Categories
ರಾಜ್ಯೋತ್ಸವ 2003 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಬರಗೂರು ರಾಮಚಂದ್ರಪ್ಪ

ಜನಪ್ರಿಯ ಪ್ರಾಧ್ಯಾಪಕ, ಬಂಡಾಯ ಸಾಹಿತ್ಯದ ಸೃಜನಶೀಲ ಲೇಖಕ, ಅದ್ಭುತ ಭಾಷಣಕಾರ, ಕ್ರಿಯಾಶೀಲ ಸಾಂಸ್ಕೃತಿಕ ವ್ಯಕ್ತಿ ಪ್ರೊ. ಬರಗೂರು ರಾಮಚಂದ್ರಪ್ಪ ಅವರು.
ತುಮಕೂರು ಜಿಲ್ಲೆಯ ಸಿರಾ ತಾಲ್ಲೂಕಿನ ಬರಗೂರು ಗ್ರಾಮದಲ್ಲಿ ಜನಿಸಿದ ರಾಮಚಂದ್ರಪ್ಪನವರು ಪ್ರಾಥಮಿಕ ಶಿಕ್ಷಣವನ್ನು ಬರಗೂರಿನಲ್ಲಿ, ಬಿ.ಎ. ಪದವಿಯನ್ನು ತುಮಕೂರಿನಲ್ಲಿ, ಎಂ.ಎ. ಪದವಿಯನ್ನು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪಡೆದು ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ.
ಪ್ರೊ. ಬರಗೂರರು ಸಾಹಿತಿಯಾಗಿ ಕನಸಿನ ಕನ್ನಿಕೆ, ಮರಕುಟಿಗ, ನೆತ್ತರಲ್ಲಿ ನೆಂದ ಹೂವು, ಗುಲಾಮಗೀತೆ, ಮಗುವಿನ ಹಾಡು ಕವನ ಸಂಕಲನಗಳು; ಸುಂಟರಗಾಳಿ, ಕಪ್ಪುನೆಲದ ಕೆಂಪು ಕಾಲು, ಒಂದು ಊರಿನ ಕತೆಗಳು (ಆಯ್ದ ಕತೆಗಳು) ಕಥಾ ಸಂಕಲನಗಳು; ಸೂತ್ರ, ಉಕ್ಕಿನ ಕೋಟೆ, ಒಂದು ಊರಿನ ಕತೆ, ಬೆಂಕಿ, ಸೂರ್ಯ, ಸಂಗಪ್ಪನ ಸಾಹಸಗಳು, ಸೀಳು ನೆಲ, ಭರತನಗರಿ, ಗಾಜಿನ ಮನೆ, ಸ್ವಪ್ನ ಮಂಟಪ ಕಾದಂಬರಿಗಳು; ಸಾಹಿತ್ಯ ಮತ್ತು ರಾಜಕಾರಣ, ಸಂಸ್ಕೃತಿ ಮತ್ತು ಸೃಜನಶೀಲತೆ, ಬಂಡಾಯ ಸಾಹಿತ್ಯ ಮೀಮಾಂಸೆ, ಇಣಕುನೋಟ, ಸಂಸ್ಕೃತಿ-ಉಪಸಂಸ್ಕೃತಿ, ವರ್ತಮಾನ, ರಾಜಕೀಯ ಚಿಂತನೆ ವಿಚಾರ ವಿಮರ್ಶೆಯ ಕೃತಿಗಳು; ಕಪ್ಪುಹಲಗೆ, ಕೋಟೆ, ನಾಟಕಗಳಲ್ಲದೆ ಅನೇಕ ಕೃತಿಗಳನ್ನು ಸಂಪಾದಿಸಿದ್ದಾರೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿ ೨೫೦ಕ್ಕೂ ಹೆಚ್ಚು ಕೃತಿಗಳನ್ನು ಸಂಪಾದಿಸಿದ ಕೀರ್ತಿ ಶ್ರೀಯುತರದು.
ಎರಡು ಅವಧಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ, ಕರ್ನಾಟಕ ಚಲನಚಿತ್ರ ಪ್ರಶಸ್ತಿ ಆಯ್ಕೆ ಸಮಿತಿ ಸದಸ್ಯರಾಗಿ, ಕನ್ನಡ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿ, ರಾಜ್ಯ ಬಂಡಾಯ ಸಾಹಿತ್ಯ ಸಂಘಟನಾ ಸ್ಥಾಪಕರಾಗಿ, ಸಂಚಾಲಕರಾಗಿ, ತುಮಕೂರು ಸ್ನಾತಕೋತ್ತರ ಕೇಂದ್ರದ ಕನ್ನಡ ವಿಭಾಗದ ಮುಖ್ಯಸ್ಥರಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಮೌಲಿಕ ಸೇವೆ ಸಲ್ಲಿಸಿದ್ದಾರೆ.
ಬರಗೂರರು ನಿರ್ದೇಶಿಸಿದ ಚಲನಚಿತ್ರಗಳು ಒಂದು ಊರಿನ ಕಥೆ, ಬೆಂಕಿ, ಸೂರ್ಯ, ಕೋಟೆ, ಕರಡಿಪುರ, ಹಗಲುವೇಷ ಮತ್ತು ಹಲವಾರು ಸಾಕ್ಷ್ಯಚಿತ್ರಗಳು, ಸುಂಟರಗಾಳಿ ಕಥಾ ಸಂಕಲನಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಒಂದು ಊರಿನ ಕಥೆ ಚಿತ್ರಕ್ಕೆ ಶ್ರೇಷ್ಠ ಲೇಖಕ, ಶ್ರೇಷ್ಠ ಸಂಭಾಷಣಕಾರ, ಚಲನಚಿತ್ರ ಪ್ರಶಸ್ತಿ, ಬೆಂಕಿ ಚಿತ್ರಕ್ಕೆ ಶ್ರೇಷ್ಠ ನಿರ್ದೇಶಕ ಪ್ರಶಸ್ತಿ, ಕೋಟೆ ಚಿತ್ರಕ್ಕೆ ಶ್ರೇಷ್ಠ ಗೀತರಚನಕಾರ ಪ್ರಶಸ್ತಿ, ಜನುಮದ ಜೋಡಿ ಚಿತ್ರಕ್ಕೆ ಶ್ರೇಷ್ಠ ಸಂಭಾಷಣಕಾರ ಉದಯ ಟಿ.ವಿ. ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ ಹೀಗೆ ಬರಗೂರರು ತಮ್ಮ ಸೃಜನಶೀಲತೆ ಹಾಗೂ ಕ್ರಿಯಾಶೀಲತೆಗಾಗಿ ಪಡೆದ ಪ್ರಶಸ್ತಿ ಪುರಸ್ಕಾರಗಳು ಹಲವು.
ಸಾಹಿತ್ಯ, ಸಂಸ್ಕೃತಿ, ಸಿನಿಮಾ ಮುಂತಾದ ಶ್ರೇಣೀಕೃತ ಸಾಮಾಜಿಕ ವ್ಯವಸ್ಥೆಯ ಒಳಸುಳಿಗಳನ್ನು ಅಭಿವ್ಯಕ್ತಿಸಿದ ವೈವಿಧ್ಯಮಯ ಕೃತಿಗಳ ರಚನೆ, ಚಲನಚಿತ್ರ ನಿರ್ದೇಶನ ಬಹು ಶಿಸ್ತೀಯ ಅಧ್ಯಯನದಲ್ಲಿ ವಿಶೇಷ ಆಸಕ್ತಿಯುಳ್ಳವರು ಪ್ರೊ. ಬರಗೂರು ರಾಮಚಂದಪ್ಪ ಅವರು.