Categories
ರಾಜ್ಯೋತ್ಸವ 2022 ರಾಜ್ಯೋತ್ಸವ ಪ್ರಶಸ್ತಿ ಹೊರನಾಡು

ಶ್ರೀ ಅರವಿಂದ ಪಾಟೀಲ್

ಕೊಲ್ಲಿ ರಾಷ್ಟ್ರದಲ್ಲಿ ಅನಿವಾಸಿ ಭಾರತೀಯ ಕಾರ್ಮಿಕರ ಹಿತರಕ್ಷಣೆಗಾಗಿ ಹೋರಾಡಿದ ಸಮಾಜಮುಖಿ ಅರವಿಂದ ಪಾಟೀಲ್, ಕನ್ನಡ ಪರಿಚಾರಕರು, ಸಂಸ್ಕೃತಿ ಚಿಂತಕರು. ೧೯೫೮ರಲ್ಲಿ ಜನಿಸಿದ ಅರವಿಂದ ಶಿವಮೂರ್ತಿ ಪಾಟೀಲ್ ಸಿವಿಲ್ ಇಂಜಿನಿಯಲಿಂಗ್‌ ಪದವೀಧರರು. ಪರಿಸರದಲ್ಲಿ ಎಂ.ಟೆಕ್‌ ಸ್ನಾತಕೋತ್ತರ ಪದವಿ. ೧೯೯೩ರಲ್ಲಿ ಕೊಲ್ಲಿ ರಾಷ್ಟ್ರದ ಕತಾರ್‌ನಲ್ಲಿ ಇಂಜಿನಿಯರ್ ಆಗಿ ಸರ್ಕಾರಿ ಸೇವೆಗೆ ಸೇರಿದ ಅರವಿಂದ ಪಾಟೀಲ್ ಕತಾರ್‌ನಲ್ಲಿ ಅನಿವಾಸಿ ಭಾರತೀಯ ಕಾರ್ಮಿಕರು ಅನುಭವಿಸುತ್ತಿದ್ದ ಸಂಕಟಗಳಿಗೆ ಮರುಗಿದವರು. ಕಾರ್ಮಿಕರ ದನಿಯಾಗಿ ದುಡಿದವರು. ೨೦ ವರ್ಷಕ್ಕೂ ಮಿಗಿಲು ಕಾರ್ಮಿಕ ಹಕ್ಕುಗಳಿಗಾಗಿ ಹೋರಾಡಿದ ಹೆಗ್ಗಳಿಕೆ, ಕರ್ನಾಟಕ ಮತ್ತು ಕತಾರ್ ದೇಶದ ನಡುವಿನ ಸಾಂಸ್ಕೃತಿಕ ಕೊಂಡಿ. ಕತಾರ್ ಕನ್ನಡ ಸಂಘದ ಅಧ್ಯಕ್ಷರಾಗಿ ಕನ್ನಡದ ಕಾಯಕ. ವಿಶ್ವ ಕನ್ನಡ ಸಾಂಸ್ಕೃತಿಕ ಸಮಾವೇಶದ ಸಂಚಾಲಕ, ಇಂಡಿಯನ್ ಸೊಸೈಟಿ ಆಫ್ ದುಖಾನ್ ಅಧ್ಯಕ್ಷರಾಗಿ ಭಾರತೀಯ ಸಾಹಿತ್ಯ-ಸಂಸ್ಕೃತಿಯನ್ನು ಪಸರಿಸುವ ಸ್ತುತ್ಯಾರ್ಹ ಕಾರ್ಯ. ಬಡಮಕ್ಕಳಿಗೆ ಆರ್ಥಿಕ ನೆರವು, ಕಾರ್ಮಿಕರನ್ನು ಭಾರತಕ್ಕೆ ವಾಪಸ್ ಕಳುಹಿಸುವಲ್ಲಿ ಮಾನವೀಯ ಸೇವೆ, ಕಾರ್ಮಿಕರಿಗಾಗಿಯೇ ೨೫ಕ್ಕೂ ಹೆಚ್ಚು ಉಚಿತ ವೈದ್ಯಕೀಯ ಶಿಬಿರಗಳ ಆಯೋಜನೆ, ಆಹಾರ-ಬಟ್ಟೆಗಳ ದಾನ ಮುಂತಾದ ಹಲವು ಸೇವಾಕಾರ್ಯಗಳನ್ನು ಕೈಗೊಂಡ ಹೃದಯವಂತ, ನಿವೃತ್ತಿಯ ನಂತರ ಕರ್ನಾಟಕದಲ್ಲೂ ಅನೇಕ ಬಗೆಯ ಸೇವಾಕೈಂಕರ್ಯದಲ್ಲಿ ತೊಡಗಿರುವ, ಹತ್ತಾರು ಪ್ರಶಸ್ತಿ-ಗೌರವಗಳಿಗೂ ಪಾತ್ರವಾಗಿರುವ ವಿರಳ ಸೇವಾಕರ್ತರು.