Categories
ರಾಜ್ಯೋತ್ಸವ 2022 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ಶ್ರೀ ಆಂಜಿನಪ್ಪ ಸತ್ಪಾಡಿ

ಅಳಿವಿನಂಚಿನಲ್ಲಿರುವ ಕಲೆಯ ಉಳಿವಿಗಾಗಿ ಜೀವತೇಯುತ್ತಿರುವ ಅನನ್ಯ ಕಲಾಚೇತನ ಆಂಜಿನಪ್ಪ ಸತ್ಪಾಡಿ, ಏಕಕಾಲಕ್ಕೆ ೩ ವಾದ್ಯಗಳನ್ನು ನುಡಿಸುವ ರಾಜ್ಯದ ಏಕೈಕ ಕಲಾವಿದರು. ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ತಾಲ್ಲೂಕಿನ ಗವಿಕುಂಟನಹಳ್ಳಿ ಗ್ರಾಮದ ಆಂಜಿನಪ್ಪ ಅಪ್ಪಟ ದೇಸೀ ಪ್ರತಿಭೆ, ಏಕಕಾಲದಲ್ಲಿ ಬಾಯಿ ಮತ್ತು ಮೂಗಿನ ಹೊಳ್ಳೆಗಳ ಮೂಲಕ ಮೂರು ವಾದ್ಯಗಳನ್ನು ಸುಶ್ರಾವ್ಯವಾಗಿ ನುಡಿಸುವ ಮುಖವೀಣೆ ಕಲಾವಿದರು. ಮೂಗಿನ ಒಂದು ಹೊಳ್ಳೆಯಲ್ಲಿ ನೀರು ತೆಗೆದು ಮತ್ತೊಂದು ಹೊಳ್ಳೆಯಲ್ಲಿ ನೀರು ಬಿಡುತ್ತಲೇ ಬಾಯಿಯಿಂದ ವಾದ್ಯವನ್ನು ನುಡಿಸುವುದು ಆಂಜಿನಪ್ಪರ ಮತ್ತೊಂದು ವಿಶೇಷ, ಈ ಜಲವಾದ್ಯ ಹಾಗೂ ಮುಖವೀಣೆ ನುಡಿಸಬಲ್ಲ ರಾಜ್ಯದಲ್ಲಿ ಬದುಕುಳಿದಿರುವ ಏಕೈಕ ಕಲಾವಿದ ಆಂಜಿನಪ್ಪ ಎಂಬುದು ನಿಜಕ್ಕೂ ಹೆಗ್ಗಳಿಕೆ ಮಾತ್ರವಲ್ಲ, ನಾಡಿನ ಹೆಮ್ಮೆ, ವಂಶಪಾರಂಪರ್ಯವಾಗಿ ಅಪ್ಪನಿಂದ ಬಂದ ಈ ಬಳುವಳಿಯೇ ಆಂಜಿನಪ್ಪಗೆ ಸದಾ ಜೀವನಾಧಾರ. ಭಿಕ್ಷೆ ಬೇಡಿ ಬದುಕುವ ಅನಿವಾರ್ಯತೆಯ ನಡುವೆಯೇ ಆರು ದಶಕಗಳಿಂದಲೂ ಕಲಾಸೇವೆಗೈದ ಅಂಜಿನಪ್ಪಗೆ ೮೨ ಇಆವಯಸ್ಸಿನಲ್ಲೂ ಈ ಕಲೆಯನ್ನು ಉಳಿಸುವರಾರೆಂಬ ಕೊರಗು. ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ, ನೂರಾರು ಸನ್ಮಾನಗಳ್ಯಾವುದರಿಂದಲೂ ಸಮಾಧಾನಗೊಳ್ಳದೆ “ಮುಂದೇನು” ಎಂಬ ಚಿಂತೆಯ ಆಂಜಿನಪ್ಪ ಕಲೆಗೆ ಅರ್ಪಿತಗೊಂಡ ಜೀವಿ, ಅಪರೂಪದ ಜಾನಪದ ಕಲಾಷುಷ್ಪ.