Categories
ರಚನೆಗಳು

ಪ್ರಸನ್ನವೆಂಕಟದಾಸರು

ಅಷ್ಟಕೃತ್ಯ: ಜಗತ್ತಿನ
೧೦೩
ಪಾಲಿಸೆನ್ನ ಮಂದಬಾಲಿಶನ್ನ
ಪಾಲಗಡಲೊಡೆಯ ಸಿರಿಲೋಲ ಪ.
ಅಂಬುರುಹ ಸಂಭವ ತ್ರಿಯಂಬಕ ಶೇಷಾಂಬರಗ
ದಂಭೋಳಿಸಂಭೃತನುತಾಂಘ್ರಿ ೧
ಅಷ್ಟಕೃತ್ಯ ಅಷ್ಟವಿಭವ ಅಷ್ಟ ಭೋಗ್ಯಥೇಷ್ಟ ಶಕ್ತ
ಅಷ್ಟಹರಿತ ಶ್ರೇಷ್ಠವರ್ಯ ಶ್ರೇಷ್ಠ ೨
ದ್ಯುಗ ಶಶಿಭಾಯುಗನಯನ ಜಗಜಠರಘಹರಾಹಿ
ನಗನಿಲಯ ಜಘನಕಟಿಪಾಣಿ ೩
ಕಿರೀಟ ಕುಂಡಲರಿದರ ಕೇಯೂರ ಕೌಸ್ತುಭ ಸಿರಿವತ್ಸ
ವರಾಂಬರ ಮನೋಹರ ಮೇಖಲಧಾರಿ ೪
ದ್ರೌಪದಿ ಮುನಿವಧು ಬಾಲಧ್ರುವ ಪ್ರಹ್ಲಾದ ವಿಭೀಷಣೋ
ದ್ಧವಾಕ್ರೂರ ಮುಖ್ಯವಮಾನಹಾರಿ ೫
ಋಗ್ಯಜು ಸಾಮ ನಿಗಮಧರವಗೋಚರ ಮುನಿಗಣ ಸುಮ
ನಗೇಹನಂತ ಸುಗುಣಾನಂದ ಪೂರ್ಣ ೬
ಮಧು ಕೈಟಭ ಮದನೇಮಿ ಜಲಂಧರ ಕಂಬು ಸದನ ಖಳಾ
ಬುಧಿ ಕುಲಾಂತಕ ದ್ವಿಜೋಪಕಾರಿ ೭
ಋಷಿ ಹನುಮ ರಸಗಾಯನ ತೋಷಭರಿತ ಹಾಸ ವದನಪ್ರಸನ್ನ ವೆಂಕಟೇಶ ನಮೋ ಸ್ವಾಮಿ ೮

೧೦೪
ಪಾಲಿಸೊ ಪಾಲನ ಶೀಲ ಶ್ರೀಲೋಲ
ಪಾಲಿಸೊ ಪಾಲನಶೀಲ ಪ.
ಈಶ ಪರೇಶ ನಿರ್ದೋಷ ಸ್ಮಿತಹಾಸ ನಿ
ರಾಶ ಅಘನಾಶ ಘನಶಾಮೆನ್ನಾಶ ೧
ಮಿತ್ರ ಜಿತಗಾತ್ರ ಶತಪತ್ರಾಯತ ನೇತ್ರ ಧ
ರಿತ್ರೀಕಳತ್ರ ಶ್ರೀ ಪೋತ್ರಿ ಪವಿತ್ರ ೨
ಕರುಣಾರಸಾರ್ಣವ ಸ್ವರ್ಣಗಿರಿ ಪೂರ್ಣ ಶುಭ
ಅರುಣಾಬ್ಜಚರಣ ಪ್ರಸನ್ವೆಂಕಟ ಭರಣ ೩

೨೫೪
ಪಾಲಿಸೊ ಮಾಧವ ಈ ತೆರದಲಿ ಪ.
ನಿನ್ನನೆ ಹಾಡಿಸಿ ನಿನ್ನವರ ಕೂಡಿಸಿ
ನಿನ್ನ ಸಾಹಸ ಕೀರ್ತಿಯನ್ನೆ ಕೇಳಿಸುವಂತೆ ೧
ನೀಚರಾಧೀನ ಮಾಡಿ ನಾಚಿಸಬೇಡ ಸ
ದಾಚಾರವೃತ್ತಿಯ ಆಚರಿಪಂತೆನ್ನ ೨
ನೀ ಮರೆಸದಿರು ಶ್ರೀನಾಮವ ಜಿಹ್ವೆಗೆ
ಸ್ವಾಮಿ ಪ್ರಸನ್ವೆಂಕಟ ಮನೋಹರ ಕೃಷ್ಣ ೩

೨೫೫
ಪಾಲಿಸೊ ವನಮಾಲಿ ಮುಂದೆನ್ನ
ಬಾಲಕನಲೆಯಲೆಸದವನ ಪ.
ಹದ್ದನೇರ್ವನಿರುದ್ಧ ನಿನ್ನಲ್ಲಿ
ಬುದ್ಧಿ ನಿಲ್ಲದು ಶುದ್ಧ ವೃತ್ತಿಲಿ
ಮುದ್ದುಮಕ್ಕಳು ಮುಗ್ಧರಲ್ಲೆಅಯ್ಯ
ತಧ್ಯಾನಾಲಾಪ ಬಿದ್ದದ್ದಲ್ಲಯ್ಯ ೧
ತುಲಸಿ ಪುಷ್ಪಾಂಜಲಿ ತರಲಿಲ್ಲ
ಹೊಳೆವಂಘ್ರಿಗರ್ಪಿಸಲು ಹೊತ್ತಿಲ್ಲ
ಬಲು ಧನ ಬಹ ಕೆಲಸ ಕೈಕೊಂಡೆ
ಕಲಿಕೂಡ ನಿರಯದ ಭೋಗುಂಡೆ೨
ಆಡುವ ಮಾತು ಮಾಡಲರಿತರಿಯೆ
ಬೇಡುವರಿಗುಣ ನೀಡಲಿಕ್ಕರಿಯೆ
ಖೋಡಿಗೇನುಂಟು ಸುಖ ಹೇಳು ತಂದೆ
ಹಾಡುವೆ ನಿನ್ನ ಕಾಡುವೆನಿಂದೆ ೩
ಹೆತ್ತ ತಾಯಿ ಕುತ್ತಿಗೊತ್ತಿದರಾರೊ
ಮತ್ತೆ ತಂದೆ ಮಾರಲಿತ್ತರಿನ್ನಾರೊ
ಪೃಥ್ವಿಪ ಸುಲಿದರೊತ್ತರೆಂಬುವರು
ಕರ್ತ ನೀನಿದ್ದೆನ್ನೆತ್ತುವರಾರು ೪
ಕರುಣವಾರಿಧಿ ಕರುಣಿಸು ಗಡ
ಪರಮಭಾಗವತರಿರುವಲ್ಲೆನ್ನಿಡು
ಪರಸನ್ನ ವೆಂಕಟರಸ ನೀ ಬಾರೊ
ಮರಣ ಹೊಂದದ ಅರಮನೆಗೊಯ್ಯೊ೫

ಪಶುಪತಿವಂದ್ಯ: ಶಿವನು
೧೦೫
ಪಾಲಿಸೊ ಶ್ರೀರಾಮ ಪೂತ ನೀರದ ಶ್ಯಾಮ ಪ.
ಕೌಶಿಕಪ್ರಿಯ ಸುಸತಿ ಸಹಾಯ
ಕೌಸಲ್ಯಾಪುತ್ರ ಕಮನೀಯ ಗಾತ್ರ ೧
ಪಶುಪತಿವಂದ್ಯ ಪರಮಾನಂದ
ದೂಷಣ ಖರಾರಿ ದಶಶಿರಹಾರಿ ೨
ಋಷಿ ಹೃತ್ಪೂರ್ಣ ರಘುಕುಲರನ್ನ
ಪ್ರಸನ್ವೆಂಕಟೇಶ ಪವನಜತೋಷ ೩

ಅಹಿವರ ಶಯನ
೧೦೬
ಪಾಹಿಮಾಂ ಕೃಷ್ಣ ಪಾಹಿ
ಅಹಿವರ ಸುಶಯನ ಸ್ವರೂಪ ಸುಖಂ ದೇಹಿ ಪ.
ವಾರೀಚರ ಶೈಲಧರ ಪೋತ್ರಾವತಾರಿ ನೃ
ಹರಿ ಬ್ರಹ್ಮಚಾರಿ ಭೂರಿಕ್ಷೇತ್ರ ರಕ್ಷಾರಿ
ಶೌರಿ ವ್ರತನಾರೀಜನಜಿತಾಘದಾರಿ ೧
ಮತ್ಸ್ಯ ಕಮಠ ಹೇಮಾಕ್ಷಮಥನ ತಾ
ಮ್ರಾಕ್ಷ ಕವಿಮದವಿರೇಕ್ಷ ದೀಕ್ಷಾಂಕಿತ ಯಜ್ಞ
ರಕ್ಷಾಭ್ರಾಂಗ ಬುದ್ಧ ದಕ್ಷ ಶುಭಧರ್ಮಕುಕ್ಷ ೨
ಗೋಪ ಪೀಯೂಷ ಭೂಪ ಶಿಶುಸುರ ಭ
ಯಾಪಹನ್ ದ್ವಿಜಕುಲ ಪ್ರದೀಪ ಭೂಪ ಗೋಪ ಯೋಗ
ರೂಪ ಹೃತಮ್ಲೇಚ್ಛತಾಪ ಪ್ರಸನ್ವೆಂಕಟಾಧಿಪ ೩

(ನು. ೩) ಗಜಮಥನ
ರುದ್ರದೇವರು
೧೫೭
ಪಾಹಿಮಾಂ ಪಾಹಿ ಪಾರ್ವತೀಪತೆ ಪ.
ಪಾಹಿ ಪಾಹಿ ಗಂಗಾಹಿಮಕರಧರ
ದೇಹಿಕ ಸುರತರೊ ಮೋಹನಮೂರ್ತೆ ೧
ದರ್ಪಕ ಮದಹರ ಅರ್ಪಕ ಮಂದರ
ಸರ್ಪವಿಭೂಷಣ ಕರ್ಪುರ ಕಾಯ ೨
ಗುಹಗಣಪತಿಪಿತ ಗಜಮಥನ ವೃಷ
ವಾಹನ ಪೂಜಕ ವಾಹಿನಿಪಾಲ ೩
ತ್ರ್ಯಂಬಕ ದುರಿತಕದಂಬ ನಿವಾರಕ
ಸಾಂಬ ಸದಾಶಿವ ಅಂಬರಕೇಶ ೪
ಕಪಟಿ ಜನಾರ್ದಕ ತಪನನಿಚಯಧುತೆ
ತ್ರಿಪುರಾಂತಕ ಭವವಿಪಿನಕೃಶಾನೊ ೫
ಪ್ರಮಥಜನಾರ್ಥಿತ ಅಮಿತ ದಯಾನಿಧೆ
ಸುಮತಿ ಕುಲೇಶ್ವರ ಕುಮತಿಖಳಾರೆ ೬
ಕರುಣಾಕರ ಸುಖಕರಣ ಭುವನ ನುತ
ಚರಣಯುಗಳ ಖಳವಾರಣ ಪ್ರಹರಣ ೭
ಶೂಲ ಡಮರ ಸುಕಪಾಲಧರ ಶಿರೋ
ಮಾಲಾನ್ವಿತ ಗುಣಜಾಲ ಸುಶೀಲ ೮
ಭಾಸುರ ಶುಭಕೈಲಾಸನಿಲಯ ಭೂತೇಶ
ಪ್ರಸನ್ವೆಂಕಟೇಶ ಭಟೇಶ ೯

೧೦೭
ಪಾಹಿಮಾಂ ಪಾಹಿ ಸೀತಾಪತೆ ಪ.
ವಾಣೀಧವ ಪಿತ ಘೂೀಣಿ ರಥಪದ
ಪಾಣಿ ನಂದಕೃಪಾಣಿ ಜಯ ಜಯ
ಕ್ಷೋಣಿವಲ್ಲಭ ಕ್ಷೋಣಿಸುತಾಚಿ
ದ್ಗೌಣ ವರಾಹಾಗ್ರಣಿ ಶ್ರೀರಾಮ ೧
ರಾಜಕುಲಾಂಬುಧಿ ರಾಜಾರಮಣ
ರಾಜ ತೇಜ ವೈರಾಜ ಜಯ ಜಯ
ರಾಜಸೂಯಾರ್ಚಿತ ರಾಜೇಶ್ವರ ಸುರ
ರಾಜಾನುಜ ರಘುರಾಜ ಶ್ರೀರಾಮ ೨
ಮಂದರಧರ ನಿಜಸುಂದರ ಚಿನ್ಮಯ
ಮಂದಿರ ನಿತ್ಯಾನಂದ ಜಯ ಜಯ
ವೃಂದಾವನಚರ ವೃಂದಾರಕ ಮುನಿ
ವೃಂದ ನೃಪಾನ್ವಯವಂದ್ಯ ಶ್ರೀರಾಮ ೩
* . . * . . * . . * . . * ೪
ಶ್ರೀಪದ ಶ್ವೇತದ್ವೀಪನಿಲಯ ಶ್ರುತಿ
ತಾಪಹರಣ ನಿರ್ಲೇಪ ಜಯ ಜಯ
ಶ್ರೀ ಪ್ರಸನ್ವೆಂಕಟ ಭೂಪತಿ ಭುವನ
ವ್ಯಾಪಕ ಪೂರ್ಣಪ್ರತಾಪ ಶ್ರೀರಾಮ ೫


ಪುಂಡರೀಕದಳ ನಯನ ನಿಮ್ಮ ಕೊಂಡಾಡಲಳವಲ್ಲ
ಪಾಂಡುರಂಗಯ್ಯ ಕೃಷ್ಣರಾಯ ಪ.
ಭೂಮಿಯ ಈರಡಿ ಮಾಡಿ ಮ್ಯೋಮಕೊಂದು ಪಾದವನಿತ್ತೆ
ರೋಮ ರೋಮದಲಿ ಬ್ರಹ್ಮರುದ್ರರಿರಲು
ಸ್ವಾಮಿ ನಿಮ್ಮ ಪ್ರೇಮವ ತಾಳಿದಳೆಂದು ನಿಮ್ಮ
ಕೋಮಲಾಂಗಿ ಬಲ್ಲಿದಳೊ ನೀ ಬಲ್ಲಿದನೊ ೧
ಹದಿನಾಲ್ಕು ಲೋಕವು ತನ್ನ ಉದರದೊಳಿಂಬಿಟ್ಟು
ಕೊಂಡು ಸೃಜಿಸಿ ರುಕ್ಮಿಣಿ ತನ್ನ ಕುಚಗಳಲ್ಲಿ
ಚದುರದಿಂದ ಎತ್ತಿ ಕುಣಿದಾಡುವ
ಪದುಮಾಕ್ಷಿ ಬಲ್ಲಿದಳೊ ನೀ ಬಲ್ಲಿದನೊ ೨
ಶೃಂಗಾರ ತೋರುವ ನಿಮ್ಮ ಮಂಗಳದ ಶ್ರೀಪಾದವ
ಹಿಂಗದೆ ಭಜಿಸಲು ಸಂಗತಿಯನಿತ್ತೆಯೊ
ರಂಗ ಪ್ರಸನ್ನವೆಂಕಟಕೃಷ್ಣ ನಿಮ್ಮ
ಸಂಗಸುಖಿ ಬಲ್ಲಿದಳೊ ನೀ ಬಲ್ಲಿದನೊ ೩

ಹಯಸೂದನ: ಹಯಗ್ರೀವನೆಂಬ ರಕ್ಕಸ
೧೦೮
ಪ್ರಸನ್ನವದನ ಹಯಸೂದನ ಪಾಲಿಸು ಹಯವದನ ಪ.
ಚಂದ್ರಮಂಡಲ ಗ್ರಹಮಾಲಾನಂದ ವಿಶಾಲ
ಇಂದಿರೆರಮಣ ಖಗಗಮನ
ಸ್ಯಂದನಾಂಗದರರವಿಂದ ಗದಾಕರ
ಸುಂದರಗಾತ್ರಧಿ ವಂದ್ಯವಿಧಾತ್ರ ೧
ನಿಗಮೋದ್ಧಾರಕಾಘ ವಾರಕ ತ್ರಿಜಗರಕ್ಷಕ
ಮೃಗಮುಖನೃದೇಹಿ ಧಾರ್ಮಿಕ
ದ್ಯುಗಶಶಿ ಸಮತೇಜ ದೃಗಯುತ ಗಜರಾಜ
ನಿಗಡ ಶಿಥಿಲಕಾರಿ ಬಿಗಡರ ಭಾರಿ ೨
ಗುರುವಿನ ಬಾಲ ಪಾಲನಶೀಲ ಸಾಗರಸುತೆಲೋಲ
ಗುರುವಾದಿರಾಜಾರ್ಚಿತ ಪಾದಾಬ್ಜ
ವರಸೋದೆ ಮಠವಾಸ ಸುರಮುನಿ ಪರಿತೋಷ
ಪರಸನ್ನವೆಂಕಟೇಶ ಹರಿ ತುರಗಾಸ್ಯ ೩

೨೫೬
ಪ್ರಹ್ಲಾದ ವರದ ಭಯಗಜಕೆ ಸಿಂಹ ಪರಮ
ಆಹ್ಲಾದಪದವಿತ್ತು ಪೊರೆಯೊ ನರಸಿಂಹ ಪ.
ಹಿಂದೆ ಹಿರಣ್ಯಕನುದರದಲಿ ಜನಿಸಿ ಪ್ರಹ್ಲಾದ
ನೊಂದವನ ಬಾಧೆಯಲಿ ಮರಳಿ ಮರಳಿ
ಇಂದಿರೇಶ ಸಲಹೆನಲು ಗಡಾ ಸ್ತಂಭದಲೊದಗಿ
ಬಂದವನುರವ ಬಗಿದು ರುಧಿರವನು ಸವಿದೆ ೧
ಅಸುರ ಕೆಡೆದದ ಕಂಡು ಅತಿ ಹರುಷದಿಂದ ತ್ರಿ
ದಶರಂಬರದಿ ಪೂಮಳೆಗರೆಯಲು
ಶಿಶುವೇಕ ಮಾನಸದಿ ಮರೆಹೊಕ್ಕು ಪೊಗಳುತಿರೆ
ಬಿಸಜಾಕ್ಷ ಕರುಣದಿಂದವನ ಸಲಹಿದೆಯಾಗಿ ೨
ಹಲವು ಯೋನಿಗಳಲ್ಲಿ ತಿರುಗಿ ಬಳಲಿದೆನಯ್ಯ
ನಳಿನಾಕ್ಷ ನಿಮ್ಮ ಗುರುತವ ಕಾಣದೆ
ಇಳೆಯಲ್ಲಿ ದ್ವಿಜನಾಗಿ ಪುಟ್ಟಿ ತವ ಪದವಿಡಿದೆ
ಗೆಲಿಸು ಭವದುರಿತವ ಪ್ರಸನ್ವೆಂಕಟ ನೃಸಿಂಹ ೩

೨೫೭
ಬಂಟನಿಂದ ವ್ಯಾಳೆ ವ್ಯಾಳೆಗೆ ಊಳಿಗವ ಕೊಂಡು
ಉಂಟು ಮಾಡು ನಿನ್ನ ದಯವ
ನಂಟನಾಗಿ ನೀಯೆನ್ನ ಅವಸರಕೆ ಒದಗು ವೈ
ಕುಂಠಪತಿ ವೆಂಕಟೇಶ ಶ್ರೀಶ ಪ.
ನೀನಟ್ಟಿದಲ್ಲಿಗೈದುವೆ ಕರೆದರೋಡಿ ಬಹೆ
ನೀನುಂಡುಳಿದುದನುಣುವೆ
ನೀನಾರಧೀನ ಮಾಳ್ಪೆ ಅವರಾಜ್ಞದಲಿ ನಡೆವೆ
ನೀನುಟ್ಟ ಮೈಲಿಗ್ಯುಡುವೆ ತೊಡುವೆ ೧
ಕ್ರೂರಕಂಟಕ ಕುಲವ ನಿನ್ನ ನಾಮಾಸ್ತ್ರದಿ ವಿ
ದಾರಿಸುವೆ ಹುಯ್ಯಲಿಡುವೆ
ಆರಿಗಂಜೆನು ಯಮನ ಚಾರಕರಿಗಂಜೆ ನಾ
ಮಾರುವೆ ತವಾಂಘ್ರಿಗುರವ ಶಿರವ ೨
ಇಂತೆ ಸೇವೆಯ ಕೊಂಡು ಎನ್ನ ತನುಮನದಲ್ಲಿ
ಸಂತತವಸರಕೊದಗಯ್ಯ
ಚಿಂತನೆಯವಸರ ಅಂತ್ಯಯಾತ್ರೆಯವಸರಕೊದಗು
ಕಾಂತ ಪ್ರಸನ್ವೆಂಕಟಗಪ್ಪ ಎನ್ನಪ್ಪ ೩

೪೪೮
ಬಂದಕೋ ರಾಮಚಂದ್ರ
ಬಂದನದಕೋ ರಾಮಚಂದ್ರನವನಿಜೆಯ ಕಳು
ಹೆಂದರೆ ವಿಭೀಷಣನ ಕುಂದ ನುಡಿದಣ್ಣ ಪ.
ಲೆಂಕರೊಳೊರ್ವನು ಮಾಭುಂಕರಿಸಿ ವನದಿ
ಶಂಕ ರಕ್ಕಸರಳಿದು ಲಂಕೆ ಉರುಹಿದ
ಸಂಖ್ಯೆರಹಿತ ಪ್ಲವಗರಂಕಪಡೆಯೊಡನೆ ಬಹ
ಪಂಕರುಹಮುಖಿ ಕೊಡೆನಲಹಂಕರಿಸಿದಣ್ಣ ೧
ಜೀವರಂತಲ್ಲ ಹರಿ ಸಾವು ರಚಿತ ನಿಮಗು
ಶಿವನ ಬಿಲ್ಮುರಿದ ಭಾವರಿವಿರಿ
ನೀವು ರಕ್ಕಸರಾಕೆ ದೇವರರಸಿಯ ಬಯಸ
ಲಾವರಿಸದೆನೆ ಕೊಲ್ಲಲಿ ಕಾವರಿಸಿದಣ್ಣ ೨
ಅನುಜವಾಕ್ಯವ ಕೇಳಿ ದನುಜನುಗ್ರದಿ ಹುಲು
ಮನುಜ ಸರಿಯೇ ನನ್ನ ರಣ ಜಯಿಪನೆ
ಇನಜಭವ ಶುಭಕಂಠಾಂಜನಿಜ ಜಾಂಬವ ಮುಖ್ಯರ
ದನುಜ ಗ್ರಹಿಸದರಿವನೆನೆ ಜಡಧಿಯಣ್ಣ ೩
ವಿಧಿಯಲೇಖನ ನೋಡಿ ಕುದಿಯಲಾರ್ದಟ್ಟಿಹರು
ಸುಧೆಯೆ ವಿಷವೈ ಕ್ರೂರ ಹೃದಯಗೆನಲು
ಬದಿಯ ತಿವಿದೆಲೆ ಹೇಡಿ ಮದೀಯಾರಿ ಹೋಗೆನ್ನೆ ಅಂ
ಬುಧಿಯಿಳಿದ ರಾಮಕುಶಲುದಯವೆಲ್ಲಣ್ಣ ೪
ದೂಷಣೋಕ್ತಿಯಿಂ ಚಿಂತಾಕೃಶನಾಗಿ ರಾಮಪದ
ದರ್ಶನಾಪೇಕ್ಷದಲಿ ವಿಭೀಷಣ ನಿಲುತ
ಪ್ರಸನ್ನವೆಂಕಟರಾಮನಶನಿಶರಕಂಗನಗ
ನುಸಿ ನುಗ್ಗಹುದು ಸತ್ಯ ಪುಸಿನುಡಿಯೆನಣ್ಣ೫

೬೭
ಬಂದರದಕೊ ಬಲರಾಮ ಮುಕುಂದರು
ಬಂದರಕೊ ಭಾವೆ ಕೆಲೆಯುತ ನಲಿಯುತ ಪ.
ನೀರಜಸಖನುದಯಾಗದ ಮುನ್ನ ಝೇಂ
ಕಾರದೊಳಳಿ ಮೊತ್ತವೇಳದ ಮುನ್ನ
ಸಾರಸ ಕೀರ ಮಯೂರಸ್ವನದ ಮುನ್ನ
ನಾರಿಯರು ಮೊಸರ ಮಥಿಸುವುದರಿತು ೧
ನವ ನವನೀತಕೆ ಮಚ್ಚಿ ಮನವಿಟ್ಟು
ತವಕದಿ ಗೋಡೆಯ ಧುಮುಕುತಲಿ
ಯುವತಿ ಗೊಲ್ಲತಿಯರ ಮರುಳು ಮಾಡುವರು ಸ
ಣ್ಣವರೊಳು ತಾಳ ಮೇಳದ ಅಬ್ಬರದಲಿ ೨
ಸಾರಗೋರಸ ಚೋರರು ಗೋಪಿಮಕ್ಕಳು
ಸೂರಿಡುವರು ಮನೆ ಮೀಸಲನು
ಸಾರಿಸಾರಿಗೆ ಪ್ರಸನ್ವೆಂಕಟ ಕೃಷ್ಣರ
ಚಾರು ಒಡ್ಯಾಣ ಘಂಟಾರವವನಾಲಿಸವ್ವ ೩

೨೫೮
ಬಂದಿದೆ ದುರಿತಘಸಂಗ ಶ್ರೀರಂಗ
ಮಂದಮತಿಯೆಂದುಪೇಕ್ಷಿಸದುಳುಹೊ ಪ.
ಒಲ್ಲೆನೆಂದರೆ ಬಿಡದೀ ಮನ ತಿಳಿದತ್ತೆ
ಕ್ಷುಲ್ಲ ವೃತ್ತಿಯ ಸೇರಿ ಬಿಡಲೊಲ್ಲದು
ಕಲ್ಲುಗೊಂಡಿದೆ ಪುಣ್ಯಮಾರ್ಗಕ್ಕೆ ಇದರೊಳು
ಫುಲ್ಲನಾಭನೆ ಆವ ತೆರದಿಂದ ಸಲಹೊ ೧
ಕೆಂಡವ ಕೊಂಡು ಮಂಡೆಯ ಬಾಚುತಿದೆ ಪರ
ಹೆಂಡಿರು ವಿತ್ತದಾಸೆಗೆ ತೊಡಕಿ
ಕಂಡರೆ ಸೊಗಸದು ಭಕುತಿ ವೈರಾಗ್ಯವ
ಪುಂಡರೀಕಾಕ್ಷನೆ ಗತಿ ನೀನೆ ಬಲ್ಲೆ ೨
ಮೆಲ್ಲ ಮೆಲ್ಲನೆ ದುಷ್ಕರ್ಮವ ಸಾಧಿಸಿ
ಬಲ್ಲಿದ ಜವನವರ ಬರಮಾಡಿದೆ
ವಲ್ಲಭ ಪ್ರಸನ್ವೆಂಕಟ ಕೃಷ್ಣ
ನಿಲ್ಲಿಸು ನಿನ್ನ ನಾಮವ ನಾಲಿಗೆಯಲಿ ೩

ಬಂದೆನೇಳೆ ಗೋವಿಂದ ನಾ
೨೦
ಬಂದೆನೇಳೆ ಗೋವಿಂದ ನಾ ಇಂದುಮುಖಿ ನಿದ್ರೆ ಬಿಟ್ಟು
ಬಂದು ನೀ ಬಾಗಿಲ ತೆಗೆಯೆ ಗೋವಿಂದ ನೀ ಗೋ
ವೃಂದವ ಕಾಯಲು ಹೋಗಯ್ಯ ಪ.
ಸೋಮಕ ಖಳನ ಕೊಂದು ನೇಮದಿ ವೇದವ ತಂದ
ಶ್ರೀ ಮತ್ಸ್ಯಾವತಾರ ಬಂದೆನೆ ಮತ್ಸ್ಸ್ಯನಾದರೆ
ಆ ಮಹಾಂಬುಧಿಗೆ ಹೋಗಯ್ಯ ೧
ಸಿಂಧು ಮಥನ ಕಾಲಕೆ ವೃಂದಾರಕರಿಗೂಲಿದ
ಸುಂದರ ಕೂರ್ಮನು ಬಂದೆನೆ ಕೂರ್ಮನಾದರೆ
ಮಂದರ ಹೊರಲು ಹೋಗಯ್ಯ ೨
ಪ್ರಳಯಾಂಬುಗಿಳಿದೊಬ್ಬನ ಸುಲಭದಿ ಕೋರೇಲಿ ಸೀಳಿದ
ಚೆಲುವ ವರಾಹನು ಬಂದೆನೆ ವರಾಹನಾದರೆ
ಇಳೆಯ ಕೂಡಾಡ ಹೋಗಯ್ಯ ೩
ಸೊಕ್ಕಿ ಕಂಬವ ಗುದ್ದ್ದಿದ ರಕ್ಕಸನಂತರ ಮಾಲೆಯ
ನಿಕ್ಕಿದ ನರಹರಿ ಬಂದೆನೆ ನರಹರಿಯಾದರೆ
ಚಿಕ್ಕವನೊಳಾಡ ಹೋಗಯ್ಯ ೪
ಹೋಮವ ಮಾಡಿ ಮೀರಿದ ಭೂಮಿಪನುಕ್ಕ ಮುರಿದ
ನೇಮದ ವಾಮನ ಬಂದೆನೆ ವಾಮನನಾದರೆ
ನೇಮ ನಿಷ್ಠೆಗೆ ನೀ ಹೋಗಯ್ಯ ೫
ಭೂಭಾರವನಿಳುಹಿ ದ್ವಿಜರ್ಗೆ ಭಾಗ್ಯವ ಕೊಟ್ಟ ಶೌರ್ಯ
ಶೋಭಿತ ಭಾರ್ಗವ ಬಂದೆನೆ ಭಾರ್ಗವನಾದರೆ
ಆ ಬಾಲೇರಂಜಿಸ ಹೋಗಯ್ಯ ೬
ಸೀತೆಗಾಗಿ ರಾವಣನ್ನ ಘಾತಿಸಿದೆ ಕೇಳೆ ವಾತ
ಜಾತ ವಂದ್ಯ ರಾಮ ಬಂದೆನೆ ರಾಮನಾದರೆ ಸರ
ಯೂ ತೀರದಲ್ಲಿರ ಹೋಗಯ್ಯ ೭
ಸೋಳಸಾಸಿರ ಗೋಪೇರನಾಳುವ ಪ್ರೌಢ ಕಾಣೆ ಗೋ
ಪಾಲ ಚೂಡಾಮಣಿ ಬಂದೆನೆ ಗೋಪಾಲನಾದರೆ ಗೋ
ಪಾಲೇರೊಡನಾಡ ಹೋಗಯ್ಯ ೮
ದೃಢದಲ್ಲಿ ತಪವಿದ್ದ ಮಡದೇರ ಮನಗೆದ್ದ
ಕಡುಮುದ್ದು ಬುದ್ಧ್ದ ಬಂದೇನೆ ಬುದ್ಧನಾದರೆ ಮಿಥ್ಯದ
ಸಡಗರದಲ್ಲಿರ ಹೋಗಯ್ಯ ೯
ಪದ್ಮಗಂಧಿ ನಿನ್ನ ರತಿಗೊದಗಿದೆ ಬಿಂಕವಿನ್ನ್ಯಾಕೆ
ಕುದುರೆಯೇರಿ ಕಲ್ಕಿ ಬಂದೆನೆ ಕಲ್ಕಿಯಾದರೆ
ಕದನಕೆ ಜಾಣ ಹೋಗಯ್ಯ ೧೦
ವಲ್ಲಭನ ನುಡಿಕೇಳಿ ನಲ್ಲೆ ಸತ್ಯಭಾಮೆ ಪಾದ
ಪಲ್ಲವಕೆರಗಿ ನಿಂತಳು ಪ್ರಸನ್ವೆಂಕಟ
ಚೆಲುವ ನೀನೆಂದರಿಯೆನೆಂದಳು೧೧

೬೮
ಬಂದೆಯಾ ಬಾರೊ ಗೋಪಾಲ ಕೃಷ್ಣ
ಬಂದೆಯಾ ಬಾರೊ ಪ.
ಇಲ್ಲಿಯ ಗೊಲ್ಲತೇರೆಲ್ಲರು
ಬಲ್ಲಿದ ಕಾಮುಕ ನಲ್ಲೇರು
ಫುಲ್ಲಲೋಚನ ನಿನ್ನ ಮುದ್ದಿನ ಮೊಗವ
ಮೆಲ್ಲನೆ ಚುಂಬಿಸಿ ಬಿಡರೊ ಮಗುವೆ ೧
ಚಿಕ್ಕವನೆಂದಾಡಿಸಿ ನಿನ್ನ
ಚಕ್ಕಂದಿಲಿ ಬಾಡಿಸಿ ಚಿನ್ನ
ಸಕ್ಕರೆ ಮಾತಲಿ ಬಿಗಿದಪ್ಪುವರೊ
ಕಕ್ಕಸಕುಚದಂಗನೆ ಗೋಪಿಯರೊ ೨
ಇರುಳ್ಹಗಲೆನ್ನ ಕಂದನ್ನ
ಮರುಳಿಕ್ಕುವರೆಂದಂಜುವೆ ನಾ
ತರಳನ ಕಾಲಿಂಗೆರಗುವೆ ನೋಡೋ
ತರಳೇರೊಡಗೂಡಾಡಲಿ ಬೇಡೊ ೩
ನಿಲ್ಲದೆ ನಿನ್ನ ಬರಮಾಡುವರೊ
ಚೆಲ್ವಹ ಹಣ್ಣುಗಳ ನೀಡುವರೊ
ಒಳ್ಳೆ ನಾರೇರನುದಿನ ನಿನ್ನ
ಬುಲ್ಲಿ ಬೆಲ್ಲಕೆ ಮನಸೋತಿಹರಣ್ಣ ೪
ವಿಗಡೇರ ದೃಷ್ಟ್ಯಾಗಲೆ
ತಗಲಿದವೈ ನಿನ್ನ ಮೈಯಲಿ
ಅಗಲದಿರೆನ್ನ ಪ್ರಸನ್ನವೆಂಕಟ
ನಗಪತಿ ಬಡವರ ಧನವೆ ಕೃಷ್ಣ ೫

ಸ್ವಾಮಿ ಪುಷ್ಕರ ತೀರದಲಿ ನಿಂತು
೧೦೯
ಬಣ್ಣಿಸಲಮ್ಮೆ ನಾನು ಪ.
ಬಣ್ಣಿಸಲಮ್ಮೆ ನಾ ಬಹಳ ಮಹಿಮ್ಮನ
ಚಿನ್ಮಯ ನಗಾಧಿಪ ಚೆಲುವ ತಿಮ್ಮಪ್ಪನ ಅ.ಪ.
ಇಳೆಯ ಮಾನವರೊಳು ಈಕ್ಷಿಸಿ ಕೃಪಾಳು
ಒಲಿದು ಕರುಣದಿಂದ ವೈಕುಂಠಪುರದಿಂದ
ಇಳಿದು ಮಂಗಳದೇವಿಯನು ಕೂಡಿಕೊಂಡು ವಿ
ಮಲ ಸ್ವಾಮಿಪುಷ್ಕರ ಮಹಾತೀರ್ಥದ ತೀರ
ದಲಿ ನಿಂತು ಬೇಕಾದ ಧನಧಾನ್ಯ ಸಂಪದ
ಹಲವು ಕಾಮ್ಯವನೀವ ಹೊಗಳಿದವರ ಕಾವ
ಸುಲಭರೊಡೆಯನ ಕಂಡು ಹಸಿದ ಕಂ
ಗಳ ಹಬ್ಬ ದಣಿಯಲುಂಡು ಬಹುತೋಷ
ತುಳುಕುವ ಸುಜನವಿಂಡು ವಾರಂವಾರ ೧
ಪೇಳಲೇನಯ್ಯನ ಪರಿಸೆಯ ಸೊಬಗು ನಾ
ಆಲಯದಿಂ ಗಡಾ ಜನಿಜನ ಸಂಗಡ
ಚೋಳ ಚಪ್ಪರಮೊತ್ತ ಛತ್ರ ಚಾಮರ ಪತಾ
ಕಾಳಿ ಸೀಗುರಿ ಢಕ್ಕೆ ಕೊಂಬು ಕಹಳೆ ಡೆಂಕೆ
ಮೇಳೈಸಿ ಮಹಿಮರು ಮಹದಾನಂದದವರು
ಗೋಳಿಡುವರು ಹರಿಗೋವಿಂದ ಎನುವರು
ಕಾಲಾಟದಲ್ಲವರು ಕೀರ್ತಿಪ ಗೀತ
ತಾಳ ದಂಡಿಗೆಯವರು ಬೆಳಗುವ
ಸಾಲು ಪಂಜಿನವರು ವಾರಂವಾರ ೨
ವಾಂಛಿತ ಫಲಗಳು ಒದಗಲು ಹರಿಯೊಳು
ವಂಚನೆಯಿಲ್ಲದೆ ಒಂದೊಂದು ಬಗೆಯದೆ
ಕಾಂಚನ ಮುಡುಪಿಲಿ ಕರಬದ್ಧಾಂಜಲಿಯಲಿ
ಮಿಂಚುವ ಭಕ್ತಿಲಿ ಮಧುಕರ ವೃತ್ತಿಲಿ
ಪಂಚಾಬ್ದಾದ್ಹಸುಳರು ಪ್ರಾಯದ ಅಬಲೇರು
ಹಿಂಚಾದ ವಯಸಾದ ಹಿರಿಯರು ಹರುಷದಿ
ಸಂಚಿತ ಹರಕೆಯವರು ತೊಟ್ಟಿಲು ಮನೆ
ಮಂಚವ ಹೊತ್ತವರು ದೇಶಗಳಿಂದಾ
ಕಾಂಕ್ಷೆವಿಡಿದು ಬಂದವರು ವಾರಂವಾರ ೩
ಸ್ವಾಮಿ ವರಾಹಪಾದ ಸರಸಿಜಾಂಬು ಸ್ವಾದ
ತಾಮಹತ್ಯಂಕದ ಶಾತಕುಂಭಾಂಕದ
ವೈಮಾನವಾಸನ ವಿಧಿ ಭವೇಂದ್ರೇಶನ
ಕಾಮನ ಪಿತನ ಕಲಿಭಯಛಿತ್ತನ
ಸೋಮಸೂರ್ಯಾಕ್ಷನ ಸಾಮಜ ಪಕ್ಷನ
ಜೀಮೂತಗಾತ್ರನ ಜಿತಶತ್ರು ಸೂತ್ರನ
ನೇಮದಿ ಕಂಡೆರಗಿ ಮೈಯೊಳು
ರೋಮ ಪುಳಕಿತರಾಗಿ ಭಕ್ತರ
ಸ್ತೋಮವು ಮುಕ್ತರಾಗಿ ವಾರಂವಾರ ೪
ಗಿರಿಯೊಳಮಲಂತರ್ಗಂಗೆ ಪಾಪಾಂತೆ
ವರ ಪಾಂಡುತೀರ್ಥ ಬಿಲ್ವಾಂಬು ಕಚ್ಛಪತೀರ್ಥ
ಸಿರಿವರಾಹ ಮಚ್ಛ ಸಲಿಲ ಪಾವನಲಕ್ಷ್ಮಿ
ಸರ ನಾರದೀಯ ಸರಸ್ವತೀಯ ತೋಯ
ಮೆರೆವ ತುಂಬುರ ಜಲ ಮೊದಲಾದ ಸ್ಥಳಗಳ
ಸರವ ಸನ್ನಿಧಪೂರ್ಣ ಸ್ವಾಮಿ ಪುಷ್ಕರಿಣಿಯ
ನೆರಕೊಂಡು ಪೂತಾಂಗರು ಹರಿಪಾದ
ಸರಸಿಜರತ ಭೃಂಗರು ಜ್ಞಾನೋನ್ಮತ್ತ
ಭರಿತಾಂಗ ಮತ್ತಾಂಗರು ವಾರಂವಾರ ೫
ನಳಿನಾಕ್ಷ ಪದವಾರಿ ನಿತ್ಯ ಸೇವಿಸಿ ಸಿರಿ
ತುಲಸಿ ತುದಿಯ ಪೊನ್ನತಳಗಿಯ ದಧ್ಯನ್ನ
ಬಲುರುಚಿ ಅನ್ನವಾಲು ಬಕುಳನ್ನ ಪೊಂಗಲು
ಸಲೆ ಮೃದು ಗಾರಿಗೆ ಸುಕಿನುಂಡೆ ಗುಳ್ಳರಿಗೆ
ಪುಳಿ ತಿಕ್ತ ಮಧುಮಿಶ್ರ ಪಲಸು ಪಾಲಿನ ದೋಸೆ
ಪಲವು ಪರಿಯ ಘೃತವು ಪಕ್ವ ಪಂಚಾಮೃತ
ಪಾಲ ತೈಂತೊಳೆ ಮನೋಹರ ಪ್ರಸಾದುಂಡು
ಕಳೆಯೇರುವರು ಮನೋಹರ ಅಲ್ಲಿಗಲ್ಲಿ
ನಲಿವ ದಾಸರ ಮೋಹರ ವಾರಂವಾರ ೬
ಪೂವಿನಂಗಿಯ ಚೆನ್ನ ಪುಳಕಾಪು ಮಜ್ಜನ
ನವ್ಯೋತ್ಸಾಹದಲ್ಲಿಹ ನರಮುನಿಸುರಸಹ
ಸೇವ್ಯಾನಂದನಿಲಯ ಸಾಮಗಾಯನ ಪ್ರಿಯ
ದಿವ್ಯ ರತ್ನಾಭರಣ ದೀಧಿತಿ ಸಂಕೀರ್ಣ
ಹವ್ಯಾಸದನುದಿನ ಹನುಮಗರುಡಯಾನ
ಸವ್ಯಾಪಸವ್ಯ ಭವಭೂಷಿತ ಸ್ಥಿತ
ಸೂರ್ಯಾರೂಢನ ಮೂರ್ತಿಯ ಭೂವೈಕುಂಠ
ಸುವ್ಯಕ್ತವಹ ವಾರ್ತಿಯ ಪ್ರಸನ್ವೆಂಕ
ಟವ್ಯಾಕೃತನ ಕೀರ್ತಿಯ ವಾರಂವಾರ೭

(ನು. ೩) ಕಳ್ಳಹನ್ನೊಂದರ ಕೂಡಿ
೧೭೪
ಬನ್ನಿಗಡ ಸುಜನರೆಲ್ಲ ಪಾವನಕಾಯ ಸುಜನಪ್ರಿಯ
ಪುಣ್ಯ ಸತ್ಯನಾಥಯತಿರನ್ನನ ಪಟ್ಟಣಕಿಂದು ಪ.
ಪರಬೊಮ್ಮನೆಂಬುವ ಮನೆದೈವನಾಗಿಹ
ಪರಸುಖವನೀವ ಮರುತದೇವನೆಂಬಾತ
ಪರಮಪದದ ಗುರುವು ಯುಕ್ತಿಯಿಂದ ಕಾ
ಪುರುಷರಗಲಿಸುವಂತೆ ಸತ್ಯನಾಥ
ಪುರಪತಿಗೆ ಬೋಧಿಸುವ ಪರಮವಾರ್ತೆಯ ಕೇಳ ೧
ನವಭಕುತಿರತುನದಿಂದ ನಿರ್ಮಿತ ಪ್ರಾಕಾರಕೆ
ನವದ್ವೇಷಿಗಳು ದಾಳಿಯಿತ್ತು ಅಂಡಲೆಯಲು ದಾ
ನವಾರಿಯ ನಾಮಾಯುಧವ ಸತ್ಯಾಭಿ
ನವ ತೀರ್ಥರೆಂಬೊ ಪುತ್ರಗೆ ನೀಡುತ ಮಾ
ನವ ಹರಿಯೆಂಬಸುರರ ಮಡುಹಿಸುವುದು ನೋಡ ೨
ಕಾಯಜ ಚೋರನೆಂಬವ ತಾ ಕಳ್ಳ ಹನ್ನೊಂದರ ಕೂಡಿ
ಕಾಯವೆಂಬ ರಾಜಗೃಹಕೆ ಕನ್ನವಿಕ್ಕುವುದ ಕಂಡು
ಕಾಯುವ ಜ್ಞಾನೆಂಬ ಭಟನು ಅಟ್ಟಲವನ
ಕೈದು ಚಾಪವ ಸೆಳೆದು ಮಿಕ್ಕು ಚೋರನೀ
ಕಾಯ ಕಟ್ಟಿಸುವಂಥ ಕರುಣಿಗೆ ನಮಿಸುವ ೩
ಹರಿದಾಸರೆನಿಸುವ ಹಲವು ದೊರೆಗಳುಂಟು
ಹರದಾರಿಕ್ಕೆಲದಿ ಪಣ್ಯವ ಮಾಡಿ ಸುಧೆüವೀರಿ
ಹರಿತತ್ವ ನಾಣ್ಯದೊಳು ರಾಮನಾಮದ
ಹಿರಿದುಮುದ್ರೆಯನೊರೆದು ಪರಂಪರ
ಹರುಷ ವ್ಯವಸಾಯವುಂಟು ಹಿರಿಯಾಮೃತವುಣ್ಣ ೪
ಅಭಿನವ ಚಂದ್ರಿಕೆದೋರಿ ಅಭಿಜ್ಞಾನತೆ ಮೆರೆದ
ಅಭೀತ ಮಂಗಳಗಾತ್ರ ಅಮಿತ ಬುಧರ ಮಿತ್ರ
ಅಭಿಜ್ಞಗುರು ಸತ್ಯನಿಧಿಯ ಸುತ ಸತ್ಯನಾಥ
ಅಭು ಪ್ರಸನ್ವೆಂಕಟೇಶನ ಭಜಕನ ಕವಿತ
ಅಬುಜ ಪರಿಮಳಮಂದಾನಿಲವಿಡಿವಳಿಯಂತೆ ೫

೩೨೬
ಬರಿಯ ಮಾತಲಿಲ್ಲ ಶ್ರೀ
ಹರಿಯ ಪ್ರೀತಿರಣ್ಣ ಮಧ್ವಾ
ಚಾರ್ಯರುಪದೇಶವೆ ಮುಕ್ತಿ
ಪುರದೊಳು ಖ್ಯಾತಿರಣ್ಣ ಪ.
ರಂಗನ ಪ್ರತಿಮೆಯನು ಬಿಡದೆ ಬಹಿ
ರಂಗದಿ ಪೂಜೆಯ ಮಾಡಿ
ಕಂಗಳು ತುಂಬಲು ಮೆಲ್ಲನೆ ಅಂತ
ರಂಗದಿ ಪೀಠದಿ ನೋಡಿ
ಹಿಂಗದೆ ಗುರುಶಿಕ್ಷಾಕ್ರಮದಲಿ ಧ್ಯಾ
ನಂಗತನಾಗ್ಯೊಲಿದಾಡಿ
ಲಂಘಿಸಿ ಜನ್ಮಾಯುಷಗಳ ತುದಿಯಲಿ
ಮಂಗಳ ಬಿಂಬವ ನೋಡದೆ ನೋಡಿ೧
ಒಮ್ಮಿಂದೊಮ್ಮೆ ಹೃದಯದದ್ದಕೆ
ಧರ್ಮವ ಜರಿದರೆ ಹೀನ
ನಿರ್ಮಳ ಶೌಚಾಚಮನವೆ ಗಳಿಸಿದ
ಸಮ್ಯಕ್ಜ್ಞಾನ ನಿಧಾನ
ತಮ್ಮವಗುಣ ರೋಗಕೆ ಔಷಧವು
ಕರ್ಮದ ಮೂಲವೆ ಸ್ನಾನ
ಹಮ್ಮಿಲಿ ಸನ್ಮಾರ್ಗಕೆ ಕುಂದಿಡದೆ
ಇಮ್ಮಡಿ ಸಾಧಿಸಿ ನವನವೀನ ೨
ಸದ್ವ್ವ್ರತ ದೀಕ್ಷೆಯು ಧ್ರುವಪದ ಮುಕ್ತಿಯು
ಸುದ್ವಾರವ ಬಿಡಬಹುದೆ
ಮಧ್ವೇಶನ ಮಹಿಮೆಯ ಕೇಳದೆ ರ
ಕ್ಷಾಧ್ವರ ಕಥೆ ಕೇಳಬಹುದೆ
ವಿಧ್ವಂಸಿಸುವ ಚೋರರು ಹೇಳ್ಯಾಡುವ
ಸದ್ವಚನದಿ ಸುಖವಾಹುದೆ
ಅದ್ವಯ ಪ್ರಸನ್ವೆಂಕಟೇಶನ ಪಾದಕಮ
ಲದ್ವಯ ಬಿಟ್ಟಗೆ ತಮಸಹುದಹುದೆ ೩


ಬಲ್ಲವರು ಮೊರೆ ಹೋಗುವರೆ ನೀನಾವ
ಬಲ್ಲಿದನೆಂದೆನ್ನನುಪೇಕ್ಷಿಪೆ ರಂಗ ಪ.
ಸಲ್ಲದವನು ಸಾಲಗೂಳಿ ನೀ ಎಂದೆನ್ನ
ಕ್ಷುಲ್ಲನ ಮಾಡಿ ನೀಕರಿಸದಿರೊ
ಒಳ್ಳೆ ಸತ್ಯವ್ರತರ ಋಣ ನುಂಗಿ ಸೆರೆಸಿಕ್ಕಿ
ಕಲ್ಹೊತ್ತು ಪುಲ್ಗಚ್ಚಿ ಹಲ್ದೆರೆದೆ ನೀನು ೧
ಬೇಡಿ ತಿರಿದು ಉಂಬ ಬಡವ ಛೀ ಸಾರೆಂದೀ
ಡಾಡುವುದುಚಿತೆ ನೀ ನೃಪನೊಂಚಿಸಿ
ಬೇಡಿ ಮನೆಯ ಕೊಂಡೆ ನೀರಿನರಸನಲ್ಲಿ
ರೂಢಿಯ ಗೂಡ ಬಿಟ್ಟೋಡಿದೆ ತುಡುಗ ೨
ನಾ ದೋಷಪೂರ್ಣನೆನುತ ಮನ ಬಲ್ಲದು
ನೀ ದೋಷದೂರನು ಶ್ರುತಿ ಬಲ್ಲವು
ಭೂದೋಷಹರ ಪ್ರಸನ್ವೆಂಕಟೇಶ ತಿಳಿಯದೆ
ನಾ ದಾಸನಾದೆ ನಾಮಸ್ವಾದಕ್ಹುಚ್ಚಾದೆ ೩

ಬಾರನ್ಯಾತಕೆ ವಾರಿಜಾನನೆ
೨೧
ಬಾರನ್ಯಾತಕೆ ವಾರಿಜಾನನೆ ಶ್ರೀ
ಮಾರಜನಕ ಸಕಲ ಸುಖಕೆ ಕಾರಣನು ಕರುಣಿಸಿ ತಾನೆ ಪ.
ಭುವನೇಶನಿನಿಯಳಣುಗ ತಾ ಪಿಡಿದು ಜರಿದ ಬಲಹಗೆ
ಹ್ಯಾವಿಲೆಳೆದವನೊಳು ಕಾದಿ ತಾವೊಲಿದ ದೊರೆಯ ನಮಿಸಿ
ಭಾವ ಕದಿದು ಇಷ್ಟವ ಪಡೆದನ ಜನನಿಸುತರ
ಜೀವಕೆಡರು ಬರಲಿ ಕಳಿದನೆ ರಂಧ್ರ ಪೊಳಲ
ದೇವ ಭಗಿನಿ ತುತಿಯ ಕೇಳ್ದನೆ ಇಂದುವದನೆ ೧
ಹರಿಪದಸ್ಥನೆರೆಯನಿಂದ ಹರುಷದೊರೆದ ಪುರುಷನುಗ್ರ
ಕರಿಯ ಮೈಯು ಬರಲಿ ಕಳೆದ ನರಟುನುಳ್ಳವನು ಭುವಿಲಿ
ಹರಗೊಲಿಸಿ ಎಬಡ ಗಡ ಹೆಣ್ಣಿನ ಒಡಲ ಪೊಡೆಯು
ಉರಿಯಲರಿದ ಸಿರಿಯವರದನೆ ಬಾಳರುಚಿಯು
ಳ್ಹರಿಯನಟ್ಟಿ ಜವದಿ ಕಾಯ್ದನೆ ಕುಂದರದನೆ ೨
ಭಾರಮಣನ ಅಗ್ರಜಳ ಕಿಶೋರಬಾಣಪ್ರಿಯಜನವ
ತಾರನರಮನೆಗೊಲಿದು ವಿಷದ್ವಿಜನ್ನ ಧ್ವಜ ಕರೆದರೆ
ಬಾರದೇನೆ ಮೂಗಮುರಿವನೆ ತನ್ನ ನಂಬಿ
ಸಾರಿದವರ ಮನದೊಳಿರುವನೆ ಪ್ರಸನ್ನವೆಂಕಟ
ಧೀರನೊಬ್ಬ ಜಗಕೆ ಚೆಲುವನೆ ಭಾಮಿನಿ ೩

೨೨
ಬಾರೆ ಸುಬುದ್ಧಿ ನಿನ್ನ ಕಾಣದೆ ಇರ
ಲಾರೆ ಕಾಣೆ ಸಖಿ ಜಾಣೆ ಪ್ರವೀಣೆ ಪ.
ಮಾರನ ಶರಗಣ ದಾರುಣ ನೀಗವ್ವ
ನಾರಿ ನಾರೀಮಣಿ ಕಾಳಾಹಿ ವೇಣಿ
ತೋರೆ ನಿನ್ನಧರದ ಸಾರ ಸುಧೆಯೆನಗೆ
ಚಾರು ಹಿತಾನಂದ ಕಾರಣ ನೀರೆ ೧
ಮಂದಗಮನೆ ಕೇಳೆ ಇಂದಿಗೆ ನಿನ್ನರ
ವಿಂದಶರನಿಟ್ಟಧ್ವರ್ಯ ಕುಚದ್ವಂದ್ವವ
ಹೊಂದಲು ಬಂದಿಹ ಅವನೊಳು
ಹಿಂದುಮುಂದಾಡಲಿ ಬೇಡೆ ನಿಂದು ಮಾತಾಡೆ ೨
ಪಂಕಜಗಂಧಿ ಮುದಾಂಕಿತಳೆ ನಿನ್ನ
ಸೋಂಕಲು ಪ್ರಸನ್ವೆಂಕಟೇಶ
ಭೋಂಕನೆ ಬಂದಿಹ ಚಿಂತಾಯಕ ಹೃದಯ ಪರಿ
ಯಂಕದಿ ಸುಖಿಸೇಳೇಣಾಂಕ ಮುಖಿ ೩

೨೫೯
ಬಾರೊ ಭಾವಜನಯ್ಯ ಭಾನು ಸಾಸಿರ ಮೈಯ
ದೂರ ಮಾಡದಲೆನ್ನ ದುರಿತವಿದಾರಿ ಪ.
ಕಡೆ ಮೊದಲಿಲ್ಲದ ಕೆಡಕು ಯೋನಿಗೆ ಬಿದ್ದು
ಕಡಲಶಾಯಿ ನೀಯೆಂದು ಒಡಲ್ಹೊಕ್ಕೆನಿಂದು ೧
ಕ್ಷಣಲವ ಮಾಳ್ಪಘಕೆಣಿಕೆ ಇಲ್ಲೆಲೆ ದೇವ
ಘನ ಕೃಪೆಯಲಿ ನನ್ನ ಮನಮನೆಗಾಗಿ ೨
ಮುನ್ನೆ ನಿನ್ನಯ ಮೊರೆಯ ಅನುಕರಿಸಿದವರ
ಮನ್ನಿಸಿ ಪೊರೆದ ಪ್ರಸನ್ನವೆಂಕಟ ದಾತ ೩

೬೯
ಬಾರೋ ಮಗನೆ ಬಳಲಿದೆಯಾಡಿ
ಬಾರೊ ಮಗನೆ ಪ.
ಎಲ್ಲಿಗೆ ಹೋಗಿದ್ಯೊ ಎನ್ನೆದೆ
ಝಲ್ಲು ಝಲ್ಲು ಎನುತಲಿದೆ
ಮೆಲ್ಲೆದೆಗಾರ್ತಿ ಗೊಲ್ಲತೀರು ನಿನ್ನ
ಗಲ್ಲ ಕಚ್ಚಿಹರಲ್ಲೊ ಹಸುಳೆ ೧
ಬಾಡಿತೊ ವದನ ಇಂದಾರೊಳು
ಮಾಡಿದ್ಯೊ ಕದನ
ಕಾಡುವ ಬಾಲ ಪ್ರೌಢಿಯರ ತೋರಿಸು
ನಾಡ ಬಿಟ್ಟವರನೋಡಿಸುವೆ ನಡೆ ೨
ಕೂಸಿನಾಟವಲ್ಲೊ ಜಟ್ಟಿಗನ
ವಿೂಸಲಂಜಿಕಿಲ್ಲೊ
ಹೇಸದೆ ಬೆಣ್ಣೆಯ ಸವಿದು ನಿ
ರ್ದೋಷ ಕೃಷ್ಣ ನೀ ಘಾಸಿಯಾದೆ ೩
ಕೋಮಲಾಂಗವಿದು ಕಲ್ಲೆದೆ
ಕಾಮಿನಿಯರೊಯಿದು
ಕಾಮುಕಿಯರತಿ ಪ್ರೇಮದಲಪ್ಪಪ್ಪಿ
ದಾಮ ಸಡಿಲ್ಯದೆ ಶ್ರೀಮುರಾರಿ ೪
ಮುದ್ದಿನಾಮೃತೆ ಬಾ ಪೊಂದೊಟ್ಟಿಲೊ
ಳ್ನಿದ್ರೆಗೈಯಲಿಲ್ಲ ಎದೆ
ಗದ್ದಿಗೆಲಿದ್ದು ನಲಿದಾಡೊ ಪೂರ್ಣ
ಶುದ್ಧ ಪ್ರಸನ್ವೆಂಕಟ ಶ್ರೀಕೃಷ್ಣ ೫

ಗಂಧರ್ವ
೭೨
ಸುಳಾದಿ
ಧ್ರುವತಾಳ
ಬಾಲ ಸೂರ್ಯನಿಭಮಣ್ಯಾಂಕ ಮೌಳಿ
ಹೀಲಿಯ ಪಿಂಛ ಪ್ರವಾಳ ಗುಚ್ಛ
ಮ್ಯಾಲಲರದಂಡೆ ಝೇಂಕರಿಪಾಳಿ
ಬಾಲರಯ್ಯನ ಮೊಗದ ಶೋಭೆ
ಭ್ರೂಲತೆ ವಿಲಾಸ ನೋಟದಿ ಮಕರ ಕುಂಡಲ ವಿ
ಶಾಲೇರಿ ಸಿರಿವತ್ಸ ಕೌಸ್ತುಭ
ನೀಲಮಾಣಿಕ ವಜ್ರವಲಯ ವೈಜಂತಿ ವನ
ಮಾಲೆ ತುಲಸಿ ಗಂಧ ಮೌಕ್ತಿಕ ಸರಗಳ
ನೀಲನದ ರತುನ ದಾಮ ಪೊನ್ನ
ಚೇಲ ನೂಪುರ ಕಿರುಗೆಜ್ಜೆಯ ಗೋ
ಪಾಲ ಪರಸನ್ನವೆಂಕಟ ಕೃಷ್ಣ ಶಾಮಲಕಾಯ ೧
ಮಠ್ಯತಾಳ
ನಂದವ್ರಜದ ಗೋವರ ವೃಂದಾಂಬುಧಿಗೆ ಪೂ
ರ್ಣೇಂದು ನಂದಸೂನು ಲಾಸ್ಯವಾಡೆ
ಒಂದೊಂದು ಲಯದ ಗತಿ ಹೊಂದ್ಯಮರ
ದುಂದುಭಿಗಳ್ದಂ ಧಳಧಂ ಧಂದಳೆನ್ನೆ
ಗಂಧರ್ವ ತುಂಬುರರು ನಾರಂದ ಮಹತೀಗೀತ ಪ್ರ
ಬಂಧ ಹೇಳೆ ನಂದರಸದಿಂದಾಡುತಿರೆ ಗೋ
ವಿಂದ ದಂದಂ ದಂದಂ ಧಿಮಿಕೆನ್ನ
ಲಂದದಿ ಮದ್ದಳೆ ತಾಳ
ಬಂದಿಮೊಗ (?) ತುತ್ತುರಿ ಕಹಳೆ ಕಂಬುವೇಣುಗೂಡಿ
ಅಂದಾಡಿದ ಪ್ರಸನ್ವೆಂಕಟ ಕೃಷ್ಣ ನಲವಿಂದ ೨
ತ್ರಿವಿಡಿ ತಾಳ
ಶ್ರೀಕಮಲ ಭಭೂರ್ವ ಪಿನಾಕಿ ವಿಪಾಹಿಪ
ನಾಕಜಾದ್ಯರ ಚೇಷ್ಟಕ
ಶ್ರೀಕರ ಪ್ರಸನ್ನವೆಂಕಟ ಕೃಷ್ಣ
ಆಕಳಕಾವರ ವಶಗ ಹಾಹಾ ೩
ಅಟ್ಟತಾಳ
ಅನಂತ ನಿಗಮ ನಿಕರಕೆ ನಿಲುಕದ
ಅನಂತಾನಂತ ಗುಣಪರಿಪೂರ್ಣಗೆ
ಧೀನುಕಾವರ ಪಳ್ಳಿ ಗೋಟಲೆ
ತೀಯಂ ತೀಯಂ ವೈಯ್ಯ ಅಯ್ಯಾ
ಧೇನುಕಾವರ ಪಳ್ಳಿ ಗೋಟಲೆ
ಜ್ಞಾನಿಜನಕೆ ಮೋದ ಹಾನಿ ಖಳರ್ಗೀವ
ಜ್ಞಾನಾನಂದ ಬಾಲ ಪ್ರಸನ್ನವೆಂಕಟ ಕೃಷ್ಣಗೆ ೪
ಏಕತಾಳ
ವೈಕುಂಠ ವಾರಿಜಾಕ್ಷ ಲೋಕರಕ್ಷ
ತೋಕವೇಷಧರ ಮುರಹರ ಶ್ರೀಧರ
ಶ್ರೀಕರ ಗುಣನಿಧೆ ಪುರಾಣಪುರುಷ ಹರೇ ಹರೇ
ಗೋಕುಲಪತೆ ಗೋವರ್ಧನಧರ
ಪಾಕಹ ಮದನಿಕಾರಕರ ಪ್ರಸ
ನ್ವೆಂಕಟ ಕೃಷ್ಣನೆಲೊ ಭಕ್ತವತ್ಸಲ ೫
ಜತೆ
ಶುಭಕೀರ್ತನೆ ಜಿಹ್ವೆಗೆ ಶುಭಕಥೆ ಕಿವಿಗಳಿಗೆ
ಶುಭಮೂರ್ತಿ ಕಣ್ಗೀಯಯ್ಯ ಪ್ರಸನ್ವೆಂಕಟಕೃಷ್ಣಯ್ಯ

ಶೂಲಿಯ ಮುತ್ತಿದ
೭೦
ಬಾಲನ ನೋಡಿರೆ ನಿವಾಳಿಸಿ ಆಡಿರೆ
ಕಾಲ ಅಂದುಗೆ ಕೈ ಕುಣಿಸದೆ ಸವಿ
ಮಾತಾಲಿಪನ ನಮ್ಮಪ್ಪನ ಪ.
ಬಾಲಕರನ್ನನ ಉಂಗುರುಗುರುಳಿನ ಸುಳಿಯೊ
ಭೃಂಗಾವಳಿಯೊ ಶ್ರೀ
ಲೋಲನ ವಿಸ್ತರ ಬಾಳವು ಕಳೆಗೇಡಿಯೊ
ಪೊಂಗನ್ನಡಿಯೊ
ಪಾಲ್ಗಡಲ ಪ್ರಭುವಿನೀ ಬಟ್ಟಗಲ್ಲಗಳೊ
ಮರಿಯಾವಿಗಳೊ
ಶೂಲಿಯ ಮುತ್ತಿದ ತಿದ್ದಿದ ಹುಬ್ಬಿನ ಹೊಳವೊ
ನಿಂಬ ಸುದಳವೊ೧
ಯದುಕುಲ ತಿಲಕನ ಢಾಳಿಪ ಕಂಗಳ ಠಾವೊ
ತಾವರೆ ಹೂವೊ
ಮದನನಯ್ಯನ ಮೀಟಿದ ಮೂಗಿನ ಕೊನೆಯೊ
ಸಂಪಿಗೆ ನನೆಯೊ
ಸದಮಲ ಲೀಲನ ಸೊಬಗಿನ ನಾಸಾಪುಟವೊ
ಮುತ್ತಿನ ಬಟುವೊ
ವಿಧುವಂಶೇಂದ್ರನ ವೃತ್ತ ಮನೋಹರ ವದನೊ
ಮೋಹದ ಸದನೊ ೨
ಸುರರುಪಕಾರಿಯ ಎಳೆದುಟಿಯ ಕೆಂಬೊಳವೊ
ಬಿಂಬದ ಫಲವೊ
ಗರುಡಾರೂಢನ ಮೊಳೆವಲ್ಲುಗಳ ಬಿಳುಪೊ
ಕುಂದ ಕುಟ್ಮಳವೊ
ಕರುಣಾಂಬುಧಿಯ ಕಿವಿ ಶುಕ್ತಿಯೊ ಗದ್ದೊ
ಮುದ್ದಿನ ಮುದ್ದೊ
ಶರಣರ ಪ್ರಿಯನ ತ್ರಿರೇಖೆಯ ಕಂದರವೊ ಸುಂದರದರವೊ೩
ದೇವಕಿತನಯನ ಪುಷ್ಟ ಯುಗಳ ದೋರ್ದಂಡೊ
ಕಲಭದ ಶುಂಡೊ
ದೇವವರೇಣ್ಯನ ಕರತಳದಂಗುಲಿ ಸರಳೊ
ಕೆಮ್ಮಾಂದಳಿಲೊ
ಭಾವಿಕ ಜನಜೀವನ ಪೀನೋನ್ನತ ಉರವೊ
ವಜ್ರದ ಭರವೊ
ಸೇವಕಪಕ್ಷನ ಉದರದ ವಲ್ಲಿ ತ್ರಿವಳಿಯೊ ಅಮರರ
ಹೊಳಿಯೊ ೪
ಅಜನಯ್ಯನ ಅಚ್ಯುತನ ನಾಭಿಯ ಸುಳಿಯೊ
ಅಮೃತದೊಕ್ಕುಳಿಯೊ
ತ್ರಿಜಗದ ಗರ್ಭ ವಿನೋದಿಗಳರಸನ ಮಣಿಯೊ
ಪಚ್ಚದ ಮಣಿಯೊ
ಸುಜನರ ಮಾನಿಯ ಬಟ್ಟದೊಡೆಯ ಸಂರಂಭೋ
ಎಳೆವಾಳೆಯ ಕಂಭೋ
ಗಜವರದನ ಗೋವಿಂದನ ಜಾನುಗಳ ಪೊಗರ್ವೊ
ಹರಿಮಣಿಯ ಪೊಗರ್ವೊ ೫
ತ್ರಿಗುಣಾತೀತನಂತನ ಜಂಘಗಳಿಳಿಕ್ಯೊ ಶರಬತ್ತಳಿಕ್ಯೊ
ನಿಗಮಾಗಮ್ಯನ ಚರಣಯುಗಂಗಳ ನಿಜವೊ
ಅರುಣಾಂಬುಜವೊ
ಮೃಗನರರೂಪನ ಅನುಪಮ ನಖಗಣ ಮಣಿಯೊ
ಬಾಲಖಮಣಿಯೊ
ಸುಗಮನ ಪದತಳದಂಕುಶ ಧ್ವಜಾಂಬುರೇಖೆ್ಯೂೀ
ವಿದ್ಯುರ್ಲೇಖೆ್ಯೂ ೬
ಆಭರಣಗಳಿಗೆ ಆಭರಣವೆ ಎಳೆಗರುವೆ ಕಲ್ಪತರುವೆ
ಸೌಭಾಗ್ಯದ ಶುಭಖಣಿಯೆ ನಂದಾಗ್ರಣಿಯೆ ಚಿಂತಾಮಣಿಯೆ ನಿ
ನ್ನ ಬಿಗಿದಪ್ಪುವ ಭಾಗ್ಯವಿನ್ನೆಂತೊ ಉಮ್ಮು ಕೊಡು ನಮ್ಮಮ್ಮ
ಶ್ರೀಭೃತ ಪ್ರಸನ್ವೆಂಕಟ ಕೃಷ್ಣ ತಮ್ಮ ಬಾ ಪರಬೊಮ್ಮ ೭

೭೧
ಬಾಲನ ಮೇಲೆ ನಿನ್ನ ಮೋಹವಮ್ಮ ನಾವು
ಹೇಳಿದ ಮಾತು ನೀ ಕೇಳೆಯಮ್ಮ ಪ.
ಚಿಣ್ಣ ಗಿಣ್ಣನೆಂಬುವ ಬಣ್ಣ ಬ್ಯಾಡೆ ನಮ್ಮ
ಬೆಣ್ಣೆ ಕದ್ದು ಮೆದ್ದ ಕಟವಾಯಿ ನೋಡೆ
ಸಣ್ಣಗಿಣ್ಣವನಿವನಾದರೆ ಪರರ ಚೆಲುವ
ಹೆಣ್ಣಿನೊಳಗಾಡುವನೆ ಕುವರ ೧
ಪುಟ್ಟಗಿಟ್ಟನೆಂಬುವ ಮಾತು ಬೇಡೆ ನಮ್ಮ
ರಟ್ಟು ಮಾಡುವ ಜನರೊಳು ನೋಡೆ
ಸಿಟ್ಟುಗಿಟ್ಟಿಗೆ ಕೃಷ್ಣ ಅಳುಕನಮ್ಮ ನಮ್ಮ
ಬಟ್ಟ ಕುಚವಿಡಿವ ದಿಟ್ಟನಮ್ಮ ೨
ಚಿಕ್ಕಗಿಕ್ಕವನೆಂಬುದು ರೂಢಿ ಕಾಣೆ ನಮ್ಮ
ಪಕ್ಕವ ಬಿಡನು ಬಾಲಕಾರ್ಯವೇನೆ
ಅಕ್ಕೊ ಇಕ್ಕೊ ಎಂಬುವನ್ನಕ್ಕ ಕಳ್ಳ ನಮ್ಮ
ಠಕ್ಕಿಸೆದ್ದೋಡುವ ಸಿಕ್ಕುವನಲ್ಲ ೩
ಕಕ್ಕುಲಾತಿ ತೋರೆ ನಮ್ಮ ಮನೆಗಳ ಪೊಕ್ಕು ಸಣ್ಣ
ಮಕ್ಕಳಾಟವಾಡದೆಮ್ಮ ನೋಡಿ ನಕ್ಕು
ತಕ್ಕೈಸಿ ಓಡುವ ಮಹಾಮಾಯಗಾರನಮ್ಮ
ದಕ್ಕಲೀಸ ಪತಿವ್ರತಧರ್ಮ ಜಾರ ಕೃಷ್ಣ ೪
ಕೂಸುಗೀಸು ಇನ್ನೆನ್ನಬಾರದವಗೆ ಭವ
ಘಾಸಿಯ ತಪ್ಪಿಸುವ ಎಂದಿಗೆಮಗೆ
ಬೇಸರ ಗೀಸರದೆ ನೆನೆವರ ಒಡೆಯ
ಲಕ್ಷ್ಮೀಶ ಪ್ರಸನ್ವೆಂಕಟ ರಂಗಯ್ಯ ೫

೨೬೦
ಬಿಡಲಾರೆ ಬಿಡಲಾರೆ ನಿನ್ನಡಿದಾವರೆಯ ನೀ
ಕೊಡು ಕಂಡ್ಯ ಅಭಯವಿಡಿದೆಮ್ಮ್ಮಯ ತಂದೆ ಪ.
ಕೂಗುವೆ ಕೂಗುವೆ ಕೃಪಾಸಾಗರನೆಂದ್ಹೇಳಿ ತಾ
ಕೂಗಿದರೊದಗಿ ಕಾಯಿದೆ ನಾಗನ್ನ ಕೇಳಿ ತಂದೆ ೧
ಬಡವ ನಾ ಬಡವನು ಕಾಣೊ ಬಾಡದೊನಮಾಲಿ ಕಡು
ಬಡವ ಸುದಾಮನ ಕೈಯವಿಡಿದ್ಯೆಂದು ಕೇಳಿ ತಂದೆ ೨
ಡೊಂಕು ನಡೆದೆ ಡೊಂಕು ನುಡಿದೆ ಶಂಕಿಲ್ಲದಲೆ ಮೂ
ಡೊಂಕಿಯ ತಿದ್ದಿದ ಬಿರುದಾಂಕನ ಕೇಳಿ ತಂದೆ ೩
ಬಲ್ಲೆನೊ ಬಲ್ಲೆನೊ ನೀನಿದ್ದಲ್ಲಿ ವ್ರಜದಲ್ಲಿ ಗೋ
ಗೊಲ್ಲರು ಪುಲ್ಗಲ್ಲಿಗೆ ಕೈವಲ್ಯವು ಕೇಳಿ ತಂದೆ ೪
ಅವರೇವೆ ನಿನ್ನವರು ನಾನೇನವರ ಶಿಶುವಲ್ಲೆ ತ
ನ್ನವರ ಹೊರೆವ ಪ್ರಸನ್ವೆಂಕಟ ತವರೂರ ಕೇಳಿ ತಂದೆ೫

೨೬೧
ಬಿಡು ನಾಚಿಕೆಯನು ಉಗ್ಗಡಿಸು ಚಕ್ರಿಯನು
ಹಿಡಿಯೈ ವೈಕುಂಠ ಚಾವಡಿಯವನಡಿಯ ಪ.
ಎಳೆತನ ಯೌವನ ಮುಪ್ಪೆಂದಲಸಿಸಿ ಹೆ
ಬ್ಬುಲಿಯಂಥ ಮೃತ್ಯುಗಂಟಲ ಬಲೆಗೆ
ಸಿಲುಕಿ ಸಿಲುಕಿ ಸಂದುಗಡಿಯದ ಲೇಖವ
ನಳಿಯೆ ರಾಮನ ಪೊಗಳೆಲೆಲೆ ಜೀವವೆ ೧
ಅಹಂಕಾರ ವಾರಿಧಿಯಲ್ಲೀಸಾಡಿ ಬರೆ
ಬಹಿರ ಸದ್ಗುಣದಿ ನಿರಯಕೆ ಸಾಗದೆ
ಅಹರ್ನಿಶಾಂಬುಜನಾಭನೊಲಿವಂತೆ ಭಕುತಿಯ
ಸಹಸ ಸಾಧಿಸು ಡಂಭವ್ಯಾಕೆನ್ನ ಮನವೆ ೨
ಯೋಚನೆಗೊದಗದ ಅನಂತ ಮಹಿಮನೆಂದು
ವಾಚಿಸ್ಯವನ ಕರ್ಮಗುಣ ನಾಮವ
ಲೋಚನ ದಣಿಯೆ ಪ್ರತಿಮೆಯ ನೋಡಿ ಪ್ರಸನ್ವೆಂಕ
ಟಾಚಲಪತಿ ಮುಂದೆ ಕುಣಿದಾಡು ಗಡ೩

೩೨೭
ಬಿಡು ಮೂಢತನವ ಚಿತ್ತಷಂಡ ನಮ್ಮ
ಕ್ರೀಡಾದ್ರಿಪನ ನೋಡು ಕಂಡ ಪ.
ಬೇಡಿದೀಪ್ಸಿತವೀವ ಗೂಢ ಸುರಮಣಿಯು
ಗೂಡಿನೊಳಿರೆ ಅರೆಗೋಡಿಯಾಡದೆ ಬಿಡು ೧
ಅರಸನೊಲಿದು ತಳವರನ ಓಲೈಸುವ
ಪರಿಯಲಿ ಚಿರಧನಿಪರ ಆರಾಧನೆ ಬಿಡು ೨
ಗುರುದ್ವಿಜ ವೈಶ್ವಾನರ ಸಾಕ್ಷ್ಯದಿ ಗ್ರಹಿತ
ತರುಣಿ ಇರೆ ಪರನಾರಿಯರ ಪಂಬಲವ ಬಿಡು ೩
ಸಿರಿವರದನವರ ಬಿರುದು ಹೊಗಳುತಲ
ವರ ನಿತ್ಯ ಬೆರೆಯೋಣ ತರಕದಾರಿಯ ಬಿಡು ೪
ದೊರೆಗಳ ದೊರೆ ನನ್ನರಸ ಪ್ರಸನ್ನವೆಂಕಟರಮಣ
ನಿರೆ ಅನ್ಯಾಸುರ ಭೂತಾರ್ಚನೆ ಬಿಡು ೫

(ನು. ೧) ಶುಕ: ವೇದವ್ಯಾಸರ ಮಗ
೨೬೨
ಬಿಡೆ ನಿನ್ನ ಚರಣವ ಉಡುಪಿ ಕೃಷ್ಣನೆ ಭವ
ಕಡಲ ದಾಟಿಸು ಕೈಯವಿಡಿದು ಪಾಲಿಸು ತಂದೆ ಪ.
ಧ್ರುವ ಶುಕ ಪ್ರಹ್ಲಾದ ಬಲಿ ಅಜಾಮಿಳನು
ದ್ಧವ ಅಂಬರೀಷ ವಿದುರ ಮುಖ್ಯರು
ತವ ಪಾದವಿಡಿಯಲವರಿಗಿಂಬು ನೀಡ್ದ
ಹವಣವ ಬಲ್ಲೆ ನಾನೇನ ಮಾಡಿದರೇನ ೧
ಪಾಂಚಾಲಿ ಮಾನವ ಕಾಯ್ದೆ ಪೆರರಿಗಂದು
ಅಚ್ಯುತ ನಿನ್ನಂಗುಟವು ಸೋಂಕಲು
ನಿಚ್ಚಳ ಸತಿಯಾದಳೆಂಬ ಸಾಹಸ ಕೇಳಿ
ಮುಚ್ಚು ಮರೆಯ ಮಾಡಿದರೆ ನಿಮ್ಮ ಮರೆಯೆನು ೨
ನಿನ್ನ ಪಾದಾಂಬುಜ ಧ್ಯಾನ ಮರೆಯದಂತೆ
ಎನ್ನ ಮನದ ವಕ್ರಗತಿಯ ತಿರ್ದು
ಮನ್ನಿಸು ತಂದೆ ಪ್ರಸನ್ನವೆಂಕಟ ಕೃಷ್ಣ
ಪೂರ್ಣಪ್ರಜ್ಞಾರ್ಚಿತ ಚರಣಕಮಲನೆ ೩

೨೬೩
ಬಿಡೆನೊ ನಿನ್ನಂಘ್ರಿ ಶ್ರೀನಿವಾಸ ನನ್ನ
ದುಡಿಸಿಕೊಳ್ಳೆಲೊ ಶ್ರೀನಿವಾಸ ನಿ
ನ್ನುಡಿಯ ಜೀತಲ್ಲೊ ಶ್ರೀನಿವಾಸ ನನ್ನ
ನಡೆ ತಪ್ಪು ಕಾಯೊ ಶ್ರೀನಿವಾಸ ಪ.
ಬಡಿಯೊ ಬೆನ್ನಲಿ ಶ್ರೀನಿವಾಸ ನ
ನ್ನೊಡಲ ಹೊಯ್ಯದಿರೊ ಶ್ರೀನಿವಾಸ ನಾ
ಬಡವ ಕಾಣೆಲೊ ಶ್ರೀನಿವಾಸ ನಿ
ನ್ನೊಡಲ ಹೊಕ್ಕೆನೊ ಶ್ರೀನಿವಾಸ ೧
ಪಂಜುವಿಡಿವೆನೊ ಶ್ರೀನಿವಾಸ ನಿ
ನ್ನೆಂಜಲ ಬಳಿದುಂಬೆ ಶ್ರೀನಿವಾಸ ನಾ
ಸಂಜೆ ಉದಯಕೆ ಶ್ರೀನಿವಾಸ ಕಾ
ಳಂಜಿಯ ಪಿಡಿವೆನೊ ಶ್ರೀನಿವಾಸ ೨
ಸತ್ತಿಗೆ ಚಾಮರ ಶ್ರೀನಿವಾಸ ನಾ
ನೆತ್ತಿ ಕುಣಿವೆನೊ ಶ್ರೀನಿವಾಸ ನಿನ್ನ
ರತ್ತುನ ಹಾವಿಗೆ ಶ್ರೀನಿವಾಸ ನಾ
ಹೊತ್ತು ನಲಿವೆನೊ ಶ್ರೀನಿವಾಸ ೩
ಹೇಳಿದಂತಾಲಿಹೆ ಶ್ರೀನಿವಾಸ ನಿ
ನ್ನಾಳಿಗಾಳಾಗಿಹೆ ಶ್ರೀನಿವಾಸ ಅವ
ರೂಳಿಗವ ಮಾಳ್ಪೆ ಶ್ರೀನಿವಾಸ ನನ್ನ
ಪಾಲಿಸೊ ಬಿಡದೆ ಶ್ರೀನಿವಾಸ ೪
ನಿನ್ನ ನಾಮ ಹೋಳಿಗೆ ಶ್ರೀನಿವಾಸ ಕಳ್ಳ
ಕುನ್ನಿ ನಾನಾಗಿಹೆ ಶ್ರೀನಿವಾಸ ಕಟ್ಟಿ
ನಿನ್ನವರೊದ್ದರೆ ಶ್ರೀನಿವಾಸ ನನ
ಗಿನ್ನು ಲಜ್ಜ್ಯಾತಕೆ ಶ್ರೀನಿವಾಸ ೫
ಬೀಸಿ ಕೊಲ್ಲಲವರೆ ಶ್ರೀನಿವಾಸ ಮುದ್ರೆ
ಕಾಸಿ ಚುಚ್ಚಲವರೆ ಶ್ರೀನಿವಾಸ ಮಿಕ್ಕ
ಘಾಸಿಗಂಜೆನಯ್ಯ ಶ್ರೀನಿವಾಸ ಎಂಜ
ಲಾಸೆಯ ಬಂಟ ನಾ ಶ್ರೀನಿವಾಸ ೬
ಹೇಸಿ ನಾನಾದರೆ ಶ್ರೀನಿವಾಸ ಹರಿ
ದಾಸರೊಳು ಪೊಕ್ಕೆ ಶ್ರೀನಿವಾಸ ಅವರ
ಭಾಸೆಯ ಕೇಳಿಹೆ ಶ್ರೀನಿವಾಸ ಆ
ವಾಶೆಯ ಸೈರಿಸೊ ಶ್ರೀನಿವಾಸ ೭
ತಿಂಗಳವನಲ್ಲ ಶ್ರೀನಿವಾಸ ವತ್ಸ
ರಂಗಳವನಲ್ಲೊ ಶ್ರೀನಿವಾಸ ರಾ
ಜಂಗಳ ಸವಡಿಪೆ ಶ್ರೀನಿವಾಸ ಭ
ವಂಗಳ ದಾಟುವೆ ಶ್ರೀನಿವಾಸ ೮
ನಿನ್ನವ ನಿನ್ನವ ಶ್ರೀನಿವಾಸ ನಾ
ನನ್ಯವನರಿಯೆನೊ ಶ್ರೀನಿವಾಸ ಅಯ್ಯಾ
ಮನ್ನಿಸೊ ತಾಯ್ತಂದೆ ಶ್ರೀನಿವಾಸ ಪ್ರ
ಸನ್ನ ವೆಂಕಟಾದ್ರಿ ಶ್ರೀನಿವಾಸ೯

೧೫೮
ಬಿಲ್ವೊದೇಶ್ವರ ಶ್ರೀ ಮದುಮಾ
ವಲ್ಲಭ ಸಂತತ ಪಾಲಯಮಾಂ ಪ.
ನಾಕಪವಂದ್ಯ ಕೃಪಾಕರ ಪಾಪ
ನೇಕ ನಿವಾರಕ ಮೂಕಹರ
ಲೋಕೇಶೇಶ ನಿಶಾಕರ ಶೇಖರ
ಶ್ರೀಕರಕಾಯ ಪಿನಾಕಧರ ೧
ಭುಜಗಾಭರಣ ಗಜಮದಹರಣ
ಗಜ ಚರ್ಮಾಂಬರ ಸುಜನವರ
ದ್ವಿಜರವಿ ವೃಷಧ್ವಜಾಸಮಲೋಚನ
ರಜನೀಚರ ತ್ರಿಪುರಜಮಥನ ೨
ದುರ್ಧರ್ಷಾಂಧಕ ಮದರ್ಕ ಶಂಭೊ
ನಿರ್ದೋಷ ಶ್ವೇತಾದ್ರಿ ಪ್ರಭೊ
ಸ್ವರ್ಧುನಿ ಸಹಿತ ಕಪರ್ದಿನ್ ಶಿವಶಿವ
ಊಧ್ರ್ವ ಪಟಾರ್ಚಕ ವದನ ಭೋ ೩
ಗರಕಂಧರ ವೃಷಚರ ಅದ್ಭುತ ನಿ
ಕರ ಪರಿಚರ ಪಾಂಡುರಗಾತ್ರ
ಶಿರಮಾಲಾನ್ವಿತ ಸ್ಫುರತ್ಕಪಾಲಿನ್ಹರ
ಹರ ಭವ ಸುಖಕರ ಮೂರ್ತೆ ೪
ಶಂಕರ ಸುಗುಣಾಲಂಕೃತ ಭಕ್ತಾ
ತಂಕವಿದೂರಕ ಶಂಖ ರಥಾಂ
ಗಾಂಕಿತ ಪ್ರಸನ್ವೆಂಕಟ ನಾಯಕ
ಕಿಂಕರ ಜನಪ್ರಿಯ ತ್ವಂ ಕೃಪಯಾ ೫

೨೩
ಬುದ್ಧಿ ಧೃತಿಯೆಂಬ ನಾರೇರು ಶ್ರೀ
ಮುದ್ದು ಕೃಷ್ಣನ ಒಲಿಸಿಕೊಂಡರು ಪ.
ಅಕ್ಕ ಬುದ್ಧಿವಂತೆ ತಂಗಿಗೆ ಬಲು
ನಿಕ್ಕರದಲಿ ಹಿತವಾಡಿದಳು
ಚಿಕ್ಕವಳೆಂದಂಜದೆ ಧೃತಿಯು ತ
ಮ್ಮಕ್ಕನೊಳು ಬಡಿದಾಡಿದಳು ೧
ಕಟ್ಟಲೆ ಮೀರಿ ಮಾತಾಡದಿರೆ ತಂಗಿ
ಸಿಟ್ಟು ಬರುತಿದೆ ಕಾಡದಿರೆ
ಕಟ್ಟಲೆ ಮೀರಿ ಮೊದಲೆ ನವೆದೆ ನಿನ್ನ
ಕಟ್ಟಿನೊಳಗೆ ಸಿಕ್ಕಿ ಬಲು ದಣಿದೆ ೨
ಒಗತನ ದಾರದೆ ಸಣ್ಣವಳೆ ನೀ
ಜಗಳಕ್ಕೆ ನಿಂತೆ ದೊಡ್ಡೆದೆಯವಳೆ
ನಗೆಗೇಡು ಮಾಡಿಕೊಂಡೆಲೆಯಕ್ಕ ನಿನ
ಗೊಗತನ ನನ್ನಿಂದ ತಗಲಕ್ಕ ೩
ಹರಿ ನಿನಗೆ ದಕ್ಕಿದನೆಂದು ಉಣ್ಣ
ದುರಿಯಬೇಡೆಲೆ ತಂಗಿ ಹೋಗಿಂದು
ಅರಸ ದಕ್ಕುವನೆ ಇನ್ನಾರಿಗೆ ಅಕ್ಕ
ಕಿರುಕುಳು ಮಾತ್ಯಾಕೆ ಹಿರಿಯಳಿಗೆ ೪
ನನ್ನ ಹಿರಿಯತನ ಕೆಣಕಿದ್ಯಲ್ಲೆ
ನನ್ನ ಕಣ್ಣ ಮುಂದೆ ನಿನ್ನೆ ಬಂದವಳೆ
ಹುಣ್ಣಿಮೆ ಚಂದ್ರ ದಿನಕೆ ಹಿರಿಯ ಜಗ
ಮನ್ನಣೆಗೆ ಬಾಲಚಂದ್ರನಲ್ಲೆ ೫
ಪಟ್ಟ ನನ್ನದು ಮೊನ್ನೆ ಬಂದವಳೆ ನಿನ್ನ
ದಿಟ್ಟತನವನೇನ ಹೇಳಲೆ
ಕೃಷ್ಣ ನಿನಗೆ ದೂರನಲ್ಲೆ ಅಕ್ಕ ಹರಿಯ
ಗುಟ್ಟಿನ ಮೋಹವೆ ನನಗೆ ಅಕ್ಕ ೬
ತಂಗಿ ಮನವ ನೋಯಿಸ್ಯಾಡದಿರೆ ಶ್ರೀ
ರಂಗನೆನಗೆರವು ಮಾಡದಿರೆ
ಮಂಗಳ ಮಹಿಮ ಮುರಾರಿಯ ಅ
ರ್ಧಾಂಗಿಯೆ ನಾ ನಿನಗೆ ಸರಿಯೆ ೭
ಹಿರಿಯ ಕಿರಿಯಳಲ್ಲ ಸರಿ ಹೇಳೆ ಹರಿ
ಗೆರವಿನ ಮಾತಿಲ್ಲ ಖರೆ ಕೇಳೆ
ಪರಮ ಪುರುಷ ವಾಸುದೇವನೆ ಕೊಟ್ಟ
ವರಕೆಂದು ತಪ್ಪದೆ ಕಾವನೆ ೮
ಕನ್ಯೆ ಲಕ್ಷುಮಿಯ ರಮಣನೆ ಸ್ವಾಮಿ
ತನ್ನ ನಂಬಿದವರ ಹೊರೆವನೆ
ಪುಣ್ಯ ಗೋಪೀಜನಜಾರನೆ ಪ್ರ
ಸನ್ನವೆಂಕಟಪತಿ ಧೀರನೆ೯

೨೬೪
ಬೆದರದಿರೆಲೆ ಆತ್ಮ
ಮಧುಸೂದನನ ಕೃಪೆ ಹೊಂದು ದುಷ್ರ‍ಕತಕೆ
ಬೆದರದಿರೆಲೆ ಆತ್ಮ ಪ.
ಹರಿಮುಖ್ಯಪ್ರಾಣರ ಸ್ಮರಣೆಯೊಂದಿರಲಿ
ದುರಿತ ನೊರಜುವಿಂಡು ಉರಿಯ ನುಂಗುವವೆ ೧
ಪರವನಿತೆಗೆ ಚಿತ್ತ ಬೆರೆಯದಲಿರಲಿ
ಮರುಳು ಕೀನಾಶಭಟರ ಊಳಿಗಕ್ಕೆ ೨
ಭೂತದಯ ವಿನಯ ಮಾತುಗಳಿರಲಿ
ಪಾತಕ ದಾರಿದ್ರ್ಯಾವ್ರಾತ ಬೊಬ್ಬುಳಿಗೆ ೩
ದ್ವಿಜರಾಜಗಮನನ ದ್ವಿಜಭಜನಿರಲಿ
ಸುಜನಪವಾದ ಶೀಲ ರಚಕ ಸಮೂಹಕೆ ೪
ವಿಬುಧರು ಬರೆದಿತ್ತ ಅಭಯಪತ್ರಿರಲಿ
ಶುಭಪಥ ತಡೆವ ಅಬುಧಸುಂಕಿಗರ್ಗೆ ೫
ಸುವೈರಾಗ್ಯಮನೆ ದೃಢ ಕವಟ ಬಲ್ಕಿರಲಿ
ಭವಾಂಬುಧಿ ಗೋಷ್ಪಾದವಹುದು ತಿಳಿಯದೆ ೬
ಪ್ರಸನ್ವೆಂಕಟೇಶನ್ನ ದಾಸರೆ ರಂಭೆಯರು
ಹೇಸಿ ನೃಪಾಂಗನೇರು ಎಳೆಸಲಿ ಕಂಗೆಟ್ಟು ೭

೭೩
ಬೆದರದಿರೊ ಬೋವು ಬರಲಿಲ್ಲ ನಿನ್ನ
ಮೃದುಲ ಸವಿ ತೊದಲು ಮಾತಾಡೊ ಬಾಲ ಪ.
ಕಣ್ಣೆವೆಯಿಕ್ಕದೆ ನೋಡಬ್ಯಾಡ
ನಿನ್ನ ಮೈಮರವಿಟ್ಟಾಡ ಬ್ಯಾಡ
ಗುನ್ನಗನ್ಯೆಳೆದಂಬೆಗಾಲಿಕ್ಕಬ್ಯಾಡ
ಹೊನ್ನೋಲೆ ಕೆಂಪೇರೆ ಹುಯಿಲಿಡಬ್ಯಾಡ ೧
ನೆಲವಿದು ದೈನ್ಯವ ಬಿಡಬ್ಯಾಡ
ಕೊಲ್ಲುವರ್ಯಾರಿಲ್ಲ ಕೊಲೆಗಂಜಬ್ಯಾಡ
ನಲವ ಬಿಟ್ಟಡವಿಯನೈದ ಬ್ಯಾಡ
ಕಳವಲಿ ಹುದುಗಿಕೊಂಡಿರಬ್ಯಾಡ ೨
ಹುಸಿಗೆ ಬೇಸರಬ್ಯಾಡ ಕೃಷ್ಣಮ್ಮ
ಹೊಸ ಕಲ್ಕ್ಯಾಟಬ್ಯಾಡ ನಮ್ಮಮ್ಮ
ಪ್ರಸನ್ನವೆಂಕಟಪತಿ ಪರಬೊಮ್ಮ ನಿನ್ನ
ಕುಶಲಕ್ಕೇನೇನುಪಾಯವಿಲ್ಲಮ್ಮಾ ೩

(ನು. ೩) ಕಂದರ್ಪಹರ
೧೫೯
ಬೇಸರದೆಂದೂ ಸದಾಶಿವನೆನ್ನಿ
ಕಾಶಿಯ ಪ್ರಭು ವಿಶ್ವೇಶ್ವರನೆನ್ನಿ ಪ.
ನಂದಿವಾಹನ ಆನಂದನು ಎನ್ನಿ
ಸುಂದರ ಗಣಪನ ತಂದೆಯು ಎನ್ನಿ ೧
ನಂಬೆ ಭವಾಂಬುಧಿ ಅಂಬಿಗನೆನ್ನಿ
ಅಂಬಿಕೆಯರಸು ತ್ರಯಂಬಕನೆನ್ನಿ ೨
ಕರ್ಪರ ಭಾಂಡ ಕಂದರ್ಪಹರೆನ್ನಿ
ಸರ್ಪಭೂಷಣ ಸುಖದರ್ಪಣನೆನ್ನಿ ೩
ಬೇಡಿದ ಭಾಗ್ಯವೀಡಾಡುವನೆನ್ನಿ
ಬೇಡನ ಭಕುತಿಗೆ ಕೂಡಿದನೆನ್ನಿ ೪
ಶಂಭು ಗಜದ ಚರ್ಮಾಂಬರನೆನ್ನಿ
ಸಾಂಬ ಸುಗುಣ ಕರುಣಾಂಬುಧಿಯೆನ್ನಿ ೫
ಎಂದಿಗೂ ಭಾವಿಕ ಮಂದಿರನೆನ್ನಿ
ಇಂದುಶೇಖರ ನೀಲಕಂಧರನೆನ್ನಿ ೬
ದುರ್ದನುಜಾಂಧಕ ಮರ್ದಕನೆನ್ನಿ ಕ
ಪರ್ದಿ ಕೃಪಾಲತೆವರ್ಧಕನೆನ್ನಿ ೭
ಶರಣು ಸುರಾರ್ಚಿತ ಚರಣನೆ ಎನ್ನಿ
ಶರಣಾಗತರಾಭರಣನು ಎನ್ನಿ ೮
ತ್ರಿಪುರಾಂತಕ ನಿಷ್ಕಪಟನು ಎನ್ನಿ
ಅಪಮೃತ್ಯುಹರ ಖಳರಪಹರನೆನ್ನಿ ೯
ದಕ್ಷಯಜ್ಞವೀಕ್ಷಕನೆನ್ನಿ
ಪಕ್ಷಿಗಮನ ಭಟರಕ್ಷಕನೆನ್ನಿ ೧೦
ಈ ಪರಿ ನೆನೆದರೆ ಪಾಪದೂರೆನ್ನಿ
ಶ್ರೀ ಪ್ರಸನ್ವೆಂಕಟಗತಿ ಪ್ರೀತೆನ್ನಿ ೧೧

೭೪
ಬ್ಯಾಡಿರವ್ವ ಎನ್ನ ಕಂದನ್ನ ದೂರ
ಬ್ಯಾಡಿರೆ ಗಾರು ಮಾಡಿ ಚೋರನೆಂದು ಸಾರಿ
ಪಿಡಿದು ತಂದು ದುರುಳನೆನ್ನ ಬ್ಯಾಡಿರೆ ಪ.
ಹಸಿದೆ ಮಗುವೆ ಹಸಿದೆ ಚಿನ್ನ
ಶಿಶುವೆ ಪಾಲ್ಗುಡಿಯ ಬಾರೆನ್ನೆ
ಮಿಸುನಿ ಬಟ್ಟಲೊಳಿಟ್ಟ ಪಾಲಿನ
ಬಿಸಿಗೆ ಬೊವ್ವೆಂದು ಬೆದರುವ
ಮೊಸರ ಹರವಿಯೊಡೆದು ನಿಮ್ಮನೆ
ಪೊಸಬೆಣ್ಣೆಗಳ ಮೆಲುವನೆಂದು
ಅಸಿಯರೊಂದುಗೂಡೆನ್ನ ಕೂಸಿಗೆ
ಪುಸಿಯ ವಾಕನುಸುರಿ ದೂರ ಬ್ಯಾಡಿರೆ ೧
ಮುದ್ದು ತಾರೊ ರಂಗ ಎನಲು
ಎದ್ದು ತಪ್ಪಡಿಗಳನಿಡುತ
ಬಿದ್ದು ಅಂಬೆಗಾಲನಿಕ್ಕಿ
ಮುದ್ದು ನೀಡಲರಿಯನೆ
ಕದ್ದು ನಿಮ್ಮನೆ ಕೆನೆವಾಲನು
ಗೆದ್ದು ನಿಮ್ಮ ಬಾಲರ ಬೆನ್ನ
ಗುದ್ದಿ ಓಡಿ ಬರುವನೆಂತೆ
ಬುದ್ಧಿ ಇಲ್ಲವೆ ನಿಮಗೆ ದೂರ ಬ್ಯಾಡಿರೆ ೨
ಎತ್ತಿಕೊಂಡು ರಂಬಿಸಿ ಬಾಯೊಳು
ತುತ್ತನಿಡಲು ಉಣ್ಣಲರಿಯ
ಕತ್ತಲೆಯೊಳು ಹೆಂಗಳ ಪಿಡಿದು
ಚಿತ್ತ ಮೋಹಿಸಬಲ್ಲನೆ
ಹೆತ್ತ ಮಕ್ಕಳಿಲ್ಲವೆ ನಿಮಗೆ
ವ್ಯರ್ಥ ಜಾರನೆನ್ನುವಿರಮ್ಮ
ಕರ್ತ ಪ್ರಸನ್ವೆಂಕಟರಾಯಗೆ
ಭಕ್ತವತ್ಸಲನಲ್ಲೆಂದು ದೂರ ಬ್ಯಾಡಿರೆ ೩

೨೪
ಭಂಡು ಮಾಡದಿರು ಬೆಣ್ಣೆಗಳ್ಳ ಈ
ಪುಂಡತನ ನಿನಗೆ ಸಲ್ಲ ಪರ
ಹೆಂಡಿರೆಳೆಯದಿರೊ ಹೀಗೆಲ್ಲ ಅತ್ತೆ
ಕಂಡರೆ ಕೊಲ್ವಳೊ ಗೋಪಿನಲ್ಲ ಪ.
ನೀರೆಯರಾಟವೆ ನಿನಗಲ್ಲ ನಗ
ಬಾರದು ಪರಾಂಗನೆರೊಳು ಚೆಲ್ವ
ವಾರಿಜಾಕ್ಷಿಯರಪ್ಪಿ ಎತ್ತಿಹ್ಯಲ್ಲ ಕೂಗ
ದಿರೊ ಬಾಗಿಲೊಳು ಮಾವ ಹೊಲ್ಲ ೧
ಹೆಜ್ಜೆ ಹೆಜ್ಜೆಗ್ಹುಚ್ಚ ಮಾಡಿದೆಲ್ಲ ನಿನ್ನ
ಕಜ್ಜದೊಳು ಕರುಣಿನಿತಿಲ್ಲ ಧರ್ಮ
ರಾಜ್ಯದೊಳು ಚಾರವೃತ್ತಿಯಿಲ್ಲ ನಮ್ಮ
ಲಜ್ಜೆ ಸೂರ್ಯಾಡಿದೆ ಅಂಜಿಕಿಲ್ಲ ೨
ಬುದ್ಧಿ ಸತ್ಯ ಮಾತು ಮಿಥ್ಯವಲ್ಲ ಪೂರ್ಣ
ಶುದ್ಧ ನಂಬಿದೆವೊ ಮೃದುಸೊಲ್ಲ ಇನ್ನು
ಸದ್ದು ಮಾಡದೆ ಕೂಡೆ ಠಾವಿಲ್ಲ ನಮ್ಮ
ಮುದ್ದಿಸೊ ಪ್ರಸನ್ವೆಂಕಟ ನಲ್ಲ ೩

೩೯೪
ಭಕ್ತರೆಂದರೆ ನೈಜ ಭಕ್ತರವರು ಪ.
ಚಿತ್ತಜನಯ್ಯನ ಚರಿತಾಮೃತಕೆ ಮನವಿಟ್ಟು ಅ.ಪ.
ಅಧಿಯಾತ್ಮ ತಾಪಗಳು
ಅಧಿಭೂತ ಕ್ಲೇಶದನುಭವ
ಅಧಿದೈವದಟ್ಟುಳಿಯನೆಣಿಸರತಿ ಬಲವಂತ
ರ್ಮಧು ಮಥನಗಲ್ಲದರ ಬಗೆಗಂಜರು ೧
ವೇದತಂತ್ರವಾಕ್ಯದಿಂದುಪದೇಶ ಮಾ
ಡಿದರೆ ಮೋಹನಕೊಳಗಾಗರು
ವದಿಸಿ ಬಲವತ್ಸ್ನಾನವ ಮಾಡಿ ಬೆದರಿಸಲು
ಕದಲದಂತಃಕರಣದ್ಹರಿದಾಸರು ೨
ಬದಿಗೆ ಬಂದಡಲಾವ ದುರಿತ ಕೋಟಿಗಳನ್ನು
ತುದಿಗಾಲಿಲೊದ್ದು ಸಲೆ ತಲೆವಾಗರು
ಹುದುಗೊಂಡು ಷಡುವರ್ಗ ರಿಪುಗಳನು ಗೆದ್ದು ಹರಿ
ಪದಲಂಪಟ ಜ್ಞಾನಾಂಬುಧಿಗಳು ೩
ವಿಧಿಭವೇಂದ್ರಾದಿ ಸುರರಾಳ್ದ ಲಕುಮೀಪತಿಯ
ಸುದಯಾರಸನುಂಬುವ ಬೋಧನವರು
ಸದಮಲ ಗುಣಾನಂತ ಪ್ರಸನ್ವೆಂಕಟಪತಿಯ
ಹೃದಯವಲ್ಲಭರೆನಿಪ ಅಚಲ ಮತಿಯವರು ೪*

೧೧೦
ಭಕ್ತವತ್ಸಲನಹುದೊ ವೆಂಕಟರೇಯ
ಭಕ್ತವತ್ಸಲನಹುದೊ ಪ.
ಕರಿಯ ಮೊರೆಯನರಿದು ಸಿರಿಯ ಜರಿದು
ಗರುಡನ ಕರೆಯದೆ ಭರದೊಳರಿಯಿಂ
ದರಿ ಬಾಯ ಮುರಿಗೆಯ ಹರಿದ್ಯೆಂದು
ನಾರದಾದ್ಯರು ನಿನ್ನ ಬಿರುದು ಸಾರುವರೊ ೧
ಅಂಬುಜಾಂಬಕ ನಂಬಿದೆನೆಂಬೆ ದ
ಯಾಂಬುಧಿ ಹರಿ ನಿನ್ನಿಂಬುದೋರೆ ನಲವಿ
ಲಂಬಲದಿ ಕಂಬದಿ ಬಿಂಬಿಸಿ ಡಂಬನ
ಡಿಂಬವ ಬಿಗಿದೆ ಪೀತಾಂಬರಧರನೆ ೨
ಚಿನ್ನ ತನ್ನ ತಾತನ್ನ ಜರಿದವ
ನನ್ನವನುಣ್ಣದೆ ನಿನ್ನ ಬಣ್ಣಿಸಲವ
ನುನ್ನತ ಭಕುತಿಗೆ ಮನ್ನಿಸಿ ಪೊರೆದೆ ಪ್ರ
ಸನ್ನವೆಂಕಟರನ್ನ ಮೋಹನ್ನ ೩

ನೀನೇರಿದೆ ನರನ ಬಂಡಿಯನು
೧೧೧
ಭಕ್ತವತ್ಸಲನೆಂಬ ಚಿಹ್ನೆ ನಿನಗೆ
ಯುಕ್ತವಲ್ಲದೆ ಆರಿಗೊಪ್ಪುವುದು ಕೃಷ್ಣ ಪ.
ಎಲ್ಲ ಜಗದ ತಂದೆ ನಿನ್ನ ಮಗ ಆ ನಂದ
ನೊಲ್ಲಭೆಯ ಕಂದನಾದ
ಚೆಲ್ಲುವೆ ಅರಸಿ ನಿನ್ನಂಗನೆ ಲಕುಮವ್ವ
ಗೊಲ್ಲತೇರಿಗೆಂತು ಸೋತಿದ್ದೆ ಸ್ವಾಮಿ ೧
ಮಂದಿ ರಾಜಾಂಡಕೋಟಿಗೆ ಗುರುವರ್ಯ ನೀನು
ಸಾಂದೀಪನಇÁ್ಯಳಿಗವ ಮಾಡ್ದೆ
ಮಂದಜಾಸನ ಆ ವಾಯು ನಿನ್ನ ಓಲೈಸುತಿರೆ
ಕಂದನೆನಿಸಿದೆ ಯಶೋದಾದೇವಿಗೆ ಸ್ವಾಮಿ ೨
ಮೂರು ಚಾವಡಿ ಪಾರುಪತ್ಯದ ಪ್ರಭುವೆ ನೀ
ನೇರಿದೆ ನರನ ಬಂಡಿಯನು
ದ್ವಾರಕೆಯ ಅರಸೆ ನೀ ಚೀರಿದರೋಡಿ ಬಂದು
ಆ ರಮಣಿಯ ಮಾನ ಉಳಿಸಿದೆ ಸ್ವಾಮಿ ೩
ಮುಕ್ತ ದ್ರುಹಿಣರಿಂದ ಸೇವ್ಯ ನೀ ಧರ್ಮನ
ಮಖದೊಳೆಂಜಲ ಪತ್ರ ತೆಗೆದೆ
ಪ್ರಕಟಿತ ನಿತ್ಯ ಮಹಾತೃಪ್ತ ನೀ ವಿದುರನ
ಕಕುಲತೆಯ ಔತಣಗೊಂಡು ಮುದಿಸಿದೆ ಸ್ವಾಮಿ ೪
ಹಲವು ಶ್ರ್ರುತಿಗಳಿಗೆ ನೀ ನಿಲುಕದೆ ನೆನೆದವಗೆ
ಸುಲಭದಿ ಪೊರೆವ ಉದಾರಿ
ಬಲದ ಮ್ಯಾಲೊಲಿಯುವ ದೊರೆಯಲ್ಲ ಭಕ್ತರ
ಛಲರಕ್ಷ ಪ್ರಸನ್ನವೆಂಕಟ ಜಗದಧ್ಯಕ್ಷ ಸ್ವಾಮಿ ೫

೧೧೨
ಭಜ ಚಿತ್ತ ಭವಭಯ ಮಂದಾರ
ಭಜ ಚಿತ್ತ ಭವಭಯ ದೂರ ಪ.
ಹಾಟಕಗಿರಿತಟವಾಸ ಪರೇಶಂ
ಕೋಟಿ ನಿಷ್ಕಾಯಸ ಮಾನಸ ಕಾಯ ೧
ಸಜಲಜಲದ ನಿಭ ಶಾಮಲರಾಯ
ಪ್ರಜಾಜನ ಗೋಪ್ರತಿಪಾಲ೨
ಮಾಪದ್ಮಭವ ಮುಖ್ಯ ಪುತ್ರ ಕಳತ್ರಂ
ಶ್ರೀ ಪ್ರಸನ್ವೆಂಕಟಪತೇಂದ್ರಾಪತ್ರಂ ೩

೩೯೫
ಭಜಿಸಿ ಬಹು ಭಕುತಿಯಿಂದ
ತ್ಯಜಿಪ ಭವಬಂಧನವ ಹರಿಯ ಪದವ ಪ.
ಮನವೈರಿಯಂ ಪಿಡಿದು ಮಿತ್ರನಂ ಮಾಡಿ ಕೊಂ
ಡನುನಯದಿ ವೈರಾಗ್ಯ ಘನಸಿರಿಯೊಳು
ದಿನದಿನಕೆ ಮುದವೇರಿ ತಾತ್ವಿಕರೊಡನೆ ಮಧ್ವ
ಮುನಿರಾಯನೊರೆದ ಪರಿ ಹರಿಯ ಪಾದವ ೧
ತುದಿಮೊದಲೆ ಸರ್ವಕಾಲಕೆ ಚಿಂತನೆಯ ಬಲಿದು
ಪದುಮಾಕ್ಷನಾಕೃತಿಯ ನೋಡಿ ದೃಢದಿ
ಕದಲಗುಡದಂತಃಕರಣ ಸ್ನೇಹ ಸಾರವನು
ಹೃದಯ ಮಂಟಪದೊಳಗೆ ಹರಿಯ ಪದವ ೨
ಹರಿಪರಾತ್ಪರ ಲಕುಮಿ ಅರಸಿ ಅಜಕುವರ ಹರ
ವರ ಪೌತ್ರ ಸುರಮುನಿಜನರು ದಾಸರು
ತರತಮದ ತಂತ್ರಸಾರ್ಥದಿಂ ನೆರೆ ನಂಬಿ
ಅರಸ ಪ್ರಸನ್ವೆಂಕಟ ಶ್ರೀಹರಿಯ ಪದವ ೩

(ನು. ೧) ಹಿಡಿಂಬ : ಒಬ್ಬ ರಾಕ್ಷಸ
೧೭೫
ಭಳಿ ಭಳಿರೆ ಬಲಭೀಮ ಭಳಿರೆ ಸದ್ಗುಣಧಾಮ
ಭಳಿರೆ ದ್ರೌಪದಿನಾಥ ಭಳಿರೆ ಶ್ರೀಹರಿದೂತ
ಭಳಿರೆ ಅಪ್ರತಿಚರಿತ ಭಳಿರೆ ಬಲದೇವಸುತ
ಭಳಿರೆ ಭೂಮಿಪಲಲಾಮ ಭೀಮ ಪ.
ಯೋಚಿಸಿ ಖಳರು ನೆರೆದು ಭೂಚಕ್ರವಾಕ್ರಮಿಸೆ
ಶ್ರೀ ಚಕ್ರಿ ದಯದಿ ಅಮೃತ ರೋಚಕುಲಜಾತ ಪಾಂ
ಡು ಚಕ್ರವರ್ತಿ ಕಮಲಲೋಚನೆಯ ಪೃಥೋದರಾ
ಬ್ಧಿ ಚಂದ್ರನಂತೆ ಜನಿಸಿ
ಆ ಚಕ್ಷುವಿಹೀನ ಭವಾಬ್ಧಿಚೋರರೆದೆ ಶೂಲ
ಗೋಚರಿಸುವಂತಿಳೆಗೆ ಸೂಚಿಸಿ ಮುಖೋದಯವ
ಕೀಚಕ ಹಿಡಿಂಬ ಬಕ ನೀಚ ಮಾಗಧ ಮುಖರ
ವಾಚಿಸಗುಡದೆ ಬಡಿದೆ ಭೀಮ ೧
ಕೊಬ್ಬಿದ ಖಳರು ಧಾತ್ರಿಗುಬ್ಬಸವ ತೋರುತಿರೆ
ಅಬ್ಬರದಿ ಕರದ ಗದೆಗ್ಹಬ್ಬದೌತಣವಿಡುತ
ಒಬ್ಬೊಬ್ಬರೊಮ್ಮೆ ಹನ್ನಿಬ್ಬರನ ಕರೆದು
ಉಬ್ಬುಬ್ಬಿ ರಣದಿ ಕುಣಿದೆ
ಹಬ್ಬಿ ಬಹ ನಾಗರಥನಿಬ್ಬರದ ಬಿಂಕದವ
ರೆಬ್ಬಿಸಿ ನಭಕೆ ಚಿಮ್ಮಿ ಬೊಬ್ಬಿರಿದು ಕೌರವರ
ನಿಬ್ಬಗೆದು ಡಾಕಿನಿಯ ಉಬ್ಬಿಸಿದೆ ನಿನಗೆ ಪಡಿ
ಹೆಬ್ಬುಲಿಗಳುಂಟೆ ಜಗದಿ ಭೀಮ ೨
ನಿರ್ಧರ ಪರಾಕ್ರಮ ಧನುರ್ಧರರ ಬೀಳ್ಗೆಡಹಿ
ಸ್ವರ್ಧಾಮಗರು ತುತಿಸೆ ದುರ್ಧಾರ್ತರಾಷ್ಟ್ಟ್ರರಂ
ದುರ್ಧಾಮಕೆಬ್ಬಟ್ಟಿ ದುರ್ಧರ್ಷ ಗುರುರಥವ
ನೂಧ್ರ್ವಕ್ಕೊಗೆದುಲಿದು ಚೀರ್ದೆ
ದುರ್ಧರ ಖಳಾನುಜನ ಮೂರ್ಧ ಕಾಲೊಳು ಮೆಟ್ಟಿ
ಶಾರ್ದೂಲನಂದದಿ ಕೆಡದೊಡಲಿನ ಅರುಣ ಜಲ
ಪೀರ್ದಂತೆ ತೋರ್ದೆ ಗೋವರ್ಧನಧರನನುಜ್ಞ
ವಾರ್ಧೀಸ್ಯರ್ಪಿಸಿದೆ ಮಝರೆ ಭೀಮ ೩
ಕಡಲೊಡೆಯನೆಡೆಗೆ ಬಲುಕೆಡುನುಡಿಯ ನುಡಿದವರ
ಪಿಡಿ ಪಿಡಿದು ಖಡುಗದಿಂ ಕಡಿಕಡಿದು ಕಡೆಗಾಲದ
ಮೃಡಕೋಟಿಯಂದದಲಿ ಕಡುರೋಷದಡಿಗಡಿಗೆ
ಘುಡುಘುಡಿಸಿ ಹುಡುಕಿ ತುಡುಕಿ
ಷಡಕ್ಷೋಹಿಣಿ ಪಡೆಯ ಹುಡಿ ಹುಡಿಗುಟ್ಟಿ ಪೊಡವಿ ದಿ
ಗ್ಗಡಣ ಜಯದಂತಿ ಧಿಮ್ಮಿಡಿಸಿ ಕರ್ಮಡು ಪೊಕ್ಕು
ಕಡುಗಲಿಯ ತೊಡೆಮುರಿಯೆ ನಡುಮುರಿಯೆ ಗದೆಯಿಂದ
ಹೊಡೆದೆಶಸುಪಡೆದೆ ಜಗದಿ ಭೀಮ ೪
ಅಪ್ಪಳಿಸಿ ಕುರುಪತಿಯ ಚಿಪ್ಪೊಡೆಯೆ ತಲೆದುಳಿದು
ಬಪ್ಪುವಾರುಷವೆಂಬ ಸುಪ್ತಸೂತ್ರದಿ ಅಜನ
ಬೊಪ್ಪ ಕೃಷ್ಣನ ಕಟ್ಟುವ ಪರಾಕ್ರಮಿಗೆನುತ
ಸುಪ್ರಾಯಶ್ಚಿತ್ತವೆನುತ
ತಪ್ಪುಗಳನೊಂದೊಂದ ನೆಪ್ಪೆತ್ತಿ ತನ್ಮತಿಗೆ
ಹೆಪ್ಪೆನುವ ವಾಗ್ಬಾಣ ಕುಪ್ಪಳಿಸಿ ಕೊಂದು ಶ್ರೇ
ಯಃಪತಿ ಪ್ರಸನ್ವೆಂಕಟಾರ್ಪಣವ ಮಾಡಿ ವೈಷ್ಣ
ವ ಪ್ರತತಿಯನು ಪೊರೆದೆ ಭೀಮ ೫

(ಪ.) ಋಜುನಿಕರ ಮಕುಟಮಣಿ
೧೫೪
ಭಳಿ ಭಳಿರೆ ಭಳಿರೆ ಹನುಮ
ಭಳಿ ಭಳಿರೆ ಋಜುನಿಕರ ಮಕುಟಮಣಿ ಪ.
ಅಂಜನಿ ಜಠರ ಸಂಜನಿತ ಪ್ರಾಜ್ಞ
ಮೌಂಜಿಯುತ ಕೋದಂಡ ಧೃತಕರ
ಕಂಜನೆದುರಲಿ ಪ್ರಾಂಜಲಿತ ಬಹುಭಕುತಿ ಅಭಿನಯ
ಅಚ್ಛಿನ್ನ ಅಚ್ಚಿನೊಳು ಶುಭಚಿಹ್ನ
ಪಾವನ್ನ ಗುಣರನ್ನ ಪರಿಪೂರ್ಣ ಅ.ಪ.
ತಾಟಕಾಂತಕ ಭಟರೊಳು ನೀ
ಮೀಟೆನಿಸಿ ಧೀಂಕಿಟ್ಟು ಶರಧಿಯ
ದಾಂಟಿದವನಿಜೆ ತೋಷಕಾರಿ ಅಶೋಕವನಹಾರಿ
ಕೋಟಿ ಕೋಟಿ ನಿಶಾಟ ಹೃದಯ
ಸ್ಫೋಟಕಕ್ಷಯ ಪಾಟವ ಕರಿ
ತ್ತಟ ಕೇಸರಿ ಕಟಿತಟದಿ ಕರವಿಟ್ಟ ಹನುಮ
ದಿಟ್ಟ ವಿಕಟ ಖಳಕಳ ಪಟಾರ್ಭಟ
ಪಟು ಹರಿದ್ವಿಟ್ಟದ್ವಿಟ್ಟು ಚಟುಲವಟು ೧
ವೀರ ಸಮೀರಕುಮಾರ ಪಾರಾ
ವಾರ ಚರಿತ ಮಾರಜಿತ ಘನ
ವಾರಿಜೋದ್ಭವ ಶರಕೆ ಮನ್ನಿಸಿದೇರಿದೌದಾರಿ
ಈರೈದು ಮುಖದವನ ಪುರಪ್ರ
ಸರಾಗಾರವನುರುಹಿ ರಘುಜನ
ಚಾರುಚರಣವ ಕಂಡ ಪ್ಲವಗಪ್ರಚಂಡ ಶುಭ ತುಂಡ
ಬಾಲದಂಡ ಅಗಣಿತ ಲೆಂಡರ ಖಂಡ
ಪುಂಡರ ಗಂಡ ಗಂಡಭೈರುಂಡುದ್ದಂಡ ೨
ಜೀವಜಾಲರ ಜೀವ ವಿಪ ಮಹಾ
ದೇವ ಮುಖ್ಯರ ದೇವ ಚತುರ್ದಶ
ಭುವನಾಶ್ರಿತ ಭೂತಭರ್ಗಸದಾವಿರತಿಭರಿತಾ
ಆವಜನುಮಜ್ಜನುಮ ಎನಗೆ
ನೀ ಒಡೆಯನಾಗ್ಯಾಳುತ ನನ
ಗೀವುದೆಲೆ ಗುರು ಪರಮ ಭಾಗವತಾರ್ಯ ಆ ಚರಿಯ
ಹರಿಯ ಕಾರ್ಯಕಕ್ಕರದ ಹಿರಿಯ
ಪರಮ ವೀರ್ಯಾಚ್ಚರಿಯ ಸಚ್ಚರಿಯ ೩
ಹರಿ ಸೇವ್ಯಂಗೀಕರಿಸಿ ಒಡನವ
ತರಿಸಿ ಆಜ್ಞಂವೆರಸಿ ಅಟ್ಟಿದ
ಹರಸಿ ಮದಮತ್ತರಿ ಸಮೂಹ ಭಯಹರಿಸ್ಯಭಯ ಧರಿಸಿ
ಹರಿಶುಭಚರಣ ಸರಸಿಜದಿ ಶಿರ
ವಿರಿಸಿ ಸುಗಿರೋಚ್ಚರಿಸಿ ಅಖಿಳೊ
ಪ್ಪಿರಿಸಿ ವಿಷಯ ಸ್ಪರ್ಶವಿಲ್ಲದ ಅರಸ ನೀನೆ ಕಣಾ ಜಾ
ಣರೊಳು ಜಾಣ ಪ್ರಾಣ ಮುಖ್ಯಪ್ರಾಣ ಕೇಣಿ
ಗರ ಗಂಟಲಗಾಣ ಪ್ರವೀಣ ಹನುಮ೪
ವಾಸವಾರಿಯ ಘಾಸಿಗಂದು ಕ
ಪೀಶರಳಿದಿರಲಾಸಮಯದೊ
ಳೌಷಧವ ತಂದಾಸಮರ್ಥರ ಪೊರೆದ ಕಪಿವರದ
ಶ್ರೀಶ ವರದ ಪ್ರಸನ್ನವೆಂಕಟಾ
ಧೀಶ ಭೃತ್ಯೋಲ್ಲಾಸ ಅಜಪದ
ಧೀಶ ಮೂರವತಾರಿ ಸುಖಕಾರಿ ಸದಾಶೂರಿ ಸ
ಮೀರ ಕುಮಾರ ಭಾರತ ಧೀರ
ಸಾರ ಯಂತ್ರೋದ್ಧಾರ ತತ್ವವಿಚಾರ ೫

(ನು. ೨) ಘನಗರಳನುಂಗಿ
೩೯೬
ಭಾಪು ಬಲ್ಲಿದ ಹನುಮ ಭೂಪ ಹನುಮ
ಶ್ರೀಪದ್ಮನಾಭನ ದಾಸ ಭಕ್ತರ ವಿಲಾಸ ಪ.
ಹಾಟಕ ಯಜ್ಞೋಪವೀತ ಕಚ್ಚುಟ ಕರ್ಣಕುಂಡಲ ಮುಖ್ಯ
ಕೋಟಿಕಟಕ ಸಮಗಾತ್ರ ದಿಟ್ಟವಟು ಪಿಂಗಳನೇತ್ರ
ದುಷ್ಟದಶಶಿರನ ಗರುವ ಮುಷ್ಟಿಯಿಂದಲ್ಹೊಡೆದೆ ಉರಕೆ
ಕೋಟಿ ಪ್ಲವಗರ ಪೊರೆದಭಯ ಕೊಟ್ಟು ಪಾಲಿಸೆನ್ನ ಜೀಯ ೧
ದುರುಳ ಕುನೃಪನಟ್ಟಿ ಘನ ಗರಳನುಂಗಿ ಪುರೋಚನನ
ಉರುಹಿ ಧರ್ಮಾದ್ಯರನು ಪೊರೆದೆ ಕಿರ್ಮೀರಕರರಿದೆ
ಕ್ರೂರ ಕೌರವನ ಪಾವಕ ಹರಿಶರಣ ಜನಪಾಲಕ
ಮರೆಹೊಕ್ಕೆ ಬಿಡದಿರು ಕೈಯ ಧೀರ ಶ್ರೀ ಭೀಮಸೇನರಾಯ೨
ಎಸೆವ ದಂಡಕಮಂಡಲವ ಧರಿಸಿ ಮಾರಶರವ ಜಯಿಸಿ
ಬಿಸಜಾಕ್ಷನ ಪೊಳಲ ತೋರಿದೆ ಕಶ್ಮಲಮತವಳಿದೆ
ವಸುಧೆಗೆ ವೈಷ್ಣವರೊಡೆಯ ನೋಯಿಸದೆ ಪೊರೆ ನಿನ್ನ ಪಡೆಯ
ಶ್ರೀಶ ಪ್ರಸನ್ನವೆಂಕಟೇಶಾಂಘ್ರಿ ಸರೋಜರಜಭೃಂಗ ೩

೩೯೭
ಭಾಪು ಹರಿಮತನೆ ಪ.
ಭಾಪು ಹರಿಮತಸ್ಥಾಪಿತನೆ ಮೂರು
ರೂಪಿನಲಿ ಬಂದು ಶ್ರೀಪತಿಯು ಮೆಚ್ಚು
ವಾ ಪರಾಕ್ರಮ ವ್ಯಾಪಿಸಿದೆ ಭಾರತೀಪತೆ ತೇ ನಮೊ ಅ.ಪ.
ಆದಿಯಲಿ ಅಂಜನಾದೇವಿಯ ಮಂಗ
ಳೋದರದಿ ಪುಟ್ಟಿ ಶ್ರೀ ದ್ಯುಮಣಿ ಕುಲ
ಮೇದಿನೀಶನ ಪಾದಕೆರಗಿ ಅಂಬೋಧಿದಾಟ್ಯಾಜ್ಞದಿ
ಆ ದಶಾಸ್ಯನ ಲಂಕಾ ದಹಿಸಿ ಜಾನ
ಕೀದೇವಿಯ ಸುದ್ದಿ ಶ್ರೀಧರಗರುಹಿ
ಯೋಧ ಬಾಧಿತರಾದ ಕಪಿಚೇತನದಾಯಕ ತೇ ನಮೊ ೧
ತುಂಗಗಿರಿ ಶತಶೃಂಗಕೃತ ಸುವ
ಜ್ರಾಂಗ ಅಗ್ನಿಜಾಸಂಗ ಮತ್ತ ನೃ
ಪಂಗಳನು ಭುಜದಿಂ ಗೆಲಿದು ಯಜ್ಞ ಸಂಗ್ರಹವ ಪೂರಿಸಿ
ಸಂಗಡಿಸಿದರಿ ಸಂಗರವ ಪೊಕ್ಕು
ಸಿಂಗಗರ್ಜನೆಯಿಂ ಗದೆಯ ಕೊಂಡು
ಭಂಗಿಸಿದೆಯೊ ಯುಗ್ಮಾಂಗ ಕೃಷ್ಣ ಸೇವಾಂಗೀಕೃತ ತೇ ನಮೊ ೨
ತುಚ್ಛರಿಳೆಯೊಳು ಪೆಚ್ಚಿ ಬಗೆ ಬಗೆ
ಕುಚ್ಛಿತಾರ್ಥ ವಿರಚ್ಚಿಸ್ಯಾತ್ಮಗೆ
ಅಚ್ಚುತೈಕ್ಯವ ಉಚ್ಚರಿಸುತಿರೆ ಸ್ವಚ್ಛ ಯತಿರೂಪದಿ
ಮಚ್ಚರಿಪರನು ಕೊಚ್ಚಿ ತಂತ್ರಸಾ
ರಾರ್ಚನೆಯಭೇದ ನಿಶ್ಚೈಸಿದೆ ಶಿರಿ
ಸಚ್ಚಿದಾತ್ಮ ಶ್ರೀವತ್ಸ ಪ್ರಸನ್ವೆಂಕಟೇಚ್ಛಮತ ತೇ ನಮೊ೩

ಮಾವನ ಅಣುಗನನುಜೆಯಳಿಗೆ ಮಾವನೆನಿಸಿದ
೨೫
ಭಾವೆ ತೋರೆಲೆ ಶ್ರೀನಿವಾಸನ ಜಗದ
ಜೀವಗಳಿಗೆ ಭಿನ್ನನಾದ ವಾವೆಯಿಲ್ಲದ ಶ್ರೀನಿವಾಸನ ಪ.
ಮಾವನ ಅಣುಗನನುಜೆಯಳಿಗೆ ಮಾವನೆನಿಸಿದ ತನ್ನ ಮಗಳ
ಮಾವನ ಸೊಸೆಯ ಬಸಿರಲುದಿಸಿ ಮರಮೆಳೆಯನು ಸೇರಿ ಮತ್ತೆ
ಮಾವನ ಸುತರಿಗಜ್ಜನೆನಿಸಿದ ಮಗುಳೆ
ಮಾವನ ಮಾವನ ಮಗಳಿಗಣ್ಣನೆನಿಸಿದ ಒಮ್ಮೆ
[ಬಾವನ] ಭವನವೆಣ್ಗಳ ಬಿಡಿಸಿ ರಮಿಸಿದ೧
ಸತಿಯ ಸುತೆಗೆ ಅರಸನಾದ ಸತಿಯಳಿಗೆ ಸಹೋದರನಾದ
ಸತಿಯಳನುಜ ಕುಲದಿ ಜನಿಸಿ ಸತಿ ಹಲವರ ಕೂಡಿ ಸುಖಿಸಿ
ಸತಿ ಸಖಿಯರ ಬಂಧುವೆನಿಸಿದ ಮತ್ತೆ ಸುತನ
ಸತಿಯ ಮಗನ ಮೊಮ್ಮನೆನಿಸಿದ ಓರ್ವ ಮೊಮ್ಮನ
ಸತಿಗೆ ನೋಡಿದಳಿಯನೆನಿಸಿದ ೨
ಅಣ್ಣಗೆ ಜನಕನಾಗಿ ಮಗನ ಅಣ್ಣನೆನಿಸಿದ ಜಗವರಿಯಲು
ಅಣ್ಣನೆ ತಮ್ಮ್ಮಗೆ ತಮ್ಮನಾದ ಹುಟ್ಟಿದ ತಾಣವ ಜರಿದು ಬೆಳೆದು
ಅಣ್ಣಗೆ ಭಾವನಾಗಿರುವ ಚೆಲುವನೆ ತನ್ನ ಬಾವನ
ಅಣ್ಣನಯ್ಯಂಗೆ ಪುತ್ರನಾದವನೆ ಪ್ರಸನ್ನವೆಂಕಟತನ್ನವಳಿಗಾಪ್ತನಾಗಿ ಹೊರೆವನೆ ೩

(ನು. ೨) ಅಕ್ಷಕುಮಾರ
೧೫೫
ಭೂರಿ ಕರುಣಿ ಹನುಮ ಪಾಲಿಸು ಪ.
ಬೀರಕಬ್ಬಿಯ ಕೃಷ್ಣಾತೀರನಿವಾಸ
ಭಾರತಮಲ್ಲ ಬುಧರ ಪರಿತೋಷ ಅ.ಪ.
ಕರ್ತನ ನೇಮದಿ ಕಡಲ ಕಾಲುವೆ ಮಾಡಿ
ಅರ್ತಿಲಿ ದಾಟಿ ರಕ್ಕಸರ ಪಟ್ಟಣದಿ
ಕೀರ್ತಿಯ ಬೆಳಗಿದೆ ವನವ ಕಿತ್ತು ವಿನೋದ
ಮೂರ್ತಿ ಬಲ್ಲಿದ ರಾಮನ ಬಂಟನಹುದೊ ೧
ಭೀಕರ ಅಕ್ಷ ಮೊದಲಾದರೊದೆದು
ಏಕಜ್ವಾಲೆಯಲಿ ಲಂಕೆಯ ಸುಟ್ಟು ನಲಿದು
ಕಾಕುತ್ಸ್ಥನಿಗೆ ಸೀತೆ ಕುಶಲವ ಮುಟ್ಟಿಸಿದೆ ಮೂ
ಲೋಕದಿ ನಿನಗೊಬ್ಬ ಸಮನೆನ್ನಬಹುದೆ ೨
ಅತಿ ಘಾತಿಸಿಕೊಂಡು ಕಪಿಗಳು ರಣದಲಿ
ಮೃತ ವಿಕ್ರಮರಾಗಿ ಹರಣಗುಂದಿರಲು
ಮೃತ ಸಂಜೀವನವ ತಂದು ರಕ್ಷಿಸಿದೆ ಅ
ಪ್ರತಿಮ ಪ್ರಸನ್ವೆಂಕಟೇಶಗರ್ಪಿಸಿದೆ ೩

(ನು..೨) ಮಾನುನೆರಾರ್ವರ ಬಲಗೊಂಬೆ
೩೮೨
ಭೇದ ಮುಕ್ತಾವಲಿ (ಕೋಲು ಹಾಡು)
ಕೋಲು ಮುಕ್ತಿಮಾರ್ಗದ ಕೋಲು ದುಷ್ಟಶಾಸನ
ಕೋಲು ಸುಖತೀರ್ಥಯತಿರಾಯನ ಕರದಂಡು
ಕೋಲು ಕೋಲೆನ್ನ ಕೋಲೆ ಪ.
ಶ್ರೀದೇವಹೂತಿಜಾಜನಂಘ್ರಿಗೆ ನಮಿಸುವೆ
ಶ್ರೀದೇವಿ ಪದಕೆ ಎರಗುವೆ ಕೋಲೆ
ಶ್ರೀದೇವಿ ಪದಕೆ ಎರಗುವೆ ಮುಖ್ಯಗುರು
ವಾದಜವಾಯುರೊಂದಿಪೆ ಕೋಲೆ ೧
ವಾಣಿ ಭಾರತಿದೇವಿ ಗರುಡ ಮಹೇಶಾನಂತ
ಜ್ಞಾನದಾತರಿಗೆ ನಮೋ ಎಂಬೆ ಕೋಲೆ
ಜ್ಞಾನದಾತರಿಗೆ ನಮೋ ಎಂಬೆ ಶ್ರೀವಿಷ್ಣು
ಮಾನುನೆರಾರ್ವರ ಶರಣೆಂಬೆ ಕೋಲೆ ೨
ಗರುಡನ ರಂಭೆ ವಾರುಣಿ ಗಿರಿಜೇರಿಗೊಮ್ಮೆ
ಕರಗಳ ಮುಗಿದು ಸ್ಮರಿಸುವೆ ಕೋಲೆ
ಕರಗಳ ಮುಗಿದು ಸ್ಮರಿಸುವೆ ಇಂದ್ರ ಕಾಮ
ವರ ಪ್ರಾಣಾನಿರುದ್ಧರ ಬಲಗೊಂಬೆ ಕೋಲೆ ೩
ಇಂದ್ರಾಣಿ ರತಿ ಮುಖ್ಯರಾದ ತಾರತಮ್ಯದ
ವೃಂದಾರಕ ಋಷಿನೃಪರನು ಕೋಲೆ
ವೃಂದಾರಕ ಋಷಿ ನೃಪರ ಮನುಷ್ಯೋತ್ತಮ
ರಂ ಧ್ಯಾನಿಸುವೆ ಮನದಲಿ ಕೋಲೆ ೪
ಏನೂ ಇಲ್ಲೆಂಬನ ಹಾನಿಗೆ ಕಡೆಯಿಲ್ಲ
ತಾನೀಶನೆಂದು ನುಡಿದವ ಕೋಲೆ
ತಾನೀಶನೆಂದು ನುಡಿದವ ತಮಸನು
ತಾನುಂಬ ತನ್ನ ಬಳಗದಿ ಕೋಲೆ ೫
ಹರಿಯ ಗುಣಕೆ ಎಣಿಕೆನಿಟ್ಟವ ಕೆಟ್ಟವ
ಹರಿನಿರ್ಗುಣೆಂಬ ಡಂಬರ ಕೋಲೆ
ಹರಿನಿರ್ಗುಣೆಂಬ ಡಂಬರ ಸಂಗದಿ
ಧರೆಯ ಸಜ್ಜನರು ಮತಿಗೆಡಲಿ ಕೋಲೆ ೬
ಕ್ಷೀರಾಂಬುಧಿ ಮನೆಯ ವಾಸುದೇವನ ಆಜ್ಞಾ
ಧಾರಿಯೆನಿಪ ವಾಯುದೇವನು ಕೋಲೆ ಆಜ್ಞಾ
ಧಾರಿಯೆನಿಪ ವಾಯುದೇವನು ಮೊದಲಿಗೆ
ವೀರ ಹನುಮ ಭೀಮನಾದನು ಕೋಲೆ ೭
ಮೂರನೆ ಅವತಾರಿ ಮಧ್ವರಾಯನು ಮುಕ್ತಿ
ದಾರಿಯ ತನ್ನವರಿಗೆಲ್ಲ ಕೋಲೆ ಮುಕ್ತಿ
ದಾರಿಯ ತನ್ನವರಿಗೆಲ್ಲ ತೋರಿದು
ದಾರಿಯ ಪದವ ಹೊಂದಿದೆ ಕೋಲೆ ೮
ಗುರು ಮಧ್ವ ಎನ್ನ ಮಾತೆ ಗುರುಮಧ್ವನೆನ್ನ ತಾತ
ಗುರು ಮಧ್ವನಾಥ ಸಖಭ್ರಾತ ಕೋಲೆ
ಗುರು ಮಧ್ವನಾಥ ಸಖಭ್ರಾತನೆಂದ
ವರಿಗೊಲಿವನು ಗತಿಯ ಕೊಡುವನು ಕೋಲೆ ೯
ಸುಖತೀರ್ಥರಾಯನ ಹಿತವಾಕ್ಯಕೆಣೆಯಿಲ್ಲ
ಶುಕತಾತ ಸಮನ ದೈವಿಲ್ಲ ಕೋಲೆ
ಶುಕತಾತ ಸಮನ ದೈವಿಲ್ಲವೆಂದವರ
ಭಕುತಿಯ ಬೇಡಿ ಬಯಸಿದೆ ಕೋಲೆ೧೦
ಭಕುತ್ಯೆಂಬ ಮುಯ್ಯವ ಹರಿಪಾದಕರ್ಪಿಸಿದ
ಅಕಳಂಕ ಮಧ್ವ ಮುನಿರಾಯ ಕೋಲೆ
ಅಕಳಂಕ ಮಧ್ವಮುನಿರಾಯನಂಘ್ರಿಗೆ
ಸಕಳ ಭಾರವ ಒಪ್ಪಿಸಿದೆನು ಕೋಲೆ ೧೧
ವಿಶಿಷ್ಠ ಸ್ವರೂಪಾನಂದರ್ಭಾವ ಮೋಕ್ಷ ಸು
ವಾಸಿನೇರೆಲ್ಲರೊಂದಾಗಿ ಕೋಲೆ ಸು
ವಾಸಿನೇರೆಲ್ಲರೊಂದಾಗಿ ಹೋಗುವ
ಹೇಸಿ ನಾರೇರ ಗೆಲ್ಲುವ ಕೋಲೆ ೧೨
ನಮ್ಮ ಮುತ್ತಯ್ಯನಾದ ಮರುತರಾಯನ ಕೀರ್ತಿ
ನಿರ್ಮಲ ಬುಧರಿಗಮೃತವು ಕೋಲೆ
ನಿರ್ಮಲ ಬುಧರಿಗಮೃತವು ಧರೆಯೊಳು
ಹಮ್ಮಿನ ಖಳರಿಗೆದೆಗಿಚ್ಚು ಕೋಲೆ ೧೩
ಮುತ್ತಯ್ನಂಶದ ಒಳಗೊಬ್ಬ ಜನಿಸಿದ
ಹೆತ್ತಯ್ನಮ್ಮ ಜಯರಾಯ ಕೋಲೆ
ಹೆತ್ತಯ್ನಮ್ಮ ಜಯರಾಯ ತನ್ನ ಬಂಧು
ಮೊತ್ತದಿ ರಾಜ್ಯವಾಳಿದ ಕೋಲೆ ೧೪
ಜಯರಾಯ ಸಂತತಿಯ ಮಕ್ಕಳು ನಾವೀಗ
ಜಯನವಭೇರಿ ಹೊಯಿಸುತ ಕೋಲೆ
ಜಯನವಭೇರಿ ಹೊಯಿಸುತ ರವದ ಜಾಗ
ಟೆಯ ಬಿರುದಲಿ ಬರುತೇವೆ ಕೋಲೆ ೧೫
ಬಯಲು ಮಾತಿನವ ಕಡೆಗಾಗಿ ತತ್ವವಿ
ನಯ ವಾಕ್ಯ ನಿಮಗೆ ಸೊಗಸಲ್ಲ ಕೋಲೆ ವಿ
ನಯವಾಕ್ಯ ನಿಮಗೆ ಸೊಗಸಲ್ಲ ಕೇಳಿದರೆ
ಭಯಬಿಟ್ಟು ಕೇಳಿ ಕವಿಯರು ಕೋಲೆ ೧೬
ಲೌಕಿಕ ಮಾತಿನಂತಲ್ಲ ಮುಯ್ಯದ ಹಾಡು
ವೈಕುಂಠಪತಿಯ ಅರಮನೆಯ ಕೋಲೆ
ವೈಕುಂಠಪತಿಯ ಅರಮನೆಯಾಸ್ಥಾನದ
ಏಕಾಂತ ನಾರೇರೊಪ್ಪಿದ್ದು ಕೋಲೆ ೧೭
ಹಾದಿ ಬೀದಿಯ ಜನರ ಮೆಚ್ಚಿನ ಮುಯ್ಯಲ್ಲ
ಮಾಧವನ ಶ್ವೇತದ್ವೀಪದ ಕೋಲೆ
ಮಾಧವನ ಶ್ವೇತದ್ವೀಪದ ಮಂದಿರದಿ
ಶ್ರೀದೇವಿಯಮ್ಮ ಕೇಳ್ವಳು ಕೋಲೆ ೧೮
ಭ್ರಾಂತಜನರಿಗೆ ವಿಶ್ರಾಂತಿದೋರದು ಮುಯ್ಯಾ
ನಂತಾಸನದ ಅನಂತನ ಕೋಲೆ ಅ
ನಂತಾಸನದ ಅನಂತನ ಮಡದಿ ಶ್ರೀ
ಕಾಂತೆ ನಮ್ಮವ್ವ ಕೇಳ್ವಳು ಕೋಲೆ ೧೯
ಹಾಡುತ ಬರುತೇವೆ ಹರಸುತ ಬರುತೇವೆ
ರೂಢಿಯ ಸಾಧುಜನರನು ಕೋಲೆ
ರೂಢಿಯ ಸಾಧುಜನರ ಗುಣಂಗಳ ಕೊಂ
ಡಾಡುತ ನಾವು ಬರುತೇವೆ ಕೋಲೆ ೨೦
ದರ್ಶನರಾಯರು ಮೂವತ್ತೇಳು ಮಂದಿ
ಅರಸರು ನಮ್ಮ ಹಿರಿಯರು ಕೋಲೆ
ಅರಸರು ನಮ್ಮ ಹಿರಿಯರ ಮಹಿಮೆ ಉ
ಚ್ಚರಿಸುತ ನಾವು ಬರುತೇವೆ ಕೋಲೆ೨೧
ನಮ್ಮ ತವರಿಗೆ ಕೀರ್ತಿತಂದ ಕನ್ಯೇರು ನಾವು
ನಮ್ಮ ನೆಳಲಿಗಂಜಿ ನಡೆದೇವು ಕೋಲೆ
ನಮ್ಮ ನೆಳಲಿಗಂಜಿ ನಡೆದೇವು ದುರುಳೇರ
ಉನ್ಮತ್ತ ನಮಗೆ ಎಣಿಕಿಲ್ಲ ಕೋಲೆ ೨೨
ಜ್ಞಾನದೀವಟಿಗೆ ಬೆಳಗಲೆ ಬರುತೇವೆ
ಜ್ಞಾನ ಕತ್ತಲೆಯ ಬೆದರಿಸಿ ಕೋಲೆ ಅ
ಜ್ಞಾನ ಕತ್ತಲೆಯ ಬೆದರಿಸಿ ಬರುವಾಗ
ಹೀನ ಬುಧ್ಯರು ಮೋರೆ ತೆಗೆದಾರು ಕೋಲೆ ೨೩
ನಮ್ಮಯ್ಯನಾಸ್ಥಾನ ಬಣ್ಣಿಸಲಳವಲ್ಲ
ನಿರ್ಮಳಾತ್ಮಕರು ಸಚಿವರು ಕೋಲೆ
ನಿರ್ಮಳಾತ್ಮಕರು ಸಚಿವರು ಪರಿವಾರ
ಧರ್ಮಶೀಲರು ವಿರತರು ಕೋಲೆ ೨೪
ಎತ್ತ ನೋಡಲಿ ನವಭಕ್ತಿರತ್ನದ ಬೆಳಗು
ಚಿತ್ರ ಮಂಟಪಕೆ ಎಣಿಕಿಲ್ಲ ಕೋಲೆ
ಚಿತ್ರ ಮಂಟಪಕೆ ಎಣಿಕಿಲ್ಲ ಶಂಖಚಕ್ರ
ಒತ್ತಿಡಿದವು ಭಿತ್ತಿಲಿ ಕೋಲೆ ೨೫
ಬ್ರಹ್ಮಸೂತ್ರದ ವಜ್ರಕಂಬದಿ ಕುಳಿತಿಹ
ಬ್ರಹ್ಮಜ್ಞಪರಮ ಹಂಸವು ಕೋಲೆ
ಬ್ರಹ್ಮಜ್ಞ ಪರಮಹಂಸವು ಪುಣ್ಯಶ್ಲೋಕ
ಧರ್ಮಜ್ಞರಾಯ ಗಿಳಿವಿಂಡು ಕೋಲೆ೨೬
ಮ್ಯಾಗೆ ಮ್ಯಾಗೊಪ್ಪುವ ಸದ್ಗ್ರಂಥದುಪ್ಪರಿಗೇಲಿ
ಕೂಗುವ ಸಾಮಕೋಗಿಲೆ ಕೋಲೆ
ಕೂಗುವ ಸಾಮಕೋಗಿಲೆ ನವಿಲ್ಗಳು
ನಾಗಪಾಲಕಗೆ ಅತಿಪ್ರೀತಿ ಕೋಲೆ ೨೭
ಕಡುಭಕ್ತಿಪತಾಕೆ ಹರಿನಿಷ್ಠೆ ಕಳಸವು
ಕೊಡುವ ಅಭಯ ಛತ್ರ ಸಾಲ್ಗಳು ಕೋಲೆ
ಕೊಡುವ ಅಭಯ ಛತ್ರ ಸಾಲ್ಗಳು ಶ್ರೀ ತುಲಸಿ
ನಡುವೆ ಪ್ರಣತ ತೋರಣಗಳು ಕೋಲೆ ೨೮
ತಪವೆಂಬ ತಪಿತದರ ಮೈಸಿರಿಯ
ನೃಪ ಜಯರಾಯನೆಸೆದನು ಕೋಲೆ
ನೃಪಜಯರಾಯನೆಸೆದಾ ಸಿಂಹಾಸನದಿ
ಶಶಿ ತೇಜದಂತೆ ಹೊಳೆದನು ಕೋಲೆ ೨೯
ಆನೆಗಳೆಣಿಕಿಲ್ಲ ಕುದುರೆಯ ಗಣನ್ಯಿಲ್ಲ
ಕಾಲಾಳು ರಥಕೆ ಮಿತಿಯಿಲ್ಲ ಕೋಲೆ
ಕಾಲಾಳು ರಥಕೆ ಮಿತಿಯಿಲ್ಲ ಅನ್ಯೋಕ್ತಿ
ಜಾಣೆ ದಾಸೇರಿಗೆ ಕಡೆಯಿಲ್ಲ ಕೋಲೆ ೩೦
ಕುವಿದ್ಯಾರಣ್ಯವ ಸವರಿ ಬೇಟ್ಯಾಡಿದ
ಕೋವಿದ ನಮ್ಮ ಹಡೆದಪ್ಪ ಕೋಲೆ
ಕೋವಿದ ನಮ್ಮ ಹಡೆದಪ್ಪ ರಚಿಸಿದ
ದೇವವನಗಳ ವರ್ಣಿಪೆ ಕೋಲೆ ೩೧
ತತ್ವಪ್ರಕಾಶದ್ದಾಳಿಂಬೆ ಸುಧಾರಸ
ಬಿತ್ತಿದ ಕಬ್ಬಮೋಘ ಮಾವು ಕೋಲೆ
ಬಿತ್ತಿದ ಕಬ್ಬಮೋಘ ಮಾವು ಪದ್ಯಮಾಲೆ
ಉತ್ತತ್ತಿ ತೆಂಗು ಹಲಸನ್ನು ಕೋಲೆ ೩೨
ಹತ್ತು ಪ್ರಕರಣ ದಾಟಿತೆಂಬೊ ದ್ರಾಕ್ಷದ
ಸುತ್ತಿದ ಬಳ್ಳಿಮಂಟಪ ಕೋಲೆ
ಸುತ್ತಿದ ಬಳ್ಳಿಮಂಟಪದಿ ಶುದ್ಧ
ಮತ್ಯೌನ ಕೂಡಪ್ಪ ನಲಿದನು ಕೋಲೆ ೩೩
ದೇಶ ದೇಶದೊಳಿದ್ದ ದುರ್ವಾದಿ ಪೋಕರ
ಘಾಸಿಸಿ ಜಯಪತ್ರ ದ್ರವ್ಯವ ಕೋಲೆ
ಘಾಸಿಸಿ ಜಯಪತ್ರ ದ್ರವ್ಯವ ತಂದು ಮ
ಧ್ವೇಶಗರ್ಪಿಸಿದ ಮುದದಿಂದ ಕೋಲೆ೩೪
ಬಂಧು ಸುದರ್ಶನರಾಯರ ಒಡಗೂಡಿ
ಮಂದಿರದೊಳಗಾನಂದಿಪ ಕೋಲೆ
ಮಂದಿರದೊಳಗಾನಂದಿಪ ಶ್ರುತವೇಷ
ತಂದೆಯನೇನ ಹೊಗಳುವೆ ಕೋಲೆ ೩೫
ಇಪ್ಪತ್ತೈದು ತತ್ವ ನಾಣ್ಯದಿ ರಾಮನಾಮ
ಸುಪ್ಪಾಣಿ ಮುದ್ರೆ ನಡೆಸುವ ಕೋಲೆ
ಸುಪ್ಪಾಣಿ ಮುದ್ರೆ ನಡೆಸುವ ತನ್ನವರಿಗೆ
ತಪ್ತ ಮುದ್ರೆ ಕುರುಹಿಟ್ಟನು ಕೋಲೆ೩೬
ಭೇದಿಸಿ ನೋಡಿರೊ ಭೇದವ ತಿಳಿಯಿರೊ
ಮಾಧವ ಜೀವ ಜಡರೊಳು ಕೋಲೆ
ಮಾಧವ ಜೀವ ಜಡರೊಳು ಎನುತಲಿ
ಬೋಧಿಸಿದನು ಹಿತಮಾರ್ಗ ಕೋಲೆ ೩೭
ತನ್ನ ಹೊಂದಿದರಿಗೆ ಪ್ರೌಢವೃತ್ತಿಯನು ಶ್ರೀ
ಮನ್ನಾಮಾಮೃತವನುಣಿಸುವ ಕೋಲೆ ಶ್ರೀ
ಮನ್ನಾಮಾಮೃತವನುಣಿಸುವ ಹೊರೆವನು
ಉನ್ನತ ಮಹಿಮ ಜಯರಾಯ ಕೋಲೆ೩೮
ಆವಾಗ ಸೂತ್ರಾರ್ಥ ನಿಸ್ಸಾಳ ವ್ಯಾಖ್ಯಾನ
ತೀವಿದ ಶ್ರುತಿಯ ಕಹಳೆಯು ಕೋಲೆ
ತೀವಿದ ಶ್ರುತಿಯ ಕಹಳೆ ಧ್ವನಿಯುಂಟು
ಶ್ರೀವ್ಯಾಸ ರಾಮಾರ್ಚನೆಯುಂಟು ಕೋಲೆ ೩೯
ಅಚ್ಚ ಸಾತ್ವಿಕನಾದ ರಾಜಾಧಿರಾಜನ
ಹೆಚ್ಚಿನ ಸತಿ ಶುದ್ಧಮತಿಯಮ್ಮ ಕೋಲೆ
ಹೆಚ್ಚಿನ ಸತಿ ಶುದ್ಧ ಮತಿಯಮ್ಮ ನಮ್ಮಮ್ಮ
ನಿಚ್ಚ ನಮ್ಮನು ಹೊರೆವಳು ೪೦
ತಾಯಿ ತಂದೇರ ಹಾಡಿ ದಣಿಯದು ನಮ್ಮ ಮನ
ಭಯವು ಅದರಲ್ಲಿರುವುದು ಕೋಲೆ
ಭಯವು ಅದರಲ್ಲಿರುವುದು ಶುಭಗುಣ
ಬಾಯಿ ಮಾತಿಗೆ ತೀರವು ಕೋಲೆ ೪೧
ಬಂದೆವು ಬೀಗರ ಮನೆಗಿಂದೆ ಮುಯ್ಯವ
ತಂದೇವು ಬಾಲೇರೊಡಗೂಡಿ ಕೋಲೆ
ತಂದೇವು ಬಾಲೇರೊಡಗೂಡಿ ಬೀಗರ
ಅಂದವ ಹೇಳಲಳವಲ್ಲ ಕೋಲೆ ೪೨
ಬಹುಕಾಲದ್ಹಿರಿಯರು ಬಾಳಿದ ಮನೆಯಿದು
ವಿವರಿಸಿ ನೋಡಲರಿಯದೆ ಕೋಲೆ
ವಿವರಿಸಿ ನೋಡಲರಿಯದೆ ಕೆಡಿಸಿದರು
ಧವಳಾರವೆಲ್ಲ ಮಲಿನವು ಕೋಲೆ ೪೩
ಬೀಗರಿದ್ದ ಮನೆಯನೆತ್ತೆತ್ತ ನೋಡಲು
ಬಾಗಿಲು ಬಯಲು ಬರೆಹುಯಿಲು ಕೋಲೆ
ಬಾಗಿಲು ಬಯಲು ಬರೆಹುಯಿಲು ನಮ್ಮವರು
ಹ್ಯಾಗೆಂತು ಹೆಣ್ಣು ಕೇಳುವರು ಕೋಲೆ ೪೪
ಸಂಖ್ಯಾವಿದನೆಂಬಾತ ಮಾವನಾತನ ರಾಣಿ
ಬಿಂಕದ ಬೌದ್ಧದೇವ್ಯತ್ತಿ ಕೋಲೆ
ಬಿಂಕದ ಬೌದ್ಧದೇವ್ಯತ್ತಿ ಭಾಟ್ಟ ನಿ:
ಶಂಕ ಚಾರ್ವಾಕ ಭಾವ ಮೈದುನರು ಕೋಲೆ ೪೫
ಮಿಥ್ಯ ನಮ್ಮತ್ತಿಗೆ ಮಾಯೆ ನಮ್ಮ ನಾದಿನಿ
ಸುತ್ತಿನ ಬಳಗಕೆಣಿಕಿಲ್ಲ ಕೋಲೆ
ಸುತ್ತಿನ ಬಳಗಕೆಣಿಕಿಲ್ಲ ಕೆಣಕಿದರೆ
ಮತ್ತೇನಾದರು ಹುರುಳಿಲ್ಲ ಕೋಲೆ ೪೬
ಇಪ್ಪತ್ತೊಂದು ಮಂದಿ ಹೆಸರಾದವರ ಕೂಡ
ಬಹುಕಾಲ ಕಜ್ಜವು ನಮಗುಂಟು ಕೋಲೆ
ಬಹುಕಾಲ ಕಜ್ಜವು ನಮಗುಂಟು ಹಾಲಿಗೆ
ಹೆಪ್ಪನೆರೆದಂತೆ ಹಿತಮಾತು ಕೋಲೆ೪೭
ಅಂಗಳದೊಳು ಬಂದು ತಿಳಿದೇವು ಅತ್ತಿಗೇರ
ಶೃಂಗಾರಗರತಿ ಸಿರಿಯನು ಕೋಲೆ
ಶೃಂಗಾರಗರತಿ ಸಿರಿಯನು ಕಾಣುತ
ಹಿಂಗದೆ ನಿಂತು ನುಡಿಬೇಕು ಕೋಲೆ&

(ನು.೫) ನಾರದನಿದರ ವಿಚಾರ
೩೯೮
ಭೇರಿ ಬಾರಿಸುತಿದೆ ಭೂರಿ
ದ್ವಾರಕೆ ಅರಸನಾಗರ ದ್ವಾರದ ಮುಂದೆ
ಕ್ರೂರ ಖಳರ ಎದೆ ದಾರಿಸುವುದು ಯದು
ವೀರರ ಭೇರಿ ಮುರಾರಿಯ ಪಾಳೆಯ ಭೇರಿಪ.
ಅನಂತಾಸನವಿದೇ ಅನಾದಿ ಶ್ರೀವೈಕುಂಠ
ಅನಂತ ಶ್ವೇತ ದ್ವೀಪಸ್ಥಾನ
ಈ ನಂದನ ಸೂನು ಆನಂದಮಯ ಬ್ರಹ್ಮ
ಮೌನಿ ಸುರನಿಕರ ಧ್ಯಾನಗೋಚರನೆಂದು೧
ಬ್ರಹ್ಮ ರುದ್ರೇಂದ್ರಾದಿ ಸುಮ್ಮನಸರನಾಳ್ವ
ರಮ್ಮೆಯರಸ ಸರ್ವೋತ್ತಮ
ಧರ್ಮೋದ್ಧಾರ ಅಧರ್ಮಸಂಹರ ಪರ
ಬ್ರಹ್ಮ ವಾಸುದೇವ ಬ್ರಹ್ಮಣ್ಯದೇವನೆಂದು ೨
ಸೂತ್ರರಾಮಾಯಣ ಪವಿತ್ರೋಪನಿಷದ್ವೇದ
ಗೋತ್ರ ಭಾರತ ಪಂಚರಾತ್ರ
ಶಾಸ್ತ್ರೌಘ ಸನ್ಯಾಯಶಾಸ್ತ್ರ ಸ್ರ‍ಮತಿನಿಕರ
ಸ್ತೋತ್ರಕ ಯಜ್ಞ ಗೋಪೀ ಪುತ್ರ ಶ್ರೀಕೃಷ್ಣನೆಂದು೩
ಮಂಗಳಾನಂತ ಗುಣಂಗಳಬುಧಿ ತ್ರಿಗು
ಣಂಗಳಿಂದೆಂದಿಗಸಂಗ
ಗಂಗೆಯರ್ಚಿತ ಗಂಗಾನ್ವಿತಪದ
ತುಂಗ ವಿಕ್ರಮ ಯಜ್ಞಾಂಗಾಚ್ಯುತನೆಂದು ೪
ನೂರೆಂಟು ವೆಗ್ಗಳ ಹದಿನಾರು ಸಾವಿರ ದಿವ್ಯ
ನಾರಿಯರಾಳುವ ಶೌರಿ
ನಾರದನಿದರ ವಿಚಾರ ಮಾಡಲಿ ಬರೆ
ಮೂರುತಿ ಅನಂತ ತೋರಿ ಬೆರೆತರೆಂದು ೫
ಸೃಷ್ಟ್ಯಾದಿ ಕಾರಣ ಶಿಷ್ಟ ಸಂರಕ್ಷಣ
ದುಷ್ಟಮಥನ ಪೂರ್ಣ ತುಷ್ಟ
ಕಷ್ಟ ಜರಾಮೃತ್ಯು ನಷ್ಟಕರ ಏಕೌ
ವಿಷ್ಣು ವರಿಷ್ಠ ವಿಶಿಷ್ಠ ಸುಖದನೆಂದು ೬
ವೇದೋದ್ಧಾರ ಕ್ಷೀರೋದಧಿಮಥನ ಧ
ರಾಧರ ಹಿರಣ್ಯಕಸೂದನ
ಪಾದತ್ರಯ ಖಳಛೇದಕ ಯಶೋಧರ
ಮಾಧವ ಬುದ್ಧ ಕಲಿರೋಧ ಕಾರಣನೆಂದು ೭
ಪಾಂಡವ ಸ್ಥಾಪಕ ಲೆಂಡಕೌರವ ಹರ್ತ
ಗಾಂಡೀವಿ ಸಖ ಸುರಶೌಂಡ
ಚಂಡ ಚಂದ್ರ್ರಾನಂತಾಖಂಡ ಪ್ರಕಾಶಮತ
ಪೌಂಡ್ರಕ ಸಾಲ್ವಮತ ಖಂಡಾನಂತನೆಂದು ೮
ಧಾಂ ಧಾಂ ಧಿಮಿಕಿಟ ಧಾಂದಂದಳ ದಂದಳ ಧಿಮಿಕಿಟಧಾಂ
ತಾಂಧಿ ಮದಾಂಧರಿಗೆ ಅಂಧಂತಾಮರ ಸಧಾಂ
ಧೊಂದೊಂದೊಂತು ಪ್ರಸನ್ನವೆಂಕಟಮಂದಿರಾ
ನಂದ ನಿಲಯ ಭಕ್ತವತ್ಸಲನೆಂದು ೯

೪೩೪
ಮಂಗಳ ಅಂಜನ ಗಿರಿಪತಿಗೆ ಶುಭ
ಮಂಗಳವೆನ್ನಿ ಸಿರಿಪತಿಗೆ ಪ.
ಮಂಗಳ ಬಾಯೊಳು ಮಾತ ಕಚ್ಚಿದಗೆ
ಮಂಗಳ ಅವಯವ ಮುಚ್ಚಿದಗೆ
ಮಂಗಳ ಕೋರೇಲಿ ಪ್ರಿಯಳ ಹಚ್ಚಿದಗೆ
ಮಂಗಳ ನಖದ್ಯಸು ಬಿಚ್ಚಿದಗೆ ೧
ಮಂಗಳಡಿಯೊತ್ತಿ ಬಿಂಕವ ಸೆಳೆದಗೆ
ಮಂಗಳ ಭೂಗುರು ಕಳೆದಗೆ
ಮಂಗಳೆಗೋಸುಗ ಖಳರನಳಿದಗೆ
ಮಂಗಳಾಂಗಿಯರಂಬರ ಸೆಳೆದಗೆ ೨
ಮಂಗಳಾಂಗಕೆ ಉಡಿಗೆಯನೊಲ್ಲದಗೆ
ಮಂಗಳ ಶೀಲವ ಸೊಲ್ಲಿದಗೆ
ಮಂಗಳ ಪ್ರಸನ್ವೆಂಕಟೇಶ ಬಲ್ಲಿದಗೆ
ಮಂಗಳಮಯ ಕೈವಲ್ಯದಗೆ ೩

೪೩೫
ಮಂಗಳ ತ್ರಿವೆಂಗಳಪ್ಪ ಮಂಗಳಾಂಗ ರಂಗಗೆ ಶ್ರೀ
ಮಂಗಳೆಯ ಸಂಗಗೆ ಜಗಂಗಳಾಂತರಂಗಗೆ ಪ.
ಕಂಗಳಿಕ್ಕದಂಗೆ ನಿಖಿಳಾಂಗ ಕಪಟಂ(ಕಮಠಂ?)ಗೆ ಭೂ
ವೆಂಗಳರಸಂಗೆ ನರಸಿಂಗದೇವನಿಗೆ೧
ತಿಂಗಳೊಲಿದ್ದಗೆ ಖಳರ ಜಂಗುಳಿ ನಾದ್ದಂಗೆ ಕಲ್ಲ
ವೆಂಗಳ ಮಾಳ್ಪಂಗೆ ಚೆಲ್ವ ಪೊಂಗೊಳಲೂದುವಂಗೆ ೨
ತುಂಗ ಮೋಹನಗೆ ಸತುರಂಗವಾಹನಂಗೆ ವಿ
ಹಂಗಗೆ ಭುಜಂಗಶಯನ ಪ್ರಸನ್ನವೆಂಕಟಂಗೆ ೩

೪೩೬
ಮಂಗಳ ಮಂಗಳಾತ್ಮಕಗೆ ಮಂಗಳ ಮಂಗಳಾನನಗೆ
ಮಂಗಳ ಮಂಗಳದೇವಿಯರಸಗೆ ಪ.
ಮಿಸುನಿಯ ಹರಿವಾಣದಲ್ಲಿ ಹೊಸಮುತ್ತಿನಾರತಿ ನಿಲಿಸಿ
ಬಿಸಜಗಂಧಿಯರು ಶ್ರೀಹರಿಗೆ ಜಯವೆನ್ನಿ ೧
ಕುಂದಕುಟ್ಮಲರದನೆಯರು ಇಂದುಮಂಡಲವದನೆಯರು
ಸಿಂಧುಶಯನ ನಿತ್ಯನಿಗೆ ಜಯವೆನ್ನಿ ೨
ರಂಭಾಸ್ತಂಭೋರು ಅಂಬುಜಕುಚಯುಗಳೆಯರು
ಅಂಬುಜಶರಜನಕಗೆ ಜಯವೆನ್ನಿ ೩
ಪ್ರಾಗ್ಜೋತಿಷಧಿಪನರಿಗೆ ಪೂಗಣ್ಣಿಯ ಮನೋಹರಗೆ
ನಾಗ್ಗನ್ನೆಯರ ದೇವಗೆ ಜಯವೆನ್ನಿ ೪
ಸೌಂದರ್ಯಾತಿಶಯ ಪೂರಣಗೆ ಸೈಂಧವ ಹನನ ಕಾರಣಗೆ
ತಂದೆ ಪ್ರಸನ್ನವೆಂಕಟೇಶಗೆ ಜಯವೆನ್ನಿ ೫

೪೩೭
ಮಂಗಳ ಮಂದಿರಗೆ ಮಂಗಳ ಮುರಾರಿಗೆ
ಮಂಗಳ ತಿಮ್ಮಯ್ಯಗೆ ಜಯಮಂಗಳ ಪ.
ನೀಲಘನಕಾಯಗೆ ಶ್ರೀಲಕುಮಿ ಸಹಾಯಗೆ
ವ್ಯಾಳವರಶಾಯಿಗೆ ಭಾಳನೇತ್ರಧ್ಯೇಯಗೆ ೧
ದೀನ ಪರಿಶುದ್ಧಗೆ ದಾನವರನೊದ್ದಗೆ
ಆನಂದನಿರುದ್ಧಗೆ ಮಾನವ ಮೃಗೇಂದ್ರಗೆ ೨
ಶೇಷಗಿರಿವಾಸಗೆ ದಾಸಭಯನಾಶಗೆ
ತೋಷಪೂರ್ಣಹಾಸಗೆ ಪ್ರಸನ್ವೆಂಕಟೇಶಗೆ೩

೪೩೮
ಮಂಗಳ ಮಹಿಮಗೆ ನೀರಾಜ
ನಂಗಳ ಪೈಸರಿಸಿ ಭೃಂಗಾಳ
ಕಂಗಳೆಯರು ಸ್ಮಿತವದನಂಗಳೆಯರು ಶಿರಿ ತಿರು
ವೆಂಗಳಪತಿಗಾರತಿಯ ಬೆಳಗಿರೆ ಪ.
ಅಕ್ರಮದಲಿ ಶ್ರುತಿ ಕದ್ದೊಯ್ದವ
ನಾಕ್ರಂದಿಸಿ ಸೀಳಿದ ಶುಭ ಮ
ತ್ಸ್ಯಾಕೃತಗೆ ಜಗಗರ್ಭಾಕೃತಗೆ ಹತತಮ
ವ್ಯಾಕೃತಗಾರತಿಯ ಬೆಳಗಿರೆ ೧
ಇಂದಿರನೈಶ್ವರ್ಯವು ಮಕರದ
ಮಂದಿರ ಮಗ್ನಾಗಿರೆ ಗಿರಿಭೃತ
ಕಂಧರಗೆ ಕಚ್ಛಪ ಸುಂದರಗೆ ಕರುಣಾ
ಸಾಂದರಗಾರತಿಯ ಬೆಳಗಿರೆ ೨
ಪೊಂಗಣ್ಣಿನ ದಿತಿಜ ಕ್ಷಿತಿಯ
ಹಿಂಗದೆ ಬೈಚಿಡಲು ಕ್ರೋಡದಿ
ಭಂಗಿತಗೆ ವಸುಮತಿ ಸಂಗತಗೆ ದಿವಿಜರ
ಇಂಗಿತಗಾರತಿಯ ಬೆಳಗಿರೆ ೩
ದಾನವಗಂಜದೆ ಶಿಶು ವರಹರಿ
ನೀನೆ ಗತಿಯೆನೆ ಕಾಯ್ದ ಸು
ಜಾಣನಿಗೆ ನಿಜಜನಪ್ರಾಣನಿಗೆ ನರಪಂ
ಚಾನನಗಾರತಿಯ ಬೆಳಗಿರೆ ೪
ಧರ್ಮದಿ ಕೊಬ್ಬಿದ ಬಲಿಚಕ್ರನ
ಮರ್ಮದಿ ಜಡಿದ ವಿಚಿತ್ರ
ಕರ್ಮನಿಗೆ ಧೃತಮೃಗಚರ್ಮನಿಗೆ ಅಣುವಟು
ಶರ್ಮನಿಗಾರತಿಯ ಬೆಳಗಿರೆ ೫
ವೀರ ಕ್ಷತ್ರಿಯರ ಕುಲ ಸಂ
ಹಾರ ರೇಣುಕೆ ಕಂಠ ವಿ
ದಾರಿಗೆ ವಿತರಣ ಶೂರಗೆ ಘೋರ ಕು
ಠಾರಿಗಾರತಿಯ ಬೆಳಗಿರೆ ೬
ಮುನಿಮಖಪಾಲಕ ತ್ರಯಂಬಕ
ಧನುಹರ ಸೀತಾವರ ದಶಮುಖ
ಹನನಗೆ ಮತ್ತವನನುಜಪಗೆ ಅಂಜನಾ
ತನುಜಪಗಾರತಿಯ ಬೆಳಗಿರೆ ೭
ಪೊಂಗೊಳಲೂದುತ ಗೋಜಂಗುಳಿ
ಹೆಂಗೆಳೆಯರ ಮೋಹಿಪ ತಾವರೆ
ಗಂಗಳಗೆ ಸುಖದ ತರಂಗನಿಗೆ ಪಾಂಡವ
ಸಂಗನಿಗಾರತಿಯ ಬೆಳಗಿರೆ ೮
ನೀಚರ ಬಲವಳಿಯಲು ಸತ್ವರ
ಖೇಚರನಾರಿಯರ ವ್ರತಹೃತ
ಆಚರಗೆ ಜಿತ ಬೌದ್ಧಾಚರಗೆ ನಿಗಮವಿ
ಗೋಚರಗಾರತಿಯ ಬೆಳಗಿರೆ ೯
ಸಂಕರ ಕಲಿಯಂ ಮಥಿüಸಲು ತಾ
ಬಿಂಕದಿ ಹಯವೇರಿದ ಸದ್ಧ
ರ್ಮಾಂಕುರಗೆ ವರ್ಧಿಪ ಕಿಂಕರಗೆ ಪ್ರಸ
ನ್ವೆಂಕಟರೇಯಗಾರತಿಯ ಬೆಳಗಿರೆ ೧೦

೪೩೯
ಮಂಗಳ ಮಹಿಮೆಗೆ ಮಂಗಳ ಶುಭ
ಮಂಗಳದೇವಿಗೆ ಮಂಗಳ ಪ.
ನಾರಾಯಣನರ್ಧಾಂಗಿಗೆ ಮಂಗಳ
ನೂರಸುಖನ ತಾಯಿಗೆ ಮಂಗಳ
ಮೂರು ಅಂಬಕನಜ್ಜಿಗೆ ಮಂಗಳ
ಈರೇಳು ಲೋಕೇಶಳಿಗೆ ಮಂಗಳ ೧
ಅಗಣಿತ ಚಂದ್ರಾರ್ಕಾಭೆಗೆ ಮಂಗಳ
ನಗೆಮೊಗದರಸಿಗೆ ಮಂಗಳ
ಸುಗುಣಗಣಾನಂತಾಬ್ಧಿಗೆ ಮಂಗಳ
ಝಗಝಗಿಪಾಭರಣೆಗೆ ಮಂಗಳ ೨
ಬೇಡಿದ ಭಾಗ್ಯಪ್ರದಾತ್ರೆಗೆ ಮಂಗಳ
ನಾಡೊಳರ್ಚಕ ನಾಥೆಗೆ ಮಂಗಳ
ಪ್ರೌಢಜನೇಶ್ವರಿ ಪವಿತ್ರೆಗೆ ಮಂಗಳೆ
ಗೂಡಪ್ರಸನ್ವೆಂಕಟಗೆ ಮಂಗಳ ೩

೪೩೩
ಮಂಗಳಂ ಮಕರಕುಂಡಲ ಮಂಡಿತಾದವಗೆ ಪ.
ಮಂಗಳಂ ಮಾರಪಿತ ಮಾರಮಣಗೆ
ಮಂಗಳಂ ಮಿತ್ರಕೋಟಿ ಮಹಾಕಾಶಗೆ
ಮಂಗಳಂ ಪನ್ನಗಾಚಲನಿಲಯಗೆ ಜಯ
ಮಂಗಳಂ ಮತ್ತೆ ಶುಭಮಂಗಳಂ ಅ.ಪ.
ಕಣ್ಣನೋಟದಿ ಚೆಲುವ ಕಮಠರೂಪಾದವಗೆ
ಹೆಣ್ಣ ನೆಗಪಿದ ಹಿರಣ್ಯಕ ಮರ್ದಗೆ
ಚಿನ್ನವಟು ಭಾಗ್ರ್ವಾಂಧಚರಹರ ಗೋವ್ರಜಚರಗೆ
ಕನ್ನೆಯರ ವ್ರತಗೇಡಿ ಕಲಿಮಥನಗೆ ೧
ನೀರಚರ ನಗಧರ ಕನಕನೇತ್ರನೊರಸಿದಗೆ
ಕ್ರೂರವದನಾಂಕಿತ ಕುಬುಜ ವಿಪ್ರಗೆ
ವೀರಕುನೃಪಾರಿ ರಘು ವಿಜಯ ಸಖನಾದವಗೆ
ಚಾರುಮೋಹನ ಚಟುಲ ಹಯರೂಢಗೆ ೨
ಆಗಮೋದ್ಧರ ಕಚ್ಛಪ ಅವನಿಧರ ಹರಿಮೊಗಗೆ
ತ್ಯಾಗ ಬೇಡಿದ ತಾಯಿ ತಲೆಗಡಿದಗೆ
ಯಾಗಪಾಲಹಿಮರ್ದ ಯೋಗೇಶಜೋದ್ಧರಗೆ
ನಾಗಾದ್ರಿ ಪ್ರಸನ್ವೆಂಕಟನಾಥಗೆ೩

೨೬೫
ಮಂಗಳಾನನ ರಂಗ ಕರುಣಾ
ಪಾಂಗವೆಂಬ ಪತಂಗದಿಂದಘ
ತುಂಗ ತಿಮಿರವಿಭಂಗ ಭಕ್ತರ ಇಂಗಿತವನೀವುದು ಪ.
ಮಾರನ ಮನೋಹರ ಮದ ಅಂಧ
ಕಾರ ಕವಿಯಲು ಕ್ರೂರವಿಷಯವಿ
ಕಾರ ಭವವೆಂಬಪಾರಾಂಬುಧಿಯೊಳು ದಾರಿದೊಡಕಿದೆ ನಾ
ಆರೆ ನಾರದ ತಾತ ಕರುಣಾಳು
ತೋರಿ ನಿನ್ನಯ ಚಾರು ಮೂರುತಿಯ
ಘೋರ ಕಲುಷವಿದೂರ ಮಾಡು ಮಂದರಧರ ಮುಕುಂದ೧
ಪ್ರಿಯ ಮನಮುನಿಗೇಹ ಮಲೆತ ಇಂ
ದ್ರಿಯಗಳಿಗೆ ಸಹಾಯವಾಗಿದೆ
ಹೇಯವಿಲ್ಲದ ನಾಯಿಮನವೆನ್ನ ನೋಯನೋಯಿಸುತಿದೆ
ಕಾಯಬೇಕೆಲೆ ಜೀಯ ಕರಿಮಕ
ರಿಯ ಬಾಧೆಗೆ ಬಾಯಿ ತೆರೆಯೆ ಪೊ
ರೆಯಬೇಕೆಂದು ಕೆಲದೆ ಎಸೆದಿರಲು ತಾಯಿಪಿತನಾರೆಂದು೨
ಮನ್ಮಥಪಿತ ಚಿನ್ಮಯಾತ್ಮಕ
ಮುನ್ನ ಸಂಚಿತ ಘನ್ನಕರ್ಮವು
ಬೆನ್ನ ಬಿಡದು ದುರ್ಜನ್ನ ಸಂಗದಿ ಖಿನ್ನನಾದೆ ನಾ
ಉನ್ನತ ಗುಣಪೂರ್ಣ ಎಂದೆಂದು
ನಿನ್ನ ದಾಸರನ್ನು ಕೂಡಿಸು
ಪನ್ನಗಾದ್ರಿ ಪ್ರಸನ್ನವೆಂಕಟರನ್ನ ಜಗಜೀವನ್ನ ೩

೪೪೦
ಮಂಗಳಾರತಿಯ ತಂದೆತ್ತಿರೆ ಹೇ
ಮಾಂಗನೆಯರು ವೆಂಕಟಪತಿಗೆ ಪ.
ಪೊಂಗಿಂಡಿಯುದಕ ಕಂಗಳಿಗೊತ್ತಿ ಪೊಸಬಗೆ
ರಂಗು ಮಾಣಿಕದಕ್ಷತೆಯನಿಟ್ಟು
ಪೊಂಗಂಕಣ ಪೊಳೆವಿನ ಪ್ರಭೆಯಲಿ ಮರಿ
ಭೃಂಗಕುಂತಳೆಯರೆಡಬಲದಿ ೧
ಅನುದಿನ ಮಂಗಳ ಮನಸಿಜನಯ್ಯಗೆ
ವನಮಾಲಿ ಕೌಸ್ತುಭಹಾರನಿಗೆ
ಘನ ಮಹಿಮೆಯ ಜಗ(ದ?)ವರಿಗೆ ತೋರುವನಿಗೆ
ಮುನಿ ಸನಕಾದಿ ವಂದಿತ ಪಾದಗೆ ೨
ವಿಕ್ರಮಕೆ ಎದುರಾರಿಲ್ಲವೆಂದು ಬಲಿ
ಚಕ್ರನು ಸುರರ ಬಾಧಿಸುತಿರಲು
ಶಕ್ರನ ಪೊರೆದವನುಕ್ಕ ತಗ್ಗಿಸಿ ತ್ರಿ
ವಿಕ್ರಮನೆನಿಸಿದ ದೇವನಿಗೆ ೩
ವ್ರಜದ ಗೋಪಾಂಗನೆಯರ ಮನೋಹರಗೆ
ಭುಜಗಶಾಯಿ ಭಕ್ತ ಭಯದೂರಗೆ
ನಿಜ ಭಕ್ತ ಪಾರ್ಥರ ಪಥಿಕರಿಸಿದವನಿಗೆ
ಗಜವನುದ್ಧರಿಸಿದ ದನುಜಾರಿಗೆ ೪
ಕಡುಮೂರ್ಖ ಸೀತಾಕೃತಿಯನೊಯ್ದಸುರನ
ಬಿಡದೆ ಮರ್ದಿಸಿದ ಶ್ರೀ ರಘುಪತಿಗೆ
ಸಡಗರದಲಿ ಶೇಷಾದ್ರಿಲಿ ನಿಂತ ಎ
ನ್ನೊಡೆಯ ಪ್ರಸನ್ನವೆಂಕಟಪತಿಗೆ ೫