Categories
ರಾಜ್ಯೋತ್ಸವ 2022 ರಾಜ್ಯೋತ್ಸವ ಪ್ರಶಸ್ತಿ ಸಮಾಜಸೇವೆ

ಶ್ರೀ ಡಿ. ಮಾದೇಗೌಡ

ಜನಸೇವೆಯೇ ಜನಾರ್ದನ ಸೇವೆಯೆಂದು ನಂಬಿ ನಡೆದ ವಿರಳ ರಾಜಕಾರಣಿ ಡಿ. ಮಾದೇಗೌಡ, ಸಾವಿರಾರು ಜನರಿಗೆ ಸೂರು ಕಲ್ಪಿಸಿದ ಜನನಾಯಕ, ಮಾಜಿ ಶಾಸಕರು, ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ೧೯೪೨ರಲ್ಲಿ ಜನಿಸಿದ ಮಾದೇಗೌಡರು ಬಿ.ಎ, ಬಿ.ಎಲ್‌. ಪದವೀಧರರು, ವೃತ್ತಿಯಲ್ಲಿ ವಕೀಲರು, ಪ್ರವೃತ್ತಿಯಲ್ಲಿ ರಾಜಕಾರಣಿ, ಸಮಾಜಸೇವಕರು, ಜನಪರ ಕಾಳಜಿ, ಸಮಾಜಮುಖಿ ಚಿಂತನೆ ಮಾದೇಗೌಡರ ವಿಶೇಷತೆ, ಮೈಸೂರಿನ ಸಿಐಟಿಐ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ೮ ಬಡಾವಣೆಗಳನ್ನು ನಿರ್ಮಿಸಿ ೩೦ ಸಾವಿರಕ್ಕೂ ಹೆಚ್ಚು ಜನರಿಗೆ ಸೂರು ಕಲ್ಪಿಸುವ ಮೂಲಕ ಮನೆಮನೆ ಮಾದೇಗೌಡರೆಂದು ಜನಜನಿತರಾದವರು, ಆಶಾಮಂದಿರ ವಸತಿ ಯೋಜನೆ ಅನುಷ್ಠಾನಕ್ಕಾಗಿ ಹುಡ್ಕೋ ಸಂಸ್ಥೆಯಿಂದ ಪುರಸ್ಕಾರಕ್ಕೂ ಪಾತ್ರರಾದವರು. ಕುಂಬಾರಕೊಪ್ಪಲು ವಾರ್ಡ್‌ನಲ್ಲಿ ನಿರ್ಮಲನಗರ ಯೋಜನೆಯನ್ನು ಪ್ರಪ್ರಥಮವಾಗಿ ಜಾರಿಗೊಳಿಸಿದ ಕೀರ್ತಿ ಅವರದ್ದು. ಶೂನ್ಯ ತ್ಯಾಜ್ಯ ನಿರ್ವಹಣೆಯಲ್ಲಿ ಮಾದರಿ ವಾರ್ಡ್‌ ಆಗಲು ಕಾರಣೀಕರ್ತರು. ಭಾರತ ಸೇವಾದಳ, ಯೂಥ್ ಹಾಸ್ಟೆಲ್‌ ಅಸೋಸಿಯೇಷನ್‌ ಆಫ್‌ ಇಂಡಿಯಾ, ನಗರಾಭಿವೃದ್ಧಿ ವಿಶ್ವಸ್ತ ಮಂಡಳಿಯ ಅಧ್ಯಕ್ಷರು, ಮೇಲ್ಮನೆಯ ಸದಸ್ಯರಾಗಿ ಅನನ್ಯ ಸೇವೆ. ಮಲೆಮಹದೇಶ್ವರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆಯ ರೂವಾರಿ, ಬಡಾವಣೆಗಳಲ್ಲಿ ಸಸ್ಯಾರಾಧನೆ ಕಾರ್ಯಕ್ರಮಗಳ ಮೂಲಕ ಪರಿಸರ ಸಂರಕ್ಷಣೆಯಲ್ಲಿ ನಿರತರಾಗಿರುವ ಪರಿಸರ ಪ್ರೇಮಿ, ದಣಿವರಿಯದ ಸಮಾಜಸೇವಕರು.