Categories
ರಾಜ್ಯೋತ್ಸವ 2022 ರಾಜ್ಯೋತ್ಸವ ಪ್ರಶಸ್ತಿ ಸಂಘ-ಸಂಸ್ಥೆ

ನೆಲೆ ಫೌಂಡೇಶನ್ (ಸಂಸ್ಥೆ)

ಅನಾಥ ಮಕ್ಕಳ ಪುನರ್ವಸತಿಯ ಮಾನವೀಯ ಕಾರ್ಯದಲ್ಲಿ ಸಕ್ರಿಯವಾಗಿರುವ ವಿಶಿಷ್ಟ ಸೇವಾಕೇಂದ್ರ ನೆಲೆ ಫೌಂಡೇಶನ್, ಸಂಸ್ಕಾರ ಶಿಕ್ಷಣ ಮತ್ತು ವಸತಿ ಸೌಲಭ್ಯಧಾರಣೆಯ ಸಂಸ್ಥೆ. ಜೀವನದಲ್ಲಿ ಪೋಷಕರ ಪ್ರೀತಿ, ಅಕ್ಷರದ ಆಸರೆ ಮತ್ತು ಬದುಕಿನ ಭರವಸೆಗಳ ನೆಲೆಯೇ ಇಲ್ಲದವರಿಗೆ ಅಕ್ಷರ, ವಸತಿ ಮತ್ತು ವಾತ್ಸಲ್ಯದ ನೆಲೆ ಒದಗಿಸುವ ಉದ್ದೇಶದಿಂದ ೨೦೦೦ರಲ್ಲಿ ನರೇಂದ್ರ ಅವರಿಂದ ಸ್ಥಾಪಿತವಾದ ನೆಲೆ ಫೌಂಡೇಶನ್, ಎರಡು ದಶಕಗಳಿಂದಲೂ ತನ್ನ ಅನಾಥ ಮಕ್ಕಳ ಬದುಕನ್ನು ಹಸನಾಗಿಸುವ ಕೆಲಸದಲ್ಲಿ ಅವಿರತ ನಿರತವಾಗಿದೆ. ಬೆಂಗಳೂರಿನ ಲಗ್ಗೆರೆಯಲ್ಲಿ ಕಾರ್ಯಾರಂಭ ಮಾಡಿದ ಸಂಸ್ಥೆ ೨೦ ವರ್ಷಗಳಲ್ಲಿ ಬೆಂಗಳೂರಿನಲ್ಲಿನ ಐದು ಕೇಂದ್ರಗಳೂ ಸೇರಿದಂತೆ ರಾಜ್ಯದಲ್ಲಿ ಹತ್ತು ಘಟಕಗಳನ್ನು ಹೊಂದಿದೆ. ೨೮೯ ಅನಾಥ ಮಕ್ಕಳನ್ನು ಸಲುಹುತ್ತಿರುವ ನೆಲೆ ಫೌಂಡೇಶನ್ ಈ ವರ್ಷದಿಂದ ಮತ್ತೂ ೧೦೩ ಮಕ್ಕಳನ್ನು ತನ್ನ ಪಾಲನೆಯ ವ್ಯಾಪ್ತಿಗೆ ಸೇರಿಸಿಕೊಂಡಿದೆ. ಸಾರ್ವಜನಿಕ ದೇಣಿಗೆ ಮತ್ತು ಉದಾರಿಗಳ ನೆರವಿನಲ್ಲಿ ಆರ್ಥಿಕವಾಗಿ ಹಿಂದುಳಿದ, ಅನಾಥ ಹಾಗೂ ಏಕಷೋಷಕ ಮಕ್ಕಳಿಗೆ ಆದ್ಯತೆ ಮೇರೆಗೆ ಉಚಿತವಾಗಿ ಸಂಸ್ಕಾರಯುತ ಶಿಕ್ಷಣ ಮತ್ತು ವಸತಿಯನ್ನು ನೀಡುತ್ತಿದೆ. ಆ ಮೂಲಕ ಅನಾಥ ಮಕ್ಕಳು ಸಮಾಜಘಾತುಕರಾಗಿ ಪರಿವರ್ತನೆ ಆಗದಂತೆ ತಡೆಯುವ ಸತ್ಕಾರ್ಯದಲ್ಲಿ ನೆಲೆ ಫೌಂಡೇಶನ್ ನಿರಂತರವಾಗಿ ಶ್ರಮಿಸುತ್ತಿದ್ದು ಅನಾಥ ಮಕ್ಕಳ ಪುನರ್ವಸತಿಯಲ್ಲಿ ಮಾದರಿಯಾಗಿದೆ.