Categories
ರಾಜ್ಯೋತ್ಸವ 2003 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಡಾ. ಸೋಮಶೇಖರ ಇಮ್ರಾಪೂರ

ಕವಿ, ಸಂಶೋಧಕ, ಪ್ರಾಧ್ಯಾಪಕ, ಅಂಕಣಕಾರ, ಜಾನಪದ ತಜ್ಞರು ಡಾ. ಸೋಮಶೇಖರ ಇಮ್ರಾಪೂರ ಅವರು. ಗದಗ ಜಿಲ್ಲೆಯ ಅಬ್ಬಿಗೇರಿಯಲ್ಲಿ ೧೯೪೦ರಲ್ಲಿ ಜನಿಸಿದ ಡಾ. ಸೋಮಶೇಖರ ಇಮ್ರಾಪೂರ ಅವರಿಗೆ ಕನ್ನಡ ಎಂ.ಎ.ಯಲ್ಲಿ ಸುವರ್ಣಪದಕ, ಜಾನಪದ ಒಗಟುಗಳು ಪಿಹೆಚ್.ಡಿ. ಪ್ರೌಢ ಪ್ರಬಂಧಕ್ಕೆ ಸುವರ್ಣಪದಕಗಳು ಸಂದಿವೆ. ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನಪೀಠದಲ್ಲಿ ಪ್ರಾಧ್ಯಾಪಕರಾಗಿ ವೃತ್ತಿಯನ್ನು ಆರಂಭಿಸಿದ ಡಾ. ಇಮ್ರಾಪೂರ ಅವರು ವಿಶ್ವವಿದ್ಯಾನಿಲಯದ ವಿದ್ವತ್ ವಲಯದಲ್ಲಿ ನಾನಾ ಅಧಿಕಾರ ಸ್ಥಾನಗಳಲ್ಲಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ.
ಹಲವಾರು ಸಂಶೋಧನಾ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿರುವ ಡಾ. ಇಮ್ರಾಪೂರ ಅವರು ಕನ್ನಡ ಕಾವ್ಯ, ವಿಮರ್ಶೆ, ಜಾನಪದ ಕಲೆ, ಸಾಹಿತ್ಯ ಸಂಗ್ರಹ, ಸಂಪಾದನೆ, ವಿಚಾರ ಸಂಕಿರಣ, ಕಲಾ ಪ್ರದರ್ಶನ ಸಂಸ್ಕೃತಿಗೆ ಸಂಬಂಧಿಸಿದಂತೆ ೩೮ ಕೃತಿಗಳನ್ನು ರಚಿಸಿದ್ದಾರೆ. ಪ್ರಮುಖವಾಗಿ ಜಾನಪದ ಸಾಹಿತ್ಯ, ಸಂಶೋಧನೆ ಹೀಗೆ ಹತ್ತಾರು ಕ್ಷೇತ್ರದಲ್ಲಿ ಜಾನಪದ ಅಧ್ಯಯನದ ಕ್ಷಿತಿಜವನ್ನು ವಿಸ್ತರಿಸಿದ ಶ್ರೀಯುತರು ಸಾವಿರ ಒಗಟುಗಳು, ಜನಪದ ಮಹಾಭಾರತ, ಜಾನಪದ ವಿಜ್ಞಾನ, ಜಾನಪದ ವ್ಯಾಸಂಗ ಹೀಗೆ ವೈವಿಧ್ಯಮಯ ಕೃತಿಗಳನ್ನು ರಚಿಸಿದ್ದಾರೆ. ಜಾನಪದ ವಿದ್ವಾಂಸರಾಗಿರುವಂತೆ ಸಮರ್ಥ ಕವಿಯೂ ಆಗಿರುವ ಡಾ. ಇಮ್ರಾಪೂರ ಅವರು ಬಿಸಿಲ ಹೂ, ಬೆಳದಿಂಗಳು, ಬೆಂಕಿ, ಬಿರುಗಾಳಿ, ಜಲತರಂಗ, ಹುತ್ತಗಳು ಹಾಗೂ ಕನ್ನಡ ಕಾವ್ಯಲೋಕದಲ್ಲಿ ಹೊಸ ಅಲೆ ಎಬ್ಬಿಸಿದ ‘ಗಂಡ ಹೆಂಡಿರ ಜಗಳ ಗಂಧ ತೀಡಿದ್ದಾಂಗ’ ಕವನ ಸಂಕಲನಗಳನ್ನು ರಚಿಸಿದ್ದಾರೆ. ‘ಲಾಲಿಸಿ ಕೇಳ ನನಮಾತ’, ‘ಅಂಕಣ ಬರಹ’, ಭಾವತೀವ್ರತೆಯಿಂದ ಕೂಡಿದ ಗದ್ಯ ಬರವಣಿಗೆಗೆ ಹೆಗ್ಗುರುತು.
ಕರ್ನಾಟಕ ವಿದ್ಯಾವರ್ಧಕ ಸಂಘದ ಕೋಶಾಧ್ಯಕ್ಷರಾಗಿ, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಸ್ಥಾಯಿ ಸಮಿತಿ ಸದಸ್ಯರಾಗಿ, ಅನೇಕ ಸಂಘ ಸಂಸ್ಥೆಗಳ ಬೆಳವಣಿಗೆಗೆ ಕಾರಣಕರ್ತರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಯುತರು ೨೮ನೆಯ ಅಖಿಲ ಕರ್ನಾಟಕ ಜಾನಪದ ಸಮ್ಮೇಳನದ ಸರ್ವಾಧ್ಯಕ್ಷರೆಂಬ ಸನ್ಮಾನಕ್ಕೆ ಪಾತ್ರರಾಗಿದ್ದಾರೆ. ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಜಾನಪದ ತಜ್ಞ ಪ್ರಶಸ್ತಿ ನೀಡಿ ಗೌರವಿಸಿದೆ. ಬೇವು ಬೆಲ್ಲ’ ಅಭಿನಂದನಾ ಗ್ರಂಥವನ್ನು ಶ್ರೀಯುತರಿಗೆ
ಅರ್ಪಿಸಲಾಗಿದೆ.
ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸ್ವತಂತ್ರ ಜಾನಪದ ಅಧ್ಯಯನ ವಿಭಾಗವನ್ನು ಕಟ್ಟಿ ಬೆಳೆಸಿ ಜಾನಪದ ಕ್ಷೇತ್ರವನ್ನು ಶ್ರೀಮಂತಗೊಳಿಸಿದ ಜಾನಪದ ವಿದ್ವಾಂಸ ಡಾ. ಸೋಮಶೇಖರ ಇಮ್ರಾಪೂರ ಅವರು.