Categories
ಕ್ರೀಡೆ ರಾಜ್ಯೋತ್ಸವ 2006 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಬಿ.ಕೆ. ವೆಂಕಟೇಶ ಪ್ರಸಾದ್

ವಿಶ್ವ ಕ್ರಿಕೆಟ್ ಲೋಕಕ್ಕೆ ಕರ್ನಾಟಕ ನೀಡಿದ ಕೊಡುಗೆಗಳಲ್ಲೊಬ್ಬರು ಶ್ರೀ ಬಿ.ಕೆ. ವೆಂಕಟೇಶ ಪ್ರಸಾದ್. ಭಾರತ ಕ್ರಿಕೆಟ್ ತಂಡದಲ್ಲಿ ಕರ್ನಾಟಕವನ್ನು ಪ್ರತಿನಿಧಿಸುತ್ತಿದ್ದ ವೆಂಕಟೇಶ್ ಪ್ರಸಾದ್ ೧೯೯೪ರಲ್ಲಿ ನ್ಯೂಜಿಲೆಂಡ್ ವಿರುದ್ಧದ ಏಕದಿನ ಪಂದ್ಯದ ಮೂಲಕ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಕಾಲಿಟ್ಟರು. ೧೯೯೬ ಹಾಗೂ ೧೯೯೯ರ ವಿಶ್ವಕಪ್‌ಗಳಲ್ಲಿ ಭಾರತ ತಂಡದಲ್ಲಿದ್ದ ವೆಂಕಿ ಪಾಕೀಸ್ತಾನದ ವಿರುದ್ಧ ೨೭ ರನ್ ನೀಡಿ ೫ ವಿಕೆಟ್ ಪಡೆದಿದ್ದು ಶ್ರೇಷ್ಠ ಸಾಧನೆ.
೧೯೯೬ರಲ್ಲಿ ಇಂಗ್ಲೆಂಡ್ ತಂಡದ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಟೆಸ್ಟ್ ಬದುಕು ಆರಂಭಿಸಿದ ಬೌಲರ್ ವೆಂಕಿ ಏಳು ಇನಿಂಗ್ಸ್‌ಗಳಲ್ಲಿ ತಲಾ ೫ ವಿಕೆಟ್ ಪಡೆದ ಸಾಧನೆ ಮಾಡಿದ್ದರು.
ಪ್ರತಿಷ್ಟಿತ ಅಂತರರಾಷ್ಟ್ರೀಯ ಕ್ರಿಕೆಟ‌ ಪ್ರಶಸ್ತಿ (೧೯೯೭) ಅರ್ಜುನ್ ಪ್ರಶಸ್ತಿ (೨೦೦೧) ‘ಏಕಲವ್ಯ ಪ್ರಶಸ್ತಿ’ (೧೯೯೯) ಪಡೆದಿರುವ ವೆಂಕಟೇಶ್ ಪ್ರಸಾದ್ ಕರ್ನಾಟಕ ರಣಜಿ ಟ್ರೋಫಿ ತಂಡದ ಪ್ರಧಾನ ಕೋಚ್‌.
ಕ್ರಿಕೆಟ್ ಅಂಗಳದಿಂದ ಕ್ರಿಕೆಟ್ ಆಡಳಿತಕ್ಕೆ ಬಂದಿರುವ ವೆಂಕಟೇಶ ಪ್ರಸಾದ್ ಅವರ ಈಗಿನ ಗುರಿ ತರಬೇತಿಯಲ್ಲಿ ಶ್ರೇಷ್ಠ ಪರಿಣತಿ ಪಡೆಯುವುದು.