Categories
ರಚನೆಗಳು

ಪ್ರಸನ್ನವೆಂಕಟದಾಸರು

೧೧೩
ಮಂಜುಳ ವೇಣುಗಾನವ ಮಾಡಿ ಮೋಹಿಪ ಜಗವ
ಕಂಜಜನಯ್ಯ ಮುರಾರಿ ಕಾಮಿನಿಯರಿಗುಪಕಾರಿ ಪ.
ಯಮುನೆಯ ಪುಲಿನದಿ ಯದುಕುಲ ಚಂದ್ರ ಹೊಂದೆ
ರಮಣೀರ್ವಕ್ಷ ಮಧ್ಯದಿ ರಾಜಿಸುತ ಕುಲಾಂಬುಧಿ ೧
ಪೂರ್ಣ ಪೀಯೂಷಕರನು ಪೂರ್ವಾಚಲಕೆ ಸಾರ್ದನು
ಪೂರ್ಣಾನಂದ ಮುಕುಂದ ಪವನ ಸಂಚಾರದಿಂದ೨
ಕುಂದ ನೀಲೋತ್ಪಲ ಜಾಜಿ ಕಮಲ ಮಲ್ಲಿಗೆ ಜುಜಿ(?)
ಮಂದಾರ ಪುನ್ನಾಗ ಭುಜಮೂಲದಿ ಗೋಪಾಲರಾಜ ೩
ಕುಸುಮಾಕರಕುಂಜದಿ ಕುಶಲಕ್ರೀಡಿತನಾದಿ
ಸುಸಪ್ತ ಸ್ವರದಿಂದ ಸುಖದಾನಂದ ಮುಕುಂದ ೪
ಕತ್ತಲೆವಿರಿ ಸಂಪಿಗೆ ಕಮಲ ಮೊಲ್ಲೆ ಮಲ್ಲಿಗೆ
ಸುತ್ತಿದ ಎಳೆಪಲ್ಲವ ಮಾರನಂತಹ ಚೆಲುವ ೫
ಮುತ್ತಿನ ಚೊಲ್ಲೆಯಲ್ಲಿಯ ಮುಂಗುರುಳಲ್ಲಿ ವಲಯ
ಕಸ್ತೂರಿ ತಿಲಕ ಒಪ್ಪೆ ಕವಿದಡರ್ವದ್ವೀರೇಫೆ ೬
ಕಡೆಗಣ್ಣಿನ ನೋಟದಿ ಕುಡಿಹುಬ್ಬಿನ ಮಾಟದಿ
ಮಡದೇರ್ಗೆ ಮಾರಶರ ಮೂಡಿಸುತತಿ ಸುಂದರ೭
ಮುಗುಳುನಗೆಮೊಗದ ಮಣಿಕುಂಡಲ ಕರ್ಣದ
ಯುಗ ಕರ್ಣಾಕರ್ಣಿಕರಾಯತ ನಟ ನರಾಕಾರ ೮
ವನಮಾಲೆ ವೈಜಯಂತಿ ಶ್ರೀ ವತ್ಸ ಕೌಸ್ತುಭ ಕಾಂತಿ
ಮಿನುಗುವಾಮೋದ ಗಂಧಮುಡಿ ತೋರೋ ಶ್ರೀ ಗೋವಿಂದ೯
ಹಾರಕೇಯೂರ ಕಂಕಣ ಹೊಳೆವ ಮಧ್ಯ ಒಡ್ಯಾಣ
ಚಾರು ಪೀತಾಂಬರೋತ್ತರಿ ಚೀರದಿಂದೆಸೆವ ಹರಿ೧೦
ವಾಮಬಾಹುವಿಲೊಪ್ಪುವ ವೇಣುವಿನ ಘನರವ
ಬ್ರಹ್ಮ ಗಂಧರ್ವರ ಗಾನ ಬಗೆಗೆ ಮೀರುವ ದೇವ ೧೧
ಸುಲಲಿತಂದುಗೆ ಗೆಜ್ಜೆ ಸಂದ್ರೇಖೆ ಶೋಭಿತಹೆಜ್ಜೆ
ಕೆಲದ ಗೋಪಾಂಗನೇರ ಕಾಮಧೇನು ಸಾರೋತ್ತರ ೧೨
ಧರೆಗೆರಗಿದ ಜಡೆ ಸಲೆ ಕಾಳಿಂದಿ ಮೇಲಾಡೆ ಸಕಳ ಪಕ್ಷಿ
ಮೃಗವು ಸಂಚರಿಸದೆ ನಿಂದವು೧೩
ಜಡಂಗಳು ಚೇತರಿಸೆ ಜನದ ಚೇಷ್ಟೆ ಥಂಬಿಸೆ
ಕಡುರಸ ತುಂಬಿ ತುಳುಕಲಜಭವಾಂಡೊಲಿಯಲು ೧೪
ವೃಕ್ಷಗಳ ಶೃಂಗಾರಿಯ ವತ್ಸಗಳಾವದೊರೆಯ
ಈಕ್ಷಿಸಿ ತೃಣ ಮೆಲ್ಲದೆಯಿದ್ದವು ಗೀತಕೇಳುತ ೧೫
ನೀರಸ ತರುಫಲಾಗೆ ನಿತ್ಯಪ್ರಜ್ಞತೆಗೆ
ನೀರದಗೆ ಸ್ವರಗೈಯೆ ನಿಗಮನಯ್ಯ ಮರೆಯ ೧೬
ಮಂಗಳ ಮೇಘ ಘರ್ಜನೆ ಮಾಡಿದವು ಮೆಲ್ಲಮೆಲ್ಲನೆ
ರಂಗನ ಮೇಲಮೃತ ಧಾರೆಯವಿತ್ತವರ್ಥಿಯಿಂದ ೧೭
ನಂದವ್ರಜದ ವನವು ನಂದನ ಚೈತ್ಯಾಧಿಕವು
ನಂದಸೂನುವಿನ ಗೀತ ನಾದ ವೇದಾನಂತಾನಂತ ೧೮
ಕಮಲಜ ಭವೇಂದ್ರಾದಿಕರು ಭ್ರಾಂತಿಯನೈದಿದರು
ಅಮರಜನ ನಾರೇರು ಅಂಗಜವಶವಾದರು ೧೯
ಗೋಷ್ಠದ ಗೊಲ್ಲ ಗೋಪೇರ ಗೋವರ್ಧನ ಗೋಪಾಲರ
ದೃಷ್ಟಕೆ ಸುರಮುನಿ ಗಂಧರ್ವರು ಪೊಗಳಿದರಾಗ೨೦
ಸುರಭ್ಯಾಗಾರದಿ ಕೃಷ್ಣ ಸಂಚರಿಸಲು ಸರ್ವೇಷ್ಠ
ಪೂರಣವಪ್ಪಿತು ಧರೆ ಪರಮ ಮಂಗಳ ಸಾರಿ ೨೧
ಸುರರು ಸುಖ ಸಂಭೃತ ಶರಧಿಯೊಳೋಲಾಡುತ
ಸಿರಿ ಮಂಗಳವ ಹೇಳಿ ಸುರಿದರರಳ ಮಳೆ ೨೨
ಪ್ರಸನ್ನತರ ಚರಿತ ಪ್ರಸನ್ನಾವ್ಯಾಕೃತಗಾತ್ರ
ಪ್ರಸನ್ನಪೂರ್ಣ ಪ್ರಜ್ಞೇಷ್ಠ ಪ್ರಸನ್ನವೆಂಕಟಕೃಷ್ಣ ೨೩

೨೬೬
ಮತ್ತವನಲ್ಲೊ ಮುರಾರಿ ನಿನಗೆ ನಾ
ಮತ್ತವನಲ್ಲೊ ಮುರಾರಿ ನಿನ್ನ
ಭೃತ್ಯರ ಭೃತ್ಯರ ಭೃತ್ಯರ ಭೃತ್ಯನಿ
ಗೆತ್ತಣ ಸ್ವಾತಂತ್ರ್ಯ ಸಲಹಯ್ಯ ಶೌರಿ ಪ.
ರಂಗಾ ನೀ ಕೊಳ್ಳದ ಬಂಗಾರ ತಳಿಗ್ಯೂಟ
ನುಂಗುವ ಮತ್ತವನಲ್ಲೊ
ರಂಗಾ ನಿನ್ನ ಮರೆದಂಗನೆಯರನಾ
ಲಂಗಿಸಿ ಮತ್ತವನಲ್ಲೊ
ರಂಗಾ ನಿನ್ನೊಲುಮೆಯ ಡಿಂಗರರಂಘ್ರಿಗೆ
ರಂಗದೆ ಮತ್ತವನಲ್ಲೊ
ರಂಗಾ ನಿನ್ನೆಂಜಲೆನ್ನಂಗೈಯೊಳುಂಡು ರಾ
ಜಂಗಳನುಡುಗುವ ಬಡವ ನಾನಲ್ಲದೆ ೧
ನಾಥನೆ ನಾನೆಂದು ಮಾತು ಕಲಿತು ಖಳ
ವ್ರಾತ ಸಂಗದಿ ಮತ್ತವನಲ್ಲೊ
ನಾಥ ನಿನ್ನ ಮೀರಿದಾತನುಂಟೆಂದು ನಿ
ರ್ಭೀತಿಲಿ ಮತ್ತವನಲ್ಲೊ
ನಾಥ ನಿನ್ನ ಗುಣಖ್ಯಾತಿ ಹೊಗಳದನ್ಯ
ಸ್ತೌತ್ಯದಿ ಮತ್ತವನಲ್ಲೊ
ನಾಥ ನಿನ್ನಡಿಯ ತೀರಥವೆ ಗತಿಯೆಂದು
ಯಾತನೆಗಂಜುವ ಬೆದರುಗುಳಿಯಲ್ಲದೆ ೨
ತಂದೆ ನೀ ಮಾರಿದರೊಂದೊಪ್ಪು ಕೊಂದರೊ
ಪ್ಪೆಂದಿಗೆ ಮತ್ತವನಲ್ಲೊ
ತಂದೆ ನಿನ್ನ ಮನೆ ಹೊಂದಿದಟ್ಟಣೆಗೈದಿ
ಬಂಧಿಸು ಮತ್ತವನಲ್ಲೊ
ತಂದೆ ನಿನ್ನಾಯುಧ ಸಂದು ಸಂದಿಗೆ ಕಾಸಿ
ತಂದಿಡು ಮತ್ತವನಲ್ಲೊ
ತಂದೆ ಪ್ರಸನ್ನವೆಂಕಟಿಂದಿರೇಶನೊಬ್ಬ ಅಹು
ದೆಂದ ಸೊಕ್ಕೊಂದುಳ್ಳವನಲ್ಲದೆ ೩

೨೬೭
ಮನವೆ ಮಾಧವನ ಮರೆಯದಿರೆಂದೆ ದಣುವಾಯಿತು ಹಿಂದೆ
ಕ್ಷಣವೊಂದು ಬಿಡದಿರು ಕೃಷ್ಣನ ಮುಂದೆ ಪ.
ಘನ ವಿಷಯಂಗಳ ನೆನವಿಲಿ ಪುನ:ಪುನ:
ತನುವ ವಹಿಸಿ ಭವ ವನವನ ಚರಿಸದೆ ಅ.ಪ.
ಹರಿವಾರ್ತೆಯನು ಕೇಳು ಕೇಳಿದ್ದೆ ಕೇಳು ಅರಿಅರುವರನಾಳು
ಅರಿವಿಂದ ಗರುವದ ಮೂಲವ ಕೀಳು
ಹೆರವರ ಹರಟೆಗೆ ಪರವಶನಾಗದೆ
ಕರಿವರವರದನ ವರವನೆ ಬಯಸು ೧
ಹರಿಗುರುವಿಗೆರಗು ಅರಿತರಿತೆರಗು ತಪವೆರಡಲಿ ಸೊರಗು
ಸೊರಗಿದವರ ಕಂಡು ಕರಗು ಮರುಗು
ತಿರುಗ್ಯೊಡಲುರಿಗೆ ಮುಳ್ಳ್ಹೊರೆಗೆ ಸ್ಮರಾಸ್ತ್ತ್ರಕೆ
ಗುರಿಯಾಗದೆ ಹರಿಸೆರಗ ಬಿಡದಿರು ೨
ಹರಿವಿಗ್ರಹ ನೋಡು ನೋಡಿದ್ದೆ ನೋಡು ಮಮಕಾರವೀಡಾಡು
ಸ್ಥಿರವೊಂದನೆ ಬೇಡಸ್ಥಿರವ ಬಿಸಾಡು
ಸಿರಿವಂತರ ಸಿರಿ ಪರವಧುಗಳ ಸಿಂ
ಗರವೆಣಿಸದೆ ಸಿರಿವರನ್ನೆ ನೋಡು ೩
ಹರಿಪ್ರಸಾದವನುಣ್ಣು ನೆನೆನೆನೆದುಣ್ಣು ಶ್ರೀಹರಿ ಪ್ರೀತ್ಯೆನ್ನು
ಹರಿಪ್ರೇರಕ ನೇಮಕ ಸಾಕ್ಷಿಕನೆನ್ನು
ಹರಿಪ್ರಿಯವಲ್ಲದನರುಪಿತ ಪರಿಪರಿ
ಚರುಪವ ಚರಿಸದೆ ಹರಿಯ ಚರಿಸು ೪
ಹರಿಯಂಘ್ರಿ ಪರಾಗವ ಗ್ರ್ರಹಿಸಾಘ್ರಾಣಿಸು ಹರಿಯವರಿಗೆ ಉಣಿಸು
ಹರಿಭಕ್ತಿ ಜ್ಞಾನ ವೈರಾಗ್ಯವ ಗಳಿಸು
ಹರಿಪ್ರಿಯ ಪ್ರಭು ಮಧ್ವಾಚಾರ್ಯರ ಪ್ರಿಯ ಮೇ
ಲ್ಗಿರಿ ಪ್ರಸನ್ವೆಂಕಟ ದೊರೆಯನೆ ನಂಬು೫

೩೨೮
ಮನುಜ ವಿಶ್ವಾಸ ಬೇಡ ವನಿತೇರೊ
ಳ್ಮನುಜ ವಿಶ್ವಾಸ ಬೇಡ ತಿಳಿದು ಪ.
ನಗೆಮೊಗದಬಲೇರ ಬೆಗಡು ಸ್ನೇಹದಕಿಂತ
ಹೆಗಲ ಶೂಲವೆ ಸುಖವು
ಸುಗುಣವಿಲ್ಲದ ನರ್ಕಸೌಖ್ಯ ಬೇಕಾದರೆ
ವಿಗಡೆಯರ್ಸಖ್ಯವೆ ಸಾಕು ತಿಳಿದು ೧
ಮಹಪ್ರೇಕ್ಷರಾದರ ಅಹಿತಕಾರಿಣಿ ಮಾಯೆ
ಸಹಜ ತಾಮಸರೂಪಿಯ
ಐಹಿಕಾಮುಷ್ಮಿಕದ ಬಹು ಪುಣ್ಯ ಕೆಡಿಸುವ
ಕುಹಕ ಕೃತ್ರಿಮಶೀಲೆಯ ತಿಳಿದು೨
ಗುರುಹಿರಿಯರ ಭಕ್ತ್ಯಾಚರಣೆಗೆ ಪ್ರತಿಕೂಲೆ
ತ್ವರಿತ ಕಾಮುಕಿ ಮೋಹಿಯ
ಧರೆಯೊಳಭಿಜ್ಞರ ಮರುಳು ಮಾಡುವ ಬುದ್ಧಿ
ಭರಿತೆ ನಿಷ್ಠುರೆ ನೀಚೆಯ ತಿಳಿದು ೩
ಎನಿತಿಲ್ಲ ಪತಿವ್ರತೆ ವನಿತೇರವರೆ ನಾಕಾ
ವನಿಯ ಪಾವನ ಮಾಳ್ಪರು
ಅನುದಿನವರ ನಾಮ ನೆನವಿಗಿರಲಿ ಮಿಕ್ಕ
ಬಿನುಗು ನಾರೇರ ನೆಚ್ಚದೆ ತಿಳಿದು ೪
ಪ್ರಸನ್ವೆಂಕಟೇಶ ಪಾದ ಬಿಸಜಾರ್ಚನಾನುಕೂಲೆಯಾ
ದಸಿಯಳೆ ಶುಭಗುಣಳು
ಹುಸಿ ಢೌಳಿಕಾರ್ತಿ ದುವ್ರ್ಯಸನಿಯನಾಳ್ವ ಮಾ
ನಿಸಗೆ ಸುಖವೆ ಸ್ವಪ್ನವು ತಿಳಿದು ೫

೩೨೯
ಮನುಷ್ಯನಾದ ಫಲವೇನು
ಶ್ರೀನಿವಾಸನ ಕಂಡು ಸುಖಿಯಾಗದನಕ ಪ.
ಭಾನು ಉದಿಸದ ಮುನ್ನ ಸ್ವಾಮಿ ಪುಷ್ಕರಿಣಿಯಲಿ
ಸ್ನಾನ ಸಂಧ್ಯಾನ ಜಪಗಳನೆ ಮಾಡಿ
ಸಾನುರಾಗದಿ ಶ್ರೀವರಹಗೆ ನಮಿಸಿ
ತಾನಖಿಳ ಪುಣ್ಯವನು ಸೂರೆಗೊಳದನಕ ೧
ಹಸ್ತದಲಿ ವೈಕುಂಠವೆಂದು ತೋರುವ ವಿಮಾ
ನಸ್ಥಾಚ್ಯುತನ ಕರ್ಮಗುಣನಾಮವ
ಸ್ವಸ್ಥಮತಿಯಾಗಿ ಕೊಂಡಾಡಿ ಕುಣಿದಾಡಿ ತಾ
ವಿಸ್ತರದ ಕೈವಲ್ಯ ಪಡೆಯದನಕ ೨
ತುಲಸಿ ಬರ್ಹಕೆ ಪೋಲ್ವ ಆ ಮಹಾಪ್ರಸಾದವನು
ಅಲಸದೆ ಸೇವಿಸಿ ಕೃತಾರ್ಥನಾಗಿ
ಹಲವು ದುರಿತಾರಿ ಪ್ರಸನ್ವೆಂಕಟಗಿರಿಯ
ನಿಲಯನೆ ಗತಿಯೆಂದು ಭಜಿಸದನಕ ೩

(ನು. ೧) ಹತ್ತು ಕಟ್ಟದವಗೆ:
೩೩೦
ಮರುಳಾಟವ್ಯಾಕೆ ಮನುಜಗೆ ಮರುಳಾಟವ್ಯಾಕೆ
ಹರಿಭಕ್ತನಲ್ಲದವಗೆ ಹಲವಂಗವ್ಯಾಕೆ ಪ.
ಮೃತ್ತಿಕಾಶೌಚವಿಲ್ಲದೆ ಮತ್ತೆ ಸ್ನಾನ ಜಪವ್ಯಾಕೆ
ಹತ್ತು ಕಟ್ಟದವಗೆ ಅಗ್ನಿಹೋತ್ರವ್ಯಾತಕೆ
ತೊತ್ತುಬಡಕಗೆ ಬಹು ತತ್ವವಿಚಾರವ್ಯಾಕೆ
ಕರ್ತ ಕೃಷ್ಣನ್ನೊಪ್ಪದ ವಿದ್ವತ್ತವ್ಯಾತಕೆ ೧
ಹಸಿವೆ ತೃಷೆ ತಾಳದವಗೆ ಹುಸಿ ವೈರಾಗ್ಯವ್ಯಾತಕೆ
ವಿಷಮ ಚಿತ್ತಗೆ ಪರರ ಕುಶಲ ಬಯಕ್ಯಾಕೆ
ದಶ ಜಪ ಮಾಡಲಾರ ಮುಸುಕಿನ ಡಂಬವ್ಯಾಕೆ
ಕುಶಶಾಯಿಗರ್ಪಿಸದ ಅಶನವ್ಯಾತಕೆ೨
ಮೂಲಮಂತ್ರವರಿಯದ ಮೇಲೆ ದೇವಾರ್ಚನೆ ಯಾಕೆ
ಸಾಲಿಗ್ರಾಮವಿಲ್ಲದ ತೀರ್ಥವ್ಯಾತಕೆ
ಸೂಳೆಗಾರಗೆ ತುಳಸಿಮಾಲೆ ಶೃಂಗಾರವ್ಯಾಕೆ
ಮೇಲೆ ಮೇಲೆ ಹರಿಯೆನ್ನದ ನಾಲಿಗ್ಯಾತಕೆ ೩
ಊಧ್ರ್ವಪುಂಡ್ರಿಲ್ಲದಾಸ್ಯ ತಿದ್ದಿನೋಡಬೇಕ್ಯಾಕೆ
ಶುದ್ಧ ಸಾತ್ವಿಕವಲ್ಲದ ಬುದ್ಧಿ ಯಾತಕೆ
ಕದ್ದು ಹೊಟ್ಟೆ ಹೊರೆವವಗೆ ಸಿದ್ಧ ಶೀಲ ವೃತ್ತಿ ಯಾತಕೆ
ಮಧ್ವ ಮತವ ಬಿಟ್ಟಿತರ ಪದ್ಧತ್ಯಾತಕೆ ೪
ಕಂಡ ನಾರೇರಿಚ್ಛೈಸುವ ಲೆಂಡಗೆ ಪುರಾಣವ್ಯಾಕೆ
ಭಂಡು ಮಾತಿನ ಕವಿತ್ವ ಪಾಂಡಿತ್ಯಾತಕೆ
ಕುಂಡಲಿ ಪ್ರಸನ್ವೆಂಕಟ ಮಂಡಲೇಶನ ಶ್ರೀಪಾದ
ಪುಂಡರೀಕ ಬಿಟ್ಟವನ ವಿತಂಡವ್ಯಾತಕೆ ೫

೨೬೮
ಮರೆಯದಿರು ಮನವೆ ಮಾಧವನ ನಮ್ಮ
ದುರಿತ ದಾರಿದ್ರ್ರ್ಯವನು ಹರಿಸಿ ಹೊರೆವವನ ಪ.
ಆಳರಿತು ಊಳಿಗವ ಕೊಂಡುಂಡು ದಣಿವಂತೆ
ಮೇಲಾಗಿ ಜೀವವನು ಕೊಡುವ ದೇವನ
ಕಾಲ ಕಾಲಕೆ ಮಾಳ್ಪ ನಡೆತಪ್ಪು ನುಡಿತಪ್ಪು
ಆಲೋಚಿಸದೆ ಕರುಣಿಸುವ ಕರುಣನ ೧
ಮೂಢನಾಗಲಿ ಮತಿಯುಳ್ಳ ನರನಾಗಲಿ
ಪಾಡಿದಾಕ್ಷಣ ಭೃತ್ಯನೆಂದು ಒಲಿದು
ಕೂಡಿಕೊಂಬುವ ದೊರೆಗಳಿಲ್ಲ ಹರಿಯಲ್ಲದಾ
ನಾಡಾಡಿ ಬಣಗು ಕಲ್ಲುಗಳ ಬೇಡಿ ೨
ಮುನ್ನಾರು ಅನ್ಯದೇವರ ಭಜಿಸಿ ಭವಗೆದ್ದ
ರಿನ್ನಾರು ಹರಿಯೊಲುಮೆಯಲಿ ದಣಿದರು
ನಿನ್ನ ಗುರುಗಳಿಂದರಿತು ನೆರೆನಂಬು ಪ್ರ
ಸನ್ನ ವೆಂಕಟಪತಿಯ ಪಾದವನಜವ೩

೧೭೬
ಮರೆಹೋಗಿ ಬುಧರೀ ತಾತನ್ನ ವರಗುರು ಸತ್ಯನಾಥನ್ನ ಪ.
ಇಂದ್ರಿಯಜಿತ ಸುಜನೌಘ ಚಕೋರಕೆ ಚಂದ್ರನ್ನ ಮುದ ಸಾಂದ್ರನ್ನ
ಮಂದರಧರ ಜಾನಕಿಪತಿ ರಾಮಚಂದ್ರನ ಪ್ರಿಯ ಮುನೀಂದ್ರನ್ನ ೧
ಅಮಲಸುಖತೀರ್ಥ ಪ್ರಮೇಯ ಸಾಕಲ್ಯ ನಿರ್ಣಯ ಬಲ್ಲನ್ನ
ಎಲ್ಲಾ ಬಲ್ಲೆಂಬೋ ಮಾಯಿಮತದಲ್ಲಣನ ಪಟುಮಲ್ಲನ ೨
ರುಕ್ಷಮಾಯಿಗಳ ಶಿಕ್ಷಿಪನ ಸಪಕ್ಷನ್ನ ಕರುಣಾಕ್ಷನ್ನ
ಪಕ್ಷ್ಷಿಗಮನನ ದೀಕ್ಷೆಲಿ ಪೂಜಿಪ ದಕ್ಷನ್ನ ಸುರಪಕ್ಷನ್ನ ೩
ಶಂಕರನ ಗರ್ವ ಮುರಿದು ಬಿರುದಾಂಕನ್ನ ನಿಶ್ಯಂಕನ್ನ
ಕಿಂಕರಜನಸುರಭೂರುಹ ಸುಗುಣಗಣಾಂಕನ್ನ ಶಶಿಗಧಿಕನ್ನ ೪
ಮರುತಮತಾಗ್ರಣಿ ಗುರು ಸತ್ಯಾಧಿಸುತ ವಿರತನ್ನಾಮಲ ಚರಿತನ್ನ
ಕರ್ತ ಪ್ರಸನ್ನವೆಂಕಟಪತಿಪದನಿರತನ್ನ ಶುಭಕರತನ್ನ ೫

೩೯೯
ಮಹತಿಗೆ ಮಹತು ಹರಿನಾಮ
ಬಹುಜನ್ಮಜಲಧಿ ಶೋಷಿಸುವ ಹರಿನಾಮ ಪ.
ಹಿಂದೊದಗಿದಘರಾಶಿ ಬೇಯಿಸಿ ಬಿಸುಟುವ ನಾಮ
ಮುಂದೆ ಬಹ ದುರಿತಕಡ್ಡಹ ನಾಮ
ಮಂದಮತಿ ಕತ್ತಲೆಗೆ ಬಾಲಾರ್ಕಸಮ ನಾಮ
ದಂದುಗದ ಬಳ್ಳಿಯನು ಹರಿವ ನಾಮ ೧
ಮುಕುತಿ ನಗರವ ತುಂಬಿಸುವ ಅಭಯಕರ ನಾಮ
ಶಕುತ ಯಮಾಲಯಕೆ ಭಯಂಕರದ ನಾಮ
ಅಕಳಂಕ ದಾಸರಿಗೆ ಆದ್ಯಂತಗತಿ ನಾಮ
ಭಕುತರೆಡರಿನ ಗಿರಿಗೆ ವಜ್ರನಾಮ ೨
ಸರ್ವ ಶ್ರುತಿಮುನಿಗಳುಗ್ಗಡಿಸುತಿಹ ನಾಮ
ಉರ್ವಿಯೊಳು ನಂಬಿದರ ಪೊರೆವ ನಾಮ
ಸರ್ವಜ್ಞರಾಯಗುರು ನಿರ್ವಚನಿಸುವ ನಾಮ
ಸರ್ವೇಶ ಪ್ರಸನವೆಂಕಟೇಶನ ಶ್ರೀನಾಮ ೩

೪೪೧
ಮಹಾಲಕ್ಷುಮಿಗೆ ನಿತ್ಯ ಮಂಗಳ ಶುಭ ಮಂಗಳ
ಮಹಾವಿಷ್ಣುವಿನ ರಾಣಿಗೆ ಮಹಾ ಮಂಗಳ ಪ.
ಪೂರ್ಣಚಂದ್ರಾರ್ಣವ ಪೂರ್ಣಗುಣಾರ್ಣವ
ಪೂರ್ಣಮನೋರಥದಾಯಕಿಗೆ ಸು
ಪರ್ಣೇಂದ್ರವಾಹನನರ್ಧಾಂಗಿ ದೇವಿಗೆ ವಿ
ಶ್ವ ನಾಯಕಳಾದ ಜಗನ್ಮಾತೆಗೆ ೧
ಕರವೀರಪುರದಲ್ಲಿ ನೆರಹಿದ ಭಕ್ತರ
ಕರಕರದಭೀಷ್ಠೆಯ ಕೊಡುವಂದಿಗೆ
ಕರಕಮಲಗಳಲ್ಲಿ ಅಕ್ಷಯಾಮೃತಕುಂಭ
ಧರಿಸಿದ ಜಾಣೆ ಕಲ್ಯಾಣಿಗೆ ನೀಲವೇಣಿಗೆ ೨
ಶ್ರೀಮದನಂತಾಸನ ವೈಕುಂಠ
ಶ್ರೀ ಮತ್ಯ್ವೇತದ್ವೀಪನಿವಾಸಿನಿ
ಸ್ವಾಮಿ ಪ್ರಸನ್ನವೆಂಕಟನ ಪಟ್ಟದರಾಣಿ
ಕಾಮಿತಾರ್ಥದಾಯಿ ಕಲ್ಯಾಣಿಗೆ ೩

೩೩೨
ಮಾಡು ಸಾಧು ಸೇವೆಯ ಬೇಡು ಆಭಯ
ಕೂಡು ನಂತರ ನೀ ನಿರಂತರೀಡಾಡಿದರೆ
ಅಂಜಿ ಓಡದೆ ಆತ್ಮ ಪ.
ಸಂತರೊಳು ಕುತರ್ಕ ಕಲ್ಪಾಂತ ರೌರವ ನರ್ಕ
ಸಂತರೊಳು ಉಗ್ರ ಮನಸು ಆದ್ಯಂತ ಪಾಪದ ಬೆಳಸು
ಸಂತರ ಕೂಡ ದುಶ್ಚಿತ್ತ ದೇಹಾಂತ ಪ್ರಾಯಶ್ಚಿತ್ತ
ಸಂತರಾಧೀನನಾದರೆ ಹರಿ ತಾ ಸಂತೋಷದಿಂದ ಒಲಿವನು ನಿತ್ಯ ೧
ತೀರ್ಥ ಸ್ನಾನವು ಹಲವು ಕಾಲೋತ್ತರಕಾಹುದು ಫಲವು
ಮೂರ್ತಿ ಔಪಾಸನವು ಧರ್ಮಾರ್ಥ ಮುಂದಣ ಅನುವು
ಅರ್ಥಗಳ ವಿತರಣವು ಶೂನ್ಯಾರ್ಥ ಸಮಯಕೆ ದಣಿವು
ಸಾಥರ್ಕವು ಸಧ್ಯ ಸಾಧುನಿಕರದ ಗಾತ್ರ ಕ್ಷೇತ್ರಯಾತ್ರೆಯ ಬಿಡದೆ ೨
ಸಾಧುಸಂಗವಗಿಲ್ಲ ಮುಕ್ತಿಯ ಹಾದಿ ಅವನಿಂಗಿಲ್ಲ
ಸಾಧುರ ದಾವ ಹಳಿವ ತಮಸಕೈದುವುದು ಅವನ ಕುಲವು
ಸಾಧುಕೃಪೆ ದಾವಗುಂಟು ಎಲ್ಲಿ ಹೋದರಾನಂದದ ಗಂಟು
ಸಾಧುಪ್ರಿಯ ಪ್ರಸನ್ವೆಂಕಟರಮಣನು ಸಾಧುರ ಮೆಚ್ಚಿದವರಿಗೆ
ಮೆಚ್ಚುವನು ೩

ಸುಪರ್ಣಗಮನ : ಕಶ್ಯಪ
೧೧೪
ಮಾಧವ ಜಯ ಮಾಧವ ಜಯ
ಯಾದವ ಕುಲಮಣಿ ಭೂದೇವೀಪ್ರಿಯ ಪ.
ವಿದ್ಯಾಧರಮುನಿ ಸದ್ಯೋಜಾತ ವಿರಿಂ
ಚಾದ್ಯರ್ಚಿತ ವೇದವೇದ್ಯ ಮುಕುಂದ ೧
ಸ್ವರ್ಣಗಿರೀಶ ಸುಪರ್ಣಗಮನ ವಿಶ್ವ
ನಿರ್ಣಯ ಶೀಲ ದಯಾರ್ಣವ ಪೂರ್ಣ ೨
ಪುಣ್ಯ ಸತ್ಪುರುಷವರೇಣ್ಯ ದನುಜ ಜನಾ
ರಣ್ಯಪಾವಕ ದೋಷ ಶೂನ್ಯ ಗುಣಾಂಕ ೩
ಕಠಿಣ ದಂಡಕ ದೇಶಾಟಣ ಸುಪ್ಲವಗ ಸಂ
ಘಟಣಾಹಿಫಣ ತಟನಟಣ ಶ್ರೀಮೂರ್ತೆ ೪
ಕಿಂಕರರಕ್ಷ ನಿಶ್ಯಂಕ ಸದಾದೇವ
ಸಂಕಟಹರ ಪ್ರಸನ್ವೆಂಕಟವರದ ೫

(ಅ.ಪ.) ಸಂಚಿತಾರಬ್ಧಾಗಾಮಿ
೨೬೯
ಮುಂಚೆ ಕೈವಿಡಿದಂತೆ ಮಿಂಚೆನ್ನ ಎದೆಗುಡಿಲಿ
ಪಂಚಬಾಣನ ಜನಕನೆ ಪ.
ಸಂಚಿತಾರಬ್ಧಾಗಾಮಿ ಸಂಚಂಚಲಿಪ ಮನದ ಪ್ರ
ಪಂಚವನು ಬಿಡಿಸು ತಂದೆ ನೊಂದೆ ಅ.ಪ.
ಭವ ಬವಣೆಗಳನು ಅನುಭವಿಸಿದನ ಸತ್ಕುಲೋ
ದ್ಭವನ ಮಾಡಿದ ಕೃಪೆಗೆ ನವಭಕುತಿ ಕಲಿಸು ಎ
ನ್ನವಗುಣವ ಬಿಡಿಸು ದಾನವವೈರಿ ನರ ಮುರಾರಿ ಶೌರಿ ೧
ಲೇಸು ಹೊಲ್ಲೆಯನರಿಯೆ ಲೇಶ ನಿಷ್ಠೆಯನರಿಯೆ ನಾ
ಲೇಶದೊಳು ನಿನ್ನ ಮರೆದೆ ದಾಸಾಭಿಮಾನಿಯೆ ಸ
ದಾ ಸರ್ವಕಾಲದಿ ಉದಾಸೀನವ ಮಾಡಬೇಡೈ ನೋಡೈ ೨
ಸ್ರ‍ಮತಿಯೊಳಗೆ ಕೂಡಿ ವಿಸ್ರ‍ಮತಿಯ ಕೂಡೋಡಾಡಿ
ಸ್ರ‍ಮತಿ ದಾರಿ ಕೊಳದು ಮನವು ಸ್ರ‍ಮತಿವಂದ್ಯ ಪ್ರಸನ್ವೆಂಕಟ
ಸ್ಮಿತವದನ ದಾತ ಅಸ್ಮತ್ ಪಾಪ ಪಂಕಶೋಷ ನಿರ್ದೋಷ ೩

೩೩೩
ಮುಂದೋರುವನು ಮುರಾರಿ
ಎಂದೆಂದು ಕುಜನಕೆ ದೂರನು ಶೌರಿ ಪ.
ಘನ ಭಾಗವತ ಶ್ರವಣವ ಮಾಳ್ಪರಿಗೆ
ವನಜನಾಭನ ಸಂಕೀರ್ತನೆ ಕಾಮೇಷ್ಟರಿಗೆ
ಮುನಿವಂದ್ಯ ಕೃಷ್ಣನ ಮನಸಲಿ ಮರಿಯದೆ
ಗುಣ ಕರ್ಮ ನಾಮ ಸ್ಮರಣೆಯಲಿಹರಿಗೆ ೧
ಶ್ರೀ ವಾಸುದೇವಾಂಘ್ರಿ ಸೇವಾಸಕ್ತರಿಗೆ
ಶ್ರೀವರನರ್ಚನೆ ಸದ್ಭಾವಯುಕ್ತರಿಗೆ
ಸಾವಿರಭಿದಾನದ ದೇವದೇವಗೆ ಸರ್ವ
ದಾ ವಂದಿಸುವ ವ್ಯಾಸಂಗವಿಡಿದರಿಗೆ ೨
ಶೇಷಶಯನನ ಸದ್ದಾಸರಾದರಿಗೆ
ದೋಷದೂರನ ಸಖರಹ ಸಜ್ಜೀವರಿಗೆ
ಪ್ರಸನ್ವೆಂಕಟವಾಸಗೆ ತನ್ನನ
ರ್ಪಿಸಿ ಮುಕುತಿ ಮನೆಯಾಸೆವಂತರಿಗೆ ೩

೭೫
ಮೆಚ್ಚು ಮದ್ದು ಮಾಡಿದರೆನ್ನ ಮುದ್ದು ಚಿನ್ನನ
ಅಚ್ಚ ಕಾಮುಕ ನಲ್ಲೇರೆನ್ನ ಅಚ್ಯುತ ಕೃಷ್ಣನ ಪ.
ಮಾತನಾಲಿಪನಾವಾಗ ಮಡದೇರ್ಗೆ ಸೋತು ರಂಗ
ಧಾತು ವಿಪರೀತಾಗಿದೆ ಧನಿಗಾನಂಜಿದೆ ೧
ವಂಚನೆಯ ಕಲಿತ ಗೃಹದ ವಿತ್ತವೆಲ್ಲ ಸೂರ್ಯಾಡಿದ
ಸಂಚರಿಪ ಹೊರಗೆ ನಾರೇರ ಸೋಂಕಿ ಹಾ ಕುವರಾ ೨
ಹುಸಿ ಖರೆಯ ಕಲಿತ ಹೊಸನಡೆಯರಿತ
ಪ್ರಸನ್ವೆಂಕಟ ಮುಕುಂದ ಪರವಶನಾದ ೩

೪೦೦
ಮೋಕ್ಷೋಪಾಯಕಾನಂದ ಮುನೀಂದ್ರನ
ಶಿಕ್ಷಾ ಮಾರ್ಗಹುದಯ್ಯ
ಲಕ್ಷ್ಷ್ಯಶ:ಲಕ್ಷಣವಾರ್ಹೇಳೇನು
ಲಕ್ಷದಿ ಗುಣವಿಲ್ಲಯ್ಯ ಪ.
ಸುಕೃತ ತಾನಾದರೆ ಚಿರಕಾಲಕೆ ಒಮ್ಮೆ
ಧಿಕೃತವಾಹುದು ಭವತುಷ್ಟಿ
ಸುಖವೆಂಬುದು ಸ್ವರೂಪಾನಂದಾನುಭವ
ವಿಕಸವಾಗುವ ಜ್ಞಾನದೃಷ್ಟಿ ಆ
ಸುಖವಾಪೇಕ್ಷಿಸಿ ಪ್ರಕೃತವುದಾಸಿಪ
ದಖಿಳ ಮಹಾತ್ಮರಭೀಷ್ಟಿ
ಸಕಳಾನಿಷ್ಟವ ಸಾಗಿಸುವ ಶ್ರೀ
ಸುಖತೀರ್ಥರ ಶುಭಗೋಷ್ಟಿ ೧
ಕಿವಿಯಲಿ ಸತ್ಶಾಸ್ತ್ತ್ರವ ಕೇಳಿ ಧ್ಯಾನಮನ
ನವ ಸಾಧಿಪುದೆ ದೇವಸಾರ್ಥಿ
ಕುವಲಯಪ್ರಿಯಕುಲತಿಲಕನು ಮೆಚ್ಚಿಹ
ನವಭಕುತಿಯ ಪಥ ಕೀರ್ತಿ
ಅವಿರಳ ಎದೆಗದ್ದಿಗೆಯೊಳು ಮೆರೆವನ
ಸವಿಗುಣ ನಿರ್ಣಯವಾರ್ತಿ
ವಿವರಿಸಿ ವಾರಂವಾರ ವರದ ಮ
ದ್ಧವ ಜಗದ್ಗುರು ವರಮೂರ್ತಿ ೨
ಈಶ್ವರ ಸಾಕ್ಷಾತ್ಕಾರದ ಭೇದರ
ಹಸ್ಯ ವಿಚಾರವಂತ ಯೋಗಿ
ನಶ್ವರಾನಶ್ವರವರಿತ ವೈರಾಗ್ಯದ
ಐಶ್ವರ್ಯಾನ್ವಿತ ಭೋಗಿ
ಶಾಶ್ವತ ಪ್ರತ್ಯಕ್ಷಾದಿ ತ್ರಿಪ್ರಮಾಣ
ಭಾಷ್ಯಕ ಶ್ರೀಪದಯೋಗಿ
ವಿಶ್ವದೊಡೆಯ ಪ್ರಸನ್ವೆಂಕಟಪತಿ ಪದ
ವಿಶ್ವಾಸಿಕ ಮುನಿಯೋಗಿ ೩

೧೭೮
ಯತಿರತನತಿಮತಿಯುತನೆ
ರತಿಪತಿಪಿತ ಸೇವಾರತನೆ ಮ
ರುತಮತ ಭಕುತಿಪೂರಿತನೆ
ನಾಥ ಸತ್ಯಾಭಿನುತ(ನವ?)ತೀರಥನೆ ಪ.
ಶ್ರುತಿ ಸ್ರ‍ಮತಿ ಇತಿಹಾಸಾರ್ಥ ನೀ
ಜ್ಞಾತತೆಗತಿ ಸಮರ್ಥ
ಕ್ಷಿತಿಸತಿವಿತ್ತ ವಿರಹಿತನೆ ಮ
ನ್ಮಥ ಜಿತಕಾಂತಿ ಶೋಭಿತನೆ
ನೀತಿ ಚತುರತೆ ಸುವಿರತಿ ನಿಸ್ಸೀಮ ವಿ
ಖ್ಯಾತ ರಘುಪತಿ ಅರ್ಚಿತ ಪಥಗಮ್ಯ
ಸತತ ವಿದ್ವತ್ತ ಪ್ರತತಿಗೆ ವಿತ್ತರಣ ಶೂರೋ
ನ್ಮತ್ತ ದುರ್ಮತ್ತ ಕಾಂತಾರ ಕುಠಾರ ೧
ಧ್ಯಾನ ಮೌನ ಪೂರ್ಣ ಗಂಭೀರ ಗೀ
ರ್ವಾಣ ವಾಣಿನಿರುತ ಉಚ್ಚಾರ
ಜ್ಞಾನಿ ಜನರಿಗೆ ಘನ್ನಗುರುವೆ ನಿ
ದಾನ ಗುಣ ಕಲ್ಪತರುವೆ
ಮಾನಾಥನ ಪೂಜೆ ಮನ ಮನೆಯೊಳು ಮಾಡಿ
ನೀಣ್ಯವಿನಾನೆಸದು (?) ನಲಿನಲಿದಾಡಿ
ದೀನಜನರಿಗೆ ತತ್ವಜ್ಞಾನ ಸುಧೆ
ಯನುದಿನದೊಳೆರೆದೆ ಕಾಮಧೇನುವಿನಂತಯ್ಯ೨
ತ್ರ್ರೇತಾ ಕ್ಷಿತಿಪರ್ಗೆ ಮಿಗಿಲೆನಿಸಿ ಶ್ರೀ
ಸೀತಾಪತಿ ಅತಿಮುದಬಡಿಸಿ
ಮತ್ತಮಾಯಿಮೊತ್ತಗಜಸಿಂಗ ನಿನ್ನ
ಪ್ರತಿ ಎಂತೊ ಗುರುಕುಲೋತ್ತುಂಗ
ಚಿತ್ತಜನಯ್ಯ ಪ್ರಸನ್ವೆಂಕಟೇಶ ಭಜನಶೀಲ
ಸತ್ಯನಾಥಸುತ ಸತ್ಯಾಭಿನುತ (ನವ?) ತೀರಥನೆ
ಸುತ್ತ ವಿಸ್ತರಿಸಿ ನಿನ್ನ ಕೀರ್ತಿ ದ್ಯುತಿಮಣಿಯಂತ
ನ್ಯಥಾ ಗತಿ ಕಾಣೆನೆನ್ನ ರಕ್ಷಿಸಯ್ಯ ಪಿತನೆ ೩

೪೦೧
ಯದುವೀರ ಒದಗೆನ್ನ ನಾಲಿಗೆಗೆ
ಉದಯಾದಿ ಅಸ್ತಾಂತ ಆವಾವಾಗೆ ಪ.
ನಿನ್ನ ನಾಮದ ಸ್ಮರಣೆಯೆ ಶುಭಕರ್ಮವು
ಉನ್ನತ ಸಂಕೀರ್ತನೆ ಶತಕ್ರತುವು
ಪುಣ್ಯಗಂಗಾಸ್ನಾನದ ಫಲಕಧಿಕವು
ಘನ್ನ ಜಪದ ಬೀಜವೆ ನಾಮವು ೧
ಬಂಗಾರದಿಳೆಯಳೆದೊಲಿದೀವ ದಾನದಿ
ಹಿಂಗದೆ ಉಭಯಸ್ಯ ಗೋಶತದಿ
ಶೃಂಗಾರ ಕೋಟಿ ಕನ್ಯಾದಾನಕಧಿಕವು
ಮಂಗಳಮಹಿಮ ಮುಕುಂದನ ನಾಮವು ೨
ಧರ್ಮಾರ್ಥ ಕಾಮಮೋಕ್ಷಗಳ ಮೂಲವಿದೆಂದು
ನಿರ್ಮಲ ಶ್ರುತಿ ಸಾರುತಾವೆಂದು
ಮರ್ಮವರಿತು ನಾಮ ನಂಬಿದೆ ಶೇಷಾದ್ರಿಯ
ಹಮ್ರ್ಯನಿಲಯ ಪ್ರಸನ್ವೆಂಕಟಯ್ಯ ೩

೧೧೫
ಯಾಕೆ ಬೆಟ್ಟವನೇರಿ ನಿಂದೆ ಅವನಿ
ವೈಕುಂಠವೆಂದೆ ಆ ವಿಧಿ ಸ್ಮರರ ತಂದೆ ಪ.
ತಮನೆಂಬರಿಯ ತರಿದು ತರಿದು ನಿಗಮವ ತಂದು
ಕ್ರಮದಿ ಕಮಲೋದ್ಭವಗೆ ಕೊಡುವೆನೆಂದೇರಿದೆಯೊ
ಕಮಲವ್ವೆ ಬರೆ ಕಂಡು ಕಲ್ಲ ಭಾರವನಿಳುಹಿ
ಭ್ರಮಿಸಿರುವ ಭಾವ ತೋರಿದೆಯೊ ಖಳೋ
ತ್ತಮನ ದಾಡೆಯಲರಿದು ಈ ತಾಣವೇರಿದೆಯೊ ೧
ಧೀರ ಶಿಶುವಿನ ಹಗೆ ವಿದಾರಿಸುತ ದಶದಿಶದಿ
ಸಾರಿದ ನಿಜರ ನೋಡಿ ಸಲಹಲಿಲ್ಲೇರಿದೆಯೊ
ಮೀರಿ ಮೆರೆವನ ತಲೆಯ ಮೆಟ್ಟಿ ಪಾತಾಳಕಿಳುಹಿ
ತೋರಿದೆಯೊ ತ್ವತ್ಪಾದದಿರವ ಧರೆಯ
ಪಾರುವರಿಗೊಲಿದಿತ್ತ ಪರಿಯಲೇರಿದೆಯೊ ೨
ಅಸುರ ನೊಯಿದರಸಿಯಳ ಅರಸ ತಂದೇರಿದೆಯೊ
ಪಶುಗಾವಿ ಯೋಗಗಳ ಪುರವ ಪೊಗಲೇರಿದೆಯೊ
ಹೊಸಧರ್ಮ ಹೊಲಬು ತೋರಿದೆಯೊ ಇದರ
ಪೆಸರರುಹಿ ಪೊರೆಯೆನ್ನ ಪ್ರಸನ್ವೆಂಕಟೇಶ ೩

೩೩೪
ಯಾತಕೆಲೆ ಮನವೆ ನೀ ಭೀತಿಗೊಳುವೆ ಶ್ರೀ
ನಾಥ ಜಗತಾತ ಹೆತ್ತಾತನಿರೆ ಅನವರತ ಪ
ಒಡಲೊಳಿರೆ ನವಮಾಸ ಪಡಿಯ ನಡೆಸಿದರಾರು
ದೃಢಕುಚದಿ ಪಾಲ್ದುಂಬಿ ಕೊಡುವರಾರು
ನಡೆನುಡಿಗಲಿಸಿ ನಿದ್ರೆವಿಡಿಸಿ ಎಚ್ಚರಿಪರಾರು
ಕಡೆಮೊದಲಿನೊಡೆಯನಿರಲಡಿಗಡಿಗೆ ಬರಿದೆ ೧
ಅಪ್ರಸಿದ್ಧಾತ್ಮನಿಗೆ ವಿಪ್ರಕುಲವಿತ್ತರಾರ್
ಶ್ರೀಪ್ರಜ್ಞಮತದಿ ನೆಲೆಸಿಪ್ಪರಾರು
ಅಪ್ರಬುದ್ಧರಿಗೆ ಮತಿಕ್ಷಿಪ್ರ ಬೋಧಿಪನು ಮು
ಖ್ಯಪ್ರಾಣವರದ ಸುಪ್ರಧಾನನಿರೆ ನಿರುತ ೨
ಧರೆಗೆ ಮಳೆಗರೆದು ಸಸಿಗಳನು ಬೆಳೆಸಿದರಾರು
ಗಿರಿವಿಪಿನ ಖಗಮೃಗದ ಹೊರುವರಾರು
ಪರಮ ಕಾರಣಿಕ ನಮ್ಮ ಪ್ರಸನ್ವೆಂಕಟನೆ ಜಗ
ದರಸೆಂದು ಶ್ರುತಿ ಸ್ರ‍ಮತಿಯೊಳಿಹುದರಿದು ಮರೆದು ೩


ಯಾತರ ಬಲ್ಲತನವೊ ಕೃಷ್ಣಯ್ಯ ನಿನ
ಗ್ಯಾತರ ಬಲ್ಲತನವೊ ಪ.
ಯಾತರ ಬಲ್ಲತನನಾಥರ ನಮ್ಮ ಸ
ನಾಥರ ಮಾಡಿ ಸಂಪ್ರೀತಿಯ ಬಡಿಸದಿನ್ಯಾತರ ೧
ಬಿರುದಂತೆ ಭಕುತರ ಪೊರೆವುದು ಗಡ ನಿನ್ನ
ಸ್ಮರಣೆಗೆ ಮರೆವಿತ್ತು ದುರಿತಕೊಪ್ಪಿಸುವುದಿನ್ಯಾತರ ೨
ಬಲ್ಲತನದ ಗುರುತೆಲ್ಲ ದೇಶದೊಳು ನ
ನ್ನಲ್ಲಿ ಅಜ್ಞಾನದ ಬಳ್ಳಿಯ ತೊಡಕಿಸೂದ್ಯಾತರ ೩
ನಿಜರವಮಾನದ ಕುಜಕೆ ಪರಶುರಾಮ
ತ್ರಿಜಗವಂದಿತ ನಿನ್ನ ಭಜಕರೊಳಿಡಲೊಲ್ಲದ್ಯಾತರ ೪
ದುರಿತಗಿರಿತ ಅರಿಗಿರಿಗಂಜೆ ನಾಮವಜ್ಜರ
ವಿರೆ ಪ್ರಸನ್ವೆಂಕಟರಸ ಮನ್ನಿಸಲೊಲ್ಲದ್ಯಾತರ ೫

೪೦೨
ಯಾತರಭಿಜ್ಞತೆ ಯಾತರ ಭಕುತಿ ಶ್ರೀ
ನಾಥಾಂಘ್ರಿ ವಿಮುಖಾದ ಸೂತಕಿಗಯ್ಯ ಪ.
ಕಪಟನಾಟಕ ಸೂತ್ರ ಅನಂತಗುಣ ನಿತ್ಯ
ತೃಪುತ ಮುಕುತ ನಿತ್ಯ ಸ್ವತಂತ್ರಗೆ
ಉಪಾಧಿ ಸಗುಣನೆಂದನಾದಿ ನಿರ್ಗುಣನೆಂದು
ಉಪಾಸನೆವಿಡಿದ ಸೋಹಂಭಾವದವಗೆ ೧
ಅಪುಶಾಯಿ ಅಗಣಿತ ಆನಂದ ಬ್ರಹ್ಮಾದಿ
ತಾಪಸರರಸ ಪುರುಷೋತ್ತಮಗೆ
ಉಪಚಾರಕ್ಹರಿಯೆಂದು ಹರಕರ್ಮ ರವಿಗಣಾ
ಧಿಪರೆ ಉತ್ತಮರೆಂಬ ಕಪಟಮಾನಿಸಗೆ ೨
ಪೂರ್ಣಪ್ರಜ್ಞರ ಮತ ನವಭಕುತಿಗಳ
ನಿರ್ಣಯದಲಿ ತರತಮವಿಲ್ಲದೆ
ಅರ್ಣವ ಕಲಿತೇನಿನ್ನಾಕಾಶ ಚರಿಸೇನು
ಪೂರ್ಣ ಪ್ರಸನ್ವೆಂಕಟೇಶನೊಪ್ಪಿರದೆ ೩

(ನು. ೨) ಕುಂಭಕ
೩೩೫
ಯೋಗವೆಂದರೆ ದಾವುದು ಮಾನಿಸಗೆ
ಯೋಗವೆಂದರೆ ದಾವುದು
ನಾಗಶಯನನ ನಾಮ ಕೂಗುವುದೆ ಮಹಾಯೋಗ ಪ.
ಪೂಸರಳನ ಬಲೆಗೆ ಸಿಲುಕಿ ದೃಢ
ಆಸನ ಬಲಿದಹಗೆ
ಹಾಸ್ಯವದನೆಯರ ಲೇಶ ಹಾರೈಸದೆ
ದಾಸಾಗಿ ಹರಿಯ ಸದಾಧ್ಯಾಸವೆ ಮಹಾಯೋಗ ೧
ವಾಗಾದಿಂದ್ರಿಯ ಕಟ್ಟದೆ ಕುಂಭಕವೆಂದು
ಮೂಗಿನುಸಿರ ಕಟ್ಟಿದ
ಭೋಗ ಬಯಸದೆ ತಾನಾಗಿ ಬಂದದನುಂಡು
ಲೋಗರ ಹಣ ಹೆಣ್ಣಿನ ತ್ಯಾಗವೆ ಮಹಾಯೋಗ೨
ಭಾವಶುದ್ಧಿಯ ಮಾಡದೆ ಯೋಗ ಮಾರ್ಗದ
ಠಾವ ಸಿದ್ಧವ ಮಾಡಿದ
ದೇವ ಪ್ರಸನ್ವೆಂಕಟವರದನ ಸ
ದ್ಭಾವುಕರ ಪಾದಾಬ್ಜಸೇವೆಯೆ ಮಹಾಯೋಗ ೩

೭೬
ರಂಗ ಕುಣಿದ ಮುದ್ದು ರಂಗ ಕುಣಿದ ಪ.
ರಂಗ ಕುಣಿದ ಗೋಪಿಕಂಗಳ ಮುಂದೆ
ಪೊಂಗೆಜ್ಜೆ ರವದೊಳು ಅಂಗಳದೊಳು ೧
ಗೆಳೆಯರೆಂದೆನಿಸುವ ಎಳೆಮಕ್ಕಳೊಡಗೂಡಿ
ಬಳುಕುತ ಬಾಗುತ ನಲಿನಲಿದಾಡಿ ೨
ಮೊಳೆವಲ್ಲು ಬಾಯಿಜೊಲ್ಲು ಗಿಳಿಸೊಲ್ಲಿನಿಂದಲಿ
ಕಳಕಳಿಸಿ ನಕ್ಕು ನಗಿಸಿ ಬಿದ್ದೆದ್ದು ೩
ಸುಳಿಗುರುಳು ಪಣೆಯಲಿ ಒಲಿದಾಡಲು
ಬಲರಾಮ ತಿದ್ದಿದರಳುತ ಅಳುಕುತ ೪
ಅರಳೆಲೆ ಮಾಗಾಯಿ ಬೆರಳ ರನ್ನುಂಗುರ
ಕಿರುಗೆಜ್ಜೆ ಭಾರೆಂದು ತರಳರಿಗಿತ್ತು ೫
ಮಕ್ಕಳ ರತುನ ಶ್ರೀ ಚಿಕ್ಕಕೃಷ್ಣಯ್ಯನು
ಬೆಕ್ಕಿಗೆ ಬೆದರ್ಯೆವೆ ಇಕ್ಕದೆ ನೋಡಿ ೬
ನಗುತತಿ ಮುದ್ದಿಸಿ ಬಿಗಿದಪ್ಪಲೆಶೋದೆಯ
ಮಗ ಪ್ರಸನ್ವೆಂಕಟೇಶ ಚಿಗಿದುಡಿಯಲ್ಲಿ ೭

೧೧೬
ರಂಗ ಕೊಳಲ ನೂದಲಾಗಿ
ಮಂಗಳ ಮಯವಾಯಿತು ಧರೆ ಜ
ಗಂಗಳ ಜೀವರು ಚೇತನ ಮರೆದು ರಂಗಧ್ಯಾನ ಪರರಾದರು ಪ.
ಬಾಡಿದ ಬಳ್ಳಿಮರ ಗೊನೆ ಒಡೆದು
ತೀಡುವ ಮಂದಮಾರುತನ ಕೂಡಿ ತೂ
ಗ್ಯಾಡಿದವಲರ ಫಲದ ಗೊಂಚಲು ಹಾಡಲೊಲ್ಲವಳಿ ಕುಲಗಳು
ಹೇಡಿಗೊಂಡವು ಜಾಣ್ವಕ್ಕಿ ಗಿಣಿಯು ಮಾ
ತಾಡದೆ ಗಳಗುಂದಿದವು ಕೋಗಿಲೆ
ಓಡ್ಯಾಟ ವೈರಾಟ ಬಿಟ್ಟು ಖಗಮೃಗವೆಲ್ಲ ಗಾಢ ನಿದ್ರಾವಶವಾದವು೧
ಕೆಳಗಿನುದಕುಬ್ಯುಬ್ಬಿ ಬಂದವು
ತುಳುಕಿ ಚೆಲ್ಲಾಡಿ ನಿಂತಳು ಯಮುನೆ
ಮೇಲೊಡ್ಡೊಡ್ಡಿ ಮೇಘಾಳಿ ಧಾರಿಟ್ಟವು ಕಲ್ಲು ಕರಗಿ ನೀರಾದವು
ನಳಿನ ಚಂಪಕ ನಾಗ ಪುನ್ನಾಗ ಪಾ
ಟಲ ಶಾವಂತಿಗೆ ಕುಂದ ಬಕುಳವು
ಮಾಲತಿ ಜಾಜಿಯು ಪರಿಮಳಗೂಡಿ ನೀಲಾಂಗನಂಘ್ರಿಗೆ ನೆರೆದವು೨
ಕೆಚ್ಚಲು ಬಿಗಿದು ತೊರೆದ ಮೊಲೆಯಿಂ
ವತ್ಸಗಳೊಡಲಾಸೆ ಜರಿದೆಳಹುಲ್ಲ
ಕಚ್ಚಿ ಅಲ್ಲಿಗಲ್ಲಿಗೆ ನಿಂತವು ತಲೆಯ ಪುಚ್ಛವ ನೆಗಹಿ ನಿಟ್ಟಿಸಿ
ಅಚ್ಯುತನಾ ಕೃತ್ಯ ನೋಡಲು ಸುರರಿ
ಗಚ್ಚರಿಯಾಯಿತು ಆವು ಕಂಡಾನಂದ
ಹೆಚ್ಚಿ ಮುಕುಂದನ ಲೀಲಾವಿನೋದಕೆ ಮೆಚ್ಚಿ ಕುಸುಮವ ಸುರಿದರು ೩
ಮುದ್ದು ಮೋಹನನ ಮಂಜುಳ ಸಂಗೀತ
ಸದ್ದನಾಲಿಸಿ ಗೋಪಾಂಗನೆರೆಲ್ಲರು
ಬುದ್ಧಿ ಸೂರ್ಯಾಡಿದರಾನಂದವಾರಿಧಿಯಲ್ಲಿ ಬಿದ್ದು ಪರವಶರಾದರು
ಸಿದ್ಧ ಮುನಿಜನರಿದ್ದ ಸಮಾಧಿಯೊ
ಳೆದ್ದೆದ್ದು ಕುಣಿದು ಎದೆದಾವರೆಯ
ಗದ್ದುಗೆಯರಸನೊಲಿಸಿಕೊಂಡರು ಗೆದ್ದರು ಭವಸಮುದ್ರವ ೪
ಶ್ರೀ ಮನೋಹರ ಮೂರುತಿ ಗೋಪಾಲನು
ಆ ಮಧುಕುಂಜವನದಲ್ಲಿ ತ್ರಿಭಂಗಿಲಿ
ಹೇಮಾಂಬರುಟ್ಟು ಗೀರುಗಂಧ ಕಸ್ತೂರಿನಾಮ ಮುಕುಟಕುಂಡಲ್ವೆಳಗಲು ದಾಮ ವನಮಾಲೆ ರತ್ನಾಭರಣದ
ಸ್ವಾಮಿ ಶ್ರೀ ಪ್ರಸನ್ವೆಂಕಟ ಕೃಷ್ಣನು
ರಾಮಕ್ರಿಯೆ ಗುಂಡಕ್ರಿಯೆ ಮೇಘರಾಗವ ಮಾಡೆ ಸಾಮವೇದ
ನಮೊ ನಮೊ ಎನ್ನೆ ೫

೨೭೦
ರಂಗ ನೀ ಎನ್ನೊಡೆಯನಾಗಿ ಅ
ಮಂಗಳಾತ್ಮರ ಮನೆಗೆ ಹೋಗ್ಯೆ
ನ್ನಿಂಗಿತವನುಸುರಿದರೆ ಕುಂದಿನ್ನಾರಿಗೆಲೆ ತಂದೆ ಪ.
ಹಂಚಿನೆದುರಲಿ ಹಲ್ಲು ತೆರೆದರೆ
ಮಿಂಚುಕನ್ನಡಿಯಾಗಬಲ್ಲದೆ
ವಂಚಕರ ಅನುಸರಿಸಿ ಒಡಲಾಸೆಯಲಿ ಬಳಲಿದರೆ
ಕಿಂಚಿದಭಿಮಾನಿಲ್ಲೆ ನಿನಗೆ ಪ್ರ
ಪಂಚ ಸೂತ್ರಿ ಮುರಾರಿ ಎನ್ನಯ
ಸಂಚಿತಾರಬ್ಧಾಗಮವ ನೂಕುವರು ದಾರುಂಟೈ ೧
ಅರಸು ಮುಟ್ಟಿದ ನಾರಿ ಮಾನ್ಯಳು
ಪರಸು ಹೊಂದಿದ ಲೋಹ ಪ್ರಿಯ ಪರಮ
ಪುರುಷ ನಿನ್ನವನೆನಿಸಿ ಕ್ಷುದ್ರರ ವಶವ ಮಾಡುವರೆ
ಅರಿದುದಾವುದಘಟಿತಘಟಕನೆ
ಶಿರಿವಿರಿಂಚಿ ಶಿವೇಂದ್ರರೊಡೆಯನೆ
ಪರಮ ಪಾತಕಿಯಾದರೇನ್ಮ್ಮುದ್ರಾಂಕಿತನು ಕಾಣೈ ರಂಗ ೨
ಮಧ್ವರಗಣನೆ ನಿನ್ನ ಶರಣರು
ಒದ್ದು ಭವಸಾಗರವ ದಾಟಿದ
ರುದ್ಧಟರು ನಾ ಕೇಳಿ ಕಕುಲತೆಯಿಂದ ಮೊರೆ ಹೋಗುವೆ
ಅದ್ದು ವಿಷದೊಳಗೆ ಸುಧೆಯೊಳು
ಅದ್ದು ನಿನ್ನ ನಂಬಿದವನು ನಾ
ಶುದ್ಧ ಭಟಜನಪಾಲ ಪ್ರಸನ್ವೆಂಕಟಾದ್ರೀಶ ೩

ಶಕಟ
೭೭
ರಂಗ ಬಾ ಮೋಹನಾಂಗ ಬಾ ದೇವೋ
ತ್ತುಂಗ ಬಾರೆಂದು ಕರೆದಳು ಗೋಪಿ ಪ.
ಚೀರುತ ಬಂದ ಚಿನ್ನ ಹಸಿದನೆಂದು ಘೃತ
ಕ್ಷೀರವೆರೆಸಿ ಕೊಟ್ಟರೆ ಒಲ್ಲದೆ
ಚೋರತನಕೆ ಮೆಚ್ಚಿ ಪೋಗುವೆ ನಿನ್ನನು
ದೂರುತ ನಿರುತ ಬಾಹರು ಗೋವಳೆಯರು ೧
ತುರುಗಾವೊ ನೆವದಲಿ ಪೋಗಿ ಗೋಪಾಲರ
ಕುರುಳಿಗೆ ತುರದ ಬಾಲಕೆ ಗಂಟಿಕ್ಕಿ
ದುರುಳತನಗಳನ್ನು ಮಾಡಿ ಮಾಡಿ ಮತ್ತ್ತೆ
ಅರಿಯದಂತೆ ಬಿಕ್ಕಿ ಬಿರಿಯಬೇಡೆಲೆ ಕಂದ ೨
ಚೆಲ್ಲೆಗಂಗಳೆಯರ ಶಯನಕೆ ಪೊಂದಿಹ
ನಲ್ಲರ ಬಡಿದೋಡಿ ಬರುತಲಿಹೆ
ಸಲ್ಲದು ನಿನಗಿದು ಬಾಲಕತನದೊಳು
ಫುಲ್ಲಲೋಚನ ಮುದ್ದು ಗೋಪಾಲಕೃಷ್ಣ ೩
ಶಕಟ ಪೂತನಿ ತೃಣಾವರ್ತ ಮೊದಲಾದ
ಶಕುತ ದನುಜರ ಮರ್ದನ ಕೃಷ್ಣಯ್ಯ
ಭಕುತರ ಬವಣೆಯನಳಿಯದಿದ್ದರೆ ಗಡ
ಸಕಲರು ಜಾರ ಚೋರೆಂದು ಸಾರುವರೊ ೪
ಎನ್ನ ಬೇಡು ನೀ ಮನದಣಿ ನೀಡುವೆ
ಅನ್ಯರ ಮನೆಗೆ ಪೋಗಲಿ ಬೇಡವೊ
ಚಿನ್ಮಯ ಮೂರುತಿ ಪ್ರಸನ್ವೆಂಕಟ ಕೃಷ್ಣ
ನನ್ನಾಣೆ ಮನೆಯ ಬಿಟ್ಟಗಲದಿರೊ ೫

ಫುಲ್ಲನಾಭ
೨೬
ರಂಗನ್ಯಾಕೆ ತಿರುಗಿ ಬಾರನೆ ಅಂತ
ರಂಗಪೀಠದಿ ಮೊಗದೋರನೆ ಪ.
ಮಂಗಳಾಂಗನೊಳು ಮಾತಾಡದೆ ಸತಿ
ಕಂಗಳು ದಣಿಯದೆ ನೋಡಿ
ಅಂಗನೆ ಹ್ಯಾಗೆ ಜೀವಿಸಲಮ್ಮ ಎ
ನ್ನಿಂಗಿತವಾರಿಗುಸುರಲಮ್ಮ ೧
ಕಲ್ಲೆದೆಯಾದೆ ಇನಿತುದಿನ ಜೀವ
ಕೊಲ್ಲದು ಹೋಯೆಂಬ ರೋದನ
ಫುಲ್ಲನಾಭನ ಎಂಜಲುಂಡರೆ ಕಷ್ಟ
ವಿಲ್ಲದ ಸುಖ ಕಣ್ಣು ಕಂಡರೆ ೨
ಕೃಷ್ಣನ ಶುಭಗುಣ ಹೊಗಳುತ ಬಹು
ಕಷ್ಟ ನೀಗಿದೆ ನಕ್ಕು ತತ್ವತ:
ಸೃಷ್ಟೀಶ ಪ್ರಸನ್ವೆಂಕಟೇಶನ ನೆನೆ
ವಷ್ಟರೊಳಗೆ ಮಾಯವಾದನೆ ೩

೨೭೧
ರಕ್ಷಿಸಲರಿಯಾ ರಂಗಯ್ಯ ರಕ್ಷಿಸಲರಿಯಾ ಪ.
ರಕ್ಷಿಸಲರಿಯೇನೊ ಲಕ್ಷ್ಮೀಪತಿ ಎನ್ನ
ಈಕ್ಷಿಸಿ ಕರುಣಕಟಾಕ್ಷದಿ ಭಕ್ತನ ಅ.ಪ.
ಭಾರವಾಗಿಹೆನೇನೊ ರೋಮಕುಳಿಗಳೊಳು
ಭೂರಿ ಬ್ರಹ್ಮಾಂಡಗಳನಿಟ್ಟಿಹಗೆ
ಮೀರಿದವನೇನಯ್ಯ ಬೆಲೆ ಪೇಳಿ ಕೈಗಟ್ಟಿ
ಮಾರುವ ಭಟರಲ್ಲಿ ನಾ ಪೇಳುವೆನು ೧
ಜಿತಮನನಲ್ಲೆಂದು ಹತ ಮಾಡೋದುಚಿತವೆ
ಪ್ರತಿಕ್ಷಣಕೊದಗೊ ತಂದೆ ಜಿಹ್ವೆಗೆ
ಅತಿತನಕಘ ಮುತ್ತೇಳದಿದ್ದರೆ ನಿನ್ನ
ಪತಿತ ಪಾವನನೆಂಬೋರೆ ಚೀರುವರೆ ೨
ಆಚಾರವಿಹೀನನೆಂದೋಕರಿಸಲಿ ಬೇಡ
ನೀಚೋದ್ಧಾರಕ ಬಿರುದು ನೀ ತಳೆದೆ
ಪ್ರಾಚೀನ ಕರ್ಮದಿಂದಲಿ ನಾ ದಣಿದಮೇಲೆ
ನಾಚಿಕಿನ್ಯಾರಿಗಯ್ಯ ಹೇ ಜೀಯ ೩
ದೋಷಿ ನಾನೆಂದು ದೂರಿಡದಿರೊ ತವನಾಮ
ಘೋಷಣೆಗುಳಿವುದೇನೊ ಪಾಪೇನೊ
ಹೇಸಿ ದರಿದ್ರನೆಂಬುವರದ್ಯಾರೊ ನಿನ್ನಭಿ
ಲಾಷೆವಿಡಿದ ಬಳಿಕ ಹೇ ಶ್ರೀಶ ೪
ಡೊಂಕು ನಡೆವರ ಕೊಂಕು ತಿದ್ದುವೆ ನೀ
ಸಂಖ್ಯೆಗಾಣೆನೊ ಕೊನೆಗೆ ಕೃಪೆಗೆ
ಲೆಂಕರಲಿ ಮನವಿದ್ದರೆ ಸಾಕು ಪ್ರಸನ್ನ
ವೆಂಕಟ ಸಾರ್ವಭೌಮ ನಿಷ್ಕಾಮ ೫

ರಂಭೆಗೆ ತತ್ವ ಹೇಳಿದನೆ:
೧೧೭
ರಕ್ಷಿಸು ರಕ್ಷಿಸು ದೇವ ವಿಶ್ವ
ಕುಕ್ಷನೆ ಭಕ್ತ ಸಂಜೀವ
ಪಕ್ಷಿಗಮನ ಕಾಯೊ ದಾತ ಭೃತ್ಯ
ಪಕ್ಷನೆ ಶ್ರೀ ಪ್ರಾಣನಾಥ ಪ.
ಜಾರಿದ ಶ್ರ್ರುತಿಯ ತಂದವನೆ ಉ
ದಾರಿ ವಿಕ್ರಮ ತಮಹರನೆ
ವಾರಿಧಿಯೊಳುದಿಸಿದನೆ ಮಂ
ದರ ಗಿರಿಯನೆತ್ತಿದನೆ ೧
ರಂಭೆಗೆ ತತ್ವ ಹೇಳಿದನೆ ಹೇ
ಮಾಂಬಕನ ಚುಚ್ಚಿದವನೆ
ಕಂಬವ ಸೀಳಿ ನಿಂದವನೆ ಆ
ದಂಭೋಳಿ ವೈರಿ ಬಾಲಪನೆ ೨
ಪದ್ಮಜಾಂಡವನೊಡೆದವನೆ ಬಲಿ
ಸದ್ಮವ ಬಿಡದೆ ಕಾಯ್ದವನೆ
ಛದ್ಮಿ ಪಾರ್ಥಿವರ ಸಂಹರನೆ ಕರ
ಪದ್ಮದಿ ಪರಶು ಪಿಡಿದವನ ೩
ಅಡವಿ ಪ್ರಾಣಿಗಳನಾಳುವನೆ ಹತ್ತು
ಹೆಡಕಿನವನ ತಲೆಕಡಿದವನೆ
ಮಡದಿಗೆ ಗಿಡವನಿತ್ತವನೆ ಭೀಮ
ಮಡದಿಯ ಲಜ್ಜೆ ಕಾಯ್ದವನೆ ೪
ಮಿಥ್ಯದ ಹೊಲಬು ಹೇಳಿದನೆ ಖಳ
ದೈತ್ಯರ ವಶವ ಮಾಡಿದನೆ
ಮತ್ತ ಕಲಿವಪುಹರನೆ ನನ್ನ
ಕರ್ತ ಪ್ರಸನ್ವೆಂಕಟ ನೀನೆ ೫

೩೩೬
ರಸಿಕರವರ ಪ್ರಿಯರಸ ಕಾವನು ಭಕ್ತಿ
ಕುಶಲನಿಗಿಹಪರಕುಶಲಾಘ ದೂರ ಪ.
ಪಥ ಮನೆ ವನದಿ ಶ್ರೀಪತಿ ಮಹಿಮೆ ಘೋಷಿಸಿ
ಪ್ರಥಮ ಯಾಮದಿ ಹರಿಪ್ರತಿ ಮುದವೇರಿ
ಸ್ತುತಿಸಿ ತಾರತಮ್ಯದ ಸ್ಥಿತಿ ಸನ್ಮತದೊಳಿದ್ದು
ಸತಿ ತನುಜ ಸೌರಂಭ ಸತತ ಹರಿಯದೆಂಬ ೧
ಹಿತಾಹಿತವರಿದು ವಿಹಿತಹೇತು ಬಲಿದು ವಿ
ರತಿ ಭಕ್ತಿ ಜ್ಞಾನ ನಿರುತ ಭೇದ ನಿ
ರತನಾಗಿ ಕುಜನವಾರತೆಯ ಕೇಳದಿರುವ
ಚತುರರ ಸುಕೃತ ಸಂಚಿತದಿರವೇ ಲೇಸು ೨
ವಿಷಮೀರೈದಿಂದ್ರಿಯ ವಶಮಾಡಿ ಮನೋರಿಯೋ
ಲ್ಸುಸುಖಾವಿಡಿದುಕೊಂಬಾ ಸುಸುಖಾವುಂಬ
ಭೈಷಜ್ಯ ಭವರೋಗ ಭೇಷಜನೆನಿಪ ಜಗ
ಪ್ರಸನ್ನ ವೆಂಕಟೇಶಾಂಘ್ರಿ ಸ್ರ‍ಪಶ್ಯನಾದಾರೋಗ್ಯ ೩

೧೧೯
ಸುಳಾದಿ
ಧ್ರುವತಾಳ
ರಾಮ ರಘುಕುಲ ಸಾರ್ವಭೌಮ ಪೂರಣಕಾಮ
ಜೀಮೂತಶಾಮ ಶ್ರೀಮೂಲರಾಮ
ಕೋಮಲ ಶರೀರ ಸೀತಾ ಮುಖಾಂಬುಜ ಭ್ರಮರ
ಪ್ರೇಮಸಾಗರ ಭಕ್ತಜನ ಮನೋಹರ
ಸಾಮಜಾತಿಹರ ಸಾಮಗಾನಾದರ ನಿ
ಸ್ಸೀಮ ಗುಣಗಂಭೀರ ಏಕವೀರ
ಸ್ವಾಮಿ ಮಠದರಸ ಮುನಿಸ್ತೋಮ ಮಾನಸಹಂಸ
ನೀ ಮನ್ನಿಸು ಪ್ರಸನ್ನವೆಂಕಟಾದ್ರೀಶ ರಘುರಾಮ ೧
ಮಠ್ಯತಾಳ
ಪಿಂತೆ ಸಮೀರಜನ ಸೇವೆಗೆ ಮೆಚ್ಚ
ತ್ಯಂತ ಪ್ರಸನ್ನನಾಗ್ಯವನ ಶುಭಕರ
ಸಂತತಿಗಭಯವನಿತ್ತಪೆನೆಂದೀಶ
ನಿಂತಿಹೆ ಪ್ರಸನ್ನವೆಂಕಟಪತಿರಾಮ
ಕಂತುಜನಕ ನಿತ್ಯಾನಂದನೆ ನಿ
ನ್ನಂತವರಿಯೆ ನಿಗಮಾಗಮಕಳವೆ ೨
ತ್ರಿಪುಟತಾಳ
ನಿರುತ ವೈಕುಂಠ ಮಂದಿರವಿದ್ದು
ಪರಣ ಕುಟೀರವನಾಶ್ರಯಿಸುವ ಘನತೆಯೆತ್ತ
ವರಪೀತಾಂಬರ ದಾಮವನು ಬಿಟ್ಟು ವಲ್ಕಲ
ಧರಿಸಿ ಕಾನನದಿ ಸಂಚರಿಪೋದೆತ್ತ
ನರಲೀಲೆಗಿದು ಶ್ಲಾಘ್ಯವೆಂದು ತೋರಿದೆ ಜಗ
ದೆರೆಯ ಪ್ರಸನ್ನವೆಂಕಟಾದ್ರಿ ರಘುರಾಮ ೩
ಅಟ್ಟತಾಳ
ಹರವರದಲಿ ಬಲು ಮತ್ತಾದ ರಜನೀ
ಚರವರ ಲಂಕೆಯಲಿ ಬಲಿದು ಗರ್ವದಿ
ಸುರವರರನುರೆ ಬಾಧಿಸಲವರನು
ಪೊರೆವರು ದಾರಯ್ಯ ನಿನ್ನಿಂದ
ಸ್ಥಿರವರದಾಯಕ ಪ್ರಸನ್ವೆಂಕಟ
ಗಿರಿವರನಿಲಯ ಕೌಸಲ್ಯೆಯ ಕಂದ ೪
ಆದಿತಾಳ
ಅಕಳಂಕ ಅಕುತೋತಂಕ ಅಕಳಂಕ
ಮಕುಟ ಕುಂಡಲ ಕೌಸ್ತುಭ ಕೇಯೂರ ವಲ
ಯಾಂಕಿತ ಕೋದಂಡ ಕಾರ್ಮುಕಪಾಣಿ
ಅಕಳಂಕ ಸುಖತೀರ್ಥವಂದಿತ ಪಾ
ದಕಮಲ ವಿಧಿನುತ ಮಖಪಾಲಕ ಪ್ರಸನ್ನ
ವೆಂಕಟಾಧಿಪ ಅಕಳಂಕ ೫
ಜತೆ
ಅಂದು ನರಹರಿಯತಿಗೆ ಅಂದದಲ್ಲೊಲಿದಿಲ್ಲಿ
ಬಂದು ನೀನಿಂತೆ ನಿಜರಮಣಿಯೊಡನೆ
ಎಂದೆಂದು ಸತ್ಯಾನಭಿವ ತೀರ್ಥ ಗುರು ಹೃದಯ
ಮಂದಿರನೆ ಪ್ರಸನ್ನವೆಂಕಟವರದ ರಾಮ

೨೭೨
ರಾಮ ರಾಮ ರಘುನಾಥನೆ ಸುರ
ಸ್ತೋಮ ತಿಲಕ ವಿಶ್ವಕರ್ತನೆ ದಿವ್ಯ
ಸ್ವಾಮಿ ಪುಷ್ಕರತೀರವಾಸನೆ ನನ್ನ
ಸ್ವಾಮಿ ವರಾಹ ವೆಂಕಟೇಶನೆ ಪ.
ಕಾಯೊ ಕಾಯೊ ಮಧುಮರ್ದನ ಭವ
ಸಾಯಕ ದೂರ ಜನಾರ್ದನ ಯದು
ನಾಯಕ ಧೃತ ಗೋವರ್ಧನ ನಾ
ರಾಯಣ ನಿಜಜನವರ್ಧನ ೧
ಹೊಂದಿದ ಭಟ ಕಲ್ಪವೃಕ್ಷನೆ ನನ್ನ
ತಂದೆ ತಾಯಿ ವಿಶ್ವಕುಕ್ಷನೆ ಕ್ಷೀರ
ಸಿಂಧು ಮಂದಿರ ಅಧ್ಯಕ್ಷನೆ ನಿ
ನ್ನಿಂದಾರುಗತಿ ಪದುಮಾಕ್ಷನೆ ೨
ಅಡಿಗಡಿಗೊದಗದ ತಪ್ಪನೆ ಇ
ಕ್ಕಡಿ ಮಾಡು ದೇವ ತಿಮ್ಮಪ್ಪನೆ ಮಾಯಾ
ಸಡಕ ತಪ್ಪಿಸು ಸುಪ್ರದೀಪನೆ ನಿತ್ಯ
ಬಿಡದೆ ಕ್ರೀಡಾದ್ರಿಯೊಳಿಪ್ಪನೆ ೩
ಲೇಶಭಕ್ತಿಗೆ ಮನ ಹಾರಿತು ವಿಷ
ಯಾಸೆಯಟವಿಯನೆ ಸೇರಿತು ಈ
ಹೇಸಿ ಚಂಚಲಚಿತ್ತ ಹೋರಿತು ತವ
ದಾಸರ ಸಂಗಕೆ ಜಾರಿತು ೪
ಕುಸುಮಶರನಂತ:ತೇಜನೆ ಮಹ
ಮಿಸುನಿವೆಟ್ಟದ ಕಲ್ಪಭೂಜನೆ ಅಜ್ಞ
ನಿಶಾಕುಲ ಉಡುಗಣರಾಜನೆ ಶ್ರೀ
ಪ್ರಸನ್ವೆಂಕಟ ರಾಜಾಧಿರಾಜನೆ ೫

(ನು. ೩) ವಿಭೀಷಣವರದ:
೧೨೦
ರಾಮ ರಾಮ ಸೀತಾರಾಮ ರಘುರಾಮ ಪ.
ರಾಮ ರಾಮ ರಘುನಂದನ ತೋಷನ
ಆಮಿಷ ಪಾದಾಂಬುಜ ಪಾವನ
ನಾಮ ವಿಮಲ ಕಮಲಾಯತ ಲೋಚನ
ಭೂಮಿಜಾರಮಣ ಸದಾ ಶುಭಮಹಿಮನೆ ೧
ದಂಡ ಕುಖರಹರ ವಂದಿತ ಸುಜಟಾ
ಮಂಡಿತ ಮೌಳಿ ಮುನೀಂದ್ರ ಕರಾರ್ಚಿತ
ಚಂಡಕುಲೇಶ ಖಳ ನಿಶಾಚರ
ದಂಡನ ವರ ಕೋದಂಡ ವಿದಾರಿ ೨
ವಾರಿದ ಶಾಮ ದಯಾಂಬುಧಿ ಭಕ್ತ ಸ
ಮೀರಜ ಸೇವ್ಯ ವಿಭೀಷಣವರದ ಸು
ಸ್ಮೇರವದನ ಸಾಮ್ರಾಜ್ಯ ಪಾರಾಯಣ
ಭೂರಿ ಪ್ರಸನ್ವೆಂಕಟ ಕೃಷ್ಣ ನಮೊ ೩

೧೧೮
ರಾಮನ ನೋಡಿರೈ ರಘುಕುಲ
ಸೋಮನ ಪಾಡಿರೈ ಪ.
ಜೀಮೂತ ಶ್ಯಾಮಲಕಾಯ ಜನಕ
ಜಾಮಾತ ಸೀತಾಕಾಂತ ಅ.ಪ.
ಕೋಟಿದಿವಾಕರನಿಭ ಮಕುಟದ ಮಸ್ತಕದ ಮುದ್ದಿನ ಮುಖದ
ನೀಟಹ ಪಣೆಯಲಿ ಮೃಗಮದ ಪುಂಡ್ರ ತಿಲಕದ ನೀಲಾಳಕದ
ಮಾಟಕ ಮದನನ ಬಿಲ್ಲ ಹಳಿವ ಹುಬ್ಬುಗಳ ಇತ್ತಂಡಗಳ
ನೋಟದಿ ದಯಾರಸ ಸೂಸುವ ಕಮಲದಳಗಳ ಸಮನಯನಗಳ೧
ಎಸೆವ ಸುನಾಸಿಕ ಜ್ವಲಿತ ಕುಂಡಲ ಸ್ಮಿತವದನ ಶಶಿಸಮರದನ
ಹೊಸ ತುಲಸಿಯ ಮಂಜರಿ ವನಮಾಲಾಧರನ ಸತ್ಕಂಧರನ
ಮಿಸುನಿಯ ವೈಜಯಂತಿ ತ್ರಿಸರವು ದಿವ್ಯಪದಕಗಳ ಝಳ ಝಳಪುಗಳ
ಲಸತ್ ಶ್ರೀವತ್ಸ ವಕ್ಷದಿ ಕುಂಕುಮ ಚಂದನದ ಗುಣಗಣಘನದ ೨
ಮರಕತಸ್ತಂಭಗಳಿಗೆ ಪೋಲ್ವೆಡೆಬಾಹುಗಳ ಅಂಗದಯುಗಳ
ಕರವಲಯಾಂಗುಲಿಮುದ್ರಿಕೆ ಧೃತಕೋದಂಡ ದಂಡಕದಂಡ
ಸಿರಿಜಠರ ತ್ರಿವಳಿ ಗಂಭೀರನಾಭ ನಿರ್ಜರನಾಭ
ವರಪಿಂಗಳ ಕೌಶೇಯಾಂಬರ ಕಟಿಸೂತ್ರ ಶ್ರೀ ಬ್ರಹ್ಮಸೂತ್ರ ೩
ಬಟ್ಟದೊಡೆ ಜಾನು ಘಟ್ಟಿದಂತೋಪಮ ಜಂಘ ಸಂವೃತ ಜಂಘಾ
ಕುಟಿಲ ನೀ ರಾಕ್ಷಸದಲ್ಲಣ ಪೆಂಡೆಯದ ಚೆಲುವಾ ಜನಜನಿಗೊಲಿವ
ಕಠಿಣತರ ಪದತಳದೆಡೆ ಧ್ವಜಾಂಕುಶಾಂಬುಜ ಹೃತ್ಕಲುಷಾ
ನಿಟಿಲನಯನ ವಿಧಿಸುರ ಋಷಿವಂದಿತ ಚರಣ ನೂಪುರಾಭರಣ೪
ಸುಖಮುನಿ ಮುಖ್ಯಮುನಿ ಪೂಜಿತ ವಿಗ್ರಹ ವಾರಾ ಪಾರ ವಿಹಾರ
ನಿಖಿಲ ಗುಣಾರ್ಣವ ನಿತ್ಯದಯಾರ್ಣವ ರಾಜ ರಾಜಾಧಿರಾಜ
ಸಕಲ ಸಂಯಮಿಕುಲಮೌಳಿರತುನ ಸತ್ಯಪೂರ್ಣಮನೋರಥಪೂರ್ಣ ಪ್ರಸನ್ವೆಂಕಟಪತಿ ಶ್ರೀ ಭೂಲೋಲ ಭುವನಕೆ ಮೂಲ೫

(ಪ.) ವ್ಯೋಮಕೇಶಗೆ ದಿವ್ಯ ನಾಮಾಮೃತವಿತ್ತ
೩೩೭
ರಾಮನೆನ್ನಿ ರಾಮನೆನ್ನಿ
ವ್ಯೋಮಕೇಶಗೆ ದಿವ್ಯನಾಮಾಮೃತವಿತ್ತ ಪ.
ಪಾತಕವನು ಮಾಡಿ ಪಾತಕರೊಡನಾಡಿ
ಸೂತಕಾಗಿ ವಿಪ್ರಘಾತಕಾಗಿ
ಜಾತಿಬಾಹಿರನಾಗಿ ಧಾತುಗೆಟ್ಟವಗೆ ಶ್ರೀ
ಸೀತಾಕಾಂತನ ನಾಮಪೂತಕಾರಣ ೧
ಕದ್ದು ಬಂಗಾರವ ಮೆದ್ದು ಅಭಕ್ಷಣ
ಒದ್ದು ದುರ್ಬಲರ ಸೊಕ್ಕಿದ್ದು ನಿತ್ಯ
ಶ್ರದ್ಧಾವಿಹೀನನಾದ ಮದ್ಯಪ್ರಾಶನಿಯಾದ
ಶುದ್ಧಾತ್ಮಕನಿಗೆ ಶುದ್ಧಕರನು ಮೂಲ ೨
ಪರಪತ್ನಿ ಗಮಿಸಿ ಭೂಸುರವೃತ್ತಿ ಭೇದಿಸಿ
ಪರತಾಪೇಕ್ಷಿಸದೆ ಪಾಮರನಾಗಿಹ
ನರಗೆ ಪಶ್ಚಾತ್ತಾಪ ಬರಿಸುವ ಪ್ರಸನ್ವೆಂಕ
ಟರಸನೆ ತುದಿಯಲಿ ಹೊರೆವ ಬಿಡದೆ ರಘು ೩

(ನು. ೭) ಋಕ್ಷವರಪ್ರದ
೧೨೧
ರಾಮಸ್ಮರಣೆಯಿಂದ ಸಕಲ ಪಾಪಹರ ರಾಮ ರಾಮ ಎನ್ನಿರೊ
ವ್ಯೊಮಕೇಶನ ದಿವ್ಯತಾರಕ ಮಂತ್ರವು ಪ.
ಶತಕೋಟಿ ರಾಮಾಯಣದ ಬೀಜಾಕ್ಷರ ರಾಮ ರಾಮ ಎನ್ನಿರೊ
ಕ್ಷಿತಿಜೆಯ ಪ್ರಾಣದ್ವಲ್ಲಭ ಶ್ರೀದಶರಥರಾಮ ರಾಮ ಎನ್ನಿರೊ ೧
ಪಾಮರರೆಲ್ಲರು ಪಂಡಿತರಾದರು ರಾಮ ರಾಮ ಎನ್ನಿರೊ
ಆ ಮೋಕ್ಷ ಕರತಳವಾಹುದು ಕೊಂಡಾಡೆ ರಾಮ ರಾಮ ಎನ್ನಿರೊ ೨
ಮಖಕೋಟಿಗಧಿಕ ಮಹಾಪುಣ್ಯದಾಯಕ ರಾಮ ರಾಮ ಎನ್ನಿರೊ
ಮುಕ್ತಾಮುಕ್ತಾರ್ಚಿತ ಕರುಣವಾರಿನಿಧಿ ರಾಮ ರಾಮ ಎನ್ನಿರೊ ೩
ಭಕ್ತವತ್ಸಲ ಭಾಗ್ಯಭೂಷಿತ ಭವಹರ ರಾಮ ರಾಮ ಎನ್ನಿರೊ
ನಿಖಿಲ ಭುವನಪತಿ ಬ್ರಹ್ಮಾದಿಸುರವಂದ್ಯ ರಾಮ ರಾಮ ಎನ್ನಿರೊ ೪
ಅಂಜನೆಜಾತಪೂಜಿತ ಪಾದವಾರಿಜ ರಾಮ ರಾಮ ಎನ್ನಿರೊ
ಕಂಜನೇತ್ರ ಕಂಜ ಸಖ ಅನಂತಪ್ರಭ ರಾಮ ರಾಮ ಎನ್ನಿರೊ ೫
ದಶಶಿರಮರ್ದನ ವಿಭೀಷಣ ವರಪ್ರದ ರಾಮ ರಾಮ ಎನ್ನಿರೊ
ಸುಶರಧಿ ಬಂಧನ ಸುಗ್ರೀವ ಸಂಸೇವ್ಯ ರಾಮ ರಾಮ ಎನ್ನಿರೊ ೬
ಲಕ್ಷ್ಮಣ ಭರತ ಶತ್ರುಘ್ನಾರಾಧಿತ ರಾಮ ರಾಮ ಎನ್ನಿರೊ
ಋಕ್ಷವರಪ್ರದ ರಘುಕುಲಾಂಬುಧಿಚಂದ್ರ ರಾಮ ರಾಮ ಎನ್ನಿರೊ ೭
ಜ್ಞಾನಾನಂದ ಬಲಾತ್ಮ ಪರಬ್ರಹ್ಮ ರಾಮ ರಾಮ ಎನ್ನಿರೊ
ಮೌನಿನಿಕರ ಧ್ಯೇಯ ಪುಣ್ಯಪುರುಷಗೇಹ ರಾಮ ರಾಮ ಎನ್ನಿರೊ ೮
ಪ್ರಸನ್ನಮೂರುತಿ ಪ್ರಸನ್ನಾನನ ಪರಮಾತ್ಮ ರಾಮ ರಾಮ ಎನ್ನಿರೊ
ಪ್ರಸನ್ನನಿಲಯ ನಿತ್ಯಪ್ರಸನ್ನವೆಂಕಟ ರಾಮ ರಾಮ ರಾಮ ಎನ್ನಿರೊ ೯

೩೩೮
ರೂಹ ಹೇಳುವೆ ಕೃಷ್ಣನ ಕೃಪೆಯಲ್ಲಿ
ನವೀನ ಜನನ ಮೃತ್ಯು ಭಯವೆಲ್ಲಿ ಪ.
ಕುಶತಲ್ಪ ತಂತ್ರಸಾರಾರ್ಚನೆಯೆತ್ತ ಖಳ
ಪ್ರಸರದ ಗೊಂದಣದಾರಿಯೆತ್ತ
ಹೊಸಮಲ್ಲಿಗೆಯ ಹಾರ ಸುರಭ್ಯೆತ್ತ ಮಲ
ಕಶ್ಮಲರತ ಗ್ರಾಮಸೂಕರೆತ್ತ ೧
ಚಕ್ರಪಾಣಿ ಒಲುಮೆ ವಿರತರಿಗುಂಟು ಕರ್ತ
ವಿಕ್ರಮವಾದಶೀಲಗೆ ಮತ್ತ್ಯೆಲ್ಲುಂಟು
ತಕ್ರ ಭಿನ್ನ್ವಾದರೆ ಹಾಲ ಹೋಲಲಿಲ್ಲ ಭಕ್ತಿ
ವಕ್ರನೆಂದೆಂದಿಗೆ ಭಾಗವತನಲ್ಲ ೨
ಡಂಬರ ಶ್ರದ್ಧೆಗೆ ಹರಿ ಮೆಚ್ಚಲಿಲ್ಲ ಸಲೆ
ಡೊಂಬ ರಾಷ್ಟ್ರ ತಿರುಗೆ ಭೂ ಪ್ರದಕ್ಷಿಣೆಯಲ್ಲ
ಅಂಬುಜಾಕ್ಷನನ್ನು ನಂಬದವ ಕ್ಷುಲ್ಲ ಗತ
ಅಂಬಕನ ನೋಟ ಬದಿಯ ಧನದಲಿಲ್ಲ ೩
ಇಂದಿರೇಶಮಹಿಮೆ ಮತಿಮಂದಗೇನು ದೀಪ
ಹೊಂದಟ್ಟೆ ಭೋಜನಸುಖ ಶ್ವಾನಗೇನು
ಎಂದೂ ಸಾಧುಸಂಗಸೌಖ್ಯ ಕುಹಕಗಿಲ್ಲ ಕೆಚ್ಚ
ಲೊಂದಿದ ಉಣ್ಣೆಗೆ ಕ್ಷೀರಸ್ವಾದವಿಲ್ಲ ೪
ಪೂರ್ವಕೃತಪುಣ್ಯ ಒದಗದೆಂದಿಗಿಲ್ಲ ಯತಿ
ಸರ್ವಜ್ಞರಾಯನ ಮತ ಸುಲಭವಲ್ಲ
ಉರ್ವಿಯೊಳು ಸಮೀರಮತಸ್ಥರ ಕಾವ ತಂದೆ
ಸರ್ವೇಶ ಪ್ರಸನ್ನವೆಂಕಟಾಧಿದೇವ ೫

೪೪೨
ಲಾಲಿ ಮುಕುಂದ ಲಾಲಿ ಗೋವಿಂದ ಲಾಲಿ ಮಯ್ಯ ಲಾಲಿ
ಲಾಲಿ ಮೂರೈದಲಿಪ್ಪೆಲ್ಲಾಲಯರ ಪ್ರಭು ಲಾಲಿ ಮಯ್ಯ ಲಾಲಿ ಪ.
ಜಗ ಜಗುಳಿಸಿ ವಟಪತ್ರದಿ ಮಲಗಿದೆ ಲಾಲಿಮಯ್ಯ ಲಾಲಿ
ಮಗುವಾಗಿ ವ್ರಜದೊಳು ತೊಟ್ಟಿಲೊಳೊಪ್ಪಿದೆಲಾಲಿ ಮಯ್ಯ ಲಾಲಿ ೧
ಸ್ವಗತ ಭೇದ ವಜ್ರ್ಯ ಪರಮಾತ್ಮ ಪರಬ್ರಹ್ಮ ಲಾಲಿ ಮಯ್ಯ ಲಾಲಿ
ಜಗದ ಜೀವರ ಬಿಂಬ ಮೂರ್ತಿ ಅನಂತನೆಲಾಲಿ ಮಯ್ಯ ಲಾಲಿ ೨
ಪಯೋನಿಧಿವಾಸ ಪರೇಶ ಪರಿಪೂರ್ಣ ಲಾಲಿ ಮಯ್ಯ ಲಾಲಿ
ಶ್ರೀಯರಸ ವೈಕುಂಠವಲ್ಲಭ ಕೃಷ್ಣಯ್ಯ ಲಾಲಿ ಮಯ್ಯ ಲಾಲಿ ೩
ಸುರರ ಪುಣ್ಯದ ವಲ್ಲಿ ಫಲಿಸಲಿಲ್ಲುದಯಾದೆಲಾಲಿ ಮಯ್ಯ ಲಾಲಿ
ಧರೆಯ ಪಾವನ ಮಾಡೆ ಪಾಂಡವರ ಕಾಯ ಬಂದೆಲಾಲಿ ಮಯ್ಯ ಲಾಲಿ೪
ಅಜಮಿಳ ಗಜರಾಜ ಧ್ರುವ ಅಂಬರೀಷಪಾಲಲಾಲಿ ಮಯ್ಯ ಲಾಲಿ
ಸುಜನ ಪ್ರಹ್ಲಾದನ ಸಲಹಿದ ನರಹರಿಲಾಲಿ ಮಯ್ಯ ಲಾಲಿ ೫
ಅಸಮ ಬಾಲಕನಾದೆ ಅವ್ಯಾಕೃತಾಂಗನೆ ಲಾಲಿ ಮಯ್ಯ ಲಾಲಿ
ವಿಷಮ ವಿದೂರಾಗಣಿತ ಸುಗುಣಾರ್ಣವ ಲಾಲಿ ಮಯ್ಯ ಲಾಲಿ ೬
ಸ್ರ‍ಮತಿ ಗಿರಿ ಧರೆ ಶಿಶು ಮೃಗಚೇಲಧರ ಭಾರ್ಗವ ಲಾಲಿ ಮಯ್ಯ ಲಾಲಿ
ಕ್ರತು ಕೃಷ್ಣೆ ಭವ ಧರ್ಮಪಾಲ ಪ್ರಸನ್ವೆಂಕಟೇಶ ಲಾಲಿ ಮಯ್ಯ ಲಾಲಿ೭

(ನು. ೩) ಪಂಚಸಂಸ್ಕಾರ
೪೦೮
ಲಿಸಂಗವಾಗಲಿ ಸಾಧು ಸಂಗವಾಗ
ಸಂಗದಿಂದ ಲಿಂಗದೇಹ ಭಂಗವಾಗಲಿ ಪ.
ಅಚ್ಯುತಾಂಘ್ರಿ ನಿಷ್ಠರಾದ್ಯದೃಚ್ಛಲಾಭ ತುಷ್ಟರಾಧ
ನಿಶ್ಚಯ ಜ್ಞಾನವಂತರಾದ ಅಚ್ಚ ಭಾಗವತರ ನಿತ್ಯ ೧
ತಂತ್ರಸಾರ ಅಷ್ಟಮಹಾಮಂತ್ರ ಪರಿಪೂರ್ಣ ಸ್ನೇಹ
ಯಂತ್ರದಿಂದ ಜಗತ್ಸ್ವಾತಂತ್ರ್ರ್ಯನ ಗುರಿ ಮಾಡುವವರ ೨
ಪಂಚಸಂಸ್ಕಾರ ಭೇದ ಪಂಚಕಯುಕ್ತರಾಗಿ ಪ್ರ
ಪಂಚ ಸೂತ್ರ ಪ್ರಸನ್ನವೆಂಕಟ ಪಂಚಬಾಣನಯ್ಯನವರ ೩

(ನು. ೧) ಒಂದು ನಾಲ್ಕರ ಭೇದ
೧೭೯
ವಂದಿಸಿದರ ಕಾವೆ ವರವನೀವೆ ಅಹಿಪ
ವೀಂದ್ರ ಭವ ಸುರರ ಗುರು ಮಧ್ವಮುನಿರಾಯ ಪ.
ಒಂದೊಂದು ಶ್ರುತಿ ಸ್ರ‍ಮತಿಗೆ ಬಹ್ವಾರ್ಥಗಳ ಪೇಳದೆ
ಒಂದೆರಡು ತತ್ವವಿಸ್ತರವ ಪೇಳಿದೆ
ಒಂದು ಮೂರವತಾರದಲ್ಲಿ ಹರಿಯನೆ ಒಲಿಸಿ
ಒಂದು ನಾಲ್ಕರ ಭೇದ ನಿಜರಿಗರುಹಿದೆಯ ೧
ಒಂದೈದು ರಿಪುವರ್ಗ ನಿಗ್ರ್ರಹವ ಮಾಡಿಸಿದೆ
ಒಂದಾರು ತ್ರಿಗುಣಿಸಿದ ಮತವ ಮುರಿದೆ
ಒಂದೇಳು ಮದವ ಕಾಲಲಿ ಮೆಟ್ಟಿ ಹರಿಪುರಕೆ
ಒಂದೆಂಟು ಭಕುತಿಪಥ ತೋರ್ದೆ ವೈಷ್ಣವರಿಗೆ ೨
ಒಂದು ಒಂಬತ್ತು ಹರಿಯವತಾರ ಕಥೆ ರಚಿಸಿ
ಒಂದು ಹತ್ತೇಂದ್ರಿಯದ ಗೆಲವ ಕಳಿಸಿ
ಒಂದು ಹನ್ನೊಂದು ಸ್ತೋತ್ರದಿ ಕೃಷ್ಣನ ಮೆಚ್ಚಿಸಿದೆ
ಒಂದು ಹನ್ನೆರಡು ತತ್ವದಾಗ ೩
ಒಂದು ಹದಿಮೂರು ಭುವನಗಳಲ್ಲಿ ನೀ ವ್ಯಾಪ್ತ
ಒಂದು ಹದಿನಾಲ್ಕು ದ್ವಿಗುಣಿಸಿದ ಮ್ಯಾಲೇ
ಳೊಂದಿದ ಸದ್ಗ್ರಂಥಗಳ ನಿರ್ಮಿಸಿ ಬುಧರಿಗಿತ್ತೆ
ಒಂದು ಹದಿನೈದು ಗುಣದ ಲಕ್ಷಣಾಂಗ ೪
ಒಂದು ಹದಿನಾರೆಂಟು ತತ್ವ ಸಿದ್ಧಾಂತದಲಿ
ಒಂದು ಹದಿನೇಳು ಪರ್ವಮೋಹಕ ಬಿಡಿಸಿದೆ
ಒಂದು ಮನದಿಂದ ಶಿರಿ ಪ್ರಸನ್ನವೆಂಕಟ ಕೃಷ್ಣನ
ಒಂದೊಂದು ಗುಣಕೆ ಅನಂತ ವ್ಯಾಖ್ಯಾನ ೫

೩೩೯
ವಂದಿಸಿದರೆ ವಂದ್ಯರು ಪೂಜಿತರು ಮು
ಕುಂದ ಗೋವಿಂದ ಶ್ರೀಹರಿಯನ್ನು
ಎಂದೆಂದು ಕುಂದದಾನಂದವೈದಿಸುವ
ಇಂದಿರೆಯರಸ ಭವಬಂಧಮೋಚಕನ ಪ.
ಹತ್ತಶ್ವಮೇಧಾವಭೃಥಸ್ನಾನ ಮಾಡಲು
ಮತ್ರ್ಯರ್ಗೆ ಪುನರ್ಜನ್ಮಗಳಿಲ್ಲವೊ
ಸತ್ಯಭಾಮಾಧವನಿಗೆ ನಿಷ್ಕಾಮದಿ ನಮಿಸಿ
ಮತ್ತೊಮ್ಮೆ ನಮಿಸೆ ಮುಕ್ತಿಗೆ ಸಾಧನ ೧
ಕೋಟಿಸಹಸ್ರ ತೀರ್ಥಗಳಲಿ ಮಿಂದು
ಕೋಟಿಸಹಸ್ರ ವ್ರತಗಳಾಚರಿಸೆ
ಕೋಟಿ ಭಾಂತಕಗೆ ನಮಿಸಿದ ಫಲಕೆ ಸರಿ ಪಾ
ಸಟಿ ಷೋಡಶಕಳೆಯೊಳೊಂದಲ್ಲ ೨
ಹೇಳೆನೆ ಇಂದಾದರು ನಮಿಸಿ ಶ್ರೀ
ಲೋಲ ಶಾಙ್ರ್ಗಪಾಣಿಯನ
ಸಾಲು ಜನ್ಮದಘವ ಹಾಳುಮಾಡಿ ಮುಕ್ತಿ
ಓಲಗಕೆ ಕರೆವ ವೈಷ್ಣವ ಜನರ ೩
ಉರ ಶಿರದೃಷ್ಟಿಲಿ ಮನವಾಚದಲಿ
ಚರಣ ಕರಗಳಲಿ ಜಾನುಗಳಲಿ
ಧರೆಯಲಿ ಅಷ್ಟಾಂಗಪ್ರಣಾಮ ಮಾಳ್ಪರ್ಗೆ
ಹರಿದು ಹೋಗೆ ಪಾಪವರ ಮುಕ್ತಿ ಈವ ೪
ಸರುವಾಂಗವ ಧರೆಗೊಂದಿಸಿ ಭಕುತಿಲಿ
ಹೊರಳಾಡಿ ಭೂಮಿಲಿ ಪರವಶದಿ
ಹರಿಗೆ ನಮಿಸಲು ಮೈಗೊರೆದ ಧೂಳಿಯ ಕಣಾ
ಪರಿಮಿತ ಸಹಸ್ರಾಬ್ದ ಪರಮಾಣ ಪದವಕ್ಕು ೫
ಸಿರಿ ಅಜಭವೇಂದ್ರ ಸುರರು ಮಹಾಮುನಿನಿ
ಕರ ನೃಪ ಮನುಜೋತ್ತಮರೆಲ್ಲ
ಪರಮ ಭಕುತಿಲಿ ನಮಿಸೆ ಹರಿವಶನಾಗುವ
ಹರಿಜನಕೆ ಮುಕ್ತಿಪಥಕಿದೆ ಪಾಥೇಯ ೬
ಅರ್ಚಿತ ಕೃಷ್ಣನ ನೋಡುತಾನಂದಾಶ್ರು
ಹುಚ್ಚನಂತೆ ನಮಿಸಿ ನಗುತ ಸುರಿಸಿ
ಅಚ್ಯುತಾನಂತ ಸದ್ಗುಣನಿಧಿ ಭಕ್ತಪ್ರಿಯ
ನಿಚ್ಚ ಪ್ರಸನ್ವೆಂಕಟನೆಂದುಚ್ಚರಿಸಿ೭

೩೪೦
ವಾರಿಜನಾಭನ ಕರುಣವೆ ಸ್ಥಿರ ಸಂ
ಸಾರ್ಯೆರವು ಕೇಳಾತ್ಮ
ಜಾರುತದಾಯು ದೂರದ ಮುಕುತಿಯ
ದಾರಿಯ ಪಾಥೇಯ್ಯೆಲ್ಲಾತ್ಮ ಪ.
ಧರ್ಮದ ಸರಕಿಲ್ಲದವನೆಂದು ಬೇಗ್ಯಮ
ಧರ್ಮ ಭಟರು ಬಂದರಲ್ಲೊ
ಚರ್ಮದ ಮನೆ ಬಿಡಿಸಿದರು ಮುಟ್ಟಲು ನೋವ
ಕರ್ಮಯಾತನೆ ಕೊಟ್ಟರಲ್ಲೊ
ಹಮ್ರ್ಯನಿಕೇತನ ವೃತ್ತಿಕ್ಷೇತ್ರವನು ಅ
ಧರ್ಮಿಗಳಗಲಿಪರಲ್ಲೊ
ಮರ್ಮವರಿತು ತ್ರಾಟಿಸುವಾಗ ಶ್ರೀ ವಿಶ್ವ
ಕರ್ಮನ ಪೂಜೆ ಹೋಯಿತೆಲ್ಲೊ ೧
ಹೆಡಗೈಯ ಕಟ್ಟಿ ಪರಿಘದೊಳು ಬಡಿವಾಗ
ಮಡದಿ ಮಕ್ಕಳ ಸಹಾಯವೆಲ್ಲೊ
ಒಡೆಯ ದಮ್ಮಯ್ಯ ನಮ್ಮಯ್ಯನೆಂದರೆ ಕಾಲ
ಹಿಡಿದರೆ ಕೊಡಹಿದರಲ್ಲೊ
ಸುಡುವ ಮಳಲು ಹುಡಿ ಕಲ್ಮುಳ್ಳೊಳೆಳೆವಾಗ
ಹಿಡದೇಜಿ ಕೊಂಬುಕಾಳೆಲ್ಲೊ
ಪೊಡವಿಲಿ ಬಂದಾಗ ಹರಿಸೇವೆ ಮಾಡದೆ
ಕಡುಹುಂಟಾದರೆ ತೋರದೆಲ್ಲೊ ೨
ಕೀವು ರುಧಿರವಿಟ್ಟ ಕುಂಡದಿ ಮುಣುಗುವಾ
ಗ್ಹ್ಯಾವಿನ ಮಾತೇನಾಯಿತಣ್ಣ
ಸಾವುತೀನವ್ವಪ್ಪಾ ಮೊರೆಯ ಕೇಳೆಂದರೆ
ಆವಾಗ ಬಾಧೆ ಕಾಣಣ್ಣ
ಆ ವೈವಸ್ವತ ದಂಡ ಕೊಟ್ಟು ಬೊಗಳೆಂಬಾಗ
ಚಾರ್ವಾಕತನವೆಲ್ಲಣ್ಣ
ಆ ವಾಸುದೇವನ ಭಟಸಂಗ ನಿನಗೀ
ಗ ವೈರ ಆಗೆಲ್ಲಿದಣ್ಣ ೩
ನಾಲಿಗೊಣಗಿ ನೀರು ಕೂಳೆಂದು ಅಳುವಾಗ
ಹಾಲ ಶಾಲ್ಯೋದನವೆಲ್ಲೊ
ಮ್ಯಾಲೆ ಮ್ಯಾಲ್ವೈತರಣಿ ಸ್ನಾನವ ಮಾಡುವ
ಕಾಲಕೆ ಅಭ್ಯಂಗನವೆಲ್ಲೊ
ಕಾಲನ ದೂತರ್ಗೆ ಕೊಟ್ಟುಳಿವೆನೆಂದರೆ
ಹೂಳಿದ ಧನ ದೂರಾಯಿತಲ್ಲೊ
ಕಾಲ ಕಾಲಕೆ ದ್ವಿಜಪಂಕ್ತಿಭೋಜನಸುಖ
ವ್ಯಾಳೆ ತಪ್ಪಿತನ್ನವೆಲ್ಲೊ ೪
ಕಷ್ಟಿಸಿ ಬಳಲುವೆ ಹಾಹಾಯೆಂದಳಲುವೆ
ಇಷ್ಟನೆಂಟರು ಹೋದರೆತ್ತ
ಮುಷ್ಟಿ ಕುಠಾರ ಪ್ರಹಾರ ನೋಡು ನಿನ್ನವ
ರಿಷ್ಟತನವು ನಿಂತಿತೆತ್ತ
ಶಿಷ್ಟರ ನೋಡದೆ ಸತ್ಕಾರ ಮಾಡದೆ
ನಿಷ್ಠುರ ನುಡಿದೆ ಪ್ರಮತ್ತ
ಕೃಷ್ಣ ನಮೊ ಎಂದು ಕಡೆಗಾಣಲರಿಯೆ ಎ
ಳ್ಳಷ್ಟು ಪುಣ್ಯವ ಕಾಣೆನೆತ್ತ ೫
ಕಂಗೆಟ್ಟು ತಕ್ರನ್ನೆ ಕಾಸಿ ಸೀಸ್ಯೆರೆವಾಗ
ಅಂಗಣದ ಪಶು ಬಹುದೂರ
ಕೆಂಗೆಂಡಗಂಭವಪ್ಪಿಸುವರು ನಿನ್ನ ಪ
ರಾಂಗನೆ ಭೋಗಿ ಚದುರ
ಅಂಗ ಶೃಂಗಾರದ ಕೊನಬುಗಾರ ನಿನ
ಗ್ಹಿಂಗುವದೆ ಯಮದ್ವಾರ
ಮಂಗಳ ಮಹಿಮ ಮುಕುಂದ ಮುರಾರಿ ಶ್ರೀ
ರಂಗನ ಭಕುತಿವಿದೂರ ೬
ಸುಟ್ಟರೆ ಹಿಡಿಬೂದಿ ಕೆಟ್ಟರೆ ಕ್ರಿಮಿಕಾಯ
ಇಟ್ಟರಿರದು ವಾಯುವಿರದೆ
ಹುಟ್ಟಿ ಸುಜನ್ಮದಿ ಜಾಣರಾಗದೆ ಬುಧ
ರಟ್ಟುವರೆ ದಿವಸ ಬರಿದೆ
ಇಟ್ಟಣಿಸಿದ ಭವಗತ ಸುಖದು:ಖವುಂ
ಡುಟ್ಟು ರಾಮನ ಮನವಿರದೆ
ಕಟ್ಟಕಡೆಲಿ ನರಕವನುಂಬೋದುಚಿತಲ್ಲ
ದಿಟ್ಟನಾಗು ಮಾಯೆಯ ಜರಿದು ೭
ನಿತ್ಯ ನೈಮಿತ್ಯಕಾಮ್ಯಾದಿ ಸತ್ಕರ್ಮವ
ಮತ್ತೆ ತಿಳಿದು ನಡೆ ಆತ್ಮ
ಹತ್ಯವಸತ್ಯ ಅನ್ಯವಧೂಜನಸಖ್ಯ ಪರ
ವಿತ್ತದಂಜಿಕೆ ಇರಲ್ಯಾತ್ಮ
ಕರ್ತ ಮೂರವತಾರಿ ಪೂರ್ಣ ಬೋಧಾಚಾರ್ಯರ
ಭೃತ್ಯನಾಗಿ ಬಾಳೊ ಆತ್ಮ
ಎತ್ತೆತ್ತ ನೋಡಲು ಬೆನ್ನಬಿಡದೆ ಕಾವ
ಪ್ರತ್ಯಕ್ಷನಾಗಿ ಪರಮಾತ್ಮ ೮
ಮಂಗಳಾತ್ಮರಿಗೆ ಅಹರ್ನಿಶಿ ಶ್ರೀವರ
ಅಂಗಜಜನಕನೆಚ್ಚರಿಕೆ
ಸಂಗಡಿಸಿದ ವಿಷಯಂಗಳಿದ್ದರೇನು
ತಂಗಳ ಅನ್ನದೋಕರಿಕೆ
ಹಿಂಗದೆ ವರಸಂಗ ಮಾಡಿದರೊಯಿವರು
ಮಂಗಳಾತ್ಮಕನಿದ್ದ ಪುರಕೆ
ಬಂಗಾರ ಮನೆಯ ಪ್ರಸನ್ವೆಂಕಟೇಶನ
ಡಿಂಗರರಿಗೆ ನರ್ಕಸರ್ಕೆ ೯

೨೭೩
ವಾರಿಜರಮಣ ನಮ್ಮ ಸಾಕೊ ಪ.
ಉಬ್ಬಸ ಕೇಳುವರೊಬ್ಬರ ಕಾಣೆ
ಗರ್ಭವಾಸದ ಬಲೆ ನಿಬ್ಬರ ಕಾಣೊ೧
ಕಳೇವರಪ್ರಿಯರು ಕಳಿಸಿ ಉಳಿವರು
ಬಳಲುವಾಗ್ಯಮನಲ್ಲಿ ಸುಳಿಯರವರು ೨
ಉಮ್ಮಯ ತೀವಿದ ನಿಮ್ಮನಾಗರದಿ
ಒಮ್ಮ್ಯಾದರೆನ್ನಿಡು ಧರ್ಮದಯಾಬ್ಧಿ೩
ಕಂಗಳಿಲ್ಲವು ಸುಜ್ಞ ಕಂಗಳ ಕೊಡು ನೀ
ಪಂಗುಗುಲ್ಲಾಸ ಪಾದಂಗಳ ಕೊಡು ನೀ ೪
ಕಡೆಯ ಮಾತಿಗೆ ಕೈಯವಿಡಿಯೆನ್ನ ತಂದೆ
ದೃಢ ಪ್ರಸನ್ವೆಂಕಟ ಒಡೆಯ ಪೊರೆಯೆಂದೆ ೫

೧೨೨
ವಾಸುದೇವ ವಾಸುದೇವ
ವಾಸವಹರ ವಿಧಿಪತಿ ವಾಸುದೇವ ಪ.
ಅಖಿಳ ಜಗದಂತರ್ಬಹಿ ವಾಸುದೇವ
ಭಕುತ ಹೃದಯ ಮಂದಿರ ವಾಸುದೇವ ೧
ವೈಕುಂಠ ಕ್ಷೀರಸಾಗರ ವಾಸುದೇವ
ಶ್ರೀಕರಾನಂತಾಸನ ವಾಸುದೇವ ೨
ಸ್ವಾಮಿಪುಷ್ಕರ ಕೂಲ ಸ್ಥಿರ ವಾಸುದೇವ
ಸ್ವಾಮಿ ಪ್ರಸನ್ವೆಂಕಟ ವಾಸುದೇವ ೩

೨೭೪
* ವಿಠಲ ಎನ್ನನು ಕಾಯೊ ವಿಠಲ ಪಂಢರಿರಾಯ
ವಿಠಲ ಭಕ್ತವತ್ಸಲ ವಿಠಲ ಹರಿ ವಿಠಲ ಪ.
ದಿಟ್ಟ ಪುಂಡಲೀಕ ತನ್ನ ಪುಟ್ಟಿಸಿದವರ ಮನ
ಮುಟ್ಟಿ ಪೂಜಿಸಲು ಚಿತ್ತಗೊಟ್ಟು ಬಂದೆಯೊ ವಿಠಲ
ಬಿಟ್ಟು ಬರದಲೆ ಒಡನಿಟ್ಟಿ ನೀಡಲು ಚೆಲುವ
ಇಟ್ಟಂಗಿ ಮ್ಯಾಲಂಘ್ರಿಪದ್ಮವಿಟ್ಟು ನಿಂತ್ಯಯ್ಯ ವಿಠಲ ೧
ಕೊಟ್ಟ ಭಾಷೆಗೆ ಭಕ್ತರ ಕಟ್ಟಲಿ ಸಿಲುಕಿದೆಯೊ ಕಂ
ಗೆಟ್ಟೆನೊ ಭವದಿ ನಿನ್ನ ಗುಟ್ಟು ತೋರಯ್ಯ ವಿಠಲ
ಪಟ್ಟಗಟ್ಟ್ಟ್ಯಜಭವರ ಕಟ್ಟಿಲೆ ಇದ್ದ ವೈಕುಂಠ
ಪಟ್ಟಣ ಭೀಮಾತೀರದಿ ನಟ್ಟು ನಿಂತ್ಯಯ್ಯ ವಿಠಲ ೨
ನೆಟ್ಟನೆ ವೇದವ ತಂದು ಬೆಟ್ಟವೆತ್ತಿ ಇಳೆಯ ಪೊತ್ತಿ
ಸಿಟ್ಟು ತಾಳ್ದೆ ವಟು ಖಳರೊಟ್ಟಿಲೊದ್ಯೈಯ್ಯ ವಿಠಲ
ಕಟ್ಟಿದೆ ಕಡಲ ಜಗಜಟ್ಟಿ ಗೋಪ ಬೌದ್ಧ ಕಲಿಯ
ಮೆಟ್ಟಿ ಆಳ್ದೆ ಪ್ರಸನ್ವೆಂಕಟ ಕೃಷ್ಣಯ್ಯ ವಿಠಲ ೩

೨೭೫
ವಿಹಿತವೆ ಯದುನಾಯಕ ಸುಖದಾಯಕ
ಮಹಿಯೊಳು ನಾನೆ ಪಾಪಿಯೊ ಜೀಯಾ ಕಾಯೊ ಪ.
ಮಾವಗೆ ಈವ ಗಂಧಗಳು ನಿನಗೆನ್ನಲು
ದೇವ ಕಳೆದ್ಯವಳ ಬಿಂಕ ಮೂಡೊಂಕನು ೧
ಕಚ್ಚ ಬಂದಹಿಗೆ ಮುಕ್ತಿಯ ನೀನಿತ್ಯೈಯ್ಯ
ಹುಚ್ಚಗೊಲ್ಲರ ಪಾವನ ಮಾಡುವನೆ ೨
ಶರಣ ಜನರುಪಕಾರಿ ನೀ ತವರೂರು ನೀ
ಅರಸ ಪ್ರಸನ್ನವೆಂಕಟಪ ಮಮಪ್ರಾಣಪ ೩

೧೨೩
ವೃಂದಾರಕ ವಂದ್ಯ ಯದುಕುಲಾಂಬುಧಿ ಚಂದ್ರ ಪ.
ಮೃಗಮದತಿಲಕ ವಿರಾಜಿತ ಖಳಶೂಲ
ಮೃಗನರ ರೂಪಧೃತ ಸುಗುಣ ವಿಶಾಲ ೧

ಖಗಾಸನ ಕಮಲಾರಮಣ ಕಲಿನಾಶ
ಖಗಮುಕ್ತಿದಾಯಕ ಕನಕನಗೇಶ ೨
ಮಣಿಮಯ ಭೂಷಣಾಮಿತ ಭೃತ್ಯ ಚಿಂತಾ
ಮಣಿ ಕಲ್ಪಕುಜ ಧೇನು ಮಹಿಮಾನಂತ ೩
ಸ್ವಾಮಿಪುಷ್ಕರ ವರ ಸನ್ನಿದಸದನ
ಸ್ವಾಮಿ ವರಾಹ ಹಿರಣ್ಯಾಂಬಕ ಮಥನ ೪
ರಾಕೇಂದುಕೋಟಿ ಪ್ರಕಾಶ ಕಲುಷ ನಿ
ರಾಕೃತ ನಮೊ ಪ್ರಸನ್ವೆಂಕಟೇಶ ೫

೩೪೧
ವೃಥಾ ಭವದಿ ಮೆರೆದೆ
ರಥಚರಣಧರನ ಸ್ರ‍ಮತಿಯನೆ ಮರೆದೆ ಪ.
ಸತಿ ಸುತರೆನ್ನವರತಿಶಯ ಗೃಹಧನ
ಪತಿಯು ನಾನೆಂಬೊ ಮಮತೆವಿಡಿದು
ರತಿಪತಿಪಿತನಂಘ್ರಿರತಿ ಲೇಶವಿಲ್ಲದೆ
ಸತತ ಯಮಪುರದ ಪಥವನೆ ಪಿಡಿದು ೧
ಅತಿಥಿಗಳೊಲ್ಲದೆ ಯತಿಪೂಜೆಯಿಲ್ಲದೆ
ಪೂತಿ ಮಲಭಾಂಡ ಭರಿತನಾಗಿ
ಚತುರ್ಮುಖನಯ್ಯನ ವ್ರತವ ಬಿಸುಟು ಅನ್ಯ
ಪತಿತ ಮಾರ್ಗವ ಪೊಂದಿ ಹತಭಾಗ್ಯನಾಗಿ ೨
ಮಿತಮನರಹಿತ ದುರ್ಮತಪಂಡಿತನಾಗಿ
ಪ್ರತಿ ಬೊಮ್ಮ ರಕ್ಕಸೋನ್ನತನೆನಿಸಿ
ಅತಿ ಪ್ರಾಜ್ಞ ಶಾಸ್ತ್ರದೇವತೆ ಪ್ರಸನ್ವೆಂಕಟ
ಪತಿಯನೆ ಬಿಟ್ಟಿನ್ನಿತರವ ಭಜಿಸಿ ೩

೧೨೪
ವೆಂಕಟಪತಿ ಶರಣು ಹಾಹಾ ವೆಂಕಟಪತಿ ಶರಣು ಪ.
ಕಮಲಸಂಭವನುತ ಚರಣ ಶುಭಕಮಲಾರಿಕುಲಭರಣ
ಕಮಲಸಖ ಸಂತಾರುಣ ಕಿರಣ ಕರುಣಾಸಂಪೂರ್ಣ೧
ಸಿರಿ ಭೂದೇವಿಯರ ರಮಣ ದಿವ್ಯಸರಸಾಕ್ಷ ಖಗವರಗಮನ
ಸುರರಿಪುಗಣಾಸುರದಮನ ಭವಹರ ಸುರವರಸಮ ನಾಮ ನಮೊ ೨
ಶೇಷಗಿರಿಯತಟನಿಲಯ ಫಣಶೇಷಭೂಷಣ ಮಣಿ ನಿಲಯ
ಪ್ರಸನ್ವೆಂಕಟ ತಿರುಮಲೆಯೊಳಿಹ ಚೆಲುವ ಸ್ವಸುಖ ಭೋಕ್ತ ಭಕ್ತರಾಶ್ರಯ ೩

(ನು. ೩) ಹಂಸಡಿಬಿಕ ವೈರಿ
೧೨೫
ವೆಂಕಟಾದ್ರಿವರದ ಶಂಕರನುತಪಾದ ಪ.
ಶಂಖಾರಿ ಅಹಿಪರಿಯಂಕಶಾಯಿ ಉದಾರಿ
ಕಿಂಕರಕೋಶ ಸಂಕಟನಾಶ
ಪಂಕಜನಾಭಾಸಂಖ್ಯಾತ ರವಿಭಾ ೧
ಗಜಬಂಧನ ನಿವಾರಿ ಕುಜಮಸ್ತಕವಿದಾರಿ
ಅಜಮಿಳರಕ್ಷ ನಿಜಜನಪಕ್ಷ
ಕುಜನ ವಿಶಿಕ್ಷಾಂಬುಜ ಪತ್ರಾಕ್ಷ ೨
ಕಂಸ ಮಥನಕಾರಿ ಹಂಸಡಿಬಿಕ ವೈರಿ
ಸಂಶಯಹರ ಗೋಪಾಂಸು ಲಿಪ್ತಾಂಗ ಹಿ
ಮಾಂಶುಕುಲೇಶ ಭವಶರಧಿನಾಶ ೩
ಭೈಷ್ಮೀ ಸತ್ಯಾರಮಣ ಭೂಷಿತ ಅಖಿಳಾಭರಣ
ದ್ವೇಷಕೃತ ದಮಘೋಷಜಹರ ಮ
ಹೀಶೆಜ್ಞ ಭೋಕ್ತಾಗ್ರೇಸರ ಶಕ್ತ ೪
ಸ್ವಾಮಿ ತೀರ್ಥಕರ್ತ ಕಾಮಿತ ಫಲದಾತ
ಸ್ವಾಮಿ ಪ್ರಸನ್ವೆಂಕಟಾಮಲ ಮೂರ್ತಿ
ನಾ ಮೊರೆಹೊಗುವೆ ಪ್ರೇಮದ ಪ್ರಭುವೆ ೫

೨೭೬
ವೆಂಕಟೇಶ ಶ್ರೀ ವೆಂಕಟೇಶ ಪಾಲಿಸು
ಕಿಂಕರನ ವೆಂಕಟೇಶ ಪ.
ಸುವರ್ಣಮುಖರಿಲಿ ಶಿವ ನುತ ಪಾದಾಬ್ಜ
ಸುವರ್ಣಗಿರಿ ವೆಂಕಟೇಶ
ನವ್ಯಚಂದನ ಮೃಗನಾಭಿ ಚರ್ಚಿತಗಾತ್ರ
ಅವ್ಯಾಕೃತನೆ ವೆಂಕಟೇಶ ೧
ಹಲವಪರಾಧಿ ನಾ ಭೂರಿದಯಾಳು ನೀ
ನೆಲೆಗೆ ನಿಲ್ಲಿಸು ವೆಂಕಟೇಶ
ಬಲು ತಮ ತುಂಬಿದ ಭವದಿ ಕರುಣಶಶಿ
ಬೆಳಗು ಬೆಳಗು ವೆಂಕಟೇಶ ೨
ತಂದೆ ತಾಯಿ ನೀನೆ ಸಖ ಸಹೋದರ ನೀನೆ
ಹಿಂದೆ ಮುಂದೆ ನೀ ವೆಂಕಟೇಶ
ಹೊಂದಿದ ಬಂಟನ ಕಂದಾಯ ನಡೆಸಯ್ಯ
ಕುಂದನಾಡದೆ ವೆಂಕಟೇಶ ೩
ಸಾಕು ನೀ ಸಾಕದಿದ್ದರೆ ಬಿಡು ನಾ ಬಿಡೆ
ಜೋಕೆ ಬಿರುದು ವೆಂಕಟೇಶ
ನೀ ಕೈಯ ಜರಿದರೆ ಕಾಕು ಮಾಡುವರೆನ್ನ
ಪೋಕ ವೃತ್ತರು ವೆಂಕಟೇಶ ೪
ನಂಬಿದೆ ನಂಬಿದೆ ನಂಬಿದೆ ನಿನ್ನ ಪಾದ
ದಿಂಬಿನೊಳಿಡು ವೆಂಕಟೇಶ
ಬಿಂಬ ಮೂರುತಿ ಪ್ರಸನ್ವೆಂಕಟೇಶ ಪ್ರತಿ
ಬಿಂಬಕ್ಕರುಹು ವೆಂಕಟೇಶ ೫

(ನು. ೮) ಉದಯ ತೋಮಾಲೆಸೇವೆ:
೧೨೬
ವೆಂಕಟೇಶನ ಮಹಿಮೆಯ ಹೊಗಳುವ
ಕಿಂಕರ ಧನ್ಯನಯ್ಯ ಪ.
ಇಳೆಯ ಭಕ್ತರ ನೋಡಿದ ವೈಕುಂಠದಿಂ
ದಿಳಿದು ಶ್ರೀಸಹಿತ ಬಂದ
ಸಲೆ ಸುವರ್ಣಮುಖರಿಯ ತೀರವ
ಒಲಿದು ನಿಂತನು ತಿಮ್ಮ್ಮಯ್ಯ ೧
ಭೂವರಾಹ ಸ್ವಾಮಿಯ ಸನ್ನಿದ
ಶ್ರೀವತ್ಸಲಾಂಛನಿಹ
ಶ್ರೀವಿಮಾನಸಹಿತ ದೇವಾಧಿ
ದೇವ ತಾನಿಲ್ಲಿ ನಿಂತ ೨
ಸ್ವಾಮಿ ಪುಷ್ಕರಿಣಿಯೆಂಬ ತೀರ್ಥದ
ನಾಮದ ಮಹಿಮೇನೆಂಬೆ
ಆ ಮಹಾ ದುಷ್ರ‍ಕತವು ಸ್ನಾನದ
ನೇಮದಲ್ಲೋಡುವುದು ೩
ರಾಜಾಧಿರಾಜ ನಿತ್ಯ ಉಪಚಾರ
ಪೂಜೆ ಲೋಕಾರ್ಥದೊಳು ತಾ
ಮೂಜಗಕಾನಂದವ ವರ ಕರು
ಣಾಜಲಧಿ ಕೊಡುವ ೪
ನಿತ್ಯ ಸ್ವಾರಿಗೈದುವ ಸುರಋಷಿ
ಮೊತ್ತದಿ ಚರಿಪದೇವ
ಮತ್ತೆ ಆ ಲಕ್ಷ್ಮಿಯ ಕೂಡ ಮುನಿವದೊಂ
ದರ್ತಿಯ ಬುಧರು ನೋಡಿ ೫
ನುಡಿವ ಸಾವಿರ ಪೇರ್ಗಂಟೆ ಉಬ್ಬುಬ್ಬಿ
ಹೊಡೆವರ್ಯೊಡೆ ಜಾಗಟೆ
ಬಡಿವ ಕರಡೆ ಭೇರಿಯು ಮುಂದೆ ಉ
ಗ್ಗಡಿಪ ಸಾಮಗಾನವು ೬
ಚಿತ್ರವರ್ಣದ ಸತ್ತಿಗೆ ಸಾಲ್ಗಳು
ಸುತ್ತಲು ಕೈ ದೀವಿಗೆ
ಉತ್ತಮ ವಾಹನವೇರಿ ವಿಶ್ವದ
ಕರ್ತ ಬಂದನು ಉದಾರಿ ೭
ಉದಯ ತೋಮಾಲೆ ಸೇವೆ ಪುಳುಕಾಪು
ಮೊದಲಾದ ದಿವ್ಯಸೇವೆ
ಒದಗಿದವಸರಂಗಳು ನೈವೇದ್ಯ
ಮೃದುಭಕ್ಷ್ಯ ವರ ಪೊಂಗಲು ೮
ಅತಿರಸ ಮನೋಹರವು ದಧ್ಯನ್ನ
ಅತಿರುಚಿ ಅನ್ನವಾಲವು
ಕ್ಷಿತಿಯ ಮೇಲಿಹ ಭಕ್ತರು ಶ್ರೀಲಕ್ಷ್ಮೀ
ಪತಿಗೆ ಅರ್ಪಿಸುತಿಹರು ೯
ಹೂವಿನಂಗಿಯ ತೊಡುವ ಮೃಗಮದ
ಲಾವಣ್ಯ ತಿಲಕಿಡುವ
ಕಾವನಂತರ ತೇಜವ ಗೆಲ್ಲುವ
ಸಾವಿರ ಹೆಸರ ದೇವ ೧೦
ತಪ್ಪದೆ ನುಡಿವಂದನು ಮುಡಿಪಿನ
ಕಪ್ಪವೆಣಿಸಿ ಕೊಂಬನು
ಚಪ್ಪನ್ನ ದೇಶಸ್ತರು ಬಂದು ಸ
ಮರ್ಪಣೆ ಮಾಡುವರು ೧೧
ಕೊಟ್ಟ ವಾಕ್ಯಕೆ ತಪ್ಪನು ವರಭಯ
ವಿಟ್ಟು ಸಾಕುತಲಿಪ್ಪನು
ಇಷ್ಟಾರ್ಥದಾತನಯ್ಯ ವಿಶ್ವದ
ಶಿಷ್ಟರೊಡೆಯ ತಿಮ್ಮಯ್ಯ ೧೨
ಕಿರೀಟ ಕುಂಡಲವಿಟ್ಟನು ತಿಮ್ಮಯ್ಯ
ಕರುಣ ನೋಟದ ಚೆಲ್ವನು
ಅರಿಶಂಖವನು ಧರಿಸಿದ ಹಾರಕೇ
ಯೂರ ಕೌಸ್ತುಭದಲೊಪ್ಪಿದ ೧೩
ತೋಳಬಂದಿಯು ಕಂಕಣ ಮುದ್ರಿಕೆ
ಕೀಲು ಕಡಗ ಒಡ್ಯಾಣ
ನೀಲ ಮಾಣಿಕ ಪಚ್ಚದ ಮುತ್ತಿನ
ಮಾಲೆಗಳಿಂದೊಪ್ಪಿದ ೧೪
ಮಣಿಮಯ ಕವಚ ತೊಟ್ಟ ಗಳದಲಿ
ಮಿನುಗುವಾಭರಣವಿಟ್ಟ
ಕನಕ ಪೀತಾಂಬರವು ಕಟಿಯಲ್ಲಿ
ಅಣುಗಂಟೆಗಳೆಸೆದವು ೧೫
ರನ್ನದಂದುಗೆಯನಿಟ್ಟಿಹ ಪಾದಕೆ
ಪೊನ್ನ ಹಾವುಗೆ ಮೆಟ್ಟಿಹ
ಘನ್ನ ದೈತ್ಯರ ಸೋಲಿಪ ಬಿರುದಿನ
ಉನ್ನತ ತೊಡರಿನಪ್ಪ ೧೬
ದಿನಕೆ ಸಾವಿರ ಪವಾಡ ತೋರುವ
ಜನಕೆ ಪ್ರತ್ಯಕ್ಷ ನೋಡ
ಘನಶಾಮ ತಿರುವೆಂಗಳ ಮೂರ್ತಿಯ
ಮನದಣಿಯೆ ಹೊಗಳಿರೆಲ್ಲ ೧೭
ಭೂವೈಕುಂಠವಿದೆಂದು ಸಾರಿದ
ಭಾವಿಕ ಭಕ್ತ ಬಂಧು
ಶ್ರೀ ವಾಯುಜಾತ ವಂದ್ಯ ಶ್ರೀನಿವಾಸ
ಗೋವಿಂದ ನಿತ್ಯಾನಂದ ೧೮
ಸೇವಕಜನರಪ್ರಿಯ ಅರುಣ ರಾ
ಜೀವಲೋಚನ ತಿಮ್ಮಯ್ಯ
ದೇವಶಿಖಾಮಣಿಯು ಬ್ರಹ್ಮಾದಿ
ದೇವರಿಗೆ ದೊರೆಯು ೧೯
ಕಶ್ಚಿಜ್ಜೀವನೆನ್ನದೆ ನನ್ನನು
ನಿಶ್ಚಯದಲಿ ಹೊರೆವನು
ಆಶ್ಚರ್ಯಚರಿತ ನೋಡಿ ಶರಣರ
ವತ್ಸಲನ ಕೊಂಡಾಡಿ ೨೦
ಆರಾಶ್ರಯಿಲ್ಲೆನಗೆ ದ್ರಾವಿಡ
ವೀರನೆ ಗತಿಯೆನಗೆ
ಭೂರಿ ಪ್ರಸನ್ವೆಂಕಟಪತಿ ಸುಖ
ತೀರಥವರದ ನಮೊ ೨೧

೩೪೨
ವ್ಯರ್ಥ ಆಯು ಕಳೆಯಬ್ಯಾಡಿರೊ ಶ್ರೀಹರಿಯ ಸಂ
ಕೀರ್ತನೆಯ ಮರೆಯಬ್ಯಾಡಿರೊ
ಮೃತ್ಯು ಬಾರದಿರದು ಮುನ್ನೆ ಮನೋನೂರುವರ್ಷಕೆ ಪ.
ಹಿಂಡು ಹೀನ ಯೋನಿಮುಖದಲಿ ತಾ
ಬಂದು ಬಂದು ಕುಕರ್ಮ ಸವೆಯದಾಯಿತು
ಕಂಡ ಕುಹಕರ ಕೂಡ ಕೊಂಡಮಾತನಾಡಿ ಯಮ
ದಂಡ ತೆರಬ್ಯಾಡಿ ಕೋದಂಡಕರನ ಹೊಗಳಿರೊ ೧
ಬಾಲತ್ವವು ಆಟಕಾಯಿತು ಈ ಯೌವನವು
ಬಾಲೆಯರ ಬ್ಯಾಟಕಾಯಿತು
ಮ್ಯಾಲೆವಾರ್ಧಕ್ಯಕಂಗಬೀಳೆ ಸೊಪ್ಪಾಗಿ ಹೊಲ
ಸಲದೀಗ ಎಚ್ಚರಿಕೆಯಲ್ಲಿ ಹರಿಯ ನೆನೆಯಿರೊ ೨
ಹಗಲು ಹಸಿವೆ ತೃಷೆಗೆ ಪೋಯಿತು ಯಾಮಿನಿಯು
ಮಿಗಲು ಮೀರಿ ಮಧು ಮುಸುಕಿತು
ಸುಗುಣನಾಗಿ ಭವದ ನಂಬಿಕೆಯ ನೀಗಿ ಪ್ರಸನ್ವೆಂಕಟ
ನಗಪತಿಯ ಪಾದಪದ್ಮಯುಗಳವನೆ ಕೊಂಡಾಡಿರೊ ೩

೧೨೭
ಶಂಬರಾರಿಯ ತಾತ ಸಲಹೊ ಶ್ರೀನಾಥ
ಶಂಭು ವಿರಂಚೇಶ ಶ್ರೀ ವೆಂಕಟೇಶ ಪ.
ದಶರಥಸಂಜಾತ ದಶಶಿರಹರ್ತ
ವಸುಧೆತಸ್ಕರಛೇತ ವಸುಮತಿಪ್ರೀತ
ಬಿಸಜಾಕ್ಷಿಯಾಪತ್ತ ಬಂಧು ಸಮರ್ಥ
ಪಶುಪಾರಿವೃತಶಕ್ತಿಪರಿಹಾರ ಕರ್ತ ೧
ಪಾರಿಜಾತಕೆ ವಜ್ರಿ ಪರಾಭವಕಾರಿ
ಕ್ರೂರ ಖಳವೈರಿಕುಲದಸಂಹಾರಿ
ಚಾರುಮಹಿಮ ಶೌರಿ ಚಿರಾನಂದೋದಾರಿ
ಸಾರಭೃತ್ಯುಪಕಾರಿ ಸುಕಳಜಗಧಾರಿ೨
ಸ್ವಾಮಿ ಪುಷ್ಕರವಾಸ ಶ್ರೀ ಶ್ರೀನಿವಾಸ
ಸೋಮಾರ್ಕಸಂಕಾಶ ಸುರಜನಕೋಶ
ಭೂಮಿಭಾರವಿನಾಶ ಬುಧಪರಿತೋಷ
ಪ್ರೇಮಪೂರಿತಹಾಸ ಪ್ರಸನ್ವೆಂಕಟೇಶ ೩

(ನು. ೨) ನಿಜ ರಾಣಿಯ ಯಜ್ಞಿಯ
೧೨೮
ಶರಣು ಭಾಸ್ಕರಕುಲಶರಧಿ ಪೂರ್ಣಸೋಮ
ಕರುಣಾಮೃತ ಪೂರ್ಣರಾಮ ಪ.
ನೃಪದಶರಥನ ತ್ಯಜಿಸಿ ಸೌಮಿತ್ರನ ಕೂಡಿ
ವಿಪಿನದಿ ಸೀತೆ ಕಾಣದೆ ನೀ
ಕಪಿಗಳ ನೆರಹಿ ಅಂಬುಧಿಗೆ ದಾರಿಯ ಬಲಿದೆ
ಕಪಟಿ ರಾವಣನ ಸವರಿದೆ ೧
ನಿಜರಾಣಿಯ ಯಜ್ಞಿಯ ಮುಖದಲಿ ಕೈಕೊಂಡು
ಸುಜನ ವಿಭೀಷಣನ ಹೊರೆದೆ
ತ್ರಿಜಗವಂದಿತ ಪುಷ್ಪಕವನೇರಿ ಬಂದು ಅ
ನುಜ ಭರತನ ಕಾಯ್ದೆ ಅಂದು ೨
ಹಲವು ಸಾಸಿರ ಅಬ್ದ ಅಯೋಧ್ಯೆಯನಾಳ್ದೆ ಅ
ನಿಲತನಯನ ಸೇವೆಗೊಲಿದೆ
ಸುಲಭದಿ ಮುಕ್ತಿ ತೋರಿದೆ ಪ್ರಸನ್ವೆಂಕಟ
ನಿಲಯ ಭಕ್ತರಿಗೆ ಇತ್ತೆ ತುಷ್ಟಿ ೩

(ಪ.) ಸುಮತೀಂದ್ರರು :
೧೮೦
ಶರಣು ಮುನಿಪಮಣಿಯೆ ಸುಮತೀಂದ್ರ
ಕರುಣಾಮೃತದ ಖಣಿಯೆ
ಶರಣೆಂದವರಿಗೆ ವರಚಿಂತಾಮಣಿಯೆ
ಧರೆಯ ಮೇಲಿನೊಬ್ಬ ದೊರೆ ನಿನಗೆಣೆಯೆ ಪ.
ಸಂತತ ಸೇವಕ ಸಂತರಿಗೊಲಿದೀಗ
ಸಂತತಿ ಸಂಪದವಿತ್ತೆ ಬೇಗ
ಶಾಂತ ಶುಭಗುಣ ವಸಂತನೆಂಬೊ ಕೀರ್ತಿ ವಿ
ಶ್ರಾಂತಿಯಮಿತ ದಿಗಂತಕೆ ವಾರ್ತಿ ೧
ತಾಳ ತಮ್ಮಟೆ ಕಂಬು ಕಾಳೆ ಬಿರುದು ಬುಧ
ಮೇಳದಿಂ ಶಿಷ್ಯ ಜನಾಲಯಕೆ ಸಾಲದೀವಿಗೆ
ಯೊಳು ಮಾಲಿಕೆ ಗ್ರಹಿಸಿ ಆಂದೋಳಿ
ಕಿಳಿದು ಬಂದು ಪಾಲಿಪೆ ಅವರ ೨
ಶ್ರೀಗುರು ಪ್ರಸನ್ನವೆಂಕಟಾಚಲವಾಸ ರಾಮನ ಪಾದ
ನಿಶಿದಿನಾರ್ಚಿಸುವೆ ಸಂತೋಷ ಸಾಂದ್ರ
ಋಷಿಯೋಗೀಂದ್ರರ ಕರ ಬಿಸಜಜ ಯೋಗೀಂದ್ರ
ಸುಶರಧಿ ಸಂಭವ ಶಶಿ ಸುಮತೀಂದ್ರ ೩

(ನು. ೨) ತ್ರಿಪ್ರಮಾಣ
೧೮೧
ಶರಣು ಶರಣು ಜಯ ಮುನಿರಾಯ ಸ್ವಾಮಿ
ಶರಣಾಗತ ತಾತ್ವಿಕ ಪ್ರಿಯ ಪ.
ಶ್ರೀ ಮಧ್ವಗುರು ದಯವನು ಪಡೆದು ಅ
ದೇ ಮಹಿಮನ ಮನೆಯೊಳು ಬಂದು
ನೇಮದಿ ತುರ್ಯಾಶ್ರಮ ಬಲಿದೆ ಈ
ಭೂಮಿಗಿಂದ್ರನ ಪರಿ೧
ಅಶ್ರುತ ಪ್ರಭೆ ಬುಧರೊಳು ಬೀರಿ ನಾ
ನಾ ಶ್ರುತಿಯರ್ಥ ಪ್ರಕಟದೋರಿ
ಶಾಶ್ವತಕ್ಷಾದಿ ತ್ರಿಪ್ರಮಾಣವ ನಿ
ಜಾಶ್ರಿತರಿಗೆ ಪೇಳಿದೆ ಅನುವ ೨
ವೇದಾಂಬುಧಿಯೊಳು ಸುಧೆದೆಗೆದೆ ರಾಮ
ಪಾದಕರ್ಪಿಸಿ ಬುಧಜನಕೆರೆದೆ
ಕೈದುಗಳಂತೆ ಪ್ರಮೇಯಾರ್ಥವಿಡಿದೆ ಜಯ
ನಾದದಿಂ ದುರ್ವಾದಿಗಳನ್ಯೆಚ್ಚಿದೆ ೩
ಮರುತಮತದ ವಿಬುಧರ ನೆರಹಿಸಿ
ಮೂರೇಳರಿ ಬಲವ ಜರಿದಟ್ಟಿದೆ ಅವರ
ಬಿರುದು ಸೀಳಿದೆ ಈ ಧರೆಯ ವೈಷ್ಣ
ವರ ಭಯವ ಕಳೆದೆ ೪
ಈ ಕ್ಷೋಣಿಯೊಳು ಪ್ರತಿವರ್ಜಿತನೆ ಶ್ರೀ
ಅಕ್ಷಯಪ್ರಜ್ಞ ಕೃಪಾನ್ವಿತನೆ
ಅಕ್ಷೋಭ್ಯತೀರ್ಥರ ತನಯನೆ ವಿಶ್ವ
ಕುಕ್ಷಿ ಪ್ರಸನ್ನವೆಂಕಟಪ್ರಿಯನೆ ೫

೧೨೯
ಶರಣು ಶರಣು ಪರಮ ಪುರುಷ
ಶರಣು ಭಯಶರ ಖಂಡನ
ಶರಣು ಸಿರಿ ವಿಧಿ ಮರುತ ಪೂಜಿತ
ಶರಣು ವೆಂಕಟನಾಯಕ ಪ.
ಭಾಸಿತ ತಟಿತ ಮಕರಕುಂಡಲ
ಭಾಸಕರ ಶಶಿಲೋಚನ
ಸಾಸಿರಶತ ವೇದವಂದಿತ
ವಾಸವಾರ್ಚಿತ ಪದಯುಗ
ದೇಶಕಾಲ ಸುವ್ಯಾಪ್ತಾಜಾಂಡ ವಿ
ಶೇಷ ಸ್ಥಿತಿಲಯಶೀಲನೆ
ತೋಷಮಂದ ಸುಹಾಸವದನನೆ
ಶೇಷಗಿರೀಶ ನಮೋ ಹರೆ ೧
ಶಂಖ ಚಕ್ರಗದೆ ಪದುಮ ವರಾಭಯ
ಕಂಕಣಕರ ರಾಜಿತ
ಕುಂಕುಮ ಮೃಗಮದ ತಿಲಕಧರಾ
ತಂಕ ಕುಂಭಿ ಮೃಗಾಧಿಪ
ಕಿಂಕರಾನತ ರಕ್ಷಕ ರಿಪು
ಶಂಖ ದೈತ್ಯ ವಿಶಿಕ್ಷಕ
ಪಂಕಜಾನನ ಗರುಡವಾಹನ
ಅಂಕಿತಾಖಿಳ ಭೂಷಣ೨
ಜನನ ಮೃತ್ಯುವಿದೂರ ಅಚ್ಯುತ
ಮುನಿಮನಾಲಯ ಮಾಧವ
ಕನಕನೇತ್ರವಿದಾರಿ ಪೋತ್ರ್ಯಾಂ
ಗನೆ ವಿಮಲಗುಣ ಪೂರ್ಣನೆ
ದನುಜನಿಕರಾಟವಿ ದಾವಾನಲ
ಸನಕಸನಂದನ ಸ್ತುತಿಪ್ರಿಯ
ಅನವರತ ವರಸ್ವಾಮಿಪುಷ್ಕರ
ಸನ್ನಿದ ಪ್ರಸನ್ವೆಂಕಟೇಶನೆ ೩

೧೩೦
ಶರಣು ಶರಣು ರಾಮ ರಘುಕುಲ
ಶರಣು ಪೂರಣ ಸೋಮ
ಕರುಣಾಪಾಂಗದಿ ಶರಣಾಗತರ ಭಯ
ಹರಣಾಹಲ್ಯೋದ್ಧರಣ ಕಾರಣ ಸುಚರಣ ಪ.
ದಂಡಕದನುಜನ ದಂಡಿಸಿದಗಣಿತ
ಚಂಡ ರುಚಿರಕೋದಂಡಕರ
ಕುಂಡಲಮಂಡಿತ ಗಂಡ ಸುತಂಡ ಬೊ
ಮ್ಮಾಂಡ ಕೋಟಿರಕ್ಷಾ ಪುಂಡರೀಕಾಕ್ಷ ೧
ದೂಷಣ ಖರಾಂತಕ ದಶಶಿರದಮನ ತ್ರಿ
ದಶರ ಪೊರೆದ ಜಗದೀಶವರದ
ಬಿಸಜಭವ ಸಮೀರ ಪಶುಗಮನಾದಿ ಸು
ರೇಶನುತಪದನೆ ಅಶೇಷದುರಿತಾರಿ ೨
ದುಷ್ಟಜನಮರ್ದನ ಜಠರಜನ ನರಸಿಂಹ
ಚಟುಲ ದ್ವಿಜಾರ್ಚಿತಪಟು ದೇವ
ತೃಟಿಯೊಳು ನೆನೆವರ ಕುಟಿಲವಾರಕ ವಿಶ್ವ
ನಾಟಕ ಪ್ರಸನ್ನವೆಂಕಟ ರಘುರಾಮ ೩

೧೩೧
ಶರಣು ಶರಣು ಶೇಷಗಿರಿವರದ ದೇವ
ಶರಣು ಶರಣು ಲಕ್ಷ್ಮೀವರ ಮುದದ
ಶರಣಾಗತ ಭಯಸಂಹಾರ ಕಾರಣ
ಕರುಣ ಕರಣ್ಯನಂತಕಿರಣಘವಾರಣ ಸು
ವಾರಣ ಉದ್ಧರಣಜಹರನುತಚರಣ ಪ.
ಕೃತಸೇವ್ಯಾಮಲ ಅವ್ಯಾಕೃತಗಾತ್ರ ದೇವ
ಪೃಥುರಾಜಪಾಲಾಂಬುಜಾಯತ ನೇತ್ರ
ಯತಿ ಹೃದಯ ಗುಹ್ಯಾಂಗೀಕೃತೋತ್ತುಂಗ
ಹೃತಕ್ಷಿತಿ ಜಾತ ಸತಿಪ್ರತತಿಗೃಹೀತಾವಿತಥ
ಶ್ರುತಿ ಸ್ರ‍ಮತಿ ಗೀತ ಪ್ರೀತ ರತಿಪತಿಪಿತನೆ ೧
ಸೋಮಕುಲಾಬ್ಧಿ ರಾಕಾಸೋಮಕಾಶ ದೇವ
ಸಾಮಜಪಕ್ಷ ಸುರಸ್ತೋಮ ಪೋಷಕ
ಕಾಮಿತಾರ್ಥ ಪ್ರದಾತ ಸ್ವಾಮಿತೀರ್ಥ
ಧಾಮ ತ್ರಿಧಾಮ ಸುಮನಸಾಮೋದ
ಪ್ರೇಮಧಿ ಶ್ರೀಮತ್ನಾಮ ನಿಸ್ಸೀಮ ೨
ಹನುಮನಿಮೇಷ ಋಷಿಗಾನಪ್ರಿಯ ದೇವ
ಸನಕ ಸನಂದನ ಸನಾತನ ಧ್ಯೇಯ
ಮಣಿಮಯ ಕನಕ ಭೂಷಣಾಂಕ ಭೂ
ಮುನಿಜನ ಧ್ಯಾನ ಲೀನ ಅಣುರೇಣು ಪೂರ್ಣಪ್ರ
ಸನ್ನವೆಂಕಟನಗಪಾ ಪುನಃಪುನಾನುದಿನ ೩

೧೩೨
ಶರಣು ಶರಣ್ಯರ ಸುರತರುವೆ ನಿನ್ನ
ಚರಣಶರಣರಿಗೆ ಭಯವಿಲ್ಲ ಪ.
ದ್ರುಪದಾತ್ಮಜೆಯನಸುರ ಪಿಡಿದೆಳೆ ತಂ
ದಪಮಾನಕಾಗಿ ಉಡುಗೆ ಸೆಳೆಯೆ
ಅಪುಶಯನ ಮುಕುಂದ ಅಪಹಾಸವಾಯಿತೆಲ ಪರ
ಮಪೀತಾಂಬರ ಒದಗಿತಂದು ದೇವಾ ೧
ಮದದೊಳಂತ್ಯಜ ತರುಣಿಗೆ ಸೋತು ಪರ
ಮಾಧಮಜಾಮಿಳ ತನ್ನಂತ್ಯಕಾಲದಿ
ಮುದದಿ ಕಡೆಯ ಸುತನ ನಾರಗ ಬಾರೆಂ
ದೊದರಲು ಪೊರೆದೆ ದಾಸನ ಮರಳಿ ೨
ವಿಗಡ ಮುನಿಶಾಪಕೆ ಇಂದ್ರದ್ಯುಮ್ನ ಮದ
ನಾಗನಾಗಿ ನೆಗಳ ಬಾಯಿಗೆ ಸಿಲುಕೆ
ಅಘಹರ ಸಲಹೆಂದರೆ ವಾಮಕರದಿಂದ
ನೆಗಹಿದೆ ಪ್ರಸನ್ನ ವೆಂಕಟರನ್ನ೩

(ನು.೨) ಶಲ್ಯರಾಜನ ಭಟಹಾರಿ
೪೦೪
ಶರಣು ಶುಭಾಮಲಕಾಯ ಋಜುಗಣಾ
ಭರಣಾನಂದ ಮುನಿರಾಯ
ಹರಿಗುಣಗಣವಾರಿಧಿಮಗ್ನನೆ ಜಯ
ಪರಮಪದಜ್ಞನೆ ಜಯತು ಸದಾ ಜಯ ಪ.
ಶುಕ್ಲ ರುಧಿರ ನಿರ್ಲಿಪ್ತ ಪರತ
ತ್ವಕ್ಲುಪ್ತನೆ ತ್ರಿಜಗವ್ಯಾಪ್ತ
ಅಕ್ಲೇಶಾನ್ವಿತ ಮಾಯಾಮನಹರ
ಅಜ್ಞಜನೋದ್ಧರ ಜಯತು ಸದಾ ಜಯ ೧
ಶಲ್ಯರಾಜನ ಭಟಹಾರಿ ಮಹಾವಾ
ತ್ಸಲ್ಯಾಂಕಿತ ಸುಖಕಾರಿ
ಬಾಲ್ಯತನದಿ ಜಗದ್ಗುರುವೆನಿಸಿದೆ ಕೈ
ವಲ್ಯದಾಯಕ ಪ್ರಭು ಜಯತು ಸದಾ ಜಯ ೨
ಸೂತ್ರಾರ್ಥದ ಧೀ ಮಾತ್ರದೇಹಿ ವಿ
ಧಾತೃ ಜನಕ ಪದಪ್ರೇಮಪಾತ್ರ
ಪೌತ್ರ ಪ್ರಸನ್ನವೆಂಕಟಪತಿ ಪೂರ್ಣ
ವೇತೃ ನಂಬಿದೆ ಜಯತು ಸದಾ ಜಯ ೩

(ನು.೧) ತುತ್ತಿಸಿನನ ಬಿಸುಟು
೪೦೫
ಶರಣು ಸಕಲ ಪ್ರಾಣನಾಥ
ಸರಸಿಜಭವ ಪದವಿಭೋಕ್ತ
ಮೂರವತಾರಿ ಮುಖ್ಯಪ್ರಾಣ
ಹರಿಪರಾಯಣ ತೇ ನಮೊ ಪ.
ತುತ್ತಿಸಿನನ ಬಿಸುಟು ಜಗದ
ಕರ್ತ ರಘು ಪುಂಗವನ ಪದದಿ
ಭಕ್ತಿ ಬಲಿದು ಇತರ ವಿಷಯ
ಚಿತ್ತನಾಗದ ಸುಗುಣಧೀ
ಹತ್ತು ಹೆಡಕಿನವನ ವನವ
ಕಿತ್ತು ಸಭೆಯನುರುಹಿ ಭಯವ
ಬಿತ್ತಿ ಜನನಿ ಕುಶಲ ಒಡೆಯ
ಗಿತ್ತ ಹನುಮ ತೇ ನಮೊ ೧
ಮುಪ್ಪಿನವಳ ಮಗನನರಿದು ಕೃ
ಷ್ಣಾರ್ಪಣವನೆ ಮಾಡಿ ನೃಪರ
ಕಪ್ಪ ಹೊರಿಸಿ ತಂದು ಮಖಕೆ
ಒಪ್ಪಿಸಿದ ಅಗ್ರಜಾತಗೆ
ಭೂಪನಣ್ಣನ ಅಣುಗರನ್ನು
ಅಪ್ಪಳಿಸಿ ತಮಸಕೆ ಕಳುಹಿ
ತಪ್ಪದೆಂದೂ ರಂಗ ಸೇವೆಯೊ
ಳಿಪ್ಪ ಶ್ರೀಭೀಮ ತೇ ನಮೊ ೨
ವಿಷ್ಣುಭಟರ ಮತಿಗೆ ಕಲಿಯು
ವೇಷ್ಟಿಸಿರಲು ಬ್ರಹ್ಮ ಸೂತ್ರ
ಸ್ಪಷ್ಟ ತಿಳುಹಿ ತಾತ್ವಿಕ ಜನ
ಶ್ರೇಷ್ಠಿ ನೆರಹಿ ಮಿಥ್ಯರ
ಭ್ರಷ್ಟವಚನ ನೀಕರಿಸಿ ನಿ
ಜೇಷ್ಟಮತರ ಹೊರೆದೆ ಗುರುವ
ರಿಷ್ಟ ಮಧ್ವಪ್ರಸನ್ನವೆಂಕಟ
ಕೃಷ್ಣ ಮತ್ಯ ತೇ ನಮೊ ೩

೧೩೩
ಶರಣು ಹರಿ ಆನತ ಜನಾಶ್ರಯ
ದುರಿತ ಕರಿ ಕಂಠೀರವ
ಶರಣು ಸಿರಿ ಭೂವರಾಹದೇವನೆ
ಶರಣು ವರಯಜ್ಞಾತ್ಮಕ ಪ.
ಅನಿಮಿಷರು ಸನಕಾದಿಮುನಿಗಳು
ಅನುದಿನದಿ ಸ್ತುತಿಗೈಯಲು
ದನುಜ ಹೇಮಾಂಬಕನ ಕೃತ್ಯಕ
ವನಿ ಬಳಲಿ ಮೊರೆಯಿಡುತಿರೆ
ಘನ ಕೃಪಾಂಬುಧಿ ಕ್ಷೀರವಾರಿಧಿ
ಮನೆಯಲರಿದತಿ ವೇಗದಿ
ವನಜಭವ ನಾಸಾಪುಟದಿ ನೀ
ಜನಿಸಿದಗಣಿತ ಮಹಿಮನೆ ೧
ಲೀಲೆಯಿಂದಣುವಾಗಿ ಅಮರರ
ಜಾಲಕಚ್ಚರಿಯಾಗಲು
ಮೇಲೆ ಗಿರಿಯಂತಾದೆ ಹರಿಯೆ ತ
ಮಾಲ ವರ್ಣಾಂಕಿತ ಮುಖ
ಬಾಲಚಂದ್ರಸಮಾನ ಕೋಡನೆ ವಿ
ಶಾಲ ವಿಮಲ ಚರಿತ್ರನೆ
ಬಾಲ ಸುಬ್ರಹ್ಮಣ್ಯ ದ್ವಿಜವರ
ಶೀಲಪಾಲಿತ ಚರಣನೆ ೨
ವ್ಯಗ್ರ ಪ್ರಳಯಾಂಬುಗಿಳಿದು ಘನ
ಘರ್ಘರರ್ಘರ ಧ್ವನಿಗಳಿಂ
ಶೀಘ್ರ ವೈರಿಯ ಸದೆದು ಕೋ
ಡಾಗ್ರದಲಿ ಮಹಿ ನೆಗಹಿದೆ
ಸ್ವರ್ಗಜನರಿಂದಮಿತ ಸ್ತುತಿಯನ
ವಗ್ರಹಿಸಿ ವರಕರುಣದಿ
ಉಗ್ರತೇಜ ಪ್ರಸನ್ವೆಂಕಟ
ಗಗ್ರನಿಲಯ ನಮೊ ಹರೆ ೩

೩೪೩
ಶಾಶ್ವತ ಭಾಗವತರು ನಗರೆ ಮತಿ
ಮಿಶ್ರರ ನೋಡಿ ಕೈ ಹೊಡೆದು ಪ.
ಮಾಧವನಲ್ಲದೆ ಆ ದೈವೀದೈ
ವಾದಿಗಳ ಹಿರಿಯರು ನಂಬರು
ಆದರವರ ಬಿಟ್ಟರೆ ಈ ಧನಧಾನ್ಯವು
ಹೋದರೆ ಕೆಟ್ಟೆವೆಂಬರ ನೋಡಿ ೧
ಕೃಷ್ಣನೆ ಸುಖದಾಯಕನಿರೆ ಸತಿಯಳು
ಹುಟ್ಟಿದ ಶಿಶುವಿನ ದೆಸೆಯಿಂದ ಎನ್ನ
ಕಷ್ಟವೆ ಹೋಯಿತು ತುಷ್ಟಿಯೊಳಿಹೆನು
ಸೃಷ್ಟಿಗೆ ನಾ ಸುಖಿಯೆಂಬನ ನೋಡಿ ೨
ನಾರಾಯಣ ದಾತಾರನು ವಿಶ್ವಕೆ
ತೋರುತಿರಲು ನರಧನಿಕರನು
ಆರಾಧಿಸಿ ನಾ ಭೂರಿ ಧನಾಢ್ಯನು
ಆರೆನಗೆದುರಿಲ್ಲೆಂಬನ ನೋಡಿ ೩
ಶ್ರೀ ಗುರುವರ ಸುಖಯೋಗಿಯ ಸಂತತಿ
ಯೋಗಿಗಳಂಘ್ರಿಯ ನಂಬಿರದೆ
ಆ ಗುರು ಈ ಗುರುವೇ ಗತಿಯೆನುತಲಿ
ಭೂಗುರುವಾಗಿಹ ರೋಗಿಯ ನೋಡಿ ೪
ಬೂಟಕ ತೋಟಕ ಭಕುತಿಗೆ ದ್ವಾದಶ
ಗೂಟಬರೆಗೆ ಬುಧರೊಪ್ಪುವರೆ ಜಗ
ನ್ನಾಟಕ ಪ್ರಸನ್ವೆಂಕಟೇಶನ ಗುಣಗಣ
ಭಟರೆನಿಪ ವೈಷ್ಣವರಹ ಸಜ್ಜನ ೫

೧೩೪
ಶುಭನಾಮ ಶೋಭಿತಧಾಮ
ಶ್ರೀ ಭೂಪ ಸಾರಸನಾಭ ವಿಭೋ ವಿಭೋ ಪ.
ಅರ್ಭಕಪಾಲಕ ದರ್ಭಶಯನ ವಿಶ್ವ
ಗರ್ಭ ವಿದಾರಿತ ದುರ್ಭಾಗ್ಯ ದನುಜ ೧
ದಂಡಿತ ರಕ್ಷ ಕೋದಂಡಮಂಡಿತ ಕರ
ದಂಡಕಹರ ಕೋಟಿ ಚಂಡಕರಾಭಾ ೨
ಮರ್ದಿತದುಷ್ಟ ವಿವರ್ಧಿತ ಶಿಷ್ಟ ಕ
ಪರ್ದಿ ವಿರಿಂಚಾಂತಧ್ರ್ಯಾನ ಚರಣ ೩
ಅಂಜನಾತ್ಮಜ ಕೃತಾಂಜಲಿ ಪುಟ ಸೇವ್ಯ
ಮಂಜುಳ ಸೂಕ್ತ ಪ್ರಭಂಜಿತ ಕಲುಷ ೪
ಭದ್ರ ಚರಿತ್ರ ಲಸದ್ರತ್ನ ಭೂಷಣ
ಚಿದ್ರೂಪ ಪ್ರಸನ್ವೆಂಕಟಾದ್ರೀಶ ಪಾಹಿ ೫

೧೩೫
ಶೇಷಾಚಲನಾಯಕ ಸಲಹಯ್ಯಾ
ಶೇಷದುರಿತ ದೂರಕ ಪ.
ಮಕರಾಲಯಸದನ ಮಾಧವ
ಮಕರಕುಂಡಲ ಕರಣ
ಮಕರಕೇತನ ತಾತ ಮಾಕಾಂತ ವಿಲಸಿತ
ಮಕುಟ ಕೌಸ್ತುಭ ಭೂಷಿತ ಮುಕುಂದ ೧
ಸ್ವಾಮಿಪುಷ್ಕರಿಣೀವಾಸ ಮುಕುಂದ
ಸಾಮಗಾಯನ ವಿಲಾಸ
ಸೋಮ ದ್ಯುಮಣಿ ನಯನಾಬ್ಜಕೊದರ್ವದಳ
ಶ್ಯಾಮ ಸಿರಿ ಭೂಲೋಲ ಮುಕುಂದ ೨
ಸನ್ಮಾರ್ಗವ ತೋರಿಸೊ ಸಂತರ
ಸನ್ನಿದಲ್ಲಿರಿಸೊ
ಶೂನ್ಯ ಭಾಗ್ಯವ ನೋಡಿ ಸಲಹಯ್ಯ ತಂದೆ ಪ್ರ
ಸನ್ನವೆಂಕಟನಾಯಕ ಮುಕುಂದ ೩

೨೭೭
ಶೇಷಾದ್ರಿತಟವಾಸ ಸುರೇಶ ಕಾಯೊ ನಿನ್ನ
ದಾಸಾನುದಾಸ ನಾ ತಾರಿಸೊ ಪ.
ಈ ಬೆಂದ ಭವಾಂಧಕಾರಿಂದಹಂದಿಂದೆ ನಾ
ಮಂದಕಂದನು ನೊಂದೆನೊ ತಂದೆ ಹೊಂದಿಸು ಗತಿ ೧
ಎನ್ನೊಡೆಯ ಕೈವಿಡಿಯೊ ಅಮೃತ ನುಡಿಯೊ ಮೈದ
ಡಹೊ ಮತ್ತಡಿಗಡಿಗೆಡರಂ ಬಡಿಯೊ ಮೃಡನುತ ಅಡಿಯಲ್ಲಿಡು ೨
ಶ್ರೀನಲ್ಲ ನೀನಲ್ಲದಾರಲ್ಲಾಶ್ರಯಿಲ್ಲಯ್ಯ
ಬೆಲ್ಲವಿಲ್ಲನ ಗೆಲ್ವ ಪ್ರಸನ್ವೆಂಕಟೊಲ್ಲಭ ಜಯ ೩

ಶ್ರೀತುಳಸಿ : ದೇವ ದಾನವರು ಕೂಡಿ
ಶ್ರೀತುಳಸಿ
೧೬೨
ಶ್ರೀ ತುಳಸಿ ಮಹಿಮೆಯನು ಪೊಗಳಲಳವಲ್ಲ ಶ್ರೀ
ನಾಥ ನಾರಾಯಣನ ಅರ್ಚನೆಗೆ ಸರ್ವದಾ
ಪ್ರೀತಿಕರಳಾಗಿ ರಾಜಿಪಳು ಕಲಿಯುಗದಲ್ಲಿ ನೋಂತವರ
ಭಾಗ್ಯವೆಂತೊ ಪ .
ಶ್ರೀಮದಾರ್ಜಿತ ಕ್ಷೀರವಾರಿಧಿಯ ಮಥಿಸುತಿರೆ
ಆ ಮಹಾವಿಷ್ಣುವಿನ ನೇತ್ರದಿಂದಲಿ ಹೊರಟ
ಪ್ರೇಮಜಲದುದ್ಭವಿಸಿ ನಳನಳಿಸಿ ದಿವ್ಯ ಆಮೋದ ಪೂರ್ಣಳಾಗಿ
ಭೂಮಿ ಪಾವನವ ಮಾಡುತಲಿ ಭೂನಿರ್ಜರರ
ಧಾಮ ಧಾಮಗಳಲ್ಲಿ ವೃಂದಾವನದಿ ನೆಲಸಿ
ಕಾಮಿತ ಫಲವನೀವ ಕಲ್ಯಾಣಿ ಕೃಷ್ಣನಿಗೆ ನೇಮದಿಂ ಪ್ರಿಯಳಾದ ೧
ಈ ಮನುಜ ದೇಹದಲಿ ದಾವ ಪ್ರಾಣಿಯು ಪಿತೃ
ಸ್ತೋಮವನ್ನುದ್ಧರಿಪೆನೆಂದರೆ ಸುಲಭ ಸಾಧ್ಯ
ಕೋಮಲ ದಳವನೊಂದು ತಂದು ಮಾಧವನ ಚರಣ
ತಾಮರಸಕರ್ಪಿಸುವದು
ತಾ ಮುನ್ನ ಮಾಡಿದಘ ಪಂಚಕಗಳೋಡಿದವು
ಸಾಮಾನ್ಯವಲ್ಲ ತುಳಸಿಯ ವನವ ಸೋಂಕಿ ಬಂ
ದಾ ಮರುತದಿಂದ ದೇಶ ಗ್ರಾಮಗಳು ಪಾವನವು
ಧೀಮಂತ ಮಾನ್ಯಳಾದ ೨
ತುಳಸಿ ನೆಳಲಲ್ಲಿ ಅಂಕುರಗಳೆದ್ದಲ್ಲಿ ಪಿತೃ
ಗಳಿಗನ್ನವಿತ್ತರಕ್ಷಯಫಲವು ಊಧ್ರ್ವಪುಂಡ್ರ
ತಳದ ಮೃತ್ತಿಕೆಯಲಿಟ್ಟರೆ ಕೋಟಿ ತೀರ್ಥಗಳ ಮುಳುಗೆದ್ದ
ಫಲ ಸಿದ್ಧವು
ನಿಲಯದಲಿ ಪತ್ರ ಮೃತ್ತಿಕೆ ಕಾಷ್ಠವಿರಲಲ್ಲಿ
ಕಲಿ ಮುಟ್ಟಲಂಜಿ ತೊಲಗುವನು ಮಣಿಸರಗಳನು
ಗಳದೊಳಾಂತರಾ ಕಲುಷ ಸಂಹರವು ಸಹ ಸಲೆ
ವಿಷ್ಣುಪದವಿಯನೀವ ೩
ಶತಸಾಸಿರಪರಾಧವಿರಲಿನ್ನು ಮೃತ್ತಿಕೆಲಿ
ಪಿತ ಕಾಯದನಿಗೆ ಬಹುಜನ ನೋಡೆ ವಿಘ್ನಗಳ
ಗತಿಯುಡುಗಿ ದುಷ್ಟಗ್ರಹಗಳೆಲ್ಲನುಕೂಲಗತಿಯಾದ ಫಲವೀವವು
ಪ್ರತಿದಿನದಿ ನಾಭಿಕಕರ್ಣದಲಿ ಶಿರದಲ್ಲಿ ಶ್ರೀ
ಪತಿಯ ನಿರ್ಮಾಲ್ಯದಳ ಧರಿಸಿ ಹರಿಪಾದ ತೀ
ರಥವೊಮ್ಮೆ ಸೇವಿಸಿದವರ ಮುಕ್ತಿ ಕರತಳವು ಪತಿತಪಾವನಿ
ಎನಿಸುವಾ೪
ದರುಶನದಿ ಸ್ಪರುಶನದಿ ಧ್ಯಾನದಿಂ ಕೀರ್ತನೆಯು
ನಿರುತ ಪ್ರಣಾಮಗಳು ಸ್ತೋತ್ರದಾರೋಪಣಿಂ
ಪರಮಜಲ ಶೇಚನಾರ್ಚನ ನಿಷ್ಠೆಯಿಂದ ನವ ಪರೀಕ್ಷೆಯನು
ಮಾಡಲು
ಹರಿಚರಣ ಕಮಲರತಿ ದೊರಕಿ ಯುಗ ಕೋಟಿ ಸಾ
ಸಿರ ಕಾಲ ತಿರುಗಿ ಬಂದರೆ ಸತತ ಮಾಂಗಲ್ಯ
ಹರಿಯ ಮನೆಯಲ್ಲಿ ನಿಜ ಹರುಷವನ್ನುಂಬುವರು ಮುರಾರಿ
ವರದಂತೆ ಪದವ ೫
ಒಂದೊಂದು ದಳ ಕೋಟಿ ಸ್ವರ್ಣಭಾರಕೆ ಮಿಗಿಲು
ಎಂದು ವಿಶ್ವಾಸದಲಿ ತಂದು ಸಾಸಿರನಾಮ
ದಿಂದ ಗೋವಿಂದಗರ್ಪಿಸಿದರಿಲ್ಲಿಹ ಭವದಂದುಗವು ಮಾನಿಸರ್ಗೆ
ಸುಂದರ ತುಲಸಿ ಮೂಲವನ್ನು ತೊಡಕಿರ್ದ ಕಳೆ
ಯಂದೆಗೆದು ಶಾಖೋಪಶಾಖದಿಂ ವೃದ್ಧಿಸಾ
ನಂದವಿತ್ತರಾ ನೂರೊಂದು ಕುಲ ನರಕವನು ಹೊಂದಲೀಸರು
ಪುಣ್ಯದಾ ೬
ಶ್ರೀ ವಿಷ್ಣುವಲ್ಲಭೆಯ ಮೂಲದಲಿ ತೀರ್ಥಗಳು
ಬಾವನ್ನಗಂಧಿಯಳ ಮಧ್ಯದಲಿ ಸುರನಿಕರ
ಪಾವನಿಯಳಾ ಹರಿಯ ಕೊನೆಯಲಿ ಶ್ರುತಿ ಸಮೂಹ
ಲಾವಣ್ಯ ಗುಣರಾಸಿಯು
ಭಾವಶುದ್ಧಿಯಲಿ ಉದಯದಿ ಸ್ಮರಿಸಿ ನಿರುತದಿ
ನಾವ ಕಾರ್ಯಕೆ ಗೆಲುವು ಇಹಪರದ ಸೌಖ್ಯವಿ
ತ್ತಾವ ಕಾಲಕ್ಕೆ ಹೊರೆವ ಪ್ರಸನ್ನವೆಂಕಟ ದೇವನಂಗ ದೊಳೊಪ್ಪುವಾ ೭