Categories
ರಂಗಭೂಮಿ ರಾಜ್ಯೋತ್ಸವ 2022 ರಾಜ್ಯೋತ್ಸವ ಪ್ರಶಸ್ತಿ

ಡಾ. ಶ್ರೀಶೈಲ ಹುದ್ದಾರ

ಜನಪದ ರಂಗಭೂಮಿಯಲ್ಲಿ ಬಹುರೂಪಿಯಾಗಿ ವಿಶೇಷ ಛಾಪು ಮೂಡಿಸಿದ ಸಂಪನ್ಮೂಲ ವ್ಯಕ್ತಿ ಡಾ. ಶ್ರೀಶೈಲ ಹುದ್ದಾರ, ನಟ, ನಿರ್ದೇಶಕ, ನಾಟಕಕಾರ, ಕನ್ನಡ ಪ್ರಾಧ್ಯಾಪಕರಾಗಿ ಬಹುಶ್ರುತ ಸಾಧನೆಗೈದ ರಂಗಜೀವಿ, ಧಾರವಾಡ ಜಿಲ್ಲೆ ನವಲಗುಂದ ತಾಲ್ಲೂಕಿನ ಶಲವಡಿಯಲ್ಲಿ ಜನಿಸಿದ ಶ್ರೀಶೈಲ ಹುದ್ದಾರ ಅಕ್ಷರದ ಚುಂಗು ಹಿಡಿದು ಅರಳಿ ನಳನಳಿಸಿದವರು. ಕನ್ನಡದಲ್ಲಿ ಸ್ನಾತಕೋತ್ತರ ಪದವೀಧರರು, ‘ದೊಡ್ಡಾಟ ಪರಂಪರೆ ಮತ್ತು ಪ್ರಯೋಗಗಳು’ ಕುರಿತು ಪಿಎಚ್‌ಡಿ ಪದವಿ. ವೃತ್ತಿಯಲ್ಲಿ ಕನ್ನಡ ಅಧ್ಯಾಪಕ, ಪ್ರವೃತ್ತಿಯಲ್ಲಿ ರಂಗಕರ್ಮಿ. ಬಾಲ್ಯದಲ್ಲೇ ಅಂಟಿದ ರಂಗನಂಟನ್ನು ಬದುಕಿನುದ್ದಕ್ಕೂ ಭಾವದ ಗಂಟಾಗಿಸಿಕೊಂಡು ಸಾಧನೆಯ ಪಥ ಸ್ಪರ್ಶಿಸಿದವರು. ಕನಕವಿಜಯ, ಬುದ್ಧಪ್ರಬುದ್ಧ, ಅಕ್ಕಮಹಾದೇವಿ, ಬಾಹುಬಲಿ, ಅನುಭಾವಿ ಅಲ್ಲಮ, ನಿಜಗುಣ ಶಿವಯೋಗಿ, ಭಾಗೀರಥಿ, ಲಿಂಗರಾಜ ದೇಸಾಯಿ ಮುಂತಾದ ದೊಡ್ಡಾಟ-ಸಣ್ಣಾಟಗಳಲ್ಲಿ ನಟಿಸಿ ರಸಿಕರ ಮನಗೆದ್ದ ಕಲಾವಿದ, ಜೈಸಿದನಾಯಕ, ಅಮಟೂರ ಬಾಳಪ್ಪ, ರಕ್ತರಾತ್ರಿ, ಅಪ್ಪ ಮತ್ತು ಟಿಂಗರಬುಡ್ಡಣ್ಣ ನಿರ್ದೇಶಿತ ನಾಟಕಗಳು. ದೊಡ್ಡಾಟ – ಒಂದು ಪರಿಕಲ್ಪನೆ, ನೆಲದ ಹಾಡುಗಳು, ಕರ್ನಾಟಕ ಜಾನಪದ ರಂಗಭೂಮಿ, ಸಾಹಿತ್ಯಸೌರಭ ಕೃತಿಗಳ ಕತೃ, ಹಲವು ನಾಟಕ ಮತ್ತು ಬೀದಿನಾಟಕಗಳ ರಚನಕಾರರು. ಸಿನಿಮಾ ದೂರದರ್ಶನದಲ್ಲೂ ಬೆಳಗಿದ ಪ್ರತಿಭಾಶಾಲಿ, ಸಮಾಜಮುಖಿ ಸಂಸ್ಥೆಗಳಲ್ಲಿ ವಿವಿಧ ಹುದ್ದೆಗಳನ್ನು ನಿರ್ವಹಿಸಿದ ಈ ಅನುಭವಿ ರಂಗಭೂಮಿಯನ್ನೇ ಕರ್ಮಭೂಮಿಯಾಗಿಸಿಕೊಂಡಿರುವ ಕಲಾಜೀವಿ.