Categories
ಪತ್ರಿಕೋದ್ಯಮ ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ರವಿ ಬೆಳಗೆರೆ

ಬರವಣಿಗೆಯನ್ನೇ ಉಸಿರಾಗಿಸಿಕೊಂಡ ಸೃಜನಶೀಲ ಬರಹಗಾರ, ಉತ್ಸಾಹಿ ಪತ್ರಕರ್ತ ರವಿ ಬೆಳಗೆರೆ ಅವರು.
ಬಳ್ಳಾರಿಯಲ್ಲಿ ೧೯೫೮ರಲ್ಲಿ ಜನನ. ಎರಡು ವರ್ಷ ತುಮಕೂರಿನ ಸಿದ್ಧಗಂಗಾ ಪ್ರೌಢಶಾಲೆಯಲ್ಲಿ ಕಲಿಕೆ. ಬಿ.ಎ. ವರೆಗೆ ಬಳ್ಳಾರಿಯಲ್ಲಿ ವಿದ್ಯಾಭ್ಯಾಸ. ಧಾರವಾಡ ವಿಶ್ವವಿದ್ಯಾಲಯದಲ್ಲಿ ಇತಿಹಾಸ ಮತ್ತು ಪ್ರಾಚ್ಯಶಾಸ್ತ್ರ ವಿಭಾಗದಲ್ಲಿ ಸ್ನಾತಕೋತ್ತರ
ಪದವಿ.
ಕೆಲಕಾಲ ಬಳ್ಳಾರಿ, ಹಾಸನ ಮತ್ತು ಹುಬ್ಬಳ್ಳಿ ಕಾಲೇಜುಗಳಲ್ಲಿ ಇತಿಹಾಸ ಉಪನ್ಯಾಸಕ ವೃತ್ತಿ. ಹೈಸ್ಕೂಲು ಮೇಷ್ಟ್ರು, ಹೋಟೆಲ್ ಮಾಣಿ, ರೂಮ್ ಬಾಯ್, ರಿಸೆಪ್ಪನಿಸ್ಟ್, ಹಾಲು ಮಾರುವ ಗೌಳಿ, ದಿನಪತ್ರಿಕೆ ಹಂಚುವ ಹುಡುಗನಾಗಿ, ಈಗ ಪತ್ರಕರ್ತರಾಗಿ ರವಿ ಬೆಳಗೆರೆಯವರು ಪಡೆದ ಜೀವನಾನುಭವ ಅನನ್ಯ.
ಅತಿಚಿಕ್ಕ ವಯಸ್ಸಿಗೇ ಅನೇಕ ಪತ್ರಿಕೆಗಳಲ್ಲಿ ಸಂಪಾದಕ ಹುದ್ದೆ ನಿರ್ವಹಣೆ. ಈತನಕ ಅವರ ೫೦ಕ್ಕೂ ಹೆಚ್ಚಿನ ಪುಸ್ತಕಗಳು ಪ್ರಕಟ. ಖುದ್ವಂತ್ ಸಿಂಗ್, ಪ್ರತಿಮಾ ಬೇಡಿ, ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ್ ಮೊದಲಾದವರ ಬರಹಗಳು ಅವರಿಂದ ಕನ್ನಡಕ್ಕೆ ಅನುವಾದ. ಸಣ್ಣಕತೆ ಅವರ ಇಷ್ಟದ ಸಾಹಿತ್ಯ ಪ್ರಕಾರ, ಕರ್ನಾಟಕ ಸಾಹಿತ್ಯ ಅಕಾಡೆಮಿ ಮತ್ತು ಮಾಧ್ಯಮ ಅಕಾಡೆಮಿಗಳ ಪ್ರಶಸ್ತಿಗಳಿಗೆ ಶ್ರೀಯುತರು ಭಾಜನರು.
ಸದ್ಯ ಅವರು ‘ಹಾಯ್ ಬೆಂಗಳೂರು’ ವಾರ ಪತ್ರಿಕೆ ಮತ್ತು ‘ಓ ಮನಸೇ..’ ಪಾಕ್ಷಿಕದ ಸಂಪಾದಕರು. ಪ್ರಾರ್ಥನಾ ಎಜುಕೇಶನ್ ಸೊಸೈಟಿಯ ಸಂಸ್ಥಾಪಕ ಕಾರ್ಯದರ್ಶಿ.
ಉಸಿರೇ ಆಗಿರುವ ಬರವಣಿಗೆಯ ಜತೆಗೆ ಸಿನೆಮಾ ನಿರ್ಮಾಣ, ನಿರ್ದೇಶನ ಮತ್ತು ನಟನೆ ಅವರ ಆಸಕ್ತಿ ಕ್ಷೇತ್ರಗಳು. ಹೀಗೆ ಹಲವು ಕ್ಷೇತ್ರಗಳಲ್ಲಿ ತಮ್ಮದೇ ಸ್ಪೋಪಜ್ಞೆ ಮೆರೆದು ಹೆಸರಾದವರು ಶ್ರೀ ರವಿ ಬೆಳಗೆರೆ.