Categories
ರಾಜ್ಯೋತ್ಸವ 2003 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ಶ್ರೀಮತಿ ರಾಜಲಕ್ಷ್ಮಿ ತಿರುನಾರಾಯಣನ್

ಪ್ರಸಿದ್ಧ ವೀಣಾವಾದಕರು, ಸಂಗೀತ ಅಧ್ಯಾಪಕರು ಶ್ರೀಮತಿ ರಾಜಲಕ್ಷ್ಮಿ ತಿರುನಾರಾಯಣನ್ ಅವರು.
ಸುಸಂಸ್ಕೃತ ಮನೆತನದಲ್ಲಿ ಜನಿಸಿದ ಶ್ರೀಮತಿ ರಾಜಲಕ್ಷ್ಮಿ ತಿರುನಾರಾಯಣನ್ ಅವರು ಏಳನೆಯ ವಯಸ್ಸಿನಿಂದಲೇ ವೈಣಿಕ ಪ್ರವೀಣ ವಿ. ವೆಂಕಟಗಿರಿಯಪ್ಪನವರು, ಪ್ರೊ. ಆರ್.ಎನ್. ದೊರೆಸ್ವಾಮಿಯವರು ಮತ್ತು ಪದ್ಮಭೂಷಣ ಲಾಲ್ಗುಡಿ ಜಿ. ಜಯರಾಮನ್ ಅವರ ಶಿಷ್ಯರು. ವೀಣೆ ಶೇಷಣ್ಣನವರ ವೀಣಾ ಪರಂಪರೆಗೆ ಸೇರಿದ ಶ್ರೀಮತಿ ರಾಜಲಕ್ಷ್ಮಿ ತಿರುನಾರಾಯಣನ್ ಅವರು ಹದಿನೈದನೆ ವಯಸ್ಸಿನಲ್ಲಿಯೇ ವಿದ್ವತ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ರಾಷ್ಟ್ರಾದ್ಯಂತ ಮತ್ತು ದುಬೈ, ನ್ಯೂಜಿಲೆಂಡ್ ಮುಂತಾದ ವಿದೇಶಗಳಲ್ಲಿಯೂ ಕಾರ್ಯಕ್ರಮ ನೀಡಿದ್ದಾರೆ. ದೂರದರ್ಶನ ಮತ್ತು ಆಕಾಶವಾಣಿಯ ‘ಎ’ ದರ್ಜೆ ಕಲಾವಿದರಾಗಿದ್ದು, ೧೯೫೦ರಿಂದ ಇವರ ಅನೇಕ ಕಾರ್ಯಕ್ರಮಗಳು ಆಕಾಶವಾಣಿ, ದೂರದರ್ಶನದಲ್ಲಿ ಪ್ರಸಾರಗೊಂಡಿವೆ. ಬೆಂಗಳೂರು ವಿಶ್ವವಿದ್ಯಾನಿಲಯದ ರೀಡರ್ ಮತ್ತು ಪ್ರದರ್ಶನ ಕಲಾವಿಭಾಗದ ಮುಖ್ಯಸ್ಥರಾಗಿ ದಕ್ಷತೆಯಿಂದ ಕಾರ್ಯ ನಿರ್ವಹಿಸಿದ್ದು, ಅನೇಕ ಶಿಷ್ಯರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಕರ್ನಾಟಕ, ಗಾನಕಲಾ ಪರಿಷತ್ತಿನ ೨೯ನೆಯ ಸಂಗೀತ ಸಮ್ಮೇಳನದ ಅಧ್ಯಕ್ಷತೆ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯಿಂದ ಕರ್ನಾಟಕ ಕಲಾಶ್ರೀ ಬಿರುದು, ಗಾಯನ ಸಮಾಜದ ‘ವರ್ಷದ ಕಲಾವಿದೆ’, ಮೈಸೂರು ತ್ಯಾಗರಾಜ ಗಾಯನ ಸಭೆಯ ಪ್ರಶಸ್ತಿಗಳನ್ನು ಪಡೆದಿರುವ ಶ್ರೀಮತಿ ರಾಜಲಕ್ಷ್ಮಿ ತಿರುನಾರಾಯಣನ್ ಅವರು ನ್ಯೂಜಿಲೆಂಡ್‌ನಲ್ಲಿ ಆಕ್‌ಲೆಂಡ್ ಕರ್ನಾಟಕ ಮ್ಯೂಸಿಕ್ ಸೊಸೈಟಿಯ ಕಲಾ ಸಲಹೆಗಾರರು ಮತ್ತು ಪೋಷಕರು ಆಗಿದ್ದಾರೆ. ಲಂಡನ್‌ ಅಕಾಡೆಮಿ ಆಫ್ ಫೈನ್ ಆರ್ಟ್ಸ್‌ನಲ್ಲಿ ಪಠ್ಯ ಚಟುವಟಿಕೆಗಳ ಸಮಿತಿ ಅಧ್ಯಕ್ಷರಾಗಿ, ಮುಖ್ಯ ಪರೀಕ್ಷಕರಾಗಿ ದಕ್ಷತೆಯಿಂದ ಕಾರ್ಯ ನಿರ್ವಹಿಸಿದುದಾಗಿ ಲಂಡನ್ ಮುಖ್ಯಸ್ಥರಿಂದ ಮನ್ನಣೆ ಪಡೆದ ಹೆಗ್ಗಳಿಕೆ
ಇವರದು.
ಲಂಡನ್ ಅಕಾಡೆಮಿ ಆಫ್ ಫೈನ್ ಆರ್ಟ್ಸ್ ಸಂಸ್ಥೆಗಾಗಿ ಪಠ್ಯ ವಿಷಯಗಳನ್ನೊಳಗೊಂಡ ಪುಸ್ತಕ ಪ್ರಕಟಿಸಿ ಮನ್ನಣೆ ಪಡೆದಿರುವ ಶ್ರೀಮತಿ ರಾಜಲಕ್ಷ್ಮಿ ತಿರುನಾರಾಯಣನ್ ಅವರು `ವಾಗ್ಗೇಯ ವೈಭವ’ ಎಂಬ ಪುಸ್ತಕವನ್ನು ಬರೆದಿದ್ದಾರೆ. ಇವರ ಕ್ಯಾಸೆಟ್‌ಗಳು ಪ್ರಚಲಿತವಾಗಿವೆ. ಪಂಚವೀಣಾ ವಾದ್ಯ ಸಮ್ಮಿಲನದ ‘ಶೃಂಗಾರವೀಣಾ ಮಾಧುರಿ’ ನಿರ್ದೇಶಕರು.
ಮೈಸೂರು ಬಾನಿಯ ವೀಣಾವಾದನಕ್ಕೆ ಹೆಸರಾದ ಪ್ರತಿಭಾವಂತ ವೀಣಾವಾದಕರು ಶ್ರೀಮತಿ ರಾಜಲಕ್ಷ್ಮಿ ತಿರುನಾರಾಯಣನ್ ಅವರು.