Categories
ರಚನೆಗಳು

ಪ್ರಸನ್ನವೆಂಕಟದಾಸರು

೩೫೮
ಸೊಡ್ಡು ಡಂಬಕ ಅವನಿಭಾರಂಗೆ ಸೊಡ್ಡು
ಸೊಡ್ಡು ಭಕುತಿಹೀನ ಹೆಡ್ಡಂಗೆ ಸೊಡ್ಡು ಪ.
ಶುದ್ಧ ಸಾತ್ವಿಕ ಗುರು ಮಧ್ವಮತವ ಬಿಟ್ಟು
ಬದ್ದಡ್ಡ ದಾರಿಯವಿಡಿದಗೆ ಸೊಡ್ಡು
ಮದ್ಯಘಟಕೆ ಮನವಿಟ್ಟು ಪೀಯೂಷವ
ನೊದ್ದು ಕಳೆದ ಹೊಲೆ ಮಾನಿಸಗೆ ಸೊಡ್ಡು ೧
ಜಗದೆರೆಯನ ಜಗದಾಕಾರ ಸಟೆಯೆಂದು
ಬಗುಳ್ವ ಬಾಯೊಳು ಹೊಡೆ ಮಗುಳೆ ಸೊಡ್ಡು
ಅಘಹರನಾಳಿಗಾಳಾಗಿ ದೊರೆಯೆ ತಾನೆಂ
ಬಗೆ ನಗೆಗೇಡಿನಾ ಮಾತೆ ಸೊಡ್ಡು ೨
ಶ್ರುತಿ ಸ್ರ‍ಮತಿಗಳವಡದನಂತಗುಣಗೆ ದು
ರ್ಮತಿಯಲ್ಲಿ ನಿರ್ಗುಣೆಂದವಗೆ ಸೊಡ್ಡು
ರತಿಪತಿಪಿತನಲ್ಲದನ್ಯ ಸರ್ವೋತ್ತ
ಮತ್ವಕೆ ನಿರಯದಂಧತಮದ ಸೊಡ್ಡು ೩
ಹರಿಗೆ ಮನು ಭವ ವಿಧಿಯೆಂದೊಕ್ಕಣಿಪಗೆ
ಚಿರಕ್ಲೇಶ ಭವಯಾತ್ರೆಲಂಜು ಸೊಡ್ಡು
ಒರೆದೊರೆದಖಿಳಾಗಮಾರ್ಥವ ತಿಳಿದೇನು
ಹರಿಯೊಪ್ಪದಾ ನರಖರನಿಗೆ ಸೊಡ್ಡು ೪
ಪರಮ ಭಾಗವತರಾಚರಣೆಗೆ ಅಸೂಯಕ್ಕ
ವರ ಗ್ರಂಥಚೋರಗೆ ಶಿರದಿ ಸೊಡ್ಡು
ಸಿರಿಪತಿ ಪ್ರಸನ್ವೆಂಕಟೇಶನ ಭಟರ ಕಂ
ಡ್ಹರುಷಲ್ಲದವಗೆ ಮೂಗಲಿ ಸುಣ್ಣ ಸೊಡ್ಡು ೫

೩೫೯
ಸ್ಥಿರವಲ್ಲೀ ಕಾಯ ಸ್ಥಿರವಲ್ಲ ಹೀ
ಗರಿವಿದ್ದು ಹರಿಪಾದ ಮರೆವರೆ ಪ್ರಾಣಿ ಪ.
ಅಟ್ಟಡಿಗೆ ಎರವು ಉಟ್ಟುಡುಗೆ ಎರವು
ಇಟ್ಟರೆ ಸಂತತಿ ಸಿರಿ ಎರವು
ಕಟ್ಟೊಡೆದು ಬೆಮರಿಡಿಸಿ ಜವನವರೊಯ್ಯೆ
ಇಟ್ಟಿರುವ ಧಾನ್ಯ ಧನವೆಲ್ಲೊ ಪ್ರಾಣಿ ೧
ಕೃಪಣತೆಯೊಳಗಿನ ನಿಪುಣತೆ ಬಾರದು
ಸ್ವಪನ ಸುಖ ಭೋಗಕೆ ಬಾರದು
ವಿಪಿನದಹನ ಮೃಗದಂತಾಪ್ತರು ಬರರು
ನೃಪನಾರಾಧನೆ ಫಲವು ಸ್ಥಿರವೆಲೊ ಪ್ರಾಣಿ ೨
ಹರಿಕೊಟ್ಟಾಗಲೆ ಧರ್ಮ ದೊರಕಿಸಬೇಕು
ಸರಕಿದ್ದು ತಿರುಕಬುದ್ಧಿಯನು ಬಿಡು
ಅರಿವುಳ್ಳವರ ಕೂಡಿ ಕೋಟೆ ಜತನ ಮಾಡು
ಮರುಗಲಿ ಬೇಡ ಮುತ್ತಿಗೆ ಬಂತು ಪ್ರಾಣಿ೩
ಹವಳ ಮುತ್ತಿನಂಥ ಅವಳಿ ಮಕ್ಕಳ ನಂಬಿ
ಕುವಲಯೇಶನ ಪ್ರಿಯಕುಲೇಶನ ಪುರದ
ಲವಲವಿಕೆಯಲಿ ನಿರಯವಾರ್ತೆ ಜರೆವರೆ ತ
ನ್ನವಳೆ ತನಗೆ ಓಕರಿಸುವಳೊ ಪ್ರಾಣಿ೪
ಫಣಿತಲ್ಪಗೊಪ್ಪಿಸಿ ಹಣ ತೃಣ ಮಾಡದ
ಹೆಣ ತನ್ನ ತಾನೆ ಹೊಗಳಿಕೊಂಡರೆ
ಎನಿತುಕಾಲಕೆ ಮೆಚ್ಚ ಪ್ರಸನ್ವೆಂಕಟಪತಿ
ಘನ ತಪ್ಪ ಕಾಯೆ ತನ್ನವರನು ಪ್ರಾಣಿ೫

(ನು. ೨) ಇಬ್ಬರ ಮೂರು ಸಾರೆಲಳಿದ
೪೧೪
ಸ್ಮರಿಸು ಮನವೆ ಸ್ಮರಿಸು ಸ್ಮರನ ಪಿತನ
ದುರಿತ ಭವಭಯಸಮೂಹದೂರಮಾವರನ ಪ.
ಒಬ್ಬ ಬಾಲನಯ್ಯನ ಒದೆದ
ಒಬ್ಬ ಬಾಲಗಟವಿಲೊಲಿದ
ಒಬ್ಬ ಬಾಲನ ಅಪ್ಪಿ ರಾಜ್ಯವ ಒಬ್ಬ ಬಾಲಗಿತ್ತು
ಒಬ್ಬ ಬಾಲೆಯುಂಗುಟದಿ ಪೆತ್ತ
ಒಬ್ಬ ಬಾಲೆಯುಂಗುಟದಿ ಪೊತ್ತ
ಒಬ್ಬ ಬಾಲೆಗಕ್ಷಯ್ಯೆಂದು ಕುಕ್ಷಿಲೊಬ್ಬ ಬಾಲಪನ೧
ಇಬ್ಬರ ಮೂರುಸಾರೆಲಳಿದ
ಇಬ್ಬರಿಹ ಭೂಜವ ಮುರಿದ
ಇಬ್ಬರೊಗ್ಗೂಡಿ ಬೆಳೆದು ಹನ್ನಿಬ್ಬರ ಬಡಿದ
ಇಬ್ಬರ ಕಾರಾಗಾರ ತಗಿದ
ಇಬ್ಬರುಪ್ಪು ಬೇಡಲಿ ಸದೆದ
ಇಬ್ಬರಿಂದೈದಿ ಹೋಳಮಯ್ಯನ ನಿಬ್ಬರಿಸಿದನ ೨
ಮೂರು ಮನೆಯೊಳಗಿಹನ
ಮೂರುಮಾತಿಗೆ ಹೊಂದದವನ
ಮೂರು ಮೈಯನ ಕೃತ ಸೇವೆಗೆ ಮೂರು ರೂಪಾದನ
ಮೂರು ಪೊಳಲ ಹಗೆಕಾರನ
ಮೂರುವೆಂಬನುರುಹಿದನ
ಮೂರಾಂತಕ ಪ್ರಸನ್ವೆಂಕಟ ಮೂರು ಲೋಕೇಶನ ೩

೧೪೭
ಸ್ವಾಮಿ ನರಸಿಂಹ ಶರಣು
ಶ್ರೀಮಹಾ ಅಹೋಬಲನಿಲಯ ದೇವ ಶರಣು ಪ.
ಭವನಾಶಿನಿಯ ಕೂಲಭವನ ಭಟಪ್ರತಿಪಾಲ
ಭವಸಹಸ್ರಾಂಬಕರ ಭಯವಿದೂರ
ಭುವನಕದ್ಭುತ ಗಾತ್ರ ಭಜಕಜನತಾಪತ್ರ
ಭವಕರ್ದಮ ಶೋಷ ಬುಧರ ಪರಿತೋಷ ೧
ಅಣುರೇಣು ತೃಣ ವ್ಯಾಪ್ತ ಅಖಿಳರೊಳು ನಿರ್ಲಿಪ್ತ
ದನುಜ ಹಿರಣ್ಯಕಹರ್ತ ದೀನನಾಥ
ಕನಕಜಠರನ ಜನಕ ಕರುಣಾಂಕ ಕ್ರೂರಮುಖ
ಪುನೀತ ಶುಭಚಾರಿತ್ರ ಪ್ರಹ್ಲಾದಮಿತ್ರ ೨
ಪದುಮದೇವಿಯ ರಮಣ ಪ್ರದ್ವಿಷಾನ್ವಯದ ಮನ
ಮುದ ಶಾಂತ ಪರಿಪೂರ್ಣಮೂರ್ತಿ ಪುಣ್ಯ
ಪ್ರದನಾಮ ನವರೂಪ ಪತಂಗಾನಂತಪ್ರದೀಪ ನಿನ್ನ
ಪದವೆ ಗತಿ ಹೊರೆಯೆನ್ನ ಪ್ರಸನ್ವೆಂಕಟರನ್ನ೩

೧೮೮
ಸ್ವಾಮಿ ಸತ್ಯಾಧಿರಾಜ ಮುನಿಗೆಣೆಗಾಣೆ ನಾ
ಭೂಮಿಯ ಮೇಲೆ ಚತುರನ
ಸಾಮಥ್ರ್ಯ ನೋಡಿರಿ ಭಕುತಿಯನರಿಯದ
ಪಾಮರನನು ಬಾಗಿಸುವನ ಪ.
ಗುರು ಸತ್ಯಾಭಿನವರಾಯನ ಪಟ್ಟದಾನೆಯು
ಧರೆಯ ಮೇಲೋಡಾಡುವಂತೆ
ಚರಿಸುತ ಖಳರನಂಜಿಸಿ ತಪ್ಪ ಕೈಕೊಂಡು
ಗುರುಪಾದಕೊಪ್ಪಿಸಿ ನಿಂತ ೧
ಕಲ್ಲು ಕರಗುವುದು ಕೆಚ್ಚು ಮಣಿವುದು ಇ
ದೆಲ್ಲಿಯ ಗಾದೆಯೆಂದೆನಲು
ಕಲ್ಲೆದೆ ಮಾನಿಸರ ದ್ರವಿಸುವ ಕೆಚ್ಚೆದೆ
ಕ್ಷುಲ್ಲರ ಮಣಿಸುವ ಕೇಳಿ ೨
ಆಲಸ್ಯವೆ ಮೋಕ್ಷೋಪಾಯ ದಹನೆಂದು
ಕಾಲವ ಕಳೆಯನು ವ್ಯರ್ಥ
ಮೂಲ ರಘುಪತಿ ಪಾದಾರವಿಂದವ ಮೇಲೆ
ಮೇಲರ್ಚಿಪ ಸಮರ್ಥ ೩
ಜ್ಞಾನ ಭಕುತಿ ವೈರಾಗ್ಯ ಪ್ರಣವ ಜಪ
ಧ್ಯಾನ ಮೌನ ಪರಿಪೂರ್ಣ
ಆನಂದತೀರ್ಥ ಶಾಸ್ತ್ರಾಂಬುಧಿ ತಿಮಿಂಗಿಲ
ದೀನರ ಸುರತರು ಜಾಣ ೪
ತಂದೆ ಸತ್ಯಾಭಿನವ ತೀರ್ಥ ಕರಜಾತ
ಎಂದೆಂದು ಸುಜನರ ಪ್ರಿಯ
ಇಂದಿರೆರಮಣ ಪ್ರಸನ್ವೆಂಕಟೇಶನ
ಹೊಂದಿದ ಸದ್ಗುಣ ಗೇಹ ೫

೧೪೮
ಸ್ವಾಮಿಪುಷ್ಕರ ತೀರ ನಿಲಯ ನಮೋ
ಸ್ವಾಮಿವರಾಹ ವೆಂಕಟನಾಯಕ
ಸ್ವಾಮಿ ಪಾಹಿ ಪಾಹಿ ಸ್ವಾಮಿ ತ್ರಾಹಿ
ಸ್ವಾಮಿ ವರಾಹವೆಂಕಟನಾಯಕ ಪ.
ಯಜ್ಞಗಾತ್ರ ವಿಧಿನುತ ಪ್ರಭು ಶ್ರೀ
ಯಜ್ಞ ವರಾಹ ವೆಂಕಟನಾಯಕ
ಯಜ್ಞ ಭೋಕ್ರ‍ತ ಹೇಮಾಂಬಕ ಹರ
ಯಜ್ಞ ವರಾಹ ವೆಂಕಟನಾಯಕ ೧
ಭೂಭಯದೂರ ಧರಾಮನೋಹರ
ಭೂವರಾಹ ವೆಂಕಟನಾಯಕ
ಶೋಭಿತ ಬಾಲಚಂದ್ರೋಪಮ ಕ್ರೋಡ
ಭೂವರಾಹ ವೆಂಕಟನಾಯಕ ೨
ಶ್ವೇತಾದ್ರೀಶಾರ್ಚಿತ ಪಾದಕಮಲ
ಶ್ವೇತವರಾಹ ವೆಂಕಟನಾಯಕ
ಪಾತಕ ಮೋಚಕ ಪ್ರಸನ್ವೆಂಕಟ
ಶ್ವೇತವರಾಹ ವೆಂಕಟನಾಯಕ ೩

ಸತ್ರಾಜಿತನ ಮಗಳು
೩೧
ಹಕ್ಕಿಯ ಹೆಗಲೇರಿ ಬಂದವಗೆ ನೋ
ಡಕ್ಕ ಮನಸೋತೆ ನಾನವಗೆ ಪ.
ಸತ್ರಾಜಿತನ ಮಗಳೆತ್ತಿದ ಉ
ನ್ಮತ್ತ ನರಕನೊಳು ಕಾದಿದ
ಮತ್ತೆ ಕೆಡಹಿದ ಅವನಂಗವ
ಸತಿಗಿತ್ತನು ಆಲಿಂಗನವ ೧
ಹದಿನಾರು ಸಾವಿರ ನಾರಿಯರ ಸೆರೆ
ಮುದದಿಂದ ಬಿಡಿಸಿ ಮಾ ಮನೋಹರ
ಅದಿತಿಯ ಕುಂಡಲ ತಳೆದಾ ಹರ
ವಿಧಿ ಸುರ ನೃಪರನು ಸಲಹಿದ ೨
ಉತ್ತಮ ಪ್ರಾಗ್ಜೋತಿಷ ಪುರವ ಭಗ
ದತ್ತಗೆ ಕೊಟ್ಟ ವರಾಭಯವ
ಕರ್ತ ಕೃಷ್ಣಯ್ಯನ ನಂಬಿದೆ ಶ್ರೀ
ಮೂರ್ತಿಯ ಪಾದವ ಹೊಂದಿದೆ ೩
ನರಕ ಚತುರ್ದಶಿ ಪರ್ವವ ಹರಿ
ಹರುಷದಿ ಪ್ರಕಟಿಸಿದನು ದೇವ
ಶರಣಾಗತಜನ ವತ್ಸಲ ರಂಗ
ಪರಮ ಭಾಗವತರ ಪ್ರತಿಪಾಲ ೪
ಹೊಗಳಿ ಕೃಷ್ಣಯ್ಯನ ಮಹಿಮೆಯ ಮುಕ್ತಿ
ನಗರದ ಅರಸನ ಕೀರ್ತಿಯ
ಜಗದೀಶ ಪ್ರಸನ್ವೆಂಕಟೇಶನೆ ಭಕ್ತ
ರಘಹಾರಿ ರವಿಕೋಟಿಕಾಶನೆ ೫

(ನು.೩) ಮಣಿಮಂತನ ಮುರಿದನು
೪೧೫
ಹನುಮ ನಮ್ಮ ಕಾಮಧೇನು ಭೀಮ ನಮ್ಮ ಕಲ್ಪವೃಕ್ಷ
ಆನಂದತೀರ್ಥಗುರು ಚಿಂತಾಮಣಿ ಪ.
ಸೂತ್ರರಾಮಾಯಣ ಮಹಾವ್ಯಾಕರ್ಣ ಪಂಚ
ರಾತ್ರ ಭಾರತಪುರಾಣ ಶ್ರುತ್ಯರ್ಥ ಸುಧಾರಸವಾ
ವೇತ್ರ‍ತಜನಕಾ ಸಂತತ ಕಿಂಪುರುಷ ವರುಷದಿ ಉಣ
ಲಿತ್ತನಾ ಸುಸ್ವರದಿ ಶ್ರೀರಾಮಪ್ರಿಯನು ೧
ರಾಜಸೂಯ ಮೂಲದಿಂದ ಶಾಖೋಪಶಾಖ ಸಧರ್ಮ
ಸೋಜಿಗದ ಕರ್ಮಕುಸುಮ ಬ್ರಹ್ಮತ್ವಛಲದಿ
ರಾಜಿಸುತ್ತ ಸಹಸ್ರಾಕ್ಷ ಸಖಮುಖ್ಯದ್ವಿಜರ್ಗೆ ಸುಖ
ಬೀಜ ನಿಂತು ಹೊರೆದನು ಶ್ರೀಕೃಷ್ಣ ಪ್ರಿಯನು ೨
ಹಂತ ಭಾಷ್ಯಧ್ವಾಂತದಿ ವೇದಾಂತವಡಗೆ ಪೋಕ ಮಣಿ
ಮಂತನ ಮುರಿದನು ಮೂವತ್ತೆರಡು ಲಕ್ಷಣದಿ
ಕಾಂತಿಯಿಂದ ಪ್ರಸನ್ನವೆಂಕಟ ಕಾಂತನ್ನ ಪ್ರಕಾಶಿಸಿದ
ಚಿಂತಿತಾರ್ಥ ನಮಗೀವ ಶ್ರೀವ್ಯಾಸಪ್ರಿಯನು ವೇದವ್ಯಾಸಪ್ರಿಯನು ೩

೪೧೬
ಹನುಮ ನಮ್ಮ ತಾಯಿ ತಂದೆ
ಭೀಮ ನಮ್ಮ ಬಂಧು ಬಳಗ
ಆನಂದತೀರ್ಥರೆ ನಮ್ಮ ಗತಿಗೋತ್ರರು ಪ.
ತಾಯಿ ತಂದೆ ಹಸುಳೆಗಳಿಗೆ ರ
ಸಾಯನುಣಿಸಿ ಸಾಕುವಂತೆ
ಆಯಾಸವಿಲ್ಲದೆ ಸಂಜೀವನವ ತಂದು
ಗಾಯಗೊಂಡ ಕಪಿಗಣವ
ಪ್ರಿಯದಿಂದ ಪೊರೆದ ರಘು
ರಾಯನಂಘ್ರಿಗಳೆ ಸಾಕ್ಷಿ ತ್ರೇತಾಯುಗದಿ೧
ಬಂಧು ಬಳಗದಂತೆ ಆಪ
ದ್ಬಾಂಧವನಾಗಿ ಪಾರ್ಥರಿಗೆ
ಬಂದ ಬಂದ ದುರಿತಗಳ ಪರಿಹರಿಸಿ
ಅಂಧಕ ಜಾತರ ಕೊಂದು
ಅಂದೆ ಕೃಷ್ಣಾರ್ಪಣವೆಂದಾ ಯದುಕು
ಲೇಂದ್ರನಂಘ್ರಿಗಳೆ ಸಾಕ್ಷಿ ದ್ವಾಪರಾಂತ್ಯದಿ೨
ಗತಿಗೋತ್ರರಂತೆ ಸಾಧು
ತತಿಗಳಿಗೆ ಸುಜ್ಞಾನವಿತ್ತು
ಮತಿಗೆಟ್ಟ ಇಪ್ಪತ್ತೊಂದು ಕುಭಾಷ್ಯಂಗಳ
ಗತಿಗೆಡಿಸಿ ವೈಷ್ಣವರಿಗೆ ಸ
ದ್ಗತಿಯ ತೋರಿದ ಪ್ರಸನ್ವೆಂಕಟ
ಪತಿ ವ್ಯಾಸಾಂಘ್ರಿಗಳೆ ಸಾಕ್ಷಿ ಕಲಿಯುಗದಿ * ೩

(ನು. ೨) ತಾರಕಹರಪಿತ
೧೬೧
ಹರಹರ ಪುರಹರ ಗಿರಿಜಾಮನೋಹರ
ಸುರವರ ಕರುಣಾಕರನೆ ನಮೋ ನಮೋ
ಶರಣರ ಸುರತರು ವರ ಪಂಪಾಪತಿ
ವಿರೂಪಾಂಬಕ ಹೊರೆ ಶುಭದಿ ಪ.
ಮದನಮಥನ ಪಂಚವದನ ಕೈಲಾಸದ
ಸದನ ಸದಾಶಿವ ನಮೋ ನಮೋ
ಹದಿನಾಲ್ಕು ಭುವನದ ಹದನ ಬಲ್ಲರಿಜಿತ
ಕದನ ಕಲುಷಹರ ನಮೋ ನಮೋ ೧
ತಾರಕಪತಿಧರ ಭೂರಿಕೃಪಾಂಬುಧಿ
ತಾರಕಹರಪಿತ ಜಯ ಜಯ
ತಾರಕ ಉಪದೇಶಕಾರಕ ಘನಭವ
ತಾರಕ ಮೃತ್ಯುಂಜಯ ಜಯ ೨
ಶೇಷಾಭರಣ ವಿಭೂಷಾಭವ ವಿ
ಶೇಷ ಭಕುತಪ್ರಿಯ ವಿಭೋ ವಿಭೋ
ಶೇಷಭೂಭೃತ್ ಪೋಷ ಪ್ರಸನ್ವೆಂಕ
ಟೇಶ ಭಜನಶೀಲ ವಿಭೋ ವಿಭೋ ೩

೧೪೯
ಹರಿ ನೀ ಪಿಡಿದ ಕಲ್ಲವೆ ರತುನ
ಹರಿ ನಿನ್ನಡಿಗಲ್ಲದವನೆ ಯವನ ಪ.
ಹರಿ ನೀನೊಲಿದ ಕಪಿರಾಜ ವಿಧಿಯು
ಹರಿ ನೀನೊಲಿಯದಿರೆ ಕಪಿಗೆ ವಧೆಯು
ಹರಿ ನೀ ಗೆಲಿಸೆ ಪಾರ್ಥನಿಗೆ ಗೆಲುವು
ಹರಿ ನಿನ್ನ ಛಲದಿ ಕೌರವರಿಗಳಿವು ೧
ಹರಿ ನೀ ಮೆಚ್ಚಿದರ್ಭಕರಾರ್ಯರು
ಹರಿ ನೀ ಮೆಚ್ಚದಾರ್ಯರೆ ಕಿರಿಯರು
ಹರಿ ನಿನ್ನುಚ್ಚರಿಪರು ಮಾನ್ಯರು
ಹರಿ ನಿನ್ನೆಚ್ಚರಿಲ್ಲದ ಜನರ್ಹುಚ್ಚರು ೨
ಹರಿ ನೀ ಕನಕಗಿರಿಗಣುಕಲ್ಲೆನಿಪೆ
ಹರಿ ನೀ ತೃಣವೆಟ್ಟ ಮಾಡುತಲಿಪ್ಪೆ
ಹರಿ ನೀ ಘನಕೆ ಘನತರ ಮಹಿಮ
ಹರಿ ನೀ ಪ್ರಸನ್ವೆಂಕಟಪ ಹೊರೆಯೆಮ್ಮ ೩

(ನು. ೨) ಮಣಿಮಂತ
೪೨೦
ಹರಿ ಪದಾಚ್ಛಿನ್ನ ಭಕ್ತ ಹರಿಕಾರ್ಯಕ್ಕಾಸಕ್ತ
ಮರುತಾಂಶನು ನಮ್ಮ ಗುರುರಾಯನು ಪ.
ಇಂದುಮುಖಿ ಸೀತೆಯಾಕೃತಿಯ ರಕ್ಕಸನೊಯ್ಯೆ
ಸಿಂಧು ಲಂಘಿಸಿ ಅವನ ವನವ ಕಿತ್ತು
ಬಂದ ಅಕ್ಷನನು ಮಡುಹಿಟ್ಟು ಬೇಗದಿ
ಬಂದು ರಾಮನ ಪದಕೆರಗಿದ ಹನುಮ ೧
ಮಣಿಮಂತ ಕೀಚಕ ಬಕ ಬಲ್ಲಿದಸುರರ
ತತಿಗಳ ಶಿರಗಳ ಸವರಿ
ವನಜಾಕ್ಷಿ ಸತಿಯಳ ಸಭೆಯೊಳು ಎಳೆಯೆ ದುಶ್ಯಾ
ಸನನ ಕರುಳು ಕೆಡಹಿ ಸೀಳಿದ ಭೀಮಸೇನ ೨
ಆತ್ಮನಾರಾಯಣ ಭೇದವಿರೆ ಒಂ
ದೆಂದು ಮಾಯಿಗಳೊದರೆ ಜಿಹ್ವೆ ಬಿಗಿಸಿ
ಆತ್ಮ ವೈಷ್ಣವರಿಗೆ ಭೇದ ಬಂಧಿಸಿದ ಸ
ರ್ವೋತ್ತಮ ಪ್ರಸನ್ವೆಂಕಟಪತಿಪ್ರಿಯನು೩

೨೮೭
ಹರಿ ಶರಣು ಮಧ್ವಗುರು ಶರಣೆಂಬೋದೆ ಬೀಜ ಮಂತ್ರ ಇಹ
ಪರಕಿದೆ ಸಾಧನವೆಂದು ನಂಬಿಬಿಟ್ಟೆ ಹಲವು ತಂತ್ರ ಪ.
ಹರಿ ಕೊಡದಾರು ಕೊಡುವರಿಲ್ಲ ನರರನು ಬೇಡಲ್ಯಾಕೆ ಶ್ರೀ
ಹರಿ ಕೊಟ್ಟರುಂಟು ಹಗಲಿರುಳು ಒಣಹಂಬಲ್ಯಾಕೆ ೧
ಇದು ನನ್ನದದು ನನ್ನದೆಂದು ಬರಿದೆ ಹೊತ್ತು ಹೋಯಿತಲ್ಲ ಶ್ರೀ
ಪದುಮನಾಭನ ಕೃಪೆ ಭಕುತಿದಾರಿಯ ಹೊಂದಿ ಪಡೆಯಲಿಲ್ಲ ೨
ಎರವಿನ ಸತಿಸುತ ಪಶು ಧಾನ್ಯ ಒಂದೊಂದಾಗ್ಯಗಲುವಾಗ ಗತ
ಹರುಷನಾಗಿ ರಂಗನಂಘ್ರಿಯ ಮರೆದುಂಡೆ ನಿರಯ ಭೋಗ ೩
ಕರ್ಮತ್ರಯಗಳು ಕರಗವೆ ಶ್ರೀನಿವಾಸನೊಲುಮೆಯಿಂದ ದು
ಷ್ಕರ್ಮಾರಣ್ಯವು ಸುಟ್ಟು ಹೋಗದೆ ನಾಮಾಗ್ನಿಯಿಂದ ೪
ಬೇಡಿದುದೀವ ಪ್ರಸನ್ವೆಂಕಟೇಶನ ಬೇಡಬೇಕು ಅವನ
ಹಾಡುತ ಹೊಗಳುತ ಜನ್ಮಾಯುಷ್ಯವ ಹೋಗಾಡಬೇಕು ೫

೪೧೭
ಹರಿಕಥಾ ಶ್ರವಣ ಸಾಧನವೆ ಮುಕುತಿ ಇದಕೆ
ಸರಿ ಧರ್ಮವಿಲ್ಲೆಂದು ಪೇಳ್ವವು ಶ್ರುತಿತತಿ ಪ.
ಶ್ರವಣದಿಂದಲಿ ಸಕಲ ಸದ್ಧರ್ಮ ಸಾಧನವು
ಭುವಿಯಲ್ಲಿ ಪೂಜ್ಯರಾಹೋರು ಸುಜನರು
ಸವೆಯದಾನಂದಮಯ ಭಕುತಿ ಸಿರಿ ದೊರಕುವುದು
ಅವರೇವೆ ಸೂಜ್ಞರಾಗ್ವರು ಹರಿಯ ದಯದಿ ೧
ಅನವರತ ಶ್ರವಣವೆ ಮನನ ಮೂಲವು ಗಡ
ಮನನದಲಿ ಹರಿಧ್ಯಾನ ಖಚಿತಾಹುದು
ಘನಪರಾತ್ಪರ ತತ್ವ ತಿಳುಹಿ ವಿರಕುತಿ ಭಾಗ್ಯ
ವನು ಕೊಟ್ಟು ಶ್ರೀ ವಿಷ್ಣು ತೋರ್ವ ಗತಿ ಈವ೨
ಶ್ರವಣದಲಿ ನಾರದಗೆ ಗತಕಲ್ಪದ್ಯಪರೋಕ್ಷ
ಸವಿಯಾದ ಸಾಮ್ರಾಜ್ಯ ಲೆಕ್ಕಿಸದ ಪ್ರಿಯವ್ರತ
ಅವನಿಪರು ವನ ಪೊಕ್ಕು ಹರಿಯನಾಶ್ರಯಸಿದರು
ದಿವಸೇಳರಲಿ ವಿಷ್ಣುರತನಿಗೆ ಮೋಕ್ಷ ೩
ದಿವಿಜ ಋಷಿ ಗಂಧರ್ವ ನೃಪರು ಮನುಜೋತ್ತಮರು
ವಿವಿಧ ತಿರ್ಯಗ್ಜಾತಿ ಸಜ್ಜೀವರು
ಶ್ರವಣಮಾತ್ರದಲಿ ಕಂಡರು ಸದ್ಗತಿಯನವರು
ದಿವಸಗಳೆಯದಲೆ ಆದರದಿಂದ ಬುಧರು ೪
ಹರಿಕಥಾಶ್ರೋತರಿಗೆ ಕರತಲವು ಮೋಕ್ಷ ಗಡ
ಗುರುದ್ವಾರದಲಿ ಹರಿ ದೊರಕುವನು ಸತ್ಯ
ಗುರು ಮಧ್ವವರದ ಶ್ರೀಪ್ರಸನ್ವೆಂಕಟ ಕೃಷ್ಣ
ಕರವಿಡಿದು ಪೊರೆವ ಸದ್ಗುರು ಪ್ರಿಯಜನಕೆ ೫

೩೬೦
ಹರಿತಾ ದೂರಿಲ್ಲ ದೂರಿಲ್ಲ
ಒರಟು ಮಾತಿನ ಸರಕೆ ಸಲ್ಲ ಪ.
ಹರಿದಾಸರ ಸಂಗಕೆ ಸರಿ ಇಲ್ಲ ಗುರುಕೃಪೆಯಿರಲಿ ನಿತ್ಯೆಲ್ಲ
ತರತಮವಿರಹಿತಗೆಲ್ಲಿ ಕೈವಲ್ಯವು ಅ.ಪ.
ಧರ್ಮಾಥರ್ಕಾಮ ಮೋಕ್ಷವನಿಚ್ಛಿಸುವ
ನಿರ್ಮಳ ಮತಿಗಳಿಗಾವಾಗ
ಕರ್ಮದ ಮೋಡಿಗೆ ಸಿಲುಕದವನ ಗುಣ
ಕರ್ಮ ನಾಮೋಚ್ಚರಣೆ ಸಾಧನ ೧
ಜ್ಞಾನ ಭಕುತಿ ವೈರಾಗ್ಯ ಹೊಲಬಲಿ
ನಾನಾ ವ್ರತವ ಮಾಡಲು ಬೇಕು
ಹೀನಕೇಳಿಕೆ ಕಾಳಿಕೆಯನುಳಿದು ನಿತ್ಯ
ಶ್ರೀನಿವಾಸನೆ ಗತಿ ಎನ್ನಲು ೨
ಸಂತತ ಅಂಗದಿ ಬಲವಿರುವನಕ
ಕಾಂತ ಪ್ರಸನ್ವೆಂಕಟಪತಿಯ
ಅಂತರಂಗದಿ ಚಿಂತಿಸಿ ಕಳೇವರವನು
ಪ್ರಾಂತಯಾತ್ರೆಗೆ ತ್ಯಜಿಸುವಗೆ ೩

(ನು. ೨) ಸಪ್ತಧಾತುಗಳು
೪೧೯
ಹರಿದಿನ ಇಂಥ ಹರಿದಿನ ಪ.
ಹರಿದಿನದ ಮಹಿಮೆ ಹೊಗಳಲಗಾಧ
ಪರಮ ಭಾಗವತರಾಚರಣೆಗಾಹ್ಲಾದ
ದುರಿತ ದುಷ್ರ‍ಕತ ಪರ್ವತಕೆ ವಜ್ರವಾದ
ಮರುತ ಸದ್ವ್ವ್ರತಕೆಲ್ಲ ಶಿರೋರತ್ನವಾದ ಅ.ಪ.
ಭಕ್ತಿಗೆ ಮೊದಲು ವಿರಕ್ತಿ ಬೀಜವೆಂಬ
ಸಕಲ ತಪದೊಳೆಲ್ಲ ಮೇಲೆನಿಸಿಕೊಂಬ
ಮಖಕೋಟಿಗಧಿಕ ಫಲಸ್ಥಿರ ಸ್ತಂಭ
ಮುಕ್ತಿ ಸೋಪಾನ ನಿಧಾನತ್ವವೆಂಬ ೧
ತ್ವಕ್ ಚರ್ಮ ಅಸ್ತಿ ಮಜ್ಜ ಮಾಂಸ ರುಧಿರ
ಯುಕ್ತ ಸಪ್ತ ಧಾತುಗಳಿಹ ಶರೀರ
ನಖ ಕೇಶ ಕಫ ಸ್ವೇದ ಮಲ ಮೂತ್ರಾಗರ ಈ
ನಿಖಿಳ ಪಾವನ ಮಾಡುವ ನಿರಾಹಾರ ೨
ವರ ವಿಪ್ರ ಕ್ಷತ್ರಿಯ ವೈಶ್ಯ ಶೂದ್ರ ಜನರು
ತರಳ ಯೌವನ ವೃದ್ಧ ನಾರಿಯರು
ಕಿರಾತ ಪುಲತ್ಸ್ಯಾಂದ್ರ ಹೂಣ ಜಾತಿಯವರು
ಹರಿವ್ರತ ಮಾತ್ರದಿ ಮುಕ್ತಿಯೈದುವರು ೩
ದ್ವಿಜ ಗೋವಧ ನೃಪರನು ಕೊಂದ ಪಾಪ
ನಿಜಗುರು ಸತಿಯರ ಸಂಗದ ಪಾಪ
ಅಜಲಪಾನದ ದಿನದುಂಡ ಮಹಾಪಾಪ
ನಿಜನಾಶ ಮೋಕ್ಷ ಪ್ರಾಪ್ತಿಯು ಸತ್ಯಾಲಾಪ ೪
ಯಾಮಿನಿಯಲಿ ಅನಿಮಿಷದ ಜಾಗರವು
ಶ್ರೀ ಮದ್ಭಾಗವತ ಶ್ರವಣ ಗೀತಾಪಠಣ
ಪ್ರೇಮವಾರಿಧಿಲಿ ಮುಳುಗಿ ಸಂಕೀರ್ತನೆಯು
ಧಾಮತ್ರಯದ ಸುಖಕಿದೇ ಕಾರಣವು ೫
ಅರ್ಧಕೋಟಿ ತೀರ್ಥಸ್ನಾನವೆಲ್ಲ ಅ
ಜಸ್ರಪ್ರಯಾಗ ಕಾಶಿವಾಸವೆಲ್ಲ ಸ
ಹಸ್ರ ಕೋಟಿ ಭೂಪ್ರದಕ್ಷಿಣೆಯೆಲ್ಲ
ಸುಶ್ರದ್ಧೆ ಸಹ ಜಾಗರಕೆ ಸರಿಯಲ್ಲ ೬
ಪಂಚಮಹಾ ಪಾಪ ಪ್ರಪಾಪವವಗೆ
ವಂಚಕ ಪಿಶುನ ಜನರ ಪಾಪವವಗೆ
ಮಿಂಚುವ ಕ್ಷೇತ್ರವಳಿ ಪಾಪವವಗೆ
ಪಂಚಕವ್ರತ ಪೆತ್ತ ವ್ರತ ಉಲ್ಲಂಘಿಪಗೆ೭
ಸರ್ಪಶಯನಗೆ ನೀರಾಜನವೆತ್ತಿ ನೋಡಿ
ಉಪವಾಸದಿ ಭಗವಜ್ಜನ ನೃತ್ಯವಾಡಿ
ಚಪ್ಪಾಳಿಕ್ಕುತ ದಂಡಿಗೆ ಮುಟ್ಟಿ ಪಾಡಿ
ತಪ್ಪೆ ನಾಯಿ ನರಕ ಫಲ ಕೈಗೂಡಿ ೮
ಶ್ರುತಿ ಪಂಚರಾತ್ರಾಗಮವು ಸಾರುತಿವೆ
ಯತಿ ಮಧ್ವರಾಯರುಕುತಿ ಪೇಳುತಿವೆ
ಕ್ರತು ಪ್ರಸನ್ವೆಂಕಟ ಕೃಷ್ಣ ಮತವೆ
ಕ್ಷಿತಿಪತಿ ಸುರರತಿಶಯದ ಸದ್ವ್ವ್ರತವೆ ೯

೩೬೧
ಹರಿಯ ನಂಬದ ನರನು ಗೂಡರಿತು ಇರದ ವಾನರನು ಶ್ರೀ
ಹರಿಯ ಹೊಗಳದ ಕವಿಯು ಭೂಸುರರುಣ್ಣಿಸದ ಹವಿಯು ಪ.
ಕರುಣವಿಲ್ಲದ ಅರಸ ಕಾಳೋರಗನಾಡುವ ಸರಸ
ಮಾನಕಿಲ್ಲದ ಮಂತ್ರಿ ತಾ ಗರಹೊಡಕ ಕುಮಂತ್ರಿ ೧
ಮೆಚ್ಚು ನುಂಗುವ ದೊರೆಯು ಮೀವ ಬಚ್ಚಲಿನ ದೊಡ್ಡಹರಿಯು ಕೈ
ಮುಚ್ಚಿ ನೀಡದ ದಾನ ಹುಸಿರಚನೆ ನಿಧಾನ ೨
ಧರುಮಕೆ ಕೂಡದ ಸತಿಯು ಯಮಪುರದಾರಿ ಸಂಗತಿಯು ಬಲು
ಚರಿಗ ಮತ್ಸರಿ ತನಯ ಅವ ಅರಗದ ಅಗ್ಗಣಿಯ ೩
ಮೂರ್ಖನ ಗೆಳೆತನ ಜರ್ಜರಿತ ತಂತುವಿತಾನ ಒಣ
ಕರಕರಿ ಕಲಹದ ನೆರೆಯು ಸಾಸಿರ ತೇಳಗಗಚ್ಚಿದ ಸರಿಯು ೪
ವಂಚಿತವಾದಿ ಬಂಧು ಪ್ರಾಣ ಮುಂಚಿಸುವ ವಿಷಬಿಂದು ಬಹು
ಕಾಂಚನದಾಸೆ ಬಳಗ ಪ್ರಪಂಚದಳತೆ ಕೊಳಗ ೫
ಕೊಡದಿಟ್ಟ ಕೊಡಹಣವು ಸುಡುವ ಅಡವಿಲಿ ಬಿದ್ದ ಹೆಣವು ಬಾಯಿ
ಬಡಕನ ಒಡಂಬಡಿಕೆ ಛಿದ್ರಿಡಿದ ಮಣ್ಣಿನ ಮಡಿಕೆ ೬
ಬ್ರಾಹ್ಮರಿಗುಣಿಸದ ಸದನ ದುರ್ಬೊಮ್ಮ ರಕ್ಕಸನ್ವದನ
ಮದ್ಹಮ್ಮಿನಣ್ಣಗಳ ವಿದ್ಯಾ ಮಾಯಮ್ಮನ ಮಹನೈವೇದ್ಯ ೭
ಓದಿ ಮಲತ ಗುರುಶಿಷ್ಯ ಸದ್ಭೋಧಾಮೃತ ಪರಿ ಹೇಯ ಆ
ಪ್ತಾಧಾರಿಲ್ಲದ ಅರಸೆ ಗ್ರಾಮಾದರಿಸುವ ಆಳರಸೆ ೮
ವೇತ್ರ‍ತವಿವರ್ಜಿತ ಸಭೆಯು ಲೋಕತ್ರಯದಲ್ಲಿ ಅಶುಭವು ಕಂ
ಠತ್ರಾಣಿಲ್ಲದ ಗಾನ ಮುದಿ ಎತ್ತೆಳೆದಾಡುವ ಗಾಣ೯
ಹುಸಿ ನುಡಿವ ದೈವಜ್ಞ ತಾ ಹಡದ ಮಗನಿಂದ ಅವಜ್ಞ ದು
ರ್ವಸುಕಾಂಕ್ಷೆಯ ಭೇಷಜನು ಮಾನಿಸರ ಉಂಬ ಮಾಯಿ ದನುಜನು೧೦
ಶ್ರವಣ ಮನನ ಧ್ಯಾನವನು ಬಿಟ್ಟವನೆ ಜೀವಚ್ಛವನು ಮಾ
ಧವ ಪ್ರಸನ್ವೆಂಕಟ ಮೂರ್ತಿ ತನ್ನವರಿಗೆ ಕೊಡುವನು ಅರ್ಥಿ ೧೧

೩೬೨
ಹರಿಯಲ್ಲದನ್ಯ ದೈವಂಗಳು ಕೈವಲ್ಯವೀವವೇನೈ ಶ್ರೀ
ಹರಿಯ ಕರುಣಾಸಾಗರಕೆ ಕೂಪವಾಪಿಯು ಹೋಲ್ವವೇನೈ ಪ.
ಹಳುವದ ಬಿದಿರಮೃತದ ಮಳೆಯಲಿ ಇಕ್ಷುವಹದೇನೈ
ಹಲಕಾಲವರೆಯ ಬೇಯಿಸಿದರೆ ಮೃದುರುಚಿಯಹದೇನೈ ೧
ಕೆಸರು ಮಳಲು ಮೆದ್ದರೊಡಲಗ್ನಿ ತಣ್ಣಸವಹದೇನೈ
ಬಿಸಿಲ ತೊರೆಗೆ ಮಂಜುವನಿಗೆ ಧಗೆಯ ತೃಷೆ ಹೋಹದೇನೈ ೨
ಮಲಯಜಲೇಪಕೆ ಬಲವತ್ತರ ಭವತಾಪ ಶಾಂತವೇನೈ
ಎಳೆಗರು ಮಣ್ಣಾವಿನ ಮೊಲೆಯುಂಡು ಜೀವಿಪುದೇನೈ ೩
ಹರಿಯೊಪ್ಪದಿರದಾ ಹಲವು ಧರ್ಮಕರ್ಮದ ಕಾರಣೇನೈ
ಕರಿಯುಂಡ ಬೆಳವಲ ಹಣ್ಣಿನ ತಿಳಲೆಂದಿಗುಳಿವುದೇನೈ ೪
ಏಕೋ ನಾರಾಯಣ ಆಸೀತ್ ಹಾಗಂದಿಲ್ಲವೇನೈ
ಸಾಕು ನ ಬ್ರಹ್ಮಾ ನ ಚ ಶಂಕರ:ಎಂಬೊ ಮಾತದೇನೈ ೫
ವಾಸುದೇವನ ಡಿಂಗರರಿಗೆ ಅಶುಭ ಹೊಂದಬಲ್ಲದೇನೈ
ಕ್ಲೇಶಾಧಿಕವು ನೋಡಿ ಅವ್ಯಕ್ತಾಸಕ್ತರಿಗಲ್ಲವೇನೈ ೬
ಪ್ರಸನ್ನವೆಂಕಟಪತಿ ಅರ್ಚನೆದಾರಿಲಿ ಕಂಟಕೇನೈ
ಹುಸಿಯಲ್ಲ ಧ್ರುವ ಬಲಿ ವಿಭೀಷಣರೆ ಸಾಕ್ಷಿ ನಂಬಿರಿನ್ನು ೭

೨೮೬
ಹರಿಯೆ ಎನಗಾರು ಗತಿಯೊ ನೀನಲ್ಲದೆ ಪ.
ಹಿಂದಿನಾಪತ್ತು ಮರೆತೆ ಇಂದು ಮಾಯದಿ ಬೆರೆತೆ
ಒಂದುಗೂಡಿದವು ಅಘ ಮುಂದಿನರುಹಿಲ್ಲ ೧
ಹಗಲು ಅಶನದ ಕೃತ್ಯ ಇರುಳು ನಿದ್ರೆಯ ಮಬ್ಬು
ವಿಗಡ ಕಾವನ ತಡೆ ತಗಲು ಬಿತ್ತೊ ರಂಗಾ ೨
ಅತ್ತಿತ್ತ ಸುತ್ತುವನಕ ಹೊತ್ತು ಹೋಯಿತು ಯಮನ
ಮುತ್ತಿಗೆ ಬಿದ್ದಾಗ ಮತ್ತಾರಿಲ್ಲೊ ಸ್ವಾಮಿ ೩
ಅಜ್ಞಾನೆಂಬಹಿ ಕಚ್ಚಿ ಯಜ್ಞೇಶ ನಿನ್ನಂಘ್ರಿ
ಸಂಜ್ಞವಿಲ್ಲದೆ ದು:ಖ ಮಗ್ನನಾದೆನಲ್ಲೊ ೪
ಶ್ರೀ ಪ್ರಸನ್ವೆಂಕಟೇಶ ತಾಪತ್ರಯವಿನಾಶ
ನೀ ಪಾಲಿಸಯ್ಯ ವಿಶ್ವವ್ಯಾಪಕ ಸ್ವಾಮಿ ೫

೩೬೩
ಹರಿಯೆ ಗತಿಯೆನ್ನಿರೈ ಶ್ರೀ ನರ
ಹರಿಯೆ ಶರಣೆನ್ನಿರೈ ಪ.
ಹರಿಪಾದಕಮಲವ ನಂಬದ ಮೂಢನು ಮನುಜನಲ್ಲ ದನುಜ ಶ್ರೀ
ಹರಿಚರಿತಾಮೃತ ಕೇಳದೆ ಗರ್ವಿಪ ನರನು ಪಾಮರನು ೧
ಹರಿಯ ಬಂಟರ ಅನುಸರಣೆಗಳ ಪರಿತ್ಯಾಗಿ ವೃದ್ಧಗೂಗಿ
ಹರಿಮಹಿಮೆಯ ಹೊಗಳಾಡದ ಮಾತಿನ ಮುಖನು ಮಂಡೂಕನು೨
ಕೃಷ್ಣಗೆ ಪ್ರಿಯವ್ರತ ದಾನಕೆ ವಿಮುಖಾದ ಧನಪನವ ಕುಣಪ
ಕೃಷ್ಣಾಕೃತಿಯ ಬಹಿರಂತದಿ ನೋಡದ ಜಾಣನವ ಕೋಣ ೩
ಕೃಷ್ಣಗೆ ನಮಿಸದೆ ಸತಿ ಸುತರೊಳು ಭೂರಿತುಷ್ಟ ಹಿತನಷ್ಟ ಶ್ರೀ
ಕೃಷ್ಣನವರ ಕಂಡೆರಗದ ವಿಷಯದ ಭೋಗಿ ಭವರೋಗಿ೪
ಗೋವಿಂದ ಸರ್ವೋತ್ತಮನಿರೆ ಬೇರೆಂಬಜ್ಞಾನಿ ಮದ್ಯಪಾನಿ
ಗೋವಿಂದನೊಳು ವಿಶ್ವಾಸಿಲ್ಲದ ಭಕ್ತಿಯ ಧೀರ ಶುದ್ಧ ಜಾರ೫
ಗೋವಿಂದ ತೀರ್ಥ ಪ್ರಸಾದವ ನರಿಯದ ಬಲ್ಲನೆ ಕಳ್ಳನು
ಗೋವಿಂದನೊಪ್ಪದ ಮತವಿಡಿದವ ಮಹಿಗೆ ಕಕ್ಕಸ ರಕ್ಕಸ ೬
ಪ್ರಸನ್ನ ಮೂರುತಿ ವಿಧಿಭವವಂದ್ಯನ ಅರ್ಚಕ ಧನ್ಯರೆ ಮಾನ್ಯರು
ಪ್ರಸನ್ನವೆಂಕಟಪತಿ ಕಂಡುಂಡಾ ಭಕ್ತಿಯಾಸಕ್ತರೆ ಮುಕ್ತರು ೭

(ನು. ೨) ಮರಳೊಮ್ಮೆ ದುರ್ವಾಸ
೩೬೪
ಹರಿಯೆನ್ನಬಾರದೆ ಜಿಹ್ವೆ ವಾರಂವಾರ ಪ.
ಪರಗತಿ ಮಾರ್ಗವು ದುರಿತವನಾಗ್ನಿಯು
ಪರಿ ಪರಿ ಭವರೋಗಕೌಷಧ ಅ.ಪ.
ಉರಿವ ಕಾಳಕೂಟ ಕಂಠದಿ ದಹಿಸಲು
ಹರಿನಾಮ ಹರನ ಕಾಯ್ತು
ಕರಿ ಉರಗ ವಿಷಾಗ್ನಿ ಶಸ್ತ್ರ ಭಯದಲಿ
ಹರಿನಾಮ ಶಿಶುವ ಕಾಯ್ತು
ಶರಧಿಲಿ ನಕ್ಕರ ಚರಣವ ಕಚ್ಚಿ ಬರೆ
ಹರಿನಾಮ ಕರಿಯ ಕಾಯ್ತು
ನಿರಯ ನಿವಾಸರ ಸುರಋಷಿ ಮುಖದಿಂದ
ಹರಿನಾಮ ಎಲ್ಲರ ಕಾಯ್ತು ೧
ಹಿರಿಯರ ನಿಕ್ಕರ ನುಡಿಯಿಂದಡವಿಲಿರೆ
ಹರಿನಾಮ ಧ್ರುವನ ಕಾಯ್ತು
ಕುರುಕಂಟಕರು ಅಭಿಮಾನವ ಕೊಳುತಿರೆ
ಹರಿನಾಮ ಸತಿಯ ಕಾಯ್ತು
ಮರಳೊಮ್ಮೆ ದುರ್ವಾಸ ದ್ರೌಪದಿಗುಣಬೇಡೆ
ಹರಿನಾಮ ಇರುಳೆ ಕಾಯ್ತು
ಗುರುಪುತ್ರನುರಿಬಾಣದುರವಣೆಗಡ್ಡಾಂತು
ಹರಿನಾಮ ಭ್ರೂಣವ ಕಾಯ್ತು ೨
ವರಬಲದಿಂದಲ್ಲಿ ಅಸುರರು ನೋಯಿಸಲು
ಹರಿನಾಮ ಸುರರ ಕಾಯ್ತು
ಚಿರಪಾಪ ಭವಯಾತ್ರೆ ಘಟಿಸಲು ತುದಿಯಲಿ
ಹರಿನಾಮ ಭಟರ ಕಾಯ್ತು
ಶರಣರ ಮಹಿಮೆಯಂತಿರಲಿ ಅಪಮರಣದಿ
ಹರಿನಾಮ ನನ್ನ ಕಾಯ್ತು
ಗುರು ಮಧ್ವವರದ ಪ್ರಸನ್ವೆಂಕಟೇಶ ಶ್ರೀ
ಹರಿನಾಮ ಗತಿ ಎನ್ನೆ ಕಾಯ್ತು ೩

೩೬೫
ಹರಿಯೆನ್ನಿ ಹರಿಯೆನ್ನಿ ಹರಿಯೆನ್ನಿರೈ
ಹರಿಯೆಂದವರಿಗೆಲ್ಲಿ ದುರಿತ ದಂದುಗವು ಪ.
ಹರಿಯೆಂದಜಾಮಿಳಗೆ ನರಕ ತಪ್ಪಿತಾಗಲೆ
ಹರಿಯೆಂದ ಕರಿಗೆ ಕೈವಲ್ಯಾಯಿತು
ಹರಿಯೆಂದ ತರಳಗೆ ಉರಗ ಹಾರಾದವು
ಹರಿಯೆಂದವ ಅಕ್ಷಯ ಸಿರಿ ಪಡೆದ ೧
ಹರಿಸೇವೆಯನೆ ಮಾಡಿ ವಿರಿಂಚಪದವನುಂಡ
ಹರಿಸೇವೆಯಲಿ ನಿಶಾಚರರಸಾದ
ಹರಿಸೇವೆಯಲಿ ಹರಿವರರ್ಮುಕ್ತರಾದರು
ಹರಿಸೇವೆಯಲಿ ಮತ್ರ್ಯರು ಸುರರಾದರು ೨
ಹರಿಪಾದ ಸೋಕಲು ಸ್ಥಿರ ಪಾತಾಳದ ಪಟ್ಟ
ಹರಿಪದ ಸೋಕಿದ ಅರೆ ಪೆಣ್ಣಾಗೆ
ಹರಿಪಾದ ಸೋಕಿ ಕಾಳುರಗ ಪಾವನನಾದ
ಹರಿಪಾದ ಸೋಕುವಾತುರವಿಡಿದು ಹರಿಯೆನ್ನಿ ೩
ಮಂಡೂಕಹಿ ಮುಖದಿ ಕಂಡ ಮಕ್ಷಕವ ತಾ
ನುಂಡೇನೆಂಬುವ ಪರಿ ಮೃತ್ಯುವಿನ
ಕುಂಡದಿ ವಿಷಯದ ಹಿಂಡು ವಿಚಾರ್ಯಾಕೆ
ಪುಂಡರೀಕಾಕ್ಷಾಂಘ್ರಿ ಕೊಂಡಾಡಿ ಮನದಿ ೪
ಯುವತಿ ಮಕ್ಕಳು ಮಂದಿರವನಗಲಿಸುವರು
ಜವನ ಬಂಟರು ಈ ಕಾಯವ ನೆಚ್ಚದೆ
ಅವಿರಳ ಪ್ರಸನ್ವೆಂಕಟವರದ ರಂಗನ
ಸವಿ ನಾಮಾಮೃತದಾಸ್ವಾದವನುಂಬ ದೃಢದಿ ೫

೨೮೮
ಹರಿಹರಿಯೆ ಕಡೆಗಾಣೆನೈ ಜನುಮವ ಭವ
ಕಡಲ ತಡಿಯ ಸೇರಿಸು ಮಾಧವ ಪ.
ವಿಷಯಾಸೆ ತೆರೆಗಳಲ್ಲಿ ಗೃಹವೆ ಗ್ರಹ
ವಿಷಮ ಸತಿಸುತ ಗುಲ್ಮವು ವಡವಾಗ್ನಿ
ಹಸಿವು ತೃಷೆ ದಹಿಸಿತೆನ್ನ ಇದರೊಳಾ
ಲಸಿಕೆ ಸುಳಿ ಭ್ರಮಣ ಘನ್ನ ೧
ಷಟ್ಚರ್ಯ ಹಡಗದವರು ಬಿಡದೆ ಬೆ
ನ್ನಟ್ಟಿ ಬಡಿದಂಜಿಸುವರು ಮನವಾಯುವಿ
ನಟ್ಟುಳಿಗೆ ನಿಲವಿಲ್ಲವು ಇಂದ್ರಿಯಜಂತು
ಕಟ್ಟಿಲ್ಲದೆಳೆದೊಯ್ವವು ೨
ಸಂಸಾರ ಸಾರ ಫೇನ ಭುಂಜಿಸಲು
ಸಂಶಯದ ರೋಗ ನವೀನ ದುರಿತಾಂಬು
ಹಿಂಸೆ ಮಾಡದೆ ಉಳುಹಿತು ಅಜ್ಞವ್ಯಾಳ
ದಂಶ ಕ್ಷಣಲವಕಾಯಿತು ೩
ಸುಖವೆ ಬೊಬ್ಬುಳಿ ರಾಶಿಯು ಬಂಧು ಬಳಗ
ಸಖ ಸ್ನೇಹ ಪಾಶಲತೆಯು ಅಹಿತಾಗ
ಮ ಕಠೋರ ದುಶ್ಯಬ್ದಕೆ ಸ್ರ‍ಮತಿ ಹೋಗಿ
ಚಕಿತನಹೆ ದೀನಬಂಧು ೪
ಇಂತು ಬಳಲುವುದ ನೋಡಿ ಸಿರಿಲಕುಮಿ
ಕಾಂತ ನಿರ್ದಯನಾದೆ ನೀ ಪ್ರಸನ್ನವೆಂಕಟ
ಕಾಂತ ಸಂತರ ಕೂಡಿಸೊ ಶ್ರೀ ಮೂರುತಿ
ಅಂತ್ಯಯಾತ್ರೆಗೆ ಉದಯಿಸೊ ೫

೨೮೯
ಹಾ ಹಾ ಸಾಧುರು ಮೆಚ್ಚದನಕ ಹರಿಗುರು ಮೆಚ್ಚ ಪ.
ನನ್ನ ಗುಣಕೆ ನಾ ಮೆಚ್ಚಿದೆ ಬರಿದೆ
ಪುಣ್ಯವಂತನೆಂದನ್ಯರ ಜರಿದೆ
ಉನ್ನತ ಸೂಕ್ಷ್ಮ ಸುಧರ್ಮವ ಕಾಣೆ
ನನ್ನೊಳು ನಾ ವೃಥಾ ಹಿಗ್ಗಿದರೇನು ೧
ಜನದೊಳು ದಣಿಯದೆ ಜ್ಞಾನವನೊರೆದು
ಘನವೈರಾಗ್ಯಕೆ ಹಿಂದಕೆ ಸರಿದು
ತನು ಮನ ಕದ್ದು ಭಕುತಿಯೊಳಿದ್ದು
ಹೆಣಗಾಡುತ ಭಾಗವತೆನಿಸಿದ್ದು ೨
ಸಂತರು ಒಪ್ಪಿದ ಜ್ಞಾನಿಯವ ಸಂತ
ಸಂತರಿಗಾಗದ ವಿರತಿ ಭ್ರಾಂತಿ
ಸಂತರು ಕೂಡಿದ ಭಕುತಿ ಮುಕುತಿ
ಸಂತರ ಪ್ರಿಯ ಪ್ರಸನ್ವೆಂಕಟಯ್ಯ ೩

೪೪೫
ಹಿಂದಿನ ಪುಣ್ಯ ಫಲವೆಂತೊ
ಇಂದಿರೇಶಾನಂದದ ಲೀಲೆ ಅರುಹಿದ ಪ.
ಚಿತ್ರವಿಚಿತ್ರ ಮಹಿಮೆಯ ತೋರುತ ಖಳ
ದೈತ್ಯರನೆಲ್ಲ ಮಡುಹಿದ
ದೈತ್ಯರನೆಲ್ಲ ಮಡುಹಿ ಬಳಲ್ದನೆಂದು
ಕಸ್ತೂರಿ ತೈಲವೆರಸಿ ತಂದು ೧
ಶಂಕಿನಿ ಪದ್ಮಿನಿಯರೊಂದಾಗಿ ಕೃಷ್ಣನ
ಪಂಕಜಾಸನದಲಿ ಕುಳ್ಳಿರಿಸಿ
ಪಂಕಜಾಸನದಲಿ ಕುಳ್ಳಿರಿಸಿ ತಮ್ಮ ಒಲ್ವ
ಕಂಕಣಗೈಯ ಮೌಳಿಯೊಳಿಟ್ಟು ೨
ಈರೇಳು ಲೋಕದ ದೊರೆಯಾಗು ಭಕುತರ
ಸಿರಿಯಾಗು ದಿತಿಜರರಿಯಾಗು
ಸಿರಿಯಾಗು ಭಕ್ತರ ದಿತಿಜಾರಿಯಾಗೆನುತ
ಹರಸಿದರರ್ಥಿ ಮಿಗಿಲಾಗಿ೩
ಕುಂಭಕುಚದ ಕಾಮಿನಿಯರು ಹರುಷದಿ
ಅಂಬುಜಾಕ್ಷನ ಪೂಸಿ ಕಿರುಬೆಮರಿ
ಅಂಬುಜಾಕ್ಷನ ಪೂಸಿ ಕಿರುಬೆಮರಿ ದಣಿಯದೆ ಕ
ದಂಬ ಕಡಿದಟಕಾಳಿಯ ತಂದು ೪
ವಿಕ್ರಮಾನ್ವಿವತವಾದವ್ಯಾಕೃತ ಗಾತ್ರಕೆ
ಅಕ್ಕರಿಂದೆ ತೈಲನಾಶನವ
ಅಕ್ಕರಿಂದಲಿ ತೈಲನಾಶನವ ಪೂಸಿ ಜಗುಳಲು
ಘಕ್ಕನಂಬರವ ಬಿಗಿದುಟ್ಟ ೫
ಹದವಾದ ಬಿಸಿನೀರ ಪೊಂಬಂಡೆಯೊಳು ತುಂಬಿ
ಪದುಮಗಂಧೆಯರು ನೀರೆರೆದರು
ಪದುಮಗಂಧೆಯರು ನೀರೆರೆವ ಸಂಭ್ರಮಕ್ಕೆ
ಮುದದಿ ಸುರರು ಹೂಮಳೆಗರೆದರು ೬
ಮುಂಬರಿಯುತ ಬಾಲೆಯರುತಕದಿಂದ
ಅಂಬುಧಾರೆಯ ನಿಲ್ಲಗುಡದೆರೆದು
ಅಂಬುಧಾರೆಯ ನಿಲ್ಲಗುಡದೆರೆದು ಜಾಂಬೂನ
ದಾಂಬರವುಡಿಸಿ ಕರೆತಂದು ೭
ಚಿತ್ರಮಂಟಪಕೆ ನವರತ್ನ ತೆತ್ತಿಸಿದ ಕಂಭ
ಕಸ್ತೂರಿ ಕಾರಣೆ ರಚನೆಯ
ಕಸ್ತೂರಿ ಕಾರಣೆ ರಚನೆಯ ಮಧ್ಯದಿ
ಮುತ್ತಿನ ಹಸೆಯೊಳು ಕುಳ್ಳಿರಿಸಿ ೮
ನೀಲ ಮಾಣಿಕಮೋಘದಿಂದಲೊಪ್ಪುವ ಪದಕ
ಲೋಲ ನೇತ್ರೆಯರಳವಡಿಸಿದರು
ಲೋಲನೇತ್ರೆಯರು ಅಳವಡಿಸಿ ಅಂಗುಲಿ
ಗೆಲ್ಲ ಮುದ್ರಿಕೆನಿಟ್ಟು ನಲಿದರು ೯
ಮುಕುಟ ಕೌಸ್ತುಭ ಮಣಿಯುಕುತ ಭೂಷಣವಿಟ್ಟು
ರುಕುಮಿಣಿ ಸತ್ಯರೆಡಬಲದಿ
ರುಕುಮಿಣಿ ಸತ್ಯರೆಡಬಲದಿ ಕುಳ್ಳಿರೆ ನಿತ್ಯ
ಮುಕುತಗಾರತಿಯ ಬೆಳಗಲು ೧೦
ಚಿನ್ನದ ಹರಿವಾಣದಿ ರನ್ನದಾರತಿಯಿಟ್ಟು
ಕನ್ನೇರು ಕಿರುನಗೆ ಬೀರಿದರು
ಕನ್ನೇರು ಕಿರುನಗೆ ಬಿರಿಯುತ ಪಣೆಯೊಳು
ಪೊನ್ನಿನಾಕ್ಷತೆಯಿಟ್ಟು ಲಲಿತವ ೧೧
ಜಯ ರಾಮ ತ್ರೈಧಾಮ ಜಯ ಜೀಮೂತಶಾಮ
ಜಯ ಪೂರ್ಣಕಾಮ ಸಾಸಿರನಾಮ
ಜಯ ಪೂರ್ಣಕಾಮ ಸಾಸಿರನಾಮನೆಂದು
ಭಯರಹಿತಗಾರತಿಯ ಬೆಳಗಿದರು ೧೨
ಚಿತ್ತಜನಯ್ಯಗೆ ಚಿನುಮಯ ದೇಹಗೆ
ಉತ್ತಮಗುಣಗಣ ಭರಿತಗೆ
ಉತ್ತಮಗುಣಗಣ ಭರಿತಗೆ ಪರಮಪ
ವಿತ್ರೇರಾರತಿಯ ಬೆಳಗಿದರು ೧೩
ಪನ್ನಗಾದ್ರಿವಾಸ ಪ್ರಸನ್ನವೆಂಕಟೇಶ
ಕನ್ನೆ ಲಕ್ಷ್ಮಿಯ ಕೂಡಿ ಆರೋಗಣೆಯ
ಕನ್ನೆ ಲಕ್ಷ್ಮಿಯ ಕೂಡ ಆರೋಗಣೆಯ ಮಾಡಿ
ತನ್ನ ಭಕ್ತರಿಗೆಲ್ಲ ಸುಖಪ್ರೀತ ೧೪

ಸನಕಾದ್ಯರು
೮೦
ಹಿಡಿರೆವ್ವ ಮುದ್ದುಮೋಹನನ ಇವ
ಹಿಡಿಯದಿದ್ದರೆ ಸಿಕ್ಕ ತುಡುಗ ರಂಗಯ್ಯನ ಪ.
ನವದಧಿಕ್ಷೀರ ನವನೀತ ಚೋರ
ಇವನ ಬಾಲಲೀಲೆ ನವ ನವ ಬಲ್ಲೆ ೧
ಹಲವು ದಿನಗಳಿಂದ ಹಲುಬಿಪನಮ್ಮ
ಹೊಲಬಿ ಸಿಗ ಯಾರಿಂದೆ ಹೊಳೆವನು ಮುಂದೆ ೨
ಕೆಣಕಿದರೆ ಕೋಲನ್ಹಿಡಿವ ಕುಣಿದಾಡುವ
ಸನಕಾದ್ಯರರಸ ಪ್ರಸನ್ವೆಂಕಟೇಶ ೩

೩೬೬
ಹೀಗಾದರು ದೂರ ಪರಗತಿ
ಹೀಗಾದರು ದೂರ ಪ.
ತಾನೊಳ್ಳೆದುಂಡು ವಿಪ್ರಾನೀಕಕೊಂದು
ಹೀನ ದಯದಿ ಅತಿ ಜ್ಞಾನಿ ಆಗಿದ್ದು ೧
ಆತುರದ ಧರ್ಮಾರ್ತರ ನಡವು
ಯಾತಕು ಸಲ್ಲದು ಮಾತಿನ ಮಡುವು ೨
ಭೂರಿಗುಣಜ್ಞ ಉದಾರವನರಿಯದ
ಆರಿಗೆ ಪ್ರಸನ್ವೆಂಕಟ ದೊರೆಯ ೩

೩೬೭
ಹೀಗಿದ್ದರೆ ಲೇಸು ಜ್ಞಾನಿಗೆ
ಹೀಗಿದ್ದರೆ ಲೇಸು ಪ.
ಸತಿ ಇದ್ದರೆ ಸಮಹಿತದವಳಾಗಿ
ಸುತನಿದ್ದರೆ ನಿಜಮತದವನಾಗಿ ೧
ಧನವಿದ್ದರೆ ಸಜ್ಜನಕೆ ವಿಭಾಗ
ಮನೆ ಇದ್ದರೆ ಮಧ್ಯಾಹ್ನಕನ್ನತ್ಯಾಗ ೨
ಭಕುತಿ ಇದ್ದರೆ ಡಂಭಕವನಳಿದು ವಿ
ರಕುತಿದ್ದರೆ ಭವದಾಶೆಯ ಕಳೆದು ೩
ಮತಿ ಇದ್ದರೆ ಶುಭಮತಿಯವನಾಗಿ
ಧೃತಿ ಇದ್ದರೆ ದುಷ್ರ‍ಕತಿಗಳ ನೀಗಿ ೪
ಪ್ರಸನ್ವೆಂಕಟೇಶನ ಪ್ರಸಾದವನುಣುತ
ವಿಷಮ ಜನನ ಮೃತಿ ಗಸಣೆ ತಪ್ಪಿಸುತ ೫

೩೬೯
ಹೆಣಗಿದರಾಗದು ಒಣತರ್ಕದಲಿ
ದಣಿದರೆ ಕೂಡದು ಭಕುತಿ
ವನಜಾಕ್ಷನ ಕೃಪೆ ಮನಸ್ಸಾಕ್ಷ್ಯಾದರೆ
ತನ ತಾನಾಹದು ಮುಕುತಿ ಪ.
ಸೂಕ್ಷ್ಷ್ಮತತ್ವದಿ ದಕ್ಷನೆನಿಸದೆ
ದೀಕ್ಷಿತ ನಾಮಿದ್ದೇನು
ಅಕ್ಷರ ಬಲದಲಿ ಲಕ್ಷವು ವೃಥಾ ಗುರು
ಶಿಕ್ಷಿಲ್ಲದ ಜನುಮೇನು
ಭಿಕ್ಷುಕ ಧಾನ್ಯದ ಲಕ್ಷ್ಷ್ಯದಲಿ ಪ
ದ್ಮಾಕ್ಷನ ಪೊಗಳಿದರೇನು
ಕುಕ್ಷಿಯ ಲಾಭವು ಅಕ್ಷಯ ತೋಷದ
ಮೋಕ್ಷೋಪಾಯವದೇನು ೧
ದ್ರವ್ಯಾದಿವ್ರಯ ಹವ್ಯಾದಿಕ್ರಯ
ಅವ್ಯಯ ಜೀವ ಸ್ವಭಾವಾಖ್ಯ
ಕಾವ್ಯರಚನೆ ಶಬ್ದ ವ್ಯಾಕರಣದ
ಹವ್ಯಾಸವು ಇಹ ಸೌಖ್ಯ
ಅವ್ಯಾಕೃತ ನಾಮಾವ್ಯವಹಾರಿಲ್ಲದ
ನವ್ಯ ಕಥಾಜನಸಖ್ಯ
ದಿವ್ಯಮೂರುತಿ ವೇದವ್ಯಾಸಜಭವ
ಸೇವ್ಯನ ನಿಷ್ಠೆಯೆ ಮುಖ್ಯ ೨
ಕಡು ಆದರದೊಳು ಕಡಲಳಿಯನ ಪದ
ವಿಡಿಯದವನ ಶ್ರುತಿಶಾಸ್ತ್ರ
ನಡುಹೊಳೆ ದಾಟುತ ತಡಿಯಲಿ ನಾವೆಯು
ಬುಡಮೇಲಾಯಿತು ವ್ಯರ್ಥ
ದೃಢ ಪ್ರಸನ್ವೆಂಕಟ ಒಡೆಯನಾಚ್ಛಿನ್ನ ದಯ
ಪಡೆದನು ಗುರು ಸುಖತೀರ್ಥ
ನುಡಿಗಳ ಮಾಲೆಯ ತುಡುಗರ ತಮಸಕೆ
ಬಡಿದಟ್ಟುವನು ಸಮರ್ಥ ೩

೨೯೦
ಹೇ ಮನವೆ ಈ ದೇಹ ಗಾಳಿದೀಪ ಪ.
ನಳ ಪುರೂರವ ಹರಿಶ್ಚಂದ್ರ ಪುಣ್ಯಶ್ಲೋಕರು
ಇಳೆಯೊಳು ಒಯ್ಯಲಿಲ್ಲ ದಾರೂ ೧
ಹಂಬಲಗಡಲೊಳು ಮುಳುಗಲಿನ್ನಾವ ಸುಖ
ಅಂಬುಜಾಕ್ಷಗೆ ಸಲ್ಲಲೀ ಲೆಕ್ಕ ೨
ಧರ್ಮವ ಹಳಿದು ಸತ್ಕರ್ಮವ ಜರೆದರೆ
ನಮ್ಮ ಪ್ರಸನ್ನವೆಂಕಟ ದೂರ ೩

೩೭೦
ಹೇಳಿದ ಯಮಧರ್ಮ ತನ್ನಾಳಿಗೆ ಪ.
ಹೇಳಿದ ಯಮ ತನ್ನೂಳಿಗದವರಿಗೆ
ಖೂಳ ದುರಾತ್ಮರಾಗಿ ಬಾಳುವರನು ತರ ೧
ಹರಿ ಸಂಕೀರ್ತನೆಯ ನರ ನಾರಿಯರು ಆ
ದರದಲಿ ಮಾಡಿದವರ ನಿಂದಿಪನ ತರ ೨
ಹರಿದಾಸರಿಗೆ ಉಣಕರಿಯದೆ ಜನ್ಮಾಂತ
ಒರಟುಮಾತಿನ ಲುಬ್ಧನರನ ನಿಲ್ಲದೆ ತರ ೩
ಹರಿಕಥಾಮೃತ ಉಪಚಾರಕಾಗಿ ಕೇಳುವ
ಪರನಾರೇರಾಳುವ ದುರುಳನ ಕಟ್ಟಿ ತರ ೪
ಗುರುಹಿರಿಯರೊಳು ನೀಚೋತ್ತರವನು ಕೊಡುವ
ಮರುಳಾಗಿ ಮತಿಯ ಸತಿಯರಿಗಿತ್ತವನ ತರ ೫
ಅಂಬುಜಾಕ್ಷನ ಪೂಜೆ ಸಂಭ್ರಮದಿ ಮಾಡದೆ
ರಂಭೆಯೊಡನಾಡುವ ಡಂಭಕನ ಹಿಡಿ ತರ ೬
ಒಳ್ಳಿದರ್ಹಳಿದು ತಾ ಬಲ್ಲವನೆನುವ
ಚೆಲ್ವ ಪ್ರಸನ್ವೆಂಕಟ ವಲ್ಲಭನ ವೈರಿಯ ತರ ೭

೩೨
ಹೇಳೆ ಕಾಮಿನಿ ರಂಗಗೆ ಬುದ್ಧಿಯ
ಹೇಳೆ ಕಾಮಿನಿ ರಂಗಗೆಪ.
ಹೇಳಿದಂದದಿ ಕೇಳಿ ಕಾಲಿಗೆರಗುವಳ
ಮ್ಯಾಲೆ ಕೋಪಿಸಿಕೊಂಡು ಬಾಲೇರ ನೆರೆವಂಗೆ ಅ.ಪ.
ತನ್ನ ಮೈಗಂಪು ಕಸ್ತೂರಿಗಿಂದಧಿಕ ಕಂಡೆ
ತನ್ನಧರದ ರಸಾಮೃತಗಿಂತ ಸವಿದುಂಡೆ
ತನ್ನ ದಂತದ ಘಾಯಕೆ ಅಂಜದೆ ಕರ
ಜನ್ನಟ್ಟಿಸಲು ಕುಚಕ್ಕೆ ಸುಂದರಿಯ
ರನ್ನು ಮೆಚ್ಚಿದ ದಾನಕ್ಕೆ ಇನಿಯಳಿರೆ
ಅನ್ಯರ ಮೋಹಿಪಗೆ ಕಲಿಮಾನವಗೆ ೧
ಸ್ನೇಹ ನೋಟಕೆ ಮೆಚ್ಚಿ ಸುಖಭಾರ ತನಗಿತ್ತೆ
ಬಾ ಹೆಣ್ಣೆ ಎನಲು ಭಾಗ್ಯಾಂಬುಧಿಗೊಶವಾದೆ
ತಾ ಹೊನ್ನಾಸೆಗೆ ಮಂಚದಿ ಘಾತಿಸಿದರೆ
ನೇಹಿಯ ಬೆರದೆ ಕೆಲದಿ ಕರಾಳ ಚೇಷ್ಟೆಗೆ
ನೇಹದಾರದಲೊಪ್ಪಿದೆ ಎನ್ನನು ಬಿಟ್ಟು
ಬಾಹು ಜೋರಿನ ಬುದ್ಧ ವಾಜಿಯಲ್ಲೇರ ೨
ಚಪಲತೆಯಲ್ಲಿ ಕಪಟ ವಿದ್ಯದಲಿ ಭೂಪ
ಕುಪಿತಾಶಾಯಿಲ್ಲ ಹೆಜ್ಜೆ ಹೆಜ್ಜೆಗೆ ಕಥೆಯಿಲ್ಲ
ನೃಪಕೃಷ್ಣ ಸಲಹೆಂದರೆ ಎನ್ನಿಂದಾದ
ಅಪರಾಧ ಕ್ಷಮಿಸೆಂದರೆ ಪ್ರಸನ್ವೆಂಕಟ
ಕೃಪಿ ಧರ್ಮಿಯೆಂದರೆ ಇದಕೆ ತಾ
ವಿಪರೀತ ತಿಳುಹನಂತೆ ಹಾಗಲ್ಲಂತೆ ೩

೨೯೧
ಹೊಂದು ಹೊಂದು ಹರಿಪಾದ
ಹೊಂದು ಮನವೆ ಪ.
ಮಾತುಳನ ಚಂದನ ಪ್ರೀತಿಲಿ ಕೊಟ್ಟು ಮನ
ಸೋತವಳ ಅಂಗಪುನೀತ ಮಾಡಿದನಂಘ್ರಿ ೧
ಅಜಮಿಳ ಸಹಜ ತನುಜನ ಕರೆಯಲಾಗಿ
ನಿಜ ಭಟರಟ್ಟಿದ ಸುಜನೇಶನಂಘ್ರಿಯ೨
ಹೊಂದಿದರವಗುಣ ಕುಂದುನೋಡದೆ ಹೊರೆವ
ತಂದೆ ಪ್ರಸನ್ವೆಂಕಟೇಂದ್ರನ ಅಂಘ್ರಿಯ೩

(ನು. ೨) ಖಾಂಡವವನ ದಹನಕಾರಿ
೧೫೦
ಹೊರಿಯೊ ವಿಪಗಮನ ಮಂಗಳ
ಶರಧಿಜಾರಮಣ ಪ.
ಸುರಕಾರ್ಯಕೆ ಪಕ್ಷ ಶಾರ್ವರಿ
ಚರವರ ಶಿಕ್ಷ
ಧರಣಿಜ ಹರ ಸತ್ರಾಜಿತಜಾವರ
ಶರಣಾಗತ ಭಟ ದುರಿತ ವಿದೂರ ೧
ಪೌಂಡ್ರಕವೈರಿ ನಿಜ ಕೃಷ್ಣ
ಪಾಂಡವರ ತಾರಿ
ಶುಂಡಾಲ ಚಾಣೂರ ಸಂಹಾರಿ
ಖಾಂಡವವನ ದಹಕಾರಿ ೨
ವಿದುರೋದ್ಧವ ಪೋಷ ಸುಖತೀರ್ಥ
ಹೃದಮಾನಸ ಹಂಸ
ಪದುಮನಾಭ ಪ್ರಸನ್ವೆಂಕಟೇಶ ಪಾಹಿ
ಸದಮಲಸದನ ಕ್ಷೀರಾರ್ಣವಶಾಯಿ ೩

೨೯೨
ಹೋಯಿತಲ್ಲಾಯುಷ್ಯ ಹೋಯಿತಲ್ಲಯ್ಯ
ಸಾಯಸಬಟ್ಟೆನು ಭವದಿ ಶ್ರೀಯರಸನ್ನ ನಂಬದೆ ಪ.
ಪಶ್ಚಿಮ ಜಾಗರದಿ ಕಾಕುತ್ಸ್ಸ್ಥನ ಪ್ರೀತಿಗೋಸುಗ
ದುಶ್ಚಿತ್ತ ವೃತ್ತಿಯ ನೀಗಿ ನಿಶ್ಚಿತನಾಗಿ
ಸಚ್ಚಿದಾನಂದಕಾಯನ ಆಶ್ಚರ್ಯಕರ ನಾಮವ
ಉಚ್ಚರಿಸದೆ ನಿದ್ರೇಲಿ ಮೆಚ್ಚಿ ಘುರುಘುರಿಸುತ ೧
ತುಲಸಿ ಮಂಜರಿ ಪುಷ್ಪ ಅಲಸದೆ ತಂದು ಶ್ರೀ
ನಳಿನ ನೇತ್ರನ್ನ ನಾಮಾವಳಿಗಳಿಂದ
ಸಲೆ ಅವನಂಘ್ರಿಕಮಲಕರ್ಪಿಸದೆ ಸದಾ
ಲಲನೆ ಸಂಪದಾಬ್ಧಿಲಿ ಮುಳುಗಿ ದುರಾಶೆಯಲ್ಲಿ ೨
ಸತತ ಶಕ್ತ್ಯಾನುಸಾರ ವ್ರತಧರ್ಮಾಚರಿಸದೆ
ಅತಿಥರೊಳೀತನ ನಂಟನೆಂದರೆ
ಅತಿಸ್ನೇಹ ಬಳಸುತ ಹಿತಬಿಟ್ಟೆ ವೃಥಾ ಕೆಟ್ಟೆ
ಗತಿ ಕಾಣಿಸಿನ್ನಾರೆ ಶ್ರೀಪತಿ ಪ್ರಸನ್ವೆಂಕಟಯ್ಯ ೩

೨೯೩
ಹ್ಯಾಂಗಾದರು ದಾಟಿಸೊ ಭವಾಬ್ಧಿಯ
ಹ್ಯಾಂಗಾದರು ದಾಟಿಸೊ ಪ.
ಗಂಗಾಜನಕ ನಾ ನಿನ್ನವನೆಂದು
ಹ್ಯಾಂಗಾದರು ದಾಟಿಸೊ ಅ.ಪ.
ನಗುತ್ತಾದರು ಉಂಡೆ ಅಳುತ್ತಾದರು ಉಂಡೆ
ಬಗೆ ಬಗೆ ದುರ್ಜನ್ಮ ಸುಖದು:ಖವ
ತಗೆ ಬಗೆ ನಿರಯದಿ ಹೊರಳ್ಯಾಡುವನ ತಂದು
ಮಿಗಿಲಾದ ದೇಹವನಿತ್ತೆ ಇನ್ನೆಲೆ ಕೃಷ್ಣ ೧
ತಿಳಿದಾದರು ಮಾಡಿ ತಿಳಿಯದಾದರು ಮಾಡಿ
ಹಲವು ದೋಷದ ರಾಶಿ ಒದಗಿಸಿದೆ
ಬಲುತಪ್ಪು ನೋಡದೆ ನಾಮಾಮೃತವನಿತ್ತು
ಸಲಹುವ ಮನಬಲ್ಲ ಎಲ ಎಲೋ ಮುಕುಂದ ೨
ಮಂದಮತಿಯುಗ್ರಾಹ ಅಂಧ ಕೂಪದಿ ಬಿದ್ದು
ಎಂದಿಗು ಭೋಗ ಭೋಗಿಸಲಾಪೆನೆ
ತಂದೆ ಪ್ರಸನ್ನವೆಂಕಟಪತಿಗೊಲಿದು
ನಿಂದೆನ್ನ ಛಿದ್ರವನೆಣಿಸುವರೆ ರಂಗ ೩

೪೨೩
ಹ್ಯಾಗಾಹದು ಭವರೋಗಿಗಾರೋಗ್ಯ
ಮ್ಯಾಗೆ ಮ್ಯಾಗಪಥ್ಯವಾಗುತಿದೆ ಕೃಷ್ಣ ಪ.
ಗುಜ್ಜುಗಿರಿವ ಆಶಾಲಕ್ಷಣ ಚಳಿ
ಲಜ್ಜೆಗೆಡಿಸುತಿವೆ ಗದಗದಿಸಿ
ವಜ್ಜರಹೊದಪಿಲಿ ನಿಲವು ಕುಶಾಸ್ತ್ತ್ರದ
ಗಜ್ಜರಿಕಾಯಿ ದಣಿಯೆ ಮೆಲುವವಗೆ ೧
ಮೊರಮೊರಸು ಮೂರ್ಪರಿ ಜ್ವರ ದಾಹದಿ
ನಿರಸನ ರಸನಾಯಿತಿದರೊಳಗೆ
ಅರಿಕಿಲ್ಲದಹ ಗಾರಿಗೆ ಕಾಮನ
ಹರಿಬದನೆಕಾಯುಂಬುವಗೆ ೨
ಕಾಮಿನಿ ನೋಟದ ಕಾಮಾಲೆಯಾಯಿತು
ನೇಮದಿ ಸೊಬ್ಬೇರಿತು ಮೈಯ
ಪ್ರೇಮದ ಚಕ್ಷುದೋಷ್ಯಾತರಲೈದದು
ಕಾಮತಪ್ತ ವರೇಣ್ಯವಗೆ ೩
ನಮ್ಮದು ನಮ್ಮದು ಕೋ ಕೋ ಎನ್ನುತ
ಕೆಮ್ಮಿಗೆ ಖುಳಖುಳಸಿತು ಕಾಯ
ಹಮ್ಮುಗಳಕ್ಕರೆಯ ಖಣಿಯಾದ ಉಳ್ಳಿಯ
ಹೆಮ್ಮೂಲಂಗಿಯ ತಿನುವವಗೆ ೪
ಜಗಸಟೆಯೆಂಬಗೆ ಸಂಗ್ರಹಣಿಯು ಅವ
ನಿಗೆ ಪಾಂಡಿತ್ಯ ಪಾಂಡುರೋಗ
ವಿಗಡ ಕುತರ್ಕ ಚಿಕಿತ್ಸದಿ ನೂಕು
ನುಗ್ಗೆ ತೊಂಡೆಕಾಯಿ ಸವಿವವಗೆ ೫
ಅಂಜದೆ ಸಲ್ಲದ ನಿಷಿಧಗಳುಂಡರೆ
ನಂಜೇರದೆ ಬಿಡುವುದೆ ಬಳಿಕಾ
ಕಂಜಾಕ್ಷನ ಬಿಟ್ಟಿತರ ಸುರಾಸುರ
ರೆಂಜಲು ಮೈಲಿಗೆ ಬಿಡದವಗೆ ೬
ಹೃದ್ರೋಗವು ಹೋಗುವುದೆ ನಿಂಬ ಹ
ರಿದ್ರದ ಹುಡಿ ತಲೆಗೊತ್ತಿದರೆ
ನಿದ್ರಿಲ್ಲದೆ ಕರ ಪಂಜಲಿ ಕುಣಿದರೆ
ರುದ್ರ ದುರಿತ ಹೊಡೆಯದೆ ಬಿಡುವುದೆ೭
ಇಂತೆ ದಿನಾಂತರ ಕ್ಷಯ ಮೇಲಿಕ್ಕಿತ್ತು
ಅಂತ್ಯೌಪದ ಯಮಪುರದೊಳಗೆ
ಎಂತಾದರೆ ಮಾಡಿಸಿ ಕೊಂಡಳುತಿಹ
ಭ್ರಾಂತ ಕಳಿಂಗದ ಪ್ರಿಯದವಗೆ ೮
ಮನ್ವಂತರ ಕಲ್ಪಾಂತರ ಈ ಕ್ಲೇ
ಶಾನ್ವಯ ವೆಗ್ಗಳ ಭೋಗಿಸುತ ಪ್ರ
ಸನ್ವೆಂಕಟಪತಿ ಗುರು ಮಧ್ವೇಶ
ಧನ್ವಂತ್ರಿಯ ಪದ ವಿಮುಖನಿಗೆ ೯

೩೧೦
ಉಗಾಭೋಗ
ಕಗ್ಗೊರಡೆಳೆಗಾಳಿಗೆ ಚಲಿಸುವುದೆ ದು
ರಾಗ್ರಹಿ ಹರಿಚರಿತಾಮೃತ ಉಂಬುವನೆ
ಕಗ್ಗಲ್ಲೆಳೆ ಬೆಳದಿಂಗಳಿಗೆ ದ್ರವಿಸುವುದೆ
ಸ್ವರ್ಗಾಪವರ್ಗ ದುರ್ಜನಕೆ ಸೊಗಸುವುದೆ
ಸುಜ್ಞಾನದ ಸಾಮ್ರಾಜ್ಯದ ಭಕುತಿ ವೈ
ರಾಗ್ಯದ ಭಾಗ್ಯವು ದಶಪ್ರಮತಿ ಶಾಸ್ತ್ತ್ರದ
ಅಗ್ಗಸವಿ ಸುಗ್ಗಿಯು ಭವ ಸ್ವರ್ಗ
ಲಗ್ಗಿಗಗುಂಟೆ ಪ್ರಸನ್ನವೆಂಕಟ ಕೃಷ್ಣ ೧

೩೮೬
ಉಗಾಭೋಗ
ಜಗದ ಸಾಧನಯೋಗ ಸಮಾಧಿಯಿದೆ ಅ
ಗಾಧ ಮತಿಗಳ ವಿವಾದವಿದೆ
ವೇದಾಧ್ಯಯನದ ಬೋಧವಿದೆ ನಿಜ
ಮೋದವನೈದುವ ಹಾದಿಯಿದೆ
ಆದಿಕವಿಗಳಾಹ್ಲಾದವಿದೆ ಬ್ರಹ್ಮ
ಶೋಧಕ ಮುನಿಗಳ ಬೋಧವಿದೆ
ಶ್ರೀಧವ ಪ್ರಸನ್ನವೆಂಕಟೇಶ ದಿವ್ಯ
ಸ್ವಾದನಾಮಾಬ್ಧಿಯೊಳು ಮುಳುಗುವ ಸಂಕೀರ್ತನ
ಸಾಧನಯೋಗ ಸಾಧನಯೋಗ ೧

೩೩೧
ಉಗಾಭೋಗ
ಮಲಯ ಗಿರಿಯಲಿಪ್ಪ ಬೊಬ್ಬುಳಿ ಬಾವನ್ನದ
ಬಳಿಯಿದ್ದೇನದು ಬಾವನ್ನವಹುದೆ
ಕಲಿಮನದವ ವೇದ ವೇದಾಂತ ಓದಲು
ಇಳೆಯಲ್ಲವನು ವೈಷ್ಣವರ ಬೆರೆವನೆ
ಜಲನಿಧಿಶಯನ ಪ್ರಸನ್ನವೆಂಕಟ ಕೃಷ್ಣ
ಅಲವಬೋಧನವರಿಗೊಲಿವನು ಕಾಣಿರೊ

೪೦೩
ಉಗಾಭೋಗ
ಲಕುಮಿ ಹರಿಯರಸಿ ನಾಲಕುಮುಖನೆ ಮಗ ವಾಣಿ
ಭಕುತಿಗಭಿಮಾನಿ ಪಾರ್ವತಿ ಸೊಸೆಯರು
ಮುಖಸಹಸ್ರನು ಖಗಪ ಮುಖಪಂಚ ಪೌತ್ರ ಶತ
ಮುಖ ನೃಪ್ರ‍ತ (?) ಪಂಚಸಾಯಕನಣುಸುತ
ಸಕಲ ಸುರಋಷಿ ವೈಷ್ಣವನಿಕರವೆಲ್ಲವು ಭೃತ್ಯ
ಮುಕುತ ಜನರಲ್ಲಿ ತರತಮಭಾವವು
ಸುಖತೀರ್ಥಗುರು ಶಾಸ್ತ್ರಾನುಕರಿಸೆ ಪ್ರಸನ್ಚೆಂಕಟ
ಮುಕುತಿಯ ಕೊಡುವನೆಂಬ ರಾದ್ಧಾಂತದ ಅರುಹಿ(ರಿವಿ ?)ನವ
ಮುಕುತ ಮರಹಿನವ ಮೂಢ ಈ ನರದೇಹವಸ್ಥಿರ ೧

೨೭೮
ಉಗಾಭೋಗ
ಶ್ರೀನಾಮ ಸಾಸಿರಪೆಡೆಯ ನೆನೆದು ಕಾಣದಿಹ ಕಡೆಯ
ವನಿತೆ ಗಿರಿಸುತೆ ನುಡಿಗೆಣತಿಗೊಡೆಯ
ವನಜಜಮುಖ್ಯರ ಪಡೆಯ ಮನುಜೋತ್ತಮಾಧಮ ಕಡೆಯಾ
ರನುವರಿದು ಪದ ಪಡೆಯಲುಣಿಪೆ ಕಡೆಯ
ದನುಜರ ಭಯದ ಕಡೆಯ ಕ್ಷಣಕರಿದೆ ಇಕ್ಕಡಿಯ
ಪುನೀತನಾಗಿ ಕೆಂಜೆಡೆಯ ಕುಣಿಯೆ ಗಡನೆ ಮೃಡಯ್ಯ
ಎನ್ನ ಮನವು ತವ ಮಂಗಳಡಿಯ
ಕೊನೆಯಲ್ಲೆರಗಿಪ ದೃಢೆಯ ಜ್ಞಾನ ಶುದ್ಧವಿರತೇರಡಿಯ
ಅನುದಿನದೈಯ್ಯ ಗುಣಗಣವಾಶ್ರಯವಿಡಿಯೆ
ಘನ್ನಭವ ಕಡಲ ತಡಿಯ ಕಾಣಿಸಬಹುದು ಎನ್ನೊಡೆಯ
ಚಿನ್ನದಗುಡಿಯ ಮನೆಯ ಪ್ರಸನ್ವೆಂಕಟೊಡೆಯ
ಬಿನುಗು ದುರಿತೆನ್ನ ಬಡಿಯೆ ಮಾನಹಾನಿ ನಿನ್ನದು ಗಡ
ಎನ್ನನೆ ಪಾಲನೆ ಮಾಡಯ್ಯ

೩೫೩
ಉಗಾಭೋಗ
ಸಲೆ ಸಲ್ಲನವ ಸಲೆ ಸಲ್ಲ
ಬಲಿಮದಹೃತ ನಿನ್ನೊಲುಮೆಯರೊಳ್ಖಳ ಸಲೆ ಸಲ್ಲ
ಹೊಂಬಾಳೆಂದೊಡಲಿಂಬುಗೊಡಲು ಬಲು
ಸಂಭ್ರಮವಕ್ಕುದೆ ಲಕುಮೀಶ
ನಂಬಿಗೆ ಇಲ್ಲದಗಿಂಬಿಲ್ಲೆಂದಿಗೆ
ಡಂಬರ ವ್ರತ ವೃಥಾ ಲಕುಮೀಶ
ಕುಂಭಿನಿಗುಬ್ಬಸನೆಂಬರು ಹರಿಪಾ
ದಾಂಬುಜವಿಮುಖಗೆ ಲಕುಮೀಶ
ಶಂಭು ಪ್ರಸನ್ವೆಂಕಟಾಂಬುಧಿಶಾಯಿ ನಿ
ನ್ನ್ಹಂಬಲವಿಲ್ಲದ ಕಾಕನರಂ ಸಲೆ ಸಲ್ಲ ೧

(ನು. ೪) ಒರಳನೆಳೆದು ಯಮಳಾರ್ಜುನರುದ್ರ‍ಧತ
೩೮೫
ಸುಳಾದಿ
ಧ್ರುವತಾಳ
ಜಗದ ಜೀವರ ನೋಡಿ ಯುಕುತಿಲಿ ಸೃಜಿಸುವ
ಮಗನ ಪಡೆದಿರುವೆ ನಾಭಿಕಮಲದಿ
ದೃಗಮೂರನೆಂಬ ಮೊಮ್ಮಗನಿಹನು ನಿನಗೆಲೆ
ಖಗಗಮನಗಣಿತಗುಣನಿಲಯ ದೇವ
ಮಗುಳೈದುಗಣೆಯಿಂ ಮೂಜಗವ ಮೋಹಿಪ ಕಿರಿಯ
ಮಗನುಳ್ಳ ಸಿರಿಯು ಸಂಗಡಲೆ ಮುಕುಂದ
ದ್ಯುಗಮನೆ ಲೋಕಪಾವನೆ ಪವಿತ್ರೆಯೆಂಬ
ಮಗಳು ಹುಟ್ಟಿದಳು ವಾಮಾಂಘ್ರಿವೆರಳೊಳು
ಮಗುವೆನಿಸಿ ಗೋಕುಲದೆಶೋದೆನಂದನರ ಮು
ದ್ದುಗಳ ಸಲಿಸಿದೆ ಮಹಾಮಹಿಮ ಕೃಷ್ಣ
ಆಗಮಕೋಟಿಗಳು ನಿನ್ನರಸಿ ಕಾಣವು ಗಡ
ಬಗೆಯಲಳವಾರಿಗಹುದಯ್ಯ ಜೀಯ
ವಿಗಡ ಪೋಕರನಳಿಸಿ ಆತ್ಮಜೀವರ ಬೆಳು
ವಿಗೆಯ ತೋರಿಸುವೆ ವೈಷಮ್ಯವಿದೂರ
ಜಗದಾತ್ಮ ಜಗವ್ಯಾಪ್ತ ಜಗದುದರ ಜಗದ್ವರದ
ಜಗದೇಕ ಮೂರುತಿ ಪ್ರಸನ್ನವೆಂಕಟೇಶ ೧
ಮಠ್ಯತಾಳ
ಆಟವಾಡುವ ಬಾಲನೊಳು ಜಗ
ನ್ನಾಟಕ ನೀನೆನಿಸಿ ಜಗದರ
ಕೋಟಲೆಗೆ ನಿಯತ ಕಾರಣ ತರತಮ
ಕೋಟಿಜೀವರ ಪೃಥಗ್ಗತಿಯನೀವ ಪ್ರಸನ್ವೆಂಕಟ
ಹಾಟಕಗೆ ಸಾಮ್ರಾಟ ವಿಭು ನೀ ೨
ರೂಪಕತಾಳ
ಬೊಮ್ಮಾಂಡನಂತವ ನಿರ್ಮಿಸೆತ್ತೆಳೆದಾಡಿ
ಅಮ್ಮಗೋಪಿಗಮ್ಮಿ ಬೇಡಿ
ರಮ್ಮೆಯನಾಳಿ ಗೋವಳೆಯರೊಡನೆ ಕೇಳಿ
ಒಮ್ಮೆ ಗುಂಜಿಯ ಮಾಲೆ ತಾಳಿ
ದ್ಯಮ್ಮಮ್ಮಾಚಿಂತ್ಯಮಹಿಮ ಕ್ರೀಡಾನಂತ
ನಮ್ಮ ಪ್ರಸನ್ವೆಂಕಟ ತಿಮ್ಮ ೩
ಝಂಪೆತಾಳ
ಒರಳನೆಳೆದು ಯಮಳಾರ್ಜುನರುದ್ರ‍ಧತ
ಸರಳತಾಣದ ಹಬ್ಬದಂದು ಮಾತುಳನೊದ್ದ
ಗರಳದಂತನ ಶಿರವೇರಿ ನಾಟ್ಯಾಡಿದ
ಅರಳದಾವರೆ ಮುಖ ಪರಸನ್ನವೆಂಕಟ
ತರಳರೊಳಬಡುತ ಬೆರಳಲಗ ಪೊತ್ತ
ತರಳ ಚಿನ್ಮಯ ತರಳನೆ ೪
ತ್ರಿಪುಟತಾಳ
ಒಂದನುಳಿಸದೆಲ್ಲಾನೊಂದಿಸಿ ಜಲದೊಳಾ
ನಂದದ ಲೀಲೆಯೊಳೊರಗಿದೆಯ
ಒಂದು ಗುಣದಿರವ ಇಂದಿರೆಗರುಹದಾ
ಒಂದ್ವಟ ಪರ್ಣದೊಳೊಂದಿದ ಬಾಲ ಮು
ಕುಂದ ಪ್ರಸನ್ನವೆಂಕಟ ಗೋವಿಂದ ೫
ಜತೆ
ನಿನ್ನಾ ಮೂರುತಿ ನಿನ್ನಾ ಕೀರುತಿ ನಿನ್ನಾ ಕಥಾಮೃತವೆನ್ನ
ಕಣ್ಣು ಕಿವಿ ನಾಲಿಗೆಯಲ್ಲಿ ಪೂರ್ಣಿಸು ಪ್ರಸನ್ವೆಂಕಟೇಶ

(ನು.೩) ಪ್ರಸನ್ನವೆಂಕಟಾಚಲ ವಿಭು

ಸುಳಾದಿ
ಧ್ರುವತಾಳ
ಶ್ರೀವಧುವೆ ನಿನ್ನ ಪೊಂದಿರಲೆಲೈ ದೇವ
ಆವ ಕಾವುದು ಸಿರಿಯೆ
ಗೋವ್ರಜದಬಲೇರ ಮನೆಯ ಪಾಲಿನ ರುಚಿ
ಆವುದಧಿ ಮಿಗಿಲೆ
ಆವಾಗ ಮುನಿಮನಗೇಹದಿಂದ ರಥವಾಜಿ
ಬೋವತನವು ದೊಡ್ಡಿತೆ
ಭಾವಿಸಲಳವಲ್ಲನಂತ ಮಹಿಮ ನಿನ್ನ
ದೇವ ದಾನವರಿಗೊಲಿದೆ
ಕಾವನಜನಕ ಅಗಣಿತ ಗುಣನೆ ಪ್ರಸನ್ನವೆಂಕಟೇಶ ಹರೆ ೧
ಮಠ್ಯತಾಳ
ಅಂಬುಜಭವ ಮೃಡ ಬಿಡೌಜರಿಗಿ
ನ್ನಿಂಬುಗೊಡುವಾನಿಮಿಷರೊಡೆಯ
ನಂಬಿದರ ಕುಟುಂಬನೆ ಅಂತರ್ಬಹಿರ್ಮಯನೆ
ಕಂಬುಕೊಳಲು ಸಂಭ್ರಮದೂದುವ
ನಂಬಿದರ ಕುಟುಂಬನೆ ಕರು
ಣಾಂಬಕ ಪ್ರಸನ್ವೆಂಕಟ ವಿಭುವೆ ೨
ತ್ರಿಪುಟತಾಳ
ಜಲಜಜಾಂಡವು ರೋಮರೋಮದ
ಕುಳಿಯಲಿಡಿದಿರಲಖಿಳ ಶರಣರ
ಸಲಹುದರಿದೆ ತಂದೆ
ಮಲಿನಯುತ ಜನಮೇಳ ನೆನೆಯಲು
ಸಲಹುದರಿದೆ ತಂದೆ
ಬಲಿಯ ಬಿಂಕವನೊತ್ತಿ ಅಮರರ ಸಲಹಿದ
ಸುಲಭರರಸ ಪ್ರಸನ್ನವೆಂಕಟಾ
ಚಲ ವಿಭುವೆ ಎನ್ನೊಬ್ಬನಿಗೆ ನೀ
ಸಲಹುದರಿದೆ ತಂದೆ ೩
ಅಟ್ಟತಾಳ
ಮುಟ್ಟಿ ನಿನ್ನನು ನುತಿಸಿದೊಡಂ ಕಿವಿ
ಗೊಟ್ಟು ಕಥೆಗೇಳಿ ಬಾಳ್ದಡಂ
ಕಷ್ಟದುಷ್ಟರೊತ್ತಿದಯ್ಯ
ಬೆಟ್ಟಿಲಿ ನಗವನೆತ್ತಿದ ಕೃಷ್ಣನೆಂದರೆ
ದಿಟ್ಟ ಪ್ರಸನ್ನವೆಂಕಟ ಕೃಷ್ಣನೆಂದರೆ ೪
ಆದಿತಾಳ
ಶ್ರೀವರ ಮೂರುತಿ ಭೂವರಾಹನೆ
ಈ ಉರಗಾದ್ರಿಗೆ ವೈಕುಂಠವೆಂಬೆ ಗಡ
ದೇವರ ದೇವ ದೀನನ ನೇವರಿಸಿದವನೆ
ದೇವರ ದೇವ ಧ್ರುವನಿಗೆ ನೇವರಿಸಿದವನೆ
ದೇವರ ದೇವ ಭಕ್ತರ ಕಾವ ಪ್ರಸನ್ವೆಂಕಟಪತಿ
ನಮೋ ನಮೋ ದೇವ ೫
ಜತೆ
ತನ್ನ ವತ್ಸಕೆ ಧೇನು ತೊಳಲುವಂತೆ ಪ್ರ
ಸನ್ನ ವೆಂಕಟರೇಯ ಬುಧಕಾಮಧೇನು
(ಆ) ಮಧುರ ಭಾವ

(ನು. ೪) ಪುಷ್ಕರತ್ರಯ: ಪುಷ್ಕರಕ್ಷೇತ್ರ,
೩೫೬
ಸುಳಾದಿ
ಧ್ರುವತಾಳ
ಸುಜನರಾವನ ಮನೆಯಲ್ಲುಂಡು ದಣಿದರೆ
ಅಜನಜನಕನೇವೆ ತೃಪುತನಾದನು ಗಡ
ಅಜನಜನಕ ತೃಪುತನಾದಡೆ ತಡಿಯದೆ
ತ್ರಿಜಗಜ್ಜೀವರುಂಡಂತಾಯಿತು ನೋಡಿರೊ
ಸುಜನರಿಂದುರು ವಿಷಯದ ನಿವೃತ್ತಿ
ಸುಜನ ಸಂಗವೆ ಭವಾಂಬುಧಿಗೆ ಪ್ಲವ
ಪ್ರಸನ್ನವೆಂಕಟ ಕೃಷ್ಣನೆ ಕರ್ಣಧಾರ ೧
ಮಠ್ಯತಾಳ
ಎಲ್ಲಿ ಹರಿಯ ಪೂಜಕರಿದ್ದ ದೇಶ
ಅಲ್ಲಿ ಗಂಗಾದಿನದಿಗಳ ನಿವಾಸ
ಅಲ್ಲಿ ಸರ್ವಸಂಪದ ಶ್ರೇಯಸಕ್ಕು
ಸಲ್ಲಲಿತ ಪಾತ್ರ ಲಾಭವೆಲ್ಲಕ್ಕು
ಫುಲ್ಲಲೋಚನ ಪ್ರಸನ್ನವೆಂಕಟ ಕೃಷ್ಣನ
ಬಲ್ಲ ಭಾಗ್ಯನಿಧಿಗಳ ಬರವೆಲ್ಲಿ
ಅಲ್ಲಿ ಸರ್ವಸಂಪದ ಶ್ರೇಯಸಕ್ಕು ೨
ರೂಪಕತಾಳ
ಬ್ರಹ್ಮವಿದ್ಯಾ ತಪೋಪೂರ್ಣ ಹೃದಯರಾದ
ಬ್ರಾಹ್ಮರಿದ್ದಲ್ಲಿ ಪರಬ್ರಹ್ಮನಿಪ್ಪನಾಗಿ
ಬೊಮ್ಮನಲ್ಲಿ ವಿಶ್ವವಿಪ್ಪದು ತಪ್ಪದು
ಬ್ರಹ್ಮವಿದ್ಯಾ ತಪೋಪೂರ್ಣ ಹೃದಯರಾದ
ಬೊಮ್ಮನ ಪ್ರತಿಮರು ಬ್ರಹ್ಮಜ್ಞ ಬ್ರಾಹ್ಮರು
ಬ್ರಾಹ್ಮರ ದೈವ ಪ್ರಸನ್ವೆಂಕಟ ಕೃಷ್ಣ
ಬ್ರಹ್ಮವಿದ್ಯಾ ತಪೋಪೂರ್ಣ ಹೃದಯರ ೩

ಪುಷ್ಕರತ್ರಯ ಕುರುಕ್ಷೇತ್ರ ಪುಲ
ಹಾಶ್ರಮ ಗಯಾ ಪ್ರಯಾಗ ಶ್ರೀ
ಪುಷ್ಕರಾಕ್ಷನ ದಾಸರಲ್ಲಿ ನೈ
ಮಿಷಾರಣ್ಯ ಫಲ್ಗುಶೇತು ಕು
ಶಸ್ಥಳ ಮಧುರಾಪುರವು ಪ್ರಭಾ
ಸಕ್ಷೇತ್ರವು ವಾರಣಾಸಿ ಬಿಂದುಸರ ಪಂ
ಪಾಕ್ಷೇತ್ರವು ಶ್ರೀ ಪ್ರಸನ್ನವೆಂಕಟ ಕೃಷ್ಣ ತೀರ್ಥಚರಣ ಶ್ರೀ
ಪುಷ್ಕರಾಕ್ಷನ ದಾಸರಲ್ಲಿ ೪
ಏಕತಾಳ
ನಾರಾಯಣಾಶ್ರಮ ನಂದಾಶ್ರಮ ಸೀ
ತಾರಾಮಾಶ್ರಮ ಸರ್ವಾಶ್ರಮದಲಿ
ನೈರಂತರವಾಸಕೆ ಸಹಸ್ರಾಧಿಕವು
ಶ್ರೀ ರಮಣನ ಶರಣರು ಕೊಂಡರೆ
ಮೇರು ಮಹೇಂದ್ರವು ಮಲಯಾದಿ ಕುಲಗಿರಿ
ಭೂರಿಪುಣ್ಯದ ಧರ್ಮಾದಿ ಫಲಸ್ಥಳ
ಕಾರುಣ್ಯನಿಧಿ ಪ್ರಸನ್ನವೆಂಕಟ ಕೃಷ್ಣನ
ಚಾರು ಚರಣ ಚಾರಕರೆ ಪಾವನರು ೫
ಜತೆ
ಸುಜ್ಞಜನರ ಪ್ರಿಯ ಪ್ರಸನ್ವೆಂಕಟಕೃಷ್ಣ
ಸುಜ್ಞರೆ ಹರಿಪ್ರಿಯರಹರೆಂದೆಂದು

(ನು.೪) ಅಷ್ಟಾಂಗ ಯೋಗ
೪೧೮
ಸುಳಾದಿ
ಧ್ರುವತಾಳ
ಹರಿ ತನ್ನ ಏಕಾಂತಿಗಳಿಗೆ ಕೊಡ ವೈಭವವ
ಸಿರಿ ಸಂಪದದ ಸೌಖ್ಯದ ಲಂಪಟವ
ಹರಿ ತನ್ನೇಕಾಂತಿಗಳಿಗೆ ಕೊಡ ಅಖಿಳದ
ಅರಸುತನದ ಸೌಭಾಗ್ಯದ ಬಯಕೆಯ
ಕರುಣಾಂಬುಧಿ ತನ್ನ ಶರಣಜನರ ಭವ
ಭಾರಕನೆಂಬೊ ಬಲು ಬಿರುದು ರಕ್ಷಕನಾಗಿ
ಅರಿಭಯದ ಬೆದರಿಕೆ ಮನೋವ್ಯಥಾ ವ್ಯಸನವು
ಬರುವುವೆಂದರಿದು ಶ್ರೀ ಪ್ರಸನ್ವೆಂಕಟ ಕೃಷ್ಣ ೧
ಮಠ್ಯತಾಳ
ಮರೆಯೆ ಹರಿಗಭಿಮುಖರ ಭಾಗ್ಯವೆ ಭಾಗ್ಯ
ಹರಿಗೆ ವಿಮುಖರ ಭಾಗ್ಯ ದೌರ್ಭಾಗ್ಯ
ಹರಿಪ್ರಿಯಜನರ ವೃತ್ತಿ ನಿವೃತ್ತಿ
ಹರಿಪರವಲ್ಲದ ಯಜ್ಞ ಅವಜ್ಞ
ಹರಿಮುಖ್ಯನೆಂಬೊ ನಿಗಮ ಸುಗಮ
ಹರಿಯಾದರಿಸದ ಆಗಮ ದುರಾಗಮ
ಸಿರಿ ಪ್ರಸನ್ವೆಂಕಟಕೃಷ್ಣ ಜೀವರಿಗೆ
ಸರಿಯೆಂದವನು ಇಹಪರಕೆ ಬಾಹಿರನು ೨
ತ್ರಿಪುಟ ತಾಳ
ಹರಿಯಂಘ್ರಿಯ ಮೂಲದಾಸತ್ವವ ಹೊಂದಿ
ಪರಮಮಂಗಳ ನಾಮಸ್ಮರಣೆಯನು ಬಿಡದೆ
ಇರಲೆನ್ನ ಮನವು ಇರಲೆನ್ನ ತನುವು
ತರುಣಿ ಪುತ್ರ ಮಿತ್ರಾ ಸರ್ವರಿಂ ಪ್ರಿಯನೆಂದು
ಹರಿಚರಣಾಂಬುದಮೃತಾನುಂಬೊ ಸ್ನೇಹ
ದಿರಲೆನ್ನ ಮನವು ಇರಲೆನ್ನ ತನುವು
ನಿರುಪಾಧಿಕ ಪ್ರಿಯ ನಿರ್ಮಳ ಶ್ರುತಿಗೇಯ
ನಿರುತ ಪ್ರಸನ್ವೆಂಕಟ ಕೃಷ್ಣ ಸೇವೆಯಲಿರಲಿ ೩
ಅಟ್ಟತಾಳ
ನಿಷ್ಠರಿನ್ನೊಲ್ಲರು ನಾಕವಾಸದ ಸುಖ
ಕೊಟ್ಟರಿನ್ನೊಲ್ಲರು ಸಕಲ ಸಂಪದವನು
ಅಷ್ಟಾಂಗ ಯೋಗದ ಪಥಸಿದ್ಧಿಯೊಲ್ಲರು
ಕೃಷ್ಣನ ಪಾದಾಬ್ಜ ಮಕರಂದ ಭಕುತರು
ತುಷ್ಟಿಯನೊಲ್ಲರು ಸ್ವರೂಪದ ಅನುಭವಾ
ನಿಷ್ಟ ಕೋಟಿಗಳನು ದೃಷ್ಟಿಗೆ ತಾರದ
ಶಿಷ್ಟರಿಗಿಷ್ಟಮೂರುತಿ ಪ್ರಸನ್ವೆಂಕಟ
ಕೃಷ್ಣನ ಭಕುತಿಗೆ ಮೋಹಿತ ಮರುಳರು ೪
ಏಕತಾಳ
ಗರಿ ಉದುಭವಿಸದ ಮರಿ ತಾಯಗರೆದಂತೆ ಕಣ್
ದೆರೆಯದ ಶಿಶು ಜನನಿಯ ಬಯಸುವ ಪರಿ
ಪಿರಿಯನ ಕಾಣದ ರಮಣಿಯ ಮನದಂತೆ
ಸಿರಿರಮಣನ ಆಗಮವನೆ ಬಯಸುತಿಹೆ
ಕರಿವರದ ಪ್ರಸನ್ವೆಂಕಟ ಕೃಷ್ಣನ
ಕರುಣಾಮೃತವನುಂಡು ಸುಖಿಪೆನನುದಿನ ೫
ಜತೆ
ಸಂಸಾರ ಚಕ್ರದಿಂದ ನಿಜರ ದಾಟಿಪ ಪರಮ
ಹಂಸೇಶ ಪ್ರಸನ್ನವೆಂಕಟ ಕೃಷ್ಣ ನಮೊ ನಮೊ

೨೮೫
ಸುಳಾದಿ
ಧ್ರುವತಾಳ
ಹರಿ ನಿನ್ನ ಕಥಾಮೃತ ವರ್ಷವು
ಚಿರಕಾಲದ ಪುಣ್ಯಾಂಕುರಗಳೊರ್ಧಿಯು
ಹರಿ ನಿನ್ನ ಶುಭನಾಮ ರಸಾಯನ ಭವರೋಗ
ಪರಿಹರ ಕಾರಣವಲ್ಲದೌಷಧ ಉಂಟೆ
ಹರಿ ನಿನ್ನ ಧ್ಯಾನ ಧಾರಣ ಬಿಂಬ
ದರುಶನ ಕಾರಣವಲ್ಲದನ್ಯ ಸಾಧನ ಜೀವರಿಗುಂಟೆ
ಹರಿ ನೀ ವ್ಯಕ್ತನಾದರೆ ಪಾತ್ರನೆನಿಪೆ ನಾ
ಕರುಣಿಸೊ ಕರುಣಾಬ್ಧಿ ಪ್ರಸನ್ನವೆಂಕಟ ಕೃಷ್ಣ ೧
ಮಠ್ಯತಾಳ
ನಿನ್ನ ಕೇಳಿ ಕೇಳಿ ಕೆಲರನ್ಯವ ಮರೆದರು
ನಿನ್ನ ಸುಚರಿತೆ ಕೇಳಿ ಧನ್ಯರು ಒರೆದರು
ನಿನ್ನ ಪಾದಕಾಂತು ಮನ ವೇದಿಸಿದರು
ನಿನ್ನ ಕಾಣಲೋಸುಗಾರಣ್ಯವ ಸೇರಿದರು
ನಿನ್ನ ಮಹಿಮೆಯೆಂತೊ ನಿನ್ನ ಮೋಹವೆಂತೊ
ನಿನ್ನ ಬಿಡಲಾರೆ ಪ್ರಸನ್ನವೆಂಕಟ ಕೃಷ್ಣ ೨
ತ್ರಿಪುಟತಾಳ
ಪ್ರಕೃತಿಯಿಂ ಬದ್ಧ ನಾ ಪ್ರಕೃತಿಯಾಳುವೆ ನೀನು
ಪುರುಷರಧೀನ ನಾನು ಪುರುಷರ ಪ್ರಭು ನೀನು
ಸಕಲ ಸ್ವತಂತ್ರ ಭಕ್ತರಾಧೀನನೆ
ನಿಖಿಳ ಸಂದೇಹ ಧ್ವಾಂತಧಿಕ ಪ್ರಸನ್ವೆಂಕಟ ಕೃಷ್ಣ ೩
ಅಟ್ಟತಾಳ
ಶ್ರೀನಾಥ ನಿನ್ನ ಮರೆದೆನಾಗಿ ಎಂಭ
ತ್ತುನಾಲ್ಕು ಲಕ್ಷ ಗರ್ಭದ ದುರ್ಗದಿ ಸಿಲ್ಕಿ
ಯೋನಿ ಯಂತ್ರದಿ ಕೆಟ್ಟು ನೊಂದೆ
ಹೀನ ವಿಷಯ ಭೋಗ ಸಾಕೆನ್ನಲೊಲ್ಲದೆ
ಆ ನಾರಿ ಸಾರೆ ಮನ ಮಾರ ಬಾಧೆಗಧೀನ
ದೀನನಾಥ ಪ್ರಸನ್ನವೆಂಕಟ ಕೃಷ್ಣ ೪
ಆದಿತಾಳ
ಹರಿ ಹರಿ ಹರಿ ಹರಿ ಹರಿ ಹರಿ ಹರಿಯೆಂ
ಬೆರಡಕ್ಕರವೆನ್ನ ನಾಲಗೆಯೊಳಾದ್ಯಂತ
ತಿರು ತಿರುಗೆನಿಸು ಹರಿಯೆಂದದರಿಂ
ತಿರು ತಿರುಗಿ ಬರುವ ಅರುಹಂ ಮರೆವೆ
ಪರಸನ್ನವೆಂಕಟ ಕೃಷ್ಣ ಪರಮದಯಾನಿಧೆ
ಶರಣರ ಹೊರೆವ ಬಿರುದು ನಿನ್ನದದರಿಂ ೫
ಜತೆ
ನಾನಾ ಯೋಗ ಯಾಗದೆಡಹಿಗೆ ಪ್ರಾಯಶ್ಚಿತ್ತ
ನೀನೆ ನೀನೆ ನೀನೆ ಪ್ರಸನ್ನವೆಂಕಟ ಕೃಷ್ಣ

೪೨೧
ಸುಳಾದಿ
ಝಂಪೆ ತಾಳ
ಹರಿಯ ನಗರವು ಕಳೆವರವು ತಾತ್ವಿಕರೆಲ್ಲ
ಹರಿಯ ಚಾರಕರು ಮನಸ್ತತ್ವದಲಿ ನಿಂದು
ಪರಿ ಪರಿ ವ್ಯಾಪಾರಗಳ ಮಾಡಿಸುವರು ಶ್ರೀ
ಹರಿಯ ಪ್ರೇರಣೆಯೆಂದು ಹರಿ ಸೇವೆಯೆಂದು
ಸಿರಿ ವೈಷ್ಣವಧರ್ಮ ಪ್ರೇರಕ ಪದುಮಸಂಭವನು
ವಿರತಿ ಧರ್ಮ ಜ್ಞಾನ ಐಶ್ವರ್ಯಭಾರತಿಯ
ಅರಸ ಪ್ರೇರಕ ಅಹಂಕಾರ ಪ್ರೇರಕನಾದ
ಗಿರಿಜಾರಮಣ ರುದ್ರದೇವ ನಿರುತ
ವರ ಪಂಚರಾತ್ರಾಗಮ ಜ್ಞಾನಪ್ರೇರಕನು
ಉರಗಾಧಿಪನು ವೇದೋಕ್ತ ಜ್ಞಾನಗಳ
ಗರುಡ ಪ್ರೇರಿಪ ಪ್ರಸನ್ನವೆಂಕಟೇಶ್ವರನ
ಮರಿಯಾದೆಯಿಂ ಮೀರದಿಪ್ಪರಾಗಿ ೧
ಮಠ್ಯತಾಳ
ಯಜನಾದಿ ಕರ್ಮಜ್ಞಾನದ ಪ್ರೇರಕ ಇಂದ್ರ ಅಂ
ಗಜ ಹರಿ ಪ್ರೀತಿಕರ ಕಾಮ್ಯ ಕರ್ಮ ಪ್ರೇರಕನು
ತ್ರಿಜಗಜ್ಜೀವರ ಜೀವ ಪ್ರಸನ್ವೆಂಕಟ ಪತಿಯು ೨
ರೂಪಕತಾಳ
ಮನುಮಥಪುತ್ರನಾದನಿರುದ್ಧನು
ಜ್ಞಾನ ಮಂತ್ರ ಪ್ರೇರಕನಾಗಿಹನು
ಸುನೀತಿಶಾಸ್ತ್ರ ಕವಿತ್ವಪ್ರೇರಣೆಗೆ
ಅನಿಮಿಷರ ಗುರು ಕಾರಣನು
ಶ್ರೀನಾಥ ಪ್ರಸನ್ವೆಂಕಟಕೃಷ್ಣದೇವನಾ
ಧೀನಾರಾಗ್ಯೊಪ್ಪುವರೆಲ್ಲಸುರಾನ್ವಯ ೩
ಅಟ್ಟತಾಳ
ನಾನಾವೃಕ್ಷ ಕುಸುಮಲತಾ ಪೂರ್ಣೋ
ದ್ಯಾನ ರಚನೆ ವಿಪ್ರಾನೀಕ ಪೂಜಾ ಪ್ರೇ
ರಣೆಗೆ ಹಿಮಧಾಮ ಜಲ
ದಾನ ಕೂಪವಾರಿ ತಟಾಕಾದಿ ನಿರು
ಮಾಣ ಪ್ರೇರಕನಾದ ವರುಣದೇವನು
ನಾನಾಕಾರಣ ಮುಖ್ಯನು ೪
ಏಕತಾಳ
ಜನರ ಪಾಲಿಸುವಲ್ಲಿ ಪ್ರೇರಕನು ಸ್ವಾಯಂಭುವ
ಮನು ಮುಖ್ಯರಾದವರು ಪ್ರಸನ್ವೆಂಕಟೇಶನ್ನ
ಅನುಜ್ಞದಿಂದಾಧಾರದಿಂದಿಹರಾಗಿ ಶರೀರದಿ
ತೃಣ ಮಾತ್ರ ಚಲನೆ ಶಕುತಿ ಯಾರಿಗೆ ಇಲ್ಲಾದ್ಯಂತ ೫
ಜತೆ
ಮನೋಭಿಮಾನಿಗಳು ಹನ್ನೆರಡು ದೇವಕ್ಕಳು ಪ್ರ
ಸನ್ವೆಂಕಟಕೃಷ್ಣ ಜಗನ್ನಿಯಾಮಕನು

೪೨೨
ಸುಳಾದಿ
ಧ್ರುವತಾಳ
ಹರಿಸರ್ವೋತ್ತಮ ಹರಿಪರಬ್ರಹ್ಮ
ಹರಿಸಮರಾರಿಲ್ಲ ಹಿರಿಯರುಂಟೆಲ್ಲಿ
ಹರಿ ಪಟ್ಟಗಟ್ಟಿದಮರರು ವಂದಿತರು
ಹರಿಯನಾದರಿಸದಸುರರು ನಿಂದಿತರು
ಹರಿಯೊಲಿದಿರುವರ್ಭಕರೆ ಕೀರ್ತಿಯುತರು
ಹರಿಯನರ್ಚಿಸದ ವೃದ್ಧರೆ ಬಹಿಷ್ರ‍ಕತರು
ಹರಿಯವೇನನಾಮವು ಅರೂಪ ಗುಣದೂರ ಶ್ರೀ
ಹರಿ ಪ್ರಸನ್ವೆಂಕಟವರದ ಉದಾರ ೧
ಮಠ್ಯತಾಳ
ಅಯ್ಯನ ನಾಮವೆಂದರೆ ಅನಂತನಾಮವು
ಸ್ವನಾಮವಿಲ್ಲ ಹೀಗಲ್ಲ
ಅರೂಪವೆಂದರೆ ಪ್ರಾಕೃತರೂಪ
ಸ್ವರೂಪವಿಲ್ಲ ಹೀಗಲ್ಲ
ಗುಣರಹಿತೆಂಬುದು ತ್ರಿಗುಣಾತೀತಾ
ಗಣಿತ ಗುಣಗಳಿಲ್ಲ ಹೀಗಲ್ಲ
ನಿರ್ಗುಣ ಅರೂಪನಾಮನೆಂಬರು
ಸ್ವರ್ಗಜವರದ ಪ್ರಸನ್ವೆಂಕಟೇಶಗೆ ನಾಮವೆಂಬುದು ಹಾಗಲ್ಲ ೨
ತ್ರಿಪುಟತಾಳ
ನಾಮವೀಪರಿ ನಾಮ
ನರರಿಗುತ್ತಮರು ನೃಪರು ಮುನಿಸುರರು ತ
ನ್ಮರುತ್ತೆರೆದೆರೆದಿರುವ ನಾಮ
ಎರಡು ಸಾಸಿರ ರಸನರು ಮೃಡಗರುಡರು
ಸ್ವರೂಪಾನುಸಾರ ನಿತ್ಯ ಸ್ಮರಿಪ ಶ್ರೀನಾಮ
ಎರಡೀರೆವದನನೀರೆರಡು ಶ್ರುತಿಯ ನಾಮ
ಸಿರಿಯಳುಚ್ಚರಿಸುವನಂತ ನಾಮ
ಪರಸನ್ನವೆಂಕಟವರದನುದರದಿಡಿ
ಕಿರಿದಿದ್ದಾರರಿಯದ ಗುಹ್ಯನಾಮ೩
ರೂಪಕತಾಳ
ಒಂದು ಬ್ರಹ್ಮಾಂಡ ತುಂಬೋ ದೇವ ರೂಪ ಮ
ತ್ತೊಂದು ರೂಪದ ರೋಮರಂಧ್ರದೊಳಜಾಂಡ
ಒಂದಲ್ಲ ನೂರಲ್ಲ ಹೊಂದಿದುವನಂತವು
ಒಂದೊಂದಜಾಂಡದೊಳಗ್ಹೊರಗಪರಿಪೂರ್ಣ
ಅಂದು ಏಕಾರ್ಣವದೊಳೊಂದು ವಟಪತ್ರದಿ ಆ
ನಂದನರಸಿಯ ಮೊಲೆಯನೊಂದು ಚಪ್ಪರಿದುಂಡು
ಒಂದರೊಳು ಕರವಿಟ್ಟ ಪ್ರಸನ್ವೆಂಕಟ ರೂಪ ೪
ಝಂಪೆತಾಳ
ಕರಚರಣ ನಖ ಕೇಶ ಶಿರ ಚಕ್ಷು ಶ್ರವಣಾದಿ
ಸರ್ವಾವಯವಗಳಿಂದ ಸರ್ವರೂಪಗಳಿಂದ
ಸಿರಿಯರಸ ಸ್ವಗತ ಭೇದವಿದೂರ ಹೀ
ಗರಿಯದೆ ಐದು ಭೇದವಸತ್ಯವೆಂಬ ಪಾ
ಮರಗೇವೆ ನಿತ್ಯಾಂಧ ನರಕವೆ ಸ್ಥಿರವಯ್ಯ
ಸಿರಿ ಪ್ರಸನ್ವೆಂಕಟ ವರದಾನಂತಾಭಿಧಾ
ವರ ಬಿಂಬೋತ್ತಮನಾಗಿ ಪೊರೆವ ಪ್ರತಿಬಿಂಬವ
ಸಿರಿ ಅರಸ ಭೇದವಿದೂರ ೫

(ನು. ೨) ಧಾಮತ್ರಯ: ವೈಕುಂಠ

ಏನು ಕಾರಣ ಮರೆತೆ ಎಲೆ ಉಡುಪಿನಿಲಯ ಪ.
ಆನೊಬ್ಬ ಜಗಕೊಡೆಯನೆಂಬಹಂಕಾರವೊ ಅ.ಪ.
ಶ್ರೀದೇವಿ ಮಡದಿ ಕಮಲೋದ್ಭವನು ಮಗನು ಉ
ಮಾದೇವೀಧವ ಪೌತ್ರ ಸಾಸಿರಫಣ
ಮೋದ ಹಾಸಿಗೆಯೆಂಬಾ ಪೊನ್ನಬಣ್ಣದ ಹಕ್ಕಿ
ಆದಿವಾಹನ ದನವ ಕಾಯ್ದುದನು ಮರೆತು ೧
ಕ್ಷೇಮಾಮೃತಾಭಯದ ಧಾಮತ್ರಯ ಉಂಟೆಂದು
ಹೇಮಗರ್ಭಾಂಡ ಕೋಟಿ ಕೋಟಿಗಳು ಎನ್ನ
ರೋಮಕೂಪಗಳಲ್ಲಿ ವೈಮಾನಿಕ ಭಟರು
ಸ್ವಾಮಿ ನಾನೆಂದೆಶೋದೆಯ ಧಾಮ ಮರೆತು ೨
ದಿನಕೆ ಕೋಟ್ಯಾಭರಣವಿಟ್ಟು ಪೂಜಿಪ ಮೌನಿ
ಗಣದ ಸೊಬಗಿನ ಸಿರಿಯೊ ಮದನನಯ್ಯ
ಇನಶಶಿಗಳನಂತ ಪ್ರಭೆ ಗೆಲುವ ಮೈಬಣ್ಣ
ಘನತೆಯು ಬೆರತ್ಯಜ್ಞ ಬೀಡುಗಳ ಮರೆತು ೩
ಮುದ್ದಿಗೆಣೆಯಿಲ್ಲೆನಗೆ ಶುದ್ಧ ಭಾವೀ ವಿಧಿ
ಮಧ್ವಮುನಿ ಪೂಜಿಸುವ ಉದ್ಧಟದ ಸಿರಿಯೊ
ಹೊದ್ದಿ ಇದಿರಿಲ್ಲೆಂಬ ಬುದ್ಧಿಯಲಿ ಮಾರ್ಮಲೆತು
ಕದ್ದು ಬೆಣ್ಣೆಯ ಮೆದ್ದ ಸುದ್ದಿಯನು ಮರೆತು ೪
ಹೋದ ಶ್ರ್ರುತಿತಂದಮೃತ ಉಣಿಸಿ ಸುರರಿಗೆ ಖಳನ
ತೀಡಿ ಶಿಶುವನು ಪೊರೆದೆ ಗರ್ವದಿಂದ
ಭೂದೇವಿಯನ್ನಳೆದೆ ಖಳರೊದ್ದೆ ಅರಸಾದೆ
ನೀ ದೇವಿಯ ಧರಿಸಿ ಶಿರಿ ಪ್ರಸನ್ವೆಂಕಟೆನ್ನ ತುತಿ ಕೇಳದೆ ೫

ಅಂಜಿಕ್ಯಾಕೆನಗಂಜಿಕಿ
೩ ಆತ್ಮ ನಿವೇದನೆ
೧೯೦
ಅಂಜಿಕ್ಯಾಕೆನಗಂಜಿಕೆ
ಕಂಜನಾಭ ಶ್ರೀನಿವಾಸನ ದಯವಿರಲು ಪ.
ಅಶನ ವಸನವನ್ನು ಕುಳಿತಲ್ಲೆ ನಡೆಸುವ
ನಿಶಿದಿನ ನೀಚರಾಧೀನ ಮಾಡದೆ
ಹಸನಾಗಿ ತನ್ನಂಘ್ರಿ ನೆರಳೊಳು ಬಚ್ಚಿಟ್ಟು
ಕುಶಲದಿ ಸಾಕುವ ದೊರೆಯ ನಂಬಿದ ಬಳಿಕ ೧
ಹುಲ್ಲು ಕಚ್ಚಿ ಕಲ್ಲು ಹೊತ್ತು ಧನವನುಳ್ಳ
ಕ್ಷುಲ್ಲ ಜೀವರನೆಲ್ಲ ಕಾಯುವ ಶಕ್ತಿ
ಎಲ್ಲ ವ್ಯವಹಾರವ ಮಾಡುವ ಬಲ ನನ
ಗಿಲ್ಲೆಂದು ಆಯಾಸಬಡಲೀಸದವನಿರೆ ೨
ಆವಾವ ಕಾಲದಿ ಆವಾವ ದೇಶದಿ
ಸೇವೆಗೆ ನಾ ತಪ್ಪೆ ಕೃಪೆ ತಪ್ಪಿಸ
ಭಾವಿಕರೊಡೆಯ ಪ್ರಸನ್ವೆಂಕಟಾದ್ರೀಶ
ಸಾವು ಕಳೆದು ಜೀವಕಾಶ್ರಯನಾಗಿರೆ೩

ಹಾಡಿನ ಹೆಸರು :ಅಂಜಿಕ್ಯಾಕೆನಗಂಜಿಕಿ
ಹಾಡಿದವರ ಹೆಸರು :ವಿದ್ಯಾ ಎಂ. ಎಸ್. ಮತ್ತು ಚೈತ್ರಾ ಕೆ. ಆರ್.
ರಾಗ :ಜುಂಜೂಟಿ
ತಾಳ :ತ್ರಿಶ್ರ ನಡೆ
ಸಂಗೀತ ನಿರ್ದೇಶಕರು :ರಮಾಮಣಿ ಆರ್. ಎ.
ಸ್ಟುಡಿಯೋ :ಅರವಿಂದ್ ಸ್ಟುಡಿಯೊ, ಬೆಂಗಳೂರು

ನಿರ್ಗಮನ

ಅಮ್ಮ ಕೇಳೆ ಯಶೋದಮ್ಮ
(ಇ) ವಾತ್ಸಲ್ಯಭಾವ
೩೩
ಅಮ್ಮ ಕೇಳೆ ಯಶೋದಮ್ಮ ಗೋಪಿಯರೆನ್ನ
ಸುಮ್ಮನೆ ದೂರುತಿದ್ದಾರೆ ಬುದ್ಧಿ ಹೇಳೆ ಇವರಿಗೆ ಪ.
ನಾನೊಲ್ಲೆನೆಂದರು ಗೋಪ ಮಾನಿನಿರೆತ್ತಿಕೊಂಬರು
ಆನೆಯಾಡಬಾರೊ ರಂಗ ಎಂದೆನ್ನನೊಯಿದು
ತಾನಾಗಿ ಗೋರಸವನು ಕೊಟ್ಟರುಣ್ಣದೆ ಚೆಲ್ಲುವೆ
ನೀನಣ್ಣನ ಕರೆದು ಕೇಳೆ ಗೋವಳೇರ ಠಕ್ಕ ಡೌಲು ೧
ಸಾಸಿರ ಬಿಸಳಿಗೆ ಬೆಣ್ಣೆ ಕೂಸುಗಳು ಮೆಲ್ಲೋದುಂಟೆ
ಹೇಸಿಕೆ ಬರುತಿದೆ ಅವರ ಮೊಸರು ಕಂಡು
ಮೀಸಲ ಮುರಿದರೆ ಅವರ ಜೆಟ್ಟಿಗ ನನ್ನ ಕಚ್ಚನೆ
ಹಾಸ್ಯದೊಳು ಮಾತನಾಡಿ ಮೋಸ ಮಾಡುತಿಹರಮ್ಮ ೨
ತಮ್ಮ ಮಕ್ಕಳುಪಟಳ ನಮ್ಮ ಮೇಲಿಕ್ಕುತಿಹರು
ತಮ್ಮ ನಲ್ಲರ ಕಾಟವು ನಮ್ಮದೆಂಬರು
ನಿಮ್ಮ ಮಕ್ಕಳ ಗುಣವ ನೀ ಬಲ್ಲೆ ನಂದನರಾಣಿ
ಗುಮ್ಮನಂಜಿಕೆಗೆ ಮನೆಯೊಳಿಹೆನೆ ಪ್ರಸನ್ವೆಂಕಟ೩

ಹಾಡಿನ ಹೆಸರು :ಅಮ್ಮ ಕೇಳೆ ಯಶೋದಮ್ಮ
ಹಾಡಿದವರ ಹೆಸರು : ಚಂದನ ಬಾಲಾ, ನಂದಿನಿ
ರಾಗ :ಷಣ್ಮುಖಪ್ರಿಯ
ತಾಳ :ಆದಿ ತಾಳ
ಸಂಗೀತ ನಿರ್ದೇಶಕರು :ನಾಗಮಣಿ ಶ್ರೀನಾಥ್ ಎಂ.
ಸ್ಟುಡಿಯೋ :ಅಶ್ವಿನಿ ಸ್ಟುಡಿಯೊ, ಬೆಂಗಳೂರು

ನಿರ್ಗಮನ

ಬೇಸರದೆಂದೂ ಸದಾಶಿವನೆನ್ನಿ
೧೫೯
ಬೇಸರದೆಂದೂ ಸದಾಶಿವನೆನ್ನಿ
ಕಾಶಿಯ ಪ್ರಭು ವಿಶ್ವೇಶ್ವರನೆನ್ನಿ ಪ.
ನಂದಿವಾಹನ ಆನಂದನು ಎನ್ನಿ
ಸುಂದರ ಗಣಪನ ತಂದೆಯು ಎನ್ನಿ ೧
ನಂಬೆ ಭವಾಂಬುಧಿ ಅಂಬಿಗನೆನ್ನಿ
ಅಂಬಿಕೆಯರಸು ತ್ರಯಂಬಕನೆನ್ನಿ ೨
ಕರ್ಪರ ಭಾಂಡ ಕಂದರ್ಪಹರೆನ್ನಿ
ಸರ್ಪಭೂಷಣ ಸುಖದರ್ಪಣನೆನ್ನಿ ೩
ಬೇಡಿದ ಭಾಗ್ಯವೀಡಾಡುವನೆನ್ನಿ
ಬೇಡನ ಭಕುತಿಗೆ ಕೂಡಿದನೆನ್ನಿ ೪
ಶಂಭು ಗಜದ ಚರ್ಮಾಂಬರನೆನ್ನಿ
ಸಾಂಬ ಸುಗುಣ ಕರುಣಾಂಬುಧಿಯೆನ್ನಿ ೫
ಎಂದಿಗೂ ಭಾವಿಕ ಮಂದಿರನೆನ್ನಿ
ಇಂದುಶೇಖರ ನೀಲಕಂಧರನೆನ್ನಿ ೬
ದುರ್ದನುಜಾಂಧಕ ಮರ್ದಕನೆನ್ನಿ ಕ
ಪರ್ದಿ ಕೃಪಾಲತೆವರ್ಧಕನೆನ್ನಿ ೭
ಶರಣು ಸುರಾರ್ಚಿತ ಚರಣನೆ ಎನ್ನಿ
ಶರಣಾಗತರಾಭರಣನು ಎನ್ನಿ ೮
ತ್ರಿಪುರಾಂತಕ ನಿಷ್ಕಪಟನು ಎನ್ನಿ
ಅಪಮೃತ್ಯುಹರ ಖಳರಪಹರನೆನ್ನಿ ೯
ದಕ್ಷಯಜ್ಞವೀಕ್ಷಕನೆನ್ನಿ
ಪಕ್ಷಿಗಮನ ಭಟರಕ್ಷಕನೆನ್ನಿ ೧೦
ಈ ಪರಿ ನೆನೆದರೆ ಪಾಪದೂರೆನ್ನಿ
ಶ್ರೀ ಪ್ರಸನ್ವೆಂಕಟಗತಿ ಪ್ರೀತೆನ್ನಿ ೧೧

ಹಾಡಿನ ಹೆಸರು :ಬೇಸರದೆಂದೂ ಸದಾಶಿವನೆನ್ನಿ
ಹಾಡಿದವರ ಹೆಸರು :ಗೋಷ್ಠಿ ಗಾಯನ
ಸಂಗೀತ ನಿರ್ದೇಶಕರು :ಶಂಕರ್ ಎಸ್.
ಸ್ಟುಡಿಯೋ :ಅಶ್ವಿನಿ ಸ್ಟುಡಿಯೊ, ಬೆಂಗಳೂರು

ನಿರ್ಗಮನ

ಮತ್ತವ ನಾನಲ್ಲೊ ಮುರಾರಿ
೨೬೬
ಮತ್ತವನಲ್ಲೊ ಮುರಾರಿ ನಿನಗೆ ನಾ
ಮತ್ತವನಲ್ಲೊ ಮುರಾರಿ ನಿನ್ನ
ಭೃತ್ಯರ ಭೃತ್ಯರ ಭೃತ್ಯರ ಭೃತ್ಯನಿ
ಗೆತ್ತಣ ಸ್ವಾತಂತ್ರ್ಯ ಸಲಹಯ್ಯ ಶೌರಿ ಪ.
ರಂಗಾ ನೀ ಕೊಳ್ಳದ ಬಂಗಾರ ತಳಿಗ್ಯೂಟ
ನುಂಗುವ ಮತ್ತವನಲ್ಲೊ
ರಂಗಾ ನಿನ್ನ ಮರೆದಂಗನೆಯರನಾ
ಲಂಗಿಸಿ ಮತ್ತವನಲ್ಲೊ
ರಂಗಾ ನಿನ್ನೊಲುಮೆಯ ಡಿಂಗರರಂಘ್ರಿಗೆ
ರಂಗದೆ ಮತ್ತವನಲ್ಲೊ
ರಂಗಾ ನಿನ್ನೆಂಜಲೆನ್ನಂಗೈಯೊಳುಂಡು ರಾ
ಜಂಗಳನುಡುಗುವ ಬಡವ ನಾನಲ್ಲದೆ ೧
ನಾಥನೆ ನಾನೆಂದು ಮಾತು ಕಲಿತು ಖಳ
ವ್ರಾತ ಸಂಗದಿ ಮತ್ತವನಲ್ಲೊ
ನಾಥ ನಿನ್ನ ಮೀರಿದಾತನುಂಟೆಂದು ನಿ
ರ್ಭೀತಿಲಿ ಮತ್ತವನಲ್ಲೊ
ನಾಥ ನಿನ್ನ ಗುಣಖ್ಯಾತಿ ಹೊಗಳದನ್ಯ
ಸ್ತೌತ್ಯದಿ ಮತ್ತವನಲ್ಲೊ
ನಾಥ ನಿನ್ನಡಿಯ ತೀರಥವೆ ಗತಿಯೆಂದು
ಯಾತನೆಗಂಜುವ ಬೆದರುಗುಳಿಯಲ್ಲದೆ ೨
ತಂದೆ ನೀ ಮಾರಿದರೊಂದೊಪ್ಪು ಕೊಂದರೊ
ಪ್ಪೆಂದಿಗೆ ಮತ್ತವನಲ್ಲೊ
ತಂದೆ ನಿನ್ನ ಮನೆ ಹೊಂದಿದಟ್ಟಣೆಗೈದಿ
ಬಂಧಿಸು ಮತ್ತವನಲ್ಲೊ
ತಂದೆ ನಿನ್ನಾಯುಧ ಸಂದು ಸಂದಿಗೆ ಕಾಸಿ
ತಂದಿಡು ಮತ್ತವನಲ್ಲೊ
ತಂದೆ ಪ್ರಸನ್ನವೆಂಕಟಿಂದಿರೇಶನೊಬ್ಬ ಅಹು
ದೆಂದ ಸೊಕ್ಕೊಂದುಳ್ಳವನಲ್ಲದೆ ೩

ಹಾಡಿನ ಹೆಸರು :ಮತ್ತವ ನಾನಲ್ಲೊ ಮುರಾರಿ
ಹಾಡಿದವರ ಹೆಸರು :ವಿರೂಪಾಕ್ಷ ವಂದಲಿ
ರಾಗ :ಕಾಪಿ
ತಾಳ :ಭಜನ್ ಠೇಕಾ
ಸಂಗೀತ ನಿರ್ದೇಶಕರು :ವೆಂಕಟೇಶ ಕುಮಾರ್ ಎಂ.
ಸ್ಟುಡಿಯೋ :ಅರ್ಚನ ಸ್ಟುಡಿಯೊ, ಬೆಂಗಳೂರು

ನಿರ್ಗಮನ