Categories
ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ಛೋಟೆ ರೆಹಮತ್ ಖಾನ್

ಕನ್ನಡ ನಾಡು ಕಂಡ ಪ್ರಖ್ಯಾತ ಸಂಗೀತ ಕಲಾವಿದರು ಉಸ್ತಾದ್ ಛೋಟೆ ರಹಿಮತ್ ಖಾನ್, ಸಿತಾರ್ ವಾದನದಲ್ಲಿ ತಮ್ಮದೇ ವಿಶಿಷ್ಟ ಛಾಪು ಮೂಡಿಸಿರುವ ಸಾಧಕರು.
ಛೋಟೆ ರಹಿಮತ್ ಖಾನ್ ಅವರದ್ದು ಸಿತಾರ್ ವಾದಕರ ಕುಟುಂಬ. ಧಾರವಾಡ ಘರಾಣೆಯ ಆರನೇ ತಲೆಮಾರಿನ ಕುಡಿ, ಸಿತಾರ್ ರತ್ನ ಉಸ್ತಾದ್ ರಹಿಮತ್ ಖಾನ್‌ ಮೊಮ್ಮಗ, ಉಸ್ತಾದ್ ಅಬ್ದುಲ್ ಕರೀಂಖಾನ್‌ ಸುಪುತ್ರರು. ಸಂಗೀತಕಲೆ ರಕ್ತಗತ. ಬಾಲ್ಯದಿಂದಲೇ ಕಲಿಕೆ. ೧೫ರ ಹರೆಯದಲ್ಲೇ ಛೋಟೆ ರಹಿಮತ್ ಖಾನ್‌ರ ಸಿತಾರ್ ವಾದನಕ್ಕೆ ತಲೆದೂಗಿದವರೇ ಎಲ್ಲಾ. ೧೯ನೇ ವಯಸ್ಸಿನಲ್ಲಿ ಆಕಾಶವಾಣಿಯ ರಾಷ್ಟ್ರೀಯ ಸ್ಪರ್ಧೆಯಲ್ಲಿ ಭಾಗವಹಿಸಿ ಡಾ.ಗಂಗೂಬಾಯಿ ಹಾನಗಲ್‌ರಿಂದ ಸನ್ಮಾನಿಸಲ್ಪಟ್ಟ ಪ್ರತಿಭಾವಂತರು. ಆನಂತರದ್ದು ಅವ್ಯಾಹತ ಸಾಧನಾಪರ್ವ. ಆಕಾಶವಾಣಿಯ ಉನ್ನತಶ್ರೇಣಿಯ ಕಲಾವಿದರಾಗಿರುವ ಛೋಟೆ ರಹಿಮತ್ ಖಾನ್ ರಾಜ್ಯ, ಹೊರರಾಜ್ಯಗಳು ಮಾತ್ರವಲ್ಲದೆ, ಪ್ರಪಂಚದ ಉದ್ದಗಲಕ್ಕೂ ಕಛೇರಿ ನಡೆಸಿಕೊಟ್ಟ ಸಾಧಕ.ಗೋವಾ ಕಲಾ ಅಕಾಡೆಮಿಯ ನಿರ್ದೇಶಕರಾಗಿ ಮೂರು ದಶಕಗಳಿಂದಲೂ ಸೇವಾನಿರತರು. ವಿಶ್ವಾದ್ಯಂತ ಅಸಂಖ್ಯ ಗೌರವ-ಸನ್ಮಾನಗಳಿಗೆ ಪಾತ್ರವಾಗಿರುವ ಛೋಟಿ ರಹಿಮತ್ ಖಾನ್ ರಾಜ್ಯ ಸಂಗೀತಲೋಕದ ಅನರ್ಥ್ಯ ರತ್ನಗಳಲ್ಲೊಬ್ಬರು.