Categories
ರಾಜ್ಯೋತ್ಸವ 2022 ರಾಜ್ಯೋತ್ಸವ ಪ್ರಶಸ್ತಿ ಸಂಘ-ಸಂಸ್ಥೆ

ನಮ್ಮನೆ-ಸುಮ್ಮನೆ (ಸಂಸ್ಥೆ)

ಅನಾಥರ ಬಾಳು ಬೆಳಗುವ ಸತ್ಕಾರ್ಯದಲ್ಲಿ ತೊಡಗಿರುವ ಮಂಗಳಮುಖಿಯರ ಅಪರೂಪದ ಸಂಸ್ಥೆ ನಮ್ಮನೆ-ಸುಮ್ಮನೆ. ನಿರ್ಗತಿಕರ ಪಾಲಿಗೆ ಆಶ್ರಯಧಾತು, ಲೈಂಗಿಕ ಅಲ್ಪಸಂಖ್ಯಾತರಿಗೆ ರಕ್ಷಕ, ವಿಶ್ವದಲ್ಲೇ ಮೊದಲೆಂಬ ಹಿರಿಮೆಯ ಸೇವಾಸಂಸ್ಥೆ, ಸಮಾಜದಿಂದ ನಿರ್ಲಕ್ಷ್ಯಕ್ಕೊಳಗಾದ ಮಂಗಳಮುಖಿಯರ ಬದುಕು ನಿಜಕ್ಕೂ ಘೋರ, ಜೀವನನಿರ್ವಹಣೆಗೆ ಅವರು ಪಡುವ ಪಾಡು ವರ್ಣಿಸಲಸದಳ. ಅಂತಹ ಶೋಷಿತ ಮಂಗಳಮುಖಿಯರು ಸಮಾಜಮುಖಿಗಳಾಗಿ ಕಾರ್ಯನಿರ್ವಹಿಸಲೆಂದು ಸ್ಥಾಪಿಸಿದ ವಿನೂತನ, ವಿಶ್ವದಲ್ಲೇ ಮೊದಲೆನ್ನಲಾದ ಸಂಸ್ಥೆ ‘ನಮ್ಮನೆ ಸುಮ್ಮನೆ’. ನಕ್ಷತ್ರ ಗೋಳ ಮತ್ತವರ ಸ್ನೇಹಿತರಾದ ಮಿಲನ, ಸೌಂದರ್ಯ, ರೇಷ್ಮಾ, ತನುಶ್ರೀ ಈ ಸಂಸ್ಥೆಯ ಸಂಸ್ಥಾಪಕರು. ಬ್ಯೂಟಿಪಾರ್ಲ‌ರ್‌ವೊಂದರನ್ನು ನಡೆಸುತ್ತಿರುವ ಈ ಐವರು ಆ ಕಸುಬಿನಲ್ಲಿ ಬರುವ ಹಣದ ಒಂದು ಭಾಗವನ್ನು ವ್ಯಯಿಸಿ ಈ ನಿರಾಶ್ರಿತರ ಕೇಂದ್ರವನ್ನು ನಡೆಸುತ್ತಿರುವುದು ಹೆಮ್ಮೆಯ ಸಂಗತಿ, ಬೀದಿಬದಿಯಲ್ಲಿ ಸೂರಿಲ್ಲದೆ ಪಡಿಪಾಟಲು ಪಡುತ್ತಿರುವ ಅನಾಥರು, ನಿರ್ಗತಿಕರು, ಅಂಗವಿಕಲರು, ಬುದ್ಧಿಮಾಂದ್ಯರಿಗೆ ಜೀವನಕ್ಕೆ ನಮ್ಮನೆ ಸುಮ್ಮನೆ’ಯೇ ಆಸರೆ. ಉಚಿತ ಊಟ, ವಸತಿ ಮತ್ತು ವಿದ್ಯಾಭ್ಯಾಸ ಕಲ್ಪಿಸುತ್ತಿರುವುದು ನಿಜಕ್ಕೂ ಹೆಗ್ಗಳಿಕೆಯ ವಿಚಾರ. ಗುಲ್ಬರ್ಗದವರಾದ ಬೆಂಗಳೂರಿನ ಗಂಗೊಂಡನಹಳ್ಳಿಯಲ್ಲಿ ಕಟ್ಟಡವೊಂದನ್ನು ಬಾಡಿಗೆಗೆ ಪಡೆದು ಈ ಐವರು ನಡೆಸುತ್ತಿರುವ ಈ ಸಂಸ್ಥೆ ೧೦೦ಕ್ಕೂ ಹೆಚ್ಚು ನಿರಾಶ್ರಿತರಿಗೆ ಆಸರೆಯಾಗಿದೆ. ಸುಮಾರು ಐನೂರಕ್ಕೂ ಹೆಚ್ಚು ಮಂಗಳಮುಖಿಯರಿಗೆ ವೈದ್ಯಕೀಯ ಚಿಕಿತ್ಸೆಗೆ ನೆರವಾಗಿದೆ. ಹೊಸ ಜೀವನ ಕಟ್ಟಿಕೊಳ್ಳಲು ಕೈಲಾದ ಸಹಾಯವನ್ನೂ ಮಾಡಿದ್ದು ಮಂಗಳಮುಖಿಯರನ್ನು ಕಡೆಗಣಿಸುವ ಸಮಾಜಕ್ಕೆ ತಮ್ಮದೇ ಸೇವೆಯ ಮೂಲಕ ಹೊಸ ಸಂದೇಶ ರವಾನಿಸಿರುವ ‘ನಮ್ಮನೆ ಸುಮ್ಮನೆ’ ಮಾದರಿ ಸೇವಾಕೇಂದ್ರ.