Categories
ರಾಜ್ಯೋತ್ಸವ 2022 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಶ್ರೀ ಅ.ರಾ.ಮಿತ್ರ

ಕನ್ನಡ ಸಾರಸ್ವತ ಲೋಕದ ವಿದ್ವತ್ಪರಂಪರೆಯನ್ನು ಬೆಳಗಿದ ಸಾಹಿತಿ ಅ.ರಾ.ಮಿತ್ರ, ಹಾಸ್ಯಜ್ಞ, ಉಪನ್ಯಾಸಕ, ಅಧ್ಯಾಪಕ, ಬರಹಗಾರ, ವಿಮರ್ಶಕರಾಗಿ ನಾಡಿನ ಮನೆಮಾತಾದ ಸಾಧಕರು, ಹಾಸನ ಜಿಲ್ಲೆ ಬೇಲೂರಿನಲ್ಲಿ ೧೯೩೫ರಲ್ಲಿ ಜನಿಸಿದ ಅಕ್ಕಿಹೆಬ್ಬಾಳು ರಾಮಣ್ಣ ಮಿತ್ರ ಸಾಹಿತ್ಯಲೋಕದಲ್ಲಿ ಅ.ರಾ.ಮಿತ್ರರೆಂದೇ ಸುವಿಖ್ಯಾತರು. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ, ೧೯೫೫ರಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಬೆಂಗಳೂರಿನ ಸೆಂಟ್ ಜೋಸೆಫ್‌ ಕಾಲೇಜಿನಲ್ಲಿ ವೃತ್ತಿಬದುಕಿಗೆ ಮುನ್ನುಡಿ, ಸರ್ಕಾರಿ ಕಾಲೇಜು ಶಿಕ್ಷಣ ಇಲಾಖೆಯಲ್ಲಿ ಪ್ರವಾಚಕರಾಗಿ ಮಡಿಕೇರಿ, ತುಮಕೂರು, ಬೆಂಗಳೂರಿನ ಸರ್ಕಾರಿ ಕಾಲೇಜಿನಲ್ಲಿ ಪ್ರಾಧ್ಯಾಪಕ, ಅಮೆರಿಕನ್ ಪೀಸ್ ಕೋರ್‌ನಲ್ಲಿ ಕನ್ನಡ ಶಿಕ್ಷಕ, ಮಹಾರಾಣಿ ಕಾಲೇಜಿನ ಪ್ರಾಂಶುಪಾಲರಾಗಿ ನಿವೃತ್ತಿ, ಹಾಸ್ಯಪ್ರಜ್ಞೆ, ಸಜ್ಜನಿಕೆ, ಅಸ್ಖಲಿತ ಮಾತುಗಾರಿಕೆ ಅ.ರಾ.ಮಿತ್ರರ ವಿಶೇಷತೆ. ಅಧ್ಯಯನ-ಬರವಣಿಗೆ ನೆಚ್ಚಿನ ಕಾಯಕ, ಕ್ರಿಯಾಶೀಲತೆ ಅಮಿತೋತ್ಸಾಹದ ಮೂಲಧಾತು, ಹಾಸ್ಯಕೂಟಗಳ ಸಹಸಂಚಾಲಕರಾಗಿ ನಗೆಚಿಮ್ಮಿಸಿದ ವಾಗ್ಮಿ, ಬಾಲ್ಕನಿಯ ಬಂಧುಗಳು, ಯಾರೊ ಬಂದಿದ್ದರು, ನಾನೇಕೆ ಕೊರೆಯುತ್ತೇನೆ ಮುಂತಾದ ಪ್ರಬಂಧ ಸಂಕಲನಗಳು, ವಿಮರ್ಶೆ, ವ್ಯಕ್ತಿಪರಿಚಯ, ಗ್ರಂಥಸಂಪಾದನೆ, ಅನುವಾದದ ಪ್ರಕಾರಗಳಲ್ಲಿ ಹಲವು ಕೃತಿಗಳನ್ನು ರಚಿಸಿರುವ ಅ.ರಾ.ಮಿತ್ರ ನವರತ್ನರಾಂ ಪ್ರಶಸ್ತಿ, ವರ್ಧಮಾನ ಪ್ರಶಸ್ತಿ, ಗೊರೂರು ಸಾಹಿತ್ಯ ಪ್ರಶಸ್ತಿ, ಅನಕೃ ಪ್ರಶಸ್ತಿ, ಕಾವ್ಯಾನಂದ ಪುರಸ್ಕಾರಗಳಿಂದ ಭೂಷಿತರು.