ರೀಕರ ಪ್ರಸನ್ವೆಂಕಟ ರಘುವೀರಾನುಮತ ಮತ ಜಯತು
ಜಯತು ಪರಸಿದ್ಧ ಬಕಮರ್ದ ಗುರುಮಧ್ವ ಜಯತು ೩

೪೩೧
ಜಯ ಮಂಗಳಂ ಮಹಾ ಶುಭಮಂಗಳಂ
ಮಂಗಳಂ ಮಧುಹರಗೆ ಮಾವರನಿಗೆ ಪ.
ಶ್ರುತಿಹೃತ ವಿಹೃತನಾದಗೆ
ಕ್ಷಿತಿಭೃತ ವಿಭೃತನಾದಗೆ
ಧೃತಿ ಜಿತ ವಿಜಿತ ಕುಪಿತಗೆ ವಿತರಣಾಂತಗೆ
ಪತಿತತನು ಕ್ಷತಕೃತಗೆ
ಕೃತಪೂತಹಿಸತಿನುತಗೆ
ಪತಿವ್ರತ ಮೋಹಿತ ತುರಗಯುತವ್ಯಾಕೃತಗೆ ೧
ತತ್ವಾಮೃತ ಸತ್ಯವ್ರತಗೆ
ಮಥನಾಮೃತ ದಿತಿಜಾತರ್ಗೆ
ಕಥಾಮೃತ ಸುಮತಿಗೆ ಕೃಪಾಮೃತ ದೈತ್ಯಜಗೆ
ಭ್ರಾತಪಿತ ಸ್ತ್ರೀಸತಿವ್ರಾತಕೆ
ಭೂತಪತಿಗೆ ಜಾತಧರ್ಮಕೆ
ಹಿತಾಮೃತ ತಾಮೃತೋಪೇತಗೆ ಮೂತ್ರ್ಯಮಲನಿಗೆ ೨
ಅನಿಮಿಷಾನಿಮಿಷ ಮಾನಿಗೆ
ಕನಕಾಕ್ಷ ಕನಕಕಶ್ಯಪುವಿ
ನ ನಿಘಘ್ನ ಅಕ್ಷಯತನುಗೆ ಜನನಿಜಘ್ನುಗೆ
ಆನನದಶದಾನವ ಮಾನಿನಿ
ಹನನ ಶೀಲ ಮೋನಾನ್ವಿತಗೆ
ಜ್ಞಾನಜನೇಶ ಪ್ರಸನ್ವೆಂಕಟ ಅನಾಥನಾಥಗೆ೩

೪೩೧
ಜಯ ಮಂಗಳಂ ಮಹಾ ಶುಭಮಂಗಳಂ
ಮಂಗಳಂ ಮಧುಹರಗೆ ಮಾವರನಿಗೆ ಪ.
ಶ್ರುತಿಹೃತ ವಿಹೃತನಾದಗೆ
ಕ್ಷಿತಿಭೃತ ವಿಭೃತನಾದಗೆ
ಧೃತಿ ಜಿತ ವಿಜಿತ ಕುಪಿತಗೆ ವಿತರಣಾಂತಗೆ
ಪತಿತತನು ಕ್ಷತಕೃತಗೆ
ಕೃತಪೂತಹಿಸತಿನುತಗೆ
ಪತಿವ್ರತ ಮೋಹಿತ ತುರಗಯುತವ್ಯಾಕೃತಗೆ ೧
ತತ್ವಾಮೃತ ಸತ್ಯವ್ರತಗೆ
ಮಥನಾಮೃತ ದಿತಿಜಾತರ್ಗೆ
ಕಥಾಮೃತ ಸುಮತಿಗೆ ಕೃಪಾಮೃತ ದೈತ್ಯಜಗೆ
ಭ್ರಾತಪಿತ ಸ್ತ್ರೀಸತಿವ್ರಾತಕೆ
ಭೂತಪತಿಗೆ ಜಾತಧರ್ಮಕೆ
ಹಿತಾಮೃತ ತಾಮೃತೋಪೇತಗೆ ಮೂತ್ರ್ಯಮಲನಿಗೆ ೨
ಅನಿಮಿಷಾನಿಮಿಷ ಮಾನಿಗೆ
ಕನಕಾಕ್ಷ ಕನಕಕಶ್ಯಪುವಿ
ನ ನಿಘಘ್ನ ಅಕ್ಷಯತನುಗೆ ಜನನಿಜಘ್ನುಗೆ
ಆನನದಶದಾನವ ಮಾನಿನಿ
ಹನನ ಶೀಲ ಮೋನಾನ್ವಿತಗೆ
ಜ್ಞಾನಜನೇಶ ಪ್ರಸನ್ವೆಂಕಟ ಅನಾಥನಾಥಗೆ ೩

ದನುಸುತಹರ…..
೮೯
ಜಯಭೋ ಜಯಭೋ ಜಯ ವೆಂಕಟೇಶ ಪ್ರಭೊ
ಜಯಕರ್ತಾ ಭಯಹರ್ತಾಭಯದಾಯಕ ಮೂರ್ತೆ ಪ.
ಫಣಿಗಿರಿವರ ಫಣಮಂದಿರ ಪ್ರಣತಮನೋಹರ
ಘನಸದ್ಗುಣಗಣಪೂರ್ಣ ಘನ ಶಾಮಲವರ್ಣ
ಮನ್ಮಾನಸ ಮುನಿತಾಪಸ ಮನೋಮಾನಸ ಹಂಸ
ದನುಸುತಹರ ಧನುಸಂಹರ ದಿನಮಣೀಶ ರುಚಿರ ೧
ವನಜಾಕ್ಷಾವನಿಜಾಂತಕ ವನಜಾಸನ ಜನಕ
ಕನಕಾಕ್ಷಹ ಕನಕಾಲಯ ಕನಕಸ್ತ್ರೀಪ್ರಿಯ
ವನಭ್ರಮಣಾವನಿರಮಣ ವಿನತಾತ್ಮಜಗಮನ
ಅನಿಮಿತ್ತಜ ಅನಸೂಯಜ ಅನಿಮಿಷೇಂದ್ರಾನುಜ ೨
ಅರಿಧರಧರ ಅರಿಪರಿಹರ ಅರುಣಾಂಬರಧರ
ಚಿರಮಣಿ ರುಚಿರಾಭರಣಾನುಚರ ಸುರತರು ವೀರ
ಸುರಪರಮಾಪ್ತನೆ ಸಾಸಿರ ಕ್ರೀಡಾಶ್ಚರ್ಯಗಾರ
ಕಲಿಕಲುಷಹರ ಕರುಣಾಕರ ಪ್ರಸನ್ವೆಂಕಟೇಶ್ವರ ೩

೪೩೦
ಜಯಮಂಗಳಂ ಮಹಾ ಶುಭಮಂಗಳಂ
ಮಂಗಳಂ ಮದನ ಜನಕಂಗೆ ನಿತ್ಯ ಪ.
ಶಂಕಾಸುರನ ಸೀಳಿ ಶ್ರುತಿಯ ತಂದವನಿಗೆ
ಬಿಂಕದಿಂ ಮಂದರಕೆ ಬೆನ್ನಾಂತಗೆ
ಪಂಕಜಾಸನಗೊಲಿದು ಪ್ರತ್ಯಕ್ಷನಾದವಗೆ
ಶಂಕೆಯನು ಬಿಡಿಸಿ ಶಿಶುವನು ಹೊರೆದಗೆ ೧
ವಿತರಣಕೆ ಬಂದು ಬಲಿವಿಭವನಪಹರಿಸಿದಗೆ
ಪತಿತ ಕ್ಷತ್ರಿಯರ ಸಂಹರಿಸಿದವಗೆ
ಸತಿಯ ಕದ್ದವನ ದಶಶಿರಶತಖಂಡಿಸಿದಗೆ
ಪಿತ ಮಾತೆ ಬಂಧನವ ಪರಿಹರಕಗೆ೨
ಮುಪ್ಪುರದ ನಾರಿಯರ ಮನವ ಗೆದ್ದವಗೆ
ತಪ್ಪದೆ ಕಲಿಬಲವ ತರಿದಾತಗೆ
ಸರ್ಪಗಿರಿಯಲಿ ನಿಂತು ನಿತ್ಯಸುಖದಾತನಿಗೆ
ಶ್ರೀಪ್ರಸನ್ವೆಂಕಟೊಡೆಯನೆನಿಪಗೆ ೩

೩೧೫
ಜಾರಿ ಬಿದ್ದಳು ಕುಣಿಯೊಳು ಜಾರಿ ಬಿದ್ದಳು ಪ.
ಜಾರಿಬಿದ್ದಳು ಕೆಸರಿಲ್ಲದೆ
ಊರೆಲ್ಲ ನಕ್ಕಿತು ತವ
ರೂರು ಮಾವನ ಮನೆಯವರು
ಚೀರಿ ಅಳುವ ಸೋಜಿಗ ನೋಡಿ ೧
ಶುದ್ಧ ನಡೆಯದೆ ಅಡ್ಡಡ್ಡೊಲಿದು
ಬಿದ್ದ ಭರಕೆ ಮೂಗುತಿ ಕಳೆದು
ಚೋದ್ಯವ ನೋಡಿ ಕಂಡರ ಕೈಯಲಿ
ಗುದ್ದಿಸಿಕೊಂಡಳು ವಾರಂವಾರ ೨
ಈ ಪರಿ ಜಾರಿಬಿದ್ದರೆ ನೋಡ್ಯೆ
ಲ್ಲಾ ಪತಿವ್ರತೆಯರೆಚ್ಚತ್ತು ನಮ್ಮ
ಶ್ರೀಪತಿ ಪ್ರಸನ್ವೆಂಕಟರಮಣನ
ಶ್ರೀಪಾದವ ನಂಬಿ ನಡೆವರು ೩

ಅಂಗುಟದಿ ಬೊಮ್ಮಾಂಡವ ಸೀಳಿದ:
೯೦
ಜೋಗಿಯ ಕಂಡೆ ಪರಮ ಯೋಗಿಯ ಕಂಡೆ
ಭೋಗಿಶಯನ ಗಂಬೂರ ಚರ್ಚಿತಾಂಗ ವೆಂಕಟೇಶ ಪ.
ವೇದವ ಕದ್ದೊಯ್ದವನ ಕೊಂದ ಜೋಗಿಯ ಕಂಡೆ
ಭೂಧರಧರನಾದ ಜೋಗಿಯ ಕಂಡೆ
ಭೇದಿಸಿ ಪಾತಾಳ ಪೊಕ್ಕು ಗರ್ಜಿಪ ಜೋಗಿಯ ಕಂಡೆ
ಆದರದಿ ಕಂದನ ನುಡಿಯನಾಲಿಸಿ ಬಂದ ೧
ಅಂಗುಟದಿ ಬೊಮ್ಮಾಂಡವ ಸೀಳಿದ ಜೋಗಿಯ ಕಂಡೆ
ಹೆಂಗಳ ತಲೆಯನರಿದ ಜೋಗಿಯ ಕಂಡೆ
ಅಂಗನೆಗೋಸುಗಾರಣ್ಯ ಸಂಚಾರಿ ಜೋಗಿಯ ಕಂಡೆ
ಪೊಂಗೊಳಲನೂದಿ ಮೂಜಗವನು ಮೋಹಿಸುವ ೨
ಕನ್ಯೇರ ವ್ರತಗೇಡಿ ದಿಗಂಬರ ಜೋಗಿಯ ಕಂಡೆ
ಉನ್ನತ ವಾಜಿಯೇರಿದ್ದ ಜೋಗಿಯ ಕಂಡೆ
ಪನ್ನಗಾದ್ರಿವರದ ಪ್ರಸನ್ನವೆಂಕಟೇಶನೆಂಬ
ತನ್ನ ನಂಬಿದವರನು ಬಿಡದೆ ಪಾಲಿಸುವ ೩

೩೮೯
ಜ್ಞಾನವಿರಲೆನಗೆ ಜನುಮ ಜನುಮ
ಶ್ರೀನಿವಾಸ ಸರ್ವೇಶ ನೀನೆಂಬ ಸುಜ್ಞಾನವಿರಲೆನಗೆ ಪ.
ಸರ್ವಜಗದಲ್ಲಿ ನೀನೆ ವ್ಯಾಪ್ತ ಜಗವೆಲ್ಲ
ಸರ್ವಕಾಲದಿ ನಿಮ್ಮಧೀನವೆಂಬ
ಸರ್ವಜಡಚೇತನರ ಸೃಷ್ಟಾರ ದಾತಾರ
ಹಂತಾ ನಿಯಂತಾ ನೀನೆ ಎಂಬ
ಸರ್ವತ್ರಾವಿಷ್ಟ ಉತ್ರ‍ಕಷ್ಟ ನೀನೇ ಎಂಬ
ಸರ್ವವಿಜ್ಞಾನ ವಿಜ್ಞೇಯನೆಂಬ
ಸರ್ವಜ್ಞಗುರು ಹೃದಯಧಾಮ ಪೂರಣಕಾಮ
ಶರ್ವೇಂದ್ರವಿಧಿ ವಿನುತ ಪ್ರಸನ್ವೆಂಕಟಕೃಷ್ಣ ನಿಮ್ಮ ೧ *

೩೧೬
ಜ್ಞಾನಿಯಾಗಬೇಕು ಅಜ್ಞಾನ ನೀಗಬೇಕು ತತ್ವ
ಜ್ಞಾನದಿಂದಿರಬೇಕು ಮುಕ್ತಿ ತಾನೆ ಆವಾಗಕ್ಕು ಪ.
ಅಬ್ಜಾನನನ್ನ ಪಾದಾಬ್ಜ ನಂಬಿರಿನ್ನು ಕು
ಶಬ್ದಗುಂದಿರಣ್ಣ ಭವಾಬ್ಧಿ ದಾಟಿರಣ್ಣ ೧
ಮಾಡಿ ಸಾಧುಸಂಗ ಬಿಡಿ ಖಳರ ಹಂಗ ನೀವು
ನೋಡಿ ಅಂತರಂಗ ಕೈ ನೀಡುವನು ರಂಗ೨
ತ್ಯಾಗ ಭೋಗ ಸರ್ವ ಶ್ರೀಹರಿಗೆ ಒಪ್ಪಿಸಿರುವ ಆ
ಯೋಗಿಯನ್ನು ಕರೆವ ಶ್ರೀ ನಾಗಶಯನ ಹೊರೆವ ೩
ತಿದ್ದಿನೋಡಿ ವರ್ಮ ಅಸಾಧ್ಯ ಶರ್ಮನರ್ಮ ಬೇ
ಗೆದ್ದು ಬಿಡಿ ಅಧರ್ಮ ನಿನ್ನದು ಶುಭಕರ್ಮ ೪
ದಾಸರ ಜೀವನ ಭಕ್ತಪೋಷಕ ಪಾವನ ಶ್ರೀ
ಪ್ರಸನ್ನ ವೆಂಕಟ ಪ್ರಸನ್ನ ಅಭಿಲಾಷೆ ಸಂಜ್ಞನೆ ಧನ್ಯ ೫

೧೯
ತಂದು ತೋರೆ ತಡಿಯೆನೆ ತಾಳಲಾರೆನೆ ತಂಗಿ
ಹೆಂದಳ ವೇಲಾಪುರದ ಚೆನ್ನಿಗನ ಭಾವಕಿ ಪ.
ಮಂಗಳ ನೋಟಕೆ ಮೆಚ್ಚಿ ಮರುಳಾದೆನೆಲೆ ತಂಗಿ
ಅಂಗವೆಲ್ಲ ಕಮಠಾದವನಪ್ಪಿಸಮ್ಮ ಭಾವಕಿ ೧
ಕೊನೆವಲ್ಲಿಗೆ ಧರೆ ಸೋಂಕಲು ವಶ್ಯವಾದೆನೆಲೆ ತಂಗಿ
ಘನಕೋಪವ್ಯಕ್ತನ ಕೂಡಿಸಮ್ಮ ಭಾವಕಿ ೨
ಮಾನದಂತಿದ್ದ ಬಲಿಯ ಮೆಚ್ಚಿ ನುಂಗುವರೆ ತಂಗಿ
ಕ್ಷಣಯುಗವಾಗಿದೆ ಸದ್ವೀಕ್ಷಣ ಕಾಣದೆ ಭಾವಕಿ೩
ಹೆಂಗಳ ಬಿಟ್ಟೊಬ್ಬನೆ ತಾ ಹ್ಯಾಗೆ ಹೋದ ಹೇಳೆ ತಂಗಿ
ಪೊಂಗೊಳಲೂದುತಲೆನ್ನ ಪಾಲಿಸೆನ್ನೆ ಭಾವಕಿ೪
ಮೋಹನ ಬಾರದೀ ಗಂಧಮಲ್ಲಿಗ್ಹಾರ್ಯಾಕೆ ತಂಗಿ ಬ
ರಹೇಳೆ ಪ್ರಸನ್ನವೆಂಕಟನ ವಾಜಿಯಿಂದ ಭಾವಕಿ ೫

೨೨೭
ತಂದೆ ತಾಯಿ ಮಿತ್ರ ನೀನೆ ಬಾಂಧವ ನೀನೆ ನಿ
ನ್ನಿಂದ ಬಳಗಿಲ್ಲೆನಗೆ ಇಂದಿರಾಧವನೆ ಕಾಯೊ ಪ.
ಹೊಲೆಯ ರಕ್ತದಿ ರೇತ ನಿಲಿಸಿದನೊರ್ವ ಪಿತ
ನೆಲೆಸಿ ಗರ್ಭದೊಳು ರಕ್ಷಿಸಿದೆ ನೀನು
ಹಲವು ಯೋನಿಯ ತೋರಿ ತೊಳಲಿಸಿ ತುದಿಯಲ್ಲಿ
ನೆಲೆಗೆ ನಿಲ್ಲಿಸುವಂಥ ಸುಲಭ ಜನಕನಲ್ಲೆ ೧
ನವಮಾಸ ಧರಿಸಿ ಸ್ತನ್ಯವನುಣಲಿತ್ತಳವ್ವೆ
ತವಕದಿ ನಡೆ ನುಡಿಸುವೆಯೊ ನೀನು
ಆವ ಕಾಲಕಾಲದಲ್ಲಿ ತವಗರ್ಭದಲ್ಲಿ ಪೊತ್ತು
ಜೀವಕೆ ಚೈತನ್ಯಾಶನವೀವ ತಾಯಿ ನೀನಲ್ಲವೆ ೨
ಶ್ರೇಯಸನಾದರಿಸುವ ಪ್ರಿಯಸಖರೆಲ್ಲರು ನಿ:
ಶ್ರೇಯಸದಿ ಸುಖಮುದದಾಯಕ ನೀನೆ
ಮಾಯಪಾಶ ಬಂಧನದಿ ನೋಯುವರವರ್ಗಾಬಾ
ಧೆಯನಟ್ಟಿ ಕಳೆವ ಚಿನ್ಮಯ ಮಿತ್ರ ನೀನಲ್ಲವೆ ೩
ವಿತ್ತವಿರೆ ಸಹೋದರರಿತ್ತ ಬನ್ನಿ ಕೂಡ್ಯೆಂಬರು
ವಿತ್ತಶೂನ್ಯನಾದರೆ ನೀನುಪೇಕ್ಷಿಸೆ ಅಯ್ಯ
ಒತ್ತಿ ಬಹ ದುರಿತ ವಿಪತ್ತುಗಳ ಸವರಿ ಸು
ಮುಕ್ತಿಯ ಪದವೀವಾನಿಮಿತ್ತ ಬಂಧು ನೀನಲ್ಲವೆ ೪
ಸಿರಿಯು ಪೋಗೆ ನಿಲ್ಲರು ಶರೀರ ಸಂಬಂಧಿಗಳಾ
ತುರದ ದಾರಿದ್ರ್ಯ ಪಾಪಹರನು ನೀನೆ
ಕರುಣಿ ಪ್ರಸನ್ನ ವೆಂಕಟರಮಣ ನಿನ್ನ ನಾಮ
ಸ್ಮರಣೆ ಎನ್ನ ಜಿಹ್ವೆಗೆ ಮರೆಯದಿರಲಿ ಕಂಡ್ಯ ೫

ಪುರಂದರದಾಸರು : ಶ್ರೇಷ್ಠ ಹರಿದಾಸರು
೧೮೯
ತಂದೆ ಪುರಂದರದಾಸರ ಸ್ಮರಿಸುವೆ ಎನ್ನ
ಮಂದಮತಿಗಳೆದು ಹರಿಭಟನೆನಿಸುವೆಪ.
ಗುರು ವ್ಯಾಸರಾಜರ ಚರಣಾಬ್ಜ ಷಟ್ಚರಣನ
ವಿರತಿ ಭಕುತಿ ಜ್ಞಾನದಾರ್ಣವನ
ವರ ಉಪನಿಷದ್ವಾರಿನಿಧಿಗೆ ತಿಮಿಂಗಿಲನಹನ
ಧರೆಯ ಕವಿಕುಲ ಶಿಖಾಮಣಿಯೆನಿಪನ ೧
ದಿನ ದಿನ ಯದೃಚ್ಛಾರ್ಥಲಾಭದಲಿ ತುಷ್ಟನ
ಕನಕಲೋಷ್ಠ ಸಮಾನದೀಕ್ಷಿಸುವನ
ಘನ ಸಿದ್ಧಿಗಳು ತಾವೆ ಬರಲೊಡಂಬಡದನ ಹರಿ
ಗುಣ ಕೀರ್ತನೆಯಲ್ಲಿ ಪರವಶದಿಹನ ೨
ಭವಜಲಧಿ ಗೋಷ್ಪದಕೆ ಸರಿದಾಟಿ ಕಾಮ ಕ್ರೋ
ಧವ ಮೆಟ್ಟಿ ಭಕ್ತಿಸುಧೆಯುಂಡು ತೇಗಿ
ಭುವಿಯಲ್ಲಿ ನಿಜಕೀರ್ತಿಯನು ಹರಹಿ ಪವನಮತ
ದವರೆನಿಪ ದಾಸರಿಗೆ ತವರೂಪ ತೋರಿದನ ೩
ಕವನೋಕ್ತಿ ಮಳೆಗರೆದು ಹರಿದಾಸ ಪೈರ್ಗಳಿಗೆ
ಅವಿರಳಾನಂದವಿತ್ತಥಿರ್üಸುವನ
ನವಭಕುತಿ ಮನಗಂಡು ಸವೆಯದಾನಂದಪುರ ಪ
ಥವನು ತೋರಿಸಿದಂಥ ಬಹುಕೃಪಾಕರನ ೪
ಗೀತ ಠಾಯಿ ಸುಳಾದ್ಯುಗಾಭೋಗ ಪದ್ಯಪದ
ವ್ರಾತ ಪ್ರಬಂಧ ರಚಿಸಿ ವಿಠಲನ
ಪ್ರೀತಿ ಬಡಿಸಿ ಕಂಡು ನಲಿವ ವೈಷ್ಣವಾಗ್ರ
ನಾಥ ಪ್ರಸನ್ವೆಂಕಟ ಕೃಷ್ಣಪ್ರಿಯನ ೫

೨೨೯
ತಪ್ಪು ನೋಡದೆ ಬಂದೆಯಾ ನನ್ನ ತಂದೆಯೆ
ಅಪ್ಪ ತಿರುವೆಂಗಳೇಶನೆ ನಿರ್ದೋಷನೆ ಪ.
ಆಪಾದಮೌಳಿ ಎನ್ನೊಳು ಅಘ ಬಹಳ
ಶ್ರೀಪತಿ ಕ್ಷಮಿಸಿ ಕಾಯಿದೆಯ ಉದಧಿಶಯ್ಯಾ ೧
ಜಗದಘಹರನೆಂಬುದು ನಿನ್ನ ಬಿರುದು
ತ್ರಿಗುಣಾತೀತನೆ ರಾಮನೆ ಗುಣಧಾಮನೆ೨
ಇನ್ನೆನ್ನ ಕಲುಷವಾರಿಸೊ ಭವತಾರಿಸೊ ಪ್ರ
ಸನ್ನ ವೆಂಕಟರಮಣ ಭಯಶಮನ ೩