Categories
ರಾಜ್ಯೋತ್ಸವ 2022 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ಶ್ರೀ ಅನಂತಾಚಾರ್ಯ ಬಾಳಾಚಾರ್ಯ ಕಟಗೇರಿ ದಾಸರು

ನಾಡಿನ ಗಮಕ ಮತ್ತು ಕೀರ್ತನಾ ಕ್ಷೇತ್ರ ಕಂಡ ಅಪರೂಪದ ವಿದ್ವತ್ಮಣಿ ಅನಂತಾಚಾರ್ಯ ಬಾಳಾಚಾರ್ಯ ಕಟಗೇರಿ ದಾಸರು. ಸಾವಿರಾರು ದಾಸರ ಪದಗಳ ಅಪೂರ್ವ ಭಂಡಾರ, ಪ್ರೋತೃಗಳ ಮನ ಅರಳಿಸಿದ ಹರಿದಾಸ ತೀರ್ತನಾ ಶಿರೋಮಣಿ, ಧಾರವಾಡದ ಮಾಳಮಡ್ಡಿಯ ಕಟಗೇರಿಯವರಾದ ಅನಂತಾಚಾರ್ಯರು ಸಂಗೀತ ಆಚಾರ್ಯರೆಂದೇ ಜನಜನಿತ, ದಾಸರಪದ ಗಾಯನದ ಜತೆಗೆ ಅವುಗಳ ಅರ್ಥ, ಸಂದರ್ಭ, ಔಚಿತ್ಯ, ಪೌರಾಣಿಕ, ಪಾರಮಾರ್ಥಿಕ ಹಿನ್ನೆಲೆ, ಕತೆ-ಉಪಕತೆ ವಿವರಿಸಬಲ್ಲಷ್ಟು ಆಳ ಜ್ಞಾನವಂತರು. ದಾಸಸಾಹಿತ್ಯದ ಅನನ್ಯ ಪ್ರಚಾರಕರು. ಕಂಚಿನ ಕಂಠ, ಸುಶ್ರಾವ್ಯ ಗಾಯನ, ಸ್ವರಗಳ ಮೇಲಿನ ಕರಾರುವಾಕ್ ಹಿಡಿತ, ಸ್ವರಶುದ್ಧಿ, ಭಾವಶುದ್ಧಿಯ ಪಂಡಿತೋತ್ತಮರು. ೧೯ ಪ್ರಕಾರಗಳ ದಾಸಸಾಹಿತ್ಯದ ನಾಲ್ಕು ಸಾವಿರಕ್ಕೂ ಅಧಿಕ ದಾಸರ ಪದಗಳ ಭಂಡಾರ. ಸಾವಿರಾರು ಸಂಗೀತಾಸಕ್ತರಿಗೆ ಸ್ವರಜ್ಞಾನ ಧಾರೆಯೆರೆದ ಗುರು. ಮನೆಮನೆಗೆ ತೆರಳಿ ಮಕ್ಕಳಿಗೆ ದಾಸರ ಪದ ಕಲಿಸಿದ ಮಹಾನುಭಾವರು. ಹರಿದಾಸ ಸೇವೆಯಲ್ಲಿ ಬದುಕಿನ ಸಾರ್ಥಕತೆ ಕಂಡುಕೊಂಡ ಜ್ಞಾನವೃದ್ಧರು. ನೂರಾರು ಸನ್ಮಾನ-ಗೌರವಗಳಾಚೆಗೆ ನಿರ್ಲಿಪ್ತರಾಗಿ ಜೀವನಪ್ರೀತಿ–ನಾದಪ್ರೇಮದಲ್ಲಿ ೯೭ರ ವಯದಲ್ಲೂ ಶಾರದೆಯ ಸೇವೆಯಲ್ಲಿ ತನ್ಮಯರಾಗಿರುವ ವಿರಳಾತಿವಿರಳ ಸಾಧಕರು.