Categories
ರಾಜ್ಯೋತ್ಸವ 2022 ರಾಜ್ಯೋತ್ಸವ ಪ್ರಶಸ್ತಿ ವಿಜ್ಞಾನ

ಡಾ. ಡಿ.ಆರ್.‌ ಬಳೂರಗಿ

ಕನ್ನಡದ ವಿಜ್ಞಾನ ಸಾಹಿತ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಹಲವು ಆಯಾಮಗಳಲ್ಲಿ ಕೃಷಿಗೈದ ವಿಶೇಷ ತಜ್ಞರು ಡಿ.ಆರ್.ಬಳೂರಗಿ, ಬರಹಗಾರ, ಸಂಪನ್ಮೂಲ ವ್ಯಕ್ತಿ, ಉಪನ್ಯಾಸಕ, ಆಡಳಿತಗಾರರಾಗಿ ಅವರದ್ದು ಅಳಿಸಲಾಗದ ಹೆಜ್ಜೆಗುರುತು. ಧಾರವಾಡದ ದೈತ್ಯ ಪ್ರತಿಭೆ ಡಿ.ಆರ್.ಬಳೂರಗಿ ಕರ್ನಾಟಕ ವಿವಿಯ ಎಂಎಸ್ಸಿ ಪದವೀಧರರು. ರಾಯಚೂರಿನ ಎಲ್.ಐ.ಡಿ. ಕಾಲೇಜಿನ ಮೂರು ದಶಕಗಳ ಕಾಲ ಅಧ್ಯಾಪಕ, ಗುಲ್ಬರ್ಗಾ ವಿವಿ ಸಹಾಯಕ ಕುಲಸಚಿವ, ಬೆಳಗಾವಿ ವಿಜ್ಞಾನಕೇಂದ್ರದ ನಿರ್ದೇಶಕ, ಹಂಪಿ ವಿವಿಯ ಸಂದರ್ಶಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದವರು. ೩೮ ಸೃಜನ ಕೃತಿಗಳು, ಮೂರು ಅನುವಾದ, ೭ ಸಂಪಾದಿತ ಕೃತಿಗಳು ವಿಜ್ಞಾನ ಸಾಹಿತ್ಯಕ್ಕೆ ಕೊಟ್ಟ ಕೊಡುಗೆ. ಕರ್ನಾಟಕ ರಾಜ್ಯ ವಿಜ್ಞಾನಪರಿಷತ್ತಿನ ಸ್ಥಾಪಕ ಸದಸ್ಯ, ಮಾಸಪತ್ರಿಕೆಯ ಸಂಪಾದಕಮಂಡಲ ಸದಸ್ಯ, ಸಂಪನ್ಮೂಲವ್ಯಕ್ತಿಯಾಗಿ ೧೦೦ಕ್ಕೂ ಹೆಚ್ಚು ವಿಜ್ಞಾನ ಕಾರ್ಯಾಗಾರಗಳ ಆಯೋಜನೆ, ವಿಜ್ಞಾನ ಬೋಧನೋಪಕರಣಗಳ ವಿನ್ಯಾಸ, ಹಲವು ಶಾಲೆಗಳಲ್ಲಿ ವಿಜ್ಞಾನಕೇಂದ್ರಗಳ ಸ್ಥಾಪನೆ, ಅಗಸ್ತ್ಯ ಅಂತಾರಾಷ್ಟ್ರೀಯ ಪ್ರತಿಷ್ಠಾನದ ಸಲಹೆಗಾರ, ಸಾವಿರಾರು ಶಿಕ್ಷಕರಿಗಾಗಿ ಕಾರ್ಯಾಗಾರ, ನವಕರ್ನಾಟಕ ಪಬ್ಲಿಕೇಷನ್ಸ್‌ಗೆ ೩೦ ಪುಸ್ತಕಗಳ ಮಾಲಿಕೆ ಸಿದ್ಧಪಡಿಸುವಿಕೆ, ೫೦ಕ್ಕೂ ಹೆಚ್ಚು ರೇಡಿಯೋ ಉಪನ್ಯಾಸ ಮುಂತಾದ ಅಮೂಲ್ಯ ಕೊಡುಗೆಗಳನ್ನು ವಿಜ್ಞಾನ ಕ್ಷೇತ್ರಕ್ಕೆ ಕೊಟ್ಟ ಅಸೀಮ ಸಾಧಕರು.