Categories
ರಚನೆಗಳು

ಪ್ರಸನ್ನವೆಂಕಟದಾಸರು

೫ ತತ್ವವಿವೇಚನೆ
೩೭೧
ಅಂಜನೆಸುತ ನಮೊ ಸ್ವಾಮಿ
ಕಂಜಜಪದಪತಿ ಮೌಂಜಾಶ್ರಮಿ ಪ.
ಪತಿತ ಪಾವನ ನಾಮಧೇಯ ಹನುಮಾಜ್ಞೆಯಿಂ
ದತೀತಾನಾಗತ ಅಜಾಂಡಜ್ಞೇಯಾ
ಮೃತ ಸಂಜೀವನಾದಿ ಚತುರೌಷಧ ತಂದೆ
ಕ್ಷತಘಾತ ಪ್ಲವಗರ ಪ್ರತತಿ ರಕ್ಷಿಸಿದೆ ೧
ವ್ಯಾಘ್ರೇಶ್ವರಾಜಿತ ಸಮರ್ಥ ವಸುಧಾಹೃತ
ಅಗ್ರಜ ಯಜ್ಞಾಧಿಕರ್ತ
ಉಗ್ರ ಕೌರವಜನ ನಿಗ್ರಹ ಕೃಷ್ಣ ಮ
ತಾಗ್ರಣಿ ಭೀಮ ಸಮಗ್ರ ಸುಜ್ಞಾನಿ ೨
ದುಷ್ಟೋಕ್ತಿ ಪೂರ್ವಪಕ್ಷಜಾರಿ ಭೇದೋಚ್ಚಾರಿ
ವಿಷ್ಣುಪಕ್ಷ ಸಿದ್ಧಾಂತ ಸೂರಿ
ಸೃಷ್ಟಿಲಿ ವರದ ವಾಸಿಷ್ಠ ಪ್ರಸನ್ವೆಂಕಟಾ
ಧಿಷ್ಟನ ಪ್ರಿಯ ಮುನಿ ಶಿಷ್ಟರೊಡೆಯ ನೀ ೩

೩೭೨
ಅಂಜರು ಹರಿಭಟರು ದುರಿತಾರಿ
ಗಂಜರು ಹರಿಭಟರು
ಮಂಜಿನ ದಂಡೋಡಿಪ ಮೂಡಣ ವರ
ಕಂಜಸಖನ ಪೋಲ್ವವರು ಪ.
ಅಗ್ಗಳಿಕೆಯೈಗಣೆಯನ ಬಲದಲಿ
ಮುಗ್ಗದೆ ಕುಲಿಶೆದೆಯಲ್ಲಿ ವೈ
ರಾಗ್ಯಾಸ್ತ್ರದಿ ಈರೈದಾಳಾಣ್ಮನ
ಕುಗ್ಗಿಸಿ ಸೆರೆ ತರುವವರು ೧
ಮೂರರಾಯುಧ ಹತಿಭಯ ಜರಿದು
ವಾರಣ ನಾಕೆರಡಿರಿದು ಶೃಂ
ಗಾರದ ರಾಹುತರೆಂಟರ ಸದೆವರು
ವೀರ ಹರಿ ಧ್ವನಿಯವರು ೨
ಎರಡೊಂಬತ್ತು ನಾದಿಕಾಭೇರಿ
ಎರಡು ಕಹಳೆಯ ಚೀರಿ
ಸರಕು ಮಾಡಿ ನವಕಲಿ ಸಂಜಿತರು
ಹರಿ ಮಂಡಿತ ನವರಥರು ೩
ಒಂದೆ ನಿಷ್ಠೆಯ ರಣಧ್ವಜ ಮೇರೆಗೆ
ಹಿಂದಾಗದೆ ಮುಂದಾಗಿ
ಒಂದಿಪ್ಪತ್ತರಿ ವ್ಯೂಹ ಕೆಡಹುವರು
ಕುಂದದ ಧೃತಿ ಮತಿಯವರು ೪
ಹಂಗಿನ ಸ್ವರ್ಗವ ಸೂರ್ಯಾಡುವರು
ಡಂಗುರ ಹೊಯ್ಯುವ ಮಹಿಮರು
ರಂಗ ಪ್ರಸನ್ವೆಂಕಟಪತಿ ಭಟರು
ಮಂಗಳಪದ ಲಂಪಟರು ೫

೩ ಆತ್ಮ ನಿವೇದನೆ
೧೯೦
ಅಂಜಿಕ್ಯಾಕೆನಗಂಜಿಕೆ
ಕಂಜನಾಭ ಶ್ರೀನಿವಾಸನ ದಯವಿರಲು ಪ.
ಅಶನ ವಸನವನ್ನು ಕುಳಿತಲ್ಲೆ ನಡೆಸುವ
ನಿಶಿದಿನ ನೀಚರಾಧೀನ ಮಾಡದೆ
ಹಸನಾಗಿ ತನ್ನಂಘ್ರಿ ನೆರಳೊಳು ಬಚ್ಚಿಟ್ಟು
ಕುಶಲದಿ ಸಾಕುವ ದೊರೆಯ ನಂಬಿದ ಬಳಿಕ ೧
ಹುಲ್ಲು ಕಚ್ಚಿ ಕಲ್ಲು ಹೊತ್ತು ಧನವನುಳ್ಳ
ಕ್ಷುಲ್ಲ ಜೀವರನೆಲ್ಲ ಕಾಯುವ ಶಕ್ತಿ
ಎಲ್ಲ ವ್ಯವಹಾರವ ಮಾಡುವ ಬಲ ನನ
ಗಿಲ್ಲೆಂದು ಆಯಾಸಬಡಲೀಸದವನಿರೆ ೨
ಆವಾವ ಕಾಲದಿ ಆವಾವ ದೇಶದಿ
ಸೇವೆಗೆ ನಾ ತಪ್ಪೆ ಕೃಪೆ ತಪ್ಪಿಸ
ಭಾವಿಕರೊಡೆಯ ಪ್ರಸನ್ವೆಂಕಟಾದ್ರೀಶ
ಸಾವು ಕಳೆದು ಜೀವಕಾಶ್ರಯನಾಗಿರೆ೩

೧೯೧
ಅಂಜುವೆನದಕೆ ಕೃಷ್ಣ ಅಭಯವ ಕೋರಿದಕೆ ಪ.
ನೀನಿತ್ತ ಮತಿಯಿಂದ ನಿನ್ನ ಹೊಗಳುತಿರೆ
ಹೀನ ಮಾನವರೊಂದೊಂದೂಣೆಯ ನುಡಿವರು ೧
ಬಾಣವನೆಸೆದು ಬಿಲ್ಲನಡಗಿಸುವಂತೆ
ಆ ನಿಂದಕರು ನಿಂದಿಶಾಣೆಗೆ ನಿಲುವರು ೨
ಮಾಧವ ನಾನೇನು ಓದಿದವನಲ್ಲ ಶ್ರೀ
ಪಾದವೆ ಗತಿಯೆಂಬೆ ಬಾಧಿಸುತೈದಾರೆ ೩
ಅಪರಿಮಿತಪರಾಧಿ ಕಪಟಿ ನಾನಾಗಿಹೆ
ಅಪರೋಕ್ಷಿಯೆಂದೆಂಬ ಕುಪಿತ ಖಳರ ನೋಡಿ೪
ಹಿತಶತ್ರುಗಳ ಸಂಗತಿ ಸಾಕು ಪ್ರಸನ್ವೆಂಕಟ
ಪತಿ ನಿನ್ನ ಭಕ್ತರ ಸಂಗ ಕೊಡು ಕಾಣೊ ೫

(ನು. ೨) ಶರ್ವ ಸರ್ವೋತ್ತಮನೆಂಬವ
೪ ಲೋಕನೀತಿ
೨೯೪
ಅಂದೇನಿಂದೇನಯ್ಯ ಶ್ರೀ ಅರ
ವಿಂದನಾಭನ ಹಗೆಯವ ಅಸುರ
ಎಂದಿಗೆ ಮತಿ ಕವಲಿಲ್ಲದೆ ಹರಿಪದ
ಹೊಂದಿದಗೆ ಮುಕ್ತಿಯವಸರ ಪ.
ಅಂದಿಗೆ ಹರಿಮಹಿಮೆಗಳನ್ನು ಆ
ನಂದದಿಂದ ಕೇಳದವ ದ್ವೇಷಿ
ಇಂದಿಗೆ ಹರಿಕಥೆ ತಾತ್ವಿಕ ಜನರನು
ನಿಂದಿಸುವವನೆ ನಿಜದ್ವೇಷಿ ೧
ಸರ್ವಹ ಕೃಷ್ಣಾಕೃತಿಗೆ ವೈರ್ಯಾಗಿ ಬಹು
ಗರ್ವಿಪ ಕಂಸನು ಅತಿತಾಮಸ
ಉರ್ವಿಲಿ ನರಹರಿ ಚರಣವರ್ಚಿಸದೆ
ಶರ್ವ ಸರ್ವೋತ್ತಮನೆಂಬವ ತಾಮಸ ೨
ವಾಸುದೇವನ ಪಾಶದಿ ಬಿಗಿಸುವೆನೆಂದು
ಆಶಿಸಿ ಕೆಟ್ಟ ಕೌರವ ಕುಮತಿ
ದೋಷ ಧರ್ಮವನೆಲ್ಲ ಸರಿಮಾಡಿ ಶಾಕ್ತನಾ
ಗ್ಯಾಸುರಿ[ಯ] ಪೂಜಿಪ ಹೊಲೆ ಕುಮತಿ ೩
ರುಕ್ಮಿಣಿ ದೇವಿಯೆ ಲಕ್ಷ್ಮಿಯೆಂದು ತಿಳಿಯದ
ರುಕ್ಮನು ಮದಸೊಕ್ಕಿದ ಪಾಪಿ
ಲೆಕ್ಕವರಿಯದೆ ಜೀವೇಶರು ಸಮರೆಂದು
ಲೆಕ್ಕಿಸುವವ ನರರೊಳು ಪಾಪಿ ೪
ಕೃತಕ ಹಕ್ಕಿಯನೇರಿ ತಾ ವಾಸುದೇವನೆಂದು
ಅತಿಕ್ಲೇಶವುಂಡ ಪೌಂಡ್ರಕ ಕಲಿಯು
ಸಕಳ ಜಗದೊಡೆಯ ಪ್ರಸನ್ವೆಂಕಟೇಶನ
ಭೃತ್ಯನಾಗದೆಯೆ ನಾನೆಂದವ ಕಲಿಯು ೫

(ನು. ೨) ಕಿರ್ಮೀರ
೩೭೩
ಅಂಬುಜಾಕ್ಷನ ಬಂಟ ನೆನೆವರಿಗೆ ನಂಟ
ನಿಂಬರಿಗೆ ನೆಲೆವಂತ ವರದ ಹನುಮಂತ ಪ.
ಜಲಧಿಯನು ದಾಂಟಿ ಜಾನಕಿಗೆ ತಲೆವಾಗಿ ನೀ
ನಲಿದಕ್ಷಯ ನಿಶಾಟಾದ್ಯರರಿದೆ ಸತಿ ರಘು
ಕುಲೇಂದ್ರನಂಘ್ರಿಯ ಕಂಡು ಅಸಹಾಯದಿ
ಹಲವು ಸಾಹಸ ಮಾಡಿದಖಿಳ ಕಪಿನಾಥ ೧
ಕಿರ್ಮೀರ ಬಕ ಹಿಡಿಂಬಕ ಕೀಚಕಾದಿ ಖಳ
ದುರ್ಮತಿ ಕದಳಿವನಕೆ ಮತ್ತ ಕರಿಯೆ
ನಿರ್ಮಳಾನನೆ ದ್ರೌಪದಿಯ ಭಂಗಪಡಿಸಿದ ಕು
ಕರ್ಮಿ ಕೌರವರಿಗಶನಿಯೆ ೨
ಶ್ರೀ ಬಾದರಾಯಣಾಜ್ಞದಿ ತತ್ವಸಾರಾರ್ಥ
ನೀ ಬೋಧಿಸಿದೆ ನಿಜ ವೈಷ್ಣವ ಜನಕೆ
ಈ ಭುವಿಗೆ ಕಶ್ಮಲ ಕುವಾದಿಗಳ ಗೆದ್ದಬ್ಜ
ನಾಭಿ ಪ್ರಸನ್ನವೆಂಕಟೇಶಗರ್ಪಿಸಿದೆ ೩

ಲಕ್ಷ್ಮೀದೇವಿ
೧೫೧
ಅಂಬೆ ಶ್ರೀ ಅಂಬೆ ಜಗದಂಬೆ ಶರಣೆಂಬೆ
ಅಂಬುಜಾಯತಾಂಬಕನ ಇಂಬಲಿಹ ಬೊಂಬೆ ಪ.
ಕಾವನಯ್ಯನ ಭಟರ ಕಾವೆ ವರವೀವೆ
ದೇವಾದಿ ದೇವರ್ಕಳಿಗೆ ಕುಲದ ದೇವೆ (ವಿ?)
ಭಾವಕರ ಜೀವೆ ಚಿದ್ಭವನೈದಿಸುವೆ
ಸೇವಕರಾವೆ ಕಾಯಿ ಎನುವೆ ಧನ್ಯ ಎನುವೆ ೧
ಮಾಯಾಗುಣಮಯ ಅಂಬಾ ತರುವ ಹೊಂದಿರುವೆ
ತಾಯಂದಿರಖಿಳಾರ್ಥ ತಾಯಿ ನೀನೀವೆ
ಬಾಯೆನ್ನ ತಾಯೆನ್ನಲಾಯಾಸ ಬಿಡಿಸುವೆ ಎ
ನ್ನಯ ಪ್ರಿಯಳೆ ಪೀಯೂಷನುಣಿಸುವೆ ೨
ಬೊಮ್ಮನಿಗಮ್ಮ ಪರಬೊಮ್ಮನೊಲಿಸಮ್ಮ
ಸುಮ್ಮನಸರ ಮನೋರಮ್ಮೆ ಶ್ರೀರಮ್ಮೆ
ನಿಮ್ಮ ಮನ ನಮ್ಮರಿಯಾ ಉಮ್ಮಯವೀಯಮ್ಮ
ನಮ್ಮಯ ಪ್ರಸನ್ನವೆಂಕಟನ ಮೆಚ್ಚಿನಮ್ಮ ೩

೨ (ಅ) ಗುರುಸ್ತುತಿ
೧೬೫
ಅಗಲಿ ಜೀವಿಸಬಹುದೆ ಕರುಣಿಯನಗಲಿ ಜೀವಿಸಬಹುದೆ ಪ.
ಆಗಮಜ್ಞನ ಬುಧ ಉಡುಗಣ ಚಂದ್ರನ
ವಿಗಡ ಜನಾರ್ದನವರ್ಯರನುಳಿದು ಅ.ಪ.
ಇಳೆಯೊಳು ಸುರತರುವಿಲ್ಲದ ಕಾರಣ
ನಳಿನನಾಭಾಜ್ಞದೊಳವತರಿಸಿ
ನೆಳಲೊಳಿರಿಸಿ ಬಹುಸಲಹಿ ಕರವ ಬಿಟ್ಟು
ಸಲೆ ಹರಿಪುರಕೆ ಪೋಗಿಹ ಮಾತಾಪಿತನ ೧
ಆರುಕರ್ಮಕ್ಕೆ ಎಳ್ಳನಿತು ಕುಂದಿಲ್ಲದೆ
ಮೀರದೆ ಹರಿಪದಸೇವೆಯನು
ಸೂರೆ ಮಾಡಿದ ತತ್ವಸಾರವ ಜನರೊಳು
ಮೀರಿದ ಸುಗುಣನ ಪರಮಪಾವನನ ೨
ಸೀತಾಪತಿಯ ಪಾದಯಾತ್ರೆಯ ಕಾಲಕೆ
ಇತರ ವಿಷಯ ಭ್ರಾಂತಿಯ ಜರಿದು
ಪ್ರತತಿಮತಿಗುಣಾನ್ಮುಕ್ತಿಮೇತೇ ವ್ರಜಂತಿಯೆಂದು
ಪಥವಿಡಿದ ಪ್ರಸನ್ವೆಂಕಟೇಶ ಪ್ರಿಯನ ೩

(ನು. ೩) ಬಿಸಜಜನಯ್ಯ: ಸೃಷ್ಟಿಕಾಲದಲ್ಲಿ
೧೯೨
ಅನಿಮಿತ್ತ ಬಂಧು ಅತಿದಯಾಸಿಂಧು
ಆನತ ನಾನೆಂದು ಅಭಯ ನೀಡಿಂದು ಪ.
ಮಧುಕೈಟಭಾರಿ ಮುರಾಂತಕೋದಾರಿ
ಮದನೋದ್ಭವಕಾರಿ ಮನ್ನಿಸೆನ್ನನುದಾರಿ ೧
ವೈಕುಂಠಸದನ ವಜ್ರಾಭರಣ
ಶ್ರೀಕರವದನ ಸಲಹೆನ್ನನುದಿನ ೨
ಬಿಸಜಜನಯ್ಯ ಬರುಹಿ ಸುರಯ್ಯ
ಪ್ರಸನ್ವೆಂಕಟಯ್ಯ ಪಾಪವಾರಿಸಯ್ಯ ೩

(ನು. ೧) ಪಾಳ: ನಿಶ್ಚಿತವಾದ ಸಾಕ್ಷಿ
೧೯೩
ಅನುದಿನ ಭವಾಬ್ಧಿಯಲ್ಲಿ ಭವತರಂಗ ರಾಶಿಯಲ್ಲಿ
ಮುಳುಗುತಿಹೆ ಕೈಯ ಪಿಡಿಯೊ ಜನಕ ಕೃಷ್ಣಯ್ಯ ಪ.
ಶ್ರೀನಿವಾಸ ನಿನ್ನ ಭಕ್ತಿ ಮಾಡದ ಅಘವಂತನೆಂದು
ಹೀನ ಜನರ್ಪಾಳಕಿಟ್ಟರೇನ ಹೇಳಲೊ
ನೀನು ಪಾಲಿಪ ರಾಜ್ಯದಲ್ಲಜ್ಞಾನಿ ದೇಶಿಗನೊಬ್ಬ ಕೆಡಲು
ಹಾನಿ ಹೆಚ್ಚಳ ನಿನ್ನದಲ್ಲೆ ದೀನದಯಾಳು ೧
ಚಿತ್ತವೇಗಕ್ಕವಧಿ ಇಲ್ಲ ಹೊತ್ತುಕೊಂಡು ಕಂಡ ಕಡೆಗೆ
ಸುತ್ತುತಿದೆ ತನ್ನ ದಳವ ಕೂಡಿ ರಂಗಯ್ಯ
ಕರ್ತ ನಿನ್ನ ಪಾದದೆಡೆಯೆ ಒತ್ತಿ ನೀನಿದನಾಳಬೇಕು
ಹೆತ್ತ ತಾಯಿ ನೀನೆ ಗಡಾನೆತ್ತಿಕೊಳ್ಳಯ್ಯ ೨
ಹಳುವಗಳು ದಾರಿಕಾಣೆ ಸೆಳವಿನೊಳಾಶ್ರಯ ಕಾಣೆ
ನಳಿನನೇತ್ರ ನೀನೆ ಕಾಯೊ ಸುಲಭರೊಡೆಯ
ನೆಲೆಯ ತೋರಾತಂಕಹಾರಿ ಒಲಿದು ವರಾಭಯವ ಬೀರಿ
ಒಲಿಯೊ ಪ್ರಸನ್ವೆಂಕಟಾದ್ರಿನಿಲಯ ಉದಾರಿ ೩

(ಇ) ವಾತ್ಸಲ್ಯಭಾವ
೩೩
ಅಮ್ಮ ಕೇಳೆ ಯಶೋದಮ್ಮ ಗೋಪಿಯರೆನ್ನ
ಸುಮ್ಮನೆ ದೂರುತಿದ್ದಾರೆ ಬುದ್ಧಿ ಹೇಳೆ ಇವರಿಗೆ ಪ.
ನಾನೊಲ್ಲೆನೆಂದರು ಗೋಪ ಮಾನಿನಿರೆತ್ತಿಕೊಂಬರು
ಆನೆಯಾಡಬಾರೊ ರಂಗ ಎಂದೆನ್ನನೊಯಿದು
ತಾನಾಗಿ ಗೋರಸವನು ಕೊಟ್ಟರುಣ್ಣದೆ ಚೆಲ್ಲುವೆ
ನೀನಣ್ಣನ ಕರೆದು ಕೇಳೆ ಗೋವಳೇರ ಠಕ್ಕ ಡೌಲು ೧
ಸಾಸಿರ ಬಿಸಳಿಗೆ ಬೆಣ್ಣೆ ಕೂಸುಗಳು ಮೆಲ್ಲೋದುಂಟೆ
ಹೇಸಿಕೆ ಬರುತಿದೆ ಅವರ ಮೊಸರು ಕಂಡು
ಮೀಸಲ ಮುರಿದರೆ ಅವರ ಜೆಟ್ಟಿಗ ನನ್ನ ಕಚ್ಚನೆ
ಹಾಸ್ಯದೊಳು ಮಾತನಾಡಿ ಮೋಸ ಮಾಡುತಿಹರಮ್ಮ ೨
ತಮ್ಮ ಮಕ್ಕಳುಪಟಳ ನಮ್ಮ ಮೇಲಿಕ್ಕುತಿಹರು
ತಮ್ಮ ನಲ್ಲರ ಕಾಟವು ನಮ್ಮದೆಂಬರು
ನಿಮ್ಮ ಮಕ್ಕಳ ಗುಣವ ನೀ ಬಲ್ಲೆ ನಂದನರಾಣಿ
ಗುಮ್ಮನಂಜಿಕೆಗೆ ಮನೆಯೊಳಿಹೆನೆ ಪ್ರಸನ್ವೆಂಕಟ೩

೩೪
ಅಮ್ಮ ಬಾರೊ ರಂಗಮ್ಮ ಬಾರೊ ಪುಟ್ಟ
ತಮ್ಮ ಬಾರೊ ಮುದ್ದಿನುಮ್ಮ ತಾರೊ ಪ.
ಅಯ್ಯ ಬಾರೊ ಅಜನಯ್ಯ ಬಾರೊ ಚಿನು
ಮಯ್ಯ ಬಾರೊ ಬೆಣ್ಣೆಗಯ್ಯ ಬಾರೊ ೧
ಕಂದ ಬಾರೊ ಪೂರ್ಣಾನಂದ ಬಾರೊ ಸುರ
ವಂದ್ಯ ಬಾರೊ ಬಾಲ್ಮುಕುಂದ ಬಾರೊ ೨
ಅಣ್ಣ ಬಾರೊ ತಾವರೆಗಣ್ಣ ಬಾರೊ ಎನ್ನ
ಚಿನ್ನ ಬಾರೊ ಶಿಶುರನ್ನ ಬಾರೊ ೩
ನಲಿದು ಬಾರೊ ಕರುಣಾಜಲಧಿ ಬಾರೊ ಆಡಿ
ಬಳಲ್ದೆ ಬಾರೊ ಕರೆದರೊಲಿದು ಬಾರೊ ೪
ಶ್ರೀಶ ಬಾರೊ ಹಸುಗೂಸೆ ಬಾರೊ ಪರಿ
ತೋಷ ಬಾರೊ ಪ್ರಸನ್ವೆಂಕಟೇಶ ಬಾರೊ ೫

೩೭೪
ಅರ್ಚನೆ ಮಾಡಿರಯ್ಯ ಶ್ರೀ ಭಗವದರ್ಚನೆ ಮಾಡಿರಯ್ಯ
ಅರ್ಚನೆ ಮಾಡುವ ಅರ್ಚಕ ಬುಧರಿಗೆ
ಅರ್ಚಿಪ ಪದದಲ್ಲಿ ಅಚ್ಯುತ ದೊರೆವನೆಂದು ಪ.
ಅಂತರಂಗದ ಶುದ್ಧಿಲಿ ತನ್ನ ಬಾಹ್ಯಂತರ ಪರಿಪೂರ್ಣನ
ಚಿಂತಿಸಿ ಸರ್ವಸ್ವತಂತ್ರ ಶ್ರೀ ಹರಿವೇದ
ತಂತ್ರೋಕ್ತ ಪಥದಿ ನಿರಂತರ ಮರೆಯದೆ ೧
ಪೃಥು ಧ್ರುವ ಅಂಬರೀಶ ಸುಧರ್ಮಜ ದಿತಿಜೋದ್ಭವ ಅಕ್ರೂರ
ಕೃತವರ್ಮ ಸಾತ್ಯಕಿ ಯದುಕುಲ ಸುರಖಷಿ
ಯತಿತತಿ ಅರ್ಚಿಸಿ ಅತಿಧನ್ಯರಾದರೆಂದು ೨
ಅನಂತಮೂರ್ತಿಯೊಳು ತನಗೊಂದು ಧ್ಯಾನಕ್ಕೆ ತಂದುಕೊಂಡು
ಆನಂದತೀರ್ಥರ ಸಂತತಿಗಳಿಂದ
ತಾನು ಇಷ್ಟನಾಗಿ ನಾರಾಯಣನಾತ್ಮನೆಂದು ೩
ಬ್ರಹ್ಮಸ್ತೋತ್ರದಿ ಸಹಸ್ರ ಸನ್ನಾಮಪೂರ್ವಕ ಸ್ತೋತ್ರದಿ
ಶ್ರೀಮತ್ಪಂಚಸೂಕ್ತ ಪಂಚಾಮೃತ ಸ್ನಾನ
ರಮ್ಯಾಯುಧ ಕೌಸ್ತುಭಮಣಿ ಮಾಲೆಯಿಂದ ೪
ಧ್ಯಾನಾವಾಹನ ಸ್ನಾನ ಸುಪಾದ್ಯಾಚಮನಾಘ್ರ್ಯ ಧೂಪದೀಪ ಪ್ರ
ಸೂನ ತುಳಸಿ ಗಂಧಮೋಘ ನೈವೇದ್ಯದಿಂ
ಮಾನಸಾರ್ಚನೆ ಪ್ರತ್ಯಕ್ಷಾಗಲಿ ಎಂತೆಂದು ೫
ವೀರಾವರ್ಣದ ಮಧ್ಯದಿ ಶ್ರೀ ಮಧುಕೈಟಭಾಂತಕ ಕೃಷ್ಣನ
ಕೋಟಿಕಾಂಚನ ರತ್ನಾಭರಣ ವೈಜಯಂತಿ ಕಿ
ರೀಟ ಕುಂಡಲ ದಾಮಹಾರ ನೂಪುರಗಳಿಂದ೬
ದಿವ್ಯಾಂಬರ ಭೂಷಣ ನವರತುನ ಭವ್ಯ ಮಂಟಪ ವಸನ
ಅವ್ಯಾಕೃತಾಧ್ಯಕ್ಷ ಶ್ರೀಭೂಮುಕ್ತಾಮುಕ್ತ
ಸೇವ್ಯ ಮಾನನಾಪಾದ ಮೌಳ್ಯಾಂತ ವೀಕ್ಷಿಸಿ ೭
ಬಹು ನೀರಾಂಜನಗಳಿಂದ ಸದ್ವೇದೋಕ್ತ ಗಹಗಹನ ಸೂತ್ರಂಗಳಿಂದ
ಅಹಿವರಶಯನಜ ಭವಾಹಿಪ ವಿಪ್ರವಂದ್ಯ
ಮಹಿಮನನಂತನೆಂತೆಂದು ಪರವಶದಿಂದ ೮
ತಾಳದಂಡಿಗೆ ಜಾಗಟೆ ಶಂಖ ಮದ್ದಳೆ ಕಂಸಾಳೆ ಭೇರಿ
ಆಲಾಬುತಂಬೂರಿ ಭಾಗವತ ಗಾನ
ಮೇಳೈಸಿ ತುತೂರಿ ವಾಜಂತ್ರಿ ಘೋಷದಿಂದ೯
ಅಲವಬೋಧರು ಪೇಳಿದ ಪೂಜಾವಿಧಿಗಳ ಪ್ರದಕ್ಷಿಣೆ ಪ್ರಮಾಣ
ಲಲಿತ ಗೀತ ನೃತ್ಯ ಬಲು ಪ್ರೇಮದಲಿ ಮಾಡಿ
ಹೊಳೆವ ಬಿಂಬಾತ್ಮನ ಕಾಂಬ ಲವಲವಿಕೆಯಿಂದ೧೦
ಆತ್ಮ ಕರ್ತೃತ್ವ ನೀಗಿ ಸರ್ವಾಂತರಾತ್ಮ ಪರಮಾತ್ಮನೆಂದು
ಆತ್ಮ ಮತ್ತೆ ಜ್ಞಾನಾತ್ಮ ಪ್ರೇರಕ ಪ್ರೇ
ರ್ಯಾತ್ಮ ನಿವೇದನ ಭಕ್ತಿ ನವಕಗಳಿಂದ ೧೧
ಸರ್ವೇಂದ್ರಿಯ ಮನಸ್ಥ ಮುಖ್ಯಪ್ರಾಣನೋರ್ವ ನಿಯಂತ್ರ ಹರಿ
ಸರ್ವ ಪ್ರೇರಕನೆಂಬೊ ವಿಜ್ಞಾನಮಾರ್ಗದಿ
ಸರ್ವಕಾಲದಲಿ ಸರ್ವಸಮರ್ಪಣೆಯೆಂದು ೧೨
ಮಂದಜನರು ಭಕ್ತಿಲಿ ದೂರ್ವನೀರಿಂದೆ ಪೂಜೆಯ ಮಾಡಲು
ತಂದೆ ಪ್ರಸನ್ವೆಂಕಟಕೃಷ್ಣ ಕಾರುಣ್ಯ
ಸಿಂಧು ಪ್ರಸನ್ನಾತ್ಮಬಂಧು ಮುಕ್ತಿಯನೀವ೧೩

೨೯೫
ಅವನೆ ಜೀವಾಂಕಿತ ಪ್ರೇತ ನೋಡಿ
ಭುವಿಗೆ ಭಾರನು ಅವನು ಹರಿ ಹಗೆಯನು ಪ.
ಹರಿಕಥೆಗೆ ಬೇಸತ್ತು ಹರಟೆಯನೆ ಕೇಳುವವ
ಹರಿಯಗುಣ ಹೊಗಳದೊಣಪಂಟ ಬಡಿವವ
ಹರಿ ಮರೆದು ಮಲಭಾಂಡವನು ತುಂಬಿಕೊಳುವವ
ಹರಿಭಟರ ನಡೆನುಡಿಗೆ ಸೈರಿಸದವ ೧
ಹರಿಪ್ರಿಯರ ನೆರೆಗಾರದತ್ತತ್ತ ಜಾರುವವ
ಹರಿಯವರಿಗುಣಿಸದೆ ಧನ ಕಳೆವವ
ಹರಿಯಾತ್ರೆಗಂಜಿ ಬಲವನೆ ಕೊಳುವವ
ಹರಿವ್ರತವ ಬಿಟ್ಟಿತರ ವ್ರತ ಕೊಳುವವ ೨
ಹರಿ ಪದಾಂಬುಜವ ಜರಿದು ಹಲವು ನೀರ್ಕುಡಿವವ
ಹರಿಲಾಂಛನಿಲ್ಲದ ಚೆಲುವಿಕೆಯವ
ಹರಿ ಪ್ರಸನ್ವೆಂಕಟೇಶನ ಪಾದಾಬ್ಜವ ಭಜಿಸಿ
ಹರಿ ಪರದೈವವೆನ್ನದ್ಹೊಲೆಮನದವ ೩

೩೫
ಅಳದಿರೊ ಸುಮ್ಮನಿರಮ್ಮ ನೀ
ಅಳದಿರೊ ಬವ್ವ ಬಂದಾವಮ್ಮ ಕೃಷ್ಣಮ್ಮ ಪ.
ನಾಲ್ಕು ಮೊಗವುಳ್ಳ ಬವ್ವ ಹದಿ
ನಾಲ್ಕು ಜಗವ ಜೋಳಿಯಲ್ಲಿಟ್ಟ ಬವ್ವ
ಗೋಳಿಟ್ಟಿಸುತಿದೆ ಬವ್ವ ನಿನ್ನ
ಕಾಲು ಕಂಡರೆ ಕಚ್ಚಿ ಕೊಂಡೊಯ್ವ ಬವ್ವ ೧
ಗಗನ ತುಂಬ್ಯಾಡುವ ಬವ್ವ ಪ್ರಾ
ಣಿಗಳ ದೇಹವ ಪೊಕ್ಕು ಚೇಷ್ಟಿಪ ಬವ್ವ
ಜಗವನಲ್ಲಾಡಿಪ ಬವ್ವ ನಿನ್ನ
ಮೊಗವರಿತು ದೂರಲಿ(ದಿ?) ನಿಂತಿಪ್ಪ ಬವ್ವ೨
ಮೊಗವೈದು ಪಣೆಗಣ್ಣ ಬವ್ವ ಪುಲಿ
ದೊಗಲು ಕೆಂಜೆಡೆ ರುಂಡಮಾಲೆಯ ಬವ್ವ
ಬಗೆಯಿಂದ ಪೆಣ್ಣೆತ್ತಿ ಬವ್ವ ತಾ
ಸೊಗಸಿಲೆ ರಾಮರಾಮೆನುತಿದೆ ಬವ್ವ ೩
ಮೈಯೆಲ್ಲ ಕಣ್ಣಿನ ಬವ್ವ ತನ್ನ
ಕೈಯಲ್ಲಿ ವಜ್ರವ ಬೀಸುವ ಬವ್ವ
ಉಯ್ಯಲಾಡುತಲಿದೆ ಬವ್ವ ನಿನ್ನ
ಒಯ್ವೆನೆನುತ ಬಂತು ಹಲಕಾಲ ಬವ್ವ ೪
ಒಂದಲ್ಲ ನೂರಲ್ಲ ಬವ್ವ ನಿನ್ನ
ಮಂದಿರ ಸುತ್ತುತವನಂತ ಬವ್ವ
ಪೊಂದೊಟ್ಟಿಲೊಳು ನಿದ್ರೆಗೆಯ್ಯೈ ಎನ್ನ
ತಂದೆ ಪ್ರಸನ್ವೆಂಕಟ ಸಿರಿದೊರೆಯೆ ೫

೨೯೯
ಆ ಸುಖ ಹರಿಮರೆದವಗಯ್ಯ
ದೋಷಾಂಧಃತಮದೊಳಗೇನು ಸುಖ ಪ.
ಕಂಠತ ವ್ಯಸನ ಹೊಲಬಿಲ್ಲದೆ ಧರ್ಮ
ಕಂಟಕ ಶಾಸ್ತ್ರವಿಚಾರಕಗೆ
ಎಂಟು ವೃಷಭ ಹೂಡಿ ಮಹಾಶ್ರಮಿಸಿ ಬರೆ
ದಂಟು ಬೆಳೆದವನಿಗೇನು ಸುಖ೧
ಅನಿರುದ್ಧಗಖಿಳವರ್ಪಿಸಿದಾನಲ್ಪ
ಗುಣದೆ ಮತಿ ದೃಢವಿಲ್ಲದ ಮಾನವಗೆ
ಹಣ ವೆಚ್ಚಿಸಿ ರಿಣದೆಗೆದಿಟ್ಟ ಧಾನ್ಯವ
ತೃಣಸಮ ವಿಕ್ರಿಸಲೇನು ಸುಖ೨
ಶಂಖಪಾಣಿಯ ನಿಂದಿಸಿ ಕರ್ಮಶಕ್ತಿಯ
ಶಂಕರ ರವಿಗಣೋಪಾಸಕಗೆ
ಸಂಖ್ಯೆ ಇಲ್ಲದ ವಸ್ತು ನಿಶ್ಶೇಷದಿ
ಸುಂಕಕೆ ತೆತ್ತಿದರಾವ ಸುಖ೩
ಆಧ್ಯಾತ್ಮಾನುಭವ ಗುರುಕೃಪೆ ಇಲ್ಲದೆ
ವಿದ್ಯೋನ್ಮತ್ತ ದಯಾಶೂನ್ಯಗೆ
ನದ್ಯೋಲ್ಲಂಘಿಸಿ ದಡದಲಿ ನಾವೆ ಮುಳು
ಗಿದರೆ ಪ್ರಾಣಿಗಳಿಗೇನು ಸುಖ೪
ಪ್ರಸನ್ನವೆಂಕಟ ಪದಸರೋರುಹಗಳ
ಪ್ರಸನ್ನೀಕರಿಸದೆ ಸಾಹಸಬಡುವ
ಅಶುಭದನುಜರು ತಪಮಾಡಿ ತುದಿಯಲಿ
ವಿಷಮಗತಿಗ್ಹೋಗಲೇನು ಸುಖ೫

೨೯೬
ಆಗಬಲ್ಲದೆ ಹೀಗಾಗಬಲ್ಲದೆ
ಯೋಗಿಜನವಂದ್ಯನವರಿ
ಗ್ಹೀಗೆ ಯಮನ ಮನೆಯ ಬಾಧೆ ಪ.
ಕಾಮನಯ್ಯನರಮನೆಯ
ಪ್ರೇಮದ ದಾಸಿಗೆ ಮಹಾ
ಪಾಮರ ರಾಕ್ಷಸ ಕ್ರೂರ
ಕಾಮುಕರ ಸಂಯೋಗವಾಗಬಲ್ಲದೆ ೧
ಸಜ್ಜನರರಸನ ಮನೆಯ
ವಜ್ರ ಪಂಜರದ ಗಿಣಿಯು
ಮಜ್ಜಿಗೆ ಕಾಣದ ಮುದಿ
ಮಾರ್ಜಾಲನ ಬಾಯಿತುತ್ತಿಗಾಗಬಲ್ಲದೆ ೨
ರಾಜಾಧಿರಾಜನ ಮನೆಯ
ರಾಜಹಂಸವು ಕುಣಪ
ಭೋಜಕನಾದ ವೃಕನ
ಭೋಜಕನ ಅನುಕೂಲವಾಗಬಲ್ಲದೆ ೩
ಹರಿಯ ಬೇಂಟೆಯ ಮನೆಯ
ಹರಿಣಗಣಗಳಿಗೆ
ಗಿರಿಯ ಹಳುವದ ಹುಲಿಯ
ಗರಜರದ ಘಸಣೆಯಾಗಬಲ್ಲದೆ ೪
ಪ್ರಸನ್ನವೆಂಕಟನ ಮನೆಯ
ಕಸಕಡ್ಡಿಯೆಲ್ಲವು ವಜ್ರ
ವಿಷಮ ಯಮಬಂಟರೆಂಬ
ಮುಸಲಕೆ ಹುಡಿ ಹಿಟ್ಟು ಆಗಬಲ್ಲದೆ ೫

೧೯೪
ಆಗಲಿ ಹರಿಕೃಪೆ ಭಾಗವತರ ಸಂಗ
ನೀಗುವೆ ನಿಮ್ಮ ದುರಿತಗಳಿರ ಪ.
ಹರಿನಂಟರೋಲೈಸಿ ಜ್ಞಾನಾಸ್ತ್ರ ಗಳಿಸುವೆ
ಹರಿನಾಮ ವಜ್ರಕವಚ ತೊಡುವೆ
ಹರಿ ನಿರ್ಮಾಲ್ಯದ ಉತ್ತಮಾಂಗಾಭರಣವಿಟ್ಟು
ನೆರೆ ನಿಮ್ಮ ನಾಮ ನಿರ್ನಾಮವ ಮಾಳ್ಪೆ ೧
ಶ್ರೀಲೋಲನಂಘ್ರಿ ಸಮ್ಮದ ಸೈನ್ಯವ ಕೂಡಿ
ತಾಳ ದಂಡಿಗೆ ಗೀತಾಯುಧಗಳಿಂದ
ಕಾಲಕಾಲಕೆ ನಿಮ್ಮ ಮೇಳವ ಮುರಿದಾಡಿ
ಹಾಳು ಮಾಡುವೆ ಕೈಯಲಿ ಕಡ್ಡಿ ಕೊಡುವೆ ೨
ಇಕ್ಷು ಸ್ವಾದಾದರೆ ಬೇರಸಹಿತ ನೀವು
ಭಕ್ಷಿಸಬೇಡಿ ಬಾರದೆ ಮರಳಿ
ಪಕ್ಷಿಗಮನ ಪ್ರಸನ್ನವೆಂಕಟೇಶನ
ಪಕ್ಷದವರ ಹಗೆ ಹೊಲ್ಲಸಲ್ಲ ೩

೩೬
ಆಟಪಾಟವ ನೋಡಿ ಧನ್ಯರು ರಂಗಯ್ಯನಾಡ್ವ
ಆಟಪಾಟವ ನೋಡಿ ಧನ್ಯರು ಪ.
ಹೊಕ್ಕಳಲ್ಲಿರೊ ಮಗನು ಕಂಡರೆ
ನಕ್ಕಾನೆಂಬ ಹೇಯ ಬಿಟ್ಟು
ಚಿಕ್ಕರೊಡನೆ ನಂದವ್ರಜದಿ
ಮಕ್ಕಳಂತಲಿಪ್ಪ ರಂಗನಾಟ ೧
ಅಂಗಳದಲ್ಲಿದ್ದ ಪಂಕದಲ್ಲಿ
ಮುಂಗೈಯ ಮುರಾರಿ ಕೃಷ್ಣ
ಸಂಗದೆಳೆಯ ಮಕ್ಕಳೊಡನೆ
ಹಿಂಗದೆ ಬೈಯ್ಯಾಟವಾಡುವಾಟ ೨
ಚಿನ್ನ ಬಾ ನೀ ಹಸಿದೆಯೆಂದು
ಚೆನ್ನ ನೀ ಉಣಿಸಿದರೊಲ್ಲದೆ
ಕನ್ನವಿಕ್ಕಿ ಗೊಲ್ಲರ ಮನೆಯ
ಬೆಣ್ಣೆಮೊಸರ ಸೂರ್ಯಾಡಿ ಮೆಲ್ಲುವಾಟ೩
ರಂಬಿಸಿ ಗೋಪಿ ನೀಲವರ್ಣದ
ಬೊಂಬೆ ಬಾಲ ತೋಟಿ ಬೇಡೆನೆ
ಕೊಂಬು ಕೊಳಲು ಸೆಳೆದು ಹೆಟ್ಟಿಕುಟ್ಟುವ
ಡೊಂಬಿಕಾರ ವೀರಧೀರನಾಡುವಾಟ ೪
ಅಡಗಿದರ್ಭಕರ ಬಲ್ಪಿನಿಂದಲೆ
ಹಿಡಿದುತಂದು ಚಿಣ್ಣಿ ಚಂಡನಾಡುತ
ಬಡಿದು ಸೋಲಿಸಿ ದೂರು ಬರುವ ಮುನ್ನೆ
ಹುಡಿಯ ಹೊರಳೇಳುವ ತೊಂಡೆಕಾರ ದೇವನಾಟ ೫
ಮೃತ್ತಿಕೆಯನುಂಬ ಮಗನ ಕಂಡು
ಮತ್ತೆಶೋದೆ ಅಕ್ಕಟೆಂದು
ತುತ್ತಿಸಿದ ಮಣ್ಣ ತೆಗೆಯಲಾಗಳೆ
ಮತ್ರ್ಯ ನಾಕ ವಿಸ್ತಾರ ತೋರಿದ ೬
ಹಲವು ಹಗ್ಗದಿಂ ಕಟ್ಟಿದ ಗೋಪಿ
ಲಲನೆಗಚ್ಚರಿಯಾಗಿ ಉಲೂ
ಖಲನ ಎಳೆದು ಮತ್ತಿಯ ಮರಗಳ
ಛಲದಿ ಮುರಿದ ವಿಚಿತ್ರ ಚರಿತ್ರನ ೭
ಕರುಣದೋರಿ ಗೋಪಾಂಗನೇರ
ತೋರದ ಮೊಲೆಯುಂಡ ವರಶಿಶುಗಳ
ಉರುಳಗೆಡಹ್ಯವರೊಳು ನಲಿವ
ದುರುಳ ಮಾಯಕಾರಖಿಳರೊಡೆಯನ ೮
ಆರ ಪುಣ್ಯವೆಂತಂತೆ ಲೀಲೆಯ
ತೊೀರಿ ಮುದ್ದು ಮೋಹವ ಬೀರಿದ
ಸಾರಿದ ಭಕ್ತವತ್ಸಲ ನಮ್ಮ ಜಾರ
ಚೋರ ಪ್ರಸನ್ವೆಂಕಟೇಶನಾಡುವ ಆಟ೯

(ನು. ೪) ಅವಸ್ಥಾತ್ರಯ
೩೭೫
ಆತ್ಮನಿವೇದನ ಭಕುತಿ ತ
ನ್ನಾತ್ಮವನೀವ ಪರಮಾತ್ಮ ವಿಶ್ವಾತ್ಮಗೆ ಪ.
ಸರ್ವಕರ್ಮಕರ್ತ ಸರ್ವಕಾಲವರ್ತ
ಸರ್ವಕಾರ್ಯಕೆ ಹರಿ ಸ್ವತಂತ್ರನು
ಸರ್ವಾರ್ಥದಲಿ ಪೂರ್ಣಸರ್ವೇಂದ್ರಿಯ ನಿಯಂತ್ರ
ಸರ್ವದೇಶ ಕಾಲವ್ಯಾಪ್ತ ಗೋಪ್ತನೆಂದು ೧
ಕಾಸು ಕೋಶ ಗೇಹ ದೇಹೇಂದ್ರಿಯ ಪ್ರಾಣ
ಸ್ತ್ರೀ ಸುತ ಪ್ರಿಯ ದಾಸಿ ದಾಸರನು
ಈಶಗರ್ಪಣೆ ಮಾಡಿ ದಾಸದಾಸನಾಗಿ
ಲೇಶವು ತನಗೆನ್ನದೆ ಸರ್ವಾರ್ಪಿಸುವುದು ೨
ಜನ್ಮ ಜನ್ಮಾಂತರ ಧರ್ಮ ಕರ್ಮಂಗಳು
ನಿರ್ಮಲ ಜ್ಞಾನ ವೈರಾಗ್ಯ ಭಕ್ತಿ
ಸ್ವರ್ಮಂದಿರ ಭವಯಾತ್ರೆ ಗರ್ಭಯಾತ್ರೆ
ರಮೆಯ ರಮಣಗರ್ಪಣವೆಂಬ ನಿಷ್ಠೆಯ ೩
ಅಹರ್ನಿಶಿ ಶ್ವಾಸೋಚ್ಚ್ವಾಸಾವಸ್ಥಾತ್ರಯ
ಬಹು ಜಪತಪ ಅರ್ಚನೆ ಸಂಭ್ರಮ
ಬಹುಭಿ:ಶ್ರವಣ ಬಹುಧಾಶ್ರವಣ ಮನನ
ಶ್ರೀಹರಿ ಧ್ಯಾನ ಧ್ಯಾಸಾತ್ಮಾಥರ್ದಿ೪
ಅಲಂಬುದ್ಧಿಯನು ಬಿಟ್ಟು ಅಲಸಮತಿಯನು ಸುಟ್ಟು
ಅಲಸಲಕ್ಷಣ ವಿಸ್ರ‍ಮತಿಯನು ನೀಗಿ
ಅಲವಬೋಧಾಚಾರ್ಯ ಮತದವರನು ಪೊಂದಿ
ಲಲಿತ ಪ್ರಸನ್ವೆಂಕಟ ಚತುರಾತ್ಮಗೆ ೫

(ನು.೧) ಹೇವಿನ ರಕ್ಕಸರ ಮಾರಿ
೩೭೬
ಆದಿಗುರುರಾಯ ನಮ್ಮ ಮುಖ್ಯ ಪ್ರಾಣ ಭವ
ವ್ಯಾಧಿ ಕೋಟಿ ಭೇಷಜನೆ ಮುಖ್ಯಪ್ರಾಣ ಪ.
ಜೀವ ತೊರೆದ ಪ್ಲವಗಗಣಕೆ ಮುಖ್ಯಪ್ರಾಣ ಸಂ
ಜೀವನ ತಂದೌಷಧವನಿತ್ತ ಮುಖ್ಯಪ್ರಾಣ
ಹೇವಿನ ರಕ್ಕಸರ ಮಾರಿ ಮುಖ್ಯಪ್ರಾಣ ಹನುಮ
ದೇವ ದೇವ ರಾಘವಪ್ರಿಯ ಮುಖ್ಯಪ್ರಾಣ ೧
ಸೋಜಿಗದಿ ಕೀಚಕನ ಕೊಂದ ಮುಖ್ಯಪ್ರಾಣ ಭೀಮ
ಆಜನುಮ ಅಸಹಾಯಶೂರ ಮುಖ್ಯಪ್ರಾಣ
ರಾಜಸೂಯಕೆ ಮುಖ್ಯಕರ್ತಾ ಮುಖ್ಯಪ್ರಾಣ ಕ್ಷಾತ್ರ
ತೇಜಪೂರ್ಣ ಕೃಷ್ಣಾಂಕಿತನೆ ಮುಖ್ಯಪ್ರಾಣ ೨
ರೌಪ್ಯಪೀಠದಿ ಕೃಷ್ಣಾರ್ಚಕನೆ ಮುಖ್ಯಪ್ರಾಣ ಮಧ್ವ ಸಾ
ರೂಪ್ಯ ಮುಖ್ಯದ ಮುಕ್ತಿದಾತ ಮುಖ್ಯಪ್ರಾಣ
ಗೌಪ್ಯ ಶ್ರುತ್ಯಜ್ಞಾಚಾರ್ಯನೆ ಮುಖ್ಯಪ್ರಾಣ ದೇ
ದೀಪ್ಯ ಪ್ರಸನ್ವೆಂಕಟಪತಿಪ್ರಿಯ ಮುಖ್ಯಪ್ರಾಣ ೩

೬ (ಅ)ಸಂಪ್ರದಾಯದ ಹಾಡುಗಳು
೪೨೪
ಆದಿನಾಥಗೆ ಜಯಮಂಗಳ
ಶ್ರೀಧರ ಮೂರ್ತಿಗೆ ಶುಭಮಂಗಳ ಪ.
ಧರಿಸಿ ನಾವೆಯ ಸತ್ಯವ್ರತನ ಪಾವನ ಮಾಡಿ
ಚರಿಸದೆ ಮಂದರಗಿರಿಯ ಹೊತ್ತು
ಧರೆಯ ನೆಗಹಿ ಬಂಗಾರಗಣ್ಣಿನವನ
ಹರಿದು ದೈತ್ಯಜಗೊಲಿದು ಬಂದವಗೆ ೧
ಸುರಪನಂತಸ್ತಾಪ ತರಿದು ಧರಿತ್ರಿಯ
ಸುರರಿಗೆ ಸಕಲ ಪದವಿಯನಿತ್ತು
ಶರಧಿಯ ದಾಟಿ ದಶಶಿರನ ತಲೆ ಚಿವುಟಿ
ತುರುಗಾಯ್ದ ಗೋಪೇರ ಅರಸನಿಗೆ ೨
ಅಂತರಾಳ ಪಟ್ಟಣಕಪಾಯವನು ಮಾಡಿ
ಅಂತ್ಯದಿ ಯವನರ ಸವರಿದಗೆ
ಚಿಂತಿಪ ದಾಸರ ಚಿಂತಾಮಣಿಗೆ ಸಿರಿ
ಕಾಂತ ಪ್ರಸನ್ವೆಂಕಟದಾಸನಿಗೆ ೩

೩೭
ಆನೆ ಬಂತಾನೆ ಬಂತಾನೆ ಬಂತಮ್ಮ
ದಾನವಕದಳಿಯ ಕಾನನ ಮುರಿವ ಮದ್ದಾನೆ ಬಂತಮ್ಮ ಪ.
ಉಂಗುರುಗುರುಳು ನೀಲಾಂಗ ಚೆಲ್ವಾನೆ
ಕಂಗಳು ಹೊಳೆವೊ ವ್ಯಾಘ್ರಾಂಗುಲಿಯಾನೆ
ಬಂಗಾರದಣುಗಂಟೆ ಶೃಂಗಾರದಾನೆ
ಮಂಗಳತಿಲಕದ ರಂಗನೆಂಬಾನೆ೧
ಅಲೆದೊಲೆದಾಡುವ ಎಳೆಮರಿಯಾನೆ
ಕೆಳದಿ ಗೋಪಿಯರೊಳು ಗೆಳೆತನದಾನೆ
ಘಳಿಲು ಫಳಿಲು ರವದಿ ಸುಳಿದಾಡುವಾನೆ
ಮಲೆತವರೆದೆ ತುಳಿದಾಡುವಾನೆ ೨
ನಳಿನಭವರಿಗೆ ತಾ ನಿಲುಕದ ಆನೆ
ಹಲವು ಕವಿಗಳಿಗೆ ಸಿಲುಕದೀ ಆನೆ
ನಲವಿಂದ ಭಕ್ತರ ಸಲಹುವ ಆನೆ
ಸಲೆ ಪ್ರಸನ್ವೆಂಕಟನಿಲಯನೆಂಬಾನೆ ೩

೩೮
ಆರ ಬಾಲಕನೆ ಜಾರನಿವನಾರ ಬಾಲಕನೆ ಪ.
ಗುಂಡಿಗೆ ಬೆಣ್ಣೆ ಕದ್ದುಂಡಸಿಯರ ಕುಚ
ಪುಂಡರೀಕವಿಡಿದು ಭಂಡು ಮಾಡುತಲಿಹ ೧
ನಿದ್ದೆಯ ಕಾಲಕೆ ಸದ್ದಿಲ್ಲದೆ ಬಂದು
ಗದ್ದ ಮುಂಡ್ಯಾಡಪ್ಪಿ ಮುದ್ದು ನೀಡುವ ನೋಡೆ ೨
ಅರ್ತಿಲಿ ಬಾಲನ್ನೆತ್ತಿಕೊಂಡರೇನಮ್ಮ
ಅತ್ತೆ ಮಾವನ ಮುಂದೆ ಬತ್ತಲೆ ಮಾಡುವ ೩
ಬಲು ಮೋಹ ಬರುತಿರೆ ಎಳೆಯನ ಕಾಣುತ
ಅಳುಕದೆಮ್ಮುಡಿಯೇರಿ ಕಳೆವ ಕಂಚುಕ ಇವ ೪
ಹುಸಿಯೇ ಅಳಲು ಅವಚಿ ರಂಬಿಸಿದ ಮೇಲೆ
ಪ್ರಸನ್ವೆಂಕಟ ಕೃಷ್ಣ ನಸುನಗು ನಗುತಾನೆ೫

೨೯೭
ಆರ ಮಕ್ಕಳಾರ ರಾಣಿ ಆರ ಸಂಪದ
ವಾರಿಜಾಕ್ಷನಿಟ್ಟ ತೆರದಿ ಇರು ಎಲೆಲೆ ಆತ್ಮಾ ಪ.
ಬೇಡಿದರೆ ಕೊಡ ದೇವ ಬೇಡದಿದ್ದರೀವ ದೇವ
ನೋಡುತಿಹ ಸುಮ್ಮನೆ ತಾನಾಡಿಪ ಜಗವ
ರೂಢಿಯಲ್ಲಿ ಎಳೆ ಮಕ್ಕಳಾಡುವಂತೆ ಕೊಟ್ಟು ಕಳೆದು
ಓಡಿಸಾಡುತಿಹ ಯಂತ್ರಾರೂಢನ ಬಳಗಿದೆಲ್ಲ ೧
ಕಂದನ್ನಿಟ್ಟು ತಂದೆ ತಾಯಿ ತಂದೆ ತಾಯಿ ಮುಂದೆ ಕಂದನ
ಹಿಂದೆ ಮುಂದೊಯ್ಯುವನ್ಯಮ ಸಂಬಂಧರಿಗ್ಹೇಳಿ
ಚಂದದಿ ಜಗಜ್ಜೀವರು ದಂದುಗದಿ ತೊಳಲೆ ಕಂಡು
ಮಂದಸ್ಮಿತದೊಳಿಪ್ಪ ಮುಕುಂದನ ಮಾಯವಲ್ಲದೆ ೨
ಹಾವು ಹಾರವಕ್ಕು ಮೃತ ಜೀವರು ಸಂಜೀವರಕ್ಕು
ಪಾವಕ ತಂಪಕ್ಕು ವಿಷ ಪೀಯೂಷಮಕ್ಕು
ಆವಕಾಲದಿ ಶ್ರೀ ಪ್ರಸನ್ವೆಂಕಟೇಶನಂಘ್ರಿಯ
ಭಾವದೊಳರ್ಚಿಸು ಕ್ಷುದ್ರ ಜೀವಿಗಳಾಸೆ ಸಲ್ಲ ೩

ಕೌಸ್ತುಭ

ಆರೆ ಅವನಾರೆಲೆ ಜಾಣೆ ಆರೆ ಅವನಾರೆ
ವೀರಹಕ್ಕಿಯನೇರಿ ನಿರುತದಿ ಧ್ವನಿಗೈದುವ ಶ್ರೀಪತಿ ಕಾಂಬೆ ಪ.
ಬಾಹ ಭಾವವ ನೋಡೆ ಕರುಣಿಯ ಬಾಹುಬಂದಿಯ ನೋಡೆ
ದೇಹ ಮಾಟವ ನೋಡೆ ಕರುಣಾಬ್ಧಿ ಸ್ನೇಹ ನೋಟವ ನೋಡೆ
ಆ ಹೇಮಾಂಬರ ನೋಡೆ ಮುಕುಟವಿಟ್ಟಿಹ ಕುಂಡಲ ನೋಡೆ
ರೂಹ ನೋಡಿ ಮೈ ಮರೆವ ಮುನಿಸಮೂಹದೆಡ
ಬಲದರ್ಥಿಯ ನೋಡೆ ೧
ಆಭರಣದ ಕಾಂತಿ ಕಂಡ್ಯಾ ಮೃಗನಾಭಿ ತಿಲಕವ ಕಂಡ್ಯಾ
ಶೋಭಿಸುವ ನಾಮ ಕಂಡ್ಯಾ ಕೌಸ್ತುಭ ಶ್ರೀವತ್ಸ ಕಂಡ್ಯಾ
ತ್ರಿಭುವನ ಗರ್ಭ ಕಂಡ್ಯಾ ತ್ರಿವಳಿಯ ನಾಭಿ ಚೆಲ್ವಿಕೆ ಕಂಡ್ಯಾ
ಶ್ರೀ ಭುಜಂಗವೇಣಿ ಲಕುಮಿಯಳ ತಾ ಬಿಗಿದಪ್ಪೊ
ವಕ್ಷವ ಕಂಡ್ಯಾ ೨
ಸ್ವಾಮಿಗೆ ಮನಸೋತೆನೆ ಭಕ್ತಪ್ರೇಮಿಗೆ ಮನಸೋತೆ
ರಾಮನಿಗೆ ಮನಸೋತೆ ನಾ ಘನಶ್ಯಾಮನಿಗೆ ಮನಸೋತೆ
ವಾಮನಗೆ ಮನಸೋತೆನೆ ಪೂರ್ಣಕಾಮನಿಗೆ ಮನಸೋತೆ
ಶ್ರೀ ಮನೋಹರ ಪ್ರಸನ್ವೆಂಕಟೇಶನ ನಾಮಕೆ ಮೆಚ್ಚು ಬಿದ್ದು ಮನಸೋತೆ೩

(ನು. ೧) ಮೂರು ದಳ್ಳುರಿ: ತಾಪತ್ರಯಗಳು
೧೯೫
ಆರೆನ್ನ ಉಳುಹುವರೈ ರಂಗ
ಘೋರಾರಣ್ಯ ಭವದಿ ಸಿಕ್ಕಿದೆ ರಂಗ ಪ.
ಎಂಟು ಕಾಡಾನೆ ಎಂಟು ಕಡೆಯಲಿ ನಿಂತಿವೆ
ಗಂಟನಿಕ್ಕಿವೆ ಮೂರು ದಳ್ಳುರಿಯ
ಸುಂಟರಗಾಳ್ಯೆಬ್ಬರಿಸಲು ಗಿಡ
ಗಂಟಿಲಿ ಬಿದ್ದೆ ನೀನಲ್ಲದೆನ್ನ ೧
ಹುಲಿಯೊಂದು ಗುಡುಗುಡಿಸುತಿದೆ ಭಯಂಕರ
ಬಲು ತೋಳೆರಡು ಕೆಕ್ಕರಿಸುತಿವೆ
ಸಲುಗೆಯ ಕೋತಿಯೊಂದಣಕಾಡುತಲಿದೆ
ಮೇಲೆ ಕರಡಿಯು ಹತ್ತೆಳವುತಿದೆ ೨
ಕಾಳುರಗನ ಕಟ್ಟು ಮೈತುಂಬ ನನ್ನ
ನಾಲಿಗೇಳದು ನಿನ್ನ ಕರೆಯಲಿಕೆ ನಿ
ನ್ನಾಳಟ್ಟಿ ಕರೆಸಿಕೊಳ್ಳೆಲೆ ತಂದೆ ನಾ
ಗೋಳಿಟ್ಟೆ ಪ್ರಸನ್ನವೆಂಕಟ ಬಂಧು ೩

ನರನ ಬಂಡಿಯ ಬೋವ
(ಈ) ಶಾಂತಭಾವ
೮೧
ಆವ ನರನ ಬಂಡಿಯ ಬೋವನು
ದೇವ ಬಿಡದೆ ನಮ್ಮನು ಕಾವನು ಪ.
ನಾಕಪತಿಯ ಮುದವಳಿಯಲು ಕೋಪದಿ
ನಾಕು ಮೂರುದಿನ ಮಳೆಗರೆಯಲು
ಆ ಕಮಲಾಕ್ಷ ಕರುಣದಿ ಗಿರಿಯನೆತ್ತಿ
ಗೋಕುಲವಿಸರ ಭಯವ ಕಳೆದ ಹರಿ೧
ದುಷ್ಟ ಸುಯೋಧನನನುಜ ಸಭೆಯೊಳು ಯು
ಧಿಷ್ಠಿರ ಸತಿಯ ಲಜ್ಜೆಯಕೆಡಿಸೆ
ಕಷ್ಟಿಸಿ ದ್ವಾರಕೆಕೃಷ್ಣ ಪೊರೆಯೆನಲು
ಶಿಷ್ಟಳಿಗಂಬರವಿತ್ತಭಿಮಾನಿ ೨
ಅಹ:ಪತಿಯ ಸುತ ಬವರದೊಳಗೆ ಸಿತ
ವಾಹನನ ಶಿರ ಕೆಡೆಯೆಸೆಯೆ
ಮಹಾಮಹಿಮ ರಥವಿಳೆಗೊತ್ತಿ ಭಕ್ತನ
ಸ್ನೇಹದಿ ತಲೆಯನುಳುಹಿದ ದಯಾನಿಧಿ ೩
ಕಲಶಜಭವ ವೈರಾಟೆಯ ಬಸುರಿಗೆ
ನಳಿನಭವಾಸ್ತ್ತ್ರವ ಬಿಡೆ ಕಂಡು
ಅಳುಕದವೋಲರಿಯಿಂದ ನಿವಾರಿಸಿ
ಸುಲಭದಿ ಮಗುವ ಸಲಹಿದ ಸರ್ವೋತ್ತಮ ೪
ತನ್ನ ನಂಬಿದರಿಗಿನಿತು ಕುಂದಾದರೆ
ತನ್ನದೆಂದರಿದಾವ ಕಾಲದಲಿ
ಮನ್ನಿಸಿ ಪೊರೆಉರಗಾದ್ರಿಯೊಳೆಸೆವ ಪ್ರ
ಸನ್ನ ವೆಂಕಟ ಭೂವರಾಹಾನಂತರೂಪ ೫

ಕಾಲನಾಗಿ ಜಗವ ತತ್ಕಾಲದಲ್ಲಿ ನುಂಗುವಂಗೆ
೩೯
ಆವ ಪುಣ್ಯವೊ ಗೋಪಿಗಾವ ಪುಣ್ಯವೊ ಪ.
ಆವ ಪರಬೊಮ್ಮನಾವಾವ ಪರಿಯಲಾಡಿಸುವ ಅ.ಪ.
ಮಾರನನ್ನ ಪೆತ್ತನ ಕುಮಾರನೆಂದು ಕರೆದು ತನ್ನ
ಮಾರ ಬೀಸಿ ಬಿಗಿದಪ್ಪಿ ಮೋರೆ ನೋಡಿ ಮೊಲೆಯ ಕೊಡುವ ೧
ಕಾಲನಾಗಿ ಜಗವ ತತ್ಕಾಲದಲ್ಲಿ ನುಂಗುವಂಗೆ
ಕಾಲ ಮೇಲೆ ಮಲಗಿಸಿ ತ್ರಿಕಾಲದಲ್ಲಿ ಹಾಲನೆರೆವ ೨
ನೀತ ಪ್ರಭು ವಿಶ್ವಕೆ ವಿನೀತನಾಗಿ ಕೈಯ ಒಡ್ಡೆ
ನೀತಿ ಹೇಳಿ ನವನವನೀತವಿತ್ತು ರಂಜಿಸುವ ೩
ಆನೆಗೊಲಿದು ಎಂಟುದಿಕ್ಕಿನಾನೆಯಾಳ್ದ ಅಪ್ರತಿಮ ದ
ಯಾನಿಧಿಯ ಕುಳ್ಳಿರಿಸಿ ಆನೆ ಬಂತಂತಾನೆಯೆಂಬ ೪
ತೋಳ ನೋಡು ಧೈರ್ಯದೀರ್ಹತ್ತು ತೋಳಿನವನ ಹೋರುವ ನಳಿ
ತೋಳವಿಡಿದು ವಾರಂವಾರ ತೋಳನ್ನಾಡೊ ಮಗನೆ ಎಂಬ ೫
ತಾರಕೋಪದೇಶಕಗೆ ತಾರಕ ರಂಗನಳಲು
ತಾರಕಪತಿಯ ತೋರಿ ತಾರಕ್ಕ ಬಿಂದಿಗೆಯೆಂಬ ೬
ದಟ್ಟವಾದ ಜೀವಜಾಲದ ಅಟ್ಟುಳಿ ನಿವಾರಣಂಗೆ
ದಟ್ಟು ದಟ್ಟು ಎಂದು ರಂಗನ ದಟ್ಟ ಸಾಲನಿಕ್ಕಿಸುವ ೭
ಚಿನ್ಮಯಾತ್ಮ ಮುಕ್ತಾಮುಕ್ತ ಚಿನ್ನರನಾಡಿಸುವಂಗೆ
ಚಿನ್ನ ತಾ ಹೊನ್ನ ಗುಬ್ಬಿ ಚಿನ್ನ ಗುಬ್ಬಿಯಾಡಿಸುವ ೮
ದೃಷ್ಟಾದೃಷ್ಟದೇಹಿಗಳದೃಷ್ಟ ನಿಯಾಮಕಂಗೆ
ದೃಷ್ಟಿ ತಾಕಿತೆಂದು ತೆಗೆದು ದೃಷ್ಟಿ ದಣಿಯೆ ತುಷ್ಟಿ ಬಡುವ ೯
ಅನ್ನಮಯನು ಬ್ರಹ್ಮಾದ್ಯರಿಗೆ ಅನ್ನಕಲ್ಪತರು ಪರ
ಮಾನ್ನ ಚಿನ್ನಿಪಾಲಿನಿಂದ ಅನ್ನಪ್ರಾಶನ ಮಾಡಿಸುವ ೧೦
ನಿತ್ಯತೃಪ್ತ ನಿತ್ಯಾನಂದ ನಿತ್ಯಭೋಗಿ ನಿತ್ಯತಂತ್ರ
ನಿತ್ಯಕರ್ಮನ್ನೆತ್ತಿಕೊಂಡು ನೆತ್ತಿ ಮೂಸಿ ಮುದ್ದಿಸುವ ೧೧
ಆ ಲಯದಲ್ಲಾಲದೆಲೆ ಆಲಯಗೆ ತೊಟ್ಟಿಲು ಉ
ಯ್ಯಾಲೆಯಿಟ್ಟು ಮುದ್ದು ಮಾತನಾಲಿಸಿ ಜೋಗುಳವ ಪಾಡುವ ೧೨
ಅಂಜಲಿ ಪುಟದಿ ಸುರರಂಜಿಕೆಯ ಬಿಡಿಸುವ ನಿ
ರಂಜನಗಭ್ಯಂಜನಿಸಿ ಅಂಜನಿಟ್ಟು ಅಮ್ಮೆ ಕೊಡುವ ೧೩
ಸಪ್ತ ಸಪ್ತ ಭುವನ ಜನಕೆ ಸುಪ್ತಿ ಎಚ್ಚರೀವನಿಗೆ
ಸುಪ್ತಿ ಕಾಲವೆಂದು ತಾನು ಸುಪ್ತಳಾಗಿ ಸ್ತನವ ಕೊಡುವ ೧೪
ತನ್ನ ಮಗನ ನಡೆಯ ನುಡಿಯ ತನ್ನ ಪತಿಗೆ ಹೇಳಿ ಹಿಗ್ಗಿ
ತನ್ನ ಭಾಗ್ಯ ಲಕ್ಷ್ಮೀಶ ಪ್ರಸನ್ನವೆಂಕಟ ಕೃಷ್ಣಯೆಂಬ ೧೫

೪೦
ಆವ ಮಾನುನಿ ನಿನಗೇನು ಮಾಡಿದಳೊ ಇಂದಿನ
ಭಾವ ಬೇರ್ಯಾಗಿದೆ ಮುಖದಲಿ ಕೇಳೊ ಪ.
ಬಿರಿಗಣ್ಣು ಬಿಡುವೆ ಮೊಲೆಯನೊಲ್ಲೆ ಕಂದ ದಿವ್ಯ
ಶರೀರಕ್ಕೆ ಗ್ರಹಕಪಟೇನೊ ಮುಕುಂದ ೧
ಬಾಯೊಳು ಬಿರಿಜೊಲ್ಲು ಬರುತಿದೆ ಮಗುವೆ ಹಾ ಹಾ
ಹಾಯೆಂದು ತೆರಬಾಯ ತೆರದ್ಯಾಕೊ ನಗುವೆ ೨
ತಿರುಕರಣುಗನಂತೆ ತಿರುಗುವೆ ಬಾಲ ಲೇಶ
ಕರುಣವಿಲ್ಲ ಎನ್ನೊಳು ಪುಣ್ಯಶೀಲ ೩
ಅನ್ನವನೊಲ್ಲೆ ಮನೆಯ ಬಿಟ್ಟೆಯೊ ಕೂಸು ನಿನ್ನ
ಚಿನ್ನತನದ್ಭುತವಾಗಿದೆ ಲೇಸೊ ೪
ಉದ್ಹಿಡಿದಾಡುವ ಮರುಳಾಂತ ಶಿಶುವೆ ಪುಣ್ಯ
ದೊಡೆಯ ಪ್ರಸನ್ನವೆಂಕಟನೆ ಎನ್ನಸುವೆ ೫

೪೧
ಆವಳಂಜಿಸಿದವಳು ಪೇಳು ರಂಗಮ್ಮ ನಾ
ನವಳ ಗಾರು ಮಾಡುವೆ ನಡೆ ಕೃಷ್ಣಮ್ಮ ಪ.
ದೂರುವಿರಾದರೆ ಮಗನ ದಾರಿಗೆ ಹೋಗದಿರಿ ಎಂದು
ಸಾರಿ ಕೈಯ ಕಡ್ಡಿ ಕೊಟ್ಟೆ ಜಾರೆಯರಿಗೆ
ಸಾರಿ ಸಾರಿಗೆ ನಿನ್ನನು ರಟ್ಟು ಮಾಡುವ ಮಾತೇನು
ಆರಿಗೆ ಮಕ್ಕಳಿಲ್ಲೇನೊ ನಾನೇ ಹಡೆದವಳೇನೊ ೧
ಇದ್ದರಿರಲಿ ಕೂಸಿನ ಆಡುವಾಟಕೊಪ್ಪಿದರೆ
ಎದ್ದು ಹೋದರೆ ಹೋಗಲಿ ಆವಪಳ್ಳಿಂದ
ಕದ್ದು ತಿಂದನೆಂದಾವಾಗ ಕೂಗುವ ಕಾರಣವೇನೊ
ಮುದ್ದೆ ಬೆಣ್ಣೆ ಕೈಯಲಿತ್ತರೊಲ್ಲದೆ ಚೆಲ್ಲುವೆ ಕಂದ ೨
ಏಸು ಪುಣ್ಯರಾಶಿ ಕೂಡಿತೆಂದು ನಿನ್ನಾಟವ ನೋಡಿ
ಬೀಸಿ ಬಿಗಿದಪ್ಪುವಂಥ ಭಾಗ್ಯವನುಂಡೆ
ಕೂಸೆ ನಿನ್ನ ಕಂಡಸೂಯೆಬಡುವರಳಿಯಲಮ್ಮ
ದಾಸರಿಗೆ ಲೇಸಾಗಲಿ ಪ್ರಸನ್ವೆಂಕಟ ಕೃಷ್ಣ ೩

೧೯೬
ಆವಾಗ್ಗೆ ಕಾಂಬೆ ನಿನ್ನ ಮೈಯ ನನ್ನ
ಕಾವ ಮುಕುಂದ ಮುರಾರಿಯ ಸರ್ವ
ಜೀವಕೆ ಛಾಯನಾದವನ ನನ್ನ
ಸಾವು ಹುಟ್ಟು ತಪ್ಪಿಸುವನ ಪ.
ದೇಶ ದೇಶ ತಿರುಗಿ ಸೋತೆ ನಾ ಬಲು
ದೇಶಿಗನಾದೆ ಕೃಶಾದೆ ನಾ ತನ್ನ
ದಾಸರ ಹಾನಿ ಇನ್ನಾರಿಗೆ ಆ
ವಾಸುಕಿಶಯನಗೆ ಹೇಳಿದೆ ೧
ಆಪತ್ತು ಬರಲೀಸ ಎಂದಿಗೆ ತ್ರಿವಿಧ
ತಾಪವನಾರೈವದಾವಾಗ್ಗೆ ಬಹು
ಪಾಪ ನೂಕಿದೆ ಅವನ ನಾಮದೆ ಕಂಡ
ಶ್ರೀಪತಿಗೆಲ್ಲ ಬಿನ್ನೈಪೆನಿಂದೆ ೨
ಕಂಗಳು ದಣಿವನ್ನ ಕಾಂಬೆನೆ ಎ
ನ್ನಿಂಗಿತ ಹರಿಮೆಚ್ಚಿ ಕೇಳ್ವನೆ ನಿತ್ಯ
ಮಂಗಳ ಪ್ರಸನ್ವೆಂಕಟಾಚಲವಾಸ
ರಂಗನು ನಿಜಭಕ್ತವತ್ಸಲ ೩

೨೯೮
ಆವಾವಾಗಲಿ ರಾಮನ ನೆನೆವನವ ಜಾಣ ಪ.
ಸಚೇಲ ಸ್ನಾನ ಮೋನಗಳ್ಯಾಕೆ
ಶುಚಿ ಇಲ್ಲೆಂಬನುಮಾನಗಳ್ಯಾಕೆ
ಉಚಿತಾನುಚಿತ ಕಾಲವದ್ಯಾಕಘ
ಪಚನ ಮಾಡುವ ಹರಿನಾಮಾಗ್ನಿ ೧
ಅಮಲ ಸ್ಥಾನವು ಬರಲಿನ್ಯಾಕೆ
ಕ್ರಮದಕ್ಷರ ಮಾಲಿಕೆ ಬೇಕ್ಯಾಕೆ
ರಮಣೀಯಾಸನ ಬಯಸುವದ್ಯಾಕತಿ
ಕ್ರಮವಾಹುದು ಭವಕೋಟಿಯ ವಾರ್ತೆ ೨
ಆಲಸ್ಯದೆ ಅವನ ಮರೆಯಲಿನ್ಯಾಕೆ
ಪಾಲಿಪ ಕರುಣಿಯ ಬಿಟ್ಟಿರಲ್ಯಾಕೆ
ನಾಲಿಗೆಲವನಿರೆ ಕಾಲನ ದೂತರ
ಹಾಳುಮಾಡುವ ಪ್ರಸನ್ವೆಂಕಟ ದಾತಾರ ೩

೧೯೭
ಆಶಾವಿಡಿದು ಬಂದಿಹೆ ದೇಶಿಗ ನಾನು ಅಭಿ
ಲಾಷೆ ಪೂರಿಸೆಮ್ಮಯ್ಯ ಶೇಷಗಿರಿಯ ತಿಮ್ಮ್ಮಯ್ಯ ಪ.
ಘೊರ ಭವಾರಣ್ಯದಲ್ಲಿ ದಾರಾಪತ್ಯಬಂಧು ಜನರೆಂಬ
ಕ್ರೂರಮೃಗಾಸ್ಯಕೆ ಸಿಲುಕಿ ದಾರಿವರಿಯೆ
ನಾರಸಿಂಹ ನಿನ್ನವರು ತೋರಿದರು ಶ್ರೀಮಂಗಳ
ಮೂರುತಿಯ ಕಂಡು ಸುಖಸಾರಾಮೃತವುಣ್ಣಲಾಗಿ ೧
ಒಡಲಿಗೋಸುಗ ವೃತ್ತಿ ಹಿಡಿದು ತಡವರಿಸುತ
ಕಡೆಗಾಣದೊರಲಿ ಅಂಜ್ಯೋಡುತಿರಲು
ಒಡೆಯ ನಿನ್ನಯ ಸಿರಿಸಡಗರ ನಾಮ ಕೇಳಿ
ಹುಡುಕುತ ನಲಿವಿಂದ ಬಡತನ ಹಿಂಗಲೆಂದು ೨
ಈಗಿದೆೀ ವೈಕುಂಠವೆಂದು ಭೋಗಿ ವಾಸುದೇವನೆಂದು
ಬಾಗಿ ಶ್ರುತಿ ಸ್ರ‍ಮತಿಗಳು ಕೂಗುತಲಿವೆ
ಯೋಗಿ ಪ್ರಸನ್ವೆಂಕಟ ಭಾಗವತರ ಪ್ರಿಯನೆಂದು
ಹೀಗೆ ಘನಗೋಳಿಡುತ ನಾ ನೀಗುವೆ ಚಿಂತೆಯನೆಂದು ೩

೩೦೦
ಆಳಬೇಕೈ ಸುಮತಿ ಪತಿವ್ರತೆಯ
ಜಾಳಿಸಬೇಕೈ ಕುಬುದ್ಧಿಯ ಬುಧರು ಪ.
ನಾಗರಕ್ಷಕನ ಪಾದ ಹೊಂದಿ ವಿಷಯ ಸ್ವಾರ್ಥ
ನೀಗಿಹ ಮಡದಿಯ ಕೂಡಬೇಕೈ
ಭಾಗವತರನು ಮಲಿನಿಪ ಮೋಹಿಯ
ಮೂಗು ಮುಂದಲೆ ಮೊಲೆ ಕೊಯಿದಟ್ಟಬೇಕೈ ೧
ಶೀಲವಿಡಿದು ನವನಾರೇರ ಸಖ್ಯದಲಿ
ಆಲಯ ನಡೆಸುವಳಿರಲಿಬೇಕಯ್ಯ
ಆಲಿ ಕುಣಿಸಿ ನವ ಪುರುಷರ ಕಂಡು ತಾ
ಮ್ಯಾಲೆ ಬೀಳುವಳ ಜಿಹ್ವೆ ಸೀಳಬೇಕೈ ೨
ಷಂಡಗಂಡಗೆ ಹಿತ ಹೇಳಿ ಅಂಗವ
ದಂಡಿಸಿ ಕೊಳುವಳ ನಂಬಬೇಕೈ
ಕಂಡ ಬೀದಿಲಿ ಸಾಧು ಕೊಂಡೆಯಾಡುವಳ
ಮಂಡೆ ಬೋಳಿಸಿ ಕತ್ತೆನೇರಿಸಬೇಕೈ ೩
ಮನೆಗೆಲಸದಲಿಟ್ಟು ಮಹಾತ್ಮರ ಸೇವೆಗೆಂದೂ
ದಣಿಯದ ರಂಭೆಯ ಒಲಿಸಬೇಕು
ಅಣಕಿಸಿ ಒಲಿದರ ನೀಚಾನುಕೂಲೆಯಾದ
ತನಗಲ್ಲದವಳ ಹೊಳೆ ನೂಕಬೇಕೈ ೪
ಶಶಿರವಿರಾಶಿ ಮೈ ಹೊಳವಿಲಿ ಮೆರೆವ
ಕುಶಲಗೆ ಮನವಿಟ್ಟ ಜಾಣೆ ಬೇಕೈ
ಪ್ರಸನ್ನವೆಂಕಟಪತಿಯಾಕಾರ ನೋಡಿ ತಾ
ಅಶರೀರನೆಂಬಳ್ಗೆ ವಿಷವಿಕ್ಕಿರೈ ೫

(ನು.೫) ಕುಚೇಲಮಿತ್ರ
೧೯೮
ಇಂದು ನಾಳ್ಯೊ ಈಗಾವಾಗೊ ಈ ಕಾಯ ಸ್ಥಿರವಲ್ಲ
ಇಂದಿರೇಶ ನಿನ್ನ ನೆನೆವ ಮತಿಯ ನೀಡೊ ಮನ್ನಿಸಿ ನೋಡೊ ಪ.
ಕುಚ್ಛಿತ ಕರ್ಮವಾಚರಿಸಿ ಕಶ್ಮಲ ಜನ್ಮನುಭವಿಸಿ
ದುಶ್ಚಿತ್ತದಿ ಬಾಳ್ದೆನಯ್ಯ ದೂರಾದೆ ನಿಮಗೆ ದಮ್ಮ್ಮಯ್ಯ
ಅಚ್ಚುತ ನಿನ್ನಿಚ್ಛೆಯಿಂದೆ ಆದಿವರ್ಣದವನಾದೆ
ಸ್ವಚ್ಛಿತ ಭಕ್ತಿಯನಿಲಯ ಸುಜನಬಂಧು ಸುಗುಣಸಿಂಧು ೧
ಹೊಟ್ಟೆಯ ಹೋರಟೆಗಾಗಿ ಹೊತ್ತಾರೆದ್ದು ತಿರುಗಿ ತಿರುಗಿ
ಕೆಟ್ಟ ವೃತ್ತಿಯನ್ನು ಹಿಡಿದೆ ಕೀಳುಮನುಜರೊಳಾಡಿದೆ
ಬಿಟ್ಟೆ ನಿಮ್ಮ ಪೂಜೆಯನ್ನು ಬಿದ್ದೆ ಭವಾಂಬುಧಿಯನ್ನು
ವಿಠ್ಠಲ ಎನ್ನುದ್ಧರಿಸೊ ವಿದ್ವದ್ರ‍ಹದ್ಯ ವೇದವೇದ್ಯ ೨
ವೇದಶಾಸ್ತ್ರಾಭ್ಯಾಸವಿಲ್ಲ ವೇದಜ್ಞರರ್ಚಿಸಲಿಲ್ಲ
ಬೋಧವನು ಕೇಳಲಿಲ್ಲ ಬುದ್ಧಿ ಎನ್ನೊಳು ಚೂರಿಲ್ಲ
ಸಾಧನವ ತಿಳಿಯಲಿಲ್ಲ ಸಾಧುಮಾರ್ಗವ ಕಾಣಲಿಲ್ಲ
ಭೇದಜ್ಞರೊಳ್ ಕೂಡಿಸೆನ್ನ ಭೀಮಪಾಲಾಭಿನವಲೀಲ ೩
ಕಾಂತೇರ ಕುಚೇಷ್ಟೆಗಳಿಗೆ ಕೀಳುಚ್ಚಾರದ ಮಕ್ಕಳಿಗೆ
ಭ್ರಾಂತನಾಗಿ ಸ್ನೇಹ ತೋರ್ದ ಬಲೆಯೊಳ್ ಸಿಲುಕಿದೆ
ಸಂತರಂಘ್ರಿ ಸಖ್ಯವನೊಲ್ಲೆ ಸತ್ಕಥೆಯನಾಲಿಸಲೊಲ್ಲೆ
ಅಂತು ಮದವನಿಳಿಸಿ ಕಾಯೊ ಅಂಗಜ ಪಿತನೆ ಅಘರಹಿತನೆ ೪
ಬಳಲಿಸಿದೆ ತನುವನು ಬಯಸಿ ಖಳರಾರ್ಥವನ್ನು
ನಳಿನಾಕ್ಷ ನಿನ್ನ ಬೇಡದೆ ನಾಸ್ತಿಕರಿಗೆ ಕೈಯನೊಡ್ಡಿದೆ
ಹೊಳೆವ ಸುರಭಿಯ ಬಿಟ್ಟು ಹುಲಿಪಾಲಿಗಾಯಾಸಬಟ್ಟೆ
ಕಳೆದೆನನಘ್ರ್ಯಾಯುಷ್ಯವ ಕುಚೇಲಮಿತ್ರ ಕರುಣನೇತ್ರ ೫
ವಿಷ್ಣು ತತ್ವವರಿಯದೆ ಧೀರ ವೈಷ್ಣವನೆನಿಸದೆ
ಭ್ರಷ್ಟಮನವ ತೊಳೆಯದೆ ಬಹಿಛ್ಛಿನ್ನದಲ್ಲೆ ಮೆರೆದೆ
ಶಿಷ್ಯ ಗುರುಗಳ ಜರಿದೆ ಶಠರನು ಅನುಸರಿಸಿದೆ
ದುಷ್ಟವೃತ್ತಿಯನು ಬಿಡಿಸೊ ದುರ್ಗುಣಧಾಮನ ದುರಿತಶಮನ೬
ಇಂದ್ರಿಯಗ್ರಾಮ ನಿನ್ನದು ಇಷ್ಟ ಬಳಗವು ನಿನ್ನದು
ಸೌಂದರ್ಯ ಸುಖ ನಿನ್ನದು ಸ್ವರೂಪ ಸ್ವಾತಂತ್ರ್ಯ್ರನಿನ್ನದು
ಮಂದಮತಿಯಿಂದ ಅಹಂಮತಿಯಲ್ಲಿ ನೊಂದೆ ಬಹು
ಕುಂದ ನೋಡದೆನ್ನ ಸಲಹೊ ಕುಂಜರವರದ ಕುಶಲಪದದ ೭
ನಿನ್ನ ಕಥಾಮೃತವು ಕಿವಿಗೆ ನಿನ್ನ [ಕೀರ್ತನೆ ನಾಲಗೆಗೆ]
ನಿನ್ನ ಲಾವಣ್ಯವು ಕಣ್ಣಿಗೆ ನಿನ್ನ ಸೇವೆ ಸರ್ವ ಇಂದ್ರಿಯಕ್ಕೆ
ಎನಗೆ ಬೇಗ ಕರುಣಿಸಿ ಎಲ್ಲ ದುರಿಚ್ಛೆಗಳ ನೂಕು
ಇನ್ನು ದಾಸದಾಸ್ಯವು ಬೇಕೊ ಋಷಿಕುಲೇಶ ಹೃಷಿಕೇಶ ೮
ಅಚ್ಯುತಾನಂತಗೋವಿಂದ ಆದಿಪುರುಷ ಮುಕುಂದ
ಸಚ್ಚಿದಾನಂದ ಸರ್ವೇಶ ಸುಚರಿತ್ರ ಕರಿವರದ
ನೆಚ್ಚಿದೆ ತವ ಪಾದಾಂಬುಜ ನಮೊ ಬೊಮ್ಮಾದ್ಯರ ದೇವ
ನಿಚ್ಚ ಪ್ರಸನ್ವೆಂಕಟ [ನಿನ್ನ ನೆನೆವ ಮ್ಮತಿಯನೀಡೊ
ಮನ್ನಿಸಿ ನೋಡೊ] ೯

(ನು.೧)ನೀರಸೆಳೆದು :
೪೨೫
ಇಂದು ಮಂಗಳ ಇಂದು ಮಂಗಳ ಇಂದಿರೆ ಅರಸಗೆ
ಇಂದು ಕುಲಕೆ ಇಂದು ದ್ರುಹಿಣ ಇಂದುಧರೇಶಗೆ ಪ.
ನೀರಹೊಕ್ಕು ನೀರ ಕಡೆದು ನೀರ ಕದಡಿ ಖಳನ ಕೆ
ನ್ನೀರ ತೆಗೆದು ಬಲಿಯ ಪಾತ್ರೆ ನೀರನ್ಹೆಚ್ಚಿಸಿ
ನೀರ ಸೆಳೆದು ನೀರಕಟ್ಟಿ ನೀರೇರೊಳಿದ್ದು ಮೂರುಪೊಳಲ
ನೀರೇರ್ಗೊಲಿದು ನೀಲಹಯವನೇರಿ ಮೆರೆವಗೆ ೧
ಧರೆಯನಾವೆ ನೆಗಹಿ ಧರಾಧರರ ಒರೆಸಿ ಧರೆಯನಪ್ಪಿ
ಧರಿಸಿ ಶಿಶುವಾಧರೆಯನಳೆದ ಧರೆಯ ಭಾರವನಿಳುಹಿದ
ಧರೆಯ ಮಗಳನಾಳ್ದು ಕೊಂದು ಧರೆಯಮಗನ ಮತ್ತೆ ಬೋ
ಧರನ್ನ ಮೋಹಿಪ ವರಣೋದ್ಧರಣ ಮಾಳ್ಪಗೆ ೨
ಇನಜಗೊಲಿದು ಇನಗೆ ಪೊರೆದು ಇನಿಯಳೆತ್ತಿ ಇನನ ಕಂಪಿಸಿ
ಇನಗೆ ಮೀರಿ ಬೆಳೆದು ಸೋಮ ಇನಜರನ್ನು ಜರಿದು ತಾ
ಇನಕುಲಜನಾಗಿ ತಾ ಇನಿಯರಾಳಿದ ಇನಿತು ಲಜ್ಜೆಯಿಲ್ಲದ ಕಲಿ
ಯನ್ನು ಸದೆದ ಪ್ರಸನ್ನವೆಂಕಟ ಇನಗತಾತ್ಮಗೆ ೩

ಸತ್ಯಾಭಿನವ ತೀರ್ಥರು
೧೬೬
ಇಂದೆ ಕಂಡೆವು ಗುರುರಾಯನ ನಮ್ಮ
ತಂದೆ ಸತ್ಯಾಭಿನವತೀರ್ಥನ ಫಲಿಸ
ಬಂದೊದಗಿತು ನಮ್ಮ ಸುಕೃತ ಆ
ನಂದರಸಾಬ್ಧಿ ಉಕ್ಕೇರಿತು ಪ.
ಇದೀಗೆ ಕಲ್ಪದ್ರುಮ ಕಾಣಿರೈ ಅಹು
ದಿದೀಗೆ ಚಿಂತಾಮಣಿ ನೋಡಿರೈ ಮತ್ತಿ
ದಿದೀಗೆ ಸುರಭಿ ಬಂದಿತೆನ್ನಿರೈ ತಮ್ಮ
ಮುದದಿಂದ ಯತಿರೂಪವಾಯಿತೈ ೧
ಬಡವರ ದೊರೆ ನಮ್ಮ ಗುರುರಾಯ ಈ
ಪೊಡವಿಲಿ ಯಾಚಕರಾಶ್ರಯ ಆಪ್ತ
ಹಡೆದ ತಾಯಿತಂದೇರ ಮರೆಸಿದ ಎ
ಮ್ಮೊಡೆಯ ಭಕ್ತಿ ಭಾಸವ ಬೆಳೆಸಿದ೨
ಭಕ್ತಿ ಪಥವ ನೋಡಿ ನಡೆವನು ಯತಿ
ಮುಕುಟಮಣಿಗೆ ಸರಿಗಾಣೆನು ಜ್ಞಾನ
ಸುಖದ ಬಳ್ಳಿಯ ಬೆಳೆ ಬೆಳೆಸಿದ ಸಲೆ
ಮುಕ್ತಿ ಮಂದಿರ ವಾತ್ರ್ಯರುಹಿಸಿದ
ಒಂದೊಂದು ಗುಣಗಳ ಮಹಿಮೆಯು ಮ
ತ್ತೆಂದಿಗೆ ಹೊಗಳಲಿ ತೀರವು
ಹಿಂದಾದ ಪೂತರು ಅಹರು ಯ
ತೀಂದ್ರನ ಸಾಮ್ಯಕೆ ಸರಿಯಾರು ೪
ಗುರುಭಕ್ತಿ ನೆಲೆ ಕಳೆ ಮರೆಯದೆ ಶ್ರೀ
ಧರಜೆ ರಾಘವಪಾದ ಜರಿಯದೆ ದೇವ
ವರವೇದವ್ಯಾಸನ ಸೇವೆಗೆ ಒಂ
ದರಘಳಿಗ್ಯಲಸ ತಾನೆಂದಿಗೆ ೫
ಹೊನ್ನ ತೃಣದೊಲು ಸೂರ್ಯಾಡಿದ ವಿ
ದ್ಯೋನ್ನತರ ತವರುಮನೆಯಾದ
ಮನ್ನಿಪ ಸುಜನಚಕೋರವ ಹೊರವ
ಪೂರ್ಣ ಚಂದಿರನಂತಲ್ಲೊಪ್ಪುವ೬
ತಪ್ತಲಾಂಛನ ತೀರ್ಥವೀವಾಗ ಭೃತ್ಯ
ರುಪಟಳಕೊಲಿದು ನಲಿವನಾಗ
ಕಪಟವ ಲೇಶಮಾತ್ರರಿಯನು ಇಂಥ
ಗುಪ್ತ ಮಹಿಮಗೆಣೆಗಾಣೆನು೭
ಸಕಳ ಪುರಾಣೋಕ್ತ ದಾನವ ಬಿಡ
ದಖಿಳ ಧರ್ಮವನೆಲ್ಲ ಮಾಡುವ
ನಿಖಿಳ ತತ್ವವನೊರೆದು ಹೇಳುವ ಈ
ಅಕಳಂಕನೆಂದೂ ನಮ್ಮನು ಕಾವ ೮
ಕಷ್ಟ ಮೌನದಿ ವಾರಣಾಸಿಯ ಬಹು
ಶಿಷ್ಟರ ಸಲಹುತ ಯಾತ್ರೆಯ ಮಾಡಿ
ತುಷ್ಟಿ ಬಡಿಸಿದಲ್ಲಿ ವಾಸರ ಬೇಡಿ
ದಿಷ್ಟಾರ್ಥವನೀವನು ದಾಸರ ೯
ಪ್ರತಿದಿನ ಗುರುಪಾದುಕೆಯನಿಟ್ಟು ಮೇಲೆ
ನೂತನ ವಸನ ಹೊನ್ನಾರ್ಚನೆಗಿಟ್ಟು ಮುಂದೆ
ನುತಿಸಿ ಹಿಗ್ಗುವ ನವಭಕುತಿಂದ ಈ
ವ್ರತಕಾಗಲಿಲ್ಲ ಒಂದಿನ ಕುಂದು೧೦
ಶ್ರೀ ಭಾಗವತ ಶಾಸ್ತ್ರ ಟೀಕನು ಹರಿ
ಗಾಭರಣವ ಮಾಡಿಟ್ಟನು
ಈ ಭೂಮಿಲಿಹ ಶಿಷ್ಯ ಜನರನು ತತ್ವ
ಶೋಭಿತರನು ಮಾಡಿ ಹೊರೆದನು ೧೧
ಬಲುಹಿಂದ ಯವನನ ಬಲದಲ್ಲಿ ಕೃಷ್ಣ
ಒಳಪೊಕ್ಕು ಸದೆದ ಪರಿಯಲ್ಲಿ
ಕಲಿನೃಪ ಮ್ಲೇಚ್ಛನ ಬಂಧನ ತಪೋ
ಬಲದಿಂದ ಗುರುರಾಯ ಗೆಲಿದನು೧೨
ಭಕ್ತಿ ವಿರತಿ ಜ್ಞಾನಪೂರ್ಣನು ಸೇ
ವಕ ಜನರಿಗೆ ಪ್ರಾಣಪ್ರಿಯನು
ಪ್ರಕಟಿಸಿದನು ನಿಜಕೀರ್ತಿಯ ನಿತ್ಯ
ಸಕಲ ಸದ್ಗುಣಗಳ ವಾರ್ತೆಯ ೧೩
ಈ ಪರಿ ಬಹು ಪಟ್ಟವಾಳುತ ದಿವ್ಯ
ಶ್ರೀಪಾದವ್ರತ ಪೂರ್ಣ ತಾಳುತ
ಸ್ಥಾಪಿಸಿದನು ಮಧ್ವಸಿದ್ಧಾಂತ ದುಷ್ಟ
ಕಾಪುರುಷರ ಮೊತ್ತ ಗೆದ್ದಾತ ೧೪
ಹರಿಗುಣ ಜಿಜ್ಞಾಸೆಯಿಂದ ಶ್ರೀ
ಹರಿಮೂರ್ತಿ ಧ್ಯಾನ ಚಿಂತನೆಯಿಂದ ಶ್ರೀ
ಹರಿನಾಮ ಸ್ಮರಣಶ್ರವಣದಿಂದ ಶ್ರೀ
ಹರಿ ಪ್ರೀತಿಬಡಿಸಿದ ನಲವಿಂದ ೧೫
ನಿರುತ ಉದಯಸ್ನಾನ ಮೌನವ ಶ್ರೀ
ಗುರು ಮಧ್ವಶಾಸ್ತ್ರವ್ಯಾಖ್ಯಾನವ ಮಹಾ
ಗೀರ್ವಾಣ ವಾಕ್ಯದಿಂದ ಪೇಳುವ ಆತ್ಮ
ಗುರುಗಳ ಸ್ಮರಣೆಯ ಮಾಡುವ ೧೬
ಗುರು ಸತ್ಯನಾಥರ ತಂದನು ನಿಜ
ಗುರುಪದವೇ ಗತಿಯೆಂದನು ತನ್ನ
ಸ್ಮರಣೇಲಿ ಇಹರ ಕಾವನು ಬೇಡಿ
ದರೆ ಅಭೀಷ್ಟಾರ್ಥವನೀವನು ೧೭
ಗುರುಸತ್ಯನಾಥಾಬ್ಧಿ ಸಂಜಾತ ಸಜ್ಜ
ನರ ಹೃತ್ಕುಮುದ ತಾಪ ಸಂಹರ್ತ
ಸರಸ ಸುಧಾಂಶು ವಾಕ್ಯಾನ್ವಿತ ಸಿತ
ಕರನಹುದಹುದಯ್ಯ ಧರೆಗೀತ ೧೮
ಆವ ಪ್ರಾಣಿಯು ಗುರುಮಹಿಮೆಯ ಸ
ದ್ಭಾವದಿ ನೆನೆಯಲು ಸುಖಿಯಾದ
ದೇವ ಪ್ರಸನ್ವೆಂಕಟಾದ್ರೀಶ ಅವ
ಗಾವಗೆ ಪಾಲಿಪ ಮಧ್ವೇಶ ೧೯

೪೨
ಇದೆಕೊ ದಧಿ ಮಥಿಸಿ ಹೊಸ ಬೆಣ್ಣೆ ಕೊಡುವೆನೊ
ಪದುಮನಾಭನೆ ಗೊಲ್ಲ ಗೋರಸಕೆ ಗೋಳಿಡಬ್ಯಾಡೊ ಪ.
ಮಲತ ಹಾಲು ಹುಳಿಮೊಸರು ತಂಗಳ ಬೆಣ್ಣೆ
ನಳಿನಾಕ್ಷ ನಿನಗೇನು ರುಚಿಯೊ ಕಂದ
ಕಳವಿನ ಮಾತ್ಯಾಕೆ ಹಸುಳೆ ಗೋವಳೆಯರ
ಗೆಳತನವ್ಯಾತಕೊ ನಿನಗೆ ರಂಗಮ್ಮ ೧
ಮನೆ ಮನೆ ತಿರುಗಲು ತಿರುಕರ ಮಗನೇನೊ
ಮನೆಯಲೇನು ಗೋರಸ ಕೊರತ್ಯಾಗಿದೈ
ಅನುದಿನ ವಿಗಡೆೀರು ದೂರುತಲೈದಾರೆ
ದಣಿದೆನಾರೋಪಣೆಯ ಕೇಳಿ ಕೃಷ್ಣಮ್ಮ ೨
ಎನ್ನ ಮುದ್ದಿನ ಮೂರ್ತಿ ಎನ್ನ ಭಾಗ್ಯದ ನಿಧಿಯೆ
ಎನ್ನ ಚಿತ್ತದ ಚಿಂತಾಮಣಿಯೆ
ಚಿನ್ನರರಸನಾದ ಪ್ರಸನ್ವೆಂಕಟ ಕೃಷ್ಣ
ನನ್ನಾಣೆ ಕಣ್ಣ ಮುಂದಿರೊ ನಮ್ಮಮ್ಮ ೩

೩೦೧
ಇರಬರಲಿಲ್ಲ ಬಂದರು ಇರಲಿಲ್ಲ ಈ
ಶರೀರ ಯಮನವಶ ಹರಿ ಮೊರೆ ಹೋಗು ನೀ ಪ.
ಘಟಪಟಗಳಿವು ದಿಟಕೀಟಕ ಹೂವು ಕ
ಪಟನಾಟಕನ ಪಾದ ಬಿಟ್ಟು ಕೆಟ್ಟೆಯಲ್ಲೊ ೧
ನಗುನಗುತ ಭವ ಸೊಗಸೆಂದು ಸವಿವೆ ಬಹು
ತಗೆಬಗೇಸಯ್ಯ ನಿನಗೆ ಭವದ ಭಯ ೨
ಶರಣರ ಕಂಡು ಜರಿದರೆ ಕೇಡು ತಂದೆ
ಸಿರಿಪ್ರಸನ್ನವೆಂಕಟ ಅರಸನ್ನ ನಂಬು ೩

(ನು. ೧) ಷೋಡಶ ಉಪಚಾರ
೩೦೨
ಈ ಕಾರಣ ಹರಿನಾಮವ ನೆನೆಯಲಿ
ಬೇಕಾಲಸ್ಯವಿಲ್ಲದಲೆ
ಭೀಕರ ಯಮಭಟರಂತ್ಯದಿ ಕವಿಯಲಿ
ನೂಕುವುದೀ ಅಸ್ತ್ತ್ರದಲಿ ಪ.
ಷೋಡಶ ಉಪಚಾರದ ಪೂಜಾವಿಧಿ
ಮಾಡುವ ಪಕ್ವಗೆ ಸಾಧ್ಯ ತಾ
ಮಾಡೇನೆಂದರಗಾಧ ಮಾ
ತಾಡಿದರೇನದಸಾಧ್ಯ
ರೂಢಿಲಿ ಶ್ರೀಹರಿಗುಣ ಸಂಕೀರ್ತನೆ
ಪಾಡಿದರತಿ ಆಹ್ಲಾದ ೧
ಸುಜ್ಞಾನಿಗಳ್ಹರಿ ಮೆಚ್ಚಿಸಿದರೆ ಅನ
ಭಿಜ್ಞರಿಗೆಲ್ಲಿಯ ಜ್ಞಾನ ಭವ
ಸುಗ್ಗಿಯೊಳೆಲ್ಲಿ ಧ್ಯಾನ ವೈ
ರಾಗ್ಯದ ನಡೆಯು ಕಠಿಣ ಅ
ನಘ್ರ್ಯದ ಭೋಜನ ದೊರೆತಿದೆ ಹರಿನಾ
ಮಂಗಳೆ ಅಮೃತದ ಪಾನ ೨
ಈ ಜನುಮವು ಜಗುಳುವ ಮುನ್ನ ಖಗ
ರಾಜಗಮನ ರಂಗನ್ನ ಸರ್ವ
ದಾ ಜಪಿಸುವನೆ ಧನ್ಯ ಸುಖ
ಬೀಜವಿದೆನ್ನಿ
ತ್ರಿಜಗತ್ಪತಿ ಪ್ರಸನ್ವೆಂಕಟರಾಯನ
ಸೋಜಿಗ ನಾಮಂಗಳಣ್ಣ ೩

೩೦೩
ಈಗಾಗೋ ಇನ್ನಾವಾಗೋ ಮ
ತ್ತೀಗಾತ್ರ ಅಸ್ಥಿರವಣ್ಣ
ಹೇಗಾದರು ಹೊಗಳಾಡಲಿ ಬೇಕು
ನಾಗಾರಿಗಮನನ್ನ ಪ.
ಮನಹರಿದತ್ತಲೆ ಹರಿಹರಿದಾಡಿ
ದಿನ ಹೋದವು ವೃಥಾ ನೋಡಿ ದು
ರ್ಧನದಾಸೆಲಿ ಬಾಡಿ ದು
ರ್ಜನರಾರಾಧನೆ ಮಾಡಿ ಈ
ತನು ಚಪಲತೆ ಹೋಗಾಡದೆ ಶ್ರೀಹರಿ
ಗುಣ ಕುಣಿದು ಕೊಂಡಾಡಿ ೧
ತುಂಬಿದ ಸಿರಿ ಬಿಡಿಸಿ ಸೆರೆ ಒಯಿವರು ವಿ
ಲಂಬಿಲ್ಲದೆ ಜವನವರು ಕೃಪೆ
ಯೆಂಬುದ ಅರಿಯರು ಅವರು ಹಲ
ವ್ಹಂಬಲಿಸಿದರೊದೆವರು ಸುಡು
ನಂಬಲಿಬಾರದು ಸಂತೆಯವರ
ಅಂಬುಜನಾಭನ ಸಾರು ೨
ಸಕಳಾಗಮ ವೇದೋಕ್ತಿ ವಿಚಾರಕೆ
ಮುಖವೆನಿಸುವುದಾಚಾರ ಆ
ಸುಖವೇ ಧರ್ಮದ ಸಾರ ಈ
ಅಖಿಳಕೆ ಪ್ರಭು ಯದುವೀರ
ಭಕ್ತವತ್ಸಲ ಪ್ರಸನ್ವೆಂಕಟರಾಯನ
ಸಖ್ಯವಿಡಿದರೆ ಭವದೂರ ೩

(ಅ.ಪ.) ಪಾಲ್ಗಡಲ ಮಗಳು
೪೨೬
ಉಪ್ಪವಡಿಸಯ್ಯ ಕೃಷ್ಣ ಪ.
ಉಪ್ಪವಡಿಸೈ ಬೊಮ್ಮನಪ್ಪ ಭುವನಾವಳಿಯ
ಸ್ವಪ್ಪನಾದಿ ತ್ರಯವನಪ್ಪಿ ಪಾಲ್ಗಡಲ ಮಗ
ಳಪ್ಪಿ ಅಹಿವರನ ಸುಪ್ಪತ್ತಿಗೆಲಿ ಒರಗಿಪ್ಪ ತಿಮ್ಮಪ್ಪ ವ್ರಜದಿ ದಯದಿ ಅ.ಪ.
ಅರುಣ ಮೂಡಣವೇರೆ ತ್ವರಿತ ತಮಕುಲ ಜಾರೆ
ಹರಿದವಭ್ರದ ತಾರೆ ತರಣಿಕರ ಬಳಿ ಸಾರೆ
ಸರಸಿಜ ವಿಕಸತೋರೆ ಮರುತ ಪರಿಮಳ ಬೀರೆ ನೆರೆದುಅಳಿ ಝೇಂಕರಿಸುತಿರೆ
ಹರುಷ ದಿವಿಗಣ ಬೀರೆ ಮೊರೆಯುತಿವೆ ಸುರಭೇರೆ
ಪರಮಹಂಸರು ಮೇರೆ ಮರೆದು ಸ್ಮರಿಸುತಲೈದಾರೆ
ಸರ್ವವೇದ ಘೋಷ ಹರಿಪರವೆನುತಲೈದಾರೆ ಕರುಣದಲಿನೋಡು ಶೌರೆ ೧
ವಸುಧ್ಯೆರೆದ ಕಾಷ್ಠ ಗಂಧ ಕುಸುಮ ಸರ ತಂದಿಹಳು
ಬಿಸಜಲೋಚನ ನಿಮ್ಮ ಸೊಸೆ ವಾಣಿ ಭಾರತಿಯು
ಲ್ಲಸದಿ ಪೊಂಭಾಂಡದಲಿ ಬಿಸಿನೀರು ತುಂಬಿಹರು ಪಶುಪವೈಜಂತಿ ತಂದ
ಸುಸುಪರ್ಣ ವಸನ ಉರಗೇಶ ರತುನನಾಸನ ಮಾ
ಲ್ಯ ಸುರಪತಿ ಕಲಶ ವಹಿಸಿ ವರುಣ ಸ್ಮರ ತಿಲಕ
ಹಸನ ಮಾಡುವ ಪಾವುಗೆ ಶಶಿ ಧರಿಸಿ ನಿಂದ ಸಂತಸದಿಮಜ್ಜನಕಾಲದಿ ೨
ಸ್ವರ್ಧುನಿಯು ಗೋದೆ ಗೋವರ್ಧಿನಿಯು ಗಾತ್ರೆ ಅಜ
ನರ್ಧಾಂಗಿ ಸರಸ್ವತಿ ಶ್ರೀವರ್ಧಿನಿಯು ಕಾವೇರಿ
ನಿರ್ದೋಷಿ ಸರಯು ತುಂಗಭದ್ರೆ ಕಾಳಿಂದಿ ನರ್ಮದ್ಯೆ ಮೃದ್ಗಂಗೆ ಸಿಂಧು ಭವಘ್ನೆ
ಮರ್ದಿತಘೌಘೆಯು ಕುಮುದ್ವತಿ ವಂಜರೆ ಭೀಮೆ
ನಿರ್ಧೂತ ಕಲಿಮಲ ಕಪರ್ದಿನಿಯು ತಾಮ್ರಪರ್ಣಿ
ಊಧ್ರ್ವಗತಿಪ್ರದ ನದಿ ಬಂದಿರ್ದವಿದೆ ತೀರ್ಥ ಕ್ರಮನೀನಿರ್ದೆಡೆಗೆ ಪೋಪೆವೆನುತ ೩
ಕಿನ್ನರರು ಸುರನಾಯಕ ಮನ್ನೆಯರು ಸಲೆ ದೇವ
ಗನ್ನೆಯರು ಕಿಂಪುರುಷ ಪನ್ನಗರು ವಿದ್ಯಾಧ
ರನಿಕರ ತುಂಬುರರು ನಿನ್ನ ಗುಣ ಕೀರ್ತನೆಯ ಮಾರ್ಗೋನ್ನತದ ಜಂತ್ರ ಗಾತ್ರದಿ
ಚೆನ್ನ ಭೂಪಾಳಿ ದೇವ ಧನಶ್ರೀ ದೇಶಾಕ್ಷಿ
ಸನ್ನುತ ವಸಂತ ಮಲಹ ನವೀನ ಮಾಳ್ಪ ಶ್ರೀ
ಘನ್ನ ಸ್ವನಾಮಂಗಳನು ಪಾಡುವರಿದಕೋ ಧನ್ಯ ಸಂಗೀತ ಲೋಲ ೪
ಸುರಮುನಿ ಭೃಗು ವಸಿಷ್ಠ ನರಪಋಷಿ ಸನಕಾದ್ಯ
ಮರೀಚ್ಯತ್ರಿ ಪುಲಸ್ತ್ಯ ಆಂಗಿರ ಚ್ಯವನ ಸೌ
ಭರಿಯು ಭಾರಧ್ವಾಜಗಸ್ತ್ಯ ಪರಾಶರ ಕಶ್ಯಪ ಜಮದಗ್ನಿ ಗಾಗ್ರ್ಯ ಗೌತಮ ದಧೀಚಿ
ಮಾರ್ಕಂಡೇಯ ಬಕದಾಲ್ಭ್ಯ ಕರಂಧಮೋದ್ಧಾಲಕನು
ವರದಾಂಕ ಜಹ್ನುಮುನಿ ವರ್ಣಿಕುಲದಗಣಿತರು
ನೆರೆನೆರೆದು ತುತಿಸಿ ಸುಖಭರಿತರಾಗುತ ನಿಮ್ಮ ಚರಣದೂಳಿಗಬೇಡುವರೊ ೫
ಕ್ಷಿತಿಪರೊಳು ಮರುತ ಪ್ರಿಯವ್ರತ ಪ್ರಾಚೀನ ಬರ್ಹಿ
ಪ್ರಥು ಗಯ ಧ್ರುವಿಕ್ಷ್ವಾಕು ದಿತಿಜಸುತ ಮಾಂಧಾತ
ಪ್ರತಿ ಸಗರ ನಹುಷ ಬಲಿ ಶತಧನ್ವಿದೇಹಿ ದಶರಥ ಹರಿಶ್ಚಂದ್ರ ಹೈಹಯ
ಶ್ರುತಕೀರ್ತಿ ಶಿಬಿ ದೇವವ್ರತ ಅಂಬರೀಷನು ಭ
ರತದ್ವಯ ಪುರೂರವ ಯಯಾತಿ ರಂತಿದೇವ ಪರೀ
ಕ್ಷಿತನು ಮುಚುಕುಂದ ನಳ ಶತಪುಣ್ಯಶ್ಲೋಕ ನೃಪರತಿ ಸ್ತುತಿಸುವರು ಕೃಪಾಳು ೬
ನಂದಗೋಕುಲದ ಗೋವಿಂದಗಾರ್ತರು ನಿದ್ರೆ
ಹೊಂದೆದ್ದಾನಂದದಿಂ ದೀಪಗಳ ಪ್ರಜ್ವಲಿಸಿ
ಮಿಂದು ಬ್ರಾಹ್ಮಿಯಲುಟ್ಟು ಪೊಂದೊಡಿಗೆ ಮಣಿದೊಡಿಗೆಹೊಂದಿ ತಿಲಕಗಳನಿಟ್ಟು
ವಂದಿಸುತ ಗೃಹದೇವರ ದಧಿಮಥಿಸಿ ಬೆಣ್ಣೆಯ
ಇಂದಿರೆರಮಣ ಮೆಲ್ಲಲೆಂದು ತೆಗೆದಿಡಲರುಹ
ಬಂದಿಹರು ಗೋವಳರು ಮುಂದೆದ್ದು ತಮ್ಮ ಏಳೆಂದು ಬಲು ಬಿನ್ನೈಪರೊ ೭
ಶ್ರೀಪತಿಯೆ ಬ್ರಹ್ಮಾದಿ ತಾಪಸರ ಪ್ರಭು ಏಳು
ದ್ವೀಪ ದ್ವೀಪಾಂತರದ ಭೂಪರರಸನೆ ಏಳು
ಕಾಪುರುಷ ಕಾಳ ಕುಮುದಾಪಹರ ಹರಿ ಏಳು ಕೋಪ ವೃಷಭಾರಿ ಏಳು
ಹೇ ಪಾರ್ಥಸಖ ಸುಪ್ರತಾಪ ಜಗ ಎರಡೇಳು
ವ್ಯಾಪಕನೆ ವಿಬುಧಕುಲಸ್ಥಾಪಕನೆ ಮೂರೇಳು
ಕೂಪಕುಲನಾಶಕ ಚಮೂಪ ಸಂಹರ ಏಳು ದ್ರೌಪದೀ ಬಂಧು ಏಳು ೮
ಶ್ರುತಿಯ ತರಲೇಳು ಭೂಭೃತವ ಹೊರಲೇಳು ಶುಭ
ಧೃತಿಯನಾಳೇಳು ದುರ್ಮತಿಯ ಸೀಳೇಳಮರ
ತತಿಯ ಸಲಹೇಳು ನಿಜಪಿತನ ಕಾಯೇಳು ಮಹಿಸುತೆಗೆ ಸುಖವೀಯಲೇಳು
ಸತಿಯರಾಳೇಳು ಪತಿವ್ರತೆರ ಗೆಲಲೇಳು ಕಲಿ
ಖತಿಯ ಕಳಿಯೇಳು ಪಂಡಿತರುಳುಹಲೇಳು ನಮ
ಗತಿಶಯ ಪ್ರಸನ್ನವೆಂಕಟಪತಿ ಕೃಷ್ಣ ಸದ್ಗತಿದಾತ ತಾತಯೇಳೈ ೯

೪೨೭
ಉಪ್ಪವಡಿಸೆಲೆಲೆ ತಂದೆ
ಸರ್ಪಗಿರಿವಾಸ ಶ್ರೀನಿವಾಸ ದಯದಿ ಪ.
ಕಮಲಸಖ ಸೂರ್ಯ ಮೂಡದ ಮುನ್ನೆ ಮುನಿಜನರು
ತಮ ತಮಗೆ ನೀನೊಲಿದ ನಿನ್ನ ಪ್ರತಿಮೆಯ ಪದಕೆ
ನಮಿಸುತೈದಾರೆ ಧ್ಯಾನಮೌನ ಜ್ಞಾನದೊಳವರು
ರಮೆಯರಸ ಯೋಗನಿದ್ರನೆ ೧
ಸುಳಿಗಾಳಿ ಸೌರಭಿಯ ಬಳಿವಿಡಿದು ಮಧುಪಕುಲ
ಸುಲಲಿತ ಸ್ವನದಿ ಪಾಡುತಿರೆ ಸಾರಸ ಮಯೂರ
ಗಿಳಿಕೋಕಿಲ ಮರಾಳ ಚಕ್ರವಾಕ ಶಕುಂತ
ಬಳಗ ಬಲು ತುತಿಸುತಿವೆ ಕೋ ೨
ಪವಿತ್ರೆಯೆನಿಸುವ ದೇವನದಿ ಯಮುನೆ ಗೋ
ದಾವರಿ ಸರಸ್ವತಿ ಶ್ರೀಕೃಷ್ಣ ಕಾಳಿಂದಿ
ಕಾವೇರಿ ತುಂಗಭದ್ರೆ ಭೀಮಾದ್ಯರೈತರಲು
ಪಾವನಿ ಸುತೀರ್ಥಪದನೆ ೩
ಹನುಮ ಸುರಋಷಿ ದೇವ ಗಂಧರ್ವ ಕಿಂಪುರಷ
ರನುನಯದಿ ದಂಡಿಗೆ ಸುವೀಣೆಯಂ ಮುಟ್ಟಿ ನಿಜ
ತನುವ ಮರೆದು ಉಗ್ಗಡಿಸುತಿರೆ ಸರಸಪ್ರಿಯ
ಸನಕಾದಿ ವಂದ್ಯ ಕೃಷ್ಣ ೪
ತಮಜಾರಿ ಕೇಳು ಮಂದರ ಪೊರೆಯಲೇಳೈ ವ
ಸುಮತಿಲ್ಭಕ್ತ ಇಂದ್ರಾದಿಗಳ ಮೊರೆ ಕೇಳು
ಕುಮತಿಜನ ರಿಪು ಭವಾಬ್ಧಿತ್ರಾತ ಸುಖಿ ಯೋಗಿ
ಅಮಲಪ್ರಸನ್ನ ವೆಂಕಟೇಶ ೫

ವಿದುರನ ಕುಡಿಕೆ ಪಾಲೌತಣ
೪೩
ಎಂತಲೊ ನಿನ್ನ ಮಹಿಮೆ ಯಶೋದೆಕಂದ ಪ.
ದೇವರದೇವನೆನಿಸಿ ಆ ವೈಕುಂಠವಿರೆ ನಿತ್ಯ
ಪಾವಿನೊಳು ನಿದ್ರೆಗೈವದಾವ ಚಂದವೊ ಮುಕುಂದ ೧
ಸರಸಿಜ ಭವೇಶಾದಿ ಸುರಮುನಿಪೂಜೆಗಿಂದ
ಪಿರಿದು ಸುಖವೆ ವಿದುರನ ಕುಡಿಕೆಪಾಲೌತಣ ೨
ಪಾಲಗಡಲ ನಿವಾಸ ಮೂಲೋಕದುದರನಾಗಿ
ಬಾಲಕತನದ ಲೀಲೆ ಸಲುವದೆ ನಳಿನಾಕ್ಷ ೩
ಪಕ್ಷಿವರನೇರಿ ವಾಮ ಲಕ್ಷ್ಮಿಯಿರಲು ಯಜ್ಞ
ಭಿಕ್ಷವ ಬಯಸಿ ನಿನ್ನ ಕುಕ್ಷಿ ರಕ್ಷಿಸಿದೆಯಯ್ಯ ೪
ಅನ್ಯಚಿಂತೆಯನು ಬಿಟ್ಟು ನಿನ್ನ ಚಿಂತೇಲಿಹರ
ಜನ್ಮದ ಲತೆಯ ಹರಿ ಪ್ರಸನ್ನವೆಂಕಟೇಶ ತಂದೆ ೫


ಎಂತು ಜೀವಿಸಲಮ್ಮ ರಂಗನನ್ನಗಲಿ ಎ
ನ್ನಂತರಪರಾಧವ ನೋಡದೊದಗನ್ಯಾಕೆ ಪ.
ಎಂದೆಂದು ತನ್ನ ಪೊಂದಿದ ಮಂದ ಮುಗ್ಧೆಯನು
ಕಂದರ್ಪಶರಕೆ ಗುರಿ ಮಾಡಬಹುದೆ
ಇಂದುಕಾಂತಿಯು ಅಗ್ನಿಯಂದದಾಯಿತು ಹರಿಯೆ
ಮಂದಸ್ಮಿತ ಸುಧೆ ಎನಗೆ ದೊರೆಯದಿರಲು ೧
ಶೃಂಗಾರ ಸೊಬಗ್ಯಾಕೆ ರಂಗನೀಕ್ಷಿಸದಿರಲು
ಅಂಗದಲಿಲ್ಲದೆ ಪ್ರಾಣ ಸುಖವಾರಿಗೆ
ಕಂಗಳು ದಣಿಯೆ ಅಘಭಂಗನ ದಿಟ್ಟಿಸಿ ನೋಡಿ
ಪೊಂಗೊಳಲ ಸವಿ ರವವ ಕೇಳದಿರೆ ನಾನು ೨
ವಿಪುಲ ತಾಪದಿ ಬಾಲೆ ನೊಂದಳೆಂಬ ಮಾತು
ಅಪಕೀರ್ತಿ ತನಗೆ ಅಲ್ಲವೇನೆ ತಂಗಿ
ಶ್ರೀಪತಿ ಪ್ರಸನ್ವೆಂಕಟೇಶನು ನೆರೆದ ಸಂಭ್ರಮಕೆ
ನಾ ಪಾವನಳಾದೆನೆ ಜಾಣೆ ನಿನ್ನಾಣೆ ೩

೧೬೭
ಎಂಥ ಉಪಕಾರಿಗಳು ಸುಜನರು ಶ್ರೀ
ಕಾಂತ ನಿನ್ನೊಲುಮೆಯ ಉಪಾಯದೋರುವರು ಪ.
ಅಜ್ಞಾನ ಕತ್ತಲೆಯೊಳು ಎಡಹಿ ನಡೆಗೆಟ್ಟಡಿ(ಯವ?)ರಿಗೆ
ಸುಜ್ಞಾನವೆಂಬ ಅಂಜನವನಿಟ್ಟು
ಪ್ರಜ್ಞಾಪೂರ್ಣರ ಶಾಸ್ತ್ರಪ್ರಭೆಯಲ್ಲಿ ಪಥವಿಡಿಸಿ
ಯಜ್ಞೇಶ ನಿನ್ನ ಬಳಗವ ಕೂಡಿಸುವರೊ ೧
ಭವತಾಪದಲಿ ಬಳಲಿ ಎದೆಯಾರಿದರಿಗೆ ಸ
ನ್ನವಭಕ್ತಿಯಮೃತ ರಸವಾರಿನಿಧಿಯ
ಸವಿದೋರಿ ಸ್ನಾನಪಾನವ ಕಲಿಸಿ ಸುಖವಿತ್ತು
ಸವಿಯದಾನಂದ ಉರದಲಿ ಪೊಯ್ದಿಡುವರು ೨
ವಿಷಮ ವಿಷಯ ಧ್ಯಾನ ದಾರಿದ್ರ್ಯ ಪೀಡಿತ ಮಾ
ನುಷರ ಜಂಗುಳಿಗೆ ವೈರಾಗ್ಯವೆಂಬ
ಅಸಮಭಾಗ್ಯವನಿತ್ತು ಭವ ಬಿಡಿಸಿ ಸಲಹಿ ಅಕ
ಲ್ಮಷ ಪ್ರಸನ್ನವೆಂಕಟಪತಿಯ ನಂಬಿಸಿದರು ೩

೧೦
ಎಂಥ ಗಾಡಿಕಾರನೆ ಯಶೋದೆ ನಿನ್ನ ಮಗ ಏಕಾಂತ
ಕಾಂತೆರೊಳಾಡುವ ಕೊಂಕು ನೋಡುವ ಪ.
ಮುಗುಳುನಗೆಗಳಿಂದ ಮಡದೇರ ಕಂಚುಕದ
ಬಿಗುಹಿನ ಮಲಕ ಬಿಟ್ಟ ಬಹಳ ದಿಟ್ಟ
ಉಗುರೊತ್ತಿ ಗುರುತು ಪೊಂಬುಗುರಿಗಳೆಮ್ಮವೆ
ಮೊಗ್ಗು ಮೊಲೆಗಳ ಪಿಡಿದು ಮೊನೆ ನೋಡಿದ ೧
ತೋಳೆರಡನು ತಳಕಿಕ್ಕಿ ಇವಿಗೋ ದುಂಡು
ಮೊಲೆ ಎನಗಂದವೆಂದು ಮೋಹನಸಿಂಧು
ತಾಳಿದ್ದ ಕೊರಳೊಳು ತನ್ನ ಪದಕದೊಳು
ಮೇಲದೆಯೆಂದಪ್ಪಿದ ಬಿಗಿದಪ್ಪಿದ ೨
ರಾಕೇಂದುಮುಖಿಗೆ ರಾಹು ಬಂದು ತೊಡರಿತು
ಈಕೆಗೆ ಮೋಸವೆಂದು ಎತ್ತಿದ ಬಂದು
ಜೋಕೆ ಮಾಡುವೆನೆಂದು ಜಡಿದು ಮಾರವೇಣಿಯ
ಸಾಕಿ ಉಪಕಾರವೆಂದ ಸಚ್ಚಿದಾನಂದ ೩
ಎಲೆಲೆ ನಾಭಿ ಒಲ್ಪಕಾಯಳೆ ನಾವು ಮುಟ್ಟಿ ಕೆಂಪಿನಾ
ಮೊಲೆ ಮೊಗ್ಗು ಕಪ್ಪಾದವೆಂದು ಮುಟ್ಟಿ ಅಹುದೆಂದು
ಅಲಕದ ಪೆಳಲ ಬಿಟ್ಟು ಅಹಿರಿಪು ನವಿಲುಥರ
ಅಲರ್ಗಳಾರ್ಮುಡಿಗಟ್ಟಿದ ಅಂಜಬ್ಯಾಡೆಂದ ೪
ಚದುರೇರೆನ್ನ ವಂಚಿಸಿ ಚಿನ್ನಿಪಾಲು ತನಿವಣ್ಣು
ಇದೀಗ ಬಚ್ಚಿಟ್ಟರೆಂದು ಯದುಕುಲೇಂದು
ಮುದ್ದು ಬಟುಗಲ್ಲದಿ ಮೊನೆವಲ್ಗಳ ನಾಟಿಸಿ
ಅಧರಾಮೃತ ಪೀರಿದ ಅತಿಕೊಬ್ಬಿದ ೫
ಮುಡಿಯ ತೋರಕ ಕೊಡ ಮಲಿ ಭಾರಕ
ಬಡನಡು ಮುರಿವದೆಂದು ನಗೆಯಲ್ಲವೆಂದು
ಜಡಿತದೊಡ್ಯಾಣವ ಜಾಣೆ ಕಟಿಗೆ ಬಿಗಿ
ದುಡಿಗೆ ಕರವನಿಡಿದ ದುಡುಕು ಮಾಡಿದ ೬
ಮೃಗಮದ ಬಾವನ್ನ ಮಘಮಘಿಪ ಪೂಮಾಲೆ
ಝಗಝಗಿಪ ಭೂಷಣವ ಜಾತಿ ಮೌಕ್ತಿಕವ
ಮುಗುದೇರಿಗಿತ್ತ ಮೋಹಿಪ ಪ್ರಸನ್ನವೆಂಕಟ
ಜಗಕೊಬ್ಬ ಚೆಲುವನಮ್ಮ ಜಯಿಸಿದ ನಮ್ಮ ೭

ಶೂಲಿಯ ಮತಿಕದ್ದು
೮೨
ಎಂಥ ದಯಾವಂತನೊ ಲಕ್ಷುಮಿಕಾಂತ
ಎಂಥ ದಯಾವಂತನೊ ಪ.
ಕರಿಜನ್ಮ ತಾಳ್ದರಸ ನೀರೊಳಗೆ ನ
ಕ್ಕರಿಯೊಳು ಕಾದಿ ಮುಳುಗಿ ಹರಿಹರಿ
ಹೊರಿಯೆಂದು ಹರಣವ ತೊರೆವಾಗ
ಬರಿಮಂಡೆಯಲಿ ಬಿಟ್ಟರಸಿಯ ಭರದ್ಯು
ದ್ಧರಿಸಿದೆ ಭಳಿ ಕಿಂಕರರಭಿಮಾನಿ ೧
ಶೂಲಿಯ ಮತಿಕದ್ದು ವರ ಕೊಂಡು ಮಹಾಸುರ
ಮೇಲೆ ಬೆಂಬತ್ತಿ ಓಡಲು
ಶ್ರೀಲೋಲಾಕಾಲಕೆ ಆಲೋಚಿಸಿ
ಬಾಲೆಯ ಲೀಲೆಲಿ ಖಳನ ಜ್ವಲಿಸಿ ಕ
ಪಾಲಿಯ ಪಾಲಿಸಿದೆ ಸುರ ಶಾರ್ದೂಲ ೨
ನಿನ್ನನುಜೆಯ ಮಾನವ ಕೊಂಡೇನೆಂದು
ಕುನ್ನಿ ಕೌರವನೆಳೆಯೆ ಕೃಷ್ಣಣ್ಣ ಪ್ರ
ಸನ್ವೆಂಕಟ ರನ್ನ ಬಾರೆನ್ನಲು
ಪುಣ್ಯ ಪುರುಷವರೇಣ್ಯ ನೀ ಬಂದೆ
ಮನ್ನಿಸಿ ಬಣ್ಣ ಬಣ್ಣದ ವಸ್ತ್ರವನುಡಿಸಿದೆ ೩

೧೧
ಎಂಥ ಬಾಲಕೃಷ್ಣ ಗೋಪೇರಂತಃಚೋರಾನಂತನೆ
ಕಂತುಪಿತ ಕೋಟಿ ಕಾಂತಿಯಲ್ಲಿ ಭ್ರಾಂತ ಮಾಡಿದನಿವ ಪ.
ಬಾಲನಾದರೊಳಿತು ಒಳ್ಳೆ ಬಾಲೆಯರ ಮೊಳೆ ಮೊಲೆ
ಗಾಲದ ಹಣ್ಣೆಂದು ನಖದಲಿ ಸೀಳಿ ನೋಡುವರೆ
ಹೇಳಲೇನೆಂತೆನ್ನ ನಳಿತೋಳಲಪ್ಪಿ ತೊಂಡೆಹಣ್ಣಿ
ಗ್ಹೋಲುವದೆಂದಧರನುಂಡ ತಾಳಬಹುದೇನಮ್ಮ ೧
ನಿಚ್ಚಟ ಮೈಯೊಳು ನಾವು ನಿಚ್ಚ ಮೈಯ ತೊಳೆಯುವಾಗ
ಬಚ್ಚಲೊಳು ಬಂದು ಕಣ್ಣಮುಚ್ಚಿ ಅಟ್ಟಹಾಸದಿ
ಸಚ್ಚಿದಾನಂದ ಗೋಪಾಲ ವಚ್ಚೆರೆಗಂಗಳೆಯರ
ಹುಚ್ಚುಮಾಡಿ ಹೋದನಿವನ ನೆಚ್ಚಬಹುದೇನಮ್ಮ ೨
ಹತ್ತಿಲಿದ್ದ ಸುಪ್ತ್ತಪುರುಷನ್ನೊತ್ತಿ ರತಿಕಳೆದೋರಿ
ಚಿತ್ತ ಸೂರೆಗೊಂಬುದಾವ ಕೃತ್ಯವಮ್ಮ ರಂಗಗೆ
ಸುತ್ತಿನವರರಿಯರೆಂದು ಚಿತ್ತವಾಯಿತಲ್ಲದೆ
ಅತ್ತೆ ಮಾವ ಕಂಡರೆಮ್ಮ ತೊತ್ತು ಮಾಡಿ ಬಡಿವರೆ ೩
ಹಟನೆಂದು ಬಾಯೊಳು ಬಾಯಿಟ್ಟು ಮುದ್ದನಿಡಲು
ಬಟ್ಟಕುಚವಿಡಿದೆಮ್ಮ ರಟ್ಟು ಮಾಡಬಹುದೆ
ದಿಟ್ಟ ಜಾರನಿಗೆ ಕೈಯ ಕಟ್ಟುವೆವೆಂದರೆ ಚೆಲ್ವ
ಬಟ್ಟಗಲ್ಲ ಕಚ್ಚಿ ಕ್ಷತವಿಟ್ಟೋಡಿದ ನಮ್ಮಯ್ಯ ೪
ಚಿನ್ನನಾದರೇನು ಚೊಕ್ಕ ಚಿನ್ನದಂಥ ಗುಣವುಳ್ಳ
ಚೆನ್ನಿಗನ ರೂಪಕೊಲಿದ ಕನ್ಯೆಯರು ಪೂರ್ವದ
ಪುಣ್ಯವಂತರಲ್ಲದುಳಿದಿನ್ನಾರಿಗೆಲ್ಲಿ ಎಂದೂ ಪ್ರ
ಸನ್ವೆಂಕಟೇಶ ಸಿಕ್ಕ ಇನ್ನು ಸುಖ ದಕ್ಕೀತೆ ೫

೩೭೭
ಎಂಥ ಶ್ರೀಮಂತಾನಂತನೆ ಶ್ರೀಕಾಂತೆಯ ಕಾಂತ
ಎಂಥ ಶ್ರೀಮಂತಾನಂತನೆ ಪ.
ಬೊಮ್ಮನು ಹೆಮ್ಮಗ ಮೊಮ್ಮ ಮೃಡಮ್ಮರಿ
ಮೊಮ್ಮ ಶಚಿಮನೋರಮ್ಮ ಸ್ಮರಮ್ಮಗ
ಅಮ್ಮರಸಮ್ಮೂಹ ನಿಮ್ಮನುಗಮ್ಯರು
ನಮ್ಮೊ ನಮ್ಮೊ ಪರಮ್ಮ ಮಹಿಮ್ಮ ೧
ಪನ್ನಗಾಪನ್ನ ಶಯನ್ನಕ್ಕೆ ಬೆನ್ನೀವ
ಪನ್ನಗಾಶನ್ನ ವಾಹನ್ನ ರತುನ್ನ ಭ
ವನ್ನ ಸುಖೋನ್ನತರನ್ನಾಗರ ನಿಜ
ನಿನ್ನಿದಿರಿನ್ನಾರೆನ್ನೊಡೆಯನ್ನೆ ೨
ಬಲ್ಲ ಕೈವಲ್ಯಜ್ಞರೊಲ್ಲಭ ಸುಲ್ಲಭ
ಬಲ್ಲಿದ ಕ್ಷುಲ್ಲರದಲ್ಲಣನಲ್ಲವೆ
ಹುಲ್ಲಲುಗಲಳವಲ್ಲ ನೀನಿಲ್ಲದೆ
ಸಲ್ಲದು ಸೊಲ್ಲದು ನಿಲ್ಲದಿದೆಲ್ಲ ೩
ಅಂಗಕೆ ಹೆಂಗಳಾಲಿಂಗನಾಂತ ಗಡ
ಮಂಗಳಾಪಾಂಗ ವಿಶ್ವಂಗಳ ಮಂಗಳ
ಸಿಂಗರದುಂಗುಟ ಸಂಗದಗಂಗೆ ಜ
ಗಂಗಳಘಂಗಳ ಹಿಂಗಿಪಳು ರಂಗ ೪
ಅಂಬರದಂಬುಗೆ ತುಂಬೆ ವಿಶ್ವಂ ಬಸು
ರಿಂಬಿಲಿ ಇಂಬಿಟ್ಟುಕೊಂಬ ಕೃಪಾಂಬುಧಿ
ಡಿಂಬಕದಂಬದ ಬಿಂಬ ಪ್ರಸನ್ವೆಂಕಟ
ನಂಬಿದರ್ಗಿಂಬೀವನೆಂಬ ಕುಟುಂಬಿ ೫

೧೯೯
ಎಂದಿಗೆ ಬಿಡಿಸುವೆ ದಂದುಗ ಗೋ
ವಿಂದ ದಣಿಸುತಿದೆ ದಂದುಗ ಪ.
ಸುಳ್ಳನಾಡಿಸುತಿದೆ ದಂದುಗ ನೇಮ
ಗಳ್ಳನ ಮಾಡಿತು ದಂದುಗ
ಎಲ್ಲೆಂಜಲುಣಿಸಿತು ದಂದುಗ ಕೈ
ವಲ್ಯವ ಮರೆಸಿತು ದಂದುಗ ೧
ಹರಿಸೇವೆ ಬಿಡಿಸಿತು ದಂದುಗ ಗುರು
ಹಿರಿಯರನ್ವಂಚಿಪ ದಂದುಗ
ಸರಕು ಮಾಡಿತು ಎನ್ನ ದಂದುಗ ಯಮ
ಪುರದಾರಿವಿಡಿಸ್ಯದೆ ದಂದುಗ ೨
ನೀಚಗಂಚಿಸುತಿದೆ ದಂದುಗ ಕ್ಷುದ್ರ
ಯಾಚನೆವಿಡಿಸ್ಯ್ಕದೆ ದಂದುಗ
ಆಚಾರ ಚರಿಸಿತು ದಂದುಗ ದು
ಷ್ಟ್ಯೋಚನೆ ತ್ಯಜಿಸದು ದಂದುಗ ೩
ಕಾಂಚನದಾಸೇಲಿ ದಂದುಗ ಕೆಟ್ಟ
ಹಂಚಿಗ್ಹಲ್ದೆರೆಸಿತು ದಂದುಗ
ಪಂಚಗಂಗೆಯ ಬಿಟ್ಟು ದಂದುಗ ಜೊಂಡು
ಬೆಂಬಿಲಿ ಮೀಯಿಸಿತು ದಂದುಗ ೪
ನಿನ್ನೊಲುಮ್ಯೊದರಿ ದಂದುಗ ಕಾಡಿ
ಎನ್ನಾಳೋದುಂಟೇನೊ ದಂದುಗ ಪ್ರ
ಸನ್ವೆಂಕಟೇಶ ನಾಮ ಜಿಹ್ವೆ
ಪೂರ್ಣಗಲ್ಲಾದ್ಯಂತ ದಂದುಗ ೫

೩೭೮
ಎಂದಿಗೆಂದಿಗೆ ತೀರದು ನಮ್ಮಪ್ಪನ ಮಹಿಮಿ
ನ್ನೆಂದಿಗೆಂದಿಗೂ ತೀರದು ಪ.
ಎಂದೆಂದಂದದಿ ಸಂಧಿಸಿ ಪೊಂದಿದಾ
ಇಂದಿರೆ ಸುಂದರೆ ಬಂದಾನೆಂದೆಂತೆಂದಳು
ವೃಂದಾರಕಾರವಿಂದಜಾಹೀಂದ್ರರು ನಿಂದರೂ
ತಂದೆ ಮುಕುಂದ ಆನಂದನಂದನ ಮಹಿಮೆ ೧
ನಿಗಮಗಳು ಗುರುತ ಪೊಗಳಲು ಮಿಗೆ ತಪ
ಸಿಗಳೆಣಿಕೆಗೆ ಮೈಯಗೊಡದೆ ನಗುವನ
ಖಗಧ್ವಜ ಮೃಗಮುಖ ತ್ರಿಗೇಹ್ಯ ಪನ್ನಗಶಾಯಿ
ಅಘದೂರ ಸುಗುಣಗಣನ ಮಹಿಮೆ ೨
ಉನ್ನತಕುನ್ನತ ಇನ್ನಣುಗಿನ್ನಣು
ಘನ್ನಕೆ ಘನ್ನ ಜಗನ್ನುತ ಸನ್ನಿದ
ತನ್ನವನೆನ್ನಲು ಮನ್ನಿಪ ಚಿನ್ಮಯ
ಚೆನ್ನ ಪ್ರಸನ್ವೆಂಕಟನಾಥನ ಮಹಿಮೆ ೩

ಪೂರ್ಣಪ್ರಜ್ಞರಿಗೊಲಿದು
೮೩
ಎಂದು ಕಾಂಬುವೆ ಎನ್ನ ಸಲಹುವ
ತಂದೆ ಉಡುಪಿಯ ಜಾಣನ
ಮಂದಹಾಸ ಪ್ರವೀಣನ
ಇಂದಿರಾ ಭೂರಮಣನ ಪ.
ಕಡಲ ತಡಿಯೊಳು ಎಸೆವ ರಂಗನ
ಕಡೆಗೋಲ ನೇಣ ಪಿಡಿದನ
ಮೃಡ ಪುರಂದರ ಅಜರೊಡೆಯನ ಈ
ರಡಿಗಳಲಿ ಶಿರ ಇಡುವೆ ನಾ ೧
ದೇವಕಿಯ ಜಠರದಲ್ಲಿ ಬಂದನ
ಆವಪಳ್ಳಿಯಲ್ಲಿ ನಿಂದನ
ಮಾವ ಕಂಸನ ಕೊಂದನ
ಕಾವನಯ್ಯ ಮುಕುಂದನ ೨
ಪೂರ್ಣಪ್ರಜ್ಞರಿಗೊಲಿದು ದ್ವಾರಕೆಯ
ಮಣ್ಣಿನೊಳು ಪ್ರಕಟಿಸಿದನ ಭ
ವಾರ್ಣವಕೆ ಪ್ಲವನಾದನ ಪ್ರ
ಸನ್ನವೆಂಕಟ ಕೃಷ್ಣನ ೩

ಅಕ್ರೂರ
೧೨
ಎಂದು ಬಹನಮ್ಮ ಯಾದವರರಸನು
ಎಂದು ಬಹನಮ್ಮ ಪ.
ತಂದು ತೋರೆಲೆ ಗಜಗಾಮಿನಿ ಯದುಕುಲ ತಿಲಕನ
ಕಂದುಗೊರಳಗೊಲ್ಲ ಚಂದದಿ
ಎಂದಿಗೆ ಅವ ನಮ್ಮ ಕಾಡುವ
ಇಂದುವದನೆ ಪೋಗೆ ಬ್ಯಾಗೆ ೧
ಯಾಕೆ ಗೋಕುಲ ನಮಗ್ಯಾಕೆ ವೃಂದಾವನ
ಸಾಕುವರ್ಯಾರಮ್ಮ ನಮ್ಮನು
ಶ್ರೀಕಾಂತನಿಲ್ಲದೆ ನಿಮಿಷ ಯುಗವಾಯಿತು
ಪೋಕನಲ್ಲವೆ ಕ್ರೂರ ಅಕ್ರೂರ ೨
ಮುಡಿಗೆ ಮಲ್ಲಿಗೆ ಭಾರ ಕಣ್ಣಿಗೆ ಅಂಜನ ಭಾರ
ನಡುಮಧ್ಯಕೆ ನಿರಿಭಾರವೆ
ಅಡಿಗೆ ಅಂದುಗೆ ಭಾರ ನುಡಿವ ಕೀರವ ಉರ
ಜಡಿವ ಸಮೀರ ಸಖಿಯೆ ಸಖಿಯೆ ೩
ಬೆಳದಿಂಗಳೆನಗೆ ಬಿಸಿಲಾಗಿ ತೋರು
ತಲಿದೆ ಬಗೆ ಬಗೆ ಪುಣ್ಯದ ಮಾಲಿಕೆಯು
ಅಲ್ಲೆ ಪಿಕಗಾನವು ಕಿವಿಗತಿಕಠಿಣವು
ಒಲ್ಲೆ ಅಗರು ಚಂದನ ಲೇಪ ತಾಪ ೪
ಯಾಕೆ ಕಸ್ತೂರಿ ಗಂಧ ನಮಗ್ಯಾಕೆ ಚಂಪಕಮಾಲೆ
ಲೋಕನಾಯಕ ತಾನಿಲ್ಲದೆ
ಶ್ರೀಕಾಂತನಿಲ್ಲದೆ ನಿಮಿಷ್ಯುಗವಾಯಿ
ತು ಕಂಡಿದ ಪ್ರಸನ್ವೆಂಕಟ ೫

೩೦೪
ಎಂದು ಹರಿಭಟರು ಕೆಡರು ಇವರಿಗೆ ಮ
ತ್ತೆಂದಿಗಿಲ್ಲೆಡರು ತೊಡರು ಪ.
ಘಟಜನುಕ್ತಿಯಲಿ ಕರಿ ಗಟ್ಟಿಯಾಗಿ ಪ್ರಾಣ ಸಂ
ಕಟಬಡಲು ನಕ್ರನ ತುಟಿ ಹರಿದು ಹರಿ ಪೊರೆದ ೧
ಎಣಿಕೆಯಿಲ್ಲದ ಪಾಪ ಎಣಿಸಿ ಬಂದ್ಯಮನವರ
ಹಣಿದು ವಿಪ್ರಜಾಮಿಳನ ವನಜಾಕ್ಷ ಪುರಕೊಯ್ದ ೨
ಮುನಿ ಕನಲಿ ಅಂಬರೀಷನ ದಣಿಸುತಿರೆ ಚಕ್ರ
ವನು ಕಳುಹಿ ವೈಷ್ಣವಾಗ್ರಣಿಯ ಛಲ ಗೆಲಿಸಿದನು ೩
ಕಪಟಿ ಕೌರವ ಪಾಂಡುನೃಪಜರನು ಬೆಂಕೊಳಲು
ಕುಪಿತನಾಗಲೆ ಬಂದು ಕೃಪೆಯಿಂದ ಕಾಯ್ದ ಗಡ ೪
ಶ್ರೀಪ್ರಸನ್ವೆಂಕಟನ ಶ್ರೀಪದವ ನಂಬಿದರೆ
ಶಾಪ ಪಾಪೋಗ್ರಸಂತಾಪವೇನು ಮಾಡುವುವು ೫

೩೦೫
ಎಚ್ಚರ ಮನವೇ ಯದುಪತಿಯ
ನೆಚ್ಚದಿರು ಚೋಹದನಿಕೆ ತನುವ ಪ.
ವೇಳ ವೇಳಾಯು ವೃಥಾ ಹೋಯಿತೆಚ್ಚರ
ಕಾಲಪಮೃತಿ ವೃಕ ಕೊಲುವೆಚ್ಚರ
ಕೋಳು ಹೋಗುತದಲ್ಪ ಕೃತ ಪುಣ್ಯವೆಚ್ಚರ
ನಾಲಿಗೆಯಲಿ ಸಿರಿನಾಥನೆಚ್ಚರ ೧
ಸತಿ ಸದನಾತ್ಮಜಸ್ಥಿರವ್ಯರ ವೆಚ್ಚರ
ತಿಥಿ ಪೂಜೆಗಳಲಿ ಸತ್ವರ ಎಚ್ಚರ
ಪ್ರತಿದಿನ ತತ್ವದಿ ಪ್ರವೀಣನಾಗೆಚ್ಚರಾ
ಹಿತಲ್ಪನ ಕೀರುತಿ ಹೊಗಳೆಚ್ಚರ ೨
ಹರಿಭಟರೌಘದಿ ಹಿಂಗದಿರೆಚ್ಚರ
ದುರಿತಭಯ ದಂದುಗದೆಚ್ಚರ
ಪರಾಪರದ ವಚನವಟ್ಟಿಸದಿರೆಚ್ಚರ
ಪರಿಪರಿ ಸದ್ವ್ವ್ರತ ಪಿಡಿದೆಚ್ಚರ ೩
ಸಂತವರಿಯರನುಸರಣಿಗಳೆಚ್ಚರೇ
ಕಾಂತ ಬೀರುವ ಗುರುಕೃಪೆಯೆಚ್ಚರ
ಸಂತ್ಯಿರಲಾಗಿ ಶಾಂತ ಸರಕು ಕೊಳ್ಳೆಚ್ಚರ
ಕಂತುಪಿತನ ನಾಮ ಕಡೆಗೆಚ್ಚರ ೪
ವಿಷಯಗತೇಂದ್ರಿಯವಿಡಿದಾಳುವೆಚ್ಚರ
ಮೀಸಲು ವೈರಾಗ್ಯ ಮುರಿಯದೆಚ್ಚರ
ಬಿಸಜನಾಭನ ಭಕ್ತಿ ಬಲಿದಿರುವೆಚ್ಚರ
ಪ್ರಸನ್ನವೆಂಕಟಪತಿ ಪದದೆಚ್ಚರ ೫

(ನು. ೪) ಕದನ ಕರ್ಕಶ ರಿಪುಗಳೆದೆಯೊಡೆದು
ವಾಯುದೇವರು
೧೫೨
ಎಣೆಗಾಣೆ ಭುವನದಿ ಶ್ರೀರಾಮಚಂದ್ರನ ಪ್ರಿಯವೀರ
ಹನುಮ ಘನಧೀರ ಪ.
ಬ್ರಹ್ಮ ಪಿತೃ ಪಾದಕ್ಕೆರಗಿ ಉಮ್ಮಯದಿ ಕೊಂಡಾಜ್ಞೆ
ಸಮನೆ ಶರಧಿ ಗೋಷ್ಪದ ಮಾಡಿ ಹೋ
ಗ್ಯಮ್ಮ ಜಾನಕಿಗೆ ಪರಬೊಮ್ಮನುಂಗುರವಿತ್ತು
ಹಮ್ಮಿನ ನಿಶಾಚರನಿಗುಮ್ಮಳಿಕೆನಿತ್ತೆ ೧
ಕ್ರೀಡೆಯಿಂ ದಶಶಿರನನೊಡೆವನಾಯದೆ ಶಿಥಿಲ
ಮಾಡುವನಾಗಿನಾ ಮಾತನಾಡಿ ರಮೆಯ
ಚೂಡಾಮಣಿಯ ತಂದು ನೀಡಿ ರಾಘವಗೆ ಸುಖ
ಮಾಡಿಸಿದೆ ಅಪ್ರತಿಮಾರುತಿ ಅತಿಧೀರ ೨
ಗರುವಿನ ಖಳನ ವನದ ತರು ವಿಟಪಮೂಲಸಹ
ಮುರಿದು ಕರಚರಣದಿ ತಂದಾ
ನೆರದ ರಿಪುರಕ್ಕಸರ ತರಿ ತರಿದು ಮರಲುಂ
ದಿ ರಭಸದಿಂದಸುರಪುರವನುರುಹಿದೆ ೩
ಕದನ ಕರ್ಕಶರಿಪುಗಳೆದೆಯೊದೆದು ಕೋಟಿ ಸಿಂ
ಹದ ರಭಸದಿನಲ್ಲಿ ಬಿಸುಟಿ ಉದಧಿಯಲ್ಲಿ
ಸುದುರ್ಲಭಾದ ನಾಕೌಷಧವ ತಂದು ರಣದಿ ಮಲ
ಗಿದ ವೀರರಸುಗಾಯಿದೆ ಅದ್ಭುತ ಮಹಿಮ ೪
ಸೀತಾಪತಿಯ ಪ್ರೀತಿಯತ್ಯಾದರದಿ ಪಡೆದು ವಿಷಯಾ
ತೀತನಾಗಿ ವಿಧಾತನಾದೆ ವಾತ
ಜಾತನೆ ನಿಮ್ಮ ಖ್ಯಾತಿಯ ಹೊಗಳಲಳವೆ
ನಾಥ ಪ್ರಸನ್ನವೆಂಕಟ ದಾತನಿಗೆ ದೂತ ೫

೪೪
ಎತ್ತೋದೆಯಮ್ಮ ನಂಗನ್ನೆತ್ತಿಕೊ ಅಮ್ಮ ಬಲು
ಹೊತ್ತು ಹತ್ತು ಬಂದೇನೆ ಇತ್ತೆ ಅಮ್ಮಿ ತಿಂದೇನೆ ಪ.
ತುತಿಬಾಯಿ ವಂಗ್ಯಾವೆ ಬಿತಿ ಆವು ವಾಕಿಕ್ಕಿ ಬತ್ತಾವೆ
ಅತಿ ಆವು ಉಪ್ಪುಕಾಯಿ ಅಮ್ಮ ಮಮ್ಮೊಲ್ಲೆ
ಉತ್ತತ್ತಿ ಹನ್ನು ಬೆನ್ನೆ ತಿಂದೇನೆ ೧
ಕಲ್ಲ ಕಿತ್ನ ಎಂತಾಡೆ ಬಂಗಾಡ ಬುಲ್ಲಿ ಬೆಲ್ಲ ತಿಂತಾಡೆ
ಗಲ್ಲ ಕತ್ತಿ ಉಮ್ಮು ಕೊತ್ತು ಹಲ್ಲು ನತ್ತುತಾಡೆ
ಕೊಲ್ಲಬಾಲದೆ ದೂತ್ತ ಗೊಲ್ಲತೇಲನ ೨
ಎಕ್ಕೋ ಬಾ ಎಂಬ್ಯಾಡೆ ಬಿಸಿ ನೀಲು ಬುಕಶ್ಶಿ ಮಾಬ್ಯಾಡೆ
ಸಕ್ಕರಿ ಚಿನ್ನಿಪಾಲು ಬತ್ತಲ ತುಂಬ ಕೊಡು
ಬಕ್ಕು ಮರಿಗಳ ಕೂಡ ಉಂಡೇನೆ ೩
ನತ್ತೆತ್ರ ತಂದುಕೊಡೆ ಚಂದಮಾಮನಿತ್ತಿತ್ತ ಕಡತಾಡೆ
ಪುತ್ತಮಿಲ್ಲಿ ತುಂಬ ವಲ್ಲೆ ಮುತ್ತು ಕೊತ್ತರೆ ಶನ್ನ
ಬುತ್ತಿ ತುಂಬ ಹನ್ನು ತಂದು ತಿಂದೇನೆ ೪
ಲಾಲಿ ಮಾಡಿಸಬ್ಯಾಡೆ ಕಿತ್ತನ್ನ ಮ್ಯಾಲೆ ದೋಗುಲ ಪಾಡೆ
ಬಾಲ ಬವು ಕಂಡ್ಯನಗಂಜಿಕಿ ಬತ್ತದೆ
ದೂಲ ಎನ್ನ ಬಿತ್ತು ನೀ ವೋಗಬ್ಯಾಡೆ ೫
ಉಗ್ಗು ಕೂಸು ಬಾಯಂಗೆ ಬಚ್ಚನಿಗೆ ಮಗ್ಗಮ್ಮಿ ಕೂಯಂಗೆ
ಕೊಗ್ಗ ಮೀಸಿ ಜೋಗಿಗೆ ಕೋಬ್ಯಾಡೆ ಬಾಗಿಲ
ಹೊಗ್ಗೆ ಹೋಗದಿಲ್ಲ ಜತ್ತಿಗನಾಣೆ ೬
ಕೂಚಿಗಮ್ಮಿ ಕೋಬ್ಯಾಡೆ ನಂಗಂಗಚ್ಚತಾನೆ ಅಮ್ಮ ನೋಡೆ
ಪೆಚನ್ನ ವೆಂಕತ ಕಿತ್ತಪ್ಪ ಕನ್ನಡೀಲಿ
ನಚುನಗಿ ನಗುತಾನೆ ಕಡತಾಡೆ ೭

೨೦೦
ಎನ್ನ ತಂದೆ ಎನ್ನತಾಯಿ ಎನ್ನ ಬಂಧುವೆ ನೀ
ಇನ್ನಾರೊಡೆಯರಿಲ್ಲ ಕಾಯೊ ಲಕ್ಷ್ಮೀನಲ್ಲ ಪ.
ಕರುಣ ನೋಟದಿ ನೋಡಿ ಹೊರಡಿಸಿದ ತಂದೆ ಮಂ
ದರಧರನೆ ಬಸುರೊಳಿಟ್ಟ ತಾಯಿ ನೀನು
ಧರೆಗೆ ಪರಗತಿಗೆ ನೆಲೆಗೊಡುವ ಬಾಂಧವ ನೀನು
ದುರಿತ ಕರಿಗಣಕೆ ಸಿಂಹಾಸ್ಯ ನೀನು ೧
ಷಟ್ಕರ್ಮ ಸಂಗ್ರಹವ ಮಾಡಿಸುವ ತಂದೆ ನೀ
ದುಷ್ಕರ್ಮ ಖಂಡಿಸುವ ತಾಯಿ ನೀನು
ಷಟ್ಕೋಣ ಬಲದಿರುವ ತ್ರಿಕೂಟಾದ್ರಿವಾಸ ವ
ಷಟ್ಕಾರಗೈದೆ ಕೌರವ ಕುಲಾರಿಯು ನೀನು ೨
ಶ್ರುತಿ ವಿರೋಧಿಗಳ ಮೋಹಿಪ ಸುರರ ತಂದೆ ನೀ
ಅತುಳ ಧರ್ಮಾತ್ಮಕರ ತಾಯಿ ನೀನು
ಕ್ಷಿತಿಗೆ ವೈಕುಂಠವೆನಿಪ ಪ್ರಸನ್ವೆಂಕಟ ಬಂಧು
ಗತಿಗೆ ಗತಿಯಾದಾದಿಪುರುಷ ನಮೋ ೩

(ನು. ೧) ಪಂಜು ಬೆಳಗಿದೆ
೩೭೯
ಎನ್ನ ಪಾಲಿಸು ಪರಮಕಾಯ ರಘು
ರನ್ನ ರಾಮನ ಪ್ರಿಯ ಗುರುಮಧ್ವರಾಯ ಪ.
ಅಂಜನಿ ಆತ್ಮದಲಿ ಬಂದು ರಾಮನ ಪಾದ
ಕಂಜವಿಡಿದೆ ಕಡಲ ಲಂಘಿಸಿದೆ ಗೋಷ್ಪದದಿ
ಪಂಜು ಬೆಳಗಿದೆ ನಿಶಾಚರನ ಪಟ್ಟಣವಳಿದೆ
ಕಂಜಾಕ್ಷಿಯಳ ತುಷ್ಟಿಗೈದೆ ಗಡಾ
ಸಂಜೀವ ತಂದು ಕಪಿಬಲವ ರಕ್ಷಿಸಿದೆ ೧
ಕುರುಕುಲಾಧಮನು ಬಲುಸೊಕ್ಕಿ ಸಂಗರಭಟರ
ನೆರಹಿ ಪಾರ್ಥರ ಬಲವ ಗೆಲುವೆನೆಂದವನ ಭರ
ಮುರಿದೆ ಮಹರಥಿಕರೆದೆ ಹರಿದೆ ಅಸಹಾಯ ಶೂರ
ಸರಿಯಾರು ನಿನಗಸಮಧೀರ ಭಾಪು
ಕರುಣಾಸಾಗರ ಉದಾರ ಅಜಪದದಧಿಕಾರ ೨
ಏಕವಿಂಶತಿ ಮಾಯಿ ರಚಿತ ಭಾಷ್ಯವ ಜರಿದೆ
ಶ್ರೀಕಾಂತನ ನಾಮಾಮೃತವ ಭಕ್ತರಿಗೆರೆದೆ
ಭೂಕನಕ ವಧು ವಿಷಯಕಾಂಕ್ಷೆಗಳ ಮೇಲೊದೆದೆ
ಲೋಕಕೊಬ್ಬನೆ ಗುರುವೆ ಮೆರೆದೆ ವಿಶ್ವೇಶ ಪ್ರಸನ್ನ
ವೆಂಕಟೇಶನಂಘ್ರಿವಿಡಿದೆ ೩

೨೦೧
ಎನ್ನ ಭಕುತಿ ನೋಡಲು ಎಳ್ಳನಿತು ಹುರುಳಿಲ್ಲ
ನಿನ್ನ ನಾಮವೆ ನಾ ನಂಬಿದ ಮುನ್ನೆಲೆ ಕೃಷ್ಣ ಪ.
ನಿಚ್ಚ ನೀರೊಳಗೆ ಪೋಗಿ ಮುಳುಗಿ ಮುಳುಗಲೇನು
ಮತ್ಸ್ಯ ಸ್ನಾತಿಯೆನಿಸುವುದೆ ಮಹೀತಳದಿ
ಅಚ್ಯುತ ನಿನ್ನಯ ಧ್ಯಾನವಿಲ್ಲದೆ ದ್ವಾದಶನಾಮ
ಹಚ್ಚುವೆನು ಮೊಲನಾಳು[ವೇಷ]ವಿಟ್ಟ ತೆರದಿ ೧
ಬಯಲು ಡಂಬಕದಿಂದ ಬಹಳ ತುಲಸೀಮಾಲೆ
ನಯದಿ ಕಂಠದೊಳಾಂತಪಾರ ಗರ್ವದಿ
ಆಯಾಟೆಸಬಟ್ಟೆನು ಹರಿದಾಸನೆನಿಪೆನೆಂದು
¥ಯೋನಿಧಿವಾಸ ನಿನ್ನ ಪದವ ಲಕ್ಷಿಸೆ ನಾ ೨
ಮುಸುಕು ಮೌನದಿ ಹರಿಯೆಂದು ಜಪಿಸಲಿಲ್ಲ
ವಸುಧೆ ವಸುಕಾಂತೆಯರ ಚಿಂತಿಪೊ ಹರಿ
ದಾಸ ಬೆಳ್ವಕ್ಕಿಯಂತೆನಗೆ ಹೇಯಂಗಳಿಲ್ಲ
ಪ್ರಸನ್ವೆಂಕಟಪತಿ ತಪ್ಪ ಕಾಯೊ ಜೀಯ ೩

(ನು. ೨) ಲಾಕ್ಷಾಗೃಹದಿ ಧರ್ಮಜರ ಹೊರೆದು
೩೮೦
ಎಲೆ ಗುರುವೆ ಜನುಮ ಜನುಮ ಜನುಮದೊಳು ಗುರುವೆ
ಯಲಗುರದ ಹನುಮಂತ ಗೆಲಿಸು ಭವಪಂಥ ಪ.
ಮೂಜಗದೊಳಾರು ನಿನಗೆಣೆಯೆ ಋಜುಗಣಪತಿ ಸ
ರೋಜಭವಪದ ಗಮ್ಯ ರಮ್ಯ
ಭೂಜಾತೆಯಳ ಶೋಕ ಬಿಡಿಸಿದ ಬಲಾಧಿಕ ಬಿ
ಡೌಜಾರಿಪಿತ ಹೃದಯನೊದೆದೆ ೧
ಲಾಕ್ಷಾಗೃಹದಿ ಧರ್ಮಜರ ಹೊರೆದು ಕಿಮ್ರ್ಮೀರ
ರಾಕ್ಷಸ ಹಿಡಿಂಬರನು ತರಿದೆ
ಭಕ್ಷಿಸಿದೆ ವಿವಿಧನ್ನ ಶಿಕ್ಷಿಸಿದೆ ಬಕನ ತಾ
ಮ್ರಾಕ್ಷ ಭಾಗವತಜನಪಕ್ಷ ೨
ಉನ್ಮತ್ತ ಮತಂಗಳನು ಅಳಿದೆ ಯತಿರೂಪದಿ ಜ
ಗನ್ಮಯನ ಭಕುತಿರಸ ಜಗದಿ
ನಿನ್ನ ಬಂಟರಿಗೆರೆದೆ ನಿರಯ ತಪ್ಪಿಸಿದೆ ಪ್ರ
ಸನ್ನವೆಂಕಟನಾಥ ಪ್ರೀತ ೩

೨೦೨
ಎಲೆ ದುರಿತವೆ ನೀ ಎನ್ನ
ಏಳಿಲ ಮಾಡದೆ ಸಾಗಿನ್ನ ಕಡು
ಛಲ ಮಾಡಲಿ ಬನ್ನಬಡುವೆ ನಮ್ಮ
ನಳಿನಾಕ್ಷನಾಣೆ ನೀ ಕೆಡುವೆ ಪ.
ಪಾಪಿ ನಾನೆಂದು ಸೋಂಕ ಬಂದೆ ನಮ್ಮ
ಶ್ರೀಪತಿ ಕರುಣಿಸಿದಿಂದೆ ಇ
ನ್ನಾಪರೆ ನಿಲ್ಲು ಮುಂದೆ ನಿನ್ನಾ
ಟೋಪವ ಮುರಿವೆನು ಇಂದೆ ೧
ಪರುಸ ಮುಟ್ಟಿದ ಲೋಹ ಚಿನ್ನ ಸಿರಿ
ಅರಸನ ಭಟನೆ ಮಾನ್ಯ ಇ
ನ್ನೊರೆದೆ ನೋಡೆಲೆ ಬಲುವೆಡ್ಡೆ ನಮ್ಮ
ಸರಸವ ಬಿಡು ಕೈಕಡ್ಡೆ ೨
ಲೇಸು ಬೇಕಾದರಿನ್ನುಳಿಯೈ ಹರಿ
ದಾಸರ ಸಂಗವ ಕಳೆಯೈ ಭೃತ್ಯಾ
ವಾಸೆಯ ಬಿಡುವವನಲ್ಲ ಶ್ರೀ
ಪ್ರಸನ್ವೆಂಕಟ ಚೆಲ್ವ ೩

೩೦೬
ಎಲೆ ಮಾನವ ಹರಿಯ ಸ್ಮರಿಸು
ಸಲೆ ಕಾವನು ಖರಿಯ ಪ.
ಶಂಖಾರಿ ಸಂಧೃತನ ಮತ್ತಾ
ಶಂಖಜನ ಬಲಹೃತನ
ಶಂಕರ ವಿಧಿನುತ ಚರಣನುದಾರಾ
ಶಂಕಾವಾರಣ ವಾರಣೋದ್ಧರನ ೧
ಕಮನೀಯತರ ಗಾತ್ರನ ಅರುಣ
ಕಮಲಾಯತ ನೇತ್ರನ
ಕಮಲಾವ್ಯಯ ಪೂತ ಮುಖ ಚಾರುವಿಲಸಿತ
ಕುಮುದಾಸಿತ ಶರಣ ಕರುಣಾಕರನ ೨
ಅಗಣಿತ ಗುಣ ಗಣ್ಯನಾನಂತ ಆಗಮ
ನಿಗಮಾದಿ ಪೂರ್ಣನ
ಅಗಧರ ಮಹಿವರ ಪ್ರಸನ್ವೆಂಕಟವರ
ಅಗನಂದನಿಲಯ ಕಲಿಯಕೋಲಾಹಲನ ೩

೩೦೭
ಎಲ್ಲರಾಡ್ಯೇನು ಭಾಗವತರಾವೆಂದು
ಬಲ್ಲವರೆ ಬಲ್ಲರು ಹರಿಯ ಊಳಿಗವ ಪ.
ಸಟೆಯನ್ನೀಗಿದ ಭಕ್ತಿ ಮಿಶ್ರವಿಲ್ಲದ ಜ್ಞಾನ
ಜಠರಾನುಕೂಲಕಲ್ಲದ ವಿರಕ್ತಿ
ದಿಟವಾಗಿ ಮಾಡುವ ಮಹಿಮರಿಗಲ್ಲದೆ
ಘಟಿಸದು ಒಣಮಾತಿನ ಕೋವಿದಂಗೆ ೧
ಡಂಬವಿಲ್ಲದ ದಾನ ಕಳವಳಿಸದ ಪೂಜೆ
ಡೊಂಬಿಯಾಗದ ಜಪಧ್ಯಾನ ಮೌನ
ಕುಂಭಿಣಿಯೊಳು ಮಾನುಭವಗಲ್ಲದೆ ಭವ
ಸಂಭ್ರಮಕುಬ್ಬುವ ಸುಖಿಪುಂಸಂಗೇನು ೨
ಹೇಯವಿಲ್ಲದ ಕೀತ್ರ್ನೆ ಹೇವವಿಕ್ಕದ ವಿದ್ಯೆ
ಬಾಹ್ಯ ತೋರದ ಹರಿ ಭೃತ್ಯ ವೃತ್ತಿ
ದೇಹ ಚಿತ್ತವ ಕದಿಯದ ಧರ್ಮವ್ರತ ಕೃಷ್ಣ
ಸ್ನೇಹಿತಗುಂಟು ಸಂಸಾರಿಗಗಾಧ ೩
ವಂಚಿಸದ ಬುಧಸೇವೆ ಠೌಳಿಸದ ಮಂತ್ರ ಪ್ರ
ಪಂಚ ಕೂಡದ ತತ್ವ ಚರ್ಚಂಗಳು
ಮುಂಚುವ ಮುಕುತರಿಗಲ್ಲದೆ ಯಾತನೆಯ
ಸಂಚಕಾರವಿಡಿದ ಸುಖಿ ಪುಂಸಂಗೇನು ೪
ಯಾಗವ ತಾ ನಿಯೋಗವ ತಾನಾ
ತ್ಯಾಗವ ತಾನಾಗಿಹದು ಸುಲಭ
ಭೋಗವತಿಯ ತಂದೆ ಪ್ರಸನ್ವೆಂಕಟೇಶನ
ಭಾಗವತಾಂಘ್ರಿ ಪರಾಗ ದುರ್ಲಭವು ೫

೩೦೮
ಎಲ್ಲೆಲ್ಲಿ ಭಾಗವತಾಂಶ ಮತ್ತೆಲ್ಲೆಲ್ಲಿ ಹರಿಸನ್ನಿವಾಸ
ಎಲ್ಲೆಲ್ಲಿ ಕರೆದರೆ ದಾಸರಲ್ಲಲ್ಲಿಗೆ ಬಾಹ ರಮೇಶ ಪ.
ಆವೆಡೆ ಲಕ್ಷವಂದನೆಯು ಆವಾವೆಡೆಗೆ ಭಕ್ತ ನರ್ತನೆಯು
ಆವೆಡೆ ಸುಪ್ರದಕ್ಷಿಣೆಯು ಆವಾವೆಡೆ ರಂಗನಾರಾಧನೆಯು ೧
ಎಂತು ದಂಡಿಗೆ ತಾಳ ಘೋಷ ಎಂತೆಂತು ಕಥಾಮೃತ ವರುಷ
ಎಂತು ತತ್ವಾರ್ಥ ಜಿಜ್ಞಾಸ ಅಂತಂತೆ ಶ್ರೀಕಾಂತನ ಹರುಷ ೨
ಎಷ್ಟು ತಂತ್ರಸಾರಾರ್ಚನೆಯು ಎಷ್ಟೆಷ್ಟು ಶ್ರುತಿ
ಸೂತ್ರಗಳ ಧ್ವನಿಯು
ಎಷ್ಟು ತಾತ್ಪರ್ಯ ವರ್ಣನೆಯು ಅಷ್ಟಷ್ಟು ಕೃಷ್ಣನ
ಕಂಠ ಮಣಿಯು ೩
ಏಸು ಶ್ರೀಹರಿವ್ರತ ಮೌನ ಏಸೇಸು ಶ್ರೀ ಹರಿರೂಪಧ್ಯಾನ
ಏಸು ಸದ್ವ್ಯಾಖ್ಯಾನ ದಾನ ಆಸನ್ನ ಕೈವಲ್ಯನಿದಾನ ೪
ಎನಿತು ಗುರುಪಾದಗಳ ಸ್ಮರಣೆ ಎನಿತೆನಿತು ಮಧ್ವಯತಿಗಳ ಸ್ಮರಣೆ
ಎನಿತೇಕಾದಶಿಯ ಜಾಗರಣೆ ಅನಿತನಿತು ಸುಲಭ ಹರಿಸ್ಮರಣೆ ೫
ಆರು ಆರೂರು ಮೆಟ್ಟಿಹರು ಮತ್ತಾರೂರರಸರ ಕಟ್ಟಿಹರು
ಆರೀರ್ವರ ಪೊರಮಟ್ಟಿಹರು ಆರಾರಾಗಲಿ ಕೃಷ್ಣನವರು ೬
ಹೇಗೆ ಸಜ್ಜನರ ಉಲ್ಲಾಸ ಹಾಗ್ಹಾಗೆ ಮಹಾಮಹಿಮರಭಿಲಾಷ
ಹೇಗೆ ಬುಧರ ಪರಿತೋಷ ಹಾಗಾಗುವುದು ಪ್ರಸನ್ವೆಂಕಟೇಶ ೭

೪೫
ಎಷ್ಟು ಸುಖಿಗಳೊ ಗೋವು ಗೊಲ್ಲತಿ ಗೋಪರು ಶ್ರೀ
ಕೃಷ್ಣನೊಡನೆ ಹಗಲಿರುಳು ಕ್ರೀಡೆಯಲಿ ಕಾಲವ ಕಳೆವರು ಪ.
ಕೋಹೋ ಕೋಹೋ ತೃವ್ವೆ ತೃವ್ವೆ ಅಂಬೆ ಅಂಬೆ ಬಾರೆ ಎಂದು
ಮೋಹದಿಂದ ಕರೆಸಿಕೊಂಡು ಓಡಿ ಓಡಿ ಬಂದು
ಶ್ರೀಹರಿಯ ಹೆಗಲ ಮೇಲೆ ಗಳಗಳಿಟ್ಟು ಕದಪು ಕಂಠ
ಲೇಹಿಸಿ ಮೊಗದಿರುದಿರುಹಿ ಸಿರಿನಖದಿಂ ತುರಿಸಿಕೊಂಬರು ೧
ತುಡುಗನೆಂದು ತುಡುವಿಡಿದು ಅಡಿಗಡಿಗೆ ಅಪ್ಪಿ ಚುಂಬಿಸಿ
ಪಿಡಿಪಿಡಿದು ಗೋಪಿಯಡಿಗೆ ಒಪ್ಪಿಸಿ ಒಪ್ಪಿಸಿ
ಮಡದೆರೆಲ್ಲ ಮಧುವೈರಿಯ ಸಂಗ ಸೊಬಗಿಲೋಲಾಡುತಲಿ
ಒಡನೊಡನೆ ಗೋಪಾಲ ಮೂರುತಿಯ ಕಣ್ಣು
ಮನದಲಿಟ್ಟು ಸುಖಿಪರು ೨
ಸಣ್ಣವರಾಡಲೊಲ್ಲೆನೆನಲು ಗದ್ದವಿಡಿದು ಮುದ್ದಿಸಿ ನ
ಮ್ಮಣ್ಣ ತಮ್ಮಗಳಿರಾ ಗೆಳೆಯರಿರಾ ಬನ್ನಿರೆಂದು
ಅಣ್ಣೆಕಲ್ಲೊಡ್ಡಿ ಗಜಗವಾಡಿ ಸೋಲಿಸಿಕೊಂಡಳುವ
ಚಿಣ್ಣರ ಮನ್ನಿಪ ಪ್ರಸನ್ವೆಂಕಟೇಶನ ಉಣ್ಣುವೆಂಜಲ
ಸೆಳೆದುಂಬುವರು೩

ಗುರುಸತ್ಯಪೂರ್ಣರು :
೧೬೮
ಎಷ್ಟೆಂದು ಬಣ್ಣಿಪೆ ಗುರುಸತ್ಯಪೂರ್ಣನ
ದೃಷ್ಟಾಂತವ ಕಾಣೆನಾ
ಶಿಷ್ಟ ಜನರಿಗೆ ಚಿಂತಾಮಣಿ ದೊರಕಿದಂ
ತಿಷ್ಟಾರ್ಥದಾಯಕನಾ ಪ.
ಶ್ರೀರಾಮ ವ್ಯಾಸರ ಸೇವೆಗೆ ಪೂರ್ವದ
ಲ್ಲಾರಾಧನೆ ಮಾಡುತ
ಧಾರುಣಿ ಮೇಲವತರಿಸಿದ ದ್ವಿಜಕುಲ
ವಾರಿಧಿ ಚಂದ್ರನಂತೆ ೧
ವೇದ ವೇದಾಂತ ಸಕಳಶಾಸ್ತ್ರ ಕ್ಷಿಪ್ರ
ದಿಂದೋದಿ ಶ್ರೀ ಮಧ್ವಶಾಸ್ತ್ರ
ಬೋಧವ ಕೇಳಿ ಮಹಾಭಕುತಿಲಿ ಗುರು
ಪಾದಾಬ್ಜ ನಂಬಿ ನಿಂತ ೨
ಬ್ರಹ್ಮಚರ್ಯಾಶ್ರಮ ಮೊದಲಾಗಿ ದಿನ ದಿನ
ನಿರ್ಮಲ ಕಳೆಯನಾಂತ
ಉಮ್ಮಯದಿಂದ ಷಟ್ಕರ್ಮಸಾಧನವಾದ
ದಸ್ರ್ಮದ ದಾರಿಲಿ ನಿಂತ ೩
ತಾಯಿ ಮಕ್ಕಳ ಸಾಕಿದಂತೆ ಗುರುಕೃಪಾ
ಪೀಯೂಷವನುಂಡು ತಾ
ಬಾಯೆಂದು ಕರೆಸಿಕೊಂಡಖಿಳಾರ್ಥ ಪಡೆದ ನಿ
ಷ್ಕಾಯನ ತೇಜವಂತ ೪
ನಿತ್ಯದಿ ಕರ್ಮಕೆ ಕುಂದಾಗಲಿಲ್ಲಗ್ನಿ
ಹೋತ್ರ ಸಹಿತ ಸುವಾನ
ಪ್ರಸ್ಥನಾಗಿ ಭೋಗಾಸಕ್ತಿಯ ತೊರೆದ ವಿ
ರಕ್ತಿ ಭಾಗ್ಯಾನ್ವಿತನ ೫
ಬಣ್ಣವಿಟ್ಟಿಹ ಚೊಕ್ಕ ಚಿನ್ನನೊ ಅಭ್ರಗೆ
ದ್ಹುಣ್ಣಿಮೆ ಚಂದ್ರಮನೊ
ಉನ್ನತಗುರು ಸತ್ಯಾಭಿನವ ತೀರ್ಥರ
ಪುಣ್ಯವೆ ನೀನೊ ಯತಿರನ್ನನೊ ೬
ಹೀಗೆಂದು ಸುಜನರು ಹೊಗಳಲು ಶ್ರೀಪಾದ
ಯೋಗಿ ತಾನೆನಿಸಿದನು
ಮ್ಯಾಗೆ ಮ್ಯಾಗದ್ಭುತ ಪಾಂಡಿತ್ಯವೆಂಬ ವ
ಲ್ಲಿಗೆ ಹಬ್ಬುಗೆನಿತ್ತನು ೭
ಗುರುಗಳಭೀಷ್ಟೆ ಪೂರೈಸಿತು ಶ್ರೀರಘು
ವರನ ಮೂರ್ಧನಿಯಲಿಟ್ಟು
ಸ್ಥಿರ ಪಟ್ಟಾಭಿಷೇಕವಾಂಗೀಕರಿಸಿ ಜಗ
ದ್ಗುರುವೆ ತಾನಾದ ಕರ್ತ ೮
ದಿವ್ಯ ನಾಚಾರ ಕ್ಷೇತ್ರದಿ ಹರಿಸ್ಮರಣಿಂದ
ಹವ್ಯಸಾಂಕಿತ ಗುರುಗಳು
ಆ ವ್ಯಯಾಬ್ದ ಜ್ಯೇಷ್ಠಾಧಿಕ ಶುದ್ಧ ಚತುರ್ದಶಿ
ದಿವಸ ದಿವಿಗೆ ಸಾಗಲು ೯
ಹರಿಪಾದಯಾತ್ರೆಗೆ ಗುರುಗಳೈದಿದ ಮೇಲೆ
ಪರಮ ದುಃಖಿತ ಮೌಳಿ
ತ್ವರಿಯದಿ ವೃಂದಾವನ ವಿರಚಿಸಿದ ಮುನಿ
ವರನ ಮಹಿಮೆಯ ಕೇಳಿ ೧೦
ಪೃಥ್ವಿಪರಿಂದ ಪೂಜಿಸಿಕೊಂಡು ದುರ್ವಾದಿ
ಮೊತ್ತವ ಗೆಲುತಲಿಹ
ಅರ್ಥಿಲಿ ಜಯಪತ್ರವನು ಜಯಿಸುತ ಗುರು
ಚಿತ್ತಕರ್ಪಿಸುತಲಿಹ ೧೧
ನಿಜಗುರುದಯದಿಂದ ದುರಿತತಮವ ಗೆದ್ದಂ
ಬುಜ ಸಖನಂತೊಪ್ಪುವ
ತ್ರಿಜಗವಂದಿತರಾದ ವೇದ ವ್ಯಾಸಾಂಘ್ರಿಯ
ಭಜನ ಭಾಗ್ಯದೊಳೊಪ್ಪುವ ೧೨
ಧ್ಯಾನ ಮೌನ ಸದ್ವ್ಯಾಖ್ಯಾನ ಪೂರ್ಣನು
ಜ್ಞಾನ ಭಕುತಿಪೂರ್ಣನು
ಏನೆಂಬುವಿರೊ ಕರುಣಗುಣ ಪೂರ್ಣನು
ದಾನ ಮುದ್ರಾಪೂರ್ಣನು ೧೩
ಗುರು ಸತ್ಯಾಭಿನವ ತೀರ್ಥರ ಸತ್ಯಪೂರ್ಣನು *
ವರದರಾಜಯತಿಯೊಳು ದಯಾಪೂರ್ಣನು
ಸರಸೋಕ್ತಿ ಪರಿಪೂರ್ಣನು ೧೪
ತಂದೆ ಸತ್ಯಾಭಿನವಾಂಬುಧಿಜಾತ ತತ್ವಾರ್ಥ
ವೃಂದರುಚಿರ ಪೂರ್ಣನು
ಎಂದು ಪ್ರಸನ್ವೆಂಕಟ ಪ್ರಿಯಾನಿಲಮತ
ಸಿದ್ಗಾಂತದಿ ಪೂರ್ಣನು ೧೫

೪೬
ಎಳೆಯನೆನ್ನದಿರಮ್ಮ ಎಲೆ ಗೋಪಿ ಕೃಷ್ಣಗೆ
ಕೆಳದೇರುಟ್ಟಿಹ ವಸನ ಕಳೆವ ಜಾರಮಣಿಗೆ ಪ.
ನಡುವಿರುಳೆ ಬಂದೆಮ್ಮ ನಲ್ಲರಂತೆ ಮಾತನಾಡಿ
ಪಿಡಿದು ಚುಂಬಿಸಿ ಪರಿಯಂಕದಲ್ಲಿ ಕೂಡಿ
ಮಡದಿಯರಂತ ನಾವು ಮಾಯ ಮೋಸದಿ ಗೆಲ್ಲುವ
ಒಡನೆ ಗೋವಳನಂತೆ ಒಪ್ಪುವ ಗಾಡಿಕಾರಗೆ ೧
ಬಾಲಕನಂತೆ ಕಂಗೊಳಿಸಿ ಬೀದಿಯೊಳು ಸುಳಿಯಲು
ನಲವಿಂದೆತ್ತಿಕೊಂಡು ನೇಹ ತೊಡರಿ ಅಪ್ಪಿಕೊಂಡು
ನೀಲದ ಹಣ್ಣ ನೀಡೆ ತಾನಾಲದ ಹಣ್ಣು ಬೇಡುವ
ಮೇಲಣ ಮಾತೇನೆ ಬೇಗ ಮೊಳೆಮೊಲೆಗ್ಹೆಣಗುವಗೆ ೨
ರನ್ನದುಂಗುರ ಬೆರಳ ರತಿಗೆ ಮಾರನ ಸರಳ
ಕನ್ನೆಯರನೆಲ್ಲ ಚೆಲ್ವ ಕಣ್ಣ ಸನ್ನೆಲೆ ಮೋಹಿಸುವ
ಚಿನ್ನನೆನ್ನಬಹುದೆ ಇವಗೆ ಚಟುಲ ಪ್ರಾಯದವಗೆ ಪ್ರ
ಸನ್ನ ವೆಂಕಟೇಶ ನಮ್ಮ ಸೇರಿ ಬೆನ್ನಬಿಡನಮ್ಮ ೩